ಟಿಪ್ಪುವಿನಿಂದ ಧರೆಗುರುಳಿಸಲ್ಪಟ್ಟ ಆ 25 ಚರ್ಚುಗಳು ಮತ್ತು ಆತ ನಡೆಸಿದ ಕರಾಳ ಹತ್ಯಾಕಾಂಡದ ವಿವರ

Published on: Friday, November 10th, 2017,9:53 pm

ಲೇಖನ: ಡೊನಾಲ್ಡ್ ಪಿರೇರಾ ಬೆಳ್ತಂಗಡಿ

(ಭಾಗ: 2)

ಟಿಪ್ಪು ಸುಲ್ತಾನನು 1784ರಲ್ಲಿ, ಅಂದರೆ ರಾಜನಾಗಿ ಅಧಿಕಾರಕ್ಕೇರಿದ ಒಂದೇ ವರ್ಷದಲ್ಲಿ ಮಂಗಳೂರು ಸೇರಿದಂತೆ ಸಮಸ್ತ ಕರಾವಳಿ ಭಾಗದ ಕ್ರೈಸ್ತರನ್ನು ದಮನಿಸಲು, ನಾಶಪಡಿಸಲು ಮತ್ತು ತನ್ನ ಸುಪರ್ದಿಯಲ್ಲಿಡಲು ಯೋಜನೆ ರೂಪಿಸಿದ. ಅದರ ಪರಿಣಾಮವಾಗಿ ಕನಸು ಮನಸಿನಲ್ಲೂ ಊಹಿಸದ ಕರಾಳ ಯುಗವನ್ನು ಕರಾವಳಿಯ ಕ್ರೈಸ್ತರು ಕಾಣಬೇಕಾಗಿದ್ದಷ್ಟೇ ಅಲ್ಲದೆ, ಭೀಕರ ಕ್ರೌರ್ಯ, ಹಿಂಸೆ, ಕಷ್ಟ ನಷ್ಟಗಳಿಗೆ ಒಳಗಾಗಬೇಕಾಯಿತು.

ವಿಶೇಷವೆಂದರೆ ಅಂದು ಸಾಮಾನ್ಯರಲ್ಲಿ ಸಾಮಾನ್ಯರಾಗಿ ಬದುಕು ಸಾಗಿಸುತ್ತಿದ್ದ ಸಹಸ್ರಾರು ಕ್ರೈಸ್ತರನ್ನೇ ಅವರು ಕನಸು ಮನಸಿನಲ್ಲಿಯೂ ಊಹಿಸದ ಅಪರಾಧಗಳಿಗಾಗಿ ಭೀಕರವಾಗಿ ಶಿಕ್ಷಿಸಲಾಗಿತ್ತು. ಮಂಗಳೂರು ಪಟ್ಟಣದ ಕೆಲವೇ ಕೆಲವು ಶ್ರೀಮಂತ ಮನೆತನದ ಕ್ರೈಸ್ತರು ಟಿಪ್ಪುವಿನ ವಿರುದ್ಧ ಬ್ರಿಟಿಷರ ಪರವಾಗಿ ವರ್ತಿಸಿರಬಹುದು. ಒಂದು ವೇಳೆ ಹಾಗೆ ನಡೆದಿದ್ದೇ ಆಗಿದ್ದಲ್ಲಿ ತಪ್ಪಿತಸ್ಥರನ್ನು ಮಾತ್ರ ಶಿಕ್ಷಿಸಬೇಕಾಗಿತ್ತು. ಆದರೆ ತಮ್ಮಷ್ಟಕ್ಕೆ ತಾವಾಯಿತು ತಮ್ಮ ದುಡಿಮೆಯಾಯಿತು ಎಂಬಂತೆ ಜೀವಿಸುತ್ತಿದ್ದ ಬಹುತೇಕ ಹಳ್ಳಿಗಳಲ್ಲಿ ವಾಸಿಸುತ್ತಿದ್ದ ಕೃಷಿಕರೆಲ್ಲರನ್ನೂ ಬಂಧಿಸಿ ಅತ್ಯಂತ ಬರ್ಬರವಾಗಿ ನಡೆಸಿಕೊಂಡು ಶ್ರೀರಂಗಪಟ್ಟಣಕ್ಕೆ ಕರೆದೊಯ್ಯಲಾಯಿತು. ಈ ಹಾದಿಯಲ್ಲಿ ಮೂರನೇ ಎರಡರಷ್ಟು ಜನರ ಹರಣವಾಗಿತ್ತು.

Milagres Church Mangaluru 2

ಟಿಪ್ಪುವಿನ ಕ್ರೌರ್ಯ, ಅಸಹಿಷ್ಣುತೆಗೆ ಸಾಕ್ಷಿಯೆಂಬಂತೆ ಕ್ರೈಸ್ತರೆಲ್ಲರನ್ನೂ ಕರಾವಳಿಯಿಂದ ತೆರವುಗೊಳಿಸಿದ ಕೂಡಲೇ ಇಲ್ಲಿದ್ದ ಚರ್ಚುಗಳೆಲ್ಲವನ್ನೂ ನಾಶಗೊಳಿಸಲಾಯಿತು. ಆಗಿನ ಕಾಲದಲ್ಲಿ ಅಂದರೆ 1784ರ ಹೊತ್ತಿಗೆ ಕರಾವಳಿ ಪ್ರದೇಶದಲ್ಲಿ 27 ಚರ್ಚುಗಳು ತಲೆಯೆತ್ತಿ ನಿಂತಿದ್ದವು. ಆ 27 ಚರ್ಚುಗಳಲ್ಲಿ ಬಹುತೇಕ ಈಗಿನ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ವ್ಯಾಪ್ತಿಯಲ್ಲಿದ್ದರೆ ಕೆಲವು ನೆರೆಯ ಮಲಬಾರ್, ಉತ್ತರ ಕನ್ನಡದ ಆಸುಪಾಸಿನಲ್ಲಿದ್ದವು.

