ಕಾಂಗ್ರೆಸ್ ಎಂದರೆ ಅಭಿವೃದ್ಧಿ, ಬಿಜೆಪಿ ಎಂದರೆ ನಕಲಿ ಹಿಂದುತ್ವ: ವಸಂತ ಬಂಗೇರ

Published on: Tuesday, April 24th, 2018,10:34 pm

ಸಂದರ್ಶನ: ಡೊನಾಲ್ಡ್ ಪಿರೇರಾ ಬೆಳ್ತಂಗಡಿ; ಚಿತ್ರಗಳು: ಜೀವನ್ ಆಶಿತ್ ಪಿರೇರಾ

ಕರಾವಳಿಯಲ್ಲಿ ತನ್ನದೇ ವೈಯಕ್ತಿಕ ವರ್ಚಸ್ಸಿನಿಂದ ಚುನಾವಣೆಗಳಲ್ಲಿ ಗೆದ್ದು ತಾನಿರುವ ಪಕ್ಷಕ್ಕೆ ಗಟ್ಟಿ ನೆಲೆ ಒದಗಿಸಿದ ಅಪರೂಪದ ರಾಜಕಾರಣಿ ಬೆಳ್ತಂಗಡಿಯ ವಸಂತ ಬಂಗೇರ ಅವರು. ಬಿಜೆಪಿ, ಜನತಾ ದಳ ಮತ್ತು ಕಾಂಗ್ರೆಸ್ ಪಕ್ಷಗಳಿಂದ ಶಾಸಕರಾಗಿ ಆಯ್ಕೆಯಾದ ಹೆಗ್ಗಳಿಕೆ ಅವರೊಬ್ಬರದು ಮಾತ್ರ. ತನ್ನದೇ ವರ್ಚಸ್ಸು ಹೊಂದಿರುವ ಮತ್ತು ಛಲಗಾರನೆಂದು ಹೆಸರುವಾಸಿಯಾದ ಬಂಗೇರ ಅವರು ಮತ್ತೆ ಚುನಾವಣೆಯನ್ನು ಎದುರಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಅವರ ಅನುಭವ, ಕ್ಷೇತ್ರಕ್ಕೆ ನೀಡಿದ ಕೊಡುಗೆ, ಚುನಾವಣಾ ಹೋರಾಟ ಮುಂತಾದ ವಿಚಾರಗಳನ್ನು ತಿಳಿದುಕೊಳ್ಳಲು ಅವರನ್ನು ಸಂದರ್ಶಿಸಲಾಯಿತು. ಅವರೇನು ಹೇಳಿದ್ದಾರೆಂಬುದನ್ನು ತಿಳಿದುಕೊಳ್ಳಲು ಈ ಸಂದರ್ಶನವನ್ನು ಓದಿ.

-ಸಂಪಾದಕ

Vasantha Bangera (1)

ಡೊನಾಲ್ಡ್ ಪಿರೇರಾ: ನಿಮಗೆ ಈ ಬಾರಿಯೂ ಚುನಾವಣೆಯಲ್ಲಿ ಗೆಲ್ಲುವ ವಿಶ್ವಾಸವಿದೆಯೇ?

ವಸಂತ ಬಂಗೇರ: ನನಗೆ ವಿಶ್ವಾಸವಿದೆ. ಕಳೆದ 4 ವರ್ಷ 10 ತಿಂಗಳಲ್ಲಿ ಮಾಡಿದ ಕೆಲಸ ಕಾರ್ಯಗಳು, 1000 ಕೋ.ರೂ.ಗೆ ಮಿಕ್ಕಿ ಆರ್ಥಿಕ ನೆರವು ತರಿಸಿ 91 ಗ್ರಾಮಗಳಲ್ಲಿಯೂ ಅಭಿವೃದ್ಧಿ ಕಾಮಗಾರಿ ನಡೆಸಲಾಗಿದೆ. ಅದರ ಆಧಾರದಲ್ಲಿ ನಾನು ಗೆಲ್ಲುವ ವಿಶ್ವಾಸ ನನಗಿದೆ.

ಡೊನಾಲ್ಡ್: ಹಲವು ವರ್ಷಗಳಿಂದ ಸತತವಾಗಿ ಶಾಸಕರಾಗಿದ್ದವರು ನೀವು. ಬೆಳ್ತಂಗಡಿಗೆ ನಿಮ್ಮ ವಿಶೇಷ ಕೊಡುಗೆ ಏನು?

