ವಿಲನ್: ಪದ್ಮಾವತಿಯನ್ನು ಕೊಂದದ್ದು ಅಲ್ಲಾವುದ್ದೀನ್ ಖಿಲ್ಜಿ ಅಲ್ಲ, ಅವನೊಬ್ಬ ಬ್ರಾಹ್ಮಣ!

Published on: Saturday, February 3rd, 2018,3:18 pm

ಸೂಚನೆ: ಹಾಂ..! ಓದುಗರೇ ಮೊದಲೇ ಸ್ಪಷ್ಟಪಡಿಸುತ್ತಿದ್ದೇನೆ, ಈ ಬರಹವನ್ನು ನೀವು ಧರ್ಮದ ದೃಷ್ಟಿಕೋನದಿಂದ ಓದಲೇಬಾರದು. ಓರ್ವ ಮನುಷ್ಯನಾಗಿಯಷ್ಟೇ ನೀವಿದನ್ನು ಓದಬೇಕು. ಈ ಬರಹ ನಿಷ್ಪಕ್ಷಪಾತ ಮತ್ತು ವಸ್ತುನಿಷ್ಠವಾಗಿದೆ. ನೀವೂ ಹಾಗೇ ಓದಿ.

ಶೂಟಿಂಗ್ ಶುರುವಾದಂದಿನಿಂದ ವಿವಾದಕ್ಕೀಡಾಗುತ್ತಾ, ಕೆಲ ತಿಂಗಳುಗಳಿಂದ ಅತ್ಯುಗ್ರ ಪ್ರತಿಭಟನೆ, ವಿರೋಧವನ್ನು ಕಾಣುತ್ತಾ ಪ್ರಚಾರ ಪಡೆದಿದ್ದ, ಸಿನಿ ಪ್ರಿಯರಲ್ಲಿ ನಿರೀಕ್ಷೆ, ಕುತೂಹಲವನ್ನು ಗರಿಗೆದರಿಸಿಕೊಂಡು ಬಂದಿದ್ದ ‘ಪದ್ಮಾವತಿ’ ಸಿನೆಮಾವು ಸೆನ್ಸಾರ್ ಬೋರ್ಡ್ ಮತ್ತು ಸುಪ್ರೀಂ ಕೋರ್ಟ್‍ನ ಆದೇಶದಂತೆ ಹಲವು ತಿದ್ದುಪಡಿ, ಬದಲಾವಣೆಗಳೊಂದಿಗೆ ಜನವರಿ 25ರಂದು ‘ಪದ್ಮಾವತ್’ ಹೆಸರಿನಡಿ ತೆರೆ ಕಂಡಿದೆ.

ಈ ವಿವಾದ, ಗೊಂದಲ, ಹೋರಾಟಗಳಿಂದ ಯಾರು ಏನು ಸಾಧಿಸಿದರೋ ಗೊತ್ತಿಲ್ಲ. ಹಾಗೆ ನೋಡಿದರೆ ತಡೆಯೊಡ್ಡಿದವರು, ವಿರೋಧಿಸಿದವರ್ಯಾರೂ ಸಿನೆಮಾವನ್ನೇ ನೋಡಿರಲಿಲ್ಲ. ಚಿತ್ರ ಬಿಡುಗಡೆಯಾಗದೆ ನೋಡಲು ಸಾಧ್ಯವೂ ಇಲ್ಲ. ಆದರೂ ಸಂಜಯ್ ಲೀಲಾ ಬನ್ಸಾಲಿಯವರ ಈ ಚಿತ್ರ ಬಹಳಷ್ಟು ವಿವಾದಕ್ಕೊಳಗಾಗಿತ್ತು. ವಿವಾದ ಎಂದರೆ ಬರೀ ವಿರೋಧವಷ್ಟೆ!

Padmaavat movie analysis 6

‘ಪದ್ಮಾವತ್’ ಚಿತ್ರ ನೋಡಿ ಬಂದ ನನಗೆ ಒಂದು ಉತ್ತಮ ಚಿಲನಚಿತ್ರವನ್ನು ನೋಡಿದ ಸಂತೃಪ್ತಿ ಮೂಡಿತು. ಮೊತ್ತ ಮೊದಲು, ಸಿನೆಮಾ ಎಂಬುದು ಒಂದು ಅದ್ಭುತ ದೃಶ್ಯ ಕಾವ್ಯ. ಹಲವು ಕಲೆ, ಪ್ರತಿಭೆಗಳ ಸಂಗಮ; ಮತ್ತೀಗ ಅದು ಒಂದು ಬೃಹತ್ ಉದ್ಯಮವೂ ಆಗಿದೆ. ವೀಕ್ಷಕನಿಗೆ ಸಿನೆಮಾ ನೋಡುವಾಗ ಮನರಂಜನೆಯಂತೂ ಬೇಕೇ ಬೇಕು. ನಿರೂಪಣೆಯೂ ಮುಖ್ಯ. ಈ ಚಿತ್ರ, ಅದೂ 3ಡಿಯಲ್ಲಿರುವುದರಿಂದ ಅದ್ಭುತವಾಗಿ ಮೂಡಿ ಬಂದಿದೆ.

ಐತಿಹಾಸಿಕ ಸಂಗತಿಗಳನ್ನು ಬಳಸಿಕೊಂಡು ಇದೇ ಬನ್ಸಾಲಿಯವರು ಈ ಹಿಂದೆಯೂ ಸಿನೆಮಾಗಳನ್ನು ತೆಗೆದಿದ್ದಾರೆ. ವಿವಾದಕ್ಕೆ ಬರುವುದಾದರೆ, ‘ಪದ್ಮಾವತಿ’ ಪಾತ್ರದ ಸುತ್ತ ಪ್ರಧಾನ ವಸ್ತುವನ್ನಿಟ್ಟುಕೊಂಡಿರುವ ಈ ಚಿತ್ರದ ಚಿತ್ರೀಕರಣ ಪ್ರಾರಂಭವಾಗುವಲ್ಲಿಂದ ಇಂದಿನವರೆಗೂ ಬನ್ಸಾಲಿ ಮತ್ತು ಚಿತ್ರದ ಮೇಲೆ ಹೊರಿಸಲಾದ ಆರೋಪವೇನಾಗಿತ್ತೆಂದರೆ, ‘ರಜಪೂತರಿಗೆ ಮತ್ತು ಸ್ವತಃ ಪದ್ಮಾವತಿಯನ್ನು ಅವಮಾನಪಡಿಸಲಾಗಿದೆ, ಕೀಳಾಗಿ ಕಾಣಿಸಲಾಗಿದೆ’ ಎಂಬುದು. ಚಿತ್ರದಲ್ಲಿ ಇಂತಹ ಯಾವುದೇ ಸನ್ನಿವೇಶ, ಚಿತ್ರಣ ಇಲ್ಲ.