ಆ 27 ಚರ್ಚುಗಳಲ್ಲಿ ಫರಂಗಿಪೇಟೆಯ ನೇತ್ರಾವತಿ ನದಿ ಬದಿಯ ಗುಡ್ಡೆಯಲ್ಲಿದ್ದ ಮೊಂತೆ ಮಾರಿಯಾನೊ ಪ್ರಾರ್ಥನಾ ಮಂದಿರವೂ ಸೇರಿತ್ತು. ಇದು ಅಧಿಕೃತ ಚರ್ಚ್ ಆಗಿರದೆ ಪಾದರಿಯಾಗುವ ವಿದ್ಯಾರ್ಥಿಗಳ ತರಬೇತಿ ಶಾಲೆಯಾಗಿತ್ತು (ಸೆಮಿನರಿ). ಅವರಿಗಾಗಿಯೇ ಅಲ್ಲೊಂದು ಚರ್ಚ್ ಕೂಡಾ ಇತ್ತು. ಇನ್ನೊಂದು ವಿಶೇಷವೇನೆಂದರೆ, ಈ ಮಂದಿರದ ಮುಖ್ಯಸ್ಥರಾಗಿದ್ದ ಫಾದರ್ ಜೋಕಿಂ ಮಿರಾಂದಾರವರು ಹೈದರಾಲಿಯ ಆಪ್ತ ಸ್ನೇಹಿತರಾಗಿದ್ದರು ಮತ್ತು ಅವರ ಬಗ್ಗೆ ಹೈದರಾಲಿಗೆ ಬಹಳ ಗೌರವ, ಆದರವಿತ್ತು. ಆದರೆ ಅವನ ಮಗ ಟಿಪ್ಪು ಮಾತ್ರ ಅದಕ್ಕೆ ತದ್ವಿರುದ್ಧನಾಗಿದ್ದ.

ವ್ಯವಸ್ಥಿತ ಸಂಚು ಹೂಡಿ ಕ್ರೈಸ್ತರನ್ನು ನಿಬ್ಬೆರಗಾಗುವ ರೀತಿಯಲ್ಲಿ ಬಂಧಿಸಿ ಕರಾವಳಿಯಾದ್ಯಂತದಿಂದ ನಿವಾರಿಸುವ ಯೋಜನೆಯ ಜೊತೆಗೆ ಅಲ್ಲಿದ್ದ ಎಲ್ಲಾ ಚರ್ಚುಗಳನ್ನು ಕೆಡವಲು ಆಜ್ಞೆ ಹೊರಡಿಸಲಾಗಿತ್ತು. ಸದ್ಯ ಆಗಿನ ಕಾಲದಲ್ಲಿದ್ದ ಚರ್ಚುಗಳು ಯಾವುವು ಎಂಬುದನ್ನು ನೋಡೋಣ.

1. ರೊಸಾರಿಯೊ ಚರ್ಚ್, ಮಂಗಳೂರು, ಸ್ಥಾಪನೆ – 1568
2. ಮಾತೆ ಮರಿಯಳ ಚರ್ಚ್, ಉಳ್ಳಾಲ, ಸ್ಥಾಪನೆ – 1568
3. ಸಂತ ಫ್ರಾನ್ಸಿಸ್ ಆಸ್ಸಿಸಿ ಚರ್ಚ್, ಒಮ್ಜೂರ್ (ಅರ್ಕುಳ), ಸ್ಥಾಪನೆ – 1568 (ಈ ಚರ್ಚ್ 1623ರಲ್ಲಿ ಬಂಗರಾಯರಿಂದ ನೀಡಲ್ಪಟ್ಟ ಜಾಗಕ್ಕೆ ಸ್ಥಳಾಂತರವಾಗಿ, ಹೋಲಿ ಫ್ಯಾಮಿಲಿ ಚರ್ಚ್ ಆಗಿ ಬದಲಾಯಿತು)
4. ರೊಸಾರಿಯೊ ಚರ್ಚ್, ಕುಂದಾಪುರ, ಸ್ಥಾಪನೆ – 1570
5. ಮಾತೆ ಮರಿಯಳ ಚರ್ಚ್, ಗಂಗೊಳ್ಳಿ, ಸ್ಥಾಪನೆ – 1630
6. ಮಿಲಾಗ್ರಿಸ್ ಚರ್ಚ್, ಮಂಗಳೂರು, ಸ್ಥಾಪನೆ – 1680
7. ಮಿಲಾಗ್ರಿಸ್ ಚರ್ಚ್, ಕಲ್ಯಾಣಪುರ, ಉಡುಪಿ, ಸ್ಥಾಪನೆ – 1680
8. ಸಂತ ಜೋಸೆಫ್ ಚರ್ಚ್, ಪೇಜಾವರ, ಸ್ಥಾಪನೆ – 1680
9. ಹೋಲಿ ರಿಡೀಮರ್ ಚರ್ಚ್, ಆಗ್ರಾರ್, ಸ್ಥಾಪನೆ – 1702
10. ಬಾಲ ಯೇಸು ಚರ್ಚ್, ಬಂಟ್ವಾಳ, ಸ್ಥಾಪನೆ – 1702
11. ರೆಮೆದಿಯಮ್ಮನ ಚರ್ಚ್, ಕಿರೆಂ (ಐಕಳ), ಸ್ಥಾಪನೆ – 1740
12. ಆರೋಗ್ಯ ಮಾತೆಯ ಚರ್ಚ್, ಶಿರ್ವಾ, ಸ್ಥಾಪನೆ – 1750
13. ಸಂತ ಲಾರೆನ್ಸ್ ಚರ್ಚ್, ಅತ್ತೂರು, ಕಾರ್ಕಳ, ಸ್ಥಾಪನೆ – 1759
14. ಹೋಲಿ ಕ್ರಾಸ್ ಚರ್ಚ್, ಹೊಸ್ಪೆಟ್, ಮೂಡಬಿದ್ರಿ, ಸ್ಥಾಪನೆ – 1761
15. ಮೋಂತೆ ಮರಿಯಾನೊ ಚರ್ಚ್, ಫರಂಗಿಪೇಟೆ, ಸ್ಥಾಪನೆ – 1774 (ಅಂದಾಜು)
16. ಹೋಲಿ ಕ್ರಾಸ್ ಚರ್ಚ್, ಬೈಂದೂರು, ಸ್ಥಾಪನೆ – 1783
17. ದೇವರ ಮಾತೆ ಚರ್ಚ್, ಮೊಗರ್ನಾಡು, ಸ್ಥಾಪನೆ – 1783
18. ಮಾತೆ ಮರಿಯಮ್ಮನವರ ಚರ್ಚ್, ಮೂಲ್ಕಿ, ಸ್ಥಾಪನೆ – 1783
19. ಸಂತ ಪೀಟರ್ ಚರ್ಚ್, ಬಾರ್ಕೂರು, ಸ್ಥಾಪನೆ – 1783

