ಮೂಡುಬಿದರೆಯ ಸಮಗ್ರ ಅಭಿವೃದ್ಧಿಯೇ ನನ್ನ ಆದ್ಯತೆ: ಅಶ್ವಿನ್ ಪಿರೇರಾ

Published on: Saturday, May 5th, 2018,5:13 am

ಸಂದರ್ಶನ: ಡೊನಾಲ್ಡ್ ಪಿರೇರಾ ಬೆಳ್ತಂಗಡಿ

ವಿಧಾನಸಭಾ ಚುನಾವಣೆಯ ಕಾವು ಏರುತ್ತಿದೆ. ದ.ಕ. ಜಿಲ್ಲೆಯ ಮೂಡುಬಿದರೆ ಕ್ಷೇತ್ರ ಈ ಬಾರಿ ವಿಭಿನ್ನ ಕಾರಣಕ್ಕಾಗಿ ಪ್ರತಿಷ್ಠೆಯ ಕಣವಾಗಿ ಮಾರ್ಪಟ್ಟಿದೆ. ಇಲ್ಲಿ ಕ್ರೈಸ್ತರ ಸಂಖ್ಯೆ ನಿರ್ಣಾಯಕವಾಗಿದ್ದರೂ, ಕ್ರೈಸ್ತ ಸಮುದಾಯದ ಅಭ್ಯರ್ಥಿಗಳಿಗೆ ಪಕ್ಷಗಳು ಟಿಕೆಟ್ ನೀಡಿದ್ದಿಲ್ಲ. ಈ ಬೇಡಿಕೆ ಹಲವು ಸಮಯದಿಂದ ಕೇಳಿ ಬರುತ್ತಿತ್ತು. ಯುವ ರಾಜಕಾರಣಿಯಾಗಿ ಸಾಕಷ್ಟು ಕೆಲಸ ಮಾಡಿ ಖ್ಯಾತಿ ಗಳಿಸಿದ್ದ ಅಶ್ವಿನ್ ಜೊಸ್ಲಿ ಪಿರೇರಾ ಈ ಬಾರಿ ಜೆಡಿಎಸ್‍ನಿಂದ ಸ್ಪರ್ಧಿಸುವ ಸಾಧ್ಯತೆ ಇತ್ತು. ಆದರೆ ಕೊನೆ ಕ್ಷಣದಲ್ಲಿ ಅವರಿಗೆ ಟಿಕೆಟ್ ತಪ್ಪಿದ್ದರಿಂದ ಅವರು ಬಂಡಾಯವೆದ್ದು, ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ. ಈ ಹಿನ್ನೆಲೆಯಲ್ಲಿ ಅವರೊಂದಿಗೆ ನಡೆಸಿದ ಸಂದರ್ಶನ ಇಲ್ಲಿದೆ.

-ಸಂಪಾದಕ

Ashwin J Pereira_1

ಡೊನಾಲ್ಡ್ ಪಿರೇರಾ: ಅಶ್ವಿನ್ ಪಿರೇರಾ, ಬಂಡಾಯವಾಗಿ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದೀರಿ. ಈ ಬಂಡಾಯ ಬೇಕಿತ್ತಾ?

ಅಶ್ವಿನ್ ಪಿರೇರಾ: ನೋಡಿ ನಾನು ಜನರಿಗಾಗಿ, ನನ್ನ ಸಮಾಜಕ್ಕಾಗಿ ಹೋರಾಡುವವನು. ನಾನು ರಾಜಕೀಯಕ್ಕೆ ಬಂದಿದ್ದೇ ಜನರಿಗಾಗಿ ಏನಾದರೂ ಮಾಡಬೇಕೆಂಬ ತುಡಿತದಿಂದ. ಅಧಿಕಾರದ ಆಸೆಯಿಂದ ರಾಜಕೀಯ ಮಾಡುತ್ತಿಲ್ಲ. ಹಾಗೇನಾದರೂ ನನಗೆ ಅಧಿಕಾರವೇ ಮುಖ್ಯವಾಗಿದ್ದಿದ್ದರೆ 12 ವರ್ಷಗಳಿಂದ ಅಧಿಕಾರದಲ್ಲಿಲ್ಲದ ಪಕ್ಷದಲ್ಲಿ ಇರುತ್ತಿರಲಿಲ್ಲ. ಅಧಿಕಾರದಲ್ಲಿದ್ದ ಪಕ್ಷಗಳನ್ನು ಸೇರಬಹುದಿತ್ತು. ನಮ್ಮ ಕ್ರೈಸ್ತ ಧರ್ಮದಲ್ಲಿ ರಾಜಕೀಯಕ್ಕೆ ಬರುವವರು ಕಡಿಮೆ. ಮೂಡುಬಿದರೆ ಕ್ಷೇತ್ರದಲ್ಲಿ ಕ್ರೈಸ್ತರು ಬಹುಸಂಖ್ಯೆಯಲ್ಲಿದ್ದರೂ ಯಾವುದೇ ಪಕ್ಷ ಕ್ರೈಸ್ತರಿಗೆ ಪ್ರಮುಖ ಸ್ಥಾನವನ್ನು ಕೊಟ್ಟಿಲ್ಲ.

ಡೊನಾಲ್ಡ್: ರಾಜಕೀಯ ಪಕ್ಷಗಳು ಕ್ರೈಸ್ತರನ್ನು ಬೆಳೆಸುತ್ತಿಲ್ಲವೇ?

ಅಶ್ವಿನ್: ಹೌದು, ಕ್ರೈಸ್ತರಿಗೆ ಅವಕಾಶವನ್ನೇ ಕೊಟ್ಟಿಲ್ಲ. ಕೇವಲ ಗ್ರಾಮ, ತಾಲೂಕು ಪಂಚಾಯತ್ ಮಟ್ಟದಲ್ಲಿ ಮಾತ್ರ ಅವಕಾಶ ಕೊಡಲಾಗಿದೆ. ಅದಕ್ಕಿಂತ ಹೆಚ್ಚಿನ ಸ್ಥಾನಕ್ಕೆ ಪರಿಗಣಿಸುವುದಿಲ್ಲ. ನಮಗೆ ಉನ್ನತ ಸ್ಥಾನವನ್ನು ಕೊಡಲಾಗುತ್ತಿಲ್ಲ. ಹಾಗಾಗಿ ಅದನ್ನು ನಾವಾಗಿ ಪಡೆಯಬೇಕು. ಅದಕ್ಕಾಗಿ ನಾನು ಸ್ಪರ್ಧಿಸುತ್ತಿದ್ದೇನೆ.

