ಕಾಂಗ್ರೆಸ್ ಎಲ್ಲಾ ಧರ್ಮೀಯರನ್ನು ಗೌರವಿಸುವ ಪಕ್ಷ: ವಿನಯ ಕುಮಾರ್ ಸೊರಕೆ

Published on: Wednesday, April 11th, 2018,9:55 pm

ಸಂದರ್ಶನ: ಡೊನಾಲ್ಡ್ ಪಿರೇರಾ ಬೆಳ್ತಂಗಡಿ

Vinay Kumar Sorakeಪುತ್ತೂರಿನ ವಿನಯ ಕುಮಾರ್ ಸೊರಕೆಯವರು ಕರಾವಳಿಯ ಸ್ವಚ್ಛ ಇಮೇಜಿನ ರಾಜಕಾರಣಿಗಳಲ್ಲಿ ಒಬ್ಬರು. ಅವರೊಬ್ಬ ಅಜಾತಶತ್ರು. ಶಾಸಕರಾಗಿಯೂ ಸಂಸದರಾಗಿಯೂ ರಾಜ್ಯ ಮತ್ತು ರಾಷ್ಟ್ರ ರಾಜಕಾರಣದಲ್ಲಿ ಕರ್ತವ್ಯ ನಿರ್ವಹಿಸಿ ತಮ್ಮದೇ ಛಾಪು ಮೂಡಿಸಿಕೊಂಡ ಹೆಗ್ಗಳಿಕೆ ಅವರದ್ದು. ಪಕ್ಷದ ಕರೆಗೆ ಓಗೊಟ್ಟು ಉಡುಪಿಗೆ ಸ್ಥಳಾಂತರಗೊಂಡ ಸೊರಕೆಯವರು ಕಳೆದ ಎರಡು ದಶಕಗಳಿಂದ ಉಡುಪಿಯವರೇ ಆಗಿ ಬಿಟ್ಟಿದ್ದಾರೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಾಪುವಿನಿಂದ ಸ್ಪರ್ಧಿಸಿ ಜಿದ್ದಾಜಿದ್ದಿನ ಹೋರಾಟದಲ್ಲಿ ಪ್ರಚಂಡ ಗೆಲುವು ಸಾಧಿಸಿ ರಾಜಧಾನಿಗೆ ತೆರಳಿದವರು ರಾಜ್ಯದ ಕ್ಯಾಬಿನೆಟ್‍ನ ಸಚಿವರಾಗಿ ಕಂಗೊಳಿಸಿದ್ದರು. ನಗರಾಭಿವೃದ್ಧಿ ಸಚಿವರಾಗಿ ರಾಜ್ಯದಾದ್ಯಂತ ಸಂಚರಿಸಿದವರು, ಅಧಿಕಾರ-ಆಡಳಿತವನ್ನು ನಿರ್ವಹಿಸಿದವರು. ಅವರ ಈ ಅವಧಿಯಲ್ಲಿ ಕಾಪು ಕ್ಷೇತ್ರ ಬಹಳಷ್ಟು ಅಭಿವೃದ್ಧಿ ಕಂಡಿದೆ, ಮೇಲ್ದರ್ಜೆಗೇರಿದೆ. ಕಾಪು ಪಟ್ಟಣ ಪುರಸಭೆಯಾಗಿ ಮತ್ತು ಕಾಪು ಕ್ಷೇತ್ರ ಪ್ರತ್ಯೇಕ ತಾಲೂಕಾಗಿ ಮೂಡಿ ಬಂದಿದೆ. ಮುಂದಿನ ಚುನಾವಣೆಗೆ ರಣಕಹಳೆ ಊದಿಯಾಗಿದೆ. ಈ ನಿಟ್ಟಿನಲ್ಲಿ ಅವರ ಕ್ಷೇತ್ರ, ರಾಜ್ಯ, ಕೇಂದ್ರದ ರಾಜಕೀಯದ ಬಗ್ಗೆ ಚರ್ಚೆ ನಡೆಸಿರುವ ಈ ಸಂದರ್ಶನ ಇಲ್ಲಿದೆ.

-ಸಂಪಾದಕ

ಡೊನಾಲ್ಡ್ ಪಿರೇರಾ: ಸರ್, ಚುನಾವಣೆ ಘೋಷಿಸಲ್ಪಟ್ಟಿದೆ. ಕಾಪು ಕ್ಷೇತ್ರದಲ್ಲಿ ನಿಮ್ಮ ತಯಾರಿ ಹೇಗಿದೆ?

ವಿನಯ ಕುಮಾರ್ ಸೊರಕೆ: ಚುನಾವಣೆಗಾಗಿಯೇ ತಯಾರಿ ಅಂತೇನಿಲ್ಲ. ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿದ್ದ ನನಗೆ ಜನರು ಆಶೀರ್ವಾದ ನೀಡಿದ್ದರು. ಐದು ವರ್ಷಗಳಲ್ಲಿ ಅವರ ನಿರೀಕ್ಷೆಯಂತೆ ಕೆಲಸ ಮಾಡಿದ್ದೇನೆ. ಎಲ್ಲವನ್ನೂ ಸಾಧಿಸಿದ್ದೇನೆ ಎನ್ನಲಾಗದು. ಕಾಪು ಕ್ಷೇತ್ರ ಅಭಿವೃದ್ಧಿಯಲ್ಲಿ ಬಹಳ ಹಿಂದೆ ಇತ್ತು. ನಾನು ಎಲ್ಲರ ಸಹಕಾರದೊಂದಿಗೆ ಕಾಪುವನ್ನು ಅಭಿವೃದ್ಧಿಯಲ್ಲಿ ಮುಂಚೂಣಿಗೆ ಬರುವಂತೆ ಶ್ರಮಿಸಿದ್ದೇನೆ. ಕಾಪು ವಿಧಾನಸಭಾ ಕ್ಷೇತ್ರ ಇನ್ನಷ್ಟು ಅಭಿವೃದ್ಧಿ ಹೊಂದಲು ಅವಕಾಶಗಳಿವೆ. ಸ್ವಂತ ಕಾಲಿನಲ್ಲಿ ಕಾಪು ನಿಲ್ಲುವಂತೆ ಮಾಡಿಲಿಕ್ಕಿದೆ. ಈ ಬಾರಿಯೂ ಜನರ ಆಶೀರ್ವಾದವನ್ನು ಕೇಳುತ್ತಿದ್ದೇನೆ. ನಮ್ಮ ಮುಖ್ಯಮಂತ್ರಿ ಸಿದ್ಧರಾಮಯ್ಯನವರ ಸರಕಾರ ಜನರಿಗೆ ನೀಡಿದ್ದ ಎಲ್ಲಾ ಆಶ್ವಾಸನೆಗಳನ್ನು ಈಡೇರಿಸಿದ್ದಲ್ಲದೆ, ಪ್ರಣಾಳಿಕೆಯಲ್ಲಿಲ್ಲದ ಅನೇಕ ಕೆಲಸ ಕಾರ್ಯಗಳನ್ನೂ ಮಾಡಿದೆ. ಕರ್ನಾಟಕ ರಾಜ್ಯದಲ್ಲಿ ಕಳೆದ ಐದು ವರ್ಷಗಳಲ್ಲಿ ಪಾರದರ್ಶಕ ಮತ್ತು ಅಭಿವೃದ್ಧಿಯ ಸರಕಾರವನ್ನು ನಾವು ನೀಡಿದ್ದೇವೆ. ಸಾಮಾಜಿಕ ನ್ಯಾಯ ದೊರಕಿಸುವ ಅನೇಕ ಕಾರ್ಯಗಳನ್ನು ಅನುಷ್ಠಾನಗೊಳಿಸಿದ್ದೇವೆ. ಇವೆಲ್ಲವನ್ನು ಮುಂದಿಟ್ಟುಕೊಂಡು ನಾವು ಜನರ ಬಳಿ ತೆರಳುತ್ತಿದ್ದೇವೆ.

ಡೊನಾಲ್ಡ್: ಕಾಪುವಿನಲ್ಲಿ ನಿಮ್ಮ ನಿರೀಕ್ಷೆಯಂತೆ ಆಗದ ಕೆಲಸ ಕಾರ್ಯಗಳೇನಾದರೂ ಇವೆಯಾ?

ವಿ.ಕೆ. ಸೊರಕೆ: ಹೆಜಮಾಡಿ ಮೀನುಗಾರಿಕೆ ಬಂದರು ಅಭಿವೃದ್ಧಿ ಕಾರ್ಯ, ಅಪೇಕ್ಷಿಸಿದಷ್ಟು ನಡೆಸಲಾಗಿಲ್ಲ. ಮಂಗಳೂರು ಮತ್ತು ಮಲ್ಪೆ ನಡುವೆ ಇರುವ ದೊಡ್ಡ ವಾಣಿಜ್ಯ ಬಂದರು ಹೆಜಮಾಡಿ. ಇದು ಬಹಳ ಹಿಂದಿನಿಂದ ಇರುವ ಬಂದರು. ಅದರ ಅಭಿವೃದ್ಧಿಗಾಗಿ ಕೇಂದ್ರ ಸರಕಾರಕ್ಕೆ ಯೋಜನೆ ಕಳುಹಿಸಲಾಗಿತ್ತು. ಹಿಂದೆ ಕೇಂದ್ರ ಸರಕಾರ 75% ಮತ್ತು ರಾಜ್ಯ ಸರಕಾರ 25% ಹಣ ಒದಗಿಸುತ್ತಿತ್ತು. ಆದರೆ ಈಗಿನ ಕೇಂದ್ರ ಸರಕಾರ ಯಾವುದೇ ಯೋಜನೆ ಇರಲಿ 25 ಕೋಟಿ ರೂ. ಕೊಡುತ್ತೇನೆಂದು ಘೋಷಿಸಿತು. ನಂತರ ಇಲ್ಲಿನ ಲೋಕಸಭಾ ಸದಸ್ಯರ ಸಹಿತ ಮೀನುಗಾರರ ನಿಯೋಗ ತೆರಳಿ ನೆರವನ್ನು ಹೆಚ್ಚಿಸಬೇಕೆಂದು ಮನವಿ ಇಟ್ಟಾಗ 50%ಕ್ಕೆ ಏರಿಸುತ್ತೇವೆಂದು ಭರವಸೆ ನೀಡಲಾಗಿತ್ತು. ಕೇಂದ್ರದಿಂದ ಹಣಕಾಸಿನ ನೆರವು ಬಂದಾಕ್ಷಣ ಅಭಿವೃದ್ಧಿ ಕಾರ್ಯ ಪ್ರಾರಂಭಿಸಲಾಗುವುದು.