ಉಳಿದ ಎಂಟು ಚರ್ಚ್‍ಗಳು ಉತ್ತರ ಕನ್ನಡ ಹಾಗೂ ಮಲಬಾರ್ ಮುಂತಾದ ಕಡೆಗಳಲ್ಲಿದ್ದವು. ಈ ಎಲ್ಲಾ ಚರ್ಚ್‍ಗಳು ಟಿಪ್ಪು ಸುಲ್ತಾನನ ರಾಜ್ಯಭಾರ ಪ್ರಾರಂಭವಾಗುವ ಮೊದಲೇ ಅಸ್ತಿತ್ವದಲ್ಲಿದ್ದ ಚರ್ಚ್‍ಗಳು.

River Coast

ಕುತೂಹಲದ ಸಂಗತಿಯೆಂದರೆ ಅಷ್ಟೊಂದು ಕ್ರೈಸ್ತರನ್ನು ಏಕಕಾಲದಲ್ಲಿ ಹೇಗೆ ಸೆರೆ ಹಿಡಿದರೆಂಬ ಸಂಗತಿ. ಇದರಲ್ಲಿ ಆಶ್ಚರ್ಯಪಡುವಂಥದ್ದೇನಿಲ್ಲ. ಕ್ರೈಸ್ತರು ತುಂಬಾ ಆಳವಾದ ಧಾರ್ಮಿಕ ನಂಬಿಕೆಯವರು. ಆ ಕಾಲದಲ್ಲಿನ ಕ್ರೈಸ್ತರ ಧಾರ್ಮಿಕ ಶ್ರದ್ಧೆ ಅಪಾರವಾದುದಾಗಿತ್ತು. ಕಾಲ್ನಡಿಗೆಯಲ್ಲಿಯೇ ಮೈಲುಗಟ್ಟಲೆ ದೂರವನ್ನು ಕ್ರಮಿಸಿ ಭಾನುವಾರದ ಪೂಜೆ ಮತ್ತು ಹಬ್ಬಗಳ ಪೂಜೆಗಾಗಿ ಚರ್ಚಿಗೆ ಆಗಮಿಸುತ್ತಿದ್ದರು. ಅತಿ ದೂರದವರು ಹಿಂದಿನ ದಿನವೇ ಸಾಯಂಕಾಲದೊಳಗೆ ಬಂದು ತಂಗುತ್ತಿದ್ದರು.

ಬೇಸಿಗೆ ಆರಂಭವಾಗುವ ಹೊತ್ತಿಗೆ ಕ್ರೈಸ್ತರಿಗೆ ಬಹು ಮುಖ್ಯವಾದ ಕಪ್ಪು ದಿನಗಳು (ಲೆಂಟ್) ಆರಂಭವಾಗುತ್ತವೆ. ಯೇಸುಕ್ರಿಸ್ತರ ಮರಣ ಮತ್ತು ಪುನರುತ್ಥಾನದ ಆಚರಣೆಯ ಹಬ್ಬಕ್ಕೆ ತಯಾರಿಯಾಗಿ ಉಪವಾಸ, ತ್ಯಾಗ ಭಕ್ತಿಯ 40 ದಿನಗಳ ಕಾಲ ವಿಶೇಷ ಅವಧಿಯನ್ನಾಚರಿಸಲಾಗುತ್ತದೆ. ಅದರ ಆರಂಭ Ash Wednesday ದಿನದಿಂದ, ಅಂದರೆ ಬುಧವಾರದಿಂದ ಪ್ರಾರಂಭಿಸಲಾಗುತ್ತದೆ. ಆ ದಿನ ತೀರಾ ಅಶಕ್ಯರನ್ನು ಹೊರತು ಎಲ್ಲರೂ ಚರ್ಚಿಗೆ ಆಗಮಿಸಿ ಪವಿತ್ರ ಪೂಜಾವಿಧಿಯಲ್ಲಿ ಪಾಲ್ಗೊಳ್ಳುತ್ತಾರೆ.