ಡೊನಾಲ್ಡ್: ಕ್ರೈಸ್ತರ ಬೆಳವಣಿಗೆಗೆ ಅವಕಾಶವಿಲ್ಲವೆನ್ನುತ್ತೀರಾ?

ಅಶ್ವಿನ್: ಹೌದು. ಕಳೆದ 20 ವರ್ಷಗಳಿಂದ ಅಧಿಕಾರದಲ್ಲಿರುವ ಹಾಲಿ ಶಾಸಕರು ತಾನಿನ್ನು ಸ್ಪರ್ಧಿಸುವುದಿಲ್ಲವೆಂದು ಹೇಳಿ ಹೊರಗಿನ ಯುವ ಮುಖಂಡನಿಗೆ ಟಿಕೆಟ್ ಸಿಗುವಂತೆ ಮಾಡುವುದಾಗಿ ಹೇಳಿದರು. ಯಾಕೆ ಅವರಿಗೆ ಈ ಕ್ಷೇತ್ರದಲ್ಲಿ ಯಾವುದೇ ಕ್ರೈಸ್ತ ಮುಖಂಡ ಕಾಣಲಿಲ್ಲವೆ? ಕಾಂಗ್ರೆಸ್ ಪಕ್ಷದಲ್ಲಿ ಕಳೆದ ಇಪ್ಪತ್ತು ಮೂವತ್ತು ವರ್ಷಗಳಿಂದ ದುಡಿದ ಕ್ರೈಸ್ತರು ಇರಲಿಲ್ಲವೇ? ಅವರಲ್ಲೊಬ್ಬರಿಗೆ ಅವಕಾಶ ಕೊಡಬಹುದಿತ್ತಲ್ಲವೇ? ಆ ಪಕ್ಷದಿಂದ ಕ್ರೈಸ್ತ ಮುಖಂಡರೊಬ್ಬರಿಗೆ ಅವಕಾಶ ಕೊಡುತ್ತಾರೆಂದಿದ್ದರು. ಹಾಗಾಗಿ ನಾನು ಈ ಬಾರಿ ಸ್ಪರ್ಧಿಸುವುದಿಲ್ಲವೆಂಬ ತೀರ್ಮಾನಕ್ಕೆ ಬರಲಾಗಿತ್ತು.

ಡೊನಾಲ್ಡ್: ನಿಮಗೆ ಸಿಕ್ಕಿದ್ದ ಅವಕಾಶವನ್ನು ನೀವು ತ್ಯಾಗ ಮಾಡಿದ್ದಿರಿ..?

ಅಶ್ವಿನ್: ಹೌದು. ನನಗೆ ವರ್ಷದ ಮೊದಲೇ ಮೂಡುಬಿದರೆ ಬ್ಲಾಕ್ ಅಧ್ಯಕ್ಷನನ್ನಾಗಿ ಮಾಡಿ ಅಸೆಂಬ್ಲಿ ಚುನಾವಣೆಗೆ ತಯಾರಿ ನಡೆಸಲು ಪಕ್ಷದಿಂದ ಸೂಚಿಸಲಾಗಿತ್ತು. ನಂತರ ಹಿರಿಯ ಕ್ರೈಸ್ತರಿಗೆ ಬೇರೆ ಪಕ್ಷದಿಂದ ಅವಕಾಶ ಸಿಗುವ ಸಾಧ್ಯತೆ ಇದ್ದಿದ್ದರಿಂದ ನನಗೆ ಸ್ಪರ್ಧಿಸುವುದು ಬೇಡ, ಎಂಎಲ್‍ಸಿ ಚುನಾವಣೆಯಲ್ಲಿ ಸ್ಪರ್ಧಿಸುವಂತೆ ನನ್ನ ಸಮಾಜದ ಮುಖಂಡರು ನನ್ನಲ್ಲಿ ಕೇಳಿಕೊಂಡರು. ಒಪ್ಪಿಕೊಂಡೆ. ಆದರೆ ಈಗ ಆತನಿಗೂ ಅವಕಾಶ ಕೊಟ್ಟಿಲ್ಲ, ನನಗೂ ಅವಕಾಶ ಸಿಕ್ಕಿಲ್ಲ.

ಡೊನಾಲ್ಡ್: ನಿಮ್ಮ ರಾಜಕೀಯ ಬೆಳವಣಿಗೆ ಬಗ್ಗೆ ತಿಳಿಸಿ.

ಅಶ್ವಿನ್: ನಾನು 12 ವರ್ಷಗಳಿಂದ ಜನತಾ ದಳದಲ್ಲಿ ಕೆಲಸ ಮಾಡುತ್ತಾ ಬಂದಿದ್ದೇನೆ. ಮೂಲ್ಕಿ-ಮೂಡುಬಿದರೆ ಕ್ಷೇತ್ರದ ಜೆಡಿಎಸ್ ಯುವ ಅಧ್ಯಕ್ಷನಾಗಿದ್ದೆ. ರಾಜ್ಯ ಯುವ ಘಟಕದ ಕಾರ್ಯದರ್ಶಿಯಾಗಿದ್ದೆ. ನಂತರ ಮೂಡುಬಿದರೆ ಕ್ಷೇತ್ರದ ಅಧ್ಯಕ್ಷನಾಗಿ ದುಡಿದಿದ್ದೇನೆ. ರಾಜ್ಯ ಜಂಟಿ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿದ್ದೇನೆ.

ಡೊನಾಲ್ಡ್: ನಿಮ್ಮನ್ನು ಜೆಡಿಎಸ್‍ನಿಂದ ಎಂಎಲ್‍ಸಿ ಅಭ್ಯರ್ಥಿ ಎಂದು ಆಯ್ಕೆ ಮಾಡಿ, ಅದಕ್ಕಾಗಿ ಸಾಕಷ್ಟು ಪ್ರಚಾರವನ್ನೂ ನಡೆಸಿದ್ದೀರಿ. ಈಗ ಎಂಎಲ್‍ಎ ಆಗುವುದಕ್ಕಾಗಿ ಯಾಕೆ ನಿರ್ಧರಿಸಿದಿರಿ?

