ಇಲ್ಲಿದೆ ನೋಡಿ, ಕ್ರೂರಿ ಟಿಪ್ಪು ಸುಲ್ತಾನ್ ಒಡೆದು ಹಾಕಿದ ಚರ್ಚುಗಳ ಪಟ್ಟಿ

Published on: Sunday, November 5th, 2017,3:28 pm

ಬರಹ: ಡೊನಾಲ್ಡ್ ಪಿರೇರಾ ಬೆಳ್ತಂಗಡಿ

ಜೀವಂತವಿರುವಾಗ ಏನೆಲ್ಲಾ ಎಷ್ಟೆಲ್ಲಾ ಅನಾಚಾರಾಗಳನ್ನು ಮಾಡಿದ್ದರಿಂದಲೇ ಏನೋ, ಸತ್ತು ಎರಡು ಶತಮಾನ ಕಳೆದರೂ ಟಿಪ್ಪು ಸುಲ್ತಾನನ ಬಗೆಗಿನ ವಿವಾದಗಳು ವಿಜೃಂಭಿಸುತ್ತಲೇ ಇವೆ. ಕರ್ನಾಟಕದ ಕಾಂಗ್ರೆಸ್ ಪಕ್ಷದ ಧುರೀಣರಿಗೆ ಒಮ್ಮಿಂದೊಮ್ಮೆಲೆ ಟಿಪ್ಪು ಸುಲ್ತಾನನು ಕನಸ್ಸಿನಲ್ಲಿ ಬಂದು ದಾಳಿಯಟ್ಟ ಎಂಬಂತೆ ದ್ವಿತೀಯ ಯುಪಿಎ ಸರಕಾರದ ಸಮಯದಲ್ಲಿ ಶ್ರೀರಂಗಪಟ್ಟಣದಲ್ಲಿ ಟಿಪ್ಪು ಸುಲ್ತಾನನ ಹೆಸರಿನಲ್ಲಿ ವಿಶ್ವವಿದ್ಯಾನಿಲಯ ಸ್ಥಾಪಿಸುವ ಕನಸನ್ನು ಬಿತ್ತಲಾಯಿತು. ಸಹಜವಾಗಿ ಅದಕ್ಕೆ ವಿರೋಧ ವ್ಯಕ್ತವಾಯಿತು. ಮತ್ತೆ ಆ ಯೋಜನೆ ಕಾವೇರಿಯಲ್ಲಿ ಎಲ್ಲಿ ಹರಿದು ಹೋಯಿತೋ ಯಾರಿಗೂ ಗೊತ್ತಾಗಲಿಲ್ಲ. ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಸ್ಥಾಪನೆಯಾದ ನಂತರ ಮತ್ತೆ ಟಿಪ್ಪು ಸುಲ್ತಾನನ ಜಪ ಪ್ರಾರಂಭವಾಗಿ ಎರಡು ವರ್ಷಗಳ ಹಿಂದೆ, 2015ರಲ್ಲಿ ಟಿಪ್ಪು ಜಯಂತಿಯನ್ನು ಸರಕಾರವೇ ಆಚರಿಸಿತು. ಅಲ್ಲಿಂದ ಇದೀಗ ಮೂರನೇ ವರ್ಷ, ಟಿಪ್ಪು ಜಯಂತಿ ಎಂದಿನಂತೆ ವಿವಾದಕ್ಕೆಡೆಯಾಗುತ್ತಿದೆ.

ಟಿಪ್ಪು ಸುಲ್ತಾನ್ ಕ್ರೂರಿಯಾಗಿದ್ದನೆಂಬುದನ್ನು ಎಲ್ಲರೂ ಒಪ್ಪುತ್ತಾರೆ. ಕೆಲವರು ಅದನ್ನು ವಿರೋಧಿಸಿ ಹೇಳುತ್ತಾರೆ, ಮತ್ತೆ ಕೆಲವರು ಅದನ್ನು ಸಮರ್ಥನೆ ಮಾಡುತ್ತಾ ಆತನನ್ನು ಹೊಗಳುತ್ತಾರೆ. ಒಟ್ಟಿನಲ್ಲಿ ಇವರು ಟಿಪ್ಪು ನರಮೇಧ, ಸರ್ವನಾಶ ಮಾಡಿದ್ದನ್ನು ಪ್ರತ್ಯಕ್ಷ ಅಥವಾ ಪರೋಕ್ಷವಾಗಿ ಒಪ್ಪಿದಂತಾಗುತ್ತದೆ.