ಬಂಗೇರ: 1982-83ರಲ್ಲಿ ನಾನು ಪ್ರಥಮವಾಗಿ ಶಾಸಕನಾಗಿದ್ದೆ. ಆ ಸಂದರ್ಭ ಬೆಳ್ತಂಗಡಿಯ ಹೆಚ್ಚಿನ ರಸ್ತೆಗಳಿಗೆ ಡಾಮರೀಕರಣ ಆಗಿರಲಿಲ್ಲ. ಸೇತುವೆಗಳಿರಲಿಲ್ಲ, ಆಸ್ಪತ್ರೆಗಳಿರಲಿಲ್ಲ, ಹೈಸ್ಕೂಲ್‍ಗಳಿರಲಿಲ್ಲ, ಜೂನಿಯರ್ ಕಾಲೇಜ್ ಇರಲಿಲ್ಲ, ಪ್ರಥಮ ದರ್ಜೆ ಕಾಲೇಜುಗಳಿರಲಿಲ್ಲ. ಬೇಡಿಕೆಯಿತ್ತು. ಗ್ರಾಮೀಣ ಪ್ರದೇಶದ, ಜಿಲ್ಲಾ ಪಂಚಾಯತ್ ರಸ್ತೆಗಳಿಗೂ ಡಾಮರೀಕರಣವಾಗಿರಲಿಲ್ಲ. ಹಿಂದೆ ವೈಕುಂಠ ಬಾಳಿಗಾರು ಶಾಸಕರಾಗಿದ್ದಾಗ ಅನುದಾನ ತರಿಸಿದ್ದರು. 1982ರಿಂದ 2018 ಆಗುವಾಗ ಎಲ್ಲಾ ಮನೆ ಮನೆಗಳಿಗೆ ತಲುಪುವ ಕಾರ್ಯ ನಡೆಸಿದ್ದೇನೆ. ಹಿಂದೆ ಟೆಲಿಫೋನ್, ಸರಕಾರಿ ಬಸ್ಸುಗಳಿರಲಿಲ್ಲ. ಹಳ್ಳಿಗಳಿಗೆ ಖಾಸಗಿ ಬಸ್ಸುಗಳೂ ಹೋಗುತ್ತಿರಲಿಲ್ಲ. ಈಗ 2018ರಲ್ಲಿ ಆಗಿರುವ ಬದಲಾವಣೆ ಏನೆಂದರೆ ರಾಷ್ಟ್ರೀಯ ಹೆದ್ದಾರಿಗೆ ಪೂರ್ಣವಾಗಿ ಹೊಸದಾಗಿ ಡಾಮರೀಕರಣವಾಗಿದೆ. ಪಿಡಬ್ಲ್ಯುಡಿಯ ಎಲ್ಲಾ ರಸ್ತೆಗಳಿಗೆ ಡಾಮರೀಕರಣವಾಗಿದೆ. ಗ್ರಾಮೀಣ ಪ್ರದೇಶಗಳ ಜಿ.ಪಂ. ರಸ್ತೆಗಳಿಗೆ ಡಾಮರೀಕರಣವಾಗಿದೆ. ಈ ಒಂದೇ ವರ್ಷದಲ್ಲಿ 29 ಸೇತುವೆಗಳಿಗೆ ಮಂಜೂರಾತಿ ದೊರಕಿಸಿಕೊಂಡಿದ್ದೇನೆ. ಬೆಳ್ತಂಗಡಿ ಸರಕಾರಿ ಆಸ್ಪತ್ರೆ 100 ಬೆಡ್‍ನ ಆಸ್ಪತ್ರೆಯಾಗಿ ಮೇಲ್ದರ್ಜೆಗೇರಿದೆ. ಆಸ್ಪತ್ರೆ ಕಟ್ಟಡಕ್ಕೆ ರೂ. 6 ಕೋಟಿ ಮಂಜೂರಾಗಿದೆ. 2 ಡಯಾಲಿಸಿಸ್ ಯಂತ್ರಗಳನ್ನು ಸರಕಾರದಿಂದ ಮಂಜೂರಾತಿ ದೊರಕಿಸಿ ತರಿಸಿದ್ದೇನೆ. ಕತಾರ್‍ನಲ್ಲಿನ ಮುಸ್ಲಿಮ್ ಬಂಧುಗಳು ಒಂದು ಯಂತ್ರವನ್ನು ಉಚಿತವಾಗಿ ಒದಗಿಸಿದ್ದಾರೆ. ಇನ್ನೊಂದು ಯಂತ್ರವನ್ನೂ ಅವರು ಒದಗಿಸಲಿದ್ದಾರೆ. ಒಟ್ಟಿಗೆ 4 ಯಂತ್ರಗಳಾಗುತ್ತವೆ. ಇಲ್ಲಿ ಒಟ್ಟು 60 ಡಯಾಬಿಟಿಕ್ ರೋಗಿಗಳಿದ್ದಾರೆ. ಅವರಿಗೆ ಇಲ್ಲಿಯೇ ಚಿಕಿತ್ಸೆ ಕೊಡಿಸುವ ವ್ಯವಸ್ಥೆ ಆಗಿದೆ. ಇಲ್ಲದಿದ್ದರೆ ಅವರು ಮಂಗಳೂರಿಗೇ ತೆರಳಬೇಕಿತ್ತು.

ಮಿನಿ ವಿಧಾನಸೌಧ ಈಗಾಗಲೇ ನಿರ್ಮಾಣಗೊಂಡಿದ್ದು, ಡಿಸೆಂಬರ್’ನಲ್ಲಿ ಮುಖ್ಯಮಂತ್ರಿಗಳು ಅದನ್ನು ಉದ್ಘಾಟಿಸಿದ್ದಾರೆ. ಎಲ್ಲಾ ಸರಕಾರಿ ಇಲಾಖೆಗಳನ್ನು ಈ ಒಂದೇ ಕಟ್ಟಡಕ್ಕೆ ವರ್ಗಾಯಿಸಲಾಗುತ್ತಿದೆ.