ಅಶ್ವಿನ್: ನೋಡಿ, ಎಂಎಲ್‍ಸಿ ಚುನಾವಣೆಗೆ ಸಾಕಷ್ಟು ತಯಾರಿ ನಡೆಸಿದ್ದೇನೆ. ಈಗ ಎಂಎಲ್‍ಎ ಚುನಾವಣೆಯಲ್ಲಿ ಸ್ಪರ್ಧಿಸುವುದರಲ್ಲಿ ತಪ್ಪೇನಿದೆ. ಇಡೀ ದ.ಕ. ಮತ್ತು ಉಡುಪಿ ಜಿಲ್ಲೆಯಲ್ಲಿ ಜೆಡಿಎಸ್‍ಗೆ ನೆಲೆ ಇರುವುದು ಮೂಡುಬಿದರೆಯಲ್ಲಿ ಮಾತ್ರ. ಕಳೆದ ಬಾರಿ ಸ್ಪರ್ಧಿಸಿದ್ದ ಅಮರನಾಥ ಶೆಟ್ಟರಿಗೆ 22 ಸಾವಿರ ಮತ ಬಂದಿತ್ತು. ಹಿಂದೆ ನನಗೆ ಎಂಎಲ್‍ಎ ಟಿಕೆಟ್ ನೀಡಲು ತೀರ್ಮಾನಿಸಲಾಗಿತ್ತು. ಆದರೆ ನಾನು, ಬೇರೆ ಪಕ್ಷದಿಂದ ಇನ್ನೊಬ್ಬ ಕ್ರೈಸ್ತ ಮುಖಂಡರು ಸ್ಪರ್ಧಿಸುವ ಕಾರಣಕ್ಕಾಗಿ ನನ್ನ ಟಿಕೆಟ್ ಬಿಟ್ಟು ಕೊಟ್ಟಿದ್ದೆ. ಆದರೆ ಬೇರೆ ಪಕ್ಷದಲ್ಲಿ ಕ್ರೈಸ್ತರಿಗೆ ಅವಕಾಶ ಕೊಡದ ಕಾರಣ, ನಮ್ಮ ಪಕ್ಷದಲ್ಲಿ ಸಹಜವಾಗಿ ನನಗೇ ಟಿಕೆಟ್ ಹಂಚಬೇಕಾಗಿತ್ತು. ಅದು ಬಿಟ್ಟು ಕೇವಲ ನಾಲ್ಕು ತಿಂಗಳ ಹಿಂದೆ ಪಕ್ಷಕ್ಕೆ ಸೇರ್ಪಡೆಯಾಗಿದ್ದವರಿಗೆ ಟಿಕೆಟ್ ಹಂಚಲಾಯಿತು. ಅವರಿಗೆ ಎಷ್ಟು ಮತಗಳು ದೊರಕಿಯಾವು? ಹೀಗಾದರೆ ಮುಂದೆ ಇಲ್ಲಿ ಪಕ್ಷವನ್ನು ಬೆಳೆಸುವವರು ಯಾರು? ಅದನ್ನೂ ಯೋಚಿಸಬೇಕು ತಾನೆ? ಅಲ್ಲದೆ ಎಂಎಲ್‍ಸಿ ಕ್ಷೇತ್ರದಲ್ಲಿನ ಇತರ ಜಿಲ್ಲೆಗಳಲ್ಲಿ ಸಾಕಷ್ಟು ಜೆಡಿಎಸ್ ಶಾಸಕರು ಆಯ್ಕೆಯಾಗುತ್ತಾರೆ. ಅಲ್ಲೆಲ್ಲಾ ಪ್ರಚಾರಕ್ಕಾಗಿ ನಾನು ತೆರಳಬೇಕಾದರೆ ನನ್ನ ಕ್ಷೇತ್ರದಲ್ಲಿ ಪಕ್ಷಕ್ಕೆ ಎಷ್ಟು ಮತಗಳು ಬಂದವೆಂದು ಅವರು ಕೇಳುವುದಿಲ್ಲವೇ? ಅಲ್ಲದೆ ನನ್ನ ಹಿರಿಯರಿಗೆ ಚುನಾವಣಾ ವರದಿಯನ್ನು ನಾನು ಕಳಿಸಲಿಕ್ಕಿದೆ. ಅವರೂ ಕೇಳುತ್ತಾರೆ ಏನು ಸಾಧನೆಯಾಯಿತೆಂದು. ಇಲ್ಲಿನ ಹಾಲಿ ಶಾಸಕರಿಗೆ ಎಲ್ಲಾ ಮತ ಧರ್ಮದವರು ವಿರೋಧವಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ನಾನು ಸ್ಪರ್ಧಿಸುವುದರಲ್ಲಿ ತಪ್ಪೇನಿದೆ? ಪಕ್ಷದಿಂದ ಟಿಕೆಟ್ ನೀಡಿದ್ದಿದ್ದರೆ ನಾನು ಸುಲಭವಾಗಿ ಗೆಲ್ಲುತ್ತಿದ್ದೆ. ಆಗ ಎಂಎಲ್‍ಸಿ ಟಿಕೆಟ್ ಬೇರೆಯವರಿಗೆ ನೀಡಬಹುದಿತ್ತು. ಅಲ್ಲವೇ?

Ashwin J Pereira_4

ಡೊನಾಲ್ಡ್: ನಿಮ್ಮ ಪಕ್ಷದ ಪ್ರಮುಖರೊಂದಿಗೆ ನಿಮಗೆ ಉತ್ತಮ ಸಂಬಂಧವಿದೆ. ಕುಮಾರಸ್ವಾಮಿಯವರಲ್ಲಿಯೇ ಕೇಳಿ ಟಿಕೆಟ್ ಪಡೆದುಕೊಳ್ಳಬಹುದಿತ್ತಲ್ಲವೇ?

