ಎಳ್ಳು ಬೆಲ್ಲ ತಿಂದು ಎಲ್ಲರೂ ಒಳ್ಳೊಳ್ಳೆ ಮಾತಾಡಿ

Published on: Sunday, January 14th, 2018,12:22 am

ಭಾರತದಲ್ಲಿ ಹಬ್ಬ ಹರಿದಿನಗಳಿಗೆ ಬರವಿಲ್ಲ. ನಮ್ಮಲ್ಲಿ ಆಚರಿಸುವ ಪ್ರತಿಯೊಂದು ಹಬ್ಬವೂ ವೈವಿಧ್ಯಮಯವೇ. ಅವು ನಮ್ಮ ಸಂಸ್ಕೃತಿ, ಪರಂಪರೆಯ ಪ್ರತೀಕವಾಗಿ, ನಮ್ಮ ಬದುಕಿನ ಭಾಗವಾಗಿ ನಮ್ಮೊಂದಿಗೆ ಬೆರೆತು ಹೋಗಿರುತ್ತವೆ. ಪ್ರತಿಯೊಂದು ಹಬ್ಬಕ್ಕೂ ತನ್ನದೇ ಆದ ವೈಶಿಷ್ಟ್ಯತೆಯಿದೆ.  ಹೊಸ ವರ್ಷದ ಹೊಸ್ತಿಲಲ್ಲಿ ಬರೋ ಸಂಕ್ರಾಂತಿ ದಕ್ಷಿಣ ಭಾರತದಲ್ಲೇ ಅತ್ಯಂತ ಪ್ರಮುಖವಾದ ಹಬ್ಬ. ‘ ಎಳ್ಳು ಬೆಲ್ಲ ತಿಂದು ಎಲ್ಲರೂ ಒಳ್ಳೊಳ್ಳೆ ಮಾತನಾಡಿ ’ ಎನ್ನುವ ಶುಭ ಆಶಯದೊಂದಿಗೆ ಮನೆ ಮನೆಗೆ ಹಂಚುತ್ತಾ ಖುಷಿಪಡುವ ಸಂಕ್ರಾಂತಿಗೆ ತನ್ನದೇ ಆದ ವಿಶೇಷತೆಯಿದೆ.

Sankranthi 3

ಇದು ರೈತಾಪಿ ವರ್ಗ ಸಂಭ್ರಮ, ಸಡಗರದಿಂದ ಆಚರಿಸುವ ಸುಗ್ಗಿ ಹಬ್ಬ. ಅದಕ್ಕೆ ಸಂಕ್ರಾಂತಿಯ ಸಂಭ್ರಮದಂದು ನಮ್ಮ ಜನಪದರು ‘ಸುಗ್ಗಿಯು ಬಂದಿತು ಹಿಗ್ಗನು ತಂದಿತು ನಮ್ಮಯ ನಾಡಿನ ಜನಕ್ಕೆಲ್ಲ ’ ಎಂದು ಹಾಡಿ ಕುಣಿದು ಸಂಭ್ರಮಿಸುತ್ತಾರೆ. ಇನ್ನು ಹೊಸ ಅಂಗಿತೊಟ್ಟು ಸಿಹಿ ತಿಂಡಿ ಮೆಲ್ಲುತ್ತಾ ಕುಣಿದಾಡುವ ಚಿಣ್ಣರು, ಎಳ್ಳು ಬೆಲ್ಲದ ಜೊತೆ ಅರಿಶಿಣ-ಕುಂಕುಮ ಕೊಟ್ಟು ಶುಭ ಕೊರುವ, ಸೀರೆಯುಟ್ಟು ಸಂಭ್ರಮಿಸುವ ನಾರಿಯರು. ಸಂಕ್ರಾಂತಿಯ ಆ ಸಂಭ್ರಮ, ಸಡಗರ ನೋಡುವುದೇ ಚೆನ್ನ.