Rosario Church Mangaluru

ರಾಜಕೀಯ ವಿಚಾರಗಳಿಗೆ ಸಂಬಂಧಿಸಿದಂತೆ ಯಾವುದೇ ವಿವಾದ, ಗಲಾಟೆ, ಗೊಂದಲಗಳು ನಡೆದಾಗಲೂ ಸಾಮಾನ್ಯವಾಗಿ ಅದು ಹಿಂದೂ ಮತ್ತು ಮುಸ್ಲಿಮರ ಧರ್ಮಗಳ ನಡುವಿನ ಸಂಘರ್ಷವನ್ನಾಗಿಸಲಾಗುತ್ತದೆ. ಎರಡೂ ಬದಿಯ ಪಕ್ಷಗಳು ಮತ್ತು ಇತರರು, ವಿಚಾರ ಅಥವಾ ವಿವಾದವನ್ನು ಜೀವಂತವಾಗಿರಿಸಿ ತಮ್ಮ ಬೇಳೆ ಬೇಯಿಸಿಕೊಳ್ಳುತ್ತಾರೆ. ಪ್ರಮುಖವಾದ ಇನ್ನೊಂದು ಧರ್ಮವಾದ ಕ್ರೈಸ್ತ ಧರ್ಮ ಮತ್ತು ಕ್ರೈಸ್ತರು ಹೀಗೆ ರಾಜಕೀಯ ಸಂಗತಿಗಳಿಗೆ ಆಹಾರವಾಗುವುದು ತುಂಬಾ ಕಡಿಮೆ. ಆದರೆ, ಈ ಟಿಪ್ಪು ಜಯಂತಿಯು ನಿದ್ರೆಯಲ್ಲಿದ್ದ ಕ್ರೈಸ್ತರನ್ನು ದಂಗುಬಡಿದು ಎದ್ದೇಳುವಂತೆ ಮಾಡಿದೆ. ಅಷ್ಟೇ ಅಲ್ಲದೆ, ಇದುವರೆಗೆ ತಾವು ಅಲ್ಪಸಂಖ್ಯಾತರ ಪರ, ಅವರಿಗೋಸ್ಕವೇ ತಮ್ಮ ಜೀವನ ಮುಡಿಪಾಗಿಟ್ಟವರು ಎಂದು ಮುಸ್ಲಿಮರು ಸೇರಿದಂತೆ ಕ್ರೈಸ್ತರನ್ನೂ ಸಹ ಸಮರ್ಥಿಸುತ್ತಿದ್ದ, ಬೆಂಬಲಿಸುತ್ತಿದ್ದ ಬಹಳಷ್ಟು ಎಡಪಂಥೀಯರು, ಬರಹಗಾರರು, ಬುದ್ಧಿಜೀವಿಗಳು, ಪತ್ರಕರ್ತರು, ಹೋರಾಟಗಾರರು ಟಿಪ್ಪುವಿನ ವಿಷಯದಲ್ಲಿ ಪೆಕರಾಗಳಂಗಿ ಬಿಟ್ಟಿದ್ದಾರೆ, ತಾವು ಯಾರನ್ನು ವಿರೋಧಿಸುತ್ತಿದ್ದೇವೆ, ಸಮರ್ಥಿಸುತ್ತಿದ್ದೇವೆಂಬ ಇಕ್ಕಟ್ಟಿನಲ್ಲಿ ಅವರಿಗರಿಯದಂತೆಯೇ ಸಿಲುಕಿದ್ದಾರೆ.

ಹೌದು. ಈ ಟಿಪ್ಪು ಸುಲ್ತಾನ್‍ನನ್ನು ಕಣ್ಣು ಮುಚ್ಚಿ ಅಪ್ಪುವ, ಆತನನ್ನು ಬಾಯ್ತುಂಬಾ ಹೊಗಳುವ ಮತ್ತು ಆತನ ನೀಚತನವನ್ನೆಲ್ಲಾ ಸಮರ್ಥಿಸುವ ಒಂದು ವರ್ಗವಿದೆಯಲ್ಲಾ, ಅವರು ಈ ಕೈಂಕರ್ಯದಲ್ಲಿ ಮಾಮೂಲಿನಂತೆ ಮುಸ್ಲಿಂ ವರ್ಗವನ್ನು ಪ್ರತಿನಿಧಿಸಿ ಕೆಚ್ಚೆದೆಯಿಂದ ಹೋರಾಡುವ ಭರದಲ್ಲಿ ಹಿಂದೂ ಮೂಲಭೂತವಾದಿಗಳೆಂಬ ಹಣೆಪಟ್ಟಿ ಹಚ್ಚಿರುವ ಸಂಘಟನೆ, ಪಕ್ಷ, ಸಿದ್ಧಾಂತವನ್ನು ವಿರೋಧಿಸುವ ಅನಿವಾರ್ಯತೆಯಲ್ಲಿ, ತಮ್ಮಷ್ಟಕ್ಕೆ ತಾವೆಂಬಂತಿದ್ದ ಕ್ರೈಸ್ತರನ್ನು ಬೀದಿಗೆಳೆದದ್ದೇ ಅಲ್ಲದೆ ಅವರನ್ನು ತಪ್ಪಿತಸ್ಥರೆನ್ನುವ ಭಾವಕ್ಕೊಳಗಾಗುವಂತೆ ಮಾಡಿದ್ದಾರೆ.

ಟಿಪ್ಪು ಸುಲ್ತಾನನು ಕರಾವಳಿಯಲ್ಲಿ ಬಹಳ ಸಂಖ್ಯೆಯಲ್ಲಿ ನೆಲೆಸಿದ್ದ ಕ್ರೈಸ್ತರನ್ನು ಒಟ್ಟಾಗಿ ಬಂಧಿಸಿದ್ದು ಮತ್ತು ಅವರನ್ನು ಶ್ರೀರಂಗಪಟ್ಟಣದವರೆಗೆ ನಿರ್ದಯವಾಗಿ ನಡೆಸಿಕೊಂಡು ತಂದು ಬಂಧನ, ಗುಲಾಮತನದಲ್ಲಿರಿಸಿದ್ದು ಎಲ್ಲರಿಗೂ ತಿಳಿದಿರುವ ವಿಷಯ. ಆದರೆ ಅದರ ತೀವ್ರತೆ, ಪ್ರಭಾವ ಮತ್ತು ಪರಿಣಾಮ ರಾಜ್ಯದ ಚರಿತ್ರೆಯಲ್ಲಿ ಅಷ್ಟಾಗಿ ಮೂಡಿ ಬಂದದ್ದಿಲ್ಲ. ಟಿಪ್ಪುವಿನ ಚರಿತ್ರೆ ಹೇಳುವಾಗಲೂ ಅದೊಂದು ಸಣ್ಣ ಸಂಗತಿಯೆಂಬಷ್ಟರ ಮಟ್ಟಿಗೆ ಸೀಮಿತ. ಹಾಗಾಗಿ ಅದೊಂದು ದೊಡ್ಡ ರಾಜಕೀಯ ವಿಚಾರ, ಬೆಳವಣಿಗೆಯಾಗುತ್ತದೆಂಬುದರ ಅರಿವು ರಾಜಕೀಯ ಪಕ್ಷಗಳಿಗೆ, ಪ್ರಮುಖವಾಗಿ ಕಾಂಗ್ರೆಸ್ಸಿಗರಿಗೆ ಇರಲಿಲ್ಲವೆನ್ನುವುದು ಸ್ಪಷ್ಟ.