ಟಿಪ್ಪು ಸುಲ್ತಾನನು ಈ ದಿನವನ್ನೇ ತನ್ನ ಪೈಶಾಚಿಕ ಯೋಜನೆಗಾಗಿ ಆಯ್ದುಕೊಂಡಿದ್ದ. ದೂರ ದೂರದ ಮನೆಗಳಲ್ಲಿ ಹೋಗಿ ಜನರನ್ನು ಬಂಧಿಸುವ ಮಾತು ಅತ್ಯಂತ ಕ್ಲಿಷ್ಟಕರ ಮತ್ತು ಬಹುತೇಕ ಅಸಾಧ್ಯದ ಮಾತು. ಹಾಗೆ ಕ್ರಮ ಕೈಗೊಂಡಿದ್ದೇ ಆದಲ್ಲಿ ಜನರಿಗೆ ಸುದ್ದಿ ತಲುಪಿ ಬಂಧನ ಪ್ರಕ್ರಿಯೆಯೇ ಉಲ್ಟಾಪಲ್ಟಾ ಆಗುವ ಸಾಧ್ಯತೆಯಿತ್ತು. ಅದರ ಬದಲಾಗಿ ಅನಾಯಾಸವಾಗಿ ಇಡೀ ಜನಾಂಗವೇ ತಮ್ಮ ತಮ್ಮ ಪ್ರಾರ್ಥನಾ ಮಂದಿರದಲ್ಲಿ, ನಿರಾಯುಧವಾಗಿ ಜಮಾವಣೆಗೊಂಡಾಗ ಅವರನ್ನು ಸುತ್ತುವರೆದು ಸೆರೆ ಹಿಡಿಯುವುದು ಸೈನಿಕರಿಗೆ ಬಾಳೆ ಹಣ್ಣು ಸುಲಿದಷ್ಟೇ ಸಲೀಸು. ಹಾಗಾಗಿ ಅಂದಿನ ಆ ದಿನಕ್ಕಾಗಿ ಟಿಪ್ಪುವಿನ ರಕ್ಕಸ ಸೈನಿಕರು ಹೊಂಚು ಹಾಕಿ ಕಾಯುತ್ತಿದ್ದರು. ಕ್ರೈಸ್ತರಿಗೆ ಅದರ ಕಿಂಚಿತ್ತೂ ಸುಳಿವು ಲಭ್ಯವಾಗಿರಲಿಲ್ಲ.

Gadai Kallu Fort

ಹೀಗೆ, 1784ರ ಫೆಬ್ರವರಿ 25ರಂದು ಬೆಳ್ಳಂಬೆಳಗ್ಗೆ ಹಕ್ಕಿಗಳ ಚಿಲಿಪಿಲಿ ಸದ್ದು ಮುಕ್ತಾಯವಾಗುತ್ತಿದ್ದಂತೆಯೇ ಕನ್ನಡ ಕರಾವಳಿಯಾದ್ಯಂತ ಜನರ ಆಕ್ರಂದನ, ರುದ್ರ ರೋದನ ಮಾರ್ದನಿಸಿತು. ಅವರ ಯಾತನೆಯು ಅರಬ್ಬಿ ಸಮುದ್ರದಿಂದ ಹಿಡಿದು ಪಶ್ಚಿಮ ಘಟ್ಟಗಳ ವರೆಗೆ ಮಾರ್ದನಿಸಿತು. ಕಿಂಚಿತ್ತೂ ಮುನ್ಸೂಚನೆಯಿಲ್ಲದೇ ನಡೆದ ಘಟನೆಯಿಂದ ಜನರು ತತ್ತರಿಸಿದ್ದರು. ವ್ಯವಸ್ಥಿತ ಯೋಜನೆಯೊಡನೆ ಶಸ್ತ್ರಸಜ್ಜಿತರಾಗಿ ಬಂದಿದ್ದ ಸೈನಿಕರ ಮುಂದೆ ಮುಗ್ಧ ಕ್ರೈಸ್ತರು ಶರಣಾಗಲೇಬೇಕಾಯಿತು.

ಹೀಗೆ ಮಕ್ಕಳು, ಗರ್ಭಿಣಿಯರು, ವೃದ್ಧರು, ಅಶಕ್ಯರು ಸೇರಿದಂತೆ ಪ್ರತಿಯೊಬ್ಬರನ್ನೂ ನಿರ್ದಯವಾಗಿ ಕೂಡಿ ಹಾಕಿ ಅವರನ್ನು ಶ್ರೀರಂಗಪಟ್ಟಣಕ್ಕೆ ಕಾಲ್ನಡಿಗೆಯಲ್ಲಿ ಒಯ್ಯಲು ಗುಂಪುಗೂಡಿಸಲಾಯಿತು. ಮಂಗಳೂರು ಬಂಟ್ವಾಳ ಆಸುಪಾಸಿನ ಚರ್ಚುಗಳಿಂದ ಬಂಧಿಸಲ್ಪಟ್ಟವರನ್ನು ಬೆಳ್ತಂಗಡಿಯ ಗಡಾಯಿಕಲ್ಲಿನ ಬಳಿ ಕೂಡಿಸಲಾಯಿತು. ಇದೇ ರೀತಿ ಬೇರೆಡೆಯಿಂದ ಆಯಾ ಪ್ರದೇಶದ ಜನರನ್ನು ಹತ್ತಿರದ ಘಾಟಿಗಳಿಂದ, ಅಂದರೆ ಶಿರಾಡಿಯಿಂದ ಉತ್ತರದ ಹಲವು ಕಡೆಗಳಿಂದ ಘಟ್ಟವನ್ನು ಹತ್ತಿಸಿ ಶ್ರೀರಂಗಪಟ್ಟಣಕ್ಕೆ ನಡೆಸಿಕೊಂಡು ಹೋಗಲಾಯಿತು.