ನಾನು ಶಾಸಕನಾಗಿ ಮಾಡಿದ ಪ್ರಮುಖ ಸಾಧನೆಯೆಂದರೆ ಬೆಳ್ತಂಗಡಿಯಲ್ಲಿ ಖಾಸಗಿ ಬಸ್ ನಿಲ್ದಾಣವಾಗುವಂತೆ ಮಾಡಿದ್ದು. ಮೊದಲು ಖಾಸಗಿ ಬಸ್ಸುಗಳು ಗುರುವಾಯನಕೆರೆ ತನಕ ಮಾತ್ರ ಬಂದು ಹೋಗುತ್ತಿದ್ದವು. ಚುನಾವಣೆಯಲ್ಲಿ 6 ತಿಂಗಳಲ್ಲಿ ಖಾಸಗಿ ಬಸ್‍ಗಳು ಬೆಳ್ತಂಗಡಿಗೆ ಬರುವಂತೆ ಮಾಡುತ್ತೇನೆಂದು ಭರವಸೆ ನೀಡಿದ್ದೆ. ಆದರೆ ಅದು ಅಷ್ಟು ಸುಲಭದ ಕೆಲಸವಾಗಿರಲಿಲ್ಲ. ಚುನಾವಣೆಯಲ್ಲಿ ನಾನು ಗೆದ್ದು, ಪ್ರಯತ್ನಪಟ್ಟು ಒಂದೂವರೆ ವರ್ಷವಾದರೂ ಆಗಿರಲಿಲ್ಲ. ಕೋರ್ಟಿನಲ್ಲಿ ಕೇಸ್ ಕೂಡ ದಾಖಲಾಯಿತು. ನಾನು ಎಲ್ಲರ ಸಭೆ ಕರೆದು ಬಸ್ಸುಗಳನ್ನು ಬೆಳ್ತಂಗಡಿಗೆ ತರುವಂತೆ ವಿನಂತಿ ಮಾಡಿದೆ. ಈ ನಿಟ್ಟಿನಲ್ಲಿ ಏನೇ ಸಮಸ್ಯೆ ಎದುರಾದರೂ ಅದನ್ನು ನಾನು ಬಗೆಹರಿಸುತ್ತೇನೆಂದು ಹೇಳಿದೆ. ಏನೇ ಅಡೆತಡೆ ಎದುರಾದರೂ ನಾನು ಅದನ್ನು ಎದುರಿಸುತ್ತೇನೆಂದು ಹೇಳಿದೆ. ಉಸ್ತುವಾರಿ ಸಚಿವರ ಸಮ್ಮುಖದಲ್ಲಿ ಎಲ್ಲಾ ಅಧಿಕಾರಿ ವರ್ಗದವರು ಭಾಗವಹಿಸಿ ಭರ್ಜರಿ ಕಾರ್ಯಕ್ರಮ ಏರ್ಪಡಿಸಿ ಉದ್ಘಾಟನೆಯೂ ಆಯಿತು. ಆದರೆ ಆರೇಳು ತಿಂಗಳು ಕಳೆದರೂ ಬಸ್ಸುಗಳು ಸರಿಯಾಗಿ ಬರುತ್ತಿರಲಿಲ್ಲ. ಕೊನೆಗೆ ಎಲ್ಲಾ ಅಗತ್ಯತೆಗಳನ್ನು ಪೂರೈಸಿ ಕ್ರಮಪ್ರಕಾರವಾಗಿ ಸಂಚಾರ ನಡೆಯುತ್ತಿದೆ. ಈಗ ಎರಡು ನಿಮಿಷಕ್ಕೊಂದರಂತೆ ಬಸ್ಸುಗಳು ಇಲ್ಲಿಂದ ಹೊರಡುತ್ತವೆ.

Vasantha Bangera (3)

ಡೊನಾಲ್ಡ್: ಬೆಳ್ತಂಗಡಿಯಲ್ಲಿ ಸರಕಾರಿ ಬಸ್ ಡಿಪೋ ಸ್ಥಾಪನೆಯಾಗುವ ಕುರಿತು…

ಬಂಗೇರ: ಬಸ್ ಡಿಪೋ ಈಗ ಧರ್ಮಸ್ಥಳದಲ್ಲಿದೆ. ಅಲ್ಲಿ ಸ್ಥಳಾವಕಾಶದ ಕೊರತೆ ಇದೆ. ಉಜಿರೆಯಲ್ಲಿ ಮೂರು ಕಡೆ ಸ್ಥಳ ಪರಿಶೀಲನೆ ನಡೆದಿತ್ತು. ಉಜಿರೆ ಅಥವಾ ಕುವೆಟ್ಟು ಗ್ರಾಮದಲ್ಲಿ ಜಾಗ ಪರಿಶೀಲನೆ ನಡೆಯುತ್ತಿದೆ. ಶೀಘ್ರದಲ್ಲಿ ಪ್ರಾರಂಭವಾಗಲಿದೆ.

ಡೊನಾಲ್ಡ್: ಮೂರೂ ಪಕ್ಷಗಳಿಂದ ಚುನಾವಣೆಯಲ್ಲಿ ನಿಂತು ಗೆದ್ದು ಶಾಸಕರಾದ ವಿಶಿಷ್ಟ ದಾಖಲೆ ನಿಮ್ಮದು. ಕಳೆದ 10 ವರ್ಷಗಳಿಂದ ಕಾಂಗ್ರೆಸ್ಸಿನಲ್ಲಿದ್ದೀರಿ. ನೀವೀಗ 100% ಕಾಂಗ್ರೆಸ್ಸಿಗರಾಗಿದ್ದೀರಾ..?

ಬಂಗೇರ: ಹೌದು. ಅದರಲ್ಲಿ ಯಾವುದೇ ಸಂಶಯವಿಲ್ಲ.

