ಅಮೆರಿಕದ ರಸ್ತೆಗೆ ಮಂಗಳೂರಿಗನ ಹೆಸರು: ಲ. ಆಸ್ಟಿನ್ ಡಿಸೋಜಾರ ಮಹತ್ಸಾಧನೆಗೆ ಗೌರವ

Published on: Wednesday, January 17th, 2018,11:08 pm

ಎಲ್ಲಿಯ ಮಂಗಳೂರು ಮತ್ತು ಎಲ್ಲಿಯ ಅಮೆರಿಕವೆನ್ನುತ್ತೀರಾ? ನೀವು ನಂಬಲೇಬೇಕು. ಹೌದು! ಮಂಗಳೂರಿನ ಸಾಮಾನ್ಯ ವ್ಯಕ್ತಿಯೊಬ್ಬರ ಹೆಸರನ್ನು ಅಮೆರಿಕದ ಪ್ರತಿಷ್ಠಿತ ನಗರದ ರಸ್ತೆಯೊಂದಕ್ಕೆ ನಾಮಕರಣ ಮಾಡುತ್ತಿದ್ದಾರೆ. ಸಮಸ್ತ ಮಂಗಳೂರಿಗರಿಗೆ ಮತ್ತು ಭಾರತೀಯರಿಗೆಲ್ಲಾ ಹೆಮ್ಮೆಯ ಸಂಗತಿಯಿದು.

ಲಯನ್ ಡಾ. ಆಸ್ಟಿನ್ ಡಿಸೋಜ ಪ್ರಭು!

Lion Austin DSouza 1

‘ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು’ ಎನ್ನುವ ಉಕ್ತಿಗೆ ಸೂಕ್ತವಾಗಿ ಹೊಂದುವ ವ್ಯಕ್ತಿ ಇವರು. ಇವರದು ಸದಾ ನಗು ಚೆಲ್ಲುವ ಮುಖ, ಉಲ್ಲಾಸದಿಂದ ಪುಟಿಯುವ, ಸದಾ ಕಾರ್ಯತತ್ಪರ, ಕ್ರಿಯಾಶೀಲ ಮನಸ್ಸು. ಕಾಲೇಜು ದಿನಗಳಲ್ಲೇ ಸಾಂಸ್ಕೃತಿಕ ಮತ್ತು ಸಾಮಾಜಿಕ ಕಾರ್ಯ, ಚಟುವಟಿಕೆಗಳಲ್ಲಿ ಭಾಗವಹಿಸುತ್ತಾ ಬೆಳೆದ ಇವರು ತುಂಬಾ ಕಿರಿಯ ವಯಸ್ಸಿನಲ್ಲೇ ಹಲವು ಮಹತ್ವದ ಜವಾಬ್ದಾರಿಗಳನ್ನು ನಿರ್ವಹಿಸಿ ಹಿರಿತನವನ್ನು ಸಾಬೀತುಪಡಿಸಿದ ಸಾಧಕ.

Lion Austin DSouza 3ಮಂಗಳೂರಿನ ನಂತೂರು ಬಳಿ ಜನಿಸಿದ ಆಸ್ಟಿನ್ ಡಿಸೋಜ ಪ್ರಭು ಕೊಂಕಣಿಯಲ್ಲಿ ಅಪಾರವಾದ ಕೊಡುಗೆಯನ್ನು ನೀಡಿದ್ದಾರೆ. ಏಕ ಕಾಲದಲ್ಲಿ ನಾಲ್ಕು ಪತ್ರಿಕೆಗಳ ಸಂಪಾದಕರಾಗಿ, ನಾಟಕ, ಸಮಾಜಸೇವೆ, ಸಾಹಿತ್ಯ ಮತ್ತು ಮುಖಂಡತ್ವದಲ್ಲಿ ಅಪಾರ ಕೆಲಸ ಮತ್ತು ಕೊಡುಗೆ ನೀಡಿದ ಅವರು ಲಯನ್ಸ್ ಕ್ಲಬ್‍ನಲ್ಲಿಯೂ ಸದಸ್ಯರಾಗಿ ಸೇವೆ ಸಲ್ಲಿಸಿದ್ದರು.