ಬಂಧನದ ನಂತರ ನಡೆದ ಘಟನೆಗಳದ್ದೇ ಒಂದು ಪ್ರತ್ಯೇಕ ಅಧ್ಯಾಯ. ಭೀಭತ್ಸಕತೆಯ ವಿರಾಟ್ ಪರ್ವವನ್ನೇ ನಡೆಸಿದರು ಟಿಪ್ಪುವಿನ ಸೈನಿಕರು ಮತ್ತು ಅಧಿಕಾರಿಗಳು. ಗಟ್ಟಿಮುಟ್ಟಾಗಿದ್ದ, ಧೈರ್ಯವಂತ ಯುವಕರು, ಪುರುಷರು ಮತ್ತು ಕೆಲ ಮಹಿಳೆಯರು ಪ್ರತಿಭಟಿಸಿದರು. ಹಾಗೆ ಪ್ರತಿಭಟಿಸಿದವರನ್ನೆಲ್ಲಾ ಭೀಕರವಾಗಿ ಚಿತ್ರಹಿಂಸೆ ಕೊಟ್ಟು ತಲವಾರುಗಳಿಂದ ಕತ್ತರಿಸಲಾಯಿತು. ಇದಕ್ಕೆ ಅತಿ ದೊಡ್ಡ ಸಾಕ್ಷ್ಯಾಧಾರವೆಂಬಂತೆ ಇಂದಿಗೂ ಮೂಕರೋದನಗೈಯುತ್ತಿರುವ ‘ನೆತ್ತರಕೆರೆ’. ಮಂಗಳೂರಿನಿಂದ ಬಿ.ಸಿ. ರೋಡ್ ಕಡೆಗೆ ಹೋಗುವ ಹೈವೇಯಲ್ಲಿ, ಫರಂಗಿಪೇಟೆಯ ಬಳಿಕ ಸಿಗುವ ಮಾರಿಪಳ್ಳದಿಂದ ಎಡಕ್ಕೆ ಪೊಳಲಿಗೆ ಹೋಗುವ ರಸ್ತೆಯಲ್ಲಿ ಒಂದೂವರೆ ಕಿ.ಮೀ. ಸಾಗಿದರೆ ಈ ನೆತ್ತರಕೆರೆ ಸಿಗುತ್ತದೆ. ಅದೊಂದು ನೀರಿನ ಕೆರೆಯಾಗಿತ್ತು. ಆ ದಾರಿಯಲ್ಲಿ ಸಾಗುತ್ತಿದ್ದಾಗ ಬಲಿಷ್ಠರಾಗಿದ್ದ ಹಲವು ಕ್ರೈಸ್ತ ಯುವಕರು ಬಂಧನದಿಂದ ಬಿಡುಗಡೆಗೊಳ್ಳಲು ಸಾಹಸಕ್ಕೆ ಮುಂದಾದರು. ಟಿಪ್ಪುವಿನ ಸೈನಿಕರು ಅದಕ್ಕೆಲ್ಲಾ ತಯಾರಾಗಿಯೇ ಮುನ್ನೆಚ್ಚರಿಕೆ ವಹಿಸಿದ್ದರು. ಪ್ರತಿಭಟಿಸಿದ, ಪ್ರತಿರೋಧಗೈದ ಯುವಕರನ್ನು ಭೀಭತ್ಸಕರವಾಗಿ ಹಿಂಸೆ ಕೊಟ್ಟು ಅವರ ಮಾರಣಹೋಮವನ್ನೇ ನಡೆಸಲಾಯಿತು. ಹಾಗೆ ಬಹಳ ಸಂಖ್ಯೆಯ ದೇಹಗಳು ಒಂದೆಡೆ ಕತ್ತರಿಸಲ್ಪಟ್ಟು ಬಿದ್ದಿದ್ದರಿಂದ ಹರಿದ ನೆತ್ತರಿನ ಪ್ರವಾಹ ಅಲ್ಲಿಯೇ ಸನಿಹದಲ್ಲಿದ್ದ ಕೆರೆಯಲ್ಲಿ ಲೀನವಾಯಿತು. ತತ್ಪರಿಣಾಮ ಇಡೀ ಕೆರೆಯೇ ಕೆಂಪಾಗಿ ಹೋಯಿತು. ಅದರಿಂದಾಗಿಯೇ ಆ ಕೆರೆಗೆ ನೆತ್ತರಕೆರೆ ಎಂಬ ಹೆಸರು ಬಿದ್ದಿತು.

Tipu Sultan

ಹೀಗೆ ದಕ್ಷಿಣ ಕನ್ನಡದ ನೇತ್ರಾವತಿ ನದಿಯಲ್ಲಿ ಲೆಕ್ಕವಿಲ್ಲದಷ್ಟು ಕ್ರೈಸ್ತರ ನೆತ್ತರು ಹರಿದು ಹೋಗಿದೆ. ತುಳುನಾಡಿನಲ್ಲಿ ಗ್ಯಾಲನ್‍ಗಟ್ಟಲೆ ರಕ್ತ ಬಸಿದು ಹೋಗಿದೆ. ಪಶ್ಚಿಮ ಘಟ್ಟದ ದಟ್ಟಾರಣ್ಯದ ದಾರಿಯಲ್ಲೆಲ್ಲಾ ಕ್ರೈಸ್ತರ ಕೂಗು, ರೋದನ ಮುಗಿಲು ಮುಟ್ಟಿದೆ ಮತ್ತು ರಕ್ತ ಸಿಂಚನವಾಗಿದೆ. ಎಷ್ಟೇ ಭೀಕರ ಶಿಕ್ಷೆಯ ಅರಿವಿದ್ದರೂ ಸೆರೆಯಿಂದ ಬಿಡಿಸಿಕೊಳ್ಳುವ ಸಾಹಸಕ್ಕೆ ಹಲವರು ಪ್ರಯತ್ನಪಟ್ಟಿದ್ದು, ಅತಿ ವಿರಳ ಸಂಖ್ಯೆಯಲ್ಲಿನ ಜನರು ತಪ್ಪಿಸಿಕೊಂಡು ಹೋದರು. ಹೀಗೆ ಶ್ರೀರಂಗಪಟ್ಟಣದ ಹಾದಿಯಲ್ಲಿನ ಹಲವು ಜಿಲ್ಲೆಗಳಲ್ಲಿ ಕ್ರೈಸ್ತರು ನೆಲೆ ನಿಂತರು. ಕೊಡಗು, ಚಿಕ್ಕಮಗಳೂರು, ಹಾಸನ ಮುಂತಾದ ಕಡೆಗಳಲ್ಲಿ ಹೀಗೆ ತಪ್ಪಿಸಿಕೊಂಡಿದ್ದ ಕ್ರೈಸ್ತರನೇಕರು ವಾಸಿಸಲಾರಂಭಿಸಿದರು.

