ಗಣತಂತ್ರ ದಿನ: ಪ್ರಜಾಪ್ರಭುತ್ವವು ಪ್ರಜೆಗಳ ಪರವಾಗಿರಲು ಪ್ರಜೆಗಳು ಜವಾಬ್ದಾರಿ ನಿಭಾಯಿಸಬೇಕು

Published on: Friday, January 26th, 2018,9:21 pm

KV Naveen Kiranಜನವರಿ 26 – ಭಾರತದ ಸಂವಿಧಾನ ಜಾರಿಗೆ ಬಂದ ದಿನ. ಒಂದರ್ಥದಲ್ಲಿ ಇದು ನಮಗೆಲ್ಲರಿಗೂ ನಿಜವಾದ ಸ್ವಾತಂತ್ರ್ಯ ಸಿಕ್ಕಿದ ದಿನ. ಯಾಕಂದ್ರೆ 1947ರಲ್ಲಿ ಸ್ವಾತಂತ್ರ್ಯ ಸಿಕ್ಕರೂ ಸಹ, ಪ್ರಜಾಪ್ರಭುತ್ವ ರಾಷ್ತ್ರವೊಂದರ ಪ್ರಜೆಗೆ ಸಿಗಬೇಕಾದ ಸಮಾನತೆ ಹಾಗೂ ಸ್ವತಂತ್ರವಾಗಿ ಬದುಕುವ ಹಕ್ಕುಗಳು ಅಧಿಕೃತವಾಗಿ ದೊರತದ್ದು ಮಾತ್ರ 1950 ಜನವರಿ 26ರಂದು. ಯಾವಾಗ ನಮ್ಮ ದೇಶ ತನ್ನದೇ ಆದ ಸಂವಿಧಾನವನ್ನು ರಚಿಸಿಕೊಂಡು, ಅಧಿಕೃತವಾಧ ಪ್ರಜಾತಂತ್ರ ವ್ಯವಸ್ಥೆಯನ್ನು ಜಾರಿಗೆ ತಂದಿತೋ ಅಂದು, ಭಾರತೀಯ ಪ್ರಜೆ ನಿಜವಾದ ಸ್ವಾತಂತ್ರ್ಯ ಪಡೆದದ್ದು. ನಾವು ಪ್ರಜಾಪ್ರಭುತ್ವ ರಾಷ್ಟ್ರದ ಪ್ರಜೆಗಳಾಗಿದ್ದು, ಆಗಲೇ ಪ್ರತಿಯೊಬ್ಬ ಶ್ರೀಸಾಮಾನ್ಯನಿಗೂ ಸಮಾನತೆ ಸಿಕ್ಕಿದ್ದು.

ಇಂದು ಸಮಾಜದ ಎಲ್ಲ ಕ್ಷೇತ್ರಗಳಲ್ಲಿಯೂ ನಾವು ಸಮಾನತೆಯಿಂದ, ಗೌರವಗಳಿಂದ, ಸ್ವತಂತ್ರವಾಗಿ ಬದುಕುವ ಶಕ್ತಿಯನ್ನು ಪಡೆದಿದ್ದೇವೆ ಎಂದಾದರೆ, ಅದಕ್ಕೆ ನಮ್ಮ ಸಂವಿಧಾನವೇ ಕಾರಣ. ಇಂದು ನಾವು ಆಚರಿಸುತ್ತಿರುವ ಈ ಗಣರಾಜ್ಯೋತ್ಸವ ಅಥವಾ ಗಣತಂತ್ರ ದಿವಸ ಸಂವಿಧಾನದ ಲೋಕಾರ್ಪಿತವಾದ ದಿನ. ಸಂವಿಧಾನ ಅನ್ನುವ ಆಧುನಿಕ ಧರ್ಮಗ್ರಂಥದ ಮುಂದೆ ಯಾವ ಧರ್ಮ ದೊಡ್ಡದೂ ಅಲ್ಲ ಯಾವ ಧರ್ಮ ಚಿಕ್ಕದೂ ಅಲ್ಲ. ದುಡಿಯುವವನೂ ಈ ದೇಶದ ಪ್ರಜೆಯೇ. ಹಾಗೆ ದುಡ್ಡಿರುವ ಧನಿಯೂ ಈ ದೇಶದ ಪ್ರಜೆಯೇ. ಇಲ್ಲಿ ಲಿಂಗ ಭೇದವಿಲ್ಲ, ಜಾತಿ ಭೇದವಿಲ್ಲ, ಎಲ್ಲ ಭೇದಗಳನ್ನು ಬೇರು ಸಮೇತ ಕಿತ್ತು ಹಾಕಿ ಬದುಕಲಿ ಅನ್ನೋದೇ ನಮ್ಮ ಸಂವಿಧಾನದ ಆಶಯ.