ಸಂಕ್ರಾಂತಿಯ ಒಂದು ವಿಶೇಷ ಎಂದರೆ ಎಳ್ಳು ಬೆಲ್ಲ ಹಂಚೋದು. ಎಳ್ಳಿನ ಜೊತೆಗೆ ಬೆಲ್ಲದ ಅಚ್ಚು, ಹಣ್ಣು, ಕೊಬ್ಬರಿ, ಕಬ್ಬು ಹೀಗೆ ತರ ತರವಾದ ತಿನಿಸುಗಳನ್ನು ಮನೆ ಮನೆಗೂ ಬೀರಿ (ಹಂಚಿ), ತಾವೂ ತಿಂದು ಸಂಭ್ರಮಿಸುತ್ತಾರೆ. ಈ ಎಳ್ಳು ಬೀರುವುದರ ಹಿಂದೊಂದು ವೈಜ್ಞಾನಿಕತೆ ಇದೆ. ದಕ್ಷಿಣಾಯಣ ಮುಗಿದು ಉತ್ತರಾಯಣದ ಕಡೆ ಸೂರ್ಯ ತನ್ನ ಪಥವನ್ನು ಬದಲಿಸುತ್ತಾನೆ. ಇದನ್ನೇ ನಾವು ಸಂಕ್ರಮಣ ಎಂದು ಆಚರಿಸುವುದು. ಯಾವಾಗ ದಕ್ಷಿಣದಿಂದ ಸೂರ್ಯ ಉತ್ತರಕ್ಕೆ ತನ್ನ ಪಥವನ್ನು ಬದಲಾಯಿಸುತ್ತಾನೋ ಆಗ ಚಳಿಗಾಲ ಕಡಿಮೆಯಾಗುತ್ತಾ ಬೇಸಿಗೆ ಆರಂಭವಾಗುತ್ತದೆ. ಭೂಮಿಯ ಮೇಲಿನ ಉಷ್ಣಾಂಶವೂ ಹೆಚ್ಚಾಗುತ್ತದೆ. ಎಳ್ಳು ಮತ್ತು ಬೆಲ್ಲ ಎರಡೂ ದೇಹಕ್ಕೆ ತಂಪು ನೀಡುತ್ತವೆ. ಹೀಗಾಗಿ ಈ ಸಂಭ್ರಮದಲ್ಲಿ ಎಳ್ಳು-ಬೆಲ್ಲವನ್ನು ಹಂಚುತ್ತಾರೆ.