ತನ್ನ ಸೆರೆಯಾಳಾಗಿದ್ದ ಹುಡುಗಿಯರು, ಮಹಿಳೆಯರನ್ನೆಲ್ಲಾ ಮುಸ್ಲಿಮರು ಬಳಸಿಕೊಂಡರು. ಒಪ್ಪದವರನ್ನು ಅತ್ಯಾಚಾರ ಮಾಡಲಾಯಿತು. ಹಲವರು ಕಣ್ಣ ಮುಂದೆಯೇ ನಡೆಯುತ್ತಿದ್ದ ಘೋರ ಹಿಂಸಾಚಾರಕ್ಕೆ ಹೆದರಿ ಒಲ್ಲದ ಮನಸ್ಸಿನಿಂದ ಮುಸ್ಲಿಂ ಧರ್ಮಕ್ಕೆ ಮತಾಂತರಗೊಂಡರು. ಹೀಗೆ ಮುಸ್ಲಿಂ ಧರ್ಮಕ್ಕೆ ಮತಾಂತರಗೊಂಡವರಿಗೆ ಹಲವು ರಿಯಾಯಿತಿ, ವಿನಾಯಿತಿಗಳು ದೊರೆಯುತ್ತಿದ್ದರಿಂದ ಆಮಿಷಕ್ಕೊಳಗಾದ ಪುರುಷರೂ ಮುಸ್ಲಿಮರಾದರು. ಆದರೂ ಬಹು ಸಂಖ್ಯೆಯ ಜನರು ಏನೇ ಕಷ್ಟ, ಹಿಂಸೆ ಎದುರಾದರೂ ಅದನ್ನೆದುರಿಸಿ ತಮ್ಮ ಧರ್ಮಕ್ಕೆ ನಿಷ್ಠೆಯಿಂದಿದ್ದರು. ಪವಿತ್ರ ಶಿಲುಬೆಯ ಮೇಲಿನ ಗಟ್ಟಿ ನಂಬಿಕೆಯನ್ನು ಉಳಿಸಿಕೊಂಡರು. ಅದೇ ಕಾರಣಕ್ಕೆ ಬಹುತೇಕ ಕ್ರೈಸ್ತರು ಭಯಾನಕ ಕ್ರೌರ್ಯಕ್ಕೆ ಒಳಗಾಗಿ ಜೀವ ಕಳೆದುಕೊಂಡರು.

Rosario Church Mangaluru 2

ಕ್ರೈಸ್ತರನ್ನು ಬಂಧಿಸುವ ಮೊದಲು ಚರ್ಚುಗಳನ್ನು ನೋಡಿಕೊಂಡಿದ್ದ ಪಾದರಿಗಳನ್ನು ಗಡೀಪಾರು ಮಾಡಲಾಗಿತ್ತು. ಅವರೆಲ್ಲರೂ ಗೋವಾದಿಂದ ಬಂದಿದ್ದ ಪೋರ್ಚುಗೀಸರಾಗಿದ್ದರು. ಫರಂಗಿಪೇಟೆಯ ಫಾದರ್ ಜೋಕಿಂ ಮಿರಾಂದಾರನ್ನು ತನ್ನ ತಂದೆಯೊಡನೆ ಅವರಿಗಿದ್ದ ಆತ್ಮೀಯತೆಯ ಹೊರತಾಗಿಯೂ ರಾಜ್ಯದಿಂದ ಹೊರ ಹಾಕಿದ ಟಿಪ್ಪು ಸುಲ್ತಾನ್. ಟಿಪ್ಪು ಸರಕಾರದಲ್ಲಿ ಕೆಲಸ ಮಾಡುತ್ತಿದ್ದವರು, ಸೈನಿಕರಾಗಿದ್ದವರು ಮತ್ತು ಮುಖ್ಯ ಆಹಾರ ಪದಾರ್ಥಗಳನ್ನು ಉತ್ಪಾದಿಸಿ ಮಾರಾಟ ಮಾಡುವವರು – ಹೀಗೆ ಏನಾದರೊಂದು ಸಂಬಂಧ, ವ್ಯವಹಾರ ಹೊಂದಿದ್ದ ಕ್ರೈಸ್ತರ ಕುಟುಂಬಗಳನ್ನು ಬಂಧಿಸದೇ ವಿನಾಯಿತಿ ನೀಡಲಾಗಿತ್ತು. ಹಾಗಾಗಿ ಅಲ್ಪ ಪ್ರಮಾಣದಲ್ಲಿಯಾದರೂ ಕೆಲ ಕ್ರೈಸ್ತರು ಭೀಕರ ಕ್ರೌರ್ಯದಿಂದ ಬಚಾವಾದರು.