ಅಷ್ಟೇ ಅಲ್ಲ, ಸದಾ ಶಾಂತಿಪ್ರಿಯರಾಗಿರುವ ಕ್ರೈಸ್ತರಲ್ಲೇ ಬಹು ಸಂಖ್ಯಾತರಿಗೆ ಟಿಪ್ಪುವಿನ ಈ ಅತ್ಯಂತ ಕರಾಳ ಅಧ್ಯಾಯದ ಮಾಹಿತಿ ಸರಿಯಾಗಿ ಇಲ್ಲ.

Tipu Sultan

ಇದೀಗ ಚುನಾವಣೆ ಬೇರೆ ಹತ್ತಿರದಲ್ಲಿದೆ. ಟಿಪ್ಪು ಜಯಂತಿಗೆ ಈ ಹಿಂದೆ ಬಹುತೇಕ ನಿರ್ಲಿಪ್ತರಾಗಿದ್ದ, ನಿಷ್ಕ್ರಿಯರಾಗಿದ್ದ ಕರಾವಳಿಯ ಕೊಂಕಣಿ ಕ್ರೈಸ್ತರಲ್ಲಿ ಸಾವಕಾಶವಾಗಿಯಾದರೂ ರಾಜಕೀಯದ ಘಮಲು ಮತ್ತು ತಮ್ಮನ್ನು ಕಡೆಗಣಿಸಿದ್ದಷ್ಟೇ ಅಲ್ಲ, ತಮ್ಮ ಜನಾಂಗವನ್ನು ಕ್ಯಾರೇ ಎನ್ನುವವರೇ ಇಲ್ಲವೆನ್ನುವ ಸತ್ಯ ತೆಳುವಾಗಿ ಗೋಚರಿಸುತ್ತಾ ಬಂದಿದೆ. ಇದು ದಿನೇ ದಿನೇ ಹೆಚ್ಚಾಗುತ್ತಲೇ ಇದೆ.

ಇಂತಹ ಸಂದಿಗ್ದ ಸನ್ನಿವೇಶದಲ್ಲಿ, ಕಾಂಗ್ರೆಸ್ ಪಕ್ಷದ ಗ್ಯಾರಂಟಿಯುತ ವೋಟ್ ಬ್ಯಾಂಕ್ ಆಗಿದ್ದ ಕ್ರೈಸ್ತರು ಕಾಂಗ್ರೆಸ್ ಪಕ್ಷದ ಓಲೈಕೆ ರಾಜಕಾರಣಕ್ಕೆ ಬಲಿಪಶುವಾಗುತ್ತಾ, ಅದೀಗ ವಿಪರೀತಕ್ಕೆ ಹೋಗಿ ಕ್ರೈಸ್ತರು ನಗಣ್ಯವೆಂಬಂತೆ ರಾಜಕೀಯ ಪಕ್ಷಗಳು ಪರಿಗಣಿಸಿವೆಯೆಂಬ ವಾಸ್ತವ ಸತ್ಯಾಂಶ ಜನರಲ್ಲಿ ಮೂಡಿ ಬಂದಿದೆ.

ಹೀಗಿರುವಾಗ, ಒಂದೆಡೆ ಹಿಂದೂ ಸಂಘಟನೆಗಳನ್ನು ವಿರೋಧಿಸುತ್ತಾ ಮತ್ತು ಮುಸ್ಲಿಮ್ ಮೂಲಭೂತವಾದ, ಮತ್ತದನ್ನು ಬೆಂಬಲಿಸುವ ಕಮ್ಯುನಿಸ್ಟ್, ಕಾಂಗ್ರೆಸ್ ಪಕ್ಷಗಳನ್ನು ಸಮರ್ಥಿಸುತ್ತಾ ಹೊಟ್ಟೆ ಹೊರೆಯುತ್ತಿದ್ದ ಕೆಲ ಎಡಬಿಡಂಗಿಗಳಿಗೆ ಟಿಪ್ಪು ಸುಲ್ತಾನನನ್ನು ಹೊಗಳುವ, ಆತ ಮಾನವ ಜನಾಂಗದಲ್ಲಿ ಹುಟ್ಟಿದ ಅಪ್ರತಿಮ ಸಂತನೆಂಬಂತೆ ತುತ್ತೂರಿ ಊದುವ ಕರ್ಮ ಅನಿವಾರ್ಯ. ಟಿಪ್ಪು ಸುಲ್ತಾನ್ ಕ್ರೈಸ್ತರನ್ನು ಅತ್ಯಂತ ಅಮಾನವೀಯವಾಗಿ ನಡೆಸಿದ್ದನೆಂಬ ದೊಡ್ಡ ಅಧ್ಯಾಯದ ಒಂದೊಂದೇ ಪರದೆಗಳು ತೆರೆಯುತ್ತಾ ಹೋದಂತೆ, ಕ್ರೈಸ್ತರು, ಚರ್ಚುಗಳ ಬಗ್ಗೆಯೂ ಪುಂಗಿಯೂದುವ ಅನಗತ್ಯ ಅನಿವಾರ್ಯತೆಯಲ್ಲಿ ಈ ಎಡಬಿಡಂಗಿಗಳು ಸಿಲುಕಿದ್ದಾರೆ.