ಹಾಗಾದರೆ ಚಿತ್ರಕ್ಕೆ ಪ್ರತಿಭಟನೆ ಮಾಡಿದವರೇನು ಚಿತ್ರಕಥೆ, ಸಂಭಾಷಣೆ, ಸನ್ನಿವೇಶಗಳ ಪ್ರತಿಯನ್ನಿಟ್ಟುಕೊಂಡಿದ್ದರೆ? ಅವರಿಗೆ ಏನು ಗೊತ್ತಿತ್ತು ಚಿತ್ರದಲ್ಲಿ ಏನೇನಿರಲಿದೆ ಎಂದು? ಅದೂ ಚಿತ್ರವು ತೆರೆ ಕಾಣುವ ಮೊದಲು?

Padmaavat movie analysis 3

ಚಿತ್ರದ ವಿರೋಧಿಗಳು ಹೇರಿದ ಅತಿ ದೊಡ್ಡ ಆಪಾದನೆಯೆಂದರೆ, ‘ಚಿತ್ರದಲ್ಲಿ ಮುಸ್ಲಿಂ ದೊರೆ ದಿಲ್ಲಿಯ ಸುಲ್ತಾನ್ ಅಲ್ಲಾವುದ್ದೀನ್ ಖಿಲ್ಜಿಯನ್ನು ವೈಭವೀಕರಿಸಲಾಗಿದೆ, ಆತನನ್ನು ಬಳಸಿ ಪದ್ಮಾವತಿ ಮತ್ತು ರಜಪೂತರನ್ನು ಹೀಯಾಳಿಸಾಗಿದೆ’ ಎಂಬುದಾಗಿ. ಈ ಎಲ್ಲಾ ಆರೋಪ, ಪ್ರತಿಭಟನೆಗೆ ಉತ್ತರ ಭಾರತದಾದ್ಯಂತ ಅಧಿಕಾರದಲ್ಲಿರುವ ಬಿಜೆಪಿ ಸರ್ಕಾರಗಳೂ ಅಧಿಕೃತವಾಗಿ, ನೇರವಾಗಿ ಸ್ಪಂದಿಸಿ ಒಲುಮೆಯಿಂದ ಚಿತ್ರದ ಬಿಡುಗಡೆಯನ್ನು ನಿಷೇಧಿಸಿದವು. ಎಂದಿನಂತೆ ಬಿಜೆಪಿ ಮತ್ತದರ ಪರಿವಾರಕ್ಕೆ ಸಂಬಂಧವಿರುವ ಸಂಘಟನೆಗಳು, ಮುಖಂಡರು ಮತ್ತು ಕಾರ್ಯಕರ್ತರು ತುಂಬು ಹೃದಯದಿಂದ ‘ಪದ್ಮಾವತ್’ ಚಿತ್ರಕ್ಕೆ ಅಡ್ಡಿಯುಂಟಾಗುವಂತೆ ವರ್ತಿಸಿದರು.

ವಿಚಿತ್ರವೆಂದರೆ ಇವರೆಲ್ಲರ ಆಪಾದನೆಗಳಿಗೂ ಚಲನಚಿತ್ರಕ್ಕೂ ಯಾವುದೇ ಸಂಬಂಧವಿಲ್ಲ. ಇನ್ನೂ ವಿಚಿತ್ರವೇನೆಂದರೆ ಈ ಪದ್ಮಾವತಿಯ ಪಾತ್ರವೇ ಕಾಲ್ಪನಿಕ ಎನ್ನಲಾಗುತ್ತಿದೆ. ಅಲ್ಲಾವುದ್ದೀನ್ ಖಿಲ್ಜಿ ಮತ್ತು ರಜಪೂತ ರಾಜ ಮಹಾರಾವಲ್ ರತನ್ ಸಿಂಗ್ ಎನ್ನುವವರು ನೈಜ, ಚಾರಿತ್ರಿಕ ಪಾತ್ರಗಳಾದರೂ, ಈ ರಾಣಿ ಪದ್ಮಾವತಿಯು ವಾಸ್ತವದಲ್ಲಿ ಇರಲಿಲ್ಲವೆನ್ನಲಾಗಿದೆ. 1540ರಲ್ಲಿ ಸೂಫಿ ಕವಿ ಮಲಿಕ್ ಮಹಮ್ಮದ್ ಜಯಸಿ ಎಂಬಾತ ಬರೆದ ‘ಪದ್ಮಾವತ್’ ಕಾವ್ಯವನ್ನು ಆಧರಿಸಿ ಬನ್ಸಾಲಿಯವರ ಚಿತ್ರ ತಯಾರಿಸಲಾಗಿದೆ.

ಬಹಳ ವರ್ಷಗಳ ಹಿಂದೆ ದೂರದರ್ಶನದಲ್ಲಿ ‘ಭಾರತ್ ಏಕ್ ಖೋಜ್’ ಸರಣಿಯಲ್ಲಿ ಇದೇ ಕಾವ್ಯವನ್ನು ಆಧರಿಸಿ ಧಾರಾವಾಹಿ ಪ್ರಕಟವಾಗಿತ್ತು. (ಅದು ಯೂಟ್ಯೂಬ್‍ನಲ್ಲಿ ಲಭ್ಯವಿದೆ). ಕಾಕತಾಳೀಯವೆಂದರೆ ಆ ನಿರ್ಮಾಣ ತಂಡದಲ್ಲಿಯೂ ಬನ್ಸಾಲಿಯವರಿದ್ದರು. ಅಲ್ಲಿಂದಲೇ ಪ್ರೇರಣೆ ಪಡೆದು ಅವರು ಸ್ವತಂತ್ರ ಚಿತ್ರವನ್ನು ತಯಾರಿಸಿರಬಹುದು. ಆದರೆ ಆ ಧಾರಾವಾಹಿ ಮತ್ತು ‘ಪದ್ಮಾವತ್’ ಚಿತ್ರದಲ್ಲಿ ಹಲವು ಬದಲಾವಣೆಗಳಿವೆ. ಆದರೆ ಮೂಲ ಕಥಾನಕ ಒಂದೇ ಆಗಿದೆ.