Vinay Kumar Sorake_2

ಡೊನಾಲ್ಡ್: ನೀವು ಸಚಿವರಾಗಿದ್ದವರು. ಸಚಿವರಾಗಿ ನಿಮ್ಮ ಸಾಧನೆಗಳೇನು?

ವಿ.ಕೆ. ಸೊರಕೆ: ನಾನು ಮೂರು ವರ್ಷ ನಗರಾಭಿವೃದ್ಧಿ ಸಚಿವನಾಗಿದ್ದೆ. ನನ್ನ ಕ್ಷೇತ್ರದ ಜನರು ನನ್ನನ್ನು ಶಾಸಕನಾಗಿ ಆಯ್ಕೆ ಮಾಡಿದ್ದರಿಂದ ಸಚಿವನಾಗಲು ಸಾಧ್ಯವಾಯಿತು. ನನ್ನ ಪಕ್ಷ ನನಗೆ ಈ ಅವಕಾಶ ಒದಗಿಸಿತ್ತು. ಹಿಂದಿನ ಸರಕಾರದಲ್ಲಿ ನಗರಾಭಿವೃದ್ಧಿ ಇಲಾಖೆಯ ಅನೇಕ ಸಚಿವರು ಜೈಲಿಗೆ ಹೋಗಿದ್ದರು. ಪಾರದರ್ಶಕ ಆಡಳಿತ ಕೊಡಲು ನಾನು ಪ್ರಯತ್ನ ಪಟ್ಟಿದ್ದೇನೆ. ಕೇಂದ್ರ ಸರಕಾರದಿಂದ ಬರುವ ಅನುದಾನವನ್ನು ಬಳಸಿ ಬಹಳಷ್ಟು ಯೋಜನೆಗಳನ್ನು ಅನುಷ್ಠಾನಗೊಳಿಸಿದ್ದೇನೆ. ಇಂದಿರಾ ಆವಾಸ್ ಯೋಜನೆಯಲ್ಲಿ ರಾಷ್ಟ್ರದಲ್ಲಿಯೇ ನಮಗೆ ಪ್ರಥಮ ಸ್ಥಾನ ಬಂದಿತ್ತು. ಮೈಸೂರು ನಗರವನ್ನು ಇಡೀ ದೇಶದಲ್ಲಿಯೇ ಸ್ವಚ್ಛ ನಗರವಾಗುವಂತೆ ರೂಪಿತಗೊಳಿಸಿದ್ದೇವೆ. ನನ್ನ ಅವಧಿಯಲ್ಲಿ ಆರು ನಗರಗಳನ್ನು ಸ್ಮಾರ್ಟ್ ಸಿಟಿಗೆ ಆಯ್ಕೆ ಮಾಡಲಾಗಿದೆ. ಸಿಬಂದಿಗಳ ಕೊರೆತೆಯಿತ್ತು. ಆ ಕೊರತೆ ನೀಗಿಸಲು ಸುಮಾರು 3500 ಜನರನ್ನು ಸಿಬಂದಿಯಾಗಿ ನೇಮಿಸಿಕೊಳ್ಳಲು ಚಾಲನೆ ನೀಡಲಾಗಿತ್ತು. ನಗರಗಳ ಆರೋಗ್ಯಕ್ಕಾಗಿ ದುಡಿಯುವ ಪೌರ ಕಾರ್ಮಿಕರ ಶ್ರೇಯಕ್ಕೋಸ್ಕರ, ಅವರ ಆರೋಗ್ಯಕ್ಕಾಗಿ ಪ್ರಸ್ತಾಪವನ್ನು ಸರಕಾರಕ್ಕೆ ಕೊಡಲಾಗಿತ್ತು, ಇತ್ತೀಚೆಗೆ ಅದು ಮಂಜೂರಾಗಿದೆ. ಕಾಂಟ್ರ್ಯಾಕ್ಟ್ ಬೇಸಿಸ್‍ನ ಮೂಲಕ ಅವರ ಶೋಷಣೆ ತಪ್ಪಿಸುವಲ್ಲಿ ಇದು ಸಹಕಾರಿಯಾಗಿದೆ. ಕ್ಲಿಷ್ಟ ನಿಯಮಗಳನ್ನು ಸಡಿಲಿಸುವ ಪ್ರಯತ್ನ ನಡೆಸಿದ್ದೇನೆ. ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಗೆ ಎಡಿಬಿಯ ಸೆಕೆಂಡ್ ಸ್ಟೇಜ್ ಸ್ಕೀಮಿನ 580 ಕೋ.ರೂ. ಅನುದಾನದಲ್ಲಿ ಮಂಗಳೂರು, ಉಡುಪಿ, ಕುಂದಾಪುರ, ಪುತ್ತೂರು, ಬಂಟ್ವಾಳ ಸೇರಿದಂತೆ ಹಲವು ಕಡೆಗಳಲ್ಲಿ ಅಭಿವೃದ್ಧಿ ನೆರವೇರಿದೆ. ಕುಂದಾಪುರದಲ್ಲಿ ಒಳಚರಂಡಿ ವ್ಯವಸ್ಥೆ, ಬಂಟ್ವಾಳದಲ್ಲಿ ಕುಡಿಯುವ ನೀರಿನ ಯೋಜನೆ (60 ಕೋ.ರೂ.) ಜಾರಿಗೊಳಿಸಲಾಗಿದೆ. ಪುತ್ತೂರು, ಕೋಟೆಕಾರು ನಗರಸಭೆಯನ್ನಾಗಿ ಮೇಲ್ದರ್ಜೆಗೇರಿಸಲಾಗಿದೆ. ಕಾಪುವನ್ನು ಪುರಸಭೆಯನ್ನಾಗಿಸಲಾಗಿದೆ.

ಡೊನಾಲ್ಡ್: ಕಾಪು ತಾಲೂಕು ಆಗಿ ಪರಿವರ್ತನೆಯಾಗಿದೆ. ಅದಕ್ಕೆ ಬೇಕಾದ ಮೂಲ ಸೌಕರ್ಯಗಳು…

ವಿ.ಕೆ. ಸೊರಕೆ: ನೋಡಿ, ಎಲ್ಲವೂ ಕೂಡ ಒಮ್ಮೆಲೇ ಆಗುವುದಿಲ್ಲ. ಕಾಪು ಪಂಚಾಯತ್ ಮಟ್ಟದಲ್ಲಿತ್ತು. ನಮಗೆ ತಾಲೂಕು ಕೇಂದ್ರವೇ ಇರಲಿಲ್ಲ. 29 ಗ್ರಾಮ ಪಂಚಾಯತ್‍ಗಳಿದ್ದವು. ನಗರ ಪ್ರದೇಶ ಆಗುವಂತಹ ಎಲ್ಲಾ ಅರ್ಹತೆಗಳು ನಮಗಿದ್ದವು. ಕಿ.ಮೀ.ಗೆ 1500 ಜನಸಂಖ್ಯೆಯಿದ್ದಲ್ಲಿ ನಗರಸಭೆಗೆ ಅರ್ಹತೆ ಪಡೆಯುತ್ತದೆ. ನಮ್ಮಲ್ಲಿ 2500 ಜನಸಂಖ್ಯೆಯಿತ್ತು. ಹೆಚ್ಚಿನ ಎಲ್ಲಾ ಮೂಲ ಸೌಕರ್ಯಗಳು ದೊರಕಬೇಕಿದ್ದಲ್ಲಿ ಪುರಸಭೆಯಾಗುವ ಅನಿವಾರ್ಯತೆಯಿತ್ತು. ಕಸ ವಿಲೇವಾರಿ, ಚರಂಡಿ ವ್ಯವಸ್ಥೆ, ರಸ್ತೆ, ಕೆರೆಗಳ ಅಭಿವೃದ್ಧಿ, ಪರಿಸರವನ್ನು ಉಳಿಸುವಂಥದ್ದು, ವಿದ್ಯುದೀಕರಣ ಇವೆಲ್ಲಾ ನಡೆಯಬೇಕಾದಲ್ಲಿ ಪುರಸಭೆಯನ್ನಾಗಿಸುವುದು ಅಗತ್ಯವಾಗಿತ್ತು. 100 ಕೋ.ರೂ. ಅನುದಾನ ತರಿಸುವ ಆಶ್ವಾಸನೆ ನೀಡಿದ್ದೆ, 137 ಕೋ.ರೂ. ಅನುದಾನ ತರಿಸಿದ್ದೇನೆ. ನದಿ ನೀರನ್ನು ಶುದ್ಧೀಕರಿಸಲು 57 ಕೋ.ರೂ.ನ ಯೋಜನೆಗೆ ಮಂಜೂರಾತಿ ಪಡೆಯಲಾಗಿದೆ. ಆಡಳಿತವನ್ನು ಜನರಿಗೆ ಇನ್ನಷ್ಟು ಹತ್ತಿರ ತರಲು ಕ್ರಮ ಕೈಗೊಳ್ಳಲಾಗಿದೆ. ಆ ನಿಟ್ಟಿನಲ್ಲಿ ತಾಲೂಕು ರಚನೆಯಾಗಿದೆ. ಮಿನಿ ವಿಧಾನಸೌಧ ಮಂಜೂರಾತಿಯ ಹಂತದಲ್ಲಿದೆ. ಪುರಸಭೆಗೆ ಈಗಾಗಲೇ 5 ಕೋ.ರೂ.ನ ಕಟ್ಟಡ ನಿರ್ಮಾಣಗೊಂಡಿದೆ. ಬಂಗ್ಲೆ ಮೈದಾನದ ಬಳಿ ಎಲ್ಲಾ ಸರಕಾರಿ ಕಚೇರಿಗಳನ್ನು ಒಂದೆಡೆ ತರಿಸುವ ನಿಟ್ಟಿನಲ್ಲಿ ಕಾಂಪ್ಲೆಕ್ಸ್ ನಿರ್ಮಾಣದ ತಯಾರಿ ನಡೆದಿದೆ.