ಡೊನಾಲ್ಡ್: ಹಿಂದೊಮ್ಮೆ ನಿಮ್ಮನ್ನು ಬಿಜೆಪಿಯವರು ಆಮಿಷಕ್ಕೊಡ್ಡಿದ್ದರು ಎಂದು ನೀವೇ ಆಪಾದಿಸಿದ್ದಿರಿ…

ಬಂಗೇರ: ನಾನು ಮೊದಲು ಬಿಜೆಪಿಯಿಂದ ಚುನಾವಣೆಯಲ್ಲಿ ಸ್ಪರ್ಧೆ ಮಾಡಿದ್ದೆ. ಮೊದಲು ನಾನು ಸ್ವತಂತ್ರವಾಗಿ ಸ್ಪರ್ಧಿಸಿದ್ದೆ. ಆದರೆ ಬಿಜೆಪಿಯಿಂದ ಎನ್ನಲಾಯಿತು. ಹೀಗೆ 2 ಸಲ ಗೆದ್ದಿದ್ದೆ. 1989ರಲ್ಲಿ ಜನತಾ ಪಕ್ಷಕ್ಕೆ ಹೋದೆ. ಕಡಿಮೆ ಅಂತರದಿಂದ ಸೋತೆ. 1994ರಲ್ಲಿ ಮತ್ತೆ ಗೆದ್ದೆ. ಮುಖ್ಯ ಸಚೇತಕನಾದೆ. ಕಾಂಗ್ರೆಸ್ ಪಕ್ಷಕ್ಕೆ ಬಂದು 2008 ಮತ್ತು 2013ರಲ್ಲಿ ಗೆದ್ದು ಶಾಸಕನಾಗಿದ್ದೇನೆ.

ಡೊನಾಲ್ಡ್: ಬೆಳ್ತಂಗಡಿಯಲ್ಲಿ ಚುನಾವಣೆಯ ಹೊಸ್ತಿಲಲ್ಲಿ ಕಾಂಗ್ರೆಸ್ ಪಕ್ಷದ ಸಂಘಟನೆ ಹೇಗಿದೆ?

ಬಂಗೇರ: ಕಾರ್ಯಕರ್ತರ ಮನಸ್ಸಿನಲ್ಲಿ ಕಾಂಗ್ರೆಸ್ ಪಕ್ಷವೇ ಗೆಲ್ಲುತ್ತದೆ ಎಂಬ ಮನೋಭಾವವಿದೆ. ಸ್ವಲ್ಪ ಅತಿ ಆತ್ಮವಿಶ್ವಾಸವಿದೆ. ಮೂರು ತಿಂಗಳಿಂದ ಮನೆ ಮನೆಗೆ ಕಾಂಗ್ರೆಸ್ ಅಭಿಯಾನ ನಡೆಯುತ್ತಿದೆ. ಎಲ್ಲಾ 238 ಬೂತ್‍ಗಳ ಮಟ್ಟದಲ್ಲಿ ಚುನಾವಣಾ ತಯಾರಿಗೆ ಅಭಿಯಾನ ನಡೆಸುತ್ತಿದ್ದೇನೆ.

ಡೊನಾಲ್ಡ್: ಬೆಳ್ತಂಗಡಿಯಲ್ಲಿ ಕಾಂಗ್ರೆಸ್‍ನಲ್ಲಿ ನೀವು ಹೊರತುಪಡಿಸಿ ದ್ವಿತೀಯ ಸ್ತರದಲ್ಲಿ ಯಾರೆಲ್ಲಾ ನಾಯಕರಿದ್ದಾರೆ?

ಬಂಗೇರ: ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್ ಇದ್ದಾರೆ. ಈ ಬಾರಿಯ ಚುನಾವಣೆಯಲ್ಲಿ ನಿಲ್ಲುವಂತೆ ಅವರನ್ನು ಒತ್ತಾಯಪಡಿಸಿದರೂ ಅವರು ಕೇಳಲಿಲ್ಲ, ಅದುದರಿಂದ ನಾನೇ ಮತ್ತೆ ನಿಲ್ಲುತ್ತಿದ್ದೇನೆ. ನಿವೃತ್ತ ಎಸ್‍ಪಿ ಪೀತಾಂಬರ ಹೆರಾಜೆ, ಮುಂಡಾಜೆಯ ಶ್ರೀಧರ ಭಿಡೆ ಮುಂತಾದ ನಾಯಕರು ಕಾಂಗ್ರೆಸ್‍ನಲ್ಲಿದ್ದಾರೆ.

ಡೊನಾಲ್ಡ್: ಗಡಾಯಿಕಲ್ಲು ಬೆಳ್ತಂಗಡಿಯ ಪ್ರಮುಖ ಪ್ರವಾಸಿ ತಾಣ. ನಾನು ಶಾಲಾ ದಿನಗಳಿಂದ ಪ್ರತಿ ಚುನಾವಣೆಯಲ್ಲಿ ಇದರ ಅಭಿವೃದ್ಧಿಯ ಆಶ್ವಾಸನೆಗಳನ್ನು ಕೇಳುತ್ತಾ ಬಂದಿದ್ದೇನೆ. ಆದರೆ ಏನೂ ಅಭಿವೃದ್ಧಿಯಾಗಿಲ್ಲವಲ್ಲಾ?

ಬಂಗೇರ: ಹೌದು. ಇದಕ್ಕೆ ಕೇಂದ್ರ ಸರಕಾರ, ಅದರಲ್ಲೂ ಈಗಿನ ಸರಕಾರ, ಸ್ಪಂದಿಸುವುದೇ ಇಲ್ಲ. ಅಲ್ಲಿಗೆ ಲಿಫ್ಟ್ ಮಾಡುವ ಯೋಜನೆ ಸಿದ್ಧಪಡಿಸಿ ಕಳುಹಿಸಲಾಗಿದೆ. ಆದರೆ ಅದಕ್ಕೆ ಸೂಕ್ತ ಸ್ಪಂದನೆ ಇಲ್ಲ. ಪ್ರಾಚ್ಯವಸ್ತು ಇಲಾಖೆಯ ಅಡಿಯಲ್ಲಿ ಅದು ಬರುವುದರಿಂದ ಅವರ ಒಪ್ಪಿಗೆಯಿಲ್ಲದೆ ಏನೇನೂ ಮಾಡುವಂತಿಲ್ಲ.

