ಸಿದ್ಧರಾಮಯ್ಯ ಸರಕಾರಕ್ಕೆ ಜನರ ಆಶೀರ್ವಾದವಿದೆ: ಪ್ರಮೋದ್ ಮಧ್ವರಾಜ್

Published on: Sunday, April 22nd, 2018,10:57 pm

ಸಂದರ್ಶನ: ಡೊನಾಲ್ಡ್ ಪಿರೇರಾ ಬೆಳ್ತಂಗಡಿ

ರಾಜ್ಯದ ಅತ್ಯಂತ ಚಾಣಾಕ್ಷ ರಾಜಕಾರಣಿ ಯಾರು ಎಂದು ಕೇಳಿದರೆ ಕೊಡಬಹುದಾದ ಉತ್ತರದಲ್ಲಿ ಪ್ರಮೋದ್ ಮಧ್ವರಾಜ್ ಅವರ ಹೆಸರು ಖಂಡಿತಾ ಸೇರಿಸಬಹುದು. 5 ವರ್ಷಗಳ ಹಿಂದೆ ಚುನಾವಣೆಯಲ್ಲಿ ಗೆದ್ದು ಚೊಚ್ಚಲ ಬಾರಿಗೆ ಶಾಸಕರಾಗಿದ್ದ ಪ್ರಮೋದ್ ಮಧ್ವರಾಜ್ ರಾಜಕಾರಣದಲ್ಲಿ ಬೆಳೆದ ವೇಗ ನೋಡಿದರೆ ಅವರ ತಾಕತ್ತು ಗೊತ್ತಾಗುತ್ತದೆ. ರಾಜಕಾರಣದ ಹಿನ್ನೆಲೆಯಿರುವ ಪ್ರತಿಷ್ಠಿತ ಕುಟುಂಬದಿಂದ ಬಂದ ಅವರಿಗೆ ರಾಜಕಾರಣದ ಕಲೆ ಕರಗತವಾಗಿದೆ. ಅವರ ನಡೆ ಮತ್ತು ಮಾತು ಕೂಡ ಅಷ್ಟೇ ನಾಜೂಕು. ಸಂದರ್ಶನಗಳನ್ನು ನಿರ್ಭಿಡೆಯಿಂದ ಎದುರಿಸುವ ಪ್ರಮೋದ್, ತನ್ನನ್ನು ಎಡವಿ ಹಾಕಲು ಬಯಸುವ ಪತ್ರಕರ್ತರನ್ನೇ ಎಡವಿ ಬೀಳಿಸುತ್ತಾರೆ. ಇಂತಹ ಚತುರ ಯುವ ರಾಜಕಾರಣಿ ಜನರಿಗೂ ಅಚ್ಚುಮೆಚ್ಚು. ಅವರನ್ನು ಸಂದರ್ಶಿಸಲು ತೆರಳಿದಾಗ ಅವರು ಜ್ವರದಿಂದ ಬಳಲುತ್ತಿದ್ದರು. ಹಲವಾರು ಜನರು ಅವರನ್ನು ಬೆಳಿಗ್ಗೆಯಿಂದ ಕಾಯುತ್ತಿದ್ದರು. ಅನಾರೋಗ್ಯವಿದ್ದರೂ ಸಾವರಿಸಿಕೊಂಡು ಎಲ್ಲರನ್ನು ಮಾತನಾಡಿಸಿ, ಅವರ ಕಷ್ಟ ಸುಖ ಆಲಿಸಿ ಸಂತೈಸಿದರು. ಶ್ರೀಮಂತ ಮನೆತನದವರಾದರೂ ಬಡವ ಬಲ್ಲಿದರೊಂದಿಗೆ ಬೆರೆಯುವ ಅವರ ನಡವಳಿಕೆ ತುಂಬಾ ಸಹ್ಯ, ಶ್ಲಾಘನೀಯ. ಅವರೊಂದಿಗೆ ನಡೆಸಿದ ಫಟಾಫಟ್ ಸಂದರ್ಶನ ಇಲ್ಲಿದೆ.