ಡೊನಾಲ್ಡ್: ಕಳೆದ 5 ವರ್ಷಗಳಲ್ಲಿ ರಾಜ್ಯದಲ್ಲಿ ಮತ್ತು ನಿಮ್ಮ ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳು ನಡೆದಿವೆ. ಇದೇ ಆಧಾರದಲ್ಲಿ ಚುನಾವಣೆಯನ್ನು ಗೆಲ್ಲಲು ಸಾಧ್ಯವೇ?

ವಿ.ಕೆ. ಸೊರಕೆ: ಅಭಿವೃದ್ಧಿ ಕಾರ್ಯವೊಂದೇ ಚುನಾವಣೆಯಲ್ಲಿ ಪ್ರಮುಖವಾಗುವುದಿಲ್ಲ. ನಮ್ಮ ಕರಾವಳಿಯ ಜನರು ವಿದ್ಯಾವಂತರೂ ಬುದ್ಧಿವಂತರೂ ಆಗಿದ್ದಾರೆ. ಬಹಳಷ್ಟು ಉದ್ಯೋಗಶೀಲ ಜನರಿದ್ದಾರೆ. ಎಲ್ಲಾ ರಂಗಗಳಲ್ಲೂ ಜನರು ನಮ್ಮನ್ನು ತುಲನೆ ಮಾಡುತ್ತಾರೆ. ನಮ್ಮ ನಡತೆ, ಐದು ವರ್ಷಗಳಲ್ಲಿ ನಾವು ಹೇಗೆ ನಡೆದುಕೊಂಡಿದ್ದೇವೆ ಎನ್ನುವುದೂ ಪ್ರಮುಖವಾಗುತ್ತದೆ. ಜನರ ಕಷ್ಟ ಸುಖದಲ್ಲಿ ನಾವೆಷ್ಟು ಭಾಗಿಯಾಗಿದ್ದೇವೆ, ಜನರ ಜೊತೆ ಎಷ್ಟು ಸಂಪರ್ಕದಲ್ಲಿದ್ದೇವೆ, ಅವರ ಭಾವನೆ, ಅಭಿಪ್ರಾಯಗಳಿಗೆ ಎಷ್ಟು ಮನ್ನಣೆ ಕೊಟ್ಟಿದ್ದೇವೆ, ಜನರ ಸೇವಕರಾಗಿ ಯಾವೆಲ್ಲಾ ಕೆಲಸ ಕಾರ್ಯ ಮಾಡಿದ್ದೇವೆ ಎಂಬೆಲ್ಲಾ ವಿಚಾರಗಳೂ ಮುಖ್ಯವಾಗುತ್ತವೆ.

ಡೊನಾಲ್ಡ್: ನಮ್ಮ ನಾಯಕರಲ್ಲಿ ಇಚ್ಛಾಶಕ್ತಿಯ ಕೊರತೆಯಿದೆ ಎಂದು ನೀವೇ ಒಂದು ಬಾರಿ ಹೇಳಿದ್ದಿರಿ. ಕೇರಳ, ತಮಿಳುನಾಡುಗಳ ರಾಜಕಾರಣಿಗಳಿಗೆ ಹೋಲಿಸಿದರೆ ನಮ್ಮಲ್ಲಿ ಒಗ್ಗಟ್ಟು ಕಾಣುವುದಿಲ್ಲ. ನಾಡಿನ ಯೋಜನೆ, ಹಕ್ಕುಗಳಿಗೋಸ್ಕರ ಹೋರಾಟ, ಒಗ್ಗಟ್ಟು ನಮ್ಮ ರಾಜಕಾರಣಿಗಳಲ್ಲಿ, ಅದರಲ್ಲೂ ಕರಾವಳಿಯ ನಾಯಕರಲ್ಲಿ, ಕಾಣುವುದಿಲ್ಲ. ನಮ್ಮ ರಾಜಕಾರಣಿಗಳು, ಜನಪ್ರತಿನಿಧಿಗಳು ರಾಜಕಾರಣವನ್ನು ಬದಿಗಿಟ್ಟು ನಾಡಿಗೋಸ್ಕರ, ಜನರಿಗೋಸ್ಕರ ಒಂದಾಗುವುದು ಯಾವಾಗ?

ವಿ.ಕೆ. ಸೊರಕೆ: ಬೇರೆ ಪಕ್ಷಗಳಿಗೂ ನಮ್ಮ ಪಕ್ಷಕ್ಕೂ ಬಹಳಷ್ಟು ವ್ಯತ್ಯಾಸವಿದೆ. ಬಿಜೆಪಿಯಲ್ಲಿ ಪಕ್ಷ ಕಟ್ಟುವವರೇ ಬೇರೆ, ಚುನಾವಣೆಯಲ್ಲಿ ನಿಲ್ಲುವವರೇ ಬೇರೆ, ಕಾರ್ಯಕರ್ತರೇ ಬೇರೆ. ಆದರೆ ನಮ್ಮ ಪಕ್ಷದಲ್ಲಿ, ನಾವು ಶಾಸಕರಾಗಿದ್ದರೆ ಶಾಸಕನ ಕೆಲಸ ಕಾರ್ಯವನ್ನೂ ಮಾಡಬೇಕು, ಪಕ್ಷ ಕಟ್ಟುವ ಕೆಲಸವನ್ನೂ ನಾವು ಮಾಡಬೇಕು. ಎಲ್ಲದಕ್ಕೂ ನಾವು ಉತ್ತರದಾಯಿತ್ವವನ್ನು ಹೊಂದಿದ್ದೇವೆ. ಹಾಗಾಗಿ ನಾವು ನಮ್ಮ ನಮ್ಮ ಕ್ಷೇತ್ರಗಳಿಗೆ ಸೀಮಿತರಾಗಿರಬಹುದು. ಆದರೆ ನಮ್ಮ ನಾಯಕರ, ಜನಪ್ರತಿನಿಧಿಗಳ ನಡುವೆ ಕೋಆರ್ಡಿನೇಶನ್ ಇಲ್ಲವೆನ್ನುವುದು ಸರಿಯಲ್ಲ. ನಮ್ಮ ನಡುವೆ ಪರಸ್ಪರ ಸಹಕಾರ, ಸಂಬಂಧ ನಮ್ಮ ಪಕ್ಷದಲ್ಲಿ ಚೆನ್ನಾಗಿದೆ. ನಾಡಿದ್ದು 22ಕ್ಕೆ ಪ್ರಮೋದ್ ಮಧ್ವರಾಜ್ ಅವರು ಚುನಾವಣಾ ಪ್ರಚಾರ ಕಾರ್ಯ ಆರಂಭಿಸಲಿದ್ದಾರೆ, ಅದಕ್ಕೆ ನನ್ನನ್ನು ಆಹ್ವಾನಿಸಿದ್ದಾರೆ. ನಾನು ಅಲ್ಲಿಗೆ ಹೋಗುತ್ತೇನೆ. ನನ್ನ ಕ್ಷೇತ್ರದ ಕೆಲಸಗಳಿಗೆ ನಾನು ಅವರನ್ನು ಇನ್ವಾಲ್ವ್ ಮಾಡುತ್ತೇನೆ.

ಡೊನಾಲ್ಡ್: ಸರಿ, ಅದು ನಿಮ್ಮ ಪಕ್ಷದೊಳಗಿನ ವಿಚಾರವಾಯಿತು. ನಾನು ಹೇಳ್ತಿರೋದು ಎಲ್ಲಾ ಪಕ್ಷಗಳನ್ನು ಸೇರಿಸಿ…

ವಿ.ಕೆ. ಸೊರಕೆ: ಹಾಗೇನಿಲ್ಲ. ನಮ್ಮ ನಮ್ಮ ಪಕ್ಷ, ತತ್ವ, ನಾಯಕತ್ವನ್ನು ಹೊಂದಿಕೊಂಡು ನಾವು ಇದ್ದೇವೆ. ಆದರೂ ಕೂಡ ಬೇರೆ ಪಕ್ಷಗಳ ಜೊತೆ ಅಭಿವೃದ್ಧಿಯ ವಿಚಾರದಲ್ಲಿ ಯಾವುದೇ ರೀತಿಯ ರಾಜಕೀಯ ಇಲ್ಲ. ನಾನು ನನ್ನ ಕ್ಷೇತ್ರದ 29 ಪಂಚಾಯತ್‍ಗಳಿಗೆ ಕಳೆದ ಐದು ವರ್ಷಗಳಲ್ಲಿ 10 ಸಲ ಭೇಟಿ ಕೊಟ್ಟಿದ್ದೇನೆ, ಅಂದರೆ ಒಟ್ಟು 290 ಭೇಟಿಗಳಾಯಿತು. ಅಲ್ಲಿ ಯಾವ ಪಕ್ಷವೆಂಬುದನ್ನು ನೋಡಿಲ್ಲ. ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದೇನೆ. ಅದೇ ರೀತಿ ತಾಲೂಕು ಮತ್ತು ಜಿಲ್ಲಾ ಪಂಚಾಯತ್ ಸಹ. ಯಾರು, ಯಾವ ಪಕ್ಷವೆಂದು ನೋಡಿಲ್ಲ. ಅಭಿವೃದ್ಧಿಯಲ್ಲಿ ರಾಜಕೀಯ ಇಲ್ಲ. ಆಯ್ಕೆಯಾದ ನಂತರ ಪಕ್ಷಾತೀತವಾಗಿ ನಡೆದುಕೊಂಡಿದ್ದೇನೆ.