ಅಶ್ವಿನ್: ನನಗೆ ಬಿ.ಫಾರಂ ಅನ್ನು ಕೊಡಲಾಗಿತ್ತು ಕೂಡಾ. ಪಕ್ಷದ ಮುಖಂಡರಾದ ಬಿ.ಎಂ. ಫಾರೂಕ್ ಮತ್ತು ಮಹಮ್ಮದ ಕುಂಞÂಯವರು ನನ್ನ ಬಿ.ಫಾರಂ ತಂದು ಕೊಟ್ಟಿದ್ದರು. ಆಗ ನಾನು ಅವರಲ್ಲಿ ಅಮರನಾಥ ಶೆಟ್ಟಿಯವರನ್ನು ಕನ್ವಿನ್ಸ್ ಮಾಡಿ, ಅವರು ಸಂತೋಷದಿಂದ ನನಗೆ ಕೊಡುವುದಾದರೆ ಸ್ವೀಕರಿಸುತ್ತೇನೆ, ಇಲ್ಲದಿದ್ದರೆ ಬೇಡವೆಂದೆ. ಬಂಡಾಯದ ಮಾತೇ ಇರಲಿಲ್ಲ. ಆದರೆ ಶೆಟ್ಟಿಯವರು ‘ಅಶ್ವಿನ್‍ಗೆ ಬಿ.ಫಾರ್ಮ್ ನೀಡಿದರೆ ರಾಜಕೀಯಕ್ಕೇ ರಾಜೀನಾಮೆ ಕೊಡುತ್ತೇನೆ’ ಎಂದರು. ಅವರು ಜೀವನ್ ಶೆಟ್ಟಿಗೆ ಟಿಕೆಟ್ ಕೊಡುತ್ತೇನೆಂದಿದ್ದರು. ನನ್ನ ಸಮುದಾಯದ ಮತ್ತು ನನ್ನ ಪಕ್ಷದ ಹಲವರು ಮೊದಲೇ ಅಮರನಾಥ ಶೆಟ್ಟರನ್ನು ಭೇಟಿಯಾಗಿ ಈ ಬಾರಿ ಅಶ್ವಿನ್‍ಗೇ ಟಿಕೆಟ್ ಕೊಡಬೇಕೆಂದು ಬೇಡಿಕೆ ಇಟ್ಟಿದ್ದರು. ಆಗ ಅವರು, ಪಕ್ಷದ ಪ್ರಮುಖರಿಂದ ಕೇಳಿ ಟಿಕೆಟ್ ತರಿಸಲಿ ಎಂದು ಹೇಳಿದ್ದರು. ಅಮರನಾಥ ಶೆಟ್ಟಿಯವರು ನನ್ನ ರಾಜಕೀಯ ಗುರು, ಅವರನ್ನು ನಾನು ದೇವರಂತೆ ಪರಿಗಣಿಸುತ್ತಿದ್ದೆ.

ಡೊನಾಲ್ಡ್: ಅಂದ್ರೆ ನಿಮಗೆ ಪಕ್ಷದ ಟಿಕೆಟ್, ಬಿ.ಫಾರಂ ಸಿಕ್ಕಿತ್ತು!?

ಅಶ್ವಿನ್: ಹೌದು. ಆದರೆ ಅಮರನಾಥ ಶೆಟ್ಟರು ಅದಕ್ಕೊಪ್ಪಬೇಕೆಂದು ನಾನು ಬೇಡಿಕೆ ಇಟ್ಟಿದ್ದೆ. ಅವರು ನನಗೆ ಟಿಕೆಟ್ ಕೊಡಲು ವಿರೋಧವಿದ್ದರು. ನನಗೆ ಎಂಎಲ್‍ಸಿ ಟಿಕೆಟ್ ಕೊಡಲಾಗಿದೆ ಎನ್ನುವುದು ನೆಪ. ಆದರೆ ಕೇವಲ ನಾಲ್ಕು ತಿಂಗಳ ಹಿಂದೆ ಪಕ್ಷಕ್ಕೆ ಸೇರಿದವರಿಗೆ ಟಿಕೆಟ್ ಕೊಟ್ಟು ಪಕ್ಷ ಕೇವಲ ನಾಲ್ಕೈದು ಸಾವಿರ ಮತ ಗಳಿಸಿದರೆ ನಾನು ಎಂಎಲ್‍ಸಿ ಸ್ಥಾನಕ್ಕೆ ಸ್ಪರ್ಧೆ ಮಾಡಿ ಏನು ಪ್ರಯೋಜನ? ನಮ್ಮ ಪಕ್ಷ ಈ ಬಾರಿ 40 ಸಾವಿರಕ್ಕಿಂತಲೂ ಹೆಚ್ಚು ಮತ ಗಳಿಸಬಹುದಿತ್ತು. ಪಕ್ಷದ ಬಲವರ್ಧನೆ ಮಾಡಬಹುದಿತ್ತು. ಅವಿಭಜಿತ ದ.ಕ.ದಲ್ಲಿ ಬೇರೆಲ್ಲಿಯೂ ನಮ್ಮ ಪಕ್ಷವಿಲ್ಲ. ಇಲ್ಲಿ ಪಕ್ಷವನ್ನು ಬಲಿಷ್ಠಗೊಳಿಸುವ ಅವಕಾಶವಿತ್ತು, ಅದನ್ನು ಹಾಳುಗೆಡವಿದ್ದಾರೆ.

ಡೊನಾಲ್ಡ್: ಹಾಗಾದರೆ ನಿಮಗೆ ಅನ್ಯಾಯ ಮಾಡಲಾಗಿದೆ..?

ಅಶ್ವಿನ್: ಹೌದು. ಹಾಗಾಗಿ ಬಂಡಾಯ ನಿಂತಿದ್ದೇನೆ. ಚುನಾವಣೆಯ ನಂತರ ಎಲ್ಲಾ ಸಂಗತಿ ವರದಿ ಮಾಡಿ ಪಕ್ಷದ ಮುಖಂಡರಾದ ದೇವೇಗೌಡ ಮತ್ತು ಕುಮಾರಸ್ವಾಮಿಯವರಿಗೆ ತಲುಪಿಸುತ್ತೇನೆ.

ಡೊನಾಲ್ಡ್: ಇದೆಲ್ಲವನ್ನೂ ಜನರಿಗೆ ಹೇಗೆ ಮನವರಿಕೆ ಮಾಡುತ್ತೀರಿ? ಜನರ ಬೆಂಬಲವನ್ನು ಗಳಿಸುತ್ತೀರಾ?

ಅಶ್ವಿನ್: ಜನರಿಗೆ ಈಗಾಗಲೇ ಎಲ್ಲಾ ತಿಳಿದಿದೆ. ಪತ್ರಿಕಾ ಮಾಧ್ಯಮಗಳ ಮುಖಾಂತರ ಎಲ್ಲಾ ವಿವರಿಸುತ್ತೇನೆ. ಜನರು ‘12 ವರ್ಷಗಳಿಂದ ಪಕ್ಷಕ್ಕಾಗಿ ದುಡಿದವನಿಗೆ ಟಿಕೆಟ್ ನೀಡದೆ ಇತ್ತೀಚೆಗಷ್ಟೇ ಪಕ್ಷ ಸೇರಿದವನಿಗೆ ಟಿಕೆಟ್ ಕೊಟ್ಟಿದ್ದಾರೆ’ ಎಂದು ಆಕ್ರೋಶದಿಂದ ಮಾತನಾಡುತ್ತಿದ್ದಾರೆ. ಜನರು ನನ್ನ ಬೆಂಬಲಕ್ಕಿದ್ದಾರೆ.