-ಸಂಪಾದಕ

Pramod Madhwaraj_Janavahini Interview 3

ಡೊನಾಲ್ಡ್ ಪಿರೇರಾ: ಸರ್, ಚುನಾವಣೆ ಮತ್ತೆ ಬಂದಿದೆ. ನೀವು ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸುತ್ತಿದ್ದೀರಿ. ಗೆಲ್ಲುವ ಭರವಸೆ ಎಷ್ಟಿದೆ?

ಪ್ರಮೋದ್ ಮಧ್ವರಾಜ್: ದೇವರ ದಯೆಯಿಂದ ಮತ್ತು ಜನರ ಆಶೀರ್ವಾದದಿಂದ ರಾಜ್ಯದಲ್ಲೇ ಅತೀ ಹೆಚ್ಚು ಅಂತರದಿಂದ ಗೆಲ್ಲುವ ವಿಶ್ವಾಸ ನನಗಿದೆ.

ಡೊನಾಲ್ಡ್: ಕಳೆದ 5 ವರ್ಷಗಳಲ್ಲಿ ರಾಜ್ಯದಾದ್ಯಂತ ಮತ್ತು ನಿಮ್ಮ ಕ್ಷೇತ್ರದಲ್ಲಿಯೂ ಸಾಕಷ್ಟು ಅಭಿವೃದ್ಧಿ ಕಾಮಗಾರಿ ನಡೆದಿದೆ. ಇದರ ಆಧಾರದಲ್ಲಿಯೇ ಗೆಲ್ಲಲಾಗುತ್ತದೆಯೇ?

ಪ್ರಮೋದ್: ನನ್ನದು ಬರೀ ಅಭಿವೃದ್ಧಿ ಮಾತ್ರವಲ್ಲ. ನಾನು ಜನಸಂಪರ್ಕ ಇಟ್ಟುಕೊಂಡಿದ್ದೇನೆ. ಜನರ ಸಮಸ್ಯೆಗಳಿಗೆ ಸ್ಪಂದಿಸುತ್ತೇನೆ. ಜನರು ಯಾವಾಗಲೂ ನನ್ನನ್ನು ಭೇಟಿಯಾಗಬಹುದು. ಕಟ್ಟ ಕಡೆಯ ವ್ಯಕ್ತಿ ಕೂಡ ನನ್ನನ್ನು ಭೇಟಿಯಾಗುವ ಅವಕಾಶವಿದೆ.

ಡೊನಾಲ್ಡ್: ನೀವು ಬಿಜೆಪಿಗೆ ಹೋಗುತ್ತೀರೆಂಬ ಊಹಾಪೋಹವಿತ್ತಲ್ಲ?

ಪ್ರಮೋದ್: ಅದು ನನಗೆ ಗೊತ್ತಿಲ್ಲ. ನೀವೇ ತನಿಖೆ ಮಾಡಬೇಕು. ನಾನಂತೂ ಯಾರಲ್ಲಿಯೂ ಬಾಯಿ ಬಿಟ್ಟು ಹೇಳಿಲ್ಲ.

ಡೊನಾಲ್ಡ್: ಆ ಯೋಚನೆ ನಿಮ್ಮಲ್ಲಿರಲೇ ಇಲ್ಲ?

ಪ್ರಮೋದ್: ಖಂಡಿತ. ಈಗಾಗಲೇ ನೂರು ಸಲ ಸ್ಪಷ್ಟಪಡಿಸಿದ್ದೇನೆ.

ಡೊನಾಲ್ಡ್: ಕರಾವಳಿಯಲ್ಲಿ ಬಿಜೆಪಿಯವರು ಕೇವಲ ಧರ್ಮ ಕೇಂದ್ರಿತ ರಾಜಕಾರಣ ಮಾಡುತ್ತಿದ್ದಾರಲ್ಲಾ..?

ಪ್ರಮೋದ್: ನೋಡಿ, ನಮ್ಮ ಕರಾವಳಿಯ ಜನರು ಬಹಳ ಬುದ್ಧಿವಂತರು. ಯಾರು ಯಾಕೆ ಹೇಗೆ ಮಾಡುತ್ತಾರೆ, ಯಾಕಾಗಿ ಮಾಡುತ್ತಾರೆ ಎಂಬುದನ್ನೆಲ್ಲಾ ತಿಳಿದುಕೊಳ್ಳುವಷ್ಟು ಶಕ್ತಿ ನಮ್ಮ ಕರಾವಳಿಯ ಜನರಿಗಿದೆ.