Padmaavat movie analysis 1

ನಿಜಕ್ಕೂ ಬನ್ಸಾಲಿಯವರ ಈ ಚಿತ್ರಕ್ಕೆ ವಿರೋಧ ಹುಟ್ಟಿಕೊಂಡಿದ್ದು ಹೇಗೆ, ಯಾಕೆ ಮತ್ತು ಯಾರಿಂದ ಎಂಬುದು ಯಕ್ಷಪ್ರಶ್ನೆ. ಈ ವಿರೋಧದಿಂದ ಚಿತ್ರಕ್ಕೆ ಲಾಭವಾಯಿತೋ ನಷ್ಟವಾಯಿತೋ ಇನ್ನಷ್ಟೇ ಗೊತ್ತಾಗಬೇಕಿದೆ. ಆದರೆ ಚಿತ್ರ ನೋಡಿದ ನಂತರ ನನಗಂತೂ ಅನ್ನಿಸಿದ್ದು ಬೇರೆಯೇ.

ಪ್ರಪಂಚದ ಎಲ್ಲೇ ನೋಡಿ, ಮನುಷ್ಯನ ಮೂಲ ಗುಣಗಳು ಒಂದೇ. ಅದರಲ್ಲೂ ರಾಜಕೀಯ ಮತ್ತು ಅಧಿಕಾರಕ್ಕಾಗಿ ನಡೆದ ಸಂಗ್ರಾಮಗಳು, ಹೆಣ್ಣು ಮತ್ತು ಸಂಪತ್ತಿಗಾಗಿ ನಡೆದ ಹೋರಾಟ, ಷಡ್ಯಂತ್ರ, ರಕ್ತಪಾತಗಳು ಎಲ್ಲಾ ಕಡೆ ಬಹುತೇಕ ಒಂದೇ ರೀತಿಯವು.

ಕೆಲವರ ವಾದದಂತೆ ಪದ್ಮಾವತ್ ಚಿತ್ರದಲ್ಲಿ ಒಂದೆಡೆ ರಜಪೂತರನ್ನು ಕೀಳಾಗಿ ಬಣ್ಣಿಸಲಾಗಿದೆ ಮತ್ತು ಹಿಂದೂ ವಿರೋಧಿ ಮುಸ್ಲಿಂ ಸುಲ್ತಾನ್ ಖಿಲ್ಜಿಯನ್ನು ವೈಭವೀಕರಿಸಲಾಗಿದೆ, ಅಂದರೆ ಆ ಮೂಲಕ ಹಿಂದೂಗಳನ್ನೂ ಹಿಂದೂ ಸಾಮ್ರಾಜ್ಯ, ರಾಜ ಮನೆತನಗಳನ್ನು ಅವಮಾನಿಸುವ ಕೈಕಂರ್ಯವನ್ನು ನಡೆಸಲಾಗಿದೆ ಎಂದೇ ಆರೋಪಿಸಲಾಗಿತ್ತು. ಅವರ ಪ್ರಕಾರ ಅಲ್ಲಾವುದ್ದೀನ್ ಖಿಲ್ಜಿ ಅಧಿಕಾರದಲ್ಲಿದ್ದದ್ದೇ ಭಾರತದಲ್ಲಿ ಹಿಂದೂ ಧರ್ಮವನ್ನು ನಾಶಗಳಿಸುವ ಉದ್ದೇಶದಿಂದ ಮತ್ತು ಆತ ಅದನ್ನೇ ಮಾಡಿದ್ದಾನೆ, ಹಾಗಾಗಿ ಆತನನ್ನು ವೈಭವೀಕರಿಸುವುದೆಂದರೆ ಅದು ಹಿಂದೂ ವಿರೋಧಿ ಕೆಲಸ. ಹಾಗಾಗಿ ಚಿತ್ರಕ್ಕೆ ವಿರೋಧ ಎನ್ನಲಾಗುತ್ತಿತ್ತು.

ನಿಜಕ್ಕೂ ಈ ಚಿತ್ರದಲ್ಲಿ ಅಂತಹ ಅಂಶಗಳಿವೆಯೇ? ಖಂಡಿತಾ ಇಲ್ಲ.

Padmaavat movie analysis 5

ಅಷ್ಟಕ್ಕೂ ಈ ಹಿಂದೆಯೇ ಹೇಳಿದಂತೆ ಈ ‘ಪದ್ಮಾವತಿ’ ಪಾತ್ರ ಕಾಲ್ಪನಿಕವೆನ್ನಲಾಗುತ್ತಿದೆ. ಪ್ರತಿಭಟನಾಕಾರರ ಪ್ರಕಾರ ಆಕೆ ನಿಜವಾಗಿಯೂ ಇದ್ದವಳು, ಚರಿತ್ರೆಯಲ್ಲಿ ಬಂದು ಹೋದವಳೇ ಎನ್ನಲಾಗುತ್ತದೆ. ಈ ಎರಡನ್ನೂ ನಿಜವೆಂದುಕೊಂಡರೂ, ನಿಜವಾಗಿ ಇಲ್ಲಿ ಖಳನಾಯಕ ಯಾರು ಗೊತ್ತಾ? ಊಹೂಂ…! ಖಂಡಿತ ಅಲ್ಲಾವುದ್ದೀನ್ ಖಿಲ್ಜಿ ಅಲ್ಲವೇ ಅಲ್ಲ.