ಡೊನಾಲ್ಡ್: ಇಲ್ಲಿ ಮತ್ತೊಂದು ಸಂಗತಿಯಿದೆ. ಇಬ್ಬರ ಜಗಳದಲ್ಲಿ ನಿಮ್ಮನ್ನು ಎಳೆದು ತರಲಾಗಿದೆ ಎನ್ನುವವರಿದ್ದಾರೆ. ಉದ್ಯಮಿ ರೊನಾಲ್ಡ್ ಕೊಲಾಸೊ ಅವರೇ ನಿಮ್ಮನ್ನು ಅಭ್ಯರ್ಥಿಯನ್ನಾಗಿ ನಿಲ್ಲಿಸಿದ್ದಾರೆ ಎನ್ನುತ್ತಾರೆ ಕೆಲವರು!

ಅಶ್ವಿನ್: ನೋಡಿ, ರೊನಾಲ್ಡ್ ಕೊಲಾಸೊ ಅವರು ನಮ್ಮ ಸಮಾಜಕ್ಕೆ ಒಳ್ಳೆಯದನ್ನು ಮಾಡುವ ವ್ಯಕ್ತಿ. ಅವರ ಮೇಲೆ ನನಗೆ ಬಹಳ ಗೌರವವಿದೆ. ನನಗೆ ಚುನಾವಣೆಯಲ್ಲಿ ಸ್ಪರ್ಧಿಸಲು ಯಾರೂ ಹೇಳಿಲ್ಲ. ಇದು ನನ್ನ ಸ್ವಂತ ನಿರ್ಧಾರ. ಇಲ್ಲಿನ ನಮ್ಮ ಪಕ್ಷದ ಮುಖಂಡರಿಗೆ ಇಲ್ಲಿಯವರೆಗೂ ಪಕ್ಷವನ್ನು ಬೆಳೆಸಲು ಸಾಧ್ಯವಾಗಿಲ್ಲ. ಯಾರೇ ಬಂದರೂ ಇವರು ತಮ್ಮ ಸ್ವಾರ್ಥಕ್ಕಾಗಿ ಪಕ್ಷದ ಉದ್ಧಾರವಾಗಲು ಬಿಡುತ್ತಿಲ್ಲ.

ಡೊನಾಲ್ಡ್: ಅದು ಇರಬಹುದು. ಆದರೆ ಜನರು ಮಾತನಾಡುತ್ತಾರೆ, ರೊನಾಲ್ಡ್ ಕೊಲಾಸೊ ಮತ್ತು ಅಭಯಚಂದ್ರ ಜೈನ್ ನಡುವೆ ವೈಷಮ್ಯ ಉದ್ಭವವಾಗಿದೆ. ಜೈನ್ ತಾನು ಚುನಾವಣೆಗೆ ನಿಲ್ಲುವುದಿಲ್ಲ ಎಂದು ಮಾತು ಕೊಟ್ಟ ನಂತರ ಈಗ ಮತ್ತೆ ಚುನಾವಣೆಗೆ ಸ್ಪರ್ಧಿಸುತ್ತಿರುವುದರಿಂದ ಕೊಲಾಸೊ ಕೋಪಗೊಂಡಿದ್ದಾರೆ, ಆ ಕಾರಣದಿಂದ ಅಭಯಚಂದ್ರರನ್ನು ಸೋಲಿಸಲೇಬೇಕೆಂಬ ಹಟದಿಂದ ನಿಮ್ಮನ್ನು ನಿಲ್ಲಿಸಿದ್ದಾರೆ… ಹೀಗೆ ಕೆಲವರು ಆಡಿಕೊಳ್ಳುತ್ತಿದ್ದಾರಲ್ಲಾ..?

ಅಶ್ವಿನ್: ಅದೆಲ್ಲಾ ನನಗೆ ಗೊತ್ತಿಲ್ಲ. ಯಾರ್ಯಾರದ್ದೋ ವ್ಯಕ್ತಿಗತ ಕೋಪ ನನಗೆ ತಿಳಿದಿಲ್ಲ. ಕಾಂಗ್ರೆಸ್ ಪಕ್ಷದಿಂದ ಐವನ್ ಡಿಸೋಜ ಸ್ಪರ್ಧಿಸುತ್ತಾರೆ, ಹಾಗಾಗಿ ನಾನು ಸ್ಪರ್ಧಿಸುವುದು ಬೇಡವೆಂದು ಕೊಲಾಸೊ ವಿನಂತಿಸಿದಾಗ ನಾನು ಒಪ್ಪಿದ್ದು ನಿಜ. ಆದರೆ ಈಗ ಪರಿಸ್ಥಿತಿ ಬದಲಾಗಿ, ನಾನು ಸ್ಪರ್ಧೆ ಮಾಡುತ್ತಿರುವುದನ್ನು ಅವರಿಗೆ ತಿಳಿಸಿದಾಗ, ಅವರು ನನಗೆ ಶುಭ ಹಾರೈಸಿ ತನ್ನಿಂದ ಸಾಧ್ಯವಿರುವ ನೆರವು ನೀಡುವುದಾಗಿ ಹೇಳಿದ್ದಾರೆ. ಅಷ್ಟೇ ಆಗಿದ್ದು.

Ashwin J Pereira_5

ಡೊನಾಲ್ಡ್: ಆದರೆ ಮೊನ್ನೆ ಒಂದು ಸಭೆ ನಡೆದು, ಅವರು ಅಲ್ಲಿ ಹಾಜರಿದ್ದು, ಈ ಎಲ್ಲಾ ವಿಚಾರಗಳನ್ನು ಪ್ರಸ್ತಾಪಿಸಿದರು ಎನ್ನುವ ಸುದ್ದಿ ಇದೆ…

ಅಶ್ವಿನ್: ಆ ಸಭೆಗೆ ನನಗೆ ಆಹ್ವಾನವಿರಲಿಲ್ಲ, ನಾನೂ ಹೋಗಿಯೂ ಇಲ್ಲ. ಆದರೆ ಎಲ್ಲಾ ಪಕ್ಷಗಳ ಕಾರ್ಯಕರ್ತರು ಹಾಜರಿದ್ದರು ಎಂದು ಕೇಳಿ ತಿಳಿದಿದ್ದೇನೆ.

