ರಾಜಕುಮಾರಿ ಡಯಾನಾಳದ್ದು ಕೊಲೆಯೇ, ಅಪಘಾತವೇ? ಆ ದಿನ ನಡೆದದ್ದೆಲ್ಲಾ ಗೊತ್ತಾದ್ರೆ ವಿಸ್ಮಯಗೊಳ್ಳುವಿರಿ

Published on: Monday, September 4th, 2017,4:49 pm

ವಿಶ್ವದಾದ್ಯಂತ ಅಪಾರ ಜನಪ್ರಿಯತೆ ಗಳಿಸಿಕೊಂಡಿದ್ದ, ಬ್ರಿಟನ್ ರಾಜಕುಮಾರ ಚಾರ್ಲ್ಸ್‍ನ ವಿಚ್ಛೇದಿತ ಪತ್ನಿ ರಾಜಕುಮಾರಿ ಡಯಾನಾ ಮೃತಪಟ್ಟು ಆಗಸ್ಟ್ 31ಕ್ಕೆ 20 ವರ್ಷ ಸಂದವು. ಲೇಡಿ ಡಯಾನಾಳೆಂದು ಪ್ರಪಂಚದಾದ್ಯಂತ ಕರೆಸಿಕೊಂಡಿದ್ದ, ದಾನ ಧರ್ಮ ಕಾರ್ಯ ನಡೆಸುತ್ತಾ ಪತ್ರಿಕೆ, ಮಾಧ್ಯಮ ಲೋಕದಲ್ಲಿ ಸದಾ ಸುದ್ದಿಯಲ್ಲಿರುತ್ತಿದ್ದ ಡಯಾನಾಳ ಸಾವು ಸಹಜವೇ, ಅಸಹಜವೇ ಎಂಬ ಬಗ್ಗೆ ನಡೆದ ಚರ್ಚೆ, ವಾದ, ವಿವಾದಗಳಿಗೆ ಲೆಕ್ಕವೇ ಇಲ್ಲ. ಅದರಲ್ಲೂ ಆಕೆ ಅರಬ್ಬಿ ಮುಸ್ಲಿಮನೊಬ್ಬನ ಜೊತೆ ಪ್ರೇಮ ಸಂಬಂಧವನ್ನಾರಂಭಿಸಿದ್ದು, ಸರಸ ಸಲ್ಲಾಪ ನಡೆಸುತ್ತಿದ್ದು ಎಲ್ಲರ ಕಣ್ಣು ಕುಕ್ಕುತ್ತಿತ್ತು. ಆ ದಿನವು ತನ್ನ ಪಾಲಿಗೆ ತುಂಬಾ ಮಹತ್ತರವಾದದ್ದೆಂದು ಹೇಳಿಕೊಂಡಿದ್ದ ಡಯಾನಾಳ ಪಾಲಿಗೆ ಆ ದಿನ ಕರಾಳವಾಗಿ ಪರಿಣಮಿಸಿದ್ದು ವಿಪರ್ಯಾಸ. ಈ ಹಿನ್ನೆಲೆಯಲ್ಲಿ ಇದೊಂದು ವಿಶೇಷ ಲೇಖನ.

Princess Diana_01

ಬ್ರಿಟನ್ನಿನ ರಾಜಕುಮಾರಿ ಡಯನಾಳ ಜೀವನದ ಕೊನೆಯ ದಿನವು ಅವಳ ಪ್ರಿಯತಮ ಹಾಗೂ ಭಾವಿ ಪತಿ ದೋದಿ ಅಲ್-ಫಯಾದನ ವಿಲಾಸಿ ದೋಣಿಯ ಮೇಲೆ ಬೆಳಗಿನ ಉಪಾಹಾರದೊಂದಿಗೆ ಶುರುವಾಯಿತು. ಉಪಾಹಾರ ಮುಗಿಸಿದ ಜೋಡಿ ಹೊರಗೆ ಸಾರ್ಡಿನಿಯಾದ ಎಮರಾಲ್ಡ್ ಕರಾವಳಿಯ ಸೌಂದರ್ಯವನ್ನು  ಆನಂದಿಸುತ್ತಿತ್ತು. ದೋದಿಯ ಆಪ್ತ ಸಹಾಯಕನ ಹೇಳಿಕೆಯಂತೆ, “ಅವರಿಬ್ಬರೂ, ಒಬ್ಬರನ್ನೊಬ್ಬರ ಕೈ ಕೈ ಹಿಡಿದುಕೊಂಡು ತುಂಬಾ ಖುಷಿಯಲ್ಲಿದ್ದರು.”