ಸಿದ್ಧರಾಮಯ್ಯನವರ ಪರವಾಗಿ ಬಿಜೆಪಿಯ ಪ್ರಚಾರ!

ಡೊನಾಲ್ಡ್: ಸಾಮಾನ್ಯವಾಗಿ ಕಾಂಗ್ರೆಸ್ ಪಕ್ಷ ಮುಖ್ಯಮಂತ್ರಿ ಅಭ್ಯರ್ಥಿಯನ್ನು ಮುಂದಿಟ್ಟು ಚುನಾವಣೆ ಎದುರಿಸುವುದಿಲ್ಲ. ಸಾಮೂಹಿಕ ನಾಯಕತ್ವದಲ್ಲಿಯೇ ಚುನಾವಣೆ ಎದುರಿಸುವುದು ಸಂಪ್ರದಾಯ. ಈ ಬಾರಿ ಸಿದ್ಧರಾಮಯ್ಯನವರು ಕಾಂಗ್ರೆಸ್ಸಿನ ಪ್ರಾದೇಶಿಕ ಮುಖಂಡರಾಗಿ ರಾಷ್ಟ್ರ ಮಟ್ಟದಲ್ಲಿಯೇ ಗುರುತಿಸಿಕೊಂಡಿದ್ದಾರೆ. ಈ ಬದಲಾವಣೆ ಹೇಗಿದೆ..?

ವಿ.ಕೆ. ಸೊರಕೆ: ನಮ್ಮ ನಾಯಕರಾದ ರಾಹುಲ್ ಗಾಂಧಿಯವರು, ಸೋನಿಯಾ ಗಾಂಧಿಯವರು ಕರ್ನಾಟಕದ ಚುನಾವಣೆಯನ್ನು ನಮ್ಮ ಪಕ್ಷ ಸಿದ್ಧರಾಮಯ್ಯನವರ ನೇತೃತ್ವದಲ್ಲಿಯೇ ಎದುರಿಸುತ್ತದೆ ಎಂಬುದನ್ನು ಈಗಾಗಲೇ ಘೋಷಿಸಿದ್ದಾರೆ. ಸಿದ್ಧರಾಮಯ್ಯನವರು ಓರ್ವ ಅತ್ಯುತ್ತಮ ಮುಖ್ಯಮಂತ್ರಿ. ದೇವರಾಜ್ ಅರಸ್‍ರ ನಂತರ ಹಿಂದುಳಿದ ವರ್ಗದ ಮುಖ್ಯಮಂತ್ರಿಯಾಗಿ, ಬಂಗಾರಪ್ಪ ಮತ್ತು ವೀರಪ್ಪ ಮೊಯ್ಲಿಯವರ ನಂತರ, ಬಹಳಷ್ಟು ಕ್ರಾಂತಿಕಾರಿಯಾದ ಸಾಧನೆಗಳನ್ನು ಮಾಡಿದ್ದಾರೆ. ಇವತ್ತು ಅವರನ್ನು ರಾಷ್ಟ್ರ ಮಟ್ಟದ ನಾಯಕರನ್ನಾಗಿ ಪರಿವರ್ತಿಸುವ ಕೆಲಸವನ್ನು ಭಾರತೀಯ ಜನತಾ ಪಕ್ಷದವರು ಮಾಡುತ್ತಿದ್ದಾರೆ. ಪ್ರಧಾನ ಮಂತ್ರಿಯವರು ಬಂದು ಸಿದ್ಧರಾಮಯ್ಯನವರನ್ನು ಎಟ್ಯಾಕ್ ಮಾಡುತ್ತಾರೆ. ಬಿಜೆಪಿ ಅಧ್ಯಕ್ಷರು ಬಂದು ಸಿದ್ಧರಾಮಯ್ಯನವರನ್ನು ಎಟ್ಯಾಕ್ ಮಾಡುತ್ತಾರೆ. ಪಾರ್ಲಿಮೆಂಟ್‍ನಲ್ಲಿ ಮೋದಿಯವರು ಸಿದ್ಧರಾಮಯ್ಯನವರ ಕುರಿತು ಮಾತನಾಡುತ್ತಾರೆ. ಸಿದ್ಧರಾಮಯ್ಯನವರನ್ನು ರಾಷ್ಟ್ರ ಮಟ್ಟದಲ್ಲಿ ಗುರುತಿಸುವ ಕಾರ್ಯವನ್ನು ವಿರೋಧ ಪಕ್ಷದವರೇ ಮಾಡುತ್ತಿದ್ದಾರೆ.

Vinay Kumar Sorake_1

ಡೊನಾಲ್ಡ್: ಅಂದರೆ ಬಿಜೆಪಿಯವರಿಗೆ ಸಿದ್ಧರಾಮಯ್ಯನವರೇ ದೊಡ್ಡ ಎದುರಾಳಿ?!

ವಿ.ಕೆ. ಸೊರಕೆ: ಹೌದು. ಸಿದ್ಧರಾಮಯ್ಯನವರು ರಾಷ್ಟ್ರ ಮಟ್ಟದಲ್ಲಿಯೇ ಸಮರ್ಥ ನಾಯಕರಾಗಿ ಮೂಡಿ ಬಂದಿದ್ದಾರೆ.

ಡೊನಾಲ್ಡ್: ನೀವು ಪುತ್ತೂರಿನವರು. ಅಲ್ಲಿಂದ ಇಲ್ಲಿಗೆ ಶಿಫ್ಟ್ ಆಗಿದ್ದೀರಿ. ಪುತ್ತೂರಿಗೆ ವಾಪಸ್ ಹೋಗುವ ಯೋಚನೆ ಇಲ್ಲವೇ?

ವಿ.ಕೆ. ಸೊರಕೆ: ನಾನು 1999ರ ಲೋಕಸಭಾ ಚುನಾವಣೆಗೆ ಮಂಗಳೂರು ಕ್ಷೇತ್ರದಿಂದ ಟಿಕೆಟ್ ಕೇಳಿದ್ದೆ. ನನಗೆ ಉಡುಪಿ ಕ್ಷೇತ್ರದಿಂದ ಟಿಕೆಟ್ ಕೊಡಲಾಯಿತು. ಅದರ ನಂತರ ನಾನು ಇಲ್ಲಿಯೇ ವಾಸ್ತವ್ಯದಲ್ಲಿದ್ದೇನೆ. ಉಡುಪಿಯಲ್ಲಿ ವಾಸಿಸಲು ಆರಂಭಿಸಿ 18 ವರ್ಷಗಳಾದವು. ಇಲ್ಲಿಯ ಮತದಾರನೂ ಆಗಿದ್ದೇನೆ. ಚುನಾವಣೆಗಳ ಸಂದರ್ಭದಲ್ಲಿ ನಾನು ವಾಪಸ್ ಪುತ್ತೂರಿಗೆ ಹೋಗುತ್ತೇನೆ ಎಂದು ಮಾತನಾಡಲಾಗುತ್ತಿತ್ತು. ಆದರೆ ಬೇರೆಯವರಿಗಿಂತ ಹೆಚ್ಚಿನ ಸಮಯವನ್ನು ನಾನು ನನ್ನ ಕ್ಷೇತ್ರಕ್ಕೆ ಅರ್ಪಿಸಿದ್ದೇನೆ.

ಡೊನಾಲ್ಡ್: ಅಂದರೆ ನೀವು ಇಲ್ಲಿನ ಸ್ಥಳೀಯರೇ ಆಗಿ ಬಿಟ್ಟಿದ್ದೀರಿ?

ವಿ.ಕೆ. ಸೊರಕೆ: ಹೌದು. ನಾನು ಸಂಪೂರ್ಣವಾಗಿ ನನ್ನನ್ನು ಇಲ್ಲಿಯವನಾಗಿ ತೊಡಗಿಸಿಕೊಂಡಿದ್ದೇನೆ. ಮತದಾರರ ನಿರೀಕ್ಷೆಗೆ ಹೊಂದಿಕೊಂಡು ಕಾರ್ಯ ನಿರ್ವಹಿಸುತ್ತಿದ್ದೇನೆ.

