ಮಂಗಳೂರಿನ ಕ್ರೈಸ್ತರು ಟಿಪ್ಪುವಿನ ವಿರುದ್ಧ ಬ್ರಿಟಿಷರಿಗೆ ನೆರವಾಗಿದ್ದರೆ?

Published on: Thursday, November 9th, 2017,5:05 pm

ಅನುದಿನದಂತೆ ಮಂಗಳೂರಿನ ಜನರೆಲ್ಲಾ ಬೆಳಗ್ಗೆದ್ದು ತಮ್ಮ ತಮ್ಮ ಕಾರ್ಯ ಚಟುವಟಿಕೆ, ಕೆಲಸ ಉದ್ಯೋಗಕ್ಕಾಗಿ ಮನೆಯಿಂದ ಹೊರಬಿದ್ದು ನಗರದ ರಸ್ತೆಗಳನ್ನು ಸೇರಲು ತವಕದಿಂದ ಧಾವಿಸುತ್ತಿರುವಾಗ ಅನಿರೀಕ್ಷಿತವಾಗಿ ಪೊಲೀಸರ ಪಡೆಯನ್ನು ಕಂಡು ಬೆಚ್ಚಿ ಬಿದ್ದರು. ನಗರದ ಒಳ ರಸ್ತೆಗಳಿಗೂ ಪೊಲೀಸರು ನುಗ್ಗುತ್ತಿದ್ದರು ಮತ್ತು ಮುಂದೆ ಬಂದವರನ್ನೆಲ್ಲಾ ವಾಪಸ್ ಕಳುಹಿಸುತ್ತಿದ್ದರು. ಭಯಭೀತಿಗೊಳಗಾದ ಜನರು ಅನಿವಾರ್ಯವಾಗಿ ಮನೆಗೆ ತೆರಳಬೇಕಾಯಿತು. ಹಲವರಿಗೆ ಏನಾಗಿದೆ, ಏನಾಗುತ್ತಿದೆ, ತಮ್ಮನ್ನು ರಸ್ತೆಗಿಳಿಯಲು ಯಾಕೆ ನಿರ್ಬಂಧಿಸಲಾಯಿತೆಂಬ ಅಸಂಖ್ಯ ಸವಾಲು ಸಂಶಯಗಳಿಗೆ ಉತ್ತರ ಕಂಡುಕೊಳ್ಳದೆ ಕಕ್ಕಾಬಿಕ್ಕಿಯಾದರು. ಕನಸು ಮನಸ್ಸಿನಲ್ಲಿಯೂ ಇಂತಹದನ್ನು ಅಂದಾಜಿಸಲೂ ಇರದ ಮಂಗಳೂರಿನ ಜನ ಒಳಗೊಳಗೇ ಬೆದರುತ್ತಾ, ಆತಂಕಕ್ಕೊಳಗಾಗುತ್ತಾ ಮನೆಗೆ ಹೋಗಿ ಟಿವಿಯ ಮೊರೆ ಹೊಕ್ಕರು.

ಹಾಂ! ಅಲ್ಲಿಯವರೆಗೆ ಹಿಂದಿ, ಇಂಗ್ಲಿಷ್ ಚಾನೆಲ್‍ಗಳನ್ನಷ್ಟೇ ಆಸ್ಥೆಯಿಂದ ನೋಡುತ್ತಿದ್ದವರೆಲ್ಲರೂ ಸಹ ಮೊತ್ತ ಮೊದಲ ಬಾರಿಗೆ ಹುಡುಕಿ ಹುಡುಕಿ ಸ್ಥಳೀಯ ಸುದ್ದಿ ಚಾನೆಲ್‍ಗಳ ಗುಂಡಿ ಅದುಮುತ್ತಿದ್ದರು. ಬೆಕ್ಕಸ ಬೆರಗಾಗಿ ನೋಡುತ್ತಿದ್ದವರಿಗೆ ಅಂದಿನ ಸುದ್ದಿ ತಿಳಿದು ಆಘಾತವಾಗಿತ್ತು.

ಮಂಗಳೂರಿನಲ್ಲಿ ಕರ್ಫ್ಯೂ ವಿಧಿಸಲಾಗಿತ್ತು! ಕಂಡಲ್ಲಿ ಗುಂಡಿಕ್ಕಲು ಪೊಲೀಸರಿಗೆ ಆದೇಶ ಹೊರಡಿಸಲಾಗಿತ್ತು!!

Mlr Christians History_5 Tipu

ಹಾಂ, ಗಾಬರಿಗೊಳಗಾಗಬೇಡಿ, ಗಲಿಬಿಲಿಗೊಳ್ಳಬೇಡಿ. 2006ರ ಅಕ್ಟೋಬರ್ 7ರಂದು ನಡೆದ ಘಟನೆಯದು.

ಅಷ್ಟಕ್ಕೂ ಇಡೀ ಮಂಗಳೂರಿನಲ್ಲಿ ಕರ್ಫ್ಯೂ ವಿಧಿಸಿ ಕಂಡಲ್ಲಿ ಗುಂಡಿಕ್ಕುವ ಆದೇಶ ಹೊರಡಿಸಲು ಕಾರಣವೇನು? ಅದೊಂದು ಯಥಾಪ್ರಕಾರ ಕೋಮು ಗಲಭೆಯಾಗಿತ್ತು. ಕುದ್ರೋಳಿಯಲ್ಲಿ ಆರಂಭವಾದ ಹಿಂದೂ ಮತ್ತು ಮುಸ್ಲಿಮ್ ಕೋಮುವಾದಿ ಪಂಗಡಗಳ ಘರ್ಷಣೆ ತಾರಕಕ್ಕೇರಿ ಮರುಕಳಿಸಿ ಉಳ್ಳಾಲದಲ್ಲಿ ಪ್ರತಿಧ್ವನಿಸಿ ಪರಿಸ್ಥಿತಿ ವಿಕೋಪಕ್ಕೋಯಿತು. ಹಾಗಾಗಿ ಜಿಲ್ಲಾಡಳಿತ ಈ ಉಗ್ರ ಕ್ರಮವನ್ನು ತೆಗೆದುಕೊಂಡಿತ್ತು.

ಆದರೆ ಅದಕ್ಕೆ ಬಲಿಯಾದವರು ಮಂಗಳೂರಿನಲ್ಲಿ ವಾಸಿಸುತ್ತಿದ್ದ ನಾಗರಿಕರು! ಯಾರೋ ಗೂಂಡಾ, ಕ್ರಿಮಿನಲ್‍ಗಳು ತಮ್ಮ ತಮ್ಮೊಡನೆ ಜಗಳ ಮಾಡುತ್ತಿದ್ದರೆ, ನಗರದ ಜನರೆಲ್ಲರನ್ನೂ ಅದಕ್ಕೆ ಬಲಿಪಶು ಆಗುವಂತೆ ಮಾಡಲಾಗಿತ್ತು. ಇದು ನಿಜಕ್ಕೂ ವಿಪರ್ಯಾಸ.

ಅದೀಗ ಇತಿಹಾಸವಷ್ಟೇ. ಆದರೆ ಅದನ್ನು ಯಾಕೆ ಹೇಳಬೇಕಾಯಿತೆಂದರೆ, ಅದೇ ರೀತಿ 233 ವರ್ಷಗಳ ಹಿಂದೆಯೂ ನಡೆದಿತ್ತು. ಆಗ ಕರ್ಫ್ಯೂ ವಿಧಿಸದೆ ಕಂಡ ಕಂಡಲ್ಲಿ ಮನುಷ್ಯರ ಮಾರಣ ಹೋಮ ನಡೆದಿತ್ತು. ಹೇಗೆ 2006ರಲ್ಲಿ ಕೆಲವೇ ಕೆಲವು ಜನರ ಕುಕೃತ್ಯ, ಲಡಾಯಿಯಿಂದ ಇಡೀ ನಗರಕ್ಕೆ ನಗರವೇ ದಿನಗಟ್ಟಲೆ ನರಳಿತೋ ಅದಕ್ಕಿಂತ ಸಾವಿರಾರು ಪಟ್ಟು ಭೀಕರವಾಗಿ 1784ರಲ್ಲಿ ಕರಾವಳಿಯಾದ್ಯಂತ ಜನರ ಮೇಲೆ ಒಂದು ದುಷ್ಟ ಶಕ್ತಿ ಅಪ್ಪಳಿಸಿತ್ತು!