Milagres Church Kallianpur

ಅದರ ಪರಿಣಾಮವೇ, ಮೊನ್ನೆ ಒಂದು ವೆಬ್‍ಸೈಟ್‍ನಲ್ಲಿ ಪತ್ರಕರ್ತನೊಬ್ಬ ‘ಮಂಗಳೂರಿನ ಚರ್ಚುಗಳನ್ನು ಟಿಪ್ಪು ಸುಲ್ತಾನನು ಧ್ವಂಸಗೊಳಿಸಿಲ್ಲ’ ಎಂಬ ಅದ್ಭುತ ಸಂಶೋಧನೆಯೊಂದನ್ನು ಬಹಿರಂಗಪಡಿಸಿದ್ದಾನೆ!

ಹೌದು. ಈತ ಈ ಹಿಂದೆಯೂ ಸಾಕಷ್ಟು ಓತಪ್ರೋತ ಸಂಗತಿಗಳನ್ನು ತನ್ನ ಲೇಖನದಲ್ಲಿ ಸಾದರಪಡಿಸಿದ್ದಾನೆ. ಆವಾಗೆಲ್ಲಾ, ಅದೂ ಒಂದು ನಿರ್ದಿಷ್ಟ ಘಟನೆಯಲ್ಲಿ ಎಡವಿ ಬಿದ್ದು ಜೈಲು ಪಾಲಾಗಿ ಬಂದ ನಂತರ ಸಾಕ್ಷಾತ್ ಗಾಂಧಿಯೇ ಅವತರಿಸಿದಂತೆ, ಆತನ ಮೈಮೇಲೆ ವಿಚಿತ್ರ ರೋಷಾವೇಷ ಉಕ್ಕಿ ಬಂದ ಮೇಲೆ ಆತನ ಆವೇಶ ವಿಪರೀತಕ್ಕೆ, ಆಗಾಗ, ಹೋಗುವುದಿದೆ. ಆವಾಗೆಲ್ಲಾ ಒಬ್ಬೊಬ್ಬ ವ್ಯಕ್ತಿ, ಸಿದ್ಧಾಂತ, ಸಂಘಟನೆ, ಸಂಗತಿಗಳನ್ನು ಗುರಿಯಾಗಿಸಿ ಅರೆಬೆಂದ ವಿಚಾರಗಳನ್ನು, ಕಪೋಲಕಲ್ಪಿತ ಸಂಗತಿ, ತಪ್ಪು ತಪ್ಪಾದ ಮಾಹಿತಿಗಳನ್ನು ಕಕ್ಕುತ್ತಾ ಇರುತ್ತಾನೆ.

ಇದೀಗ ಆತ ಕರಾವಳಿಯ ಕ್ರೈಸ್ತರು ಮತ್ತವರ ಚರ್ಚುಗಳ ಬಗ್ಗೆ ಇದೇ ರೀತಿ ಮೂರ್ಖತನದಿಂದ ಸುಳ್ಳು ಸಂಗತಿಗಳನ್ನು ಹೊರ ಹಾಕಿದ್ದಾನೆ.

ಆತನ ಈ ಲೇಖನವನ್ನು ಓದಿದ ಕೆಲ ಕ್ರೈಸ್ತರಿಗೆ ಒಂದೆಡೆ ಹೊಟ್ಟೆ ಹುಣ್ಣಾಗುವ ನಗು ಮತ್ತೊಂದೆಡೆ ಈತನ ಮೂರ್ಖತನ ಹಾಗೂ ಫಟಿಂಗತನ ನೋಡಿ ವಿಪರೀತ ಬೇಸರ, ಕೋಪವುಂಟಾಗಿದೆ. ಪ್ರಪಂಚಕ್ಕೇ ತಿಳಿದಿರುವ ತನ್ನೂರಿನ ವಿಚಾರಗಳನ್ನು ತಿಳಿಯದ ಇವನೆಂಥಾ ಪತ್ರತರ್ಕ ಎಂದು ಎಲ್ಲರೂ ಪ್ರಶ್ನಿಸುತ್ತಿದ್ದಾರೆ.

ಟಿಪ್ಪು ಸುಲ್ತಾನನದು ಮಗುವಿನಂಥ ಮನಸ್ಸು, ಮನುಷ್ಯರನ್ನು ಹಿಂಸಿಸಿದವನಲ್ಲ ಮತ್ತು ಕರಾವಳಿಯ ಚರ್ಚುಗಳನ್ನು ಆತ ಕೆಡವಿರಲಿಲ್ಲ ಎಂದು ಹೇಳಿಕೊಳ್ಳಬೇಕಾದ ದರ್ದಿನಿಂದ, ಈ ಮಹಾಜ್ಞಾನಿ ಟಿಪ್ಪುವಿನ ಕಾಲದಲ್ಲಿ ಚರ್ಚುಗಳೇ ಇರಲಿಲ್ಲವೆಂಬ ಸ್ಫೋಟಕ ಸಂಶೋಧನೆಯನ್ನು ಪ್ರಸ್ತುತಪಡಿಸಿದ್ದಾನೆ. ಆದರೆ ಈ ರೀತಿ ಆತ ಮಾಡಿದ್ದರಿಂದ ಕ್ರೈಸ್ತರಿಗೆ ಲಾಭವೇ ಆಗಿದೆ ಎನ್ನುವುದು ಮಾತ್ರ ನಿಜ. ಈತನ ಮೂರ್ಖ ಲೇಖನದಿಂದ ನನಗೂ ಆಗಿನ ಕಾಲದ ಕ್ರೈಸ್ತರ ಚರಿತ್ರೆಯನ್ನು ಹೇಳುವ ಅವಕಾಶ ಬಂದೊದಗಿದ್ದು ಸಂತೋಷಕರವೇ ಆಗಿದೆ.