ಡೊನಾಲ್ಡ್: ನೀವು ಶಾಸಕನಾಗಿಯೂ ಸಂಸದನಾಗಿಯೂ ಕೆಲಸ ಮಾಡಿದ್ದೀರಿ. ವಿರೋಧ ಪಕ್ಷದಲ್ಲಿಯೂ ಆಡಳಿತ ಪಕ್ಷದಲ್ಲಿಯೂ ಇದ್ದವರು ನೀವು…

ವಿ.ಕೆ. ಸೊರಕೆ: ನಾನು ಹಿಂದೆ 2 ಬಾರಿ ಶಾಸಕನಾಗಿದ್ದವನು. ಲೋಕಸಭಾ ಸದಸ್ಯನೂ ಆಗಿದ್ದೆ. 1994ರಿಂದ 2013ರ ವರೆಗೆ ರಾಜ್ಯ ರಾಜಕೀಯದಲ್ಲಿ ನಾನು ಅಷ್ಟು ಸಕ್ರಿಯನಾಗಿರಲಿಲ್ಲ. ವಿಧಾನಸಭಾ ಚುನಾವಣೆಯಲ್ಲಿ ಸೋತಿದ್ದೆ, ನಂತರ ಸಂಸದನಾಗಿದ್ದೆ, ಮುಂದೆ ಅವಕಾಶ ಸಿಕ್ಕಿರಲಿಲ್ಲ. ಹೀಗೆ ಸ್ವಲ್ಪ ಗ್ಯಾಪ್ ಇತ್ತು. 1994ರ ಶಾಸಕತ್ವಕ್ಕೂ 2013ರ ಶಾಸಕತ್ವಕ್ಕೂ ಬಹಳಷ್ಟು ವ್ಯತ್ಯಾಸವಿದೆ. ಹಲವು ಬೆಳವಣಿಗೆಗಳಾಗಿವೆ. ಕಳೆದ 5 ವರ್ಷಗಳ ಕಾಲ ಶಾಸಕನಾಗಿ ಬಹಳಷ್ಟು ಕಾಮಗಾರಿ ನಡೆಸಿದ್ದೇನೆ.

ಕರಾವಳಿಯ ಕೊಲೆ ರಾಜಕೀಯ ಮತ್ತು ಕೋಮುವಾದ

ಡೊನಾಲ್ಡ್: ಕರಾವಳಿಗೆ ಬರುವುದಾದರೆ, ಇಲ್ಲಿ ಸಾವನ್ನೂ ರಾಜಕೀಯಕ್ಕೆ ಬಳಸಲಾಗುತ್ತಿದೆ. ಬಿಜೆಪಿಯವರು ಸುಳ್ಳು ಮತ್ತು ಅಪಪ್ರಚಾರವನ್ನೇ ನೆಚ್ಚಿಕೊಂಡಿದ್ದಾರೆ ಎನ್ನಲಾಗುತ್ತದೆ. ಆದರೆ ಕಾಂಗ್ರೆಸ್ಸಿನ ದೊಡ್ಡ ನಾಯಕರಾಗಲೀ, ಸ್ಥಳೀಯ ಮುಖಂಡರಾಗಲೀ ಮತ್ತು ಸಾಮಾಜಿಕ ಜಾಲತಾಣಗಳಲ್ಲಾಗಲೀ ಬಿಜೆಪಿಯ ಆಪಾದನೆ, ಆರೋಪಗಳಿಗೆ ಪ್ರತಿಕ್ರಿಯೆ, ಉತ್ತರ ನೀಡುವುದು ಕಾಣುತ್ತಿಲ್ಲ. ಕಾಂಗ್ರೆಸ್ಸಿನ ಈ ನಿಷ್ಕ್ರಿಯತೆಗೆ ಕಾರಣವೇನು?

ವಿ.ಕೆ. ಸೊರಕೆ: ನಾವು ಕೇವಲ ಚುನಾವಣೆಗೋಸ್ಕರ ನಮ್ಮ ಕೆಲಸ ಕಾರ್ಯಗಳನ್ನು ಪ್ರಚುರಪಡಿಸುವುದಿಲ್ಲ. ಜನರಿಗೆ ನಾವೇನು ಆಶ್ವಾಸನೆ ನೀಡಿದ್ದೆವೋ ಅದನ್ನು ಈಡೇರಿಸುವ ಕೆಲಸ ಮಾಡುತ್ತೇವೆ. ಆದರೆ ಬಿಜೆಪಿಯಲ್ಲಿ ಜನಸಾಮಾನ್ಯರಿಗೆ, ರೈತರಿಗೆ, ಮಹಿಳೆಯರಿಗೆ ಅಥವಾ ಯುವಕರಿಗೆ ಯಾವುದೇ ರೀತಿಯ ಕಾರ್ಯಕ್ರಮಗಳಿಲ್ಲ. ಬಿಜೆಪಿಯವರು ಕಳೆದ ಲೋಕಸಭಾ ಚುಣಾವಣೆಯಲ್ಲಿ ವರ್ಷಕ್ಕೆ 2 ಕೋಟಿಯಂತೆ 5 ವರ್ಷಗಳಲ್ಲಿ 10 ಕೋಟಿ ಉದ್ಯೋಗ ಸೃಷ್ಟಿ ಮಾಡುತ್ತೇವೆಂಬ ಭರವಸೆ ನೀಡಿದ್ದರು. 4 ವರ್ಷಗಳಲ್ಲಿ 8 ಲಕ್ಷ ಉದ್ಯೋಗ ಕೊಡಿಸ್ಲಿಕ್ಕೆ ಅವರಿಂದ ಸಾಧ್ಯವಾಗಿಲ್ಲ. ಇದ್ದಂತಹ ಉದ್ಯೋಗಗಳೂ ಕಡಿತವಾಗಿವೆ. ಇಂತಹ ಪರಿಸ್ಥಿತಿಯಲ್ಲಿ ಅವರು ಚುನಾವಣೆಗಳನ್ನು ಧರ್ಮದ ಹೆಸರಿನಲ್ಲಿ, ದೇವರ, ಜಾತಿಯ ಹೆಸರಿನಲ್ಲಿ, ಸಮಾಜವನ್ನು ವಿಂಗಡಿಸುವುದರ ಮುಖಾಂತರ, ಸುಳ್ಳು ಹೇಳಿ ಅಪಪ್ರಚಾರ ನಡೆಸುವ ಮುಖಾಂತರ ಚುನಾವಣೆ ಎದುರಿಸುತ್ತಾರೆ. ಆದರೆ ಜನರು ಬುದ್ಧಿವಂತರಿದ್ದಾರೆ. ಕೊಲೆಯ ವಿಚಾರ ಹೇಳುವುದಾದರೆ, ಯಾರು ಸತ್ತರೂ ನಮ್ಮ ಕಾರ್ಯಕರ್ತರು ಎಂದು ಪ್ರತಿಪಾದಿಸುತ್ತಾರೆ. ಕೊಕ್ಕರ್ಣೆಯಲ್ಲಿ ನಡೆದ ಪ್ರವೀಣ್ ಪೂಜಾರಿ ಕೊಲೆ ಅವರೇ ನಡೆಸಿರುವಂಥ ಕೊಲೆ. ಬಂಟ್ವಾಳದಲ್ಲಿ ಹುಡುಗನ ಕೊಲೆಯನ್ನು ಅವರೇ ನಡೆಸಿದ್ದು. ಕೋಣಾಜೆಯಲ್ಲಿ ಕಾರ್ತಿಕ್ ಎಂಬ ಹುಡುಗನ ಕೊಲೆಯಾಯಿತು. ಮರು ದಿನ ಲೋಕಸಭಾ ಸದಸ್ಯರಾದ ನಳಿನ್ ಕುಮಾರ್ ಕಟೀಲ್ ಪ್ರತಿಭಟನೆ ನಡೆಸಿ ಜಿಲ್ಲೆಗೇ ಬೆಂಕಿ ಹಚ್ಚುತ್ತೇವೆ ಎಂದು ಹೇಳಿದರು. ತನಿಖೆಯಲ್ಲಿ ಕಾರ್ತಿಕ್‍ನ ಸಹೋದರಿಯೇ ಕೊಲೆ ನಡೆಸಿದ್ದಾರೆ ಎಂದು ತಿಳಿದು ಬಂತು. ಸಂಸದೆ ಶೋಭಾ ಕರಂದ್ಲಾಜೆಯವರು ಕೇಂದ್ರ ಗೃಹ ಸಚಿವರಿಗೆ ಕೊಲೆಯಾದವರ ಪಟ್ಟಿ ಸಲ್ಲಿಸಿದ್ದರು. ಆ ಪಟ್ಟಿಯಲ್ಲಿದ್ದ ಹೆಸರಿಸಲಾಗಿದ್ದ ಯುವಕನೊಬ್ಬ ‘ನಾನಿನ್ನೂ ಬದುಕಿದ್ದೇನೆ, ನನ್ನನ್ನು ಕೊಲ್ಲಬೇಡಿ…’ ಎಂದು ಹೇಳಬೇಕಾಯಿತು. ಈ ರೀತಿ ಯಾರೇ ಸತ್ತರೂ ನಮ್ಮ ಕಾರ್ಯಕರ್ತರೆಂದು ಅವರು ಪ್ರತಿಪಾದನೆ ಮಾಡುತ್ತಾರೆ. ಇದೆಲ್ಲಾ ಬರೀ ಚುನಾವಣೆಗೋಸ್ಕರ ಅವರು ಮಾಡುತ್ತಿರುವುದು.

ಡೊನಾಲ್ಡ್: ಜನರಿಗೆ ವ್ಯತ್ಯಾಸ ತಿಳಿದಿದೆ..?!

ವಿ.ಕೆ. ಸೊರಕೆ: ಹೌದು. ಮೊನ್ನೆ ಗೃಹ ಸಚಿವರು ಕೊಲೆಯಾದ 22 ಜನರಲ್ಲಿ 10 ಜನರದ್ದು ವೈಯಕ್ತಿಕ ದ್ವೇಷಕ್ಕಾಗಿ ನಡೆದ ಕೊಲೆ ಎಂದು ಹೇಳಿಕೆ ಕೊಟ್ಟಿದ್ದಾರೆ. ವೈಯಕ್ತಿಕ ದ್ವೇಷಕ್ಕಾಗಿ ಸಮಾಜದಲ್ಲಿ ಕೊಲೆಗಳು ನಡೆಯುವುದಿದೆ…

ಡೊನಾಲ್ಡ್: ಅಂದರೆ ಬಿಜೆಪಿಯವರಲ್ಲಿ ಯಾವುದೇ ಬಂಡವಾಳವಿಲ್ಲ. ಅದಕ್ಕಾಗಿ ಇಂತಹ ಕ್ಷುಲ್ಲಕ ವಿಷಯಗಳನ್ನು ನೆಚ್ಚಿಕೊಳ್ಳುತ್ತಾರೆ..?