ಅದಕ್ಕೆ ಭೀಭತ್ಸಕರವಾಗಿ ಬಲಿಯಾದವರು ತಮ್ಮಷ್ಟಕ್ಕೆ ತಾವೆಂಬಂತಿದ್ದ, ಕಷ್ಟ ಪಟ್ಟು ಕೃಷಿ ಮುಂತಾದ ಕೆಲಸ ಕಾರ್ಯ ನಡೆಸಿಕೊಂಡು ಶಾಂತಿಯಿಂದ, ಸಹ ಬಾಳ್ವೆಯಿಂದ ಬದುಕುತ್ತಿದ್ದ ಸಾಮಾನ್ಯ ಕ್ರೈಸ್ತರು. ಹೌದು. ಉತ್ತರ ಕನ್ನಡ ಜಿಲ್ಲೆಯಿಂದ ಕೇರಳದ ಮಲಬಾರ್ ಪ್ರದೇಶದವರೆಗೆ ವ್ಯಾಪಿಸಿದ ಕೆನರಾ ಪ್ರದೇಶದಲ್ಲಿ ಬದುಕುತ್ತಿದ್ದ ಸುಮಾರು ಒಂದು ಲಕ್ಷದಷ್ಟು ಕ್ರೈಸ್ತರಿಗೆ ಅಂದು ಪೈಶಾಚಿಕ, ಕರಾಳ ಶನಿ ವಕ್ಕರಿಸಿತ್ತು.

ಆ ಶನಿ ಬೇರೆ ಯಾರೂ ಅಲ್ಲ. ಅದು ಟಿಪ್ಪು ಸುಲ್ತಾನ್!

Mlr Christians History_4 Hyderali

ಮಾನವ ಜನಾಂಗದ ಚರಿತ್ರೆಯಲ್ಲಿ ಕಂಡು ಬರುವ ಅತ್ಯಂತ ರಣಭೀಕರ ರಕ್ತಪಿಪಾಸು ರಾಕ್ಷಸರ ಸಾಲಿನಲ್ಲಿ ಮುಂಚೂಣಿಯಲ್ಲಿ ನಿಲ್ಲುವ ಎಲ್ಲಾ ಅರ್ಹತೆಗಳನ್ನು ಮೈದುಂಬಿಸಿಕೊಂಡಿದ್ದ ಈ ನರರಾಕ್ಷಸ, ಹಿಂಸಾಪೀಡಕ ಟಿಪ್ಪು ಸುಲ್ತಾನನು ಮುಗ್ಧ, ನಿರಪರಾಧಿ ಜನರನ್ನು ತನ್ನ ವಿಕೃತ ವಾಂಛೆ ಮತ್ತು ಮತಿ ವಿಕಲತೆಯ ಪರಿಣಾಮವಾಗಿ ಕ್ರುದ್ಧನಾಗಿ ಹೊರಡಿಸಿದ ಆದೇಶದಿಂದಾಗಿ ನೇತ್ರಾವತಿ ನದಿಯಲ್ಲಿ ನೆತ್ತರ ಪ್ರವಾಹವೇ ಹರಿದಿತ್ತು. ಯಾರಿಗೂ ಕೇಡು ಬಯಸದೇ ತಮ್ಮಷ್ಟಕ್ಕೆ ದುಡಿಮೆ ಮಾಡಿಕೊಂಡು ಬಂದಿದ್ದ ಕೊಂಕಣಿ ಕ್ರೈಸ್ತರೆಲ್ಲರನ್ನೂ ಭಯಂಕರ ರೀತಿಯಲ್ಲಿ ದಮನ ಮಾಡಲು ಹವಣಿಸಿದ್ದ ನರಾಧಮ ಟಿಪ್ಪು ಸುಲ್ತಾನನು ಸಿಕ್ಕ ಸಿಕ್ಕವರೆಲ್ಲರನ್ನೂ ಉಗ್ರ ರೀತಿಯಲ್ಲಿ ನಡೆಸಿಕೊಂಡಿದ್ದು ಸೂರ್ಯನ ಬೆಳಕಿನಷ್ಟೇ ಸತ್ಯ.

ಆತ ಅದಕ್ಕೆ ನೀಡಿದ ಕಾರಣ, ‘ಕ್ರೈಸ್ತರು ಬ್ರಿಟಿಷರ ಪರ ಒಲವುಳ್ಳವರು ಮತ್ತು ತತ್ಪರಿಣಾಮವಾಗಿ ಮೈಸೂರು ಪ್ರಾಂತ್ಯವನ್ನಾಳುತ್ತಿದ್ದ ತನ್ನ ರಾಜ್ಯಕ್ಕೆ ವಿದ್ರೋಹಿಗಳು’ ಎಂಬುದಾಗಿ. ಹೇಳಿಕೊಳ್ಳಲಿಕ್ಕೆ ಮತ್ತು ಕೇಳುವವರಿಗೆ ಇದೊಂದು ಆಕರ್ಷಕ ಆಪಾದನೆ. ಇದರಲ್ಲಿ ತಿರುಳಿದೆ, ಅದಕ್ಕಾಗಿಯೇ ಟಿಪ್ಪು ಕ್ರೈಸ್ತರ ವಿರುದ್ಧ ಉಗ್ರ ಕ್ರಮ ತೆಗೆದುಕೊಂಡಿದ್ದು ಅಕ್ಷಮ್ಯವೇನೂ ಅಲ್ಲ ಎಂಬುದಾಗಿ ಬಹಳ ಜನ ವಾದಿಸುತ್ತಾರೆ.

ಪರವಾಗಿಲ್ಲ, ವಾದವೇನೋ ಚೆನ್ನಾಗಿಯೇ ಇದೆ. ತರ್ಕಬದ್ಧವಾಗಿದೆ.

ಆದರೆ ಸತ್ಯ?

ಸತ್ಯವನ್ನು ಬದಿಗಿಡುವ ವಾದಕ್ಕೆ ಬೆಲೆಯೇನಿದೆ ಸ್ವಾಮಿ? ವಾದ ಉದ್ದೇಶಪೂರ್ವಕವಾಗಿರುವುದೇ ಹೆಚ್ಚು. ಹಾಗೆ ವಾದಿಸುವವರಿಗೆ ತಮ್ಮಲ್ಲಿರುವ ಪಾಯಿಂಟ್‍ಗಳೇ ಆಧಾರ. ಸತ್ಯ ಅವರಿಗೆ ಅಗತ್ಯವಾಗಿರುವುದಿಲ್ಲ. ಅವರಿಗೆ ಸ್ವಾರ್ಥವೇ ಜೀವ. ಸತ್ಯ ಸಮುದ್ರಕ್ಕೆ ಹರಿದು ಹೋಗಲಿ, ತನಗೆ ತನ್ನ ವಾದ ಗೆಲ್ಲಬೇಕು. ಅಷ್ಟೇ.

ಆದರೆ ಸತ್ಯ ಯಾವತ್ತಿಗೂ ಸತ್ಯವೇ. ಕೆನರಾ ಕ್ರೈಸ್ತರ ವಿಷಯದಲ್ಲಿಯೂ ಇದು ಸುಸ್ಪಷ್ಟ.

ಮೇಲಿನ ಉದಾಹರಣೆಯಲ್ಲಿ, ಹೇಗೆ ಕೆಲವೇ ಕೆಲವು ರೌಡಿ, ಗೂಂಡಾಗಳ ವೈಷಮ್ಯ, ಹಗೆತನಕ್ಕೆ ಲಕ್ಷಾಂತರ ಜನರು ಹೇಗೆ ಕರ್ಫ್ಯೂವಿಗೆ ಬಲಿಪಶುಗಳಾದರೋ ಹಾಗೆಯೇ ಟಿಪ್ಪುವಿನ ಮೂರ್ಖತನ ಮತ್ತು ಫಟಿಂಗತನಕ್ಕೆ ಸಾವಿರಾರು ಜನರ ಹರಣವೇ ನಡೆದು ಹೋಯಿತು.

ಹಾಗಾದರೆ ಬ್ರಿಟಿಷರನ್ನು ಕ್ರೈಸ್ತರು ಬೆಂಬಲಿಸಿದ ಸಂಗತಿಯ ಅಸಲಿ ಕಥೆಯೇನು? ತಿಳಿದುಕೊಳ್ಳೋಣ ಬನ್ನಿ.

Mlr Christians History_1 Bidnur Fort

16ನೇ ಶತಮಾನದಿಂದ (1500ರ ನಂತರ) ಗೋವಾದಿಂದ ಜನರ ವಲಸೆ ಪ್ರಾರಂಭವಾಯಿತು. ಅದೂ ಸಹ ಮಾನವ ಚರಿತ್ರೆಯ ಅತಿ ಕ್ರೂರ ಅಧ್ಯಾಯಗಳಲ್ಲೊಂದು. ಅದರಿಂದ ಪಾರಾಗಲು ಹಲವು ಜನರು ವರ್ಷಾಂತರಗಳಲ್ಲಿ ಸಾಲು ಸಾಲಾಗಿ ದಕ್ಷಿಣಕ್ಕೆ (ಮತ್ತು ಕೆಲವರು ಉತ್ತರಕ್ಕೆ) ತೆರಳಿ ಅಲ್ಲಲ್ಲಿ ವಾಸಿಸಿದರು. ಅದರಲ್ಲಿ ಬ್ರಾಹ್ಮಣರಿಂದ ಬುಡಕಟ್ಟು ಜನಾಂಗದ ವರೆಗೂ ವಿವಿಧ ವರ್ಗದ ಜನರಿದ್ದರು. ಆದರೆ ಅವರೆಲ್ಲರೂ ಕೊಂಕಣಿ ಮಾತೃಭಾಷೆಯ ಜನರಾಗಿದ್ದರು. ಪೋರ್ಚುಗೀಸರ ಕೃಪೆಯಿಂದಾಗಿ ಕ್ರೈಸ್ತ ಧರ್ಮೀಯರಾಗಿದ್ದವರೂ ಹೀಗೆ ವಲಸೆ ಬಂದವರಲ್ಲಿ ಬಹಳಷ್ಟು ಜನರಿದ್ದರು. ಹಾಗೆ ಎಲ್ಲರಂತೆ ಕನ್ನಡದ ಕರಾವಳಿಯಲ್ಲಿ, ತುಳುನಾಡಿನಲ್ಲಿ ಕೊಂಕಣಿ ಕ್ರೈಸ್ತರು ನೆಲೆ ಕಂಡು ಕೊಂಡರು.