ನಿಜವಾದ ವಿಲನ್ ಬೇರೆ ಯಾರೂ ಅಲ್ಲ. ಆತ ಹಿಂದೂ ರಾಜರ ಆಶ್ರಯದಲ್ಲಿದ್ದ ರಾಜ ಗುರು, ಆಸ್ಥಾನ ಪಂಡಿತ ರಾಘವ್ ಚೇತನ್! ಯೆಸ್. ಈತ ಚಿತ್ತೋರಿನ ರಜಪೂತರ ರಾಜ ರತನ್ ಸಿಂಗ್‍ನ ಅರಮನೆಯಲ್ಲಿದ್ದ ಬ್ರಾಹ್ಮಣ ಗುರು! ಈತ ಮಾಡಿದ ಲಂಪಟತನ, ವಿಶ್ವಾಸ ದ್ರೋಹ, ವಂಚನೆಯಿಂದ ಕೇವಲ ರಾಜ ರತನ್ ಸಿಂಗ್ ಸತ್ತಿದ್ದಷ್ಟೇ ಅಲ್ಲ, ರಾಣಿ ಪದ್ಮಾವತಿ ಅನಿವಾರ್ಯ ಪರಿಸ್ಥಿತಿಯಲ್ಲಿ ಬೆಂಕಿಯಲ್ಲಿ ಆತ್ಮಾಹುತಿ ಮಾಡಿಕೊಂಡಿದ್ದೇ ಅಲ್ಲ, ಬದಲಾಗಿ ಭಾರತದಲ್ಲಿದ್ದ ಹಲವು ಹಿಂದೂ ರಾಜರುಗಳು, ಸಾಮ್ರಾಜ್ಯಗಳು ಪತನಗೊಂಡವು!

ನಾನು ಪ್ರಾರಂಭದಲ್ಲೇ ಹೇಳಿದ್ದೆನಲ್ಲಾ, ಧಾರ್ಮಿಕ ದೃಷ್ಟಿಕೋನದಿಂದ ಈ ಲೇಖನವನ್ನು ಓದಬೇಡಿ ಎಂದು. ಮತ್ತೊಮ್ಮೆ ಅದನ್ನೇ ಜ್ಞಾಪಿಸುತ್ತಿದ್ದೇನೆ.

ಹೌದು. ಇಲ್ಲಿ ಧರ್ಮವೆಂಬುದು ನಗಣ್ಯ. ಮನುಷ್ಯನಿಗೆ ತನ್ನ ಸ್ವಾರ್ಥ, ದುರಾಸೆ, ಹಗೆತನದೆದುರು ಧರ್ಮವೂ ಇಲ್ಲ, ಜಾತಿಯೂ ಇಲ್ಲ, ಸಂಬಂಧವೂ ಇರುವುದಿಲ್ಲ. ಕೃತಘ್ನತೆಯೇ ಅವರ ಬಂಡವಾಳ. ಅಂತಹವರಿಗೆ ಮನುಷ್ಯತ್ವವೇ ಇರುವುದಿಲ್ಲ.

ವಿಪರ್ಯಾಸ ನೋಡಿ, ಇಂದು ನಮ್ಮ ದೇಶದಲ್ಲಿ ಒಂದು ‘ವರ್ಗ’ ಎಲ್ಲದಕ್ಕೂ ಮುಸ್ಲಿಮರು ಮತ್ತು ಕ್ರೈಸ್ತರನ್ನು ಹೊಣೆಗಾರರಾಗಿಸುತ್ತಾ, ರಾಜಕೀಯ ನಡೆಸುತ್ತಾ ತಮ್ಮ ಬೇಳೆ ಬೇಯಿಸಿಕೊಳ್ಳುತ್ತಿದೆ. ಮಾತೆತ್ತಿದರೆ ವಿದೇಶದಿಂದ ದಂಡೆತ್ತಿ ಬಂದ ಸುಲ್ತಾನರು, ಮೊಘಲರು ಮುಂತಾದ ಮುಸ್ಲಿಂ ದೊರೆ, ಸಾಮ್ರಾಜ್ಯಗಳೂ ಬ್ರಿಟಿಷ್, ಪೋರ್ಚುಗೀಸರಂತ ಯೂರೋಪಿಯನ್ ಸಾಮ್ರಾಜ್ಯಶಾಹಿಗಳೂ ಭಾರತವನ್ನು ಕೊಳ್ಳೆ ಹೊಡೆದರು, ಲೂಟಿ ಮಾಡಿದರು, ಇಲ್ಲಿನ ಹಿಂದೂ ದೇವಾಲಯಗಳನ್ನು ಕೆಡವಿದರು, ಜನರನ್ನು ಮತಾಂತರ ಮಾಡಿದರು… ಹೀಗೆ ಭಾರತವನ್ನು ಸರ್ವ ನಾಶ ಮಾಡಿದರು ಮತ್ತು ಕತ್ತಲ ಕೂಪಕ್ಕೆ ನೂಕಿದರು ಎಂದು ಅಲವತ್ತುಕೊಳ್ಳುತ್ತಿದ್ದಾರಲ್ಲಾ, ಅವರು ಹೇಳುತ್ತಿರುವುದರಲ್ಲಿ ಎಷ್ಟು ಸತ್ಯವಿದೆ?

ಅದಕ್ಕೆ ಉತ್ತರ ಇದೇ ಕಥೆಯಲ್ಲಿದೆ. ಸಿನೆಮಾವನ್ನು ನೋಡಿದರೆ ನಿಮಗೆ ಅದೇ ಕಾಣ ಸಿಗುತ್ತದೆ.

Padmaavat movie analysis 2

ಸತ್ಯವೇನೆಂದರೆ, ಅಲ್ಲಾವುದ್ದೀನ್ ಖಿಲ್ಜಿ ನಿಜಕ್ಕೂ ಓರ್ವ ಭಯಂಕರ ಸುಲ್ತಾನನೆಂಬುದನ್ನು ಅಲ್ಲಗಳೆಯಲು ಸಾಧ್ಯವಿಲ್ಲ. ಆತ ದಂಡೆತ್ತಿ ಹಲವು ಸಾಮ್ರಾಜ್ಯಗಳನ್ನು ಪತನಗೊಳಿಸಿ ತನ್ನ ರಾಜ್ಯವನ್ನು ವಿಸ್ತಾರಗೊಳಿಸಿದ್ದು ವಾಸ್ತವ ಚರಿತ್ರೆ. ಮತ್ತೆ ಎಂದಿನಂತೆ ಲೂಟಿ, ರಕ್ತಪಾತ, ಬರ್ಬರತೆ ನಡೆದಿದ್ದೂ ಹೌದು.