ಈತನ ಪ್ರಕಾರ ಕರಾವಳಿಯ ಮೊತ್ತ ಮೊದಲ ಚರ್ಚ್ ಮಂಗಳೂರಿನ ಮಿಲಾಗ್ರಿಸ್ ಚರ್ಚ್ ಅಂತೆ! 1784ರಿಂದ 1799ರ ಅವಧಿಯಲ್ಲಿ ಅಸ್ತಿತ್ವದಲ್ಲಿದ್ದದ್ದು ಕೇವಲ ಮೂರ್ನಾಲ್ಕು ಚರ್ಚುಗಳು ಮಾತ್ರವಂತೆ. ಇದೂ ಒಂದು ರೀತಿಯಲ್ಲಿ ಸತ್ಯವೇ ಹೌದು. ಯಾಕೆಂದರೆ, ಇದ್ದ ಚರ್ಚುಗಳೆಲ್ಲವನ್ನೂ ಟಿಪ್ಪು ಸುಲ್ತಾನನ ಸೈನಿಕರು ನೆಲಸಮ ಮಾಡಿದ ಮೇಲೆ ಉಳಿದ್ದು ಇಷ್ಟೇ ಸಂಖ್ಯೆಯ ಚರ್ಚುಗಳೇ ಅಲ್ಲವೇ ಮಾರಾಯ್ರೇ!?

ಹಾಗಾದರೆ ವಾಸ್ತವವೇನು? ಇಲ್ಲಿದೆ ನೋಡಿ ಸಂಕ್ಷಿಪ್ತ ಮಾಹಿತಿ.

ಕನ್ನಡ ಕರಾವಳಿಯಲ್ಲಿ ಸ್ಥಾಪನೆಯಾದ ಮೊತ್ತ ಮೊದಲ ಚರ್ಚ್ ಮಂಗಳೂರಿನ ಪಾಂಡೇಶ್ವರದಲ್ಲಿರುವ ರೊಸಾರಿಯೋ ಚರ್ಚ್. 1568ರಲ್ಲಿ ಇದರ ಸ್ಥಾಪನೆಯಾಗಿದ್ದು, ಈ ಪ್ರದೇಶದ ಮೊತ್ತ ಮೊದಲ ಕ್ರೈಸ್ತ ಪ್ರಾರ್ಥನಾ ಮಂದಿರವಾಗಿತ್ತು. ಪೋರ್ಚುಗೀಸರು ಸಮುದ್ರ ದಾರಿಯಲ್ಲಿ ಮಂಗಳೂರನ್ನು ಪ್ರವೇಶಿಸಿ ಈಗಿನ ಹಳೆ ಬಂದರಿನ ಪಕ್ಕದಲ್ಲಿ ಚರ್ಚ್ ಕಟ್ಟಿಸಿ ಅಲ್ಲಿ ಪ್ರಾರ್ಥನೆ ಮಾಡುತ್ತಿದ್ದರು. ಪ್ರಸ್ತುತ ಇರುವ ಚರ್ಚ್‍ನ ಕಟ್ಟಡವು ನೂರು ವರ್ಷಗಳ ಹಿಂದಿನದಾಗಿದೆ. ರೊಸಾರಿಯೊ ಚರ್ಚ್ ನಂತರ ಕ್ಯಾಥೆಡ್ರಲ್ ಆಗಿ ಮೇಲ್ದರ್ಜೆಗೇರಿತು. 1915ರಲ್ಲಿ ನಿರ್ಮಾಣವಾದ ಈಗಿನ ಚರ್ಚ್ ಕಟ್ಟಡದ ಶತಮಾತೋತ್ಸವವು 2015ರಲ್ಲಿ ನಡೆದಿತ್ತು. ಇದೀಗ 102 ವರ್ಷಗಳಾಗಿವೆ. ರೊಸಾರಿಯೋ ಚರ್ಚ್ ಸ್ಥಾಪನೆಯಾಗಿ 448 ವರ್ಷಗಳು ಸಂದಿವೆ.

Milagres Church Mangaluru

ಸರಿ ಸುಮಾರು ಇದೇ ಸಮಯದಲ್ಲಿ ಅಂದರೆ 1568ರಲ್ಲಿ ಇನ್ನೆರಡು ಚರ್ಚುಗಳು ಸ್ಥಾಪನೆಯಾದವು. ಉಳ್ಳಾಲದಲ್ಲಿ ಅದೇ ವರ್ಷ ಮೇರಿ ಮಾತೆಗೆ ಅರ್ಪಿಸಿದ ಪ್ರಾರ್ಥನಾ ಮಂದಿರವನ್ನು ಕಟ್ಟಲಾಯಿತು. ಅದೇ ರೀತಿ ನೇತ್ರಾವತಿಯಲ್ಲಿ ಮುಂದಕ್ಕೆ ಸಾಗುತ್ತಾ ಅರ್ಕುಳದ ಬಳಿ (ಈಗ ಒಮ್ಜೂರ್ ಚರ್ಚ್ ಎಂದು ಕರೆಯಲಾಗುವ) ಚರ್ಚ್ ಸ್ಥಾಪನೆಯಾಯಿತು. ಸಂತ ಫ್ರಾನ್ಸಿಸ್ ಆಸ್ಸಿಸಿಯವರಿಗೆ ಸಮರ್ಪಿಸಲಾದ ಈ ಚರ್ಚು 1625ರಲ್ಲಿ ಮೂಡಬಿದ್ರೆಯ ಬಂಗರಸರು ನೀಡಿದ ವಿಶಾಲ ಜಾಗಕ್ಕೆ ಸ್ಥಳಾಂತರವಾಗಿ ಪವಿತ್ರ ಶಿಲುಬೆಯ ಚರ್ಚ್‍ನ ಉಗಮವಾಯಿತು.