Republic Day article 3

ಅಂತಹ ಮಹಾನ್ ಸಂವಿಧಾನವನ್ನು ನಾವು ಗೌರವಿಸಿ, ಅದರಲ್ಲಿರುವ ಹಕ್ಕು ಹಾಗೂ ಕರ್ತವ್ಯಗಳನ್ನು ಸರಿಯಾಗಿ ಪಾಲಿಸಿದ್ದೇ ಆದಲ್ಲಿ ಅದುವೇ ದೊಡ್ಡ ದೇಶಪ್ರೇಮ. ಒಂದು ಸಮೃದ್ಧ ಹಾಗೂ ಸಧೃಡ ರಾಷ್ತ್ರವನ್ನು ನಿರ್ಮಿಸುವ ಕನಸು ಕಂಡಿದ್ದೇ ಆದಲ್ಲಿ ನಾವು ಮಾಡಬೇಕಾದ ಮೊದಲ ಕರ್ತವ್ಯ ನಮ್ಮ ರಾಷ್ಟ್ರಗ್ರಂಥ ಸಂವಿಧಾನವನ್ನು ಗೌರವಿಸಿ, ಅದರಂತೆ ನಡೆಯುವುದು. ದೇಶವನ್ನು ಬದಲಿಸುವ ಶಕ್ತಿ ಪ್ರಜಾಪ್ರಭುತ್ವ ರಾಷ್ಟ್ರದ ಪ್ರಜೆಗಳಿಗೆ ಇರುತ್ತದೆ. ಬದಲಾವಣೆ ಅನ್ನೋದು ನನ್ನಿಂದಲೇ ಶುರುವಾಗಬೇಕು. ನನ್ನ ಕುಟುಂಬ, ನನ್ನ ಊರು, ನನ್ನ ಕ್ಷೇತ್ರದಲ್ಲಿ ನಾವು ಬದಲಾವಣೆ ತಂದಿದ್ದೇ ಆದಲ್ಲಿ, ದೇಶದಲ್ಲಿ ಬಹುದೊಡ್ಡ ಬದಲಾವಣೆ ತರಬಹುದು. ಅದಕ್ಕಾಗಿಯೇ ಸಂವಿಧಾನ ನಮಗೆ ಎಲ್ಲ ಹಕ್ಕು, ಕರ್ತವ್ಯಗಳ ಜೊತೆಗೆ ‘ಮತದಾನ’ ಅನ್ನುವ ಅತ್ಯಂತ ಶಕ್ತಿಶಾಲಿಯಾಗಿರೋ ಹಕ್ಕನ್ನು ನೀಡಿದೆ. ಇದು ಪ್ರಜಾಪ್ರಭುತ್ವವು ಪ್ರಜೆಗಳಿಗೆ ನೀಡುವ ಅತ್ಯಂತ ಪ್ರಮುಖವಾದ ಹಕ್ಕು.

Republic Day article 2

ಇವತ್ತು ಪ್ರಜೆಗಳಿಗೆ, ಪ್ರಜೆಗಳ ನಿರ್ಣಯಕ್ಕೆ ಏನಾದರು ಬೆಲೆಯಿದೆ ಎಂದಾದರೆ, ಅದು ಸಾಧ್ಯವಾದದ್ದು ಸಂವಿಧಾನ ನಮಗೆ ನೀಡಿರುವ ಮತದಾನ ಅನ್ನೋ ಅಸ್ತ್ರದಿಂದ ಮಾತ್ರ. ಆದ್ದರಿಂದಲೇ ಇಲ್ಲಿ ಪ್ರಜೆಗಳೇ ಪ್ರಭುಗಳು. ‘For the people, by the people, of the people’ ಅಂತ ಹೇಳೊದು. ಇದು ಪ್ರಜೆಗಳ, ಪ್ರಜೆಗಳಿಗಾಗಿ, ಪ್ರಜೆಗಳೇ ನಡೆಸುವ ಸರಕಾರ. ಅಂದ್ರೆ ಪ್ರಜೆಗಳಾದ ನಾವುಗಳು ಆಯ್ಕೆ ಮಾಡಿ ಕಳಿಸುವ ನಮ್ಮ ಜನಪ್ರತಿನಿಧಿ ಆಡಳಿತವನ್ನು ನಡೆಸುವ ಸರಕಾರ. ಹೀಗಾಗಿ ಜನಪ್ರತಿನಿಧಿಯನ್ನು ಆಯ್ಕೆ ಮಾಡುವಾಗ ಪ್ರತಿಯೊಬ್ಬರೂ ಹತ್ತು ಹಲವು ಬಾರಿ ಯೋಚಿಸಬೇಕು. ಸಮಾಜಕ್ಕೆ ಮತ್ತು ಜನ ಸಾಮಾನ್ಯನಿಗೆ ಒಳಿತು ಮಾಡುವ ನಾಯಕನನ್ನು ನಾವು ಆರಿಸಬೇಕು.