ಅವರ ಪ್ರಣಯದ ಕತೆ ಜಗತ್ತಿನಲ್ಲೆಲ್ಲಾ ಕುತೂಹಲದ ಸುದ್ದಿಯಾಗಿತ್ತು.

Princess Diana_04 Princess Diana_02

ದೋದಿ ಅಲ್-ಫಯಾದ್ ಲಂಡನ್ನಿನ ‘ಹೆರೋಡ್ಸ್’ ಡಿಪಾರ್ಟ್‍ಮೆಂಟಲ್ ಸ್ಟೋರಿನ ಮಾಲಿಕನಾದ ಈಜಿಪ್ಟಿನ ಆಗರ್ಭ ಶ್ರೀಮಂತ ಮೊಹಮದ್ ಅಲ್-ಫಯಾದನ ಮಗನಾಗಿದ್ದ. ಬ್ರಿಟನ್ನಿನ ರಾಜಕುಮಾರಿ ಡಯಾನ, ದಾಂಪತ್ಯ ವಂಚನೆಗೊಳಗಾಗಿ ರಾಜಕುಮಾರ ಚಾರ್ಲ್ಸ್‍ನಿಂದ ವಿಚ್ಛೇದನ ಪಡೆದಿದ್ದ, ಇಂಗ್ಲೆಂಡಿನ ಭಾವಿ ರಾಜನನ್ನು ಹೆತ್ತಿದ್ದ ಮತ್ತು ಅತೀ ಹೆಚ್ಚು ಛಾಯಾಚಿತ್ರ ತೆಗೆಸಿಕೊಂಡ ಹೆಣ್ಣುಮಗಳಾಗಿದ್ದಳು.

ಆಗಸ್ಟ್ 30, 1997ರ ಆ ಶನಿವಾರ ಒಂದು ವಿಶೇಷ ದಿನವಾಗಲಿತ್ತೆಂದು ಡಯಾನ ಭಾವಿಸಿದ್ದಿರಬೇಕು. ಆಕೆಯ ಆಪ್ತ ಮತ್ತು ‘ಡೇಯ್ಲಿ ಮೇಲ್’ ಪತ್ರಿಕೆಗಾಗಿ ರಾಜ ಕುಟುಂಬದ ಬಗ್ಗೆ ವರದಿ ಮಾಡುತ್ತಿದ್ದ ರಿಚರ್ಡ್ ಕೇ ಹೇಳುವಂತೆ, ‘ಅಂದು ಡಯಾನ ಅವನಿಗೆ ಫೋನಾಯಿಸಿ ತನ್ನ ಜೀವಮಾನದಲ್ಲಿ ಇಂದು ಮಹತ್ತರವಾದ ಬದಲಾವಣೆ ಜರಗಲಿದೆ’ ಎಂದು ಹೇಳಿದ್ದಳಂತೆ. ಮುಂದುವರೆದು, ‘ತಾನು ಒಳಗೊಂಡಿದ್ದ ದತ್ತಿ ಕಾರ್ಯಗಳನ್ನೆಲ್ಲಾ ಆದಷ್ಟು ಬೇಗ ಮುಗಿಸಿ ನವೆಂಬರಷ್ಟೊತ್ತಿಗೆ ಸಾರ್ವಜನಿಕ ಜೀವನದಿಂದ ವಿಮುಖಳಾಗುತ್ತೇನೆಂದು ಹೇಳಿದ್ದಳಂತೆ. ಏಕೆಂದು ಅವಳು ಹೇಳಿರಲಿಲ್ಲವಾದರೂ ಅವಳ ದನಿಯಿಂದ ಆಕೆ ತುಂಬಾ ಖುಷಿಯಲ್ಲಿರುವಂತಿತ್ತು. ಅವರು ಮದುವೆಯಾಗಲಿದ್ದಾರೆಂದು ನಾನು ಊಹಿಸಿದೆ’ ಎಂದು ಕೇ ಹೇಳುತ್ತಾರೆ.

ಡಯಾನ ಇಲ್ಲವಾಗಿ ಇದೀಗ ಇಪ್ಪತ್ತು ವರ್ಷಗಳಾದವು. ಇದೇ ಪ್ರೇಮ ಕತೆ ಮತ್ತೆ ಮತ್ತೆ ಪರಿಷ್ಕøತಗೊಳ್ಳುತ್ತಲೇ ಇದೆ. ಡಯಾನಳ ಸ್ನೇಹಿತರು ಮತ್ತು ಬಂಧುಗಳ ಅಭಿಪ್ರಾಯದಲ್ಲಿ ಅವರು ಖಂಡಿತವಾಗಿಯೂ ಪ್ರೀತಿಸುತ್ತಿರಲಿಲ್ಲ. ಆದರೆ ದೋದಿ ಫಯಾದನ ಸ್ನೇಹಿತರು ಮತ್ತು ಬಂಧುಗಳು ಹೇಳುವಂತೆ ಅವರು ಒಬ್ಬರನ್ನೊಬ್ಬರು ಗಾಢವಾಗಿ ಪ್ರೀತಿಸುತ್ತಿದ್ದರು.