ಹೀಗೆ ಏಕ ಕಾಲದಲ್ಲಿ ಮಂಗಳೂರಿನ ಆಸುಪಾಸಿನಲ್ಲಿ ಕರಾವಳಿಯ ಮೊದಲ ಮೂರು ಚರ್ಚ್‍ಗಳು ಪ್ರಾರಂಭವಾದವು. ಕಾಲಾಂತರದಲ್ಲಿ ಅವುಗಳ ವಿಂಗಡಣೆಯಾಗುತ್ತಾ ಬಂದು ಪ್ರಸ್ತುತ ಕರಾವಳಿಯಲ್ಲಿ ಇನ್ನೂರಕ್ಕೂ ಚರ್ಚುಗಳು ಭವ್ಯವಾಗಿ ಮಿನುಗುತ್ತಿವೆ.

ಕರಾವಳಿಯಲ್ಲಿ ಸ್ಥಾಪನೆಯಾದ ನಾಲ್ಕನೇ ಚರ್ಚ್ ಕುಂದಾಪುರದಲ್ಲಿ ನಿರ್ಮಾಣವಾಯಿತು. ಅದೂ ಕೂಡ ರೊಸಾರಿಯೊ ಚರ್ಚ್ ಆಗಿದೆ (ಯೇಸುಕ್ರಿಸ್ತನ ತಾಯಿ ಮೇರಿ ಮಾತೆಯನ್ನು ಕರೆಯಲಾಗುವ ಹಲವು ಹೆಸರುಗಳಲ್ಲಿ ರೊಸಾರಿ ಮಾತೆ ಎನ್ನುವುದೂ ಒಂದು). 1570ರಲ್ಲಿ ಸ್ಥಾಪನೆಯಾದ ಈ ಚರ್ಚಿಗೆ ಈಗ 447 ವರ್ಷಗಳು ಸಂದಿವೆ.

ಐದನೇ ಚರ್ಚ್, 1630ರಲ್ಲಿ ಗಂಗೊಳ್ಳಿಯಲ್ಲಿ ಸ್ಥಾಪನೆಯಾಯಿತು. ನಂತರ 1680ರಲ್ಲಿ, ಅಂದರೆ ಮೊತ್ತ ಮೊದಲ ಚರ್ಚ್ ಸ್ಥಾಪನೆಯಾದ 121 ವರ್ಷಗಳ ನಂತರ ಮಿಲಾಗ್ರಿಸ್ ಮಾತೆಯ ಹೆಸರಿನಲ್ಲಿ ಮಂಗಳೂರು ಹಾಗೂ ಉಡುಪಿಯ ಕಲ್ಯಾಣಪುರದಲ್ಲಿ ಚರ್ಚ್‍ಗಳನ್ನು ನಿರ್ಮಿಸಲಾಗಿತ್ತು. ಮಿಲಾಗ್ರಿಸ್ ಚರ್ಚ್ ಮಂಗಳೂರು ಮತ್ತು ಮಿಲಾಗ್ರಿಸ್ ಚರ್ಚ್ ಕಲ್ಯಾಣಪುರ ಎಂದು ಕರೆಯುವ ಈ ಎರಡು ಚರ್ಚ್‍ಗಳು ಬಹಳ ಪ್ರಖ್ಯಾತಿ ಹೊಂದಿವೆ. ಅದೇ ವರ್ಷದಲ್ಲಿ ಮಂಗಳೂರು ಬಜಪೆ ಬಳಿಯ ಪೇಜಾವರದ ಚರ್ಚ್ ನಿರ್ಮಾಣವಾಗಿತ್ತು. ಅದನ್ನು ಸಂತ ಜೋಸೆಫರ ಚರ್ಚ್ ಎಂದು ನಾಮಕರಣ ಮಾಡಲಾಗಿತ್ತು.

ಪೋರ್ಚುಗೀಸರು ಸಮುದ್ರ ಮಾರ್ಗದಲ್ಲಿ ತೆರಳಿ ಅಳಿವೆ ಬಾಗಿಲು (ನದಿ ಸಮುದ್ರ ಸೇರುವ ಸಂಗಮ) ಇರುವಲ್ಲಿ ನಾಡಿಗೆ ಪ್ರವೇಶಿಸಿ ಲಂಗರು ಹಾಕಿದ ನಂತರ ಮಾಡುತ್ತಿದ್ದ ಆದ್ಯತೆಯ ಕೆಲಸಗಳಲ್ಲಿ ತಮ್ಮ ಪ್ರಾರ್ಥನಾ ಮಂದಿರಗಳನ್ನು ಸ್ಥಾಪಿಸುವುದೂ ಒಂದಾಗಿತ್ತು. ಬ್ರಿಟಿಷರಿಗಿಂತ ಪೋರ್ಚುಗೀಸರು ತುಂಬಾ ಧಾರ್ಮಿಕ ಶ್ರದ್ಧೆಯುಳ್ಳವರಾಗಿದ್ದರು. ಹಾಗಾಗಿ ಪೋರ್ಚುಗೀಸರು ಎಲ್ಲೆಲ್ಲಾ ಬಂದಿಳಿದರೋ ಅಲ್ಲೆಲ್ಲಾ ಒಂದೊಂದು ಚರ್ಚ್ ಸ್ಥಾಪಿಸಿದ್ದರಿಂದ ಪ್ರಪಂಚದಲ್ಲಿ ಅವರ ನೆಲೆಗಳನ್ನು ಪತ್ತೆ ಹಚ್ಚುವುದು ತುಂಬಾ ಸುಲಭ.