Vasantha Bangera (2)

ಡೊನಾಲ್ಡ್: ಬೆಳ್ತಂಗಡಿಯ ಮುಖ್ಯ ರಸ್ತೆ (ಬೆಳ್ತಂಗಡಿ-ಚಿಕ್ಕಮಗಳೂರು) ಈಗ ರಾಷ್ಟ್ರೀಯ ಹೆದ್ದಾರಿಯಾಗಿದೆ. ಇದರ ಅಗಲೀಕರಣವೇನಾದರೂ ಮಾಡುವ ಪ್ರಸ್ತಾಪವಿದೆಯಾ?

ಬಂಗೇರ: ಚತುಷ್ಪಥ ರಸ್ತೆ ಮಾಡುವ ಚಿಂತನೆಯಿತ್ತು. ಆದರೆ ಹಾಗೆ ಮಾಡುವುದರಿಂದ ಬಹಳಷ್ಟು ಮನೆಗಳು ಹೋಗುತ್ತವೆ ಮತ್ತು ಅರಣ್ಯ ಸಂಪತ್ತು ನಾಶವಾಗುತ್ತದೆ. ಆದ ಕಾರಣ ಎರಡು ಏಕಮುಖ ರಸ್ತೆಗಳ ನಿರ್ಮಾಣಕ್ಕೆ ಯೋಜನೆ ಮಾಡಲಾಗಿದೆ. ಗುರುವಾಯನಕೆರೆಯಿಂದ ಮುಂಡಾಜೆವರೆಗೆ ಬೈಪಾಸ್ ರಸ್ತೆ ನಿರ್ಮಸಲಾಗುವುದು. ಮುಂಡಾಜೆಯಲ್ಲಿ 18 ಕೋ.ರೂ. ಸೇತುವೆ ನಿರ್ಮಾಣವಾಗುತ್ತಿದೆ.

ಡೊನಾಲ್ಡ್: ಕಾಂಗ್ರೆಸ್‍ನಲ್ಲಿ ಸಿದ್ಧರಾಮಯ್ಯನವರು ಹೈಕಮಾಂಡ್ ಮಟ್ಟದಲ್ಲಿ ಬಹಳ ಪ್ರಭಾವಶಾಲಿ ನಾಯಕರಾಗಿ ಹೊರಹೊಮ್ಮಿದ್ದಾರೆ. ರಾಜ್ಯದಲ್ಲಿ ಸಾಕಷ್ಟು ಅಭಿವೃದ್ಧಿ ಕೂಡ ನಡೆದಿದೆ…

ಬಂಗೇರ: ಹೌದು. ನಾವು ಕಳೆದ ಚುನಾವಣೆಯಲ್ಲಿ ನೀಡಿದ್ದ ಎಲ್ಲಾ ಭರವಸೆಗಳನ್ನು ಈಡೇರಿಸಿದ್ದೇವೆ. ಪ್ರಣಾಳಿಕೆಯಲ್ಲಿ ನೀಡಿದ ಎಲ್ಲಾ ಆಶ್ವಾಸನೆಗಳನ್ನು ಈಡೇರಿಸಿದ ಪ್ರಥಮ ಸರಕಾರ ಈ ಕಾಂಗ್ರೆಸ್ ಸರಕಾರ. ಅಲ್ಲದೆ ಇಂದಿರಾ ಕ್ಯಾಂಟೀನ್ ಸೇರಿದಂತೆ ಪ್ರಣಾಳಿಕೆಯಲ್ಲಿಲ್ಲದ ಹಲವು ಹೆಚ್ಚುವರಿ ಯೋಜನೆಗಳನ್ನು ಜಾರಿಗೊಳಿಸಿದ್ದು ನಮ್ಮ ಹೆಚ್ಚುಗಾರಿಕೆ.

ಡೊನಾಲ್ಡ್: ಅದರ ಆಧಾರದಲ್ಲಿ ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬರುತ್ತದೆಯೇ?

ಬಂಗೇರ: ಬರಬೇಕು. ನಾವು ಇಷ್ಟೊಂದು ಭಾಗ್ಯ, ಹಲವು ಯೋಜನೆಗಳನ್ನು ಕೊಟ್ಟಿದ್ದೇವೆ. ಪ್ರಚಾರದಲ್ಲಿ ನಾವು ಸ್ವಲ್ಪ ಹಿಂದೆ ಇದ್ದೇವೆ ಎನ್ನುವುದು ನಿಜ. ಕೇಂದ್ರದ ಬಿಜೆಪಿ ಸರಕಾರ ಮಾಡಿದ್ದು ಏನೂ ಇಲ್ಲ. ಆದರೆ ಅವರು ನಮ್ಮ ರಾಜ್ಯ ಸರಕಾರ ಮಾಡಿದ ಯೋಜನೆಗಳೆಲ್ಲವನ್ನೂ ತಾವು ಮಾಡಿದ್ದು ಎಂಬಂತೆ ಬಿಂಬಿಸುತ್ತಾರೆ. ಮೊದಲು ಠೀಕೆ ಮಾಡುತ್ತಿದ್ದವರು ಈಗ ಇದೆಲ್ಲವನ್ನೂ ತಾವೇ ಮಾಡಿದ್ದು ಎಂದು ಹೇಳುತ್ತಿದ್ದಾರೆ.