Princess Diana_05

ಕಳೆದ ವಾರ ರಿಚರ್ಡ್ ಕೇಯವರು ‘ಡೇಯ್ಲಿ ಮೇಲ್’ನಲ್ಲಿ ‘ಡಯಾನ ದೋದಿಯನ್ನು ತ್ಯಜಿಸುವವಳಿದ್ದಳೆ?’ ಎಂಬ ಶೀರ್ಷಿಕೆಯಡಿಯಲ್ಲಿ ಬರೆದ ಲೇಖನದಲ್ಲಿ ಡಯಾನಾಳ ಆಪ್ತ ಸಹಾಯಕನನ್ನು ಉಲ್ಲೇಖಿಸುತ್ತಾ, ಡಯಾನ ದೋದಿಯನ್ನು ಬಿಟ್ಟು ಬ್ರಿಟನ್ನಿಗೆ ವಾಪಸ್ಸಾಗುವವಳಿದ್ದಳು. ಆಕೆ ಅವನ ಮೇಲಿನ ಆಸಕ್ತಿಯನ್ನು ಕಳೆದುಕೊಂಡಿದ್ದಳು.

‘ಇದು ನನ್ನ ಖಾಸಗಿ ಅಭಿಪ್ರಾಯವಾಗಿದ್ದರೂ, ವಾಪಸ್ಸಾದ ನಂತರ ಖಂಡಿತವಾಗಿಯೂ ಡಯಾನ ದೋದಿ ಫಾಯದನನ್ನು ಮತ್ತೆ ಭೇಟಿಯಾಗುತ್ತಿರಲಿಲ್ಲ…’

ಇವೆಲ್ಲಾ ಊಹಾಪೋಹಗಳಷ್ಟೇ. ಅಂದು ರಾತ್ರಿ ಫಾಯದ್ ಡಯಾನಾಳೊಡನೆ ಮದುವೆಯ ಪ್ರಸ್ತಾಪ ಮಾಡುವವನಿದ್ದ. ಅವನ ಮನಸ್ಸೆಲ್ಲಾ ಪ್ಯಾರಿಸಿನಲ್ಲಿ ಕಾಯುತ್ತಿದ್ದ ಆರು ಅಂಕಿ ಮೌಲ್ಯದ ವಜ್ರದುಂಗುರದ ಮೇಲಿತ್ತು. ಫಾಯದನ ಬಂಧುಗಳು ಹೇಳುವಂತೆ ಅವರು ಒಬ್ಬರನ್ನೊಬ್ಬರು ಕಳೆದ ಒಂದು ತಿಂಗಳಿನಿಂದಷ್ಟೇ ನೋಡಲು ಆರಂಭಿಸಿದ್ದಿದ್ದರೂ ದೋದಿ ಕಳೆದ ವಾರವಷ್ಟೇ ಆ ವಜ್ರದುಂಗುರವನ್ನು ಆರಿಸಿದ್ದ.