ಸಂಭ್ರಮದ ಸುಗ್ಗಿಯ ಹಬ್ಬ

Sankranthi 1

ಸಂಕ್ರಾಂತಿ ಎಂದರೆ ಕೃಷಿಕರಿಗೆ ಎಲ್ಲಿಲ್ಲದ ಖುಷಿ. ಭೂಮಿ ತಾಯಿಯನ್ನು ನಂಬಿ ಉತ್ತಿ, ಬಿತ್ತಿ ಬೆಳೆದ ತನ್ನ ಫಲವನ್ನು ಪಡೆಯುವ ಸುಗ್ಗಿಯ ಕಾಲವಿದು. ಆ ಭೂತಾಯಿಯ ಮಡಿಲು ತುಂಬಿ, ಬೆಳೆದು ನಿಂತ ಪೈರಿಗೆ ಪೂಜಿಸುವ ಮೂಲಕ ಸುಗ್ಗಿ ಹಬ್ಬವನ್ನು ಆಚರಿಸುತ್ತಾರೆ. ವರ್ಷಪೂರ್ತಿ ಮನೆಯ ತುಂಬಾ ದವಸ ಧಾನ್ಯ, ಸಂಪತ್ತು ತುಂಬಿರಲಿ ಎಂಬ ಸದಾಶಯ ಈ ಆಚರಣೆಯ ಮೂಲ ಉದ್ದೇಶ. ದಕ್ಷಿಣ ಭಾರತದ ಕರ್ನಾಟಕ, ತಮಿಳುನಾಡು, ಕೇರಳ, ಮಹಾರಾಷ್ಟ್ರದಲ್ಲಿ ಸಂಭ್ರಮದಿಂದ ಆಚರಿಸಲಾಗುತ್ತದೆ. ಕರ್ನಾಟಕದಲ್ಲಿ ಸಂಕ್ರಾಂತಿ ಎಂದು, ಕೇರಳ, ತಮಿಳುನಾಡಿನಲ್ಲಿ ಪೊಂಗಲ್ ಎಂದು ಆಚರಿಸಲಾಗುತ್ತದೆ. ಆಚರಿಸುವ ರೀತಿ, ಕರೆಯುವ ಹೆಸರುಗಳು ಬೇರೆ ಬೇರೆಯಷ್ಟೇ. ಆದರೆ ಈ ಸಂಭ್ರಮಕ್ಕೆ ಜಾತಿ, ಧರ್ಮಗಳ ಭೇದವಿಲ್ಲ. ಕಾರಣ ಇದು ಅನ್ನದಾತರು ಆಚರಿಸುವ ಸುಗ್ಗಿ ಹಬ್ಬ. ಅನ್ನದಾತನಿಗೆ ಯಾವ ಜಾತಿ? ಯಾವ ಮತ? ಅವನಿಗೆ ನೇಗಿಲು ಹಿಡಿದು ಉತ್ತಿ ಬಿತ್ತಿ ಬೆಳೆಯುವುದೇ ಧರ್ಮ.

Sankranthi 2

ಆದರೆ ಆಧುನಿಕತೆಯ ಓಟದಲ್ಲಿ ಅನ್ನದಾತನ ಅನ್ನದ ಋಣವನ್ನು ನಾವುಗಳು ಮರೆತಿದ್ದೇವೆ. ರೈತರು ಸಂಭ್ರಮ, ಸಡಗರದಿಂದ ಆಚರಿಸಬೇಕಾದ ಹಬ್ಬ ತನ್ನತನವನ್ನು ಕಳೆದುಕೊಳ್ಳುತ್ತಿದೆ. ರೈತನ ಜೀವನ ಮಾತ್ರ ಇಂದಿಗೂ ಸುಧಾರಣೆಯಾಗಿಲ್ಲ. ಮಳೆ, ಬೆಳೆ ಚೆನ್ನಾಗಿ ಇದ್ದರೆ ರೈತನಿಗೆ ಸಂಕ್ರಾಂತಿಯ ಸಂಭ್ರಮ. ಒಂದೊಮ್ಮೆ ಎರಡೂ ಚೆನ್ನಾಗಿದ್ದರೂ ಬೆಳೆದ ಬೆಳೆಗೆ ಸರಿಯಾದ ಬೆಲೆ ಸಿಗದೆ ರೈತ ಕಂಗಾಲಾಗಿದ್ದಾನೆ. ಅವನಿಗೆ ಸಾಂತ್ವನ ಹೇಳಿ ಸಂತೈಸುವ ಜವಾಬ್ದಾರಿ ಎಲ್ಲರ ಮೇಲಿದೆ.