ಡೊನಾಲ್ಡ್: ಕಾಂಗ್ರೆಸ್ ಪಕ್ಷ ಪ್ರಚಾರದಲ್ಲಿ ಯಾಕೆ ಹಿಂದೆ? ಬಿಜೆಪಿಯವರು ಸುಳ್ಳನ್ನು ಸಾವಿರ ಬಾರಿ, ಲಕ್ಷ ಬಾರಿ ಹೇಳುತ್ತಾರೆ ಎಂದು ಕಾಂಗ್ರೆಸ್ಸಿನವರು ಹೇಳುತ್ತಾರೆ. ಆದರೆ ಬಿಜೆಪಿಯವರ ಸುಳ್ಳಿಗೆ ಕಾಂಗ್ರೆಸ್ಸಿನವರು ಯಾಕೆ ಪ್ರತಿಕ್ರಿಯೆ ನೀಡುವುದಿಲ್ಲ? ಕಾಂಗ್ರೆಸ್ಸಿಗರ ಈ ನಿಷ್ಕ್ರಿಯತೆಗೆ ಕಾರಣವೇನು? ಅಪಪ್ರಚಾರದಿಂದ ನಿಮಗೆ ಹಿನ್ನಡೆಯಾಗುವುದಿಲ್ಲವೇ?

ಬಂಗೇರ: ಹೌದು. ಇದರಲ್ಲಿ ನಮ್ಮ ಕಾಂಗ್ರೆಸ್ಸಿಗರು ಸ್ವಲ್ಪ ಹಿಂದೆ ಇದ್ದದ್ದು ನಿಜ. ಈಗ ನಮ್ಮ ಕಾರ್ಯಕರ್ತರು ಮನೆ ಮನೆಗಳಿಗೆ ತೆರಳಿ ಕಾಂಗ್ರೆಸ್ಸಿನ ಯೋಜನೆಗಳನ್ನು ವಿವರಿಸುತ್ತಿದ್ದಾರೆ. ದೇಶದಲ್ಲಿ ಇಷ್ಟು ಭಾಗ್ಯಗಳನ್ನು, ಅಭಿವೃದ್ಧಿ ಕಾರ್ಯಗಳನ್ನು ಕೊಟ್ಟ ಸರಕಾರ ದೇಶದಲ್ಲಿಯೇ ಬೇರೆ ಇಲ್ಲ. ಅನ್ನಭಾಗ್ಯ ಬಹು ದೊಡ್ಡ ಕೊಡುಗೆ. ಬೆಳ್ತಂಗಡಿಯಲ್ಲಿ 35 ಸಾವಿರ ಬಿಪಿಎಲ್ ಕಾರ್ಡ್‍ದಾರು ಅನ್ನಭಾಗ್ಯದ ಫಲಾನುಭವಿಗಳಿದ್ದಾರೆ. ಸುಮಾರು 35 ಸಾವಿರ ಜನರಿಗೆ ಅಕ್ರಮ ಸಕ್ರಮ ಹಕ್ಕು ಪತ್ರ ನೀಡಲಾಗಿದೆ. 94ಸಿ, 94ಸಿಸಿ ಮುಖಾಂತರ 50-60 ವರ್ಷಗಳಿಂದ ಮನೆಯ ಹಕ್ಕು ಪತ್ರ ಸಿಗದಿದ್ದವರಿಗೆ ಹಕ್ಕು ಪತ್ರ ಒದಗಿಸಲಾಗಿದೆ. ಅವರಿಗೆ ಯಾವುದೇ ದಾಖಲೆ ಪತ್ರಗಳು ಸಿಗುತ್ತಿರಲಿಲ್ಲ. ಈಗ ಅವರಿಗೆ ನೆಮ್ಮದಿ ಸಿಕ್ಕಿದೆ. ಬಿಪಿಎಲ್ ಕಾರ್ಡ್ ಕೊಡಲಾಗುತ್ತಿದೆ. ಸ್ವಾಭಿಮಾನದಿಂದ ಬದುಕು ನಡೆಸುವಂತಾಗಲು ನೆರವಾಗಿದ್ದೇವೆ.

ಡೊನಾಲ್ಡ್: ಬಿಜೆಪಿಯವರು ಧರ್ಮವನ್ನು ರಾಜಕಾರಣಕ್ಕೆ ಬಳಸುತ್ತಿದ್ದಾರಲ್ಲಾ? ಅವರಿಗೆ ಹಿಂದೂ ಧರ್ಮವನ್ನು ಯಾರು ಗುತ್ತಿಗೆಗೆ ನೀಡಿದ್ದಾರೆ?

ಬಂಗೇರ: ನೋಡಿ, ನಾನು ಕೂಡ ಹಿಂದೂವೇ. ಸಿದ್ಧರಾಮಯ್ಯನವರೂ ಹಿಂದೂವೇ, ರಾಹುಲ್ ಗಾಂಧಿಯವರೂ ಹಿಂದೂವೇ ಆಗಿದ್ದಾರೆ. ಬಿಜೆಪಿಯವರು ಹಿಂದುತ್ವವನ್ನು ಹಿಡಿದುಕೊಂಡು ಹಿಂದೂಗಳ ಮತ ಸೆಳೆಯುವ ಹವಣಿಕೆ ನಡೆಸುತ್ತಾರೆ, ಸ್ವಲ್ಪ ಮಟ್ಟಿಗೆ ಅವರು ಅದರಲ್ಲಿ ಯಶಸ್ವಿಯಾಗಿದ್ದಾರೆ. ಯುವಜನರು ಅವರಿಗೆ ಹೆಚ್ಚು ಆಕರ್ಷಿತರಾಗಿದ್ದಾರೆ. ಯುವಜನರಿಗೆ ವಿವೇಚನೆ ಅಷ್ಟೊಂದಿರುವುದಿಲ್ಲ.