ಡೊನಾಲ್ಡ್: ಬಿಜೆಪಿಯವರು ಸುಳ್ಳು ಪ್ರಚಾರವನ್ನೇ ನೆಚ್ಚಿಕೊಳ್ಳುತ್ತಾರೆ ಎನ್ನಲಾಗುತ್ತಿದೆ…

ಪ್ರಮೋದ್: ನೋಡಿ, ಸುಳ್ಳನ್ನು ಬಹಳ ಸಮಯ ಜೀವಂತವಾಗಿಡಲಿಕ್ಕೆ ಸಾಧ್ಯವಿಲ್ಲ. ಸತ್ಯವನ್ನು ಮಾತ್ರ ಜೀವಂತವಿಡಲು ಸಾಧ್ಯ, ಸುಳ್ಳನ್ನು ಅಲ್ಲ.

ಡೊನಾಲ್ಡ್: ಬಿಜೆಪಿಯಿಂದ ಸ್ವಾಮೀಜಿಗಳು ಚುನಾವಣೆಗೆ ನಿಲ್ಲುವ ಸುದ್ದಿಯಿದೆ. ಬಿಜೆಪಿಯವರೇನು ಹಿಂದೂ ಧರ್ಮವನ್ನು ಗುತ್ತಿಗೆಗೆ ಪಡೆದುಕೊಂಡಿದ್ದಾರಾ?

ಪ್ರಮೋದ್: ಶಿರೂರು ಸ್ವಾಮೀಜಿಯವರು ಬಿಜೆಪಿಯ ವಿರುದ್ಧ ನಿಲ್ಲುತ್ತಿದ್ದಾರಲ್ಲಾ..!

ಡೊನಾಲ್ಡ್: ಕಾಂಗ್ರೆಸ್‍ನಿಂದ ಸ್ವಾಮೀಜಿಗಳು ಚುನಾವಣೆಗೆ ನಿಲ್ಲಬಹುದಲ್ಲಾ?

ಪ್ರಮೋದ್: ಯಾರು ಜನರ ಮಧ್ಯದಲ್ಲಿರುತ್ತಾರೆ, ಯಾರು ಜನರ ಸೇವೆ ಮಾಡುತ್ತಾರೆ ಅಂಥವರನ್ನು ಕಾಂಗ್ರೆಸ್ ಪಕ್ಷ ಗುರುತಿಸಿ ಟಿಕೆಟ್ ನೀಡುತ್ತದೆ. ಜನರ ಜೊತೆಗೆ ಧಾರ್ಮಿಕರು ಇದ್ದರೂ ಅವರಿಗೆ ಟಿಕೆಟ್ ಕೊಡುತ್ತಾರೆ. ಅವರು ಜನರ ಜೊತೆಗಿರಬೇಕು. ಸುಮ್ಮನೆ ದಿಢೀರಾಗಿ ಮಠದಿಂದ ಹೊರಗೆ ಬಂದವರಿಗೆ ಟಿಕೆಟ್ ಕೊಡುವ ಕ್ರಮ ಕಾಂಗ್ರೆಸ್ ಪಕ್ಷದಲ್ಲಿಲ್ಲ. ಜನಸೇವೆಯೇ ಮುಖ್ಯ ಅರ್ಹತೆ, ಆದ್ಯತೆ.

ಡೊನಾಲ್ಡ್: ಬಿಜೆಪಿಯವರು ಕಾಂಗ್ರೆಸ್ಸಿನ ಶ್ರೀಮಂತ ರಾಜಕಾರಣಿಗಳ ಮೇಲೆ ಐಟಿ ದಾಳಿ ನಡೆಸಿ ಬೆದರಿಸುತ್ತಿದ್ದಾರೆಯೇ..?

ಪ್ರಮೋದ್: ಇನ್‍ಕಂ ಟ್ಯಾಕ್ಸ್ ದಾಳಿ ಮುಂತಾದವೆಲ್ಲಾ ಸಾಮಾನ್ಯ. ಅದಕ್ಕೆ ವಿಶೇಷ ಅರ್ಥ ಕಲ್ಪಿಸಬೇಕಾಗಿಲ್ಲ. ಒಂದೆರಡು ವರ್ಷದ ಸ್ಟಡಿ ಮಾಡಿಯೇ ರೈಡ್ ಮಾಡುತ್ತಾರೆ. ನಾನು ಅದಕ್ಕೆ ಹೆಚ್ಚು ತಲೆ ಕೆಡಿಸುವುದಿಲ್ಲ.