ಆದರೆ, ತನ್ನ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಹವಣಿಸುವ ಒಂದು ‘ವರ್ಗ’ದ ಜನರು ಮಾಡುವ ಆಪಾದನೆಯನ್ನು ಸ್ವಲ್ಪ ಅವಲೋಕಿಸಿದರೆ ಗೋಚರಿಸುವ ಸತ್ಯ ಬೇರೆಯೇ ಇದೆ.

ಅದಕ್ಕೊಂದು ಅಪ್ಪಟ ಉದಾಹರಣೆ ಈ ಫಟಿಂಗ ರಾಘವ್ ಚೇತನ್! ಕಥೆಯ ಪ್ರಕಾರ ರಾಜ ರತನ್ ಸಿಂಗ್ ಸಿಂಹಳದಿಂದ ಕರೆ ತರುವ ಆತನ ಎರಡನೇ ಪತ್ನಿ ಪ್ರಪಂಚದಲ್ಲಿಯೇ ಅತಿ ಸುಂದರಿ. ಅವಳನ್ನು ವಿವಾಹವಾಗಿ ರಾಜ ತನ್ನ ರಾಜಧಾನಿಗೆ ಬರುವಾಗ ಅವನ ಮೊದಲ ಹೆಂಡತಿಯೇ ಹೊಟ್ಟೆಕಿಚ್ಚು ಪಡುತ್ತಾಳೆ. ಆದರೆ ಎಲ್ಲಾ ಆಪತ್ತು, ದುರ್ಘಟನೆಗಳಿಗೆ ಕಾರಣನಾಗುವುದು ಮಾತ್ರ ಈ ಬ್ರಾಹ್ಮಣ ಪಂಡಿತ.

Padmaavat movie analysis 7

ಹೇಳಿ ಕೇಳಿ ಈತ ಪದ್ಮಾವತಿಯ ತಂದೆಯ ಪ್ರಾಯದವನು. ಮಗಳ ವಯಸ್ಸಿನ ರಾಣಿಯನ್ನು ಕಂಡು ಆಕೆಯನ್ನು ಹರಸಬೇಕಾಗಿದ್ದ ಈ ದುರುಳ ರಾಜ ಗುರು ಮಾಡಿದ್ದೇನು ಗೊತ್ತೇ? ಅವಳನ್ನು ಬಯಸಿದ್ದು! ರಾತ್ರಿಯ ವೇಳೆ ರಾಜ ರಾಣಿಯರು ಏಕಾಂತದಲ್ಲಿ ಸರಸ ಸಲ್ಲಾಪದಲ್ಲಿದ್ದಾಗ ಈ ಪಂಡಿತ ಇಣುಕಿ ನೋಡುತ್ತಾನೆ! ಅಲರ್ಟ್ ಆದ ಪದ್ಮಾವತಿಯ ಆತಂಕ್ಕೆ ತಕ್ಷಣ ಸ್ಪಂದಿಸುವ ರಾಜ ಬೀಸಿದ ಕತ್ತಿ ತಾಗಿ ರಾಜ ಗುರು ಸಿಕ್ಕಿ ಬೀಳುತ್ತಾನೆ.

ಅಹಂಕಾರ ನೋಡಿ. ತಾನು ಮಾಡಿದ ಪಾಪಕೃತ್ಯಕ್ಕೆ ಈ ವಿದ್ವಾಂಸನಿಗೆ ನಾಚಿಕೆಯಾಗಬೇಕಿತ್ತು. ಕಿಂಚಿತ್ತೂ ಪಶ್ಚಾತ್ತಾಪ ಪಡದ ಈತ ದುರಹಂಕಾರದ ಮಾತನ್ನಾಡುತ್ತಾನೆ. ಆತನನ್ನು ಬಂಧಿಸಲು ರಾಜ ಆಜ್ಞೆ ಹೊರಡಿಸಿದಾಗ ಕರುಣೆ ಪಟ್ಟ ರಾಣಿ ಪದ್ಮಾವತಿ ಆತನನ್ನು ಬಂಧನದಿಂದ ಬಚಾವ್ ಮಾಡಿ, ರಾಜ್ಯದಿಂದ ಗಡೀಪಾರು ಮಾಡುವಂತೆ ಕೇಳಿಕೊಳ್ಳುತ್ತಾಳೆ. ಅಷ್ಟೇ. ಅದೇ ದೊಡ್ಡ ಪ್ರಮಾದವಾಯಿತು.

ಘಟಸರ್ಪ ಭುಸುಗುಟ್ಟುತ್ತಾ, ತನ್ನನ್ನು ಸಾಕಿ ಸಲಹಿಕೊಂಡಿದ್ದ ರಾಜ ಮನೆತನಕ್ಕೇ ಶಾಪವಿಟ್ಟು, ಆ ಸಾಮ್ರಾಜ್ಯವನ್ನೇ ಸರ್ವನಾಶಗೊಳಿಸುವ ಶಪಥ ಹಾಕುತ್ತಾನೆ ಈ ಕೃತಘ್ನ, ವಿಶ್ವಾಸದ್ರೋಹಿ.

Padmaavat movie analysis 4

ಸದಾ ಧರ್ಮ, ಬೋಧನೆ, ನೀತಿ, ಶಾಂತಿ, ಸಮಾಧಾನವೆಂದೆಲ್ಲಾ ಬೋಧನೆಗೈಯುತ್ತಿದ್ದಾತ ತನ್ನ ಕುಟಿಲತನ ಬಯಲಿಗೀಡಾದಾಗ ವರ್ತಿಸಿದ ರೀತಿ ನೋಡಿ! ಅಷ್ಟು ವರ್ಷಗಳಿಂದ ನಯವಂಚನೆಯಿಂದ ಸರ್ವಸ್ವವನ್ನೂ ಪಡೆದು, ತಿಂದುಕೊಂಡಿದ್ದಾತ ನಡೆದುಕೊಂಡಿದ್ದಾದರೂ ಹೇಗೆ? ಅದೂ ತನ್ನದೇ ಅಪರಾಧ, ಹೀನ ಕೃತ್ಯವನ್ನು ಎದುರಿಗಿಟ್ಟುಕೊಂಡು!