ಈ ಕ್ರೈಸ್ತರಲ್ಲಿ ಬಹುತೇಕರು ಕೃಷಿಕರು. ಇಲ್ಲಿನ ನಾಡನ್ನು ಆಳುತ್ತಿದ್ದ ಕೆಳದಿಯ ನಾಯಕರು ಕ್ರೈಸ್ತರ ಬದ್ಧತೆಯ ಗುಣ, ಕೌಶಲ್ಯ, ಪರಿಶ್ರಮ, ನಿಷ್ಠೆ ಪ್ರಾಮಾಣಿಕತೆಯನ್ನು ಕಂಡು ಮೆಚ್ಚಿ ಅವರಿಗೆ ದುಡಿಯಲು ಸಾಕಷ್ಟು ಕೃಷಿ ಭೂಮಿ ದಯಪಾಲಿಸಿದರು. ಕ್ರೈಸ್ತರು ಶ್ರದ್ಧೆಯಿಂದ ದುಡಿಯುತ್ತಿದ್ದರು ಮತ್ತು ಕಂದಾಯವನ್ನು ನಿಯತ್ತಿನಿಂದ ಪಾವತಿಸುತ್ತಿದ್ದರು. ಹಾಗಾಗಿ ಕ್ರೈಸ್ತರೆಂದರೆ ಎಲ್ಲರಿಗೂ ಅಚ್ಚು ಮೆಚ್ಚು. ಸ್ಥಳೀಯ ಅರಸರಿಗೂ ಕ್ರೈಸ್ತರೆಂದರೆ ವಾತ್ಸಲ್ಯ. ಅವರೆಲ್ಲರೂ ಕ್ರೈಸ್ತರನ್ನು ಪ್ರೋತ್ಸಾಹಿಸಿದರು, ಪೋಷಿಸಿದರು. ಹೀಗೆ ಕೊಂಕಣಿ ಕ್ರೈಸ್ತರು ಈ ನಾಡಿಗೆ ಬಹು ದೊಡ್ಡ ಕೊಡುಗೆ ನೀಡುತ್ತಾ ಬಾಳಿ ಬದುಕಿದ್ದರು.

Mlr Christians History_2 Goa to Mloreಮಂಗಳೂರಿನಲ್ಲಿ ಆವಾಗೆಲ್ಲಾ ಪೋರ್ಚುಗೀಸರದ್ದೇ ಹೆಚ್ಚಿನ ಅಧಿಪತ್ಯ ಸ್ಥಾಪಿಸಿದ್ದರು. ಬ್ರಿಟಿಷರು ಇತ್ತ ಹೆಚ್ಚು ಕಾಲೂರಿರಲಿಲ್ಲ. ಪೋರ್ಚುಗೀಸರ ಕೃಪೆಯಿಂದ ಮಂಗಳೂರಿನ ಬೆಂಗರೆ ಬಳಿ, ಈಗಿನ ರೊಸಾರಿಯೊ ಚರ್ಚ್, ಮೊತ್ತ ಮೊದಲ ಚರ್ಚ್ ಆಗಿ 1568ರಲ್ಲಿ ಸ್ಥಾಪನೆಯಾಯಿತು. ಅದೇ ವರ್ಷ ಉಳ್ಳಾಲದಲ್ಲಿ (ಪಾನೀರ್) ಮತ್ತು ಅರಳ (ಒಮ್ಜೂರ್) ಎಂಬಲ್ಲಿಯೂ ಎರಡು ಚರ್ಚ್‍ಗಳ ಸ್ಥಾಪನೆಯಾಯಿತು. ಕಾಲಾಂತರದಲ್ಲಿ ಅನೇಕ ಚರ್ಚುಗಳು ಸ್ಥಾಪನೆಯಾದವು. ಕ್ರೈಸ್ತರು ತುಂಬಾ ಧರ್ಮಬೀರುಗಳು. ತಮ್ಮ ಧರ್ಮವನ್ನು ನಿಷ್ಠೆಯಿಂದ, ಶ್ರದ್ಧೆಯಿಂದ ಪಾಲಿಸುತ್ತಿದ್ದರು. ಹಾಗಾಗಿ ಅವರ ಸಂಖ್ಯೆ ಹೆಚ್ಚಿರುವಲ್ಲೆಲ್ಲಾ ಅವರಿಗನುಕೂಲವಾಗುವಂತೆ ಚರ್ಚ್‍ಗಳ ಸ್ಥಾಪನೆಯಾಯಾಯಿತು.

ಅದು 1760 ದಶಕದ ಆರಂಭ. ಆಗಲೇ ಮೈಸೂರು ಪ್ರಾಂತ್ಯದಲ್ಲಿ ಅರಾಜಕತೆ ತಾಂಡವವಾಡುತ್ತಿತ್ತು. ಆತಂಕದ ಬೆಳವಣಿಗೆಯಾಗಿ ಮುಸ್ಲಿಂ ಸೈನಿಕನಾಗಿದ್ದ ಹೈದರಾಲಿ ಎಂಬಾತನು ಮೈಸೂರು ಪ್ರಾಂತ್ಯದ ಅಧಿಕಾರದ ಚುಕ್ಕಾಣಿ ಹಿಡಿಯುವ ಸಾಧ್ಯತೆಗಳು ಗೋಚರಿಸುತ್ತಿದ್ದವು. ಅದರ ಮಾಹಿತಿ ಇತ್ತ ಮಂಗಳೂರಿನಲ್ಲಿದ್ದ ಜನರಿಗೂ ತಲುಪಿತ್ತು. ಅದು ಬೆಚ್ಚಿ ಬೀಳಿಸುವ ಸುದ್ದಿಯೇ ಆಗಿತ್ತು.

ಅದು ಹೆಚ್ಚು ಆಘಾತಕಾರಕವಾಗಿ ಪರಿಣಮಿಸಿದ್ದು ಮಂಗಳೂರಿನ ಆಸುಪಾಸಿನಲ್ಲಿದ್ದ ಕೆಲ ಭವ್ಯ ಬಂಗಲೆಗಳಲ್ಲಿ ವಾಸಿಸುತ್ತಿದ್ದ ಶ್ರೀಮಂತ ಮನೆತನಗಳ ಕ್ರೈಸ್ತರಿಗೆ. ಇವರ್ಯಾರೆಂದರೆ ಸಣ್ಣ ಪುಟ್ಟ ಆಳರಸರಂತೆ ಬದುಕುತ್ತಿದ್ದವರು. ಕ್ರೈಸ್ತರಲ್ಲಿ ಬಹುತೇಕರು ಅಶಿಕ್ಷಿತರೂ, ಕೃಷಿಕರೂ ಆಗಿದ್ದರು. ಕೆಲವರು ಇತರ ಕೌಶಲ್ಯದ ಕೆಲಸ (ಮರಗೆಲಸ, ಕಮ್ಮಾರಿಕೆ ಇತ್ಯಾದಿ) ಮಾಡುತ್ತಿದ್ದರು. ಆದರೆ ತುಂಬಾ ಕಡಿಮೆ ಸಂಖ್ಯೆಯ ಈ ಕುಲೀನ ವರ್ಗದ ಕ್ರೈಸ್ತರು ಸುಶಿಕ್ಷಿತರೂ ಪ್ರಭಾವಶಾಲಿಗಳೂ ಹಣ ಬಲ, ಬಾಹುಬಲವುಳ್ಳವರೂ ಆಗಿದ್ದರು. ಸಾಮಾನ್ಯ ಕ್ರೈಸ್ತರಿಂದ ಅವರು ಸಾಕಷ್ಟು ಅಂತರವನ್ನು ಕಾಯ್ದುಕೊಂಡಿದ್ದರು (ಈಗಲೂ ಅಂತಹ ವರ್ಗ ಅಸ್ತಿತ್ವದಲ್ಲಿದೆ).