Republic Day article 1

ಆದರೆ ಇತ್ತೀಚೆಗೆ ಮತ ಹಾಗೂ ಮತದಾರ ಎರಡಕ್ಕೂ ಬೆಲೆಯಿಲ್ಲದಂತಾಗಿದೆ. ನಮಗೆ ನಮ್ಮ ಮತದಾನದ ಮಹತ್ವ ಗೊತ್ತಿಲ್ಲದೆ ಇರುವುದು, ಗೊತ್ತಿದ್ದೂ ನಿರ್ಲಕ್ಷ್ಯ ಧೋರಣೆ ತೋರುತ್ತಿರುವುದು. ಹೀಗಾಗಿಯೇ ನಮ್ಮ ಸೇವಕರಾಗಬೇಕಿದ್ದ ನಾವು ಆಯ್ಕೆ ಮಾಡಿ ಕಳುಹಿಸಿದ ನಮ್ಮ ಜನಪ್ರತಿನಿಧಿಗಳು ಅಧಿಕಾರದ ಅಮಲಿನಲ್ಲಿ ಆಳುವವರಾಗಿ ದರ್ಪದಿಂದ ಮೆರೆಯುತ್ತಿರುವುದು.

ಇವತ್ತು ಭ್ರಷ್ಟಾಚಾರ, ಆಳುವವರಿಂದಲೇ ನಡೆಯುತ್ತಿರುವ ಲೂಟಿಗೆ ನಾವುಗಳು ನಮ್ಮ ಮತದಾನದ ಬಗ್ಗೆ ತೋರುತ್ತಿರುವ ನಿರಾಸಕ್ತಿ ಕಾರಣ. ಈಗಲೂ ನಾವು ಬದಲಾಗದೇ ಇದ್ದಲ್ಲಿ ನಮ್ಮ ಸಂವಿಧಾನ ನೀಡಿರೋ ಪ್ರಜಾಪ್ರಭುತ್ವದ ಪ್ರಾಣ ಹಾರಿ ಹೋಗಿ ಮತ್ತೆ ಆಳುವ ವರ್ಗದ ರಾಜಪ್ರಭುತ್ವ ಸ್ಥಾಪಿತವಾಗುತ್ತದೆ. ಪ್ರತಿಯೊಬ್ಬರೂ ಎಚ್ಚೆತ್ತು ಸಂವಿಧಾನದ ಆಶಯದಂತೆ ಹಕ್ಕು ಮತ್ತು ಕರ್ತವ್ಯಗಳನ್ನು ಸರಿಯಾಗಿ ಪಾಲಿಸಿದ್ದೇ ಆದಲ್ಲಿ ಖಂಡಿತ ಹೊಸದೊಂದು ಬದಲಾವಣೆ ತರಲು ಸಾಧ್ಯ. ಬನ್ನಿ ಬದಲಾಯಿಸೋಣ, ಇದು ಬದಲಾವಣೆಯ ಸಮಯ, ಬದಲಾಯಿಸುವ ಸಮಯ.

ನಾಡಿನ ಎಲ್ಲ ಜನತೆಗೂ ಗಣರಾಜ್ಯೋತ್ಸವದ ಶುಭಾಷಯಗಳು.

ಬರಹ: ಕೆ. ವಿ. ನವೀನ್ ಕಿರಣ್
(ಲೇಖಕರು ಚಿಕ್ಕಬಳ್ಳಾಪುರದ ಕೆ.ವಿ ಹಾಗೂ ಪಂಚಗಿರಿ ದತ್ತಿ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷರು)

ಇದೇ ಲೇಖಕರ ಬರಹಗಳು:
ಎಳ್ಳು ಬೆಲ್ಲ ತಿಂದು ಎಲ್ಲರೂ ಒಳ್ಳೊಳ್ಳೆ ಮಾತಾಡಿ

Visit & Like our Page – www.facebook.com/janavahini

Like us on facebook

1 thought on “ಗಣತಂತ್ರ ದಿನ: ಪ್ರಜಾಪ್ರಭುತ್ವವು ಪ್ರಜೆಗಳ ಪರವಾಗಿರಲು ಪ್ರಜೆಗಳು ಜವಾಬ್ದಾರಿ ನಿಭಾಯಿಸಬೇಕು”

Leave a Reply

Your email address will not be published. Required fields are marked *

*

code

LATEST NEWS