ಈ ಜೋಡಿಗೆ ತಮ್ಮ ಈ ಸಂಬಂಧದ ಅಪಾಯದ ಅರಿವು ಕಿಂಚಿತ್ತೂ ಅಗಿರಲಿಲ್ಲ. ಅವರನ್ನು ಜಗತ್ತೆಲ್ಲಾ ಕಣ್ಣಾಗಿ ಗಮನಿಸುತ್ತಿತ್ತು. ಪ್ರತ್ಯೇಕವಾಗಿ ರಾಜ ಮನೆತನದ ಮೇಲೆ ದುರ್ಬೀನಿಟ್ಟು ನೋಡುವವರು, ಸ್ವತಃ ಬಕಿಂಗ್‍ಹ್ಯಾಂ ಅರಮನೆ, ಬ್ರಿಟನ್ನಿನ ಟ್ಯಾಬ್ಲೊಯ್ಡ್ ಪತ್ರಿಕೆಗಳು ಮತ್ತು ಸೀಳು ನಾಯಿಗಳಂತೆ ಅವರ ಹಿಂದೆ ಬಿದ್ದಿದ್ದ ಅವುಗಳ ಛಾಯಾಗ್ರಾಹಕರು… ಡಯಾನ ಈಗಾಗಲೇ ಗರ್ಭಿಣಿಯಾಗಿದ್ದಾಳೆಂದೂ ಗುಸು ಗುಸು ಸುದ್ಧಿ ಬೇರೆ ಹಬ್ಬಿತ್ತು. ‘ಇಂಗ್ಲೆಂಡಿನ ಮುಂದಿನ ರಾಜನ ತಾಯಿಯ ಗರ್ಭದಲ್ಲಿ ಅರಬ್ಬಿ ಮುಸ್ಲಿವiನೊಬ್ಬನ ಮಗು ಬೆಳೆಯುತ್ತಿರುವುದು ಮತ್ತು ಮುಂದೆ ಅದು ರಾಜನ ಸೋದರ ಸಂಬಂಧಿಯಾಗುವ ಸಂಗತಿ ರಾಜ ಮನೆತನಕ್ಕೆ ಮತ್ತು ಆಡಳಿತ ವ್ಯವಸ್ಥೆಗೆ ತೀವ್ರ ಮುಜುಗರದ ವಿಷಯವೇ ಆಗಿತ್ತು’ ಎಂದು ‘Death of an Princess’ ಎಂಬ ಪುಸ್ತಕದ ಲೇಖಕರಾದ ಟೈಂ ಮ್ಯಾಗಜಿನ್‍ನ ಪತ್ರಕರ್ತರಾದ ಟಾಮ್ ಸ್ಯಾಂಕ್ಟನ್ ಮತ್ತು ಸ್ಕಾಟ್ ಮ್ಯಾಕ್ಲಿಯೊಡ್ ಬರೆಯುತ್ತಾರೆ.

Princess Diana_03

ಫಾಯದನ ಅಂದಿನ ದಿನಚರಿಯಲ್ಲಿ ಒಂದೇ ಉಲ್ಲೇಖವಿತ್ತು. ‘ಅಂದು ಸಂಜೆ ಪ್ಯಾರಿಸಿನಲ್ಲಿ ತನ್ನ ತಂದೆಯ Ritz Hotel ಬಳಿ ಇರುವ ಆಭರಣದ ಅಂಗಡಿಯಿಂದ ಅವನು ಉಂಗುರವನ್ನು ಪಡೆದುಕೊಳ್ಳುವುದು. ಅಂದು ಬೆಳಿಗ್ಗೆ 11.30ಕ್ಕೆ ಅವರು ಫಯಾದನ ದೋಣಿಯಿಂದ ಅವನ ವಿಮಾನದ ಬಳಿಗೆ ತೆರಳಿದರು. ಅವರ ಜೊತೆಯಲ್ಲಿ ಫಯಾದನ ಆಪ್ತ ಪರಿಚಾರಕ ಮತ್ತು ಅವನ ಮಾಲೀಶುಗಾರನೂ ಇದ್ದ’.

ಅವರು ಪ್ಯಾರಿಸಿನಲ್ಲಿ ಇಳಿಯುತ್ತಿದ್ದಂತೆ ಕಿಟಕಿಯ ಹೊರಗೆ ಪತ್ರಕರ್ತರ ದಂಡೇ ಜಮಾಯಿಸಿರುವುದನ್ನು ಕಂಡು ಫಯಾದ್ ಹೌಹಾರಿದ.

‘ಅ ವಿಶೇಷ ದಿನವನ್ನು ಜಿಗಣೆಗಳಂತೆ ಅಮರಿಕೊಂಡಿದ್ದ ಪತ್ರಕರ್ತರು ಮತ್ತು ಛಾಯಗ್ರಾಹಕರು ಹಾಳುಗೆಡವುದು ಫಯಾದನಿಗೆ ಸುತಾರಾಂ ಇಷ್ಟವಿರಲಿಲ್ಲ’. ಹೀಗಂತ ಮಾಜಿ ಟೈಂ ಮ್ಯಾಗಜೀನ್‍ನ ಪತ್ರಕರ್ತರು ತಮ್ಮ ಪುಸ್ತಕದಲ್ಲಿ ಬರೆಯುತ್ತಾರೆ. ‘ವಿಮಾನದ ಬಾಗಿಲು ತೆರಯುತ್ತಿದ್ದಂತೆ ನೂರಾರು ಕ್ಯಾಮೆರಾಗಳು ಒಮ್ಮೆಲೇ ಕ್ಲಿಕ್ಕಿಸತೊಡಗಿದವು’.