ಆದರೆ ಭಾರತದಲ್ಲಿ ಬಹಳಷ್ಟು ಜನರು ತಿಳಿದುಕೊಂಡಂತೆ ಬ್ರಿಟಿಷರ ಆಳ್ವಿಕೆಗೆ ಇಡೀ ಭಾರತ ಸಿಲುಕಿದ್ದರಿಂದ ಚರ್ಚುಗಳ ಸ್ಥಾಪನೆಯಾಗಿದ್ದಲ್ಲ. ಬ್ರಿಟಿಷರು ಕ್ರೈಸ್ತರಾಗಿದ್ದರೂ ಅವರಲ್ಲಿ ಹೆಚ್ಚಿನವರು ಕ್ಯಾಥೋಲಿಕ್‍ಗಳಲ್ಲ. ಶತಮಾನಗಳ ಹಿಂದೆಯೇ ಕ್ಯಾಥೋಲಿಕರಿಂದ ಬೇರ್ಪಟ್ಟು ಇಂಗ್ಲಿಷರು ಆಂಗ್ಲಿಕನ್ ಎಂಬ ಪ್ರತ್ಯೇಕ ಪಂಗಡ ರಚಿಸಿದ್ದರು. ಈ ಇಂಗ್ಲಿಷರು, ಅಂದರೆ ಬ್ರಿಟಿಷರು, ಪಕ್ಕಾ ವ್ಯಹರಾರಸ್ಥರು. ಧರ್ಮವೆಂಬುದು ಅವರಿಗೆ ನಗಣ್ಯ. ವ್ಯಾಪಾರ, ರಾಜಕೀಯವೇ ಅವರ ಆದ್ಯತೆ. ಅವರ ಕಾಲದಲ್ಲಿ ಕ್ರೈಸ್ತರಿಗೆ, ಅವರಲ್ಲಿ ವಿದ್ಯಾವಂತರು ಹೆಚ್ಚಿನವರಿದ್ದರಿಂದ, ವಿಶೇಷ ಮಾನ್ಯತೆ, ಆದರ ಸಿಕ್ಕಿರಬಹುದಷ್ಟೇ ಹೊರತು, ಕಂಡ ಕಂಡಲ್ಲಿ ಚರ್ಚುಗಳ ಸ್ಥಾಪನೆಯನ್ನೇನೂ ಅವರು ಮಾಡಿಲ್ಲ.

Fort of Mangaluru

ಕನ್ನಡ ಕರಾವಳಿಯು, ಗೋವಾದಿಂದ ಬಂದ ಕ್ರೈಸ್ತ ಮತ್ತು ಗೌಡ ಸಾರಸ್ವತ ಬ್ರಾಹ್ಮಣರನ್ನೊಳಗೊಂಡ ಹಲವು ಜಾತಿ ಧರ್ಮಗಳು ಕೊಂಕಣಿಗರಿಂದ ತುಂಬಿ ಹೋಯಿತು. ಇದಕ್ಕೆ ಗೋವಾದಲ್ಲಿ ಪೋರ್ಚುಗೀಸರ ಕಾಲದಲ್ಲಿ ಜಾರಿಯಾಗಿದ್ದ ಕರಾಳ ಕಾನೂನು – ಇನ್‍ಕ್ವಿಜಿಶನ್ ಕಾರಣವಾಗಿತ್ತು. ಶತಮಾನಗಳ ಕಾಲ ಗೋವಾದಿಂದ ಎಲ್ಲಾ ಧರ್ಮೀಯರು ದಕ್ಷಿಣಕ್ಕೆ ವಲಸೆ ಬಂದು ನೆಲೆಸಿದ್ದರಿಂದ ಈ ಪ್ರದೇಶ ಕೊಂಕಣ ಪ್ರದೇಶವೆಂದು ಕರೆಯಲ್ಪಟ್ಟಿತು. ಹಾಗಾಗಿ ಕರ್ನಾಟಕದ ಕರಾವಳಿ ಪ್ರದೇಶವು ಕನ್ನಡಿಗರದ್ದೂ, ತುಳುವರದ್ದೂ, ಕೊಂಕಣಿಗರದ್ದೂ ಮತ್ತು ಬ್ಯಾರಿಗಳದ್ದೂ ಆಗಿದೆ. ಇಲ್ಲಿ ಸರ್ವ ಧರ್ಮ ಸಮನ್ವಯವು ಶತಮಾನಗಳಿಂದಲೂ ಬೇರೂರಿತ್ತು, ಈಗಲೂ ಇದೆ.