ಹೈದರಾಲಿ, ಅಂದರೆ ಮುಸ್ಲಿಮನೊಬ್ಬ, ತಮ್ಮ ನೆರೆಯ ರಾಜ್ಯದಲ್ಲಿ ಪಟ್ಟಕ್ಕೇರಿದರೆ ಆಗುವ ಅನಾಹುತಗಳೇನು, ಅವರಿಂದೊದಗುವ ಅಪಾಯ, ಆತಂಕಗಳೇನು ಎಂಬುದರ ಸ್ಪಷ್ಟ ಅಂದಾಜು ಅವರಿಗಿತ್ತು. ಅದರಿಂದಾಗಿ ಅವರು ಆತಂಕಕ್ಕೊಳಗಾಗಿದ್ದಷ್ಟೇ ಅಲ್ಲ ಭಯ ಭೀತಿಯೂ ಅವರನ್ನಾವರಿಸಿತು.

ಸುಶಿಕ್ಷಿತರಾಗಿದ್ದರಿಂದ ಈ ಮನೆತನಗಳವರಿಗೆ ಪ್ರಪಂಚದಾದ್ಯಂತ ಮತ್ತು ದಕ್ಷಿಣ ಹಾಗೂ ಉತ್ತರ ಭಾರತದಲ್ಲಿ ಮುಸ್ಲಿಮ್ ದೊರೆ, ಸಾಮ್ರಾಜ್ಯಗಳಿಂದ ನಡೆಯುತ್ತಿದ್ದ ಹಿಂಸೆ, ಕ್ರೌರ್ಯ, ಬಲಾತ್ಕಾರದ ಮತಾಂತರ ಮತ್ತು ಪರಧರ್ಮಿಗಳನ್ನು ಶೋಷಿಸುವ, ಪೀಡಿಸುವ ಸಂಗತಿಗಳ ಬಗ್ಗೆ ಅರಿವಿತ್ತು. ಅಷ್ಟೇ ಅಲ್ಲದೆ ಹಿಂದೂ, ಜೈನ ರಾಜಮನೆತನ, ಅರಸರಿಂದ ದೊರೆಯುತ್ತಿದ್ದ ಬೆಂಬಲ, ಪೋಷಣೆ, ರಕ್ಷಣೆ, ಸಹಕಾರ ಮುಸ್ಲಿಮರಿಂದ ಸಿಗುವುದಿಲ್ಲವೆಂಬುದು ಅವರಿಗೆ ಖಚಿತವಾಗಿತ್ತು. ಅಷ್ಟೇ ಅಲ್ಲದೆ ಸಾಮ್ರಾಜ್ಯ ವಿಸ್ತರಣೆಯ ಹಪಾಹಪಿಯಲ್ಲಿ ಸೋತ ಸಾಮ್ರಾಜ್ಯಗಳನ್ನು ನಿರ್ದಯವಾಗಿ ನಾಶಪಡಿಸಿ ಭಯಂಕರ ಕ್ರೌರ್ಯ ಮೆರೆದು ಸೆರೆ ಸಿಕ್ಕವರನ್ನಷ್ಟೇ ಅಲ್ಲದೆ ಸಾಮಾನ್ಯ ಜನರನ್ನೂ ಹಿಂಸಿಸುವುದು, ಮತಾಂತರಿಸುವುದು ಮುಂತಾದವೆಲ್ಲಾ ಮಾಡುತ್ತಿದ್ದುದು ಅವರಿಗೆ ಗೊತ್ತಿತ್ತು. ಮಂಗಳೂರು ಮತ್ತು ಕರಾವಳಿಯಾದ್ಯಂತ ಅಲ್ಲಿಯವರೆಗೆ ನೆಮ್ಮದಿ, ಶಾಂತಿ, ಸಮೃದ್ಧತೆ ರಾರಾಜಿಸುತ್ತಿತ್ತು.

Mlr Christians History_3 Rani Abbakka

ಮಂಗಳೂರಿಗೆ ಮತ್ತೊಂದು ಮಹತ್ವವಿತ್ತು. ಹಾಗೆ ನೋಡಿದರೆ ಮಂಗಳೂರಿಗೆ ಅಸ್ತಿತ್ವ ಬಂದಿದ್ದೇ ಅದರಿಂದ. ಅದು ಇಲ್ಲಿದ್ದ ಬಂದರು. ನೇತ್ರಾವತಿ ಮತ್ತು ಫಲ್ಗುಣಿ ನದಿಗಳು ಸಂಗಮವಾಗಿ ಸಮುದ್ರ ಸೇರುವ ಆಯಕಟ್ಟಿನ ಈ ಪ್ರದೇಶ ರಕ್ಷಣೆ, ವ್ಯಾಪಾರ ಮತ್ತು ವಾಸಕ್ಕೆ ಹೇಳಿ ಮಾಡಿಸಿದ ಸ್ಥಳವಾಗಿತ್ತು. ಆದುದರಿಂದಲೇ ಇಲ್ಲಿ ಮನುಷ್ಯರ ವಾಸ ಉಂಟಾಯಿತು. ಅದೇ ಕಾರಣಕ್ಕೆ ಆಸು ಪಾಸಿನ ರಾಜರುಗಳಿಗೆ, ಸಾಮ್ರಾಜ್ಯಗಳಿಗೆ ಮಂಗಳೂರಿನ ಮೇಲೆ ತುಂಬಾ ಕಣ್ಣಿತ್ತು. ಉಳ್ಳಾಲದಲ್ಲಿ ಕೆಚ್ಚೆದೆಯ ರಾಣಿಯಾಗಿದ್ದ ಅಬ್ಬಕ್ಕಳು ಪೋರ್ಚುಗೀಸರನ್ನು ಇಲ್ಲಿಂದ ಓಡಿಸಲು ಬಹುವಾಗಿ ಹೋರಾಡಿದಳು. ಆಕೆಯ ತರುವಾಯ ಪೋರ್ಚುಗೀಸರಿಗೆ ಇಲ್ಲಿ ಅಷ್ಟೊಂದು ಪ್ರತಿರೋಧ ಎದುರಾಗಿರಲಿಲ್ಲ.

ಒಂದೆಡೆ ಪೋರ್ಚುಗೀಸರಿಂದ ಧಾರ್ಮಿಕ ಬೆಂಬಲ ಮತ್ತು ಕೆಳದಿಯ ರಾಜ ಮನೆತನದಿಂದ ಮುಕ್ತ ಸಹಕಾರ, ಭದ್ರತೆ ಕ್ರೈಸ್ತರಿಗೆ ಒದಗಿ ಬಂದಿತ್ತು. ಹಳ್ಳಿಗಳಲ್ಲಿನ ಜನರು ತಮ್ಮಷ್ಟಕ್ಕೆ ತಾವೆಂಬಂತಿದ್ದರು. ಆದರೆ ಈ ಉನ್ನತ ಮನೆತನಗಳ ಕ್ರೈಸ್ತರಿಗೆ ಮೈಸೂರಿನಲ್ಲಿ ಒಡೆಯರ್ ರಾಜವಂಶಸ್ಥರಿಂದ ಮುಸ್ಲಿಮರ ಕೈಗೆ ಆಡಳಿತ ಹಸ್ತಾಂತರವಾಗುವ ಸಂಗತಿ ಸಹನೀಯವಾಗಿರಲಿಲ್ಲ. ಅದು ಅವರಿಗೆ ಚಿಂತಿತರಾಗುವಂತೆ ಮಾಡಿತು.

ಹೈದರಾಲಿ ಎಂಬಾತನು ಮೈಸೂರಿಗೆ ದೊರೆಯಾದರೆ ಆತ ಖಂಡಿತವಾಗಿ ಮಂಗಳೂರನ್ನು ತನ್ನ ಸಾಮ್ರಾಜ್ಯಕ್ಕೆ ಸೇರಿಸಲು ಯುದ್ಧ ಮಾಡುವುದು ಶತಸ್ಸಿದ್ಧ ಎಂಬುದನ್ನು ಅದಾಗಲೇ ಊಹಿಸಿದ್ದ ಮಂಗಳೂರಿನ ಈ ಶ್ರೀಮಂತ ಕ್ರೈಸ್ತರಿಗೆ ಏನು ಮಾಡುವುದೆಂದೇ ತೋಚಲಿಲ್ಲ.

ಮುಂದೆ ಟಿಪ್ಪು ಸುಲ್ತಾನನು 1784 ಫೆಬ್ರವರಿಯಲ್ಲಿ ಮಂಗಳೂರು ಸೇರಿದಂತೆ ಸಮಸ್ತ ಕ್ರೈಸ್ತರೆಲ್ಲರನ್ನೂ ಬಂಧಿಸಲು ಆದೇಶ ಹೊರಡಿಸಲು ಕಾರಣವೇ ಈ ಕೆಲ ಕ್ರೈಸ್ತರು ಬ್ರಿಟಿಷರ ಏಜೆಂಟರಾಗಿದ್ದರು, ತನ್ನ ವಿರುದ್ಧ ಬ್ರಿಟಿಷರಿಗೆ ಬೆಂಬಲ ನೀಡಿದ್ದರೆಂಬ ಆರೋಪ ಹೊರಿಸಿದ್ದನೆಂದು ವಾದಿಸಲಾಗುತ್ತಿದೆ. ಈ ವಾದ ಕೇವಲ ವಾದವಾಗಿಯೇ ಉಳಿದಿದೆಯಷ್ಟೇ ಹೊರತು ಎಲ್ಲೂ ಸಾಬೀತಾಗಿಲ್ಲವೆಂದು ಚರಿತ್ರೆಕಾರರು ಸ್ಪಷ್ಟಪಡಿಸಿದ್ದಾರೆ. ಹಾಗಾದರೆ ನಿಜವಾಗಿ ಆಗ ಏನು ನಡೆದಿತ್ತು?