ವಿ.ಕೆ. ಸೊರಕೆ: ಅಧಿಕಾರ ಪಡೆಯುವುದಕ್ಕಾಗಿ ಭಾವನಾತ್ಮಕ ವಿಚಾರಗಳನ್ನು ಕೆರಳಿಸುವ ಪ್ರಯತ್ನ ಅವರದು.

ಡೊನಾಲ್ಡ್: ಬಿಜೆಪಿಯವರು ಹಿಂದೂ ಧರ್ಮವನ್ನು ಗುತ್ತಿಗೆ ಪಡೆದುಕೊಂಡಂತೆ ವರ್ತಿಸುತ್ತಿದ್ದಾರಲ್ಲಾ? ಉತ್ತರದಲ್ಲಿ ಹಲವು ಸನ್ಯಾಸಿಗಳು ಚುನಾವಣಾ ಕಣಕ್ಕೆ ಧುಮುಕಿದ್ದನ್ನು ನೋಡಿದ್ದೇವೆ. ಇದೀಗ ಕರ್ನಾಟಕದಲ್ಲೂ ಹಲವು ಸ್ವಾಮೀಜಿಗಳು ಬಿಜೆಪಿಯಿಂದ ಚುನಾವಣೆಯಲ್ಲಿ ಸ್ಪರ್ಧಿಸಲು ಉತ್ಸುಕರಾಗಿದ್ದಾರೆ. ಇದರಿಂದ ಹಿಂದೂ ಮತಗಳ ಧ್ರುವೀಕರಣ ನಡೆಯುವುದಿಲ್ಲವೆ?

ವಿ.ಕೆ. ಸೊರಕೆ: ಇಲ್ಲ. ಆ ರೀತಿ ಏನೂ ಇಲ್ಲ. ಎಲ್ಲರನ್ನೂ ಒಂದೇ ಪಟ್ಟಿಯಲ್ಲಿ ಸೇರಿಸಲು ಆಗುವುದಿಲ್ಲ. ಬಹಳಷ್ಟು ಸ್ವಾಮೀಜಿಗಳು ಪ್ರಾಮಾಣಿಕವಾಗಿ ಜನಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ…

ಡೊನಾಲ್ಡ್: ಕಾಂಗ್ರೆಸ್‍ನಿಂದಲೂ ಸ್ವಾಮೀಜಿಗಳು ಚುನಾವಣೆಗೆ ನಿಲ್ಲುವ ಸಾಧ್ಯತೆಯಿದೆಯೇ?

ವಿ.ಕೆ. ಸೊರಕೆ: ನಮಗೆ ಸ್ವಾಮೀಜಿಗಳ ಆಶೀರ್ವಾದ ಇದ್ದೇ ಇದೆ. ನಾವೂ ಕೂಡ ಧಾರ್ಮಿಕ ಕ್ಷೇತ್ರದಲ್ಲಿ ಸಾಕಷ್ಟು ತೊಡಗಿಸಿಕೊಂಡಿದ್ದೇವೆ. ನನ್ನ ಕ್ಷೇತ್ರದಲ್ಲಿ ಕಳೆದ ಅವಧಿಯಲ್ಲಿ ಸುಮಾರು 14 ದೇವಸ್ಥಾನಗಳ ಜೀರ್ಣೋದ್ಧಾರ ಆಗಿದೆ. ಇವತ್ತು ಎಲ್ಲಾ ದೇವಸ್ಥಾನಗಳ ಜೀರ್ಣೋದ್ಧಾರ ಕಾರ್ಯ ನಡೆಸಬೇಕೆಂಬ ಇಚ್ಛೆ ಭಕ್ತಾಭಿಮಾನಿಗಳಲ್ಲಿ ಮೂಡಿದೆ. ಅಂತಹ ಆತ್ಮವಿಶ್ವಾಸದ ವಾತಾವರಣವನ್ನು ನಾವು ಸೃಷ್ಟಿ ಮಾಡಿದ್ದೇವೆ. ಈ ವಾರ್ಷಿಕ ಅವಧಿಯಲ್ಲಿ ನನ್ನ ಶಾಸಕತ್ವದ ಅನುದಾನದಲ್ಲಿ 33 ದೇವಸ್ಥಾನಗಳ ಅಭಿವೃದ್ಧಿಗೆ ಹಣ ಮೀಸಲಿಟ್ಟಿದ್ದೇನೆ. ಬೇರೆ ಬೇರೆ ರೀತಿಯಿಂದ ದುಡ್ಡು ತರಿಸಿದ್ದೇನೆ. ಬಿಜೆಪಿಯವರಿಂದ ಸಾಧ್ಯವಾಗದಂತಹ ಅಭಿವೃದ್ಧಿ ಕೆಲಸ ಕಾರ್ಯಗಳನ್ನು ಕಳೆದ ಅವಧಿಯಲ್ಲಿ ಧಾರ್ಮಿಕ ಕ್ಷೇತ್ರದಲ್ಲಿ ನಾವು ಕಾಂಗ್ರೆಸ್‍ನವರು ಮಾಡಿದ್ದೇವೆ. ಎಲ್ಲಾ ಧರ್ಮದವರಿಗೂ ಕೂಡ ಗೌರವವನ್ನು ಕೊಟ್ಟು ನೆರವು, ಅಭಿವೃದ್ಧಿ ಕಾರ್ಯ ನಾವು ಮಾಡಿದ್ದೇವೆ.

ಡೊನಾಲ್ಡ್: ಕ್ರೈಸ್ತ ಧರ್ಮಕ್ಕೆ ವಿಶೇಷ ಕೊಡುಗೆ ಏನು?

ವಿ.ಕೆ. ಸೊರಕೆ: ನಮ್ಮ ಸಿದ್ಧರಾಮಯ್ಯನವರು ವರ್ಷಕ್ಕೆ 175 ಕೋಟಿ ರೂ. ಕ್ರೈಸ್ತರಿಗೆ ಕೊಟ್ಟಿದ್ದಾರೆ. ಅವಿಭಜಿತ ದ.ಕ. ಜಿಲ್ಲೆಯಲ್ಲಿ ಕ್ರೈಸ್ತರು ಸಾಕಷ್ಟು ಸಂಖ್ಯೆಯಲ್ಲಿದ್ದು, ಎಲ್ಲಾ ಚರ್ಚುಗಳಿಗೂ ಅಭಿವೃದ್ಧಿಯ ಪ್ರಸ್ತಾಪವನ್ನು ಕಳುಹಿಸಿ, ಸಾಕಷ್ಟು ಅನುದಾನ ಪಡೆಯುವ ಪ್ರಯತ್ನ ನಡೆದಿದೆ. ಕಾಪು ಕ್ಷೇತ್ರ ಸರ್ವಧರ್ಮೀಯರೂ ಅನ್ಯೋನ್ಯವಾಗಿರುವಂಥ ಕ್ಷೇತ್ರ.

ಡೊನಾಲ್ಡ್: ಬಿಜೆಪಿಯವರು ಕಾಂಗ್ರೆಸ್ ಪಕ್ಷವನ್ನು ಬರೀ ಅಲ್ಪಸಂಖ್ಯಾತರ, ಅದರಲ್ಲೂ ಮುಸ್ಲಿಮರ, ತುಷ್ಟೀಕರಣ ಮಾಡುತ್ತದೆ ಎಂದು ಆರೋಪಿಸುತ್ತಾರಲ್ಲಾ..?

ವಿ.ಕೆ. ಸೊರಕೆ: ಹಾಗೇನಿಲ್ಲ. ಮುಸುಲ್ಮಾನರಲ್ಲೂ ಧರ್ಮ ಸಹಿಷ್ಣುಗಳು ಬಹಳಷ್ಟು ಜನರಿದ್ದಾರೆ. ಯಾರೋ ಕೆಲ ವ್ಯಕ್ತಿಗಳು ಮಾಡಿದ ತಪ್ಪಿಗಾಗಿ ಇಡೀ ಸಮಾಜವನ್ನು ದೂರುವುದು ಸರಿಯಲ್ಲ. ನಾನು ಹಿಂದೂ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತೇನೆ. ನೇಮ, ಪೂಜೆ, ಭಜನೆಗಳಿಗೆ ಹೋಗುತ್ತೇನೆ. ಕ್ರಿಸ್ಮಸ್ ಸಂದರ್ಭದಲ್ಲಿ ಚರ್ಚುಗಳಿಗೆ ಭೇಟಿ ನೀಡಿ ಶುಭಾಶಯ ಸಲ್ಲಿಸುತ್ತೇನೆ. ಅದೇ ರೀತಿ ಮುಸ್ಲಿಮರ ಕಾರ್ಯಗಳಲ್ಲೂ ಭಾಗವಹಿಸುತ್ತೇನೆ. ತುಷ್ಟೀಕರಣದ ಪ್ರಶ್ನೆಯೇ ಇಲ್ಲ. ನಾವು ಎಲ್ಲ ಧರ್ಮೀಯರನ್ನೂ ಗೌರವಿಸುತ್ತೇವೆ. ನಮ್ಮ ಧರ್ಮವನ್ನು ನಾವು ನಂಬುತ್ತೇವೆ. ಅದೇ ರೀತಿ ಇನ್ನೊಂದು ಧರ್ಮವನ್ನೂ ಗೌರವಿಸುತ್ತೇವೆ.