ಡೊನಾಲ್ಡ್: ನನಗೆ ಸಿಕ್ಕಿದ ಮಾಹಿತಿ ಪ್ರಕಾರ, ಅಲ್ಲಿ ಕೊಲಾಸೊ ಅವರು ಅಭಯಚಂದ್ರರ ಬಗ್ಗೆ ಪ್ರಸ್ತಾಪಿಸಿದಾಗ ಕಾಂಗ್ರೆಸ್ಸಿಗರು ವಿರೋಧಿಸಿದ್ದರಿಂದ ಸಭೆಯೇ ರದ್ದುಗೊಂಡಿತು. ಅಭಯಚಂದ್ರರನ್ನು ಸೋಲಿಸಿ ಕೋಮುವಾದಿಗಳನ್ನು ಗೆಲ್ಲಿಸಲು ಪ್ರಯತ್ನಿಸುತ್ತಿದ್ದೀರೆಂದು ತರಾಟೆಗೆ ತೆಗೆದುಕೊಂಡರು. ಅಶ್ವಿನ್ ಪಿರೇರಾ ಗೆಲ್ಲುವುದಿಲ್ಲ, ಅಂತಿಮವಾಗಿ ಕಾಂಗ್ರೆಸ್ ಸೋತು ಬಿಜೆಪಿ ಗೆಲ್ಲುತ್ತದೆ…

ಅಶ್ವಿನ್: ಅಶ್ವಿನ್ ಪಿರೇರಾ ಯಾಕೆ ಗೆಲ್ಲುವುದಿಲ್ಲ? ಗೆಲ್ಲಲು ಯಾಕೆ ಸಾಧ್ಯವಿಲ್ಲ? ಅಶ್ವಿನ್ ಪಿರೇರಾ ಖಂಡಿತವಾಗಿ ಚುನಾವಣೆಯಲ್ಲಿ ಗೆಲ್ಲುತ್ತಾರೆ. 35 ಸಾವಿರಕ್ಕೂ ಹೆಚ್ಚು ಕ್ರೈಸ್ತ ಮತದಾರು ಇಲ್ಲಿದ್ದಾರೆ. ಮುಸ್ಲಿಮರು 25 ಸಾವಿರವಿದ್ದಾರೆ. ಜೆಡಿಎಸ್‍ನ 15 ಸಾವಿರ ಸಾಂಪ್ರದಾಯಿಕ ಮತದಾರರಿದ್ದಾರೆ. ಕಳೆದ ಬಾರಿ ಎಪಿಎಂಸಿ, ಜಿಲ್ಲಾ ಪಂಚಾಯತ್ ಚುನಾವಣೆಗಳಲ್ಲಿ ನಾನೇ ಅಭ್ಯರ್ಥಿಗಳನ್ನು ನಿಲ್ಲಿಸಿ ಪಕ್ಷವನ್ನು ಸಂಘಟಿಸಿದ್ದೇನೆ. ನನ್ನ ಪಕ್ಷದ ಕಾರ್ಯಕರ್ತರೆಲ್ಲರೂ ನನ್ನನ್ನು ಗೆಲ್ಲಿಸಲು ಶ್ರಮಿಸುತ್ತಿದ್ದಾರೆ. ಇತರ ಜಾತಿ, ಧರ್ಮದ ಜನರೂ ಸಹ ನನಗೇ ಮತ ಹಾಕಲಿದ್ದಾರೆ.

ಡೊನಾಲ್ಡ್: ಆದರೆ ಬಹುತೇಕ ಕ್ರೈಸ್ತರು ಕಾಂಗ್ರೆಸ್ ಪಕ್ಷಕ್ಕೆ ಮತ ಹಾಕುವವರು ಅಲ್ಲವೇ?

ಅಶ್ವಿನ್: ಕ್ರೈಸ್ತರಿಗೆ ನಾನೇನು ಹೇಳುತ್ತೇನೆಂದರೆ, ನಮ್ಮ ಸಮುದಾಯದ ಒಳಿತಿಗಾಗಿ ನಾನು ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದೇನೆ, ನೀವು ನನ್ನನ್ನು ಗೆಲ್ಲಿಸಬೇಕು ಎಂದು ಕೇಳಿಕೊಳ್ಳುತ್ತಿದ್ದೇನೆ. ಇಂದು ನನಗೆ ಗೆಲುವು ದೊರಕದಿದ್ದರೆ ಇನ್ನು ಮುಂದೇ ಯಾರೇ ಕ್ರೈಸ್ತ ಅಭ್ಯರ್ಥಿ ಇಲ್ಲಿ ನಿಂತು ಗೆಲ್ಲುವುದಿಲ್ಲ. ಕ್ರೈಸ್ತರಿಗೆ ಕಾಂಗ್ರೆಸ್ ಪಕ್ಷವೊಂದೇ ಇರುವುದೆಂಬ ಚಿಂತನೆ ತಪ್ಪು. ಇದೀಗ ಸಾಕಷ್ಟು ಬದಲಾವಣೆಯಾಗಿದೆ. ಬಹಳ ಕ್ರೈಸ್ತರು ನನಗೆ ಸಂದೇಶ ಕಳುಹಿಸಿ, ಫೋನ್ ಮಾಡಿ ಬೆಂಬಲಿಸಿದ್ದಾರೆ. ನಮ್ಮ ಧಾರ್ಮಿಕ ಮುಖಂಡರೂ ನನ್ನ ಗೆಲುವಿಗಾಗಿ ಹಾರೈಸಿದ್ದಾರೆ.

ಡೊನಾಲ್ಡ್: ನಿಮ್ಮ ಕ್ಷೇತ್ರದಲ್ಲಿ ಜನರ ಬೆಂಬಲ ಹೇಗಿದೆ?

ಅಶ್ವಿನ್: ನನಗೆ ಎಲ್ಲಾ ಜಾತಿ ಧರ್ಮಗಳ ಜನರ ಸಂಪೂರ್ಣ ಬೆಂಬಲವಿದೆ. ನನಗಾಗಿ ಎಲ್ಲಾ ಜಾತಿ ಧರ್ಮಗಳ ಕಾರ್ಯಕರ್ತರು ಶ್ರಮಿಸುತ್ತಿದ್ದಾರೆ.

ಡೊನಾಲ್ಡ್: ಜನರು ನಿಮ್ಮನ್ನು ಯಾಕೆ ಆಯ್ಕೆ ಮಾಡಬೇಕು?