ಅಲ್ಲಿಂದ ಆತ ಶೀದಾ ತೆರಳಿದ್ದು ಎಲ್ಲಿಗೆ ಗೊತ್ತಾ? ದಿಲ್ಲಿಯನ್ನಾಳುತ್ತಿದ್ದ ಸುಲ್ತಾನ್ ಅಲ್ಲಾವುದ್ದೀನ್ ಖಿಲ್ಜಿಯ ಬಳಿ! ಹಾಂ! ಓರ್ವ ಮುಸ್ಲಿಮ್, ಅದೂ ಭಯಂಕರ ಕ್ರೂರ, ರಾಕ್ಷಸೀ ಮನೋಭಾವದ ಮಹತ್ವಾಕಾಂಕ್ಷಿ ರಾಜನ ಬಳಿಗೆ. ಯಾರ ವಿರುದ್ಧ? ಒಂದು ಹಿಂದೂ ಸಾಮ್ರಾಜ್ಯದ ಮತ್ತದರ ರಾಜ ರಾಣಿಯರ ವಿರುದ್ಧ. ವಿಪರ್ಯಾಸ ನೋಡಿ, ಓರ್ವ ಹಿಂದೂ ಬ್ರಾಹ್ಮಣ, ಅದೂ ಓರ್ವ ಆಸ್ಥಾನ ಪಂಡಿತ, ತನ್ನದೇ ಹಿಂದೂ ರಾಜ ಮನೆತನವನ್ನು ಸರ್ವನಾಶಗೈಯಲು ಪಣತೊಟ್ಟು, ಅದನ್ನು ಸಾಧಿಸಲು ಹೋಗಿ ಕಾಲಿಗೆ ಬೀಳುವುದು ಮುಸಲ್ಮಾನ ಸುಲ್ತಾನನನ್ನು!

ಎಲ್ಲಿಗೆ ಬಂತು ಸ್ವಾಮಿ ಧರ್ಮ? ಎಲ್ಲಿದೆ ನೀತಿ, ನಿಯಮ, ಸಿದ್ಧಾಂತ? ಕೃತಜ್ಞತೆಗೆ ಬೆಲೆಯೇ ಇಲ್ಲವೇ? ಮನುಷ್ಯತ್ವವೇ ಕಾಣೆಯಾಗಿರುವ ವ್ಯಕ್ತಿಗಳಿಗೆ ಧರ್ಮ ಅನ್ವಯಿಸುತ್ತದೆಯೆ? ನೀವೇ ಹೇಳಿ.

ಹೋಗಲಿ. ತನ್ನಿಂದ ತಪ್ಪಾಯಿತು, ಅದಕ್ಕಾಗಿ ಆತ ಕ್ಷಮೆ ಕೇಳಿದ್ನಾ? ಇಲ್ಲ! ಏನೋ ಪ್ರಮಾದವಾಯಿತು, ಅದಕ್ಕಾಗಿ ಪಶ್ಚಾತ್ತಾಪಪಟ್ಟು ಸಂಯಮ, ಸಮಾಧಾನದಿಂದ, ಪ್ರಾಯಶ್ಚಿತ್ತ ಮಾಡಿ ಕ್ಷಮೆ ಕೇಳಿ ಮತ್ತೆ ಒಳ್ಳೆಯ ಬದುಕನ್ನು ಬಾಳಬಹುದಿತ್ತಲ್ಲವೆ? ಊಹೂಂ. ಅದೂ ಇಲ್ಲ.

ಅದೆಲ್ಲಾ ಬಿಡಿ, ಕೋಪ ತಾಪದಿಂದ ತನ್ನನ್ನು ಹೊರ ಹಾಕಿದ ರಾಜನ ಮೇಲಿನ ಸಿಟ್ಟಿನಿಂದ ಈ ಗುರುವರ್ಯ, ಧರ್ಮ ಬೋಧಕ ನೆರೆಯ ರಾಜರುಗಳಲ್ಲಿ, ಅಂದರೆ ಇನ್ನಿತರ ಹಿಂದೂ ದೊರೆಗಳಲ್ಲಿ ದೂರಬಹುದಿತ್ತಲ್ಲವೆ? ಅವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ರತನ್ ಸಿಂಗ್‍ನ ಮೇಲೆ ಹಗೆ ಸಾಧಿಸುವುದೋ ಬೇರಿನ್ನೇನೋ ಮಾಡಬಹುದಿತ್ತಲ್ಲವೆ? ಆಗ ಹಿಂದೂ ಧರ್ಮದ ರಾಜರುಗಳ ನಡುವೆ ಯುದ್ಧವೋ ಒಪ್ಪಂದವೋ ನಡೆದಿದ್ದೇ ಆಗಿದ್ದರೆ ಹಿಂದೂ ಧರ್ಮದ ಸಾಮ್ರಾಜ್ಯಗಳು ಉಳಿಯುತ್ತಿದ್ದವಲ್ಲವೆ? ಮುಸ್ಲಿಮ್ ಶತ್ರುಗಳನ್ನು ಅವರೆಲ್ಲಾ ಒಂದುಗೂಡಿ ಸೋಲಿಸಬಹುದಿತ್ತಲ್ಲವೆ?