ಕಾಂಗ್ರೆಸ್ ಮುಕ್ತವಲ್ಲ… ಸಶಕ್ತವಾಗುತ್ತಿದೆ ಕಾಂಗ್ರೆಸ್ ಪಕ್ಷ!

ಡೊನಾಲ್ಡ್: ಬಿಜೆಪಿಯವರು ಕಾಂಗ್ರೆಸ್ ಮುಕ್ತ ಭಾರತ ಎಂದು ಹೇಳುತ್ತಾ ಬಂದಿದ್ದರು. ಆದರೆ ಬಿಜೆಪಿಯವರಿಗೇ ಕಾಂಗ್ರೆಸ್‍ನಿಂದ ಮುಕ್ತಿ ಹೊಂದಲು ಸಾಧ್ಯವಾಗುತ್ತಿಲ್ಲ, ಅವರ ಬಾಯಿಯಲ್ಲಿ ಬರೀ ಕಾಂಗ್ರೆಸ್‍ನದ್ದೇ ಮಾತು!

ವಿ.ಕೆ. ಸೊರಕೆ: ಆರೆಸ್ಸೆಸ್ ಮುಖಂಡ ಭಾಗವತ್ ಅವರೇ ‘ಕಾಂಗ್ರೆಸ್ ಮುಕ್ತ’ ಚಿಂತನೆ ತಮ್ಮದಲ್ಲ ಎಂದು ಸ್ಪಷ್ಟಪಡಿಸಿದ್ದಾರಲ್ಲಾ.

ಡೊನಾಲ್ಡ್: ಬಿಜೆಪಿಯವರು ಅದೇ ಮಾತನ್ನು ಹೇಳುತ್ತಾ ಇರ್ತಾರೆ..!

ವಿ.ಕೆ. ಸೊರಕೆ: ಆರೆಸ್ಸೆಸ್‍ನವರು ಹೇಳಿದ ಮೇಲೆ ಮುಗಿಯತಲ್ಲಾ. ಆರೆಸ್ಸೆಸ್‍ನ ಪ್ರಮುಖರು ಹೇಳಿದ ನಂತರ ಇವರು ಬಾಯಿ ತೆರೆಯಲಿಕ್ಕಿಲ್ಲವಲ್ಲಾ!

ಡೊನಾಲ್ಡ್: ಯಾಕೆ? ಅವರಿಗೆ ಈಗ ಭಯ ಶುರುವಾಗಿದೆಯಾ?

ವಿ.ಕೆ. ಸೊರಕೆ: ಹಾಗಲ್ಲ. ಈಗ ವಾತಾವರಣ ಬದಲಾಗುತ್ತಿದೆ. ನಾವು ಅಟಲ್ ಬಿಹಾರಿ ವಾಜಪೇಯಿಯವರ ಆಡಳಿತವನ್ನು ನೋಡಿದ್ದೇವೆ. ಅವರು ವಿರೋಧ ಪಕ್ಷದ ನಾಯಕರಾಗಿದ್ದವರು. ಪಾಕಿಸ್ತಾನದ ಜೊತೆ ಯುದ್ಧ ನಡೆದು ಬಾಂಗ್ಲಾ ದೇಶವನ್ನು ವಿಭಜನೆ ಮಾಡಿದಾಗ, ವಾಜಪೇಯಿಯವರೇ ಪಾರ್ಲಿಮೆಂಟ್‍ನಲ್ಲಿ ಅಂದಿನ ಪ್ರಧಾನಿ ಇಂದಿರಾ ಗಾಂಧಿಯವರನ್ನು ಈ ದೇಶದ ದುರ್ಗಾ ದೇವಿ ಎಂದು ಹೇಳಿದ್ದಾರೆ. ವಾಜಪೇಯಿಯವರು ಪ್ರಧಾನಿಯಾಗಿದ್ದಾಗ ನಾನು ಲೋಕಸಭಾ ಸದಸ್ಯನಾಗಿದ್ದೆ. ಅವರು ಅನೇಕ ಕಾರ್ಯಕ್ರಮಗಳನ್ನು ಅನುಷ್ಠಾನಕ್ಕೆ ತಂದಿದ್ದಾರೆ. ಆದರೆ ಮೋದಿಯವರು ಹಿಂದಿನ 60 ವರ್ಷಗಳಲ್ಲಿ ಏನೇನೂ ಆಗಿಲ್ಲ, ಎಲ್ಲವನ್ನೂ ತಾನು ಅಧಿಕಾರಕ್ಕೆ ಬಂದ ನಂತರ ಮಾಡಿದ್ದು ಎಂಬಂತೆ ಮಾತನಾಡುತ್ತಾರೆ. ಅವರು ಮಾಡಿದ್ದು ಬರೀ ಜನ ವಿರೋಧಿ ಕಾರ್ಯಗಳು – ನೋಟ್‍ಬಂಧಿ, ಜಿಎಸ್‍ಟಿ ಇತ್ಯಾದಿ. ಅವರು ಜನರಿಗೆ ಕೊಟ್ಟಂತಹ ಒಂದೂ ಆಶ್ವಾಸನೆಯನ್ನೂ ಈಡೇರಿಸಿಲ್ಲ. ಕಪ್ಪು ಹಣ ತರುತ್ತೇನೆ, ಪ್ರತಿಯೊಬ್ಬರಿಗೂ 15 ಲಕ್ಷ ಕೊಡುತ್ತೇನೆ ಎಂಬಿತ್ಯಾದಿ ಹೇಳಿದ್ದಷ್ಟೇ ಬಂತು. ಜನಧನ್ ಕಾರ್ಯಕ್ರಮ ವಿಫಲವಾಗಿದೆ. ಜನರಿಗೆ ಉದ್ಯೋಗ ಕೊಡುತ್ತೇವೆ ಎಂದಿದ್ದು ಈಡೇರಿಲ್ಲ. ಆಧಾರನ್ನು ನಿರಾಧಾರ್ ಮಾಡುತ್ತೇನೆ ಎಂದಿದ್ದರು. ಇವತ್ತು ಆಧಾರ್ ಇಲ್ಲದೇ ಯಾವುದೇ ಯೋಜನೆ ಇಲ್ಲ…

ಡೊನಾಲ್ಡ್: ಯೂಟರ್ನ್ ಸರಕಾರ..?

ವಿ.ಕೆ. ಸೊರಕೆ: ಹೌದು. ಈ ರೀತಿ ಅವರು ಕೊಟ್ಟಂತಹ ಯಾವುದೇ ಆಶ್ವಾಸನೆ ಈಡೇರಿಸಿಲ್ಲ. 4 ವರ್ಷ ಕಳೆದು ಮುಂದಿನ ಚುನಾವಣೆ ಹತ್ತಿರ ಬಂದಿದೆ. ಜಿಡಿಪಿ ಕೆಳಗಿಳಿದಿದೆ. ಜನರು ಉದ್ಯೋಗ ಕಳೆದುಕೊಂಡಿದ್ದಾರೆ. ರೈತರು ಆತ್ಮಹತ್ಯೆ ಮಾಡಿಕೊಳ್ತಿದ್ದಾರೆ. ಯುಪಿಎ ಸರಕಾರ 72,000 ಕೋ.ರೂ. ಸಾಲ ಮನ್ನಾ ಮಾಡಿದೆ. ನಾವಿಲ್ಲಿ ರಾಜ್ಯ ಸರಕಾರದಿಂದ ಸಹಕಾರಿ ಬ್ಯಾಂಕ್‍ಗಳಲ್ಲಿನ ಸಾಲ ಮನ್ನಾ ಮಾಡಿದ್ದೇವೆ. ಕೇಂದ್ರ ಸರಕಾರದ ಬಳಿ ರೈತರ ಸಾಲ ಮನ್ನಾ ಮಾಡಿ ಎಂದು ಕೇಳಿದ್ರೆ, ದೊಡ್ಡ ಉದ್ಯಮಿಗಳ 11,500 ಲಕ್ಷ ಕೋಟಿ ರೂ. ಸಾಲ ಮನ್ನಾ ಮಾಡ್ತಾರೆ. ಬ್ಯಾಂಕುಗಳಿಗೆ ಸಾವಿರಾರು ಕೋಟಿ ರೂ. ಸಾಲ ಪಡೆದು ವಿದೇಶಗಳಲ್ಲಿ ಕೂತಿದ್ದಾರೆ, ಅವರನ್ನು ಹಿಡಿಯುವ ಶಕ್ತಿ ಈ ಸರಕಾರಕ್ಕೆ ಇಲ್ಲ. ಸೇನಾಧಿಕಾರಿಗಳು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಉಗ್ರಗಾಮಿಗಳು ಬಂಕರ್‍ಗಳಿಗೆ ನುಗ್ಗಿ ನಮ್ಮ ಸೈನಿಕರ ಹತ್ಯೆಗೈಯುತ್ತಿದ್ದಾರೆ…

ಡೊನಾಲ್ಡ್: ಹಾಗಾದ್ರೆ ಮೋದಿ ಮತ್ತು ಬಿಜೆಪಿಯವರದ್ದು ಬರೀ ಬಾಯಿ ಮಾತು ಮಾತ್ರ..?