ಟಿಪ್ಪು ಸುಲ್ತಾನನ ಕರಾಳತನಕ್ಕೆ ಇಲ್ಲಿನ 27 ಚರ್ಚುಗಳು ಕೆಂಗಣ್ಣಿಗೆ ಗುರಿಯಾಗಿದ್ದವು. ಆದರೆ ಹೊಸಪೇಟೆಯ ಒಂದು ಚರ್ಚು ಸುರಕ್ಷಿತವಾಗಿ ಉಳಿದು ಉಳಿದೆಲ್ಲಾ ಚರ್ಚುಗಳನ್ನು ಧರಾಶಾಹಿ ಮಾಡಲಾಗಿತ್ತು. ಮೂಡಬಿದರೆಯ ಚೌಟ ಅರಸರಿಗೆ ತನ್ನ ಆಳ್ವಿಯಲ್ಲಿದ್ದ ಕ್ರೈಸ್ತರ ಮೇಲೆ ತುಂಬಾ ಪ್ರೀತಿ ಆದರವಿತ್ತು. ಯಾಕೆಂದರೆ ಕ್ರೈಸ್ತರು ಪ್ರಾಮಾಣಿಕರೂ, ನಿಷ್ಠಾವಂತರೂ, ಕುಶಲ ಕರ್ಮಿಗಳೂ, ಅತ್ಯುತ್ತಮ ಕೃಷಿಕರೂ, ಮೈ ಬಗ್ಗಿ ದುಡಿಯುವವರೂ ಆಗಿದ್ದರು. ಅವರಿಂದ ಒಳ್ಳೆಯ ಬೆಳೆ, ಉತ್ಪನ್ನಗಳು, ಕಂದಾಯ ದೊರಕುತ್ತಿತ್ತು. ಆದುದರಿಂದ ಟಿಪ್ಪುವಿನ ಮನವೊಲಿಸಿ ಆತ ತನ್ನ ಪ್ರಾಂತ್ಯದ ಕ್ರೈಸ್ತರನ್ನು ಬಚಾವು ಮಾಡಲು ಮತ್ತವರ ಚರ್ಚನ್ನು ಉಳಿಸಲು ಶ್ರಮಪಟ್ಟಿದ್ದರಿಂದ ಹೊಸಪೇಟೆಯ ಚರ್ಚಿಗೆ ಯಾವುದೇ ಹಾನಿಯಾಗಿರಲಿಲ್ಲ. ತನ್ನ ಸಂಸ್ಥಾನದಲ್ಲಿದ್ದ ಅತ್ಯಮೂಲ್ಯ ಕ್ರೈಸ್ತರನ್ನು ರಕ್ಷಿಸುವುದು ಅರಸರಿಗೆ ಎಷ್ಟು ಅಗತ್ಯವಿತ್ತೋ, ತನಗೆ ಕಪ್ಪ ಕಂದಾಯ ಸಲ್ಲಿಸುವ ಆ ಆರಸನ ಮನವಿಯನ್ನು ಅಂಗೀಕರಿಸುವುದೂ ಸಹ ಟಿಪ್ಪುವಿಗೆ ಅನಿವಾರ್ಯವಾಗಿತ್ತು. ಆ ಕಾರಣದಿಂದ ಹೊಸಪೇಟೆಯ ಚರ್ಚ್ ಟಿಪ್ಪುವಿನ ಆಕ್ರಮಣಕ್ಕೆ ಒಳಗಾಗಲಿಲ್ಲ.

ಮಂಗಳೂರಿನ ಮಿಲಾಗ್ರಿಸ್ ಚರ್ಚನ್ನು ಕೆಡವಿ ಅದರ ಕಲ್ಲು, ಮರಮಟ್ಟುಗಳನ್ನು ಬಳಸಿ ಬಾವುಟಗುಡ್ಡೆಯಲ್ಲಿನ ಮಸೀದಿಯನ್ನು ಸ್ಥಾಪಿಸಲಾಗಿತ್ತೆಂದು ಹೇಳಲಾಗುತ್ತದೆ. ಕಿನ್ನಿಗೋಳಿ ಬಳಿಯ ಕಿರೆಂ ಚರ್ಚ್‍ನ ಮಾಡು, ಹಂಚುಗಳನ್ನು ತೆಗೆದ ನಂತರ ಅಲ್ಲಿನ ಬಂಟ ಮನೆತನಗಳವರು ತಮ್ಮ ಧೈರ್ಯ, ಶೌರ್ಯ, ಚಾಕಚಕ್ಯತೆಯಿಂದ ಕಟ್ಟಡ ಉರುಳಿಸದಂತೆ ತಡೆದಿದ್ದರು. ಅದಕ್ಕೆ ಕೃತಜ್ಞತೆಯಾಗಿ ಪರಂಪರಾಗತವಾಗಿ ಆ ಮನೆತನಗಳವರನ್ನು ಕಿರೆಂ ಚರ್ಚಿನ ವಾರ್ಷಿಕ ಹಬ್ಬದಂದು ಗೌರವಿಸಲಾಗುತ್ತದೆ.

Milagres Church Kallianpur

ಅಂತೂ 1799ರಲ್ಲಿ ನಾಲ್ಕನೇ ಆಂಗ್ಲೋ ಮೈಸೂರು ಯುದ್ಧದಲ್ಲಿ ಟಿಪ್ಪು ಸುಲ್ತಾನ್ ಸೋತು ಹತನಾದ ನಂತರ ಸುಮಾರು ಹತ್ತು ಸಾವಿರದಷ್ಟು ಸಂಖ್ಯೆಯಲ್ಲಿ ಬದುಕುಳಿದಿದ್ದ ಕೆನರಾ ಕ್ರೈಸ್ತರು ಶ್ರೀರಂಗಪಟ್ಟಣದಿಂದ ಸ್ವಾತಂತ್ರ್ಯ ಪಡೆದುಕೊಂಡು 15 ವರ್ಷಗಳ ಕರಾಳ ಜೀವನದಿಂದ ಮುಕ್ತಿ ಹೊಂದಿ ಕರಾವಳಿಗೆ ಮರಳಿದರು. ಇಲ್ಲಿಗೆ ಬಂದು ನೋಡಿದರೆ ಅವರ ಜಮೀನು, ಆಸ್ತಿಯನ್ನೆಲ್ಲಾ ಮುಸ್ಲಿಮ್ ಮತ್ತು ಇತರ ಜಾತಿಯ ಉಳ್ಳವರು ಸ್ವಾಧೀನಪಡಿಸಿಕೊಂಡಿದ್ದರು. ಬ್ರಿಟಿಷ್ ಸರಕಾರದ ಜಿಲ್ಲಾಧಿಕಾರಿಯು ಸಮಿತಿ ರಚನೆ ಮಾಡಿ ಜಮೀನು ಕಳೆದುಕೊಂಡವರ ವಿವರ ಸಂಗ್ರಹಿಸಿ ಬಹುತೇಕರಿಗೆ ಮರಳಿ ತಮ್ಮ ಆಸ್ತಿಪಾಸ್ತಿ ದೊರಕುವಂತೆ ಕ್ರಮ ಕೈಗೊಂಡರು.