ಹೈದರಾಲಿ ಮೈಸೂರನ್ನು ತನ್ನ ಕೈಗೆ ತೆಗೆದುಕೊಂಡ ಸುದ್ದಿಯಿಂದ ಇಲ್ಲಿನ ಶ್ರೀಮಂತ ಕ್ರೈಸ್ತರು ಕಂಗೆಟ್ಟಿದ್ದು ನಿಜ. ಅವರಿಗೆ ಅಲ್ಲಿಯ ತನಕ ದೊರೆತಿದ್ದ ಮುಕ್ತ ವಾತಾವರಣ, ನೆಮ್ಮದಿ ಕದಡುವ ಭಯ ಶುರುವಾಗಿತ್ತು. ಅಲ್ಲದೆ ಮಂಗಳೂರನ್ನು ಆಕ್ರಮಿಸಿ ಕೋಟೆಯನ್ನು ವಶಪಡಿಸಿಕೊಂಡರೆ ಅಲ್ಲಿಗೆ ಅವರ ದಿನಗಳು ಮುಗಿದೇ ಹೋದವೆಂಬುದು ಖಚಿತ. ಇತ್ತ ಪೋರ್ಚುಗೀಸರು ಕೇವಲ ಬಂದರು ನಗರಿಗಳಿಗೆ ಮಾತ್ರ ಸೀಮಿತವಾಗಿದ್ದರು. ಉತ್ತರದಾದ್ಯಂತ ಬ್ರಿಟಿಷರು ಪ್ರವರ್ಧಮಾನಕ್ಕೆ ಬಂದಿದ್ದರು. ದಕ್ಷಿಣಕ್ಕೂ ಅವರು ದಾಪುಗಾಲು ಹಾಕುತ್ತಿದ್ದರು. ಇದನ್ನು ಮನಗಂಡಿದ್ದ ಈ ಉನ್ನತ ಮನೆತನಗಳ ಕೆಲ ಕ್ರೈಸ್ತರು ಬ್ರಿಟಿಷರು ಮಂಗಳೂರು ಮತ್ತು ಕರಾವಳಿಯನ್ನು ಆಳುವುದು ಹೈದರಾಲಿಗಿಂತ ಸಾವಿರ ಪಟ್ಟು ಕ್ಷೇಮಕರವೆಂಬ ಯೋಚನೆ ಮಾಡಿದ್ದಿರಬಹುದು. ಹಾಗಾಗಿ ಅಂಥ ಕೆಲವರು ಗುಟ್ಟಿನಲ್ಲಿ ಬ್ರಿಟಿಷ್ ಸೇನಾ ಪಡೆಗೆ ಹಣಕಾಸು, ಅಕ್ಕಿ, ಧವಸ ಧಾನ್ಯ, ತೆಂಗು ಮುಂತಾದ ನೆರವನ್ನು ನೀಡಿರಲೂಬಹುದೆಂದು ಅಂದಾಜಿಸಬಹುದು.

ಆದರೆ, ಈ ಆಪಾದನೆಯು ಹಲವು ಕಡೆ ಕೇಳಿ ಬರುತ್ತದೆಯಾದರೂ ಅದು ಸಾಕ್ಷ್ಯಾಧಾರ ರಹಿತವಾಗಿದ್ದು, ಎಲ್ಲಿಯೂ ದಾಖಲಾಗಿಲ್ಲವೆಂದು ಇತಿಹಾಸಕಾರರೇ ಹೇಳುತ್ತಾರೆ. ಹಾಗೆ ನಡೆದದ್ದು ಎಲ್ಲಿಯೂ ಖಚಿತಪಟ್ಟಿಲ್ಲ ಮತ್ತು ಅದಕ್ಕೆ ಆಧಾರಗಳೇ ದೊರಕುವುದಿಲ್ಲವೆಂದು ಪ್ರತಿಪಾದಿಸಲಾಗಿದೆ.

ಹಾಗಾದರೆ ಟಿಪ್ಪುವಿಗೆ ಯಾರು ಹಾಗೆ ಹೇಳಿದ್ದರು?

Fort of Mangaluru

ಹೈದರಾಲಿ, ಮಂಗಳೂರಿನ ಕ್ರೈಸ್ತರು ಊಹಿಸಿದಂತೆಯೇ ನಡೆದುಕೊಂಡ. ಆತ ಕೆಚ್ಚೆದೆಯ ಹೋರಾಟಗಾರ, ಯುದ್ಧ ತಜ್ಞನಾಗಿದ್ದ ಎಂಬುದು ಎಷ್ಟು ಸತ್ಯವೋ ಅಷ್ಟೇ ಕುಟಿಲತನದಿಂದ ಆತ ಶತ್ರುಗಳನ್ನು ಸದೆಬಡಿದದ್ದೂ ಸತ್ಯ. ಇದಕ್ಕೆ ಅತ್ಯಂತ ದೊಡ್ಡ ಪುರಾವೆ ಆತ ಚಿತ್ರದುರ್ಗವನ್ನು ವಶಪಡಿಸಿದ ರೀತಿ. ನೇರ ಯುದ್ಧದಲ್ಲಿ ಗೆಲ್ಲಲು ಅಸಾಧ್ಯವಾಗಿದ್ದರಿಂದ ಮೋಸ, ವಂಚನೆ, ದ್ರೋಹಗಳನ್ನೇ ಬಳಸಿಕೊಂಡು ಆತ ಚಿತ್ರದುರ್ಗದ ಕೋಟೆಯನ್ನು ವಶಪಡಿಸಿಕೊಂಡ ಮತ್ತು ಮದಕರಿ ನಾಯಕನನ್ನು ಬಂಧಿಸಿ ಶ್ರೀರಂಗಪಟ್ಟಣದಲ್ಲಿ ಸೆರೆಯಾಳಾಗಿ ಇಟ್ಟ. ಬಿದನೂರು ಕೋಟೆಯನ್ನೂ ವಶಪಡಿಸಿದ್ದರಿಂದಾಗಿ ಕರಾವಳಿಯೂ ಆತನ ಕೈಗೆ ಹೋಯಿತು.

ಆಗ ಇಲ್ಲಿನ ಚರ್ಚುಗಳಲ್ಲಿ ಪಾದರಿಗಳಾಗಿದ್ದವರೆಲ್ಲರೂ ಪೋರ್ಚುಗೀಸರು. ಗೋವಾದಿಂದ ಅವರನ್ನು ನೇಮಕಗೊಳಿಸಲಾಗುತ್ತಿತ್ತು. ಹೈದರಾಲಿ ಬಹಳಷ್ಟು ವಿಷಯಗಳಲ್ಲಿ ಟಿಪ್ಪುವಿಗಿಂತ ಉತ್ತಮನೂ, ಸಂಯಮಶೀಲನೂ ಆಗಿದ್ದ. ಫರಂಗಿಪೇಟೆಯ ಮೊಂತೆ ಮಾರಿಯಾನೊ ಸೆಮಿನರಿಯ ಮುಖ್ಯಸ್ಥರಾಗಿದ್ದ ಫಾ. ಜೋಕಿಮ್ ಮಿರಾಂದಾರ ಜೊತೆ ಹೈದರಾಲಿಗೆ ಆತ್ಮೀಯವಾದ ಸ್ನೇಹವಿತ್ತು. ಬ್ರಿಟಿಷರ ಜೊತೆ ಹೈದರಾಲಿ ಸೆಣಸಿದಾಗ ಶ್ರೀಮಂತ ಕ್ರೈಸ್ತರು ಮತ್ತು ಪಾದರಿಗಳು ಬ್ರಿಟಿಷರ ಪರವಾಗಿದ್ದರು ಎಂದು ಹೈದರಾಲಿ ಆರೋಪಿಸಿ ಪಾದರಿಗಳು ಸೇರಿದಂತೆ ಅನೇಕರನ್ನು ಬಂಧಿಸುತ್ತಾನೆ. ಫಾದರ್ ಜೋಕಿಂ ಮಿರಾಂದಾರನ್ನು ಮಧ್ಯಸ್ಥಿಕೆಗೆ ಆಹ್ವಾನಿಸಿ, ಬಂಧಿತರನ್ನು ಬಿಡುಗಡೆಗೊಳಿಸಿ ಎಚ್ಚರಿಕೆ ಕೊಟ್ಟು ಹೋಗುತ್ತಾನೆ. ಈ ಬೆಳವಣಿಗೆಯನ್ನು ಅಪ್ರಾಪ್ತ ವಯಸ್ಸಿನ ತರುಣ ಟಿಪ್ಪು ಬೆರಗುಗಣ್ಣುಗಳಿಂದ, ಸಂಶಯದಿಂದ ನೋಡುತ್ತಿದ್ದ. ಅವನ ಮನಸ್ಸಿನಲ್ಲಿ ಈ ಬಿಳಿಯ ತೊಗಲಿನ ಪಾದರಿಗಳು ಮತ್ತವರ ಅನುಯಾಯಿಗಳಾದ ಕ್ರೈಸ್ತರು ಮುಸ್ಲಿಮರನ್ನು ಒಪ್ಪುವವರಲ್ಲ, ಅವರ ನಿಷ್ಠೆಯೇನಿದ್ದರೂ ಬ್ರಿಟಿಷರ ಕಡೆಗೆ ಎಂದು ತಪ್ಪಾದ, ಅವಾಸ್ತವಿಕ ಚಿಂತನೆಯನ್ನು ಮೈಗೂಡಿಸಿಕೊಂಡ. ಹೈದರಾಲಿ ಮರಣಾ ನಂತರ ಪಟ್ಟವೇರಿದ ಕೂಡಲೇ ಕ್ರೈಸ್ತರು ತನಗೆ ವಿರೋಧಿಗಳು, ಅವರನ್ನು ಸಂಪೂರ್ಣವಾಗಿ ನಿವಾರಿಸಬೇಕೆಂದು ಯೋಜನೆ ಕೈಗೊಂಡ.