ಡೊನಾಲ್ಡ್: ನಿಮಗೆ ಅದರ ಬಗ್ಗೆ ಚಿಂತೆಯಿಲ್ಲ?

ಪ್ರಮೋದ್: ನನಗೆ ಚಿಂತೆಯಿಲ್ಲ. ನಾನು ಪ್ರಾಮಾಣಿಕವಾಗಿದ್ದೇನೆ.

ಡೊನಾಲ್ಡ್: ಬಿಜೆಪಿಯ ಕೇಂದ್ರ ನಾಯಕರೆಲ್ಲಾ ಕರಾವಳಿಗೆ ಬಂದು ರ್ಯಾಲಿ ನಡೆಸುತ್ತಿದ್ದಾರೆ…

ಪ್ರಮೋದ್: ಅದರಿಂದ ಏನೂ ಆಗುವುದಿಲ್ಲ. ಅಮಿತ್ ಶಾ ಬಂದು ಹೋದ್ರಲ್ಲಾ, ಏನಾಯಿತು? ಏನೂ ಆಗಿಲ್ಲ.

ಡೊನಾಲ್ಡ್: ರಾಹುಲ್ ಗಾಂಧಿ ಉಡುಪಿಗೆ ಬರುತ್ತಾರಾ?

ಪ್ರಮೋದ್: ರಾಹುಲ್ ಗಾಂಧಿಯವರು ರೋಡ್ ಶೋ ನಡೆಸಿದ್ದಾರೆ. ಒಬ್ಬ ವ್ಯಕ್ತಿಯನ್ನು ನೋಡಿದ ಕೂಡಲೇ ಆತ ಪ್ರಾಮಾಣಿಕನು ಹೌದೇ ಅಲ್ಲವೇ ಎಂಬುದನ್ನು ತಿಳಿದುಕೊಳ್ಳುವಷ್ಟು ಬುದ್ಧಿವಂತಿಕೆ ಜನರಿಗಿದೆ. ಜನರಿಗೆ ಆ ಸಾಮಥ್ರ್ಯವಿದೆ. ನಮಗಿಂತ ಜನರು ಬುದ್ಧಿವಂತರಿದ್ದಾರೆ.

ಡೊನಾಲ್ಡ್: ರಾಹುಲ್ ಗಾಂಧಿಯವರ ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷ ಪುನಶ್ಚೇತನ ಪಡೆದುಕೊಳ್ಳುತ್ತಿದೆಯೇ? ಪಕ್ಷ ಬಹಳಷ್ಟು ಹಿನ್ನಡೆ ಕಂಡಿದೆಯಲ್ಲವೆ..?

ಪ್ರಮೋದ್: ಕಾಂಗ್ರೆಸ್ ಪಕ್ಷ ತಪ್ಪು ಮಾಡಿದಾಗ ಶಿಕ್ಷಿಸುವ ಕ್ರಮವನ್ನು ಜನರು ಇಟ್ಟುಕೊಂಡಿದ್ದಾರೆ. ಯಾವಾಗ ವಿರೋಧ ಪಕ್ಷಗಳನ್ನು ಜನರು ಅಧಿಕಾರಕ್ಕೆ ತಂದಿದ್ದಾರೋ ಆವಾಗ ಅವರು ಸರಿಯಾಗಿ ಕೆಲಸವನ್ನು ಮಾಡಿಲ್ಲದಿದ್ದರೆ ಜನರು ಅವರನ್ನು ಅಧಿಕಾರದಿಂದ ಕೆಳಗಿಳಿಸಿದ್ದಾರೆ. ಇದು ಭಾರತದ ಇತಿಹಾಸ.

ಡೊನಾಲ್ಡ್: ಜನರಿಗೆ ಬಿಜೆಪಿಯ ವೈಫಲ್ಯ ಗೊತ್ತಾಗಿದೆಯೆ?