ಕಳೆದ 33 ವರ್ಷಗಳಿಂದ ಅಮೆರಿಕದ ಚಿಕಾಗೊದಲ್ಲಿ ಪತ್ನಿ ಮತ್ತು ಕುಟುಂಬದೊಂದಿಗೆ ವಾಸಿಸುತ್ತಿರುವ ಆಸ್ಟಿನ್, ಉದ್ಯೋಗದ ಜೊತೆಗೆ ಅಲ್ಲಿನ ಲಯನ್ಸ್ ಕ್ಲಬ್‍ನಲ್ಲಿ ಸೇವೆ ಸಲ್ಲಿಸುತ್ತಾ ಬಂದಿದ್ದಾರೆ. ಹೀಗೆ ಲಯನ್ಸ್‍ನಲ್ಲಿ ಅವರು ಕ್ಲಬ್, ಜಿಲ್ಲೆ, ರಾಜ್ಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ವಿಶೇಷವಾದ ಸೇವೆ ನೀಡುತ್ತಾ ಬಂದಿದ್ದು ಹಲವು ಗಣನೀಯ ಸಾಧನೆಗಳನ್ನು ಮಾಡಿದ್ದಾರೆ.

Lion Austin DSouza 4

ಲಯನ್ಸ್ ಕ್ಲಬ್‍ನ ಮಾತೃ ಜಿಲ್ಲೆಯಾದ ಚಿಕಾಗೋದ ಗವರ್ನರ್ ಆಗಿಯೂ ಅವರು ಸೇವೆ ಸಲ್ಲಿಸಿದ್ದಾರೆ. ಎರಡು ಬಾರಿ (2004-05 ಮತ್ತು 2011-12ರ ಅವಧಿಯಲ್ಲಿ) ಅವರು ಈ ಪ್ರತಿಷ್ಠಿತ ಹುದ್ದೆಯನ್ನು ಅಲಂಕರಿಸಿದ್ದು, ಎರಡೂ ಬಾರಿಯೂ ಅವಿರೋಧವಾಗಿ ಆಯ್ಕೆಯಾಗಿರುವುದು ಅವರ ಹೆಗ್ಗಳಿಕೆ. ಅವರ ಸಾಧನೆ ಮತ್ತು ಜನಪ್ರಿಯತೆಗೆ ಇದು ಸಾಕ್ಷಿ. ಎರಡು ಬಾರಿ ಇಲಿನೊಯ್ಸ್ ರಾಜ್ಯದ ವೈಸ್ ಕೌನ್ಸಿಲರ್ ಆಗಿಯೂ ಅವರು ಸೇವೆ ಸಲ್ಲಿಸಿದ್ದಾರೆ.

ಆಸ್ಟಿನ್ ಅವರು ಅಮೆರಿಕದಲ್ಲಿ ಹಲವು ಲಯನ್ಸ್ ಕ್ಲಬ್‍ಗಳನ್ನು ತೆರೆದಿದ್ದು, ಮಂಗಳೂರಿಗರೇ ಇರುವ ಕ್ಲಬ್ ಕೂಡ ಅವರ ನೇತೃತ್ವದಲ್ಲಿ ಸ್ಥಾಪನೆಯಾಗಿದೆ. ಲಯನ್ಸ್ ಕ್ಲಬ್ ಮುಖಾಂತರ ಅಪಾರ ಜನಸೇವೆ ನಡೆಸುತ್ತಾ ಬಂದಿರುವ ಆಸ್ಟಿನ್ ಡಿಸೋಜ, ದೈಹಿಕ ವೈಕಲ್ಯ ಹೊಂದಿರುವ ಅಂದರೆ ಕುರುಡರು ಮತ್ತು ಕಿವುಡರಿಗಾಗಿ ಹಲವು ಯೋಜನೆ, ಕೆಲಸ ಕಾರ್ಯಗಳನ್ನು ಹಮ್ಮಿಕೊಳ್ಳುತ್ತಾ ಅವರಿಗೆ ನೆರವಾಗುವತ್ತ ಅಪಾರವಾಗಿ ಶ್ರಮಿಸಿದ್ದಾರೆ. ಹೆಲೆನ್ ಕೆಲ್ಲರ್ ಅವರಿಂದ ಪ್ರಭಾವಿತರಾಗಿರುವ ಆಸ್ಟಿನ್ ದೃಷ್ಟಿಯಿಲ್ಲದವರಿಗಾಗಿ ಲಯನ್ಸ್ ಕ್ಲಬ್ ಮುಖಾಂತರ ಮಹತ್ತರ ಕೊಡುಗೆ ನೀಡಿದ್ದಾರೆ.