ಅಶ್ವಿನ್: ಮೂಡುಬಿದರೆಯಲ್ಲಿ ಕಳೆದ 20 ವರ್ಷಗಳಿಂದ ಯಾವುದೇ ಅಭಿವೃದ್ಧಿ ನಡೆದಿಲ್ಲ. ಮೂಲ್ಕಿ-ಮೂಡುಬಿದರೆ ರಸ್ತೆ ಈಗಾಗಲೇ ಡಬಲ್ ರಸ್ತೆಯಾಗಬೇಕಿತ್ತು, ಅದಿನ್ನೂ ಆಗಿಲ್ಲ. ಮೂಲ್ಕಿ, ಕಿನ್ನಿಗೋಳಿ ಮತ್ತು ಬಜ್ಪೆಯಲ್ಲಿ ಸರಿಯಾದ ಬಸ್ ನಿಲ್ದಾಣವಿಲ್ಲ. ಮೂಡುಬಿದರೆಯನ್ನು ಎಜುಕೇಶನ್ ಹಬ್ ಎನ್ನಲಾಗುತ್ತಿದೆ. ಆದರೆ ಇಲ್ಲ ಒಂದೇ ಒಂದು ಸರಕಾರಿ ಡಿಗ್ರಿ ಕಾಲೇಜು ಆಗಿಲ್ಲ. ಪೋಸ್ಟ್ ಗ್ರಾಜುಯೇಟ್, ಎಂಜಿನಿಯರಿಂಗ್, ಡಿಪ್ಲೊಮಾ ಕಾಲೇಜು ಇಲ್ಲ. ನೀರಿನ ಸಮಸ್ಯೆ ತೀವ್ರವಾಗಿದೆ. ಡ್ರೈನೇಜ್ ವ್ಯವಸ್ಥೆಯಂತೂ ಎಲ್ಲೂ ಇಲ್ಲ. ಯುವಕರಿಗೆ ಉದ್ಯೋಗವಿಲ್ಲ. 20 ವರ್ಷಗಳಲ್ಲಿ ಹಾಲಿ ಶಾಸಕರು ಒಂದೇ ಒಂದು ಸಲ ಉದ್ಯೋಗ ಮೇಳ ನಡೆಸಿಲ್ಲ. ನಮ್ಮ ಶಾಸಕರು ರಾಜ್ಯ ಸರಕಾರದ ಮತ್ತು ಸಂಸದರು ಕೇಂದ್ರ ಸರಕಾರದ ಯೋಜನೆಗಳನ್ನು ಜನರಿಗೆ ತಲುಪಿಸಿಲ್ಲ. ಶಾಸಕರು ಸ್ಥಳೀಯ ಸಂಸ್ಥೆಗಳ ಮತ್ತು ಪಂಚಾಯತ್‍ಗಳ ಸಭೆಗಳಲ್ಲಿ ಎಷ್ಟು ಭಾಗವಹಿಸಿದ್ದಾರೆ, ಜನರ ಸಮಸ್ಯೆಗಳನ್ನು ಆಲಿಸಿದ್ದಾರೆಂಬುದರ ದಾಖಲೆ ಒದಗಿಸಲಿ. ಯಾವುದೇ ಕೆಲಸವನ್ನು ಅವರು ಮಾಡಿಲ್ಲ. ಈ ಶಾಸಕರು ಜನರಿಗೆ ಸಿಗುವುದೇ ಇಲ್ಲ.

ಶಾಸಕರಾಗಿ ಆಯ್ಕೆಯಾದವರು ಎಲ್ಲಾ ಜನರ ಪ್ರತಿನಿಧಿ. ಎಲ್ಲಾ ಜನರಿಗೂ ನ್ಯಾಯ ಒದಗಿಸಬೇಕಾದದ್ದು ಅವರ ಕರ್ತವ್ಯ.

Ashwin J Pereira_2

ಡೊನಾಲ್ಡ್: ಅವರ ನಿಷ್ಕ್ರಿಯತೆಯನ್ನು ನೀವು ವಿರೋಧಿಸಿದ್ದೀರಾ?

ಅಶ್ವಿನ್: ಹೌದು. ಸಾಕಷ್ಟು ವಿರೋಧಿಸಿದ್ದೇನೆ. 15 ಕೋ.ರೂ.ಗಳಲ್ಲಿ ನಿರ್ಮಿಸಬಹುದಾದ ಮಾರ್ಕೆಟ್‍ಗೆ 26 ಕೋ.ರೂ. ಟೆಂಡರ್ ಕೊಟ್ಟಾಗ ತುಂಬಾ ಪ್ರತಿಭಟನೆ ನಡೆಸಿದ್ದೇನೆ.

ಡೊನಾಲ್ಡ್: ಜನರಿಗಾಗಿ ನಿಮ್ಮ ಯೋಜನೆಗಳೇನು?

ಅಶ್ವಿನ್: ಜನರಿಗಾಗಿ ನಾನೇನು ಮಾಡುತ್ತೇನೆಂಬುದನ್ನು ನನ್ನ ಪ್ರಣಾಳಿಕೆಯಲ್ಲಿ ವಿವರಿಸಿದ್ದೇನೆ. ಮುಖ್ಯವಾಗಿ ಶಿಕ್ಷಣ ಕ್ಷೇತ್ರ, ಉದ್ಯೋಗ ಒದಗಿಸುವುದು ಹಾಗೂ ಮೂಲ ಸೌಕರ್ಯಗಳಾದ ನೀರು, ವಿದ್ಯುತ್ ಬೆಳಕು, ಚರಂಡಿ ವ್ಯವಸ್ಥೆ ಸರಿಪಡಿಸುವುದು ನನ್ನ ಆದ್ಯತೆಗಳು.

ಡೊನಾಲ್ಡ್: ಅಂದರೆ ಚುನಾವಣೆಯನ್ನು ನೀವು ಗಂಭೀರವಾಗಿ ಸ್ಪರ್ಧಿಸುತ್ತಿದ್ದೀರಿ?