ಪ್ರಮೋದ್: ಯಾರು ಕೆಲಸ ಮಾಡುತ್ತಾರೆ ಯಾರು ಮಾಡುವುದಿಲ್ಲ ಎಂಬುದನ್ನು ತಿಳಿದುಕೊಳ್ಳುವಷ್ಟು ಶಕ್ತಿ ಜನರಿಗಿದೆ.

ಡೊನಾಲ್ಡ್: ಶಾಸಕರಾಗಿ 5 ವರ್ಷ ಪೂರೈಸಿದ್ದೀರಿ. ಮುಂದೆ ಕೈಗೊಳ್ಳಬೇಕಾದ ವಿಶೇಷವಾದ ಯೋಜನೆ ಏನಾದರೂ ಇದೆಯೆ?

ಪ್ರಮೋದ್: ನನ್ನ ಇಡೀ ಕ್ಷೇತ್ರಕ್ಕೆ 365 ದಿನವೂ 24 ಗಂಟೆಗಳ ಕಾಲ ನೀರು ಪೂರೈಸುವಂತಾಗಲು ಯೋಜನೆ ಇದೆ. ಅದಕ್ಕೆ ಬೇಕಾದ ಪೂರ್ವ ಸಿದ್ಧತೆಗಳನ್ನು ಕೈಗೊಳ್ಳಲಾಗಿದೆ. ಅದನ್ನು ಅನುಷ್ಠಾನಕ್ಕೆ ತಂದು ಜನರಿಗೆ ನಿರಂತರ ಕುಡಿಯುವ ನೀರು ದೊರಕಿಸಲು ವ್ಯವಸ್ಥೆ ಮಾಡಬೇಕಿದೆ. ಉಡುಪಿಗೆ ಸರಕಾರಿ ಮೆಡಿಕಲ್ ಕಾಲೇಜು ಮತ್ತು ಹೈಟೆಕ್ ಆಸ್ಪತ್ರೆ ತರಿಸಬೇಕಿದೆ. ಜನರಿಗೆ 94ಸಿ, 94ಸಿಸಿ ಹಕ್ಕುಪತ್ರ ಮತ್ತು ಏನಾದರೂ ಸಮಸ್ಯೆಗಳಿದ್ದಲ್ಲಿ ಅದನ್ನು ಪರಿಹರಿಸಿ ಹಕ್ಕು ಪತ್ರ ನೀಡಬೇಕು. ಅಗತ್ಯವಿದ್ದವರಿಗೆ ಬಿಪಿಎಲ್ ಕಾರ್ಡ್ ಹಂಚುವಿಕೆ ಮುಂತಾದ ಹಲವು ಕೆಲಸ ಕಾರ್ಯಗಳಿವೆ.

ಡೊನಾಲ್ಡ್: ಯುವಜನರಿಗೆ ಉದ್ಯೋಗದ ಅವಶ್ಯಕತೆಯಿದೆ. ಹೆಚ್ಚಿನವರು ದೊಡ್ಡ ನಗರಗಳಿಗೆ, ವಿದೇಶಕ್ಕೆ ವಲಸೆ ಹೋಗುತ್ತಿದ್ದಾರೆ. ಅವರಿಗಾಗಿ ಏನಾದರೂ ಯೋಜನೆ..?

ಪ್ರಮೋದ್: ಉದ್ಯೋಗ ಸೃಷ್ಟಿ ಮಾಡಬೇಕಾದರೆ ಇಲ್ಲಿ ಕೈಗಾರಿಕೆಗಳು, ಸಾಫ್ಟ್‍ವೇರ್ ಕಂಪೆನಿಗಳು ಬರಬೇಕು. ಅವರು ಇಲ್ಲಿಗೆ ಬರ್ತಾ ಇಲ್ಲ. ನಾವು ಬೇಕಾದ ವ್ಯವಸ್ಥೆ ಮಾಡುತ್ತೇವೆ ಎಂದು ಹೇಳಿದರೂ ಬರ್ತಾ ಇಲ್ಲ.