ಯಾಕೆ ಈ ಹಿಂದೂ ಬ್ರಾಹ್ಮಣ ಮುಸ್ಲಿಮ್ ದೊರೆಯ ಬಳಿಗೇ ಹೋದ? ಅದೂ ಸಾವಿರಗಟ್ಟಲೆ ಮೈಲು ಕ್ರಮಿಸಿ? (ಈಗಿನಂತೆ ವಾಹನಗಳಲ್ಲಲ್ಲ) ಅಷ್ಟು ದೂರದ ಮುಸ್ಲಿಮ್ ರಾಜನೇ ಏಕೆ ಬೇಕಾಯಿತು? ಯಾಕೆಂದರೆ ಆತನ ಮೈ ಮನಸ್ಸುಗಳಲ್ಲಿ, ರಕ್ತ ರೋಮಗಳಲ್ಲಿ ಹರಿದಾಡುತ್ತಿದ್ದದ್ದು ವೈಷಮ್ಯ, ದ್ವೇಷ, ಕೃತಘ್ನತೆ, ಹಗೆ, ಪೈಶಾಚಿಕ ಚಿಂತನೆ, ಕ್ರೋಧ ಮತ್ತು ದ್ರೋಹವಾಗಿತ್ತೇ ಹೊರತು, ಧರ್ಮ, ಸತ್ಯ ನೀತಿ ಮುಂತಾದವ್ಯಾವುವೂ ಅಲ್ಲವೇ ಅಲ್ಲ.

Padmaavat movie analysis 8

ಹೇಳಿ ಕೇಳಿ ಅಲ್ಲಾವುದ್ದೀನ್ ಖಿಲ್ಜಿ ಹೆಣ್ಣುಬಾಕ. ಅದಕ್ಕಿಂತ ಮಿಗಿಲಾಗಿ ತನ್ನ ಸಾಮ್ರಾಜ್ಯ ವಿಸ್ತರಣೆಯ ಧಾವಂತದಲ್ಲಿದ್ದ ಮಹತ್ವಾಕಾಂಕ್ಷಿ. ಆತನಿಗೆ ಈ ಬ್ರಾಹ್ಮಣ ವಿದ್ವಾಂಸ ತನ್ನದೇ ಆಗಿದ್ದ ಹಿಂದೂ ಸಾಮ್ರಾಜ್ಯವನ್ನು ಸರ್ವನಾಶಗೊಳಿಸಲು ರಣವೀಳ್ಯ ನೀಡಿದರೆ ಆತ ಹಿಂಜರಿಯುತ್ತಾನೆಯೆ? ಅಂತಹ ಭಯಂಕರ ಮಂಗೋಲಿಯನ್ನರನ್ನೇ ಹುಟ್ಟಡಗಿಸಿದ್ದ ಪರಾಕ್ರಮಿ, ಅತಿಯಾದ ಧೈರ್ಯ, ಶೌರ್ಯಕ್ಕೆ ಹೆಸರಾಗಿದ್ದ ಅಲ್ಲಾವುದ್ದೀನ್ ಖಿಲ್ಜಿಯು, ವಿಶ್ವಾಸದ್ರೋಹಿಯೊಬ್ಬ ತನಗೆ ಹೆಣ್ಣು ಮತ್ತು ಸಂಪತ್ತು ದೊರಕಿಸಲು ಕಾರಣನಾಗುತ್ತಾನೆಂದರೆ ಸುಮ್ಮನಿರುವನೇ?

ಚಿತ್ತೋರಿನ ಪರಮ ಭದ್ರ ಕೋಟೆಯಲ್ಲಿ ವಿರಾಜಮಾನವಾಗಿದ್ದ ರಜಪೂತ ಸಾಮ್ರಾಜ್ಯವನ್ನು ಅಲುಗಾಡಿಸಲು ಅಲ್ಲಾವುದ್ದೀನನಿಗೆ ಸಾಧ್ಯವಾಗುವುದಿಲ್ಲ. ಅಲ್ಲದೆ ತಿಂಗಳುಗಟ್ಟಲೆ ಕಾದು ನಿರಾಶೆಗೊಂಡಿದ್ದ ಆತನ ಸೈನ್ಯವನ್ನು ಕಟ್ಟಿ ಹಾಕಲು ಸುತ್ತಲಿನಲ್ಲಿದ್ದ ಬಹುತೇಕ ಎಲ್ಲಾ ಹಿಂದೂ ರಾಜರುಗಳಿಗೆ ಒಗ್ಗಟ್ಟಾಗಲು ಸುವರ್ಣಾವಕಾಶ ಒದಗಿ ಬಂದಿತ್ತು. ಆದರೆ ಆಗಿದ್ದೇನು?

ರಾಜ ರತನ್ ಸಿಂಗ್ ತನ್ನ ನೆರೆಯ ರಾಜರುಗಳಿಗೆ ತನ್ನ ನೆರವಿಗಾಗಿ ಮತ್ತು ಎಲ್ಲರೂ ಜೊತೆಗೂಡಿ ಶತ್ರುವನ್ನು ಹಿಮ್ಮೆಟ್ಟಿಸಲು, ಸದ್ದಡಗಿಸಲು ಕೋರಿದಾಗ ಅವರಿಂದ ಅಸಹಕಾರವೇ ಉತ್ತರವಾಗಿತ್ತು. ಇಲ್ಲೂ ಕೂಡ ಅವರನ್ನೆಲ್ಲಾ ಸುಮ್ಮನಾಗಿಸಲು, ಎಲ್ಲರೂ ಒಂದಾಗದಂತೆ ಮತ್ತು ಮುಖ್ಯವಾಗಿ ರತನ್ ಸಿಂಗ್‍ಗೆ ನೆರವಾಗದಂತೆ ತಡೆದದ್ದೇ ಈ ರಾಘವ್ ಚೇತನ್‍ನ ಕುತಂತ್ರ. ಆತನ ಗುರಿ ಹೇಗಾದರೂ ಮಾಡಿ ರತನ್ ಸಿಂಗ್‍ನನ್ನು ಸೋಲಿಸಿ ಪದ್ಮಾವತಿಯನ್ನು ಅಲ್ಲಾವುದ್ದೀನ್‍ಗೆ ಒಪ್ಪಿಸುವುದೇ ಆಗಿತ್ತು.

ಪರಿಣಾಮವೇನಾಯಿತು ಗೊತ್ತೇ?