ಹೊತ್ತು ಸರಿಯುತ್ತಿದ್ದಂತೆ ಛಾಯಾಗ್ರಾಹಕರ ಆಕ್ರಮಣಶೀಲತೆ ಮತ್ತು ಅವರ ಸಂಖ್ಯೆಯೂ ಹೆಚ್ಚಾಗುತ್ತಾ ಹೋಯಿತು.

Princess Diana_08

ಫಯಾದ್ ಮತ್ತು ಡಯಾನ ರಿಟ್ಝ್ ಹೋಟೆಲ್ ತಲುಪಿದಾಗ ಮಧ್ಯಾಹ್ನ ಸರಿದಿತ್ತು. ಡಯಾನಾಳಿಗೆ ಹೋಟೆಲಿನ ಪಾರ್ಲರಿನಲ್ಲಿ ಅಪಾಂಯ್ಟ್‍ಮೆಂಟಿತ್ತು. ಆಕೆ ಅತ್ತ ಹೋದಾಗ ಇತ್ತ ಫಯಾದ್ ಆಭರಣದ ಅಂಗಡಿಗೆ ಹೋದ. ಅವರು ಫಯಾದನ ಅಪಾರ್ಟ್‍ಮೆಂಟಿಗೋಗಿ ರಾತ್ರಿ ಊಟಕ್ಕೆ ತಯಾರಾಗುವ ಮುನ್ನ ಹೋಟೆಲಿನ ಇಂಪೀರಿಯಲ್ ಸೂಟ್‍ನಲ್ಲಿ ವಿರಮಿಸಿದರು. ಡಯಾನಾ, ಸ್ಕಾಟ್‍ಲೆಂಡಿನಲ್ಲಿ ರಾಜಕುಮಾರ ಚಾಲ್ರ್ಸ್ ಮತ್ತು ರಾಣಿಯ ಜೊತೆಗಿದ್ದ ತನ್ನ ಮಕ್ಕಳೊಡನೆ ಮಾತನಾಡಿದಳು.

‘ಆ ಶನಿವಾರ ಸಂಜೆ, ನಾನು ಕಂಡಂತೆ ಡಯಾನ ಎಂದೆಂದಿಗಿಂತಲೂ ಬಹಳ ಖುಷಿಯ ಲಹರಿಯಲ್ಲಿದ್ದಳು’ ಎಂದು ಡೇಯ್ಲಿ ಮೇಲ್‍ನ ಗೆಳೆಯ ರಿಚರ್ಡ್ ಕೇ ಬರೆಯುತ್ತಾರೆ.

ಅವರು ಸಂಜೆ 7ಕ್ಕೆ ಫಯಾದನ ಅಪಾರ್ಟ್‍ಮೆಂಟಿಗೆ ಹೊರಟರು. ಅವರ ಹಿಂದೆ ಪತ್ರಕರ್ತರ ದಂಡೂ ಹೊರಟಿತು. ಮತ್ತೊಂದು ದಂಡು ಆಗಲೇ ಅಪಾರ್ಟ್‍ಮೆಂಟಿನ ಬಳಿ ಕಾಯುತ್ತಿತ್ತು. ಫಯಾದ್ ಸಿಟ್ಟಿನಿಂದ ಭುಸುಗುಡುತ್ತಿದ್ದ. ಅಪಾರ್ಟ್‍ಮೆಂಟಿನ ದ್ವಾರದಲ್ಲಿ ನೂಕುನುಗ್ಗಲೇ ಉಂಟಾಯಿತು.

ಒಳಗೆ ಬರುತ್ತಿದ್ದಂತೆ ಫಯಾದ್ ತನ್ನ ಆಪ್ತ ಪರಿಚಾರಕನನ್ನು ಪಕ್ಕಕ್ಕೆ ಕರೆದು ಅಂದು ಸಂಜೆ ತಾನು ಡಯಾನಾಳ ಎದುರು ಮದುವೆಯ ಪ್ರಸ್ತಾಪವನ್ನಿಡುವುದಾಗಿ ತಿಳಿಸಿದ.

‘ವಜ್ರದುಂಗುರವು ಫಯಾದನ ಬೆಡ್‍ರೂಮಿನ ನೈಟ್ ಸ್ಟ್ಯಾಂಡಿನ ಮೇಲೆ ವಿರಾಜಮಾನವಾಗಿತ್ತು. ಫಯಾದ್ ಮೊದಲೇ ಈ ವಿಶೇಷ ಘಳಿಗೆಗಾಗಿ ಡೊಮ್ ಪರಿಗ್ನೊನ್ ವೈನಿನ ಸಾಕಷ್ಟು ಬಾಟಲುಗಳನ್ನು ಶೇಖರಿಸಿಟ್ಟಿದ್ದ.
ಆದರೆ ರಾತ್ರಿ ಊಟ ಅವನೆಂದುಕೊಂಡಂತೆ ನಡೆಯಲೇ ಇಲ್ಲ. ವಿಧಿಯಾಟ ಬೇರೆಯೇ ಇತ್ತು!