1783ರಲ್ಲಿ ಬ್ರಿಟಿಷರು ಮಂಗಳೂರಿನ ಕೋಟೆಯನ್ನು ಬ್ರಿಟಿಷರು ವಶಪಡಿಸಿಕೊಂಡರು. ಜನರಲ್ ಮ್ಯಾಥ್ಯೂಸನ ನೇತೃತ್ವದಲ್ಲಿ ಈ ಜಯ ಸಾಧಿಸಲಾಯಿತು. ನಂತರ ಆತ ಹಲವು ಕ್ರೈಸ್ತರನ್ನು ತನ್ನ ಸೈನ್ಯಕ್ಕೆ ಸೇರ್ಪಡೆಗೊಳಿಸಿದ. ನಂತರ, ಎರಡನೇ ಆಂಗ್ಲೋ ಮೈಸೂರು ಯುದ್ಧದ ಸಮಯದಲ್ಲಿ, ಪ್ಯಾರಿಸ್ ಒಪ್ಪಂದದಿಂದಾಗಿ ಫ್ರೆಂಚರು ಮತ್ತು ಬ್ರಿಟಿಷರ ಯುದ್ಧ ನಿಲುಗಡೆಯಾಗಿತ್ತು. ಅದರ ಪರಿಣಾಮವಾಗಿ ಟಿಪ್ಪುವಿನ ಸೈನ್ಯದಲ್ಲಿದ್ದ ಫ್ರೆಂಚ್ ಸೈನಿಕರು, ಅವರೂ ಕ್ರೈಸ್ತರಾಗಿದ್ದರು, ಬ್ರಿಟಿಷರ ವಿರುದ್ಧ ಯುದ್ಧದಿಂದ ಹಿಂದೆ ಸರಿದರು. ಇದರಿಂದ ಟಿಪ್ಪುವಿಗೆ ಕ್ರೈಸ್ತರ ಮೇಲೆ ವಿಪರೀತ ಆಕ್ರೋಶವುಂಟಾಯಿತು.

Tipu Sultan

ಮಂಗಳೂರು ಕೋಟೆಯಲ್ಲಿ ಕೈವಶ ಮಾಡಿಕೊಳ್ಳಲು ಟಿಪ್ಪು ನಿರಂತರ ಹೋರಾಟ ನಡೆಸಿದ. ಆದರೆ ಆತನ ಎಲ್ಲಾ ಪ್ರಯತ್ನಗಳು ವಿಫಲವಾದವು. ಬ್ರಿಟಿಷರ ಮುಂದಾಳು ಕರ್ನಲ್ ಕ್ಯಾಂಪ್‍ಬೆಲ್ ಮಂಗಳೂರಿನ ಕೋಟೆಯನ್ನು ಉಳಿಸಿಕೊಳ್ಳುವುದಕ್ಕಿಂತ ಬಿಟ್ಟು ಕೊಡುವುದೇ ಲೇಸು ಎಂದು ತೀರ್ಮಾನಿಸಿ 1784 ಜನವರಿ 30ರಂದು ಟಿಪ್ಪುವಿಗೆ ಅದನ್ನು ಹಸ್ತಾಂತರಿಸಿದ. ಮಾರ್ಚ್ 11ಕ್ಕೆ ಮಂಗಳೂರು ಒಪ್ಪಂದವೇರ್ಪಟ್ಟು ಎರಡನೇ ಆಂಗ್ಲೋ ಮೈಸೂರು ಯುದ್ಧ ಸಮಾಪ್ತಿಯಾಯಿತು.

ಹೀಗೆ ಮಂಗಳೂರು ತನ್ನ ಸುಪರ್ದಿಗೆ ಸಿಕ್ಕಿದ್ದೇ ತಡ, ಟಿಪ್ಪು ಕ್ರೈಸ್ತರ ಮೇಲೆ ತನಗಿದ್ದ ನಂಜನ್ನು ಕಾರಲು ಶುರುವಿಟ್ಟುಕೊಂಡ.

ಈಗಾಗಲೇ ಹೇಳಿರುವಂತೆ, ಅಂದಿನ ಶ್ರೀಮಂತ ಕ್ರೈಸ್ತರು ಬ್ರಿಟಿಷರಿಗೆ ಯಾವುದೇ ರೀತಿಯಲ್ಲಿ ನೆರವಾದ, ಸಹಕಾರ ನೀಡಿದ ದಾಖಲೆಗಳು ದೊರೆತಿಲ್ಲ. ಈ ಆರೋಪವೇ ಆಧಾರ ರಹಿತವಾದುದು.

ಒಂದು ವೇಳೆ, ಈ ವಾದವು ಸತ್ಯಾಂಶವನ್ನು ಒಳಗೊಂಡಿದ್ದೇ ಆಗಿತ್ತು ಎನ್ನೋಣ. ಪೋರ್ಚುಗೀಸ್ ಪಾದ್ರಿಗಳು ಮತ್ತು ಶ್ರೀಮಂತ ಮನೆತನಗಳವರು ಬ್ರಿಟಿಷರಿಗೆ ನೆರವಾಗಿದ್ದೇ ಹೌದಾದಲ್ಲಿ, ಅಂತಹ ಸಂದರ್ಭದಲ್ಲಿ ತಪ್ಪಿತಸ್ಥರನ್ನಷ್ಟೇ ಹಿಡಿದು ಶಿಕ್ಷಿಸಬೇಕಿತ್ತಲ್ಲವೇ? ಹೈದರಾಲಿಯಾದರೂ ಸಂಶಯಕ್ಕೊಳಪಟ್ಟವರನ್ನು ಬಂಧಿಸಿದ, ಎಚ್ಚರಿಕೆ ಕೊಟ್ಟ ದೃಷ್ಟಾಂತವಿತ್ತಲ್ಲವೆ? ಮತ್ತು ಟಿಪ್ಪುವು ಯಾರು ರಾಜದ್ರೋಹಿಗಳೋ, ತಪ್ಪಿತಸ್ಥರೋ ಅವರನ್ನಷ್ಟೇ ಬಂಧಿಸಿ ಶಿಕ್ಷಿಸಬೇಕಾಗಿತ್ತಲ್ಲವೇ? ಯಾಕೆ ಹಾಗೆ ಮಾಡಲಿಲ್ಲ? ಅದರ ಬದಲಾಗಿ ಎಲ್ಲೋ ದೂರದ ಹಳ್ಳಿಗಳಲ್ಲಿ ಗದ್ದೆಗಳಲ್ಲಿ ದುಡಿಯುತ್ತಿದ್ದ ಮುಗ್ಧ, ಹೊರಗಿನ ಪ್ರಪಂಚದ ಆಗು ಹೋಗುಗಳಿಗೆ ಕಿಂಚಿತ್ತೂ ಸಂಬಂಧವಿರದ ನಿರಪರಾಧಿ ಜನರನ್ನೆಲ್ಲಾ ಯಾಕೆ ಶಿಕ್ಷಿಸಿದ, ಹಿಂಸಿಸಿದ? ಯಾರೋ ಕೆಲವರಷ್ಟೇ ಮಾಡಿರಬಹುದಾದ ಅಪರಾಧಕ್ಕೆ ಇಡೀ ಜನಾಂಗವನ್ನೇ ಯಾಕೆ ಗುರಿ ಮಾಡಬೇಕಿತ್ತು?