ಮೊತ್ತ ಮೊದಲು ಸ್ಥಾಪನೆಯಾದ ಚರ್ಚ್‍ನ ನಂತರ ಕರಾವಳಿಯಲ್ಲಿ ಹಲವು ಚರ್ಚುಗಳು ಸ್ಥಾಪನೆಯಾಗಿದ್ದವು. ಟಿಪ್ಪು ಸುಲ್ತಾನನ ಕರಾಳತನಕ್ಕೆ ಇಲ್ಲಿನ 27 ಚರ್ಚುಗಳು ಕೆಂಗಣ್ಣಿಗೆ ಗುರಿಯಾಗಿ, ಹೊಸಪೇಟೆಯ ಒಂದು ಚರ್ಚು ಸುರಕ್ಷಿತವಾಗಿ ಉಳಿದು ಉಳಿದೆಲ್ಲಾ ಚರ್ಚುಗಳನ್ನು ಧರಾಶಾಹಿ ಮಾಡಲಾಗಿತ್ತು. ಮೂಡಬಿದರೆಯ ಚೌಟ ಅರಸರಿಗೆ ತನ್ನ ಆಳ್ವಿಯಲ್ಲಿದ್ದ ಕ್ರೈಸ್ತರ ಮೇಲೆ ತುಂಬಾ ಪ್ರೀತಿ ಆದರಗಳಿದ್ದವು. ಯಾಕೆಂದರೆ ಕ್ರೈಸ್ತರು ಪ್ರಾಮಾಣಿಕರೂ, ನಿಷ್ಠಾವಂತರೂ, ಕುಶಲ ಕರ್ಮಿಗಳೂ, ಅತ್ಯುತ್ತಮ ಕೃಷಿಕರೂ, ಮೈ ಬಗ್ಗಿ ದುಡಿಯುವವರೂ ಆಗಿದ್ದರು. ಅವರಿಂದ ಒಳ್ಳೆಯ ಬೆಳೆ, ಉತ್ಪನ್ನಗಳು, ಕಂದಾಯ ದೊರಕುತ್ತಿತ್ತು. ಆದುದರಿಂದ ಟಿಪ್ಪುವಿನ ಮನವೊಲಿಸಿ ಆತ ತನ್ನ ಪ್ರಾಂತ್ಯದ ಕ್ರೈಸ್ತರನ್ನು ಬಚಾವು ಮಾಡಲು ಮತ್ತವರ ಚರ್ಚನ್ನು ಉಳಿಸಲು ಶ್ರಮಪಟ್ಟಿದ್ದರಿಂದ ಹೊಸಪೇಟೆಯ ಚರ್ಚಿಗೆ ಯಾವುದೇ ಹಾನಿಯಾಗಿರಲಿಲ್ಲ. ಮಂಗಳೂರಿನ ಮಿಲಾಗ್ರಿಸ್ ಚರ್ಚನ್ನು ಕೆಡವಿ ಅದರ ಕಲ್ಲು, ಮರಮಟ್ಟುಗಳನ್ನು ಬಳಸಿ ಬಾವುಟಗುಡ್ಡೆಯಲ್ಲಿನ ಮಸೀದಿಯನ್ನು ಸ್ಥಾಪಿಸಲಾಗಿತ್ತೆಂದು ಹೇಳಲಾಗುತ್ತದೆ. ಕಿನ್ನಿಗೋಳಿ ಬಳಿಯ ಕಿರೆಂ ಚರ್ಚ್‍ನ ಮಾಡು, ಹಂಚುಗಳನ್ನು ತೆಗೆದ ನಂತರ ಅಲ್ಲಿನ ಬಂಟ ಮನೆತನಗಳವರು ತಮ್ಮ ಧೈರ್ಯ, ಶೌರ್ಯ, ಚಾಕಚಕ್ಯತೆಯಿಂದ ಕಟ್ಟಡ ಉರುಳಿಸದಂತೆ ತಡೆದಿದ್ದರು. ಅದಕ್ಕೆ ಕೃತಜ್ಞತೆಯಾಗಿ ಪರಂಪರಾಗತವಾಗಿ ಆ ಮನೆತನಗಳವರನ್ನು ಕಿರೆಂ ಚರ್ಚಿನ ವಾರ್ಷಿಕ ಹಬ್ಬದಂದು ಗೌರವಿಸಲಾಗುತ್ತದೆ.

ಹಾಗಾದರೆ ಉಳಿದ ಅಷ್ಟೊಂದು ಚರ್ಚುಗಳು ಯಾವುವು? ಅದನ್ನು ಮುಂದಿನ ಸಂಚಿಕೆಯಲ್ಲಿ ತಿಳಿಸಲಾಗುವುದು.

ಭಾಗ 2: ಟಿಪ್ಪುವಿನಿಂದ ಧರೆಗುರುಳಿದ ಆ 25 ಚರ್ಚುಗಳು ಮತ್ತು ಕರಾಳ ಹತ್ಯಾಕಾಂಡ

ಕೃಪೆ/ಆಧಾರ: ಈ ಲೇಖನಕ್ಕಾಗಿ ಹಲವರು ನನಗೆ ಮಾಹಿತಿ ನೀಡಿದ್ದಾರೆ. ಮಂಗಳೂರು ರೊಸಾರಿಯೊ ಚರ್ಚಿನ ಧರ್ಮಗುರು ರೆ. ಫಾ. ಜೆ.ಬಿ. ಕ್ರಾಸ್ತಾ, ನೀರುಮಾರ್ಗ ಕೆಲರಾಯ್ ಚರ್ಚಿನ ಧರ್ಮಗುರು ರೆ. ಫಾ. ಜೋಕಿಮ್ ಫೆರ್ನಾಂಡಿಸ್, ಮಿತ್ರ ಆನ್ಸಿ ಪಾಲಡ್ಕ, ಮುಂಬಯಿ ಅವರಿಂದ ಮತ್ತು ಮಂಗಳೂರು ಧರ್ಮಪ್ರಾಂತ್ಯಕ್ಕೆ 125 ವರ್ಷ ತುಂಬಿದ ಸಂದರ್ಭದಲ್ಲಿ ಹೊರ ತಂದ ಸ್ಮರಣ ಸಂಚಿಕೆ ‘ಕುರ್ಪೆಚಿಂ ಪಾವ್ಲಾಂ’ ಪುಸ್ತಕದಿಂದ, www.Budkulo.com ವೆಬ್‍ಸೈಟ್‍ನಿಂದ ಮಾಹಿತಿಯನ್ನು ಪಡೆಯಲಾಗಿದೆ.

Visit & Like our Page – www.facebook.com/janavahini

Like us on facebook

3 thoughts on “ಇಲ್ಲಿದೆ ನೋಡಿ, ಕ್ರೂರಿ ಟಿಪ್ಪು ಸುಲ್ತಾನ್ ಒಡೆದು ಹಾಕಿದ ಚರ್ಚುಗಳ ಪಟ್ಟಿ”

    1. Well done,good info,carry on. I oppose tippu jayanhi.Every christian should protest. Those who want celebrate let them celebrate their own houses with their own money.

Leave a Reply

Your email address will not be published. Required fields are marked *

*

code

LATEST NEWS