ಡೊನಾಲ್ಡ್: ಬೆಳ್ತಂಗಡಿ ಸಮೃದ್ಧ ಕೃಷಿ ಪ್ರದೇಶ. ಉತ್ತಮ ನೀರಾವರಿ ಕೂಡ ಇದೆ. ಇಲ್ಲಿಯೂ ಸಹ, ಹಲವು ಸಕಾರಣ, ಸಮಸ್ಯೆಗಳಿಂದಾಗಿ, ಕೃಷಿ ಚಟುವಟಿಕೆ ಕುಂಠಿತವಾಗಿದೆ…

ಬಂಗೇರ: ಇಲ್ಲಿ ಮಳೆಗಾಲದಲ್ಲಿ ಉತ್ತಮ ಮಳೆಯಾಗುತ್ತದೆ ಹೌದಾದರೂ, ಬೇಸಿಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಉದ್ಭವಿಸುತ್ತದೆ. ನಾನು, ದೇವೇಗೌಡರು ಮುಖ್ಯಮಂತ್ರಿಯಾಗಿದ್ದಾಗ, ಅವಿಭಜಿತ ದಕ್ಷಿಣ ಕನ್ನಡದಲ್ಲಿ ಅಲ್ಲಲ್ಲಿ ಚೆಕ್‍ಡ್ಯಾಂ ನಿರ್ಮಿಸಬೇಕೆಂದು ಬೇಡಿಕೆ ಇಟ್ಟಿದ್ದೆ. ಅದನ್ನು ಈಗಿನ ನಮ್ಮ ಸರಕಾರ ಈಡೇರಿಸುವ ನಿಟ್ಟಿನಲ್ಲಿದೆ (ಚುನಾವಣೆ ಘೋಷಣೆಯಾಗಿದ್ದರಿಂದ ಅದನ್ನು ಪ್ರಕಟಿಸಲಾಗಿಲ್ಲ). ಚೆಕ್‍ಡ್ಯಾಂ ನಿರ್ಮಿಸುವುದರಿಂದ ನೀರು ಭೂಮಿಯಲ್ಲಿ ಇಂಗುತ್ತದೆ, ಅದರಿಂದಾಗಿ ಮೇಲ್ಮಟ್ಟದಲ್ಲಿಯೇ ನೀರು ದೊರಕುತ್ತದೆ. ಇದರಿಂದಾಗಿ ಕೃಷಿ ಹಾಗೂ ಕುಡಿಯುವ ನೀರಿಗೆ ಕೊರತೆ ಆಗುವುದಿಲ್ಲ.

ಡೊನಾಲ್ಡ್: ನಮ್ಮಲ್ಲಿನ ಯುವ ಜನತೆ ಉದ್ಯೋಗಕ್ಕಾಗಿ ಬೇರೆಡೆ ತೆರಳುತ್ತಾರೆ. ಇಲ್ಲಿಯೇ ಉದ್ಯೋಗದ ಅವಕಾಶಗಳ ರಚನೆ ಸಾಧ್ಯವಿದೆಯೇ?

ಬಂಗೇರ: ಸ್ವ ಉದ್ಯೋಗ ಮಾಡಲು ನಾನು ಎಲ್ಲಾ ಕಡೆ ಕರೆ ಕೊಡುತ್ತೇನೆ. ಉದ್ಯೋಗದಿಂದ ಗಳಿಕೆ ಸಾಧ್ಯವಾದರೂ, ಸ್ವ ಉದ್ಯೋಗದಿಂದ ಹೆಚ್ಚು ಗಳಿಕೆ ಸಾಧ್ಯ. ಕೃಷಿ ಕೂಡ ಸ್ವ ಉದ್ಯೋಗವೇ. ಹೈನುಗಾರಿಕೆ ತುಂಬಾ ಲಾಭದಾಯಕ. ಸಣ್ಣ ಕೈಗಾರಿಕೆ ಸ್ಥಾಪನೆಗೂ ಅವಕಾಶವಿದೆ. ಐಟಿಐನಿಂದ ಹೊರ ಬಂದ ವಿದ್ಯಾರ್ಥಿಗಳು ಸ್ವ ಉದ್ಯೋಗ ಸ್ಥಾಪಿಸಲು ಅವಕಾಶವಿದೆ.

ಡೊನಾಲ್ಡ್: ಮಂಗಳೂರಿನಿಂದ ಗಲ್ಫ್ ರಾಷ್ಟ್ರಗಳಿಗೆ ನೇರ ವಿಮಾನ ಸಂಪರ್ಕವಿರುವುದರಿಂದ ಇಲ್ಲಿನ ಕೃಷಿ ಉತ್ಪನ್ನ, ತರಕಾರಿ ಬೆಳೆಗೆ ಉತ್ತಮ ಮಾರುಕಟ್ಟೆ ಅವಕಾಶವಿದೆ. ಇದಕ್ಕೇನಾದರೂ ಪ್ರೋತ್ಸಾಹ, ಬೆಂಬಲ ಕೊಡುವ ಸಾಧ್ಯತೆ ಇದೆಯಲ್ಲವೇ?