ಡೊನಾಲ್ಡ್: ಕುಡಿಯುವ ನೀರಿನ ಬಗ್ಗೆ ಹೇಳಿದಿರಿ. ಆದರೆ ಸಾಕಷ್ಟು ನೀರಾಶ್ರಯಗಳು ಮರೆಯಾಗುತ್ತಿವೆ. ಮಳೆ ಸಹ ನಿರೀಕ್ಷೆಯ ಪ್ರಮಾಣದಲ್ಲಿ ಬರುತ್ತಿಲ್ಲ. ಎಲ್ಲಿಂದ ನೀರು ಒದಗಿಸುತ್ತೀರಿ?

ಪ್ರಮೋದ್: ಇಲ್ಲಿ ವರ್ಷವಿಡೀ ಹರಿಯುವ ನದಿಯಿದೆ. ಆ ನದಿಯಿಂದಲೇ ನೀರನ್ನು ಟ್ಯಾಪ್ ಮಾಡಬೇಕಿದೆ.

ಡೊನಾಲ್ಡ್: ರಾಜ್ಯದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿಯ ನಡುವೆ ಜಿದ್ದಾಜಿದ್ದಿನ ಹೋರಾಟ ಕಂಡು ಬರುತ್ತಿದೆ. ಹಿಂದಿನ ಬಾರಿ ಬಿಜೆಪಿಗೆ ಆಡಳಿತ ವಿರೋಧ ಅಲೆಯಿತ್ತು. ಅಲ್ಲದೆ ಯಡಿಯೂರಪ್ಪನವರ ಬಂಡಾಯ ಮುಂತಾದ ಅಂಶಗಳಿದ್ದವು. ಅಷ್ಟಿದ್ದರೂ ಕಾಂಗ್ರೆಸ್ 123 ಸ್ಥಾನ ಮಾತ್ರ ಗೆದ್ದಿತ್ತು. ಈಗ ಕಠಿಣ ಸ್ಪರ್ಧೆಯಿದೆ..

ಪ್ರಮೋದ್: ಸಿದ್ಧರಾಮಯ್ಯನವರ ಸರಕಾರದ ಕೆಲಸವನ್ನು ಜನರು ಹತ್ತಿರದಿಂದ ನೋಡಿದ್ದಾರೆ, ಅದನ್ನು ಅನುಭವಿಸಿದ್ದಾರೆ. ನಾವು ಬಾಯಿಮಾತಿನಲ್ಲಿ ಹೇಳುವುದಕ್ಕಿಂತ ಜನರೇ ಸ್ವತಃ ತಮಗೆ ಸರಕಾರದಿಂದ ಪ್ರಯೋಜನವಾಗಿದೆ ಎಂಬುದನ್ನು ತಿಳಿದಿದ್ದಾರೆ. ಅವರು ನಮ್ಮನ್ನು ಮರೆಯುವುದಿಲ್ಲ.

ಡೊನಾಲ್ಡ್: ಒಳ್ಳೊಳ್ಳೆಯ ಯೋಜನೆಗಳು ಜಾರಿಗೆ ಬಂದರೂ ಅದರಿಂದಾಗಿ ಮತಗಳು ದೊರೆಯುತ್ತವೆ ಎಂಬುದಕ್ಕೆ ಗ್ಯಾರಂಟಿಯಿಲ್ಲ. ಹಿಂದೆ ಹಾಗೆ ಆಗಿದೆ…

ಪ್ರಮೋದ್: ಹಸಿದ ಹೊಟ್ಟೆಯವರಿಗೆ ಮಾತ್ರ ಅದರ ಬೆಲೆ ಗೊತ್ತಾಗುತ್ತದೆ. ಹೊಟ್ಟೆ ತುಂಬಿದವನಿಗೆ ಅನ್ನಭಾಗ್ಯದ ಅಕ್ಕಿಯ ಬೆಲೆ ಗೊತ್ತಾಗುವುದಿಲ್ಲ.