ಈ ಪ್ರಶ್ನೆಯ ಉತ್ತರದಲ್ಲಿಯೇ ಎಲ್ಲವೂ ಅಡಗಿದೆ. ಹೌದು. ಉತ್ತರ ಟಿಪ್ಪುವಿನ ವ್ಯಕ್ತಿತ್ವಲ್ಲಿದೆ.

ಟಿಪ್ಪು ಸುಲ್ತಾನ್ ಓರ್ವ ಮತಿವಿಕಲ, ದುರಹಂಕಾರಿ, ವಿವೇಚನೆಯಿಲ್ಲದ, ಮನುಷ್ಯ ರೂಪದ ರಾಕ್ಷಸನಾಗಿದ್ದ. ಅದೊಂದೇ ಕಾರಣದಿಂದ ಇಷ್ಟೆಲ್ಲಾ ಅನಾಹುತ, ದುರಂತ, ಘೋರ ಘಟನೆಗಳು ನಡೆದಿದ್ದು.

ಅಷ್ಟಕ್ಕೂ ಹೈದರಾಲಿ ಕಟ್ಟಿ ಕೊಟ್ಟ ಸಾಮ್ರಾಜ್ಯವನ್ನು ಆತನ ಪುತ್ರನೆಂಬ ಒಂದೇ ಕಾರಣಕ್ಕೆ (ಆತನಿಗೆ ಪಟ್ಟ ಕೊಡಲು ಕುಟುಂಬದಲ್ಲಿಯೇ ವಿರೋಧವಿತ್ತು) ಅನಾಯಾಸವಾಗಿ ದೊರಕಿಸಿಕೊಂಡ ಟಿಪ್ಪು ಸುಲ್ತಾನ್ ತನ್ನ ಮದಭರಿತ, ಅನೀತಿಯ, ಸ್ವೇಚ್ಛಾಚಾರದ, ಮಾನವೀಯತೆಗೆ ಕಿಂಚಿತ್ತೂ ಬೆಲೆ ಕೊಡದ ರಾಜ್ಯಭಾರದಿಂದ ಉಂಟು ಮಾಡಿದ್ದು ಅಕ್ಷರಶಃ ರಕ್ತಪಾತ, ಧರ್ಮಾಂಧತೆ, ಮತಾಂತರ ಮತ್ತು ಸರ್ವ ನಾಶ. ಮುಸ್ಲಿಮರಲ್ಲದವರೆಲ್ಲರನ್ನೂ ಆತ ಗುರಿಪಡಿಸಿ ಮದಗಜದಂತೆ ನಡೆಸಿಕೊಂಡಿದ್ದಾನೆ. ಕ್ರೈಸ್ತರಿಗಿಂತ ಬಹಳಷ್ಟು ಹೆಚ್ಚಿನ ಸಂಖ್ಯೆಯಲ್ಲಿ ಹಿಂದೂ, ಮಲಬಾರಿಗಳನ್ನು ಆತ ಹಿಂಸಿಸಿ ನಾಶಪಡಿಸಿದ್ದಾನೆ.

ಟಿಪ್ಪು ಸುಲ್ತಾನ್ ಎಷ್ಟರ ಮಟ್ಟಿರ ರಾಕ್ಷಸ, ಪೀಡಕ, ಹೀನ ಮನಸ್ಥಿತಿಯವನಾಗಿದ್ದ ಎಂಬುದಕ್ಕೆ ಆತ ಮನುಷ್ಯರನ್ನು ಹಿಂಸಿಸಿದ್ದು ಮಾತ್ರವಲ್ಲದೆ ಚರ್ಚುಗಳನ್ನು, ಹಿಂದೂ ದೇವಾಲಯಗಳನ್ನು ಒಡೆಸಿದ್ದೇ ಸಾಕ್ಷಿ. ದೇವಸ್ಥಾನ, ಗುಡಿ ಗೋಪುರಗಳನ್ನು ಆತ ನಾಶಪಡಿಸಿದ, ಆಕ್ರಮಿಸಿದ ಮಾಹಿತಿ ನಾಡಿನ ಜನರಿಗಿದೆ. ಆದರೆ ಆತ ಕರಾವಳಿಯಲ್ಲಿ ಚರ್ಚುಗಳನ್ನು ನೆಲಸಮ ಮಾಡಿದ್ದನ್ನು ಬಹುತೇಕವಾಗಿ ಮರೆಮಾಚಲಾಗಿದೆ.

ಆಗ ಕೊಂಕಣ/ಕನ್ನಡ ಕರಾವಳಿಯಲ್ಲಿ 27 ಚರ್ಚುಗಳಿದ್ದವು. ಪ್ರತಿಯೊಬ್ಬ ಕ್ರೈಸ್ತನನ್ನೂ ಬಿಡದೆ ಬಂಧಿಸಲು ಫರ್ಮಾನು ಹೊರಡಿಸಿದ ಟಿಪ್ಪು, ಎಲ್ಲಾ ಚರ್ಚುಗಳನ್ನೂ ನಾಶಪಡಿಸಲು ಆದೇಶ ನೀಡಿದ್ದ. ಹಾಗಾಗಿ (ಈಗಿನ) ಅವಿಭಜಿತ ದಕ್ಷಿಣ ಕನ್ನಡ ಸೇರಿದಂತೆ ನೆರೆಯ ಪ್ರದೇಶಗಳಲ್ಲಿದ್ದ 27 ಚರ್ಚುಗಳನ್ನೂ ಆತನ ಸೈನಿಕರು ನೆಲಸಮಗೊಳಿಸಲು ಮುಂದಾದರು. ಮಂಗಳೂರಿನ ಮಿಲಾಗ್ರಿಸ್‍ನ ಚರ್ಚ್ ಧ್ವಂಸಗೊಳಿಸಿದ ಮೇಲೆ ಅದರ ಇಟ್ಟಿಗೆ, ಕಲ್ಲು, ಮರಮಟ್ಟುಗಳನ್ನು ಬಳಸಿ ಬಾವುಟಗುಡ್ಡದ ಮೇಲೆ ಮಸೀದಿ ಸ್ಥಾಪಿಸಲಾಗಿತ್ತು ಎನ್ನುತ್ತದೆ ಚರಿತ್ರೆ.

Milagres Church Mangaluru

ಆದರೆ ಈ 27 ಚರ್ಚುಗಳನ್ನು ನಾಶಗೊಳಿಸುವ ಪ್ರಯತ್ನದಲ್ಲಿ 25 ಚರ್ಚುಗಳು ಪೂರ್ಣವಾಗಿ ಧ್ವಂಸಗೊಂಡು ನಾಶವಾದರೆ, ಉಳಿದ ಎರಡು ಚರ್ಚುಗಳಲ್ಲಿ ಮೂಡಬಿದ್ರೆಯ ಹೊಸಕೋಟೆಯ ಚರ್ಚ್ ಕಿಂಚಿತ್ತೂ ಹಾನಿಗೊಳಗಾಗದೆ ಸುಭದ್ರವಾಗಿ ಉಳಿಯಿತು. ನಿಷ್ಠಾವಂತ, ಕುಶಲ ದುಡಿಮೆಗಾರರಾದ ಕ್ರೈಸ್ತರಿಂದ ತನ್ನ ಆಸ್ಥಾನಕ್ಕೆ ವಿಪುಲವಾಗಿ ಆದಾಯ, ಗಳಿಕೆ ಪಡೆಯುತ್ತಿದ್ದ ಮೂಡಬಿದ್ರೆಯ ಜೈನರಸರು ತನ್ನ ಸುಪರ್ದಿಯ ಕ್ರೈಸ್ತರನ್ನು ರಕ್ಷಿಸಲು ಪಣತೊಟ್ಟು ಹೊಸಕೋಟೆ ಚರ್ಚ್ ಕೆಡವದಂತೆ ಟಿಪ್ಪುವಿಗೆ ಮನವಿ ಮಾಡಿದ. ತನಗೆ ಕಪ್ಪ ಕಾಣಿಕೆ ಸಂದಾಯ ಮಾಡುವ ತುಂಡರಸನ ಮನವಿಯನ್ನು ಪುರಸ್ಕರಿಸದೆ ಟಿಪ್ಪುವಿಗೆ ಬೇರೆ ಉಪಾಯವಿರಲಿಲ್ಲ. ಹಾಗಾಗಿ ಈ ಒಂದು ಚರ್ಚು ಸುಭದ್ರವಾಗಿ ಉಳಿಯಿತು. ಅದೇ ರೀತಿ ತನ್ನ ಸರಕಾರದಲ್ಲಿ ಕೆಲಸ ಮಾಡುತ್ತಿದ್ದ, ವ್ಯವಹಾರ, ಸಂಬಂಧವಿದ್ದ ಕ್ರೈಸ್ತರ ಮನೆತನಗಳಿಗೂ ವಿನಾಯಿತಿ ನೀಡಿದ್ದ.