ಬಂಗೇರ: ಅದನ್ನು ಮಾಡಬಹುದು. ಆದರೆ ರಾಸಾಯನಿಕ ಗೊಬ್ಬರ ಮತ್ತು ಮದ್ದು ಸಿಂಪಡಣೆಯಾದಲ್ಲಿ ಅದರಿಂದ ಆರೋಗ್ಯಕ್ಕೆ ಹಾನಿಯಿದೆ. ಸಾವಯವ ಗೊಬ್ಬರ ಬಳಸಿ ಆರೋಗ್ಯಯುತವಾಗಿ ಕೃಷಿ ಮಾಡಿದರೆ ಅದರಿಂದ ಒಳಿತಾಗುತ್ತದೆ. ಒಳ್ಳೆಯ ಕೃಷಿ ಬೆಳೆ ಬೆಳೆದರೆ ಉತ್ತಮ ಉತ್ಪತ್ತಿ ಮತ್ತು ಆದಾಯ ಗಳಿಸಲು ಸಾಧ್ಯವಿದೆ.

ಡೊನಾಲ್ಡ್: ವಸಂತ ಬಂಗೇರ ಅವರು ಮುಂದಿನ ಸರಕಾರದಲ್ಲಿ ಸಚಿವರಾಗುತ್ತಾರೆಯೆ?

ಬಂಗೇರ: ಅವಕಾಶ ಕೊಟ್ಟರೆ ತೆಗೆದುಕೊಳ್ಳುತ್ತೇನೆಯೇ ಹೊರತು ಡಿಮಾಂಡ್ ಮಾಡುವವನಲ್ಲ ನಾನು.

ಡೊನಾಲ್ಡ್: ಕ್ರೈಸ್ತ ಧರ್ಮೀಯರಿಗೆ ವಿಶೇಷ ಅನುದಾನ, ಯೋಜನೆಯೇನಿದೆ?

ಬಂಗೇರ: ಎಲ್ಲಾ ಜಾತಿ, ಧರ್ಮದವರಿಗೆ ಸರಕಾರದಿಂದ ಯೋಜನೆ, ಅನುದಾನ ಕೊಡಲಾಗಿದೆ. ಕ್ರೈಸ್ತರೂ ಸೇರಿದಂತೆ ಎಲ್ಲರನ್ನು ಸಮಾನವಾಗಿ ನೋಡಿದ್ದೇವೆ. ಮುಸ್ಲಿಮರು, ಜೈನರು, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಸೇರಿದಂತೆ ಪ್ರತಿಯೊಬ್ಬರಿಗೂ ನಮ್ಮ ಸರಕಾರದಿಂದ ಕೊಡುಗೆ ನೀಡಲಾಗಿದೆ. ಇದು ನಮ್ಮ ಸರಕಾರದ ದೊಡ್ಡ ಸಾಧನೆ. ಬಿಜೆಪಿಯವರಂತೆ ಬರೀ ಹಿಂದೂ ಹಿಂದೂ ಎಂದು ಹೇಳಿಕೊಂಡು ನಾವು ಓಡಾಡುವುದಿಲ್ಲ. ನಮ್ಮ ಜೊತೆ ಹಿಂದೂಗಳು ಹೆಚ್ಚಾಗಿ ಇದ್ದಾರೆ. ಬಿಜೆಪಿಯವರು ನಮ್ಮನ್ನು ಹಿಂದೂಗಳು ಎಂದು ಕರೆಯುವುದಿಲ್ಲ ಅಷ್ಟೇ!

ಡೊನಾಲ್ಡ್: ಅಂದರೆ ಬಿಜೆಪಿಯವರಿಗೆ ಅಭಿವೃದ್ಧಿ ವಿಷಯದಲ್ಲಿ ಆಸಕ್ತಿ ಇಲ್ಲ? ಕೇವಲ ಧರ್ಮವನ್ನು ರಾಜಕೀಯಕ್ಕೆ ಬಳಸುವುದರಲ್ಲಿಯೇ ಅವರ ಉದ್ದೇಶ..?

ಬಂಗೇರ: ಬಿಜೆಪಿಯವರಿಗೆ ಅಭಿವೃದ್ಧಿಯಲ್ಲಿ ಆಸಕ್ತಿ ಇಲ್ಲ. ಧರ್ಮ, ಕೋಮುವಾದ ಬಳಸಿ ಘರ್ಷಣೆ ಹುಟ್ಟು ಹಾಕುತ್ತಾರೆ. ಹಿಂದೂಗಳಿಗೆ ನಾವು ರಕ್ಷಣೆ ಕೊಡುತ್ತೇವೆ ಎನ್ನುವ ಬಿಜೆಪಿಯವರು ನಿಜವಾಗಿ ಹಿಂದೂ ಯುವಕರನ್ನು ಜೈಲಿಗೆ ಅಟ್ಟುತ್ತಾರೆ. ಸುಮಾರು ಒಂದೂವರೆ ಸಾವಿರ ಜನರು ಜಿಲ್ಲೆಯಲ್ಲಿ ಜೈಲು ಸೇರಿದ್ದಾರೆ. ಅದು ಹಿಂದೂಗಳಿಗೆ ಬಿಜೆಪಿಯ ನಿಜವಾದ ಕೊಡುಗೆ!

ಸಂದರ್ಶನ: ಡೊನಾಲ್ಡ್ ಪಿರೇರಾ ಬೆಳ್ತಂಗಡಿ
Feedback: info.janavahini@gmail.com

Visit & Like our Page – www.facebook.com/janavahini

Like us on facebook

Leave a Reply

Your email address will not be published. Required fields are marked *

*

code

LATEST NEWS