ಧರೆಗುರುಳಿದ್ದ ತಮ್ಮ ನೆಚ್ಚಿನ ಪ್ರಾರ್ಥನಾ ಮಂದಿರಗಳನ್ನು ಆಯಾ ಸ್ಥಳಗಳ ಕ್ರೈಸ್ತರು ಕ್ರಮೇಣ ಮರು ಸ್ಥಾಪಿಸಿದರು. ಹೀಗೆ ಮಾನವ ಕುಲದಲ್ಲಿ ಕಪ್ಪು ಚುಕ್ಕೆಯಾಗಿರುವ ಟಿಪ್ಪು ಸುಲ್ತಾನನ ಕರಾಳ ಶಾಸನಕ್ಕೆ ಬಲಿಯಾದ ಅಧ್ಯಾಯದಿಂದ ಕೊಂಕಣ ಪ್ರದೇಶದ ಕ್ರೈಸ್ತರು ಹೊರ ಬಂದರು.

ಮುಗ್ಧ ಜನರನ್ನು ಅನ್ಯಾಯವಾಗಿ ಹಿಂಸಿಸಿ, ಕೊಂದು ಹತ್ಯಾಕಾಂಡ ನಡೆಸಿದ ಟಿಪ್ಪು ಸುಲ್ತಾನನು ಜೀವಂತವಾಗಿರುವಾಗ ಹೇಗೂ ಶಾಂತಿ ಸಮಾಧಾನದಿಂದ ಬದುಕಿರಲಿಲ್ಲ. ಸತ್ತ ನಂತರ ಇಷ್ಟೊಂದು ವರ್ಷಗಳು ಸಂದರೂ ಆತನ ಪಾಪ ಆತನ ಆತ್ಮವನ್ನೂ ಬಿಡದೆ ಕಾಡುತ್ತಿದೆ. ಮಾಡಿದ್ದುಣ್ಣೊ ಮಹರಾಯ ಎನ್ನುವುದು ಇದಕ್ಕೇ ಅಲ್ಲವೆ!

Copyright: Donald Pereira @ www.janavahini.com
Send your feedback to donypereira@gmail.com

ಕೃಪೆ/ಆಧಾರ: ಈ ಲೇಖನಕ್ಕಾಗಿ ಹಲವರು ನನಗೆ ಮಾಹಿತಿ ನೀಡಿದ್ದಾರೆ. ಮಂಗಳೂರು ರೊಸಾರಿಯೊ ಚರ್ಚಿನ ಧರ್ಮಗುರು ರೆ. ಫಾ. ಜೆ.ಬಿ. ಕ್ರಾಸ್ತಾ, ನೀರುಮಾರ್ಗ ಕೆಲರಾಯ್ ಚರ್ಚಿನ ಧರ್ಮಗುರು ರೆ. ಫಾ. ಜೋಕಿಮ್ ಫೆರ್ನಾಂಡಿಸ್, ಮಿತ್ರ ಆನ್ಸಿ ಪಾಲಡ್ಕ, ಮುಂಬಯಿ ಅವರಿಂದ ಮತ್ತು ಮಂಗಳೂರು ಧರ್ಮಪ್ರಾಂತ್ಯಕ್ಕೆ 125 ವರ್ಷ ತುಂಬಿದ ಸಂದರ್ಭದಲ್ಲಿ ಹೊರ ತಂದ ಸ್ಮರಣ ಸಂಚಿಕೆ ‘ಕುರ್ಪೆಚಿಂ ಪಾವ್ಲಾಂ’ ಪುಸ್ತಕದಿಂದ, www.Budkulo.com ವೆಬ್‍ಸೈಟ್‍ನಿಂದ ಮಾಹಿತಿಯನ್ನು ಪಡೆಯಲಾಗಿದೆ.

ಭಾಗ 1: ಕರಾವಳಿಯ ಕ್ರೈಸ್ತರ, ಚರ್ಚುಗಳ ಇತಿಹಾಸ ತಿರುಚಿದ ಲೇಖನಕ್ಕೆ ಉತ್ತರ

Visit & Like our Page – www.facebook.com/janavahini

Like us on facebook

1 thought on “ಟಿಪ್ಪುವಿನಿಂದ ಧರೆಗುರುಳಿಸಲ್ಪಟ್ಟ ಆ 25 ಚರ್ಚುಗಳು ಮತ್ತು ಆತ ನಡೆಸಿದ ಕರಾಳ ಹತ್ಯಾಕಾಂಡದ ವಿವರ”

  1. Dear Writer,
    what about Pethri Church ??? that is also a very old church and tippu has demolitioned that and took the bell to Shankarnarayan….. there is lot of story behind it.

Leave a Reply

Your email address will not be published. Required fields are marked *

*

code

LATEST NEWS