ಇನ್ನೊಂದು ಚರ್ಚ್ ಕಿನ್ನಿಗೋಳಿಯ ಕಿರೆಂ ಚರ್ಚ್. ಈ ಚರ್ಚ್‍ನ ಮಾಡನ್ನು ಆಗಲೇ ತೆಗೆದು ಸಾಗಿಸಿ ಮೂಲ್ಕಿಯ ಶ್ರೀಮಂತ ಮುಸ್ಲಿಮನೊಬ್ಬನಿಗೆ ತಲುಪಿಸಿಯಾಗಿತ್ತು. ಗೋಡೆ ಮತ್ತು ಗರ್ಭಗ್ರಹವನ್ನು ಕೆಡವುವ ಮುನ್ನ ಹತ್ತಿರದ ಮೂರು ಬಂಟ ಮನೆತನಗಳವರು ಚರ್ಚ್‍ಗೆ ರಕ್ಷಣೆ ಒದಗಿಸಿ ಟಿಪ್ಪುವಿನ ಸೈನಿಕರನ್ನು ಹೊಡೆದಟ್ಟುವಲ್ಲಿ ನೆರವಾಗಿದ್ದರು. ಹಾಗಾಗಿ ಕಿರೆಂ ಚರ್ಚ್ ಪೂರ್ಣವಾಗಿ ನಾಶವಾಗಲಿಲ್ಲ. ಕೃತಜ್ಞತೆಯಾಗಿ ಅಂದಿನಿಂದ ಇಂದಿನವರೆಗೂ ಕಿರೆಂ ಚರ್ಚ್‍ನ ವಾರ್ಷಿಕ ಹಬ್ಬದಂದು ಕ್ರೈಸ್ತರು ಈ ಬಂಟ ಮನೆತನಗಳವರಿಗೆ ಗೌರವಿಸುತ್ತಾ ಬಂದಿದ್ದಾರೆ. ಇದು ಕ್ರೈಸ್ತರು ಮತ್ತು ಹಿಂದೂಗಳ ನಡುವಿನ ಸ್ನೇಹ, ಬಾಂಧವ್ಯಕ್ಕೆ ಮಹತ್ತರ ಸಾಕ್ಷಿ ಕೊಡುತ್ತದೆ.

ಹೀಗೆ ಯಕಶ್ಚಿತ್ ಒಬ್ಬ ಹುಚ್ಚು ದೊರೆಯ ಮತಿಗೆಟ್ಟ ಚಿಂತನೆ, ನಡವಳಿಕೆಯಿಂದ, ಆಳ್ವಿಕೆಯಿಂದ ಕನ್ನಡದ ಮಣ್ಣಿನಲ್ಲಿ ಆಗಬಾರದ್ದೆಲ್ಲಾ ನಡೆದು ಹೋಯಿತು. ಯಾರೋ ಒಂದಿಬ್ಬರ ಮೇಲಿನ ಸಂಶಯದಿಂದ ಇಡೀ ಜನಾಂಗದ ಸಹಸ್ರ ಸಹಸ್ರ ಸಂಖ್ಯೆಯ (ಸುಮಾರು 70,000) ಕ್ರೈಸ್ತರನ್ನು ಟಿಪ್ಪು ಸುಲ್ತಾನ ಭೀಕರವಾಗಿ ಹಿಂಸಿಸಿ, ಮತಾಂತರಿಸಿ ಮಾನವ ಚರಿತ್ರೆಯಲ್ಲಿಯೇ ಅತಿ ಹೀನ ಅಧ್ಯಾಯವನ್ನು ಬರೆದು ಬಿಟ್ಟ. ಟಿಪ್ಪು ಎಷ್ಟು ಕ್ರೂರನಾಗಿದ್ದನೆಂಬುದಕ್ಕೆ, ಸೆರೆ ಹಿಡಿದವರು ಪ್ರತಿಭಟಿಸಿದರೆ, ಮತಾಂತರಕ್ಕೆ ಒಪ್ಪದಿದ್ದರೆ ಅಂತಹವರ ಕೈ, ಕಾಲುಗಳನ್ನು ಕತ್ತರಿಸಿ, ಮೂಗು, ತುಟಿ ಮತ್ತು ಕಿವಿಗಳನ್ನು ಗರಗಸದಿಂದ ಕತ್ತರಿಸಿ, ಆನೆಯ ಕಾಲಿಗೆ ಕಟ್ಟಿ ತುಳಿದು ಸಾಯಿಸುತ್ತಿದ್ದ ರೀತಿಯೇ ಸಾರಿ ಹೇಳುತ್ತದೆ. ಮಹಿಳೆ, ವೃದ್ಧರು, ಮಕ್ಕಳು, ಗರ್ಭಿಣಿಯರೆನ್ನದೇ ಮನ ಬಂದಂತೆ ಹಿಂಸಿಸುತ್ತಿದ್ದನೆಂದರೆ ಆತ ಮನುಷ್ಯನೆಂದು ಹೇಳಲೂ ಹೇಸಿಗೆಯೆನಿಸುತ್ತದೆ.

ಹೀಗೆ ಬಂಧಿಸಿ ಕಾಲ್ನಡಿಗೆಯಲ್ಲಿ ಶ್ರೀರಂಗಪಟ್ಟಣಕ್ಕೆ ಕೊಂಡೊಯ್ಯುತ್ತಿದ್ದಾಗ ಪ್ರತಿಭಟಿಸಿದ ಹಲವು ಪುರುಷರನ್ನು ಸಾಮೂಹಿಕವಾಗಿ ಹಿಂಸಿಸಿ, ಕಗ್ಗೊಲೆಗೈಯಲಾಯಿತು. ತಲವಾರಿನ ಪೆಟ್ಟಿಗೆ ಸೀಳಲ್ಪಟ್ಟ ದೇಹಗಳಿಂದ ಹರಿದ ರಕ್ತವು ತುಂಬಿ ಕೆರೆಯೊಂದು ಕೆಂಪಾಗಿತ್ತಂತೆ. ತರುವಾಯ ಆ ಕೆರೆಯನ್ನು ನೆತ್ತರಕೆರೆ ಎಂದೇ ಕರೆಯಲಾಯಿತು. ಅದು ಈಗಲೂ ಅಸ್ತಿತ್ವದಲ್ಲಿದೆ (ಒಮ್ಜೂರ್ ಚರ್ಚಿನ ಬಳಿ, ಬಂಟ್ವಾಳದಲ್ಲಿದೆ). ಅಲ್ಲದೆ ಬೆಳ್ತಂಗಡಿಯ ಗಡಾಯಿಕಲ್ಲಿನ ತುದಿಯಿಂದ ತಳ್ಳಿ ಬಹಳಷ್ಟು ಕ್ರೈಸ್ತರನ್ನು ಸಾಯಿಸಲಾಗಿತ್ತು. ಒಟ್ಟಾರೆ ಮರಣ ಮೃದಂಗವೇ ನಡೆದು ಹೋಯಿತು.

ಇಂತಹ ಮೃಗೀಯ, ವಿಕೃತ, ನರರಾಕ್ಷಸನ ಜಯಂತಿಯನ್ನು ಆಚರಿಸಿ ಏನು ಸಂದೇಶ ಕೊಡಲಾಗುತ್ತದೆಯೋ ದೇವರೇ ಬಲ್ಲ. ಅದರಲ್ಲೂ ನಾಡಿನಾದ್ಯಂತ ನಿಷೇಧಾಜ್ಞೆ, ಪೋಲೀಸರ, ಸೈನಿಕರ ಸರ್ಪಗಾವಲು ವಿಧಿಸಿ ಒಂದು ಉತ್ಸವವನ್ನು ಆಚರಣೆ ಮಾಡುತ್ತಾರೆಂದರೆ ಅದಕ್ಕಿಂತ ವಿಪರ್ಯಾಸ, ಅಪದ್ಧ ಬೇರೇನಿರಲು ಸಾಧ್ಯ, ಅಲ್ಲವೆ?

ಲೇಖನ: ಡೊನಾಲ್ಡ್ ಪಿರೇರಾ ಬೆಳ್ತಂಗಡಿ

Visit & Like our Page – www.facebook.com/janavahini

Like us on facebook

3 thoughts on “ಮಂಗಳೂರಿನ ಕ್ರೈಸ್ತರು ಟಿಪ್ಪುವಿನ ವಿರುದ್ಧ ಬ್ರಿಟಿಷರಿಗೆ ನೆರವಾಗಿದ್ದರೆ?”

  1. one small correction
    the day on which Catholics of Mangalorean were arrested by tippu Sultan was not Friday but it was ASH WEDNESDAY.

  2. Wonderful article Mr Donnie. Made sense. Logically presented and extremely thought-provoking. Keep up your good work

    May God take you from strength to strength and make you an instrument for societal betterment. Peace be with you…

Leave a Reply

Your email address will not be published. Required fields are marked *

*

code

LATEST NEWS