ಅವರು ಆರಿಸಿದ್ದ ಮೊದಲ ರೆಸ್ಟೋರಂಟ್ ‘ಚೆಝ್ ಬೆನೊಯ್’ ಪತ್ರಕರ್ತರು ಮತ್ತು ಛಾಯಾಗ್ರಾಹಕರಿಂದ ತುಂಬಿ ಹೋಗಿತ್ತು. ಹಾಗಾಗಿ ಅವರು ಬೇರೆ ಬೇರೆಯಾಗಿ ರಿಟ್ಝ್ ಹೋಟೆಲಿಗೆ ಹೋಗಲು ನಿಶ್ಚಯಿಸಿ ಹೇಗೋ ರಿಟ್ಝಿನ ಊಟದ ಕೋಣೆಯನ್ನು ತಲುಪಿದರು.

Princess Diana_09

ಅವರಿಬ್ಬರೂ ತಂತಮ್ಮ ಇಷ್ಟದ ಆಹಾರವನ್ನು ಆರ್ಡರ್ ಮಾಡಿದರಷ್ಟೇ…

‘ಸುತ್ತಮುತ್ತ ಊಟ ಮಾಡುತ್ತಿದ್ದವರೆಲ್ಲಾ ತಮ್ಮನೇ ನೋಡುತ್ತಿರುವುದು ಅವರಿಗೆ ಅರಿವಾಗತೊಡಗಿತು’. ಹೀಗೆಂದು ಟೈಮ್ಸ್ ಪತ್ರಕರ್ತರು ಬರೆಯುತ್ತಾರೆ. ಅವರು ಅಲ್ಲಿರಲು ಮುಜುಗರಪಟ್ಟು ಊಟವನ್ನು ಇಂಪೀರಿಯಲ್ ಸೂಟಿಗೆ ಕಳುಹಿಸುವಂತೆ ಹೇಳಿ ಅಲ್ಲಿಂದ ಹೊರಡುತ್ತಾರೆ.
ಸೂಟಿಗೆ ಹೋಗುವುದು ಕೂಡ ಅವರಿಗೆ ಸಾಧ್ಯವಾಗಲೇ ಇಲ್ಲ. ಅವರಿಗೆ ಫಯಾದನ ಅಪಾರ್ಟ್‍ಮೆಂಟಿಗೇ ಹಿಂದಿರುಗುವುದು ಅನಿವಾರ್ಯವಾಗಿತ್ತು. ಆದರೆ ಹೇಗೆ ಹೋಗುವುದು? ಹೋಟೆಲು ಪತ್ರಕರ್ತರಿಂದ ಗಿಜಿಗುಡುತ್ತಿತ್ತು. ಅವರ ಕಣ್ಣು ತಪ್ಪಿಸಿ ಹೋಗುವುದು ಸಾಧ್ಯವೇ ಇರಲಿಲ್ಲ.
ಫಯಾದನಿಗೆ ಒಂದು ಆಲೋಚನೆ ಹೊಳೆಯಿತು. ಅವರ ಚಾಲಕ ಮತ್ತು ಅಂಗರಕ್ಷಕರು ಹೋಟೆಲಿನ ಮುಂಭಾಗದಲ್ಲಿ ಅವರ ನಿರ್ಗಮನದ ತಯಾರಿಯ ನಾಟಕ ಆಡುತ್ತಿರಬೇಕಾದರೆ ಇವರು ಹಿಂಬಾಗಿಲಿನಿಂದ ಯಾರದೋ ಕಡ ಪಡೆದ ಕಾರಿನಲ್ಲಿ ಹೊರಡುವುದು ಮತ್ತು ಹೋಟಲಿನ ಸೆಕ್ಯೂರಿಟಿ ಆಫೀಸರ್ ಕಾರು ಚಲಾಯಿಸುವುದು ಎಂದು ನಿರ್ಧರಿಸಲಾಯ್ತು.