ವಿ.ಕೆ. ಸೊರಕೆ: ಬರೀ ಭಾಷಣ ಮಾತ್ರ. ಭಾಷಣದಿಂದ ಹೊಟ್ಟೆ ತುಂಬುತ್ತದೆಯೇ? ಭಾಷಣ, ಆಶ್ವಾಸನೆ ಬಿಟ್ಟರೆ ಬೇರೇನಾದ್ರೂ ಉಂಟಾ? ಜ್ವಲಂತ ಸಮಸ್ಯೆಗಳಾದ ಮಹದಾಯಿ ನೀರಿನ ಸಮಸ್ಯೆ, ಕಾವೇರಿ ಸಮಸ್ಯೆ ಸೇರಿದಂತೆ ಬಹಳಷ್ಟು ನೆಲ ಜಲ ಸಂಪತ್ತಿನ ಸಮಸ್ಯೆಗಳಿವೆ. ಯಾವುದಾದರೂ ಒಂದು ವಿಷಯದ ಬಗ್ಗೆ ಬಿಜೆಪಿಯವರು ಮಾತನಾಡುತ್ತಾರಾ? ಪ್ರಧಾನಿ ನರೇಂದ್ರ ಮೋದಿ, ಅಮಿತ್ ಶಾ ಇಲ್ಲಿ ಬಂದಾಗ ಇಂತಹ ಸಮಸ್ಯೆಗಳ ಬಗ್ಗೆ ಮಾತನಾಡುತ್ತಾರಾ? ಇಲ್ಲವೇ ಇಲ್ಲ.

ಡೊನಾಲ್ಡ್: ರಾಹುಲ್ ಗಾಂಧಿ ಕಾಂಗ್ರೆಸ್ ಅಧ್ಯಕ್ಷರಾಗಿದ್ದಾರೆ. ಕಾಂಗ್ರೆಸ್ ಪಕ್ಷ ಮತ್ತೆ ಸಶಕ್ತವಾಗುತ್ತಿದೆಯೇ? ಇಲ್ಲಿಯವರೆಗೆ ಹೆಚ್ಚಾಗಿ ಕಂಡದ್ದು ಬರೀ ಸರಣೀ ಸೋಲುಗಳೇ..!

ವಿ.ಕೆ. ಸೊರಕೆ: ರಾಹುಲ್ ಗಾಂಧಿಯವರು ಅಧ್ಯಕ್ಷರಾಗುವ ಸಂದರ್ಭದಲ್ಲಿ ಗುಜರಾತ್‍ನಲ್ಲಿ ಚುನಾವಣೆ ನಡೆಯುತ್ತಿತ್ತು. ಕೇಂದ್ರದಲ್ಲಿ ಮತ್ತು ಅಲ್ಲಿ ರಾಜ್ಯದಲ್ಲಿ ಬಿಜೆಪಿಯವರದ್ದೇ ಸರಕಾರವಿತ್ತು. ಕೇಂದ್ರದ ಇಡೀ ಕ್ಯಾಬಿನೆಟ್ ಅಲ್ಲಿ ಬಂದು ಕೂತಿತ್ತು. ಎಲ್ಲಾ ರೀತಿಯ ಅಧಿಕಾರ ದುರುಪಯೋಗ ಮಾಡಿಕೊಂಡು ಚುನಾವಣೆ ನಡೆಸಿದ್ರು. ಆದರೂ ನಾವು ಬರೀ 9 ಸೀಟುಗಳಿಗೆ ಸೋಲಬೇಕಾಯಿತು. 19 ಸ್ಥಾನಗಳಲ್ಲಿ ತುಂಬಾ ಕಡಿಮೆ ಅಂತರದಲ್ಲಿ ನಮಗೆ ಸೋಲಾಯಿತು. ಕಾಂಗ್ರೆಸ್ ಬಲವರ್ಧನೆಯಾಯಿತು. ಅದೇ ರೀತಿ ರಾಜಸ್ಥಾನ, ಮಧ್ಯಪ್ರದೇಶಗಳಲ್ಲಿ ಉಪ ಚುನಾವಣೆಗಳಲ್ಲಿ ನಾವು ಗೆದ್ದೆವು. ಕೆಲವು ಕಡೆ ಬಿಜೆಪಿಗೆ ಠೇವಣಿಯೂ ಉಳಿಯಲಿಲ್ಲ. ಇತ್ತೀಚೆಗೆ ಉತ್ತರ ಪ್ರದೇಶದಲ್ಲಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮತ್ತು ಉಪ ಮುಖ್ಯಮಂತ್ರಿಗಳು ಪ್ರತಿನಿಧಿಸುತ್ತಿದ್ದ ಸ್ಥಾನಗಳಲ್ಲಿ ಬಿಜೆಪಿಗೆ ಮುಖಭಂಗವಾಗಿದೆ. ಯೋಗಿ ಆದಿತ್ಯನಾಥ್ ಇಲ್ಲಿಗೆ ಬಂದು ಪ್ರಚಾರ ನಡೆಸುತ್ತಾರೆ, ಆದರೆ ಅವರ ಸ್ವಕ್ಷೇತ್ರದಲ್ಲಿಯೇ ಬಿಜೆಪಿ ಸೋತಿದೆ. ಬಿಹಾರದಲ್ಲೂ ಅವರಿಗೆ ಸೋಲಾಗಿದೆ. ಎಲ್ಲೆಡೆ ವಾತಾವರಣ ಬದಲಾಗುತ್ತಿದೆ. ಮೂರು ರಾಜ್ಯಗಳಲ್ಲಿ ಚುನಾವಣೆ ಹತ್ತಿರವಾಗಿದೆ – ಮಧ್ಯಪ್ರದೇಶ, ರಾಜಸ್ಥಾನ, ಛತ್ತೀಸ್‍ಗಡ – ಈ ಮೂರೂ ರಾಜ್ಯಗಳಲ್ಲಿ ಕಾಂಗ್ರೆಸ್ ಪಕ್ಷವೇ ಅಧಿಕಾರಕ್ಕೇರುವುದು ಖಚಿತ. ರಾಹುಲ್ ಗಾಂಧಿಯವರ ನೇತೃತ್ವದಲ್ಲಿ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಗೆಲ್ಲುವುದು ಖಂಡಿತ. ರಾಹುಲ್ ಗಾಂಧಿಯವರು ಈ ದೇಶದ ಪ್ರಧಾನಿಯಾಗುತ್ತಾರೆ.

ಡೊನಾಲ್ಡ್: ಕಾಂಗ್ರೆಸ್ ಪಕ್ಷದಲ್ಲಿ ಸಾಕಷ್ಟು ಬದಲಾವಣೆ ಕಂಡು ಬರುತ್ತಿದೆ. ಹಿಂದೆ ಹೇಗಿದ್ರೂ ಗೆದ್ದೇ ಗೆಲ್ಲುತ್ತೇವೆ (ಚಲ್ತಾ ಹೈ) ಎಂಬ ಧೋರಣೆಯಿತ್ತು. ಈಗ ಗೆಲುವಿಗಾಗಿ ಶ್ರಮಿಸಬೇಕಾದ ಅನಿವಾರ್ಯತೆ ಅರ್ಥವಾದಂತೆ ಗೋಚರವಾಗುತ್ತಿದೆ. ಹಿಂದಿನ ಕಾಂಗ್ರೆಸ್ಸಿಗೂ ಈಗಿನ ಕಾಂಗ್ರೆಸ್ಸಿಗೂ ವ್ಯತ್ಯಾಸವಿದ್ದಂತಿದೆ…

ವಿ.ಕೆ. ಸೊರಕೆ: ನೋಡಿ, ಸೋನಿಯಾ ಗಾಂಧಿಯವರು ರಾಜಕೀಯಕ್ಕೆ ಬರಲು ಇಚ್ಛಿಸಿದವರಲ್ಲ. ಅನೇಕ ಕಾಂಗ್ರೆಸ್ ಮುಖಂಡರು ಅವರನ್ನು ಕೇಳಿಕೊಂಡಾಗ ಅವರು ಕಾಂಗ್ರೆಸ್ ಪಕ್ಷದ ಮುಖ್ಯಸ್ಥರಾದರು. ಆ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷ ಬಹಳಷ್ಟು ಹಿನ್ನಡೆ ಅನುಭವಿಸಿತ್ತು. ಸೋನಿಯಾ ಗಾಂಧಿಯವರ ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷ ಮತ್ತೆ ಬಲಿಷ್ಠವಾಗಿ ಕೇಂದ್ರದಲ್ಲಿ, ಅನೇಕ ರಾಜ್ಯಗಳಲ್ಲಿ ಮರಳಿ ಅಧಿಕಾರಕ್ಕೆ ಬಂದಿತು. ಕೇಂದ್ರದಲ್ಲಿ 10 ವರ್ಷ ಪ್ರಗತಿಪರವಾದ ಸರಕಾರ ನೀಡಿದ್ದೇವೆ. ಅವರಿಗೀಗ ಆರೋಗ್ಯದಲ್ಲಿ ಸಮಸ್ಯೆಯಿರುವುದರಿಂದ ರಾಹುಲ್ ಗಾಂಧಿಯವರು ಕಾಂಗ್ರೆಸ್‍ನ ನೇತೃತ್ವ ವಹಿಸಿ ಜವಾಬ್ದಾರಿಯನ್ನು ಹೊತ್ತಿದ್ದಾರೆ. ಅವರಿಗೂ ಅನೇಕ ವರ್ಷಗಳ ಅನುಭವವಿದೆ. ಕಾಂಗ್ರೆಸ್‍ನಲ್ಲಿ ಹೊಸ ಪರಿವರ್ತನೆ, ಸಂಘಟನೆಯಲ್ಲಿ ಸುಧಾರಣೆಯನ್ನು ರಾಹುಲ್ ಗಾಂಧಿಯವರು ತರುತ್ತಿದ್ದಾರೆ.

ಸಂದರ್ಶನ: ಡೊನಾಲ್ಡ್ ಪಿರೇರಾ ಬೆಳ್ತಂಗಡಿ
Feedback: info.janavahini@gmail.com

Visit & Like our Page – www.facebook.com/janavahini

Like us on facebook

Leave a Reply

Your email address will not be published. Required fields are marked *

*

code

LATEST NEWS