ಡೊನಾಲ್ಡ್: ಅನ್ನಭಾಗ್ಯ ಯೋಜನೆ ಜಾರಿಗೆ ತಂದಾಗ ಬಿಜೆಪಿಯವರು ಅದನ್ನು ಠೀಕಿಸಿ, ಸೋಮಾರಿತನಕ್ಕೆ ಉತ್ತೇಜನವೆಂದೆಲ್ಲಾ ಅಣಕಿಸಿದ್ದರು. ಯೋಜನೆಯ ಫಲ ತಿಳಿದ ಮೇಲೆ ಈಗ ಅವರು ಅದು ಕೇಂದ್ರ ಸರಕಾರದ ಯೋಜನೆಯೆಂದು ಹೇಳಿಕೊಳ್ಳುತ್ತಿದ್ದಾರೆ…

ಪ್ರಮೋದ್: ನೋಡಿ, ನಮ್ಮ ರಾಜ್ಯದಿಂದಲೇ ಸುಮಾರು 2,500 ಕೋ.ರೂ. ಅನ್ನಭಾಗ್ಯ ಯೋಜನೆಗೆ ನೀಡಲಾಗಿದೆ. ಕೇಂದ್ರ ಸರಕಾರದಿಂದ ಸಿಗುವುದಾದರೆ ನಾವು ಯಾಕೆ ರಾಜ್ಯ ಸರಕಾರದಿಂದ 2,500 ಕೋ.ರೂ. ಕೊಡಬೇಕು?

ಡೊನಾಲ್ಡ್: ನಿಮಗೆ ಲೋಕಸಭಾ ಚುನಾವಣೆಯ ಮೇಲೇನಾದರೂ ಕಣ್ಣಿದೆಯೆ?

ಪ್ರಮೋದ್: ಲೋಕಸಭಾ ಚುನಾವಣೆಯ ಮೇಲೆ ನನಗೆ ಆಸಕ್ತಿ ಇಲ್ಲ.

ಡೊನಾಲ್ಡ್: ಉಡುಪಿ ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷ ಎಷ್ಟು ಸ್ಥಾನಗಳನ್ನು ಗೆಲ್ಲಲಿದೆ?

ಪ್ರಮೋದ್: ಹೆಚ್ಚಿನ ಸ್ಥಾನಗಳನ್ನು ನಾವು ಗೆಲ್ಲುತ್ತೇವೆ.

ಡೊನಾಲ್ಡ್: ಕ್ರೈಸ್ತ ಸಮುದಾಯಕ್ಕೆ ವಿಶೇಷ ನೆರವು ನೀಡುವ ಯೋಜನೆಯೇನಿದೆ?

ಪ್ರಮೋದ್: ಕ್ರಿಶ್ಚಿಯನ್ ಡೆವಲಪ್‍ಮೆಂಟ್ ಬೋರ್ಡ್ ಮಾಡಬೇಕೆಂಬ ಬೇಡಿಕೆಯಿದೆ. ಅದನ್ನು ನಾನು ಬೆಂಬಲಿಸುತ್ತೇನೆ. ವಿಶೇಷವಾಗಿ ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಕ್ಕೆ ಒತ್ತು ಕೊಡಬೇಕಿದೆ.

ಸಂದರ್ಶನ: ಡೊನಾಲ್ಡ್ ಪಿರೇರಾ ಬೆಳ್ತಂಗಡಿ
Feedback: info.janavahini@gmail.com

Visit & Like our Page – www.facebook.com/janavahini

ವಿನಯ ಕುಮಾರ್ ಸೊರಕೆ ಸಂದರ್ಶನ (ಕ್ಲಿಕ್ ಮಾಡಿ ಓದಿ)

ರಮಾನಾಥ್ ರೈ ಸಂದರ್ಶನ (ಕ್ಲಿಕ್ ಮಾಡಿ ಓದಿ)

Like us on facebook

1 thought on “ಸಿದ್ಧರಾಮಯ್ಯ ಸರಕಾರಕ್ಕೆ ಜನರ ಆಶೀರ್ವಾದವಿದೆ: ಪ್ರಮೋದ್ ಮಧ್ವರಾಜ್”

  1. Why did his mother join BJP to become MP? She has since quit. Pramod also seems to have encouraged rumours to spread about his joining BJP. Will he say he’s not joining BJP before 2019 polls or if his party loses this election?

    As for preparing project for ensuring drinking water to all families in his constituency, does it take 5 years to prepare a plan? How many years for implementation? Why didn’t he speak forcefully for or against Yettinahole project or for broad gauge train link from Bengaluru to Mangaluru? Where’s the action??

Leave a Reply

Your email address will not be published. Required fields are marked *

*

code

LATEST NEWS