ಸಂಕ್ರಾಂತಿ ಹೊಸ ಕನಸುಗಳಿಗೆ ಮುನ್ನುಡಿಯಾಗಬೇಕು

KV Naveen Kiranಸಂಕ್ರಾಂತಿ ಹೊಸತನದ, ಸಮೃದ್ಧತೆಯ ಸಂಕೇತ. ಅದು ಹೊಸ ಬದುಕು, ಹೊಸ ಕನಸುಗಳಿಗೆ ಮುನ್ನುಡಿಯಾಗಬೇಕು. ನಶಿಸಿ ಹೋಗುತ್ತಿರುವ ಸಂಸ್ಕೃತಿ-ಪರಂಪರೆಯ ಮರು ಹುಟ್ಟಿಗೆ ಸ್ಪೂರ್ತಿಯಾಗಬೇಕು. ಕೃಷಿಕ ಖುಷಿಯಾಗಿ ಬಾಳುವಂತಾಗಬೇಕು. ಮೇಲು-ಕೀಳು, ದೀನ-ದಲಿತ ಅನ್ನೋ ಭೇದ ಭಾವಗಳು ಅಳಿಸಿ, ಸಮ ಸಮಾಜವನ್ನು ನಿರ್ಮಿಸುವ ಕಡೆಗೆ  ನಮ್ಮ ಯೋಚನೆ, ಆಲೋಚನೆಗಳು ಬದಲಾಗಬೇಕಿದೆ. ನಮ್ಮ ಅಲೋಚನೆಗಳು ಸಮಾಜ ಮುಖಿಯಾಗಿರಲಿ. ಬನ್ನಿ, ಈ ಬಾರಿಯ ಸಂಕ್ರಾಂತಿಯ ದಿನದಿಂದಲೇ ಹೊಸತನದ, ಹೊಸ ಪ್ರೀತಿ, ಹೊಸ ಭಾಂದವ್ಯ, ಬದಲಾವಣೆಯ ಹೊಸ ಕನಸಿನೊಂದಿಗೆ ಆಚರಿಸೋಣ. ಪ್ರೀತಿ, ಪ್ರೇಮದ ನಿರ್ಭೀತ ಸಮಾಜ ಮತ್ತೆ ರೂಪುಗೊಳ್ಳಲಿ. ಅದೇ ನಿಟ್ಟಿನಲ್ಲಿ ನಾವೆಲ್ಲರೂ ಸಾಗೋಣ.

ಮನೆ ಮನಗಳಲ್ಲಿ ಹೊಸ ಸಂಭ್ರಮ, ಸಡಗರವನ್ನು ತಂದಿರುವ ಸಂಕ್ರಮಣ ಎಲ್ಲರಗೂ ಶುಭ ತರಲಿ.

ಬರಹ: ಕೆ. ವಿ. ನವೀನ್ ಕಿರಣ್
(ಲೇಖಕರು ಚಿಕ್ಕಬಳ್ಳಾಪುರದ ಕೆ.ವಿ ಹಾಗೂ ಪಂಚಗಿರಿ ದತ್ತಿ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷರು)

Visit & Like our Page – www.facebook.com/janavahini

Like us on facebook

2 thoughts on “ಎಳ್ಳು ಬೆಲ್ಲ ತಿಂದು ಎಲ್ಲರೂ ಒಳ್ಳೊಳ್ಳೆ ಮಾತಾಡಿ”

  1. Thank u very much sir. May this Sankranthi festival bring u good luck ,sucess and lots of happiness to u and your family.

  2. ಜೀವನದ ಕ್ರಾಂತಿಗೆ ಸಂಕ್ರಮಣ ನೀಡಿ
    ಸವಿ ಸಿಹಿ ಮಾತನಾಡಿ ದ್ವೇಷ ವೈಷಮ್ಯವ ಹೊರದೂಡಿ
    ನೇಸರ ತನ್ನ ಪಥ ಬದಲಿಸಿದಂತೆ ನಮ್ಮ ದುರ್ಗುಣವ ದೂರ
    ತಳ್ಳಿ ಹೊಸತನವ ಸೃಷ್ಟಿಸಲಿ ಈ ಮಕರ ಸಂಕ್ರಾಂತಿ..

    ಸಹೃದಯಿ ಸ್ನೇಹಿತರೆಲ್ಲರಿಗೂ ಸಂಕ್ರಾಂತಿಯ ಶುಭಾಶಯಗಳು

Leave a Reply

Your email address will not be published. Required fields are marked *

*

code

LATEST NEWS