ಮೋಸಕ್ಕೊಳಗಾಗಿ ಟ್ರ್ಯಾಪ್ ಆಗಿದ್ದ ರತನ್ ಸಿಂಗ್ ಯುದ್ಧದಲ್ಲಿ ಸತ್ತು, ಸೋತು ಚಿತ್ತೋರಿನ ಕೋಟೆ ಸೂರೆಯಾಯಿತು. ಸಾಮ್ರಾಜ್ಯ ಧರಾಶಾಹಿಯಾಯಿತು. ಜೀವ ತ್ಯಾಗ ಮಾಡಿಯಾದರೂ ಸರಿ, ಶತ್ರುಗಳ ಪಾಲಾಗಲು ಒಲ್ಲದೆ ಬೆಂಕಿಗಾಹುತಿಯಾದ ಪದ್ಮಾವತಿ ಮತ್ತು ಇತರ ಸ್ತ್ರೀಯರ ಜೀವ ಬಲಿದಾನದಿಂದ ಕೋಟೆಯೇ ಜನರಿಲ್ಲದೆ ಮೂಕ ರೋದನಗೈದಿತು. ಖಿಲ್ಜಿಯ ಸೇನೆ ಕೋಟೆಯನ್ನು ಲೂಟಿ ಮಾಡಿ ಸರ್ವ ಸಂಪತ್ತಿನೊಂದಿಗೆ ತೆರಳಿತು. ಅಗತ್ಯವಾಗಿ ನೆರವಿಗೆ ಧಾವಿಸಿ ಸಹಕಾರ ಮನೋಭಾವ ತೋರ್ಪಡಿಸಬೇಕಾಗಿದ್ದ ಉಳಿದ ಹಿಂದೂ ಸಾಮ್ರಾಜ್ಯಗಳಿಗೂ ಮುಂದೆ ಅದೇ ಗತಿಯಾಯಿತು.

Padmaavat movie analysis 9

ಒಂದರ ಮೇಲೊಂದರಂತೆ ಅಲ್ಲಾವುದ್ದೀನ್ ಖಿಲ್ಜಿ ಗುಜರಾತ್, ರಣಥಂಬೋರ್, ಮಾಳ್ವ, ಸಿವಾನಾ, ಜಲೋರ್ ಮುಂತಾದ ಹಲವು ಹಿಂದೂ ಸಾಮ್ರಾಜ್ಯಗಳನ್ನು ಆಹುತಿ ತೆಗೆದುಕೊಂಡ. ಇಂದು ಏನು ಒಂದು ‘ವರ್ಗ’ದವರು ಆರೋಪಿಸುತ್ತದ್ದಾರಲ್ಲಾ, ಮುಸ್ಲಿಮರು ದೇಶದಲ್ಲಿ ಹಿಂದೂಗಳ ಆಡಳಿತವನ್ನು ಕೊನೆಗಾಣಿಸಿದರು ಎಂದು, ಅದಕ್ಕೆಲ್ಲಾ ರಣವೀಳ್ಯ ಕೊಟ್ಟದ್ದು ಯಾರು? ತಿಳಿಯತಲ್ಲವೆ?

ಹಾಂ! ಹಾಗಂತ ಇದೇನೂ ಭಾರತದಲ್ಲಿ ಮಾತ್ರ ನಡೆದಿದ್ದಲ್ಲ. ಪ್ರಪಂಚದಾದ್ಯಂತ ಹೀಗೆ ನಡೆದಿದೆ. ಅಲ್ಲೆಲ್ಲಾ ಎಲ್ಲರಿಗೂ ಧರ್ಮವೆಂಬುದು ನಗಣ್ಯವೇ ಆಗಿತ್ತು.

ಅಂತಹ ದಾರ್ಶನಿಕ, ಮನುಕುಲದ ಒಳಿತಿಗಾಗಿ ಮಾನವನಾಗಿ ಹುಟ್ಟಿ ಬಂದಿದ್ದ ಯೇಸುಕ್ರಿಸ್ತನನ್ನು ದ್ರೋಹದಿಂದ ಕೊಲ್ಲಿಸಿದ್ದು ಯಾರು? ಆತನದೇ ಜನಾಂಗದ, ಆತನದೇ ಶಿಷ್ಯನಾಗಿದ್ದ ಜುದಾಸನು ಈ ಕೃತ್ಯ ನಡೆಸಿದ್ದನು. ರೋಮ್ ಚಕ್ರವರ್ತಿ ಜೂಲಿಯಸ್ ಸೀಸರನ ಬೆನ್ನಿಗೆ ಚೂರಿ ಹಾಕಿದ್ದೂ ಆತನದೇ ಬಂಟನಾಗಿದ್ದ ಬ್ರೂಟಸ್. ಬಂಗಾಳದ ನವಾಬ ಸಿರಾಜ್ ಉದ್ ದೌಲನಿಗೆ ದ್ರೋಹ ಮಾಡಿದ್ದು ಮೀರ್ ಜಾಫರ್. ಆತನೂ ತನ್ನ ದೊರೆಗೆ ವಿಶ್ವಾಸ ದ್ರೋಹ ಮಾಡಿದ್ದ.

ಅದು ಬಿಡಿ, ನಮ್ಮ ಕನ್ನಡ ನಾಡಿನಲ್ಲಿಯೇ ಎಂತಹ ನಿದರ್ಶನವಿದೆ ನೋಡಿ. ಮೈಸೂರಿನ ಟಿಪ್ಪು ಸುಲ್ತಾನನಿಗೆ ದ್ರೋಹ ಮಾಡಿದ್ದು ಬೇರ್ಯಾರೂ ಅಲ್ಲ, ಸ್ವತಃ ಆತನ ಖಾಸಾ ಮಂತ್ರಿಯಾಗಿದ್ದ ಮೀರ್ ಸಾದಿಕ್.

ಇಂತಹ ಸಾವಿರಾರು ದೃಷ್ಟಾಂತಗಳು ನಮ್ಮ ಕಣ್ಣ ಮುಂದಿವೆ.

ಹಾಗಂತ ಇಂತಹ ದ್ರೋಹಿಗಳು ಸುಖಿಯಾಗಿ ಬದುಕುತ್ತಾರೆಯೆ ಎಂದರೆ ಅದೂ ಇಲ್ಲ. ತನ್ನಂತಹ ಇನ್ನೊಬ್ಬ ರಾಜನಿಗೆ ವಿಶ್ವಾಸದ್ರೋಹಗೈದ