ಮುಂದೆ ಜರಗಿದ ಘಟನೆಗಳು ದೀರ್ಘ ತನಿಖೆಗಳಿಗೂ, ವ್ಯವಸ್ಥಿತ ಪಿತೂರಿ ಎಂಬೆಲ್ಲಾ ಊಹಾಪೋಹಗಳಿಗೂ ಕಾರಣವಾಯಿತು. ರಾಜಕುಮಾರಿ ಡಯಾನ ಮತ್ತು ಫಯಾದ್ ಅಲ್ಲಿಂದ ನುಣುಚಿಕೊಳ್ಳಲೇನೋ ಸಫಲರಾದರು. ಆದರೆ ದುರಾದೃಷ್ಟವಶಾತ್ ಅವರ ಕಾರು ಓಡಿಸುತ್ತಿದ್ದ ಚಾಲಕ ಪಾನಮತ್ತನಾಗಿದ್ದ.

Princess Diana_06

ಇವರು ಹಿಂಬಾಗಿಲಿನಿಂದ ತಪ್ಪಿಸಿಕೊಂಡ ಸುದ್ದಿ ಅದ್ಹೇಗೋ ಹೋಟೆಲಿನ ಮುಂಭಾಗದಲ್ಲಿ ಕಾಯುತ್ತಿದ್ದ ಪತ್ರಕರ್ತರಿಗೆ ಮತ್ತು ಛಾಯಾಗ್ರಾಹಕರಿಗೆ ಗೊತ್ತಾಗಿ ಬಿಟ್ಟಿತು. ಅವರೆಲ್ಲಾ ತಂತಮ್ಮ ಮೋಟರು ಸೈಕಲುಗಳನ್ನೇರಿ ಅವರನ್ನು ಅಟ್ಟಿಸಿಕೊಂಡು ಬರತೊಡಗಿದರು. ಇತ್ತ ಇವರ ಕಾರಿನ ಚಾಲಕ ಮತ್ತಷ್ಟು ವೇಗವಾಗಿ ಕಾರನ್ನು ಓಡಿಸತೊಡಗಿದ… ಯದ್ವಾ ತದ್ವಾ ಓಡತೊಡಗಿದ ಕಾರು ಐಫೆಲ್ ಟವರಿನ ಬಳಿಯ ಸುರಂಗದೊಳಗೆ ನುಗ್ಗುತ್ತಿದ್ದಂತೆಯೇ ಭೀಕರ ಅಪಘಾತಕ್ಕೀಡಾಯಿತು.

ಅಲ್ ಫಾಯದ್ ಸ್ಥಳದಲ್ಲೇ ಮೃತಪಟ್ಟರೆ, ಡಯಾನ ಆಸ್ಪತ್ರೆಯಲ್ಲಿ ಸತ್ತಳು.

ಈ ಸುದ್ಧಿ ಕೇಳಿ ಜಗತ್ತೇ ಬೆಚ್ಚಿ ಬಿದ್ದಿತು. ಪಾಪ, ಡಯಾನಾಳಿಗೆ ಬರೇ 36 ವರ್ಷ ವಯಸ್ಸಾಗಿತ್ತು.

ಸುದ್ದಿ ಕೇಳುತ್ತಿದ್ದಂತೆಯೇ ಬ್ರಿಟನ್ನಿನ ರಾಜಮನೆತನ ‘ಈ ಅಘಾತಕಾರಿ ದುರ್ಘಟನೆಯಿಂದ ರಾಣಿ ಮತ್ತು ರಾಜಕುಮಾರ ಫಿಲಿಪ್ ಅತೀವ ನೊಂದಿದ್ದಾರೆ’ ಎಂದು ಒಂದು ಪತ್ರಿಕಾ ಹೇಳಿಕೆಯನ್ನು ಬಿಡುಗಡೆ ಮಾಡಿತು. ಆದರೆ ರಾಜಕುಮಾರಿಯ ಸಾವಿಗೆ ರಾಜಮನೆತನದ ಪ್ರತಿಕ್ರಿಯೆ ಜನರಿಗೆ ಎಳ್ಳಷ್ಟೂ ಹಿಡಿಸಲಿಲ್ಲ. ಸಾಮಾನ್ಯ ಜನರ ಗೌರವವನ್ನು ಕಳೆದು ಕೊಂಡ ರಾಜಮನೆತನಕ್ಕೆ ಅದನ್ನು ಮತ್ತೆ ಗಳಿಸಲು ಎರಡು ದಶಕಗಳೇ ಹಿಡಿದವು. ರಾಜಕುಮಾರಿಯ ಸಾವಿಗೆ ಜಗತ್ತಿನಾದ್ಯಂತ ಜನರು ತೋರಿದ ಅನುಕಂಪ ರಾಜಮನೆತನಕ್ಕಾಗಲೀ ರಾಜಕಾರಣಿಗಳಿಗಾಗಲಿ ಹೇಗೆ ಅರ್ಥೈಸಿಕೊಳ್ಳುವುದೆಂದೇ ತೋಚದೆ ತಬ್ಬಿಬ್ಬುಗೊಳಿಸಿತು. ಬ್ರಿಟನ್ನಿನ ಪ್ರಧಾನಿ ಟೋನಿ ಬ್ಲೇರ್ ಅಂತೂ ಡಯಾನಾಳನ್ನು ‘ಜನಸಾಮಾನ್ಯರ ರಾಜಕುಮಾರಿ’ ಎಂದೇ ಬಣ್ಣಿಸಿದರು. ರಾಜ ಮನೆತನವಂತೂ ವಿಚ್ಛೇದಿತ ರಾಜಕುಮಾರಿಗೂ ತಮಗೂ ಯಾವುದೇ ಸಂಬಂಧವಿಲ್ಲ ಎಂಬಂತೆ ನಡೆದುಕೊಂಡಿತು.