Lion Austin DSouza 2

ಈ ನಿರಂತರ ಸೇವೆ ಮತ್ತು ಕೊಡುಗೆಯನ್ನು ಪರಿಗಣಿಸಿ ಪ್ರಸ್ತುತ ಇಲಿನೊಯ್ಸ್ ರಾಜ್ಯದ ಫೊರೆಸ್ಟ್ ಪಾರ್ಕ್ ನಗರದ ರಸ್ತೆಯೊಂದಕ್ಕೆ ಆಸ್ಟಿನ್ ಡಿಸೋಜಾರ ಹೆಸರನ್ನು ನಾಮಕರಣ ಮಾಡಲಾಗುತ್ತಿದೆ. ಅಲ್ಲಿನ ಡೆನ್‍ಲಪ್ ಅವೆನ್ಯೂದ ಹ್ಯಾರಿಸನ್‍ನಿಂದ ಯೊರ್ಕ್‍ವರೆಗಿನ ರಸ್ತೆಗೆ ಆಸ್ಟಿನ್ ಡಿಸೋಜಾರ ಹೆಸರನ್ನಿಡಲಾಗುವುದೆಂದು ಅಲ್ಲಿನ ಮೇಯರ್ ಆಂಟನಿ ಟಿ. ಕ್ಯಾಲ್ಡೆರೊ ಅವರು ಅಧಿಕೃತವಾಗಿ ಘೋಷಿಸಿದ್ದಾರೆ.

ಸಮಾಜ ಸೇವಕ ಮತ್ತು ಭಾಷಾ ಪ್ರೇಮಿಯಾಗಿರುವ ಆಸ್ಟಿನ್ ಕೊಡುಗೈ ದಾನಿಯಾಗಿಯೂ ಸಾಕಷ್ಟು ಹೆಸರು ಗಳಿಸಿದ್ದಾರೆ. ದೂರದ ಅಮೆರಿಕದಲ್ಲಿದ್ದರೂ ಮಂಗಳೂರು ಮತ್ತು ವಿಶೇಷವಾಗಿ ಕೊಂಕಣಿ ಭಾಷೆ, ಸಂಸ್ಕೃತಿ, ಸಂಗೀತ ಮತ್ತು ಕಲೆಯನ್ನು ಪೋಷಿಸುತ್ತಾ ಬಂದಿದ್ದಾರೆ. ಇವರ ಬಹುಮುಖಿ ಸೇವೆಗೆ ಹಲವು ಪ್ರಶಸ್ತಿ, ಪುರಸ್ಕಾರ, ಸನ್ಮಾನಗಳು ಸಂದಿದ್ದು, ಕೆಲ ವರ್ಷಗಳ ಹಿಂದೆ ಭಾರತದ ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಅವರಿಂದ ಮಂಗಳೂರಿನಲ್ಲಿ ಸನ್ಮಾನವನ್ನೂ ಸ್ವೀಕರಿಸಿದ್ದಾರೆ.

ಆಸ್ಟಿನ್ ಡಿಸೋಜಾರ ಕೊಂಕಣಿ ಸಂದರ್ಶನ ಓದಲು ಈ ಲಿಂಕ್ ಕ್ಲಿಕ್ ಮಾಡಿ

Visit & Like our Page – www.facebook.com/janavahini

Like us on facebook

Leave a Reply

Your email address will not be published. Required fields are marked *

*

code

LATEST NEWS