ಅಶ್ವಿನ್: ಖಂಡಿತವಾಗಿ ಹೌದು. ಗಂಭೀರವಾಗಿ ಶ್ರಮಿಸುತ್ತಿದ್ದೇನೆ. ನಾನು ಗೆಲ್ಲುವ ಅವಕಾಶಗಳು ಹೆಚ್ಚಾಗಿವೆ. ಸ್ಪರ್ಧೆ ಏನಿದ್ದರೂ ನನ್ನ ಮತ್ತು ಬಿಜೆಪಿ ನಡುವೆ, ಕಾಂಗ್ರೆಸ್ ಮೂರನೇ ಸ್ಥಾನಕ್ಕೆ ಇಳಿಯುತ್ತದೆ. ಎಲ್ಲಾ ಜಾತಿ, ಧರ್ಮಗಳ ಕಾರ್ಯಕರ್ತರು ನನ್ನನ್ನು ಗೆಲ್ಲಿಸಲು ಪಣ ತೊಟ್ಟಿದ್ದಾರೆ. ಕಾಂಗ್ರೆಸ್ಸಿನ ಮತದಾರರೆಲ್ಲರೂ ನನ್ನನ್ನೇ ಚುನಾಯಿಸುತ್ತಾರೆ. ಅಭಯಚಂದ್ರರ ಆಟಾಟೋಪಗಳಿಂದ ಜನರೆಲ್ಲರೂ ಬೇಸತ್ತಿದ್ದಾರೆ. ಅವರು ಈ ಬಾರಿ ಕಾಂಗ್ರೆಸ್‍ಗೆ ಮತ ಹಾಕುವುದಿಲ್ಲ.

ಡೊನಾಲ್ಡ್: ನಿಮಗೆ ಗೆಲುವು ಸಿಗದಿದ್ದರೆ ಅಥವಾ ನಿರೀಕ್ಷಿಸಿದಷ್ಟು ಮತ ದೊರಕದಿದ್ದರೆ?

ಅಶ್ವಿನ್: ಏನೇ ಆಗಲಿ, ನನ್ನ ಪಕ್ಷಕ್ಕೆ ನಾನು ವರದಿ ಕಳುಹಿಸುತ್ತೇನೆ.

ಡೊನಾಲ್ಡ್: ಪಕ್ಷದಿಂದ ನಿಮ್ಮನ್ನು ಉಚ್ಛಾಟಿಸಿದ್ದಾರೆ ಅಲ್ಲವೇ..?

ಅಶ್ವಿನ್: ಎಲ್ಲಿ ಉಚ್ಛಾಟಿಸಿದ್ದಾರೆ? ದಾಖಲೆ ತೋರಿಸಲಿ ನೋಡೋಣ! ನನ್ನನ್ನು ಪಕ್ಷದಿಂದ ಉಚ್ಛಾಟಿಸಲು ಇವರಿಗೆ ಅಧಿಕಾರವಿಲ್ಲ. ನಾನು ರಾಜ್ಯ ಜಂಟಿ ಕಾರ್ಯದರ್ಶಿ. ನನ್ನನ್ನು ಉಚ್ಛಾಟಿಸಬೇಕಾದರೆ ದೇವೇಗೌಡರು ಮತ್ತು ಕುಮಾರಸ್ವಾಮಿಯವರ ಅನುಮತಿ ಪಡೆಯಬೇಕು. ನಾನು ನನ್ನ ಪಕ್ಷಕ್ಕೆ ವಿರೋಧವಿಲ್ಲ, ಸ್ಥಳೀಯ ಮುಖಂಡರ ನಿರ್ಧಾರಕ್ಕೆ ಮಾತ್ರ ನನ್ನ ವಿರೋಧ. ನಾಳೆ ನಾನು ಗೆದ್ದರೆ ಜಾತ್ಯತೀತ ಸರಕಾರಕ್ಕೆ ಬೆಂಬಲ ಕೊಡುತ್ತೇನೆ.

ಡೊನಾಲ್ಡ್: ಒಂದು ವೇಳೆ ಕಾಂಗ್ರೆಸ್ ಪಕ್ಷಕ್ಕೆ ಬಹುಮತ ದೊರಕದಿದ್ದರೆ, ಬಿಜೆಪಿ ಮತ್ತು ಜೆಡಿಎಸ್ ಜೊತೆ ಸೇರಿ ಸರಕಾರ ರಚಿಸುವ ಸಾಧ್ಯತೆ ಇದೆ… ನೀವು ಗೆದ್ದರೆ ಆಗೇನು ಮಾಡುತ್ತೀರಿ?

ಅಶ್ವಿನ್: ನಾನು ಬೆಂಬಲ ಕೊಡುವುದಿಲ್ಲ.

ಡೊನಾಲ್ಡ್: ಈ ಹಿಂದೆ ಅವರು ಸರಕಾರ ರಚನೆ ಮಾಡಿದ್ದಾರಲ್ಲಾ..?

ಅಶ್ವಿನ್: ನಾನಂತೂ ಬೆಂಬಲ ಕೊಡುವುದಿಲ್ಲ. ಗೆದ್ದರೂ ದೂರ ನಿಲ್ಲುತ್ತೇನೆ. ಸ್ವತಂತ್ರವಾಗಿ ಕೆಲಸ ಕಾರ್ಯ ನಿರ್ವಹಿಸುತ್ತೇನೆ.

ಡೊನಾಲ್ಡ್: ನಿಮ್ಮ ಮುಂದಿನ ಯೋಜನೆಗಳೇನು?

ಅಶ್ವಿನ್: ಚುನಾವಣೆ ಮುಗಿಯಲಿ, ನಂತರ ಹೇಳುತ್ತೇನೆ. ನನಗೆ ರಾಜಕೀಯ ಅನಿವಾರ್ಯವಲ್ಲ. ನನಗೆ ನನ್ನದೇ ಉದ್ಯಮವಿದೆ. ನಾನು ಹೋರಾಡುವುದು ನನ್ನ ಸಮುದಾಯಕ್ಕೆ ಮತ್ತು ಒಟ್ಟಾರೆ ಸಮಾಜಕ್ಕಾಗಿ.

ಡೊನಾಲ್ಡ್: ಚುನಾವಣೆಗೆ ಕೆಲವೇ ದಿನಗಳು ಉಳಿದಿವೆ. ಪ್ರಚಾರ ಹೇಗೆ ನಡೆಯುತ್ತಿದೆ?

ಅಶ್ವಿನ್: ಈಗಾಗಲೇ 180 ವಾರ್ಡ್‍ಗಳಲ್ಲಿ ನಮ್ಮ ಕಾರ್ಯಕರ್ತರು ಕೆಲಸ ಮಾಡುತ್ತಿದ್ದಾರೆ. ನನ್ನ ಚಿಹ್ನೆ ಆಟೋ ರಿಕ್ಷಾ. ಗೆಲ್ಲುವ ವಿಶ್ವಾಸವಿದೆ.

ಸಂದರ್ಶನ: ಡೊನಾಲ್ಡ್ ಪಿರೇರಾ ಬೆಳ್ತಂಗಡಿ
Feedback: info.janavahini@gmail.com

Visit & Like our Page – www.facebook.com/janavahini

Like us on facebook

Leave a Reply

Your email address will not be published. Required fields are marked *

*

code

LATEST NEWS