Princess Diana_07

ಆದರೆ ಜನರು ಬ್ರಿಟನ್ನಿನ ರಾಜಮನೆತನವು ಮಾಜಿ ರಾಜಕುಮಾರಿ ಡಯನಾಳನ್ನು ಅವಮಾನಿಸುತ್ತಿದೆ ಎಂದೇ ಭಾವಿಸಿದರು. ರಾಜ ಮನೆತನದ ಪತ್ರಿಕೆಯೆಂದೇ ಪರಿಗಣಿತವಾಗಿರುವ ‘ಡೇಯ್ಲಿ ಎಕ್ಸ್‍ಪ್ರೆಸ್’ ಕೂಡ ರಾಣಿ ಸ್ಕೊಟ್‍ಲೆಂಡಿನಿಂದ ಲಂಡನಿಗೆ ಬಂದು ‘ನಾವೂ ಜೊತೆಗಿದ್ದೀವಿ ಎಂದು ತೋರಿಸಲಿ’ ಎಂದು ಆಗ್ರಹಿಸಿತು.

ರಾಜಕುಮಾರಿ ಡಯಾನ ಬ್ರಿಟನ್ನಿನ ಭಾವಿ ರಾಜನ ತಾಯಿಯಾಗಿದ್ದಳು. ರಾಜಮನೆತನ ಮತ್ತು ರಾಜಕುಮಾರ ಚಾಲ್ರ್ಸ್ ಅವಳನ್ನು ಕೀಳಾಗಿ ನಡೆಸಿಕೊಂಡರೆಂದು ಭಾವಿಸಿ ಜನರು ರೊಚ್ಚಿಗೆದ್ದಿದ್ದರು. ಜನರ ನಾಡಿ ಮಿಡಿತವನ್ನು ಅರ್ಥ ಮಾಡಿಕೊಂಡ ರಾಜಕಾರಣಿಗಳು ರಾಣಿಗೆ ತಪ್ಪನ್ನು ಸರಿಪಡಿಸುವಂತೆ ಆಗ್ರಹಿಸಿದರು. ಅದರಂತೆ ಡಯಾನಳಿಗೆ ರಾಜ ಮರ್ಯಾದೆಯ ಅಂತ್ಯಸಂಸ್ಕಾರವನ್ನು ಏರ್ಪಡಿಸಲಾಯಿತು. ಯಾವತ್ತೂ ತಮ್ಮ ಭಾವನೆಗಳನ್ನು ನಿಯಂತ್ರಣದಲ್ಲಿಟ್ಟಿರುತ್ತಿದ್ದ ರಾಣಿ ಅಂತ್ಯಸಂಸ್ಕಾರದ ಹಿಂದಿನ ದಿನ ಜನರನ್ನುದ್ದೇಶಿಸಿ ಟಿ.ವಿ.ಯಲ್ಲಿ ತಮ್ಮ ಮತ್ತು ರಾಜ ಪರಿವಾರದ ದುಃಖವನ್ನು ತೋಡಿಕೊಳ್ಳುತ್ತಾ, ಮೃತ ಸೊಸೆಯ ಗುಣಗಾನ ಮಾಡಿದರು.

ಅನುವಾದ: ಜೆ.ವಿ. ಕಾರ್ಲೊ, ಹಾಸನ (ಕೃಪೆ: ವಿವಿಧ ಮೂಲಗಳು)

Like our Page – www.facebook.com/janavahini

Like us on facebook

Leave a Reply

Your email address will not be published. Required fields are marked *

*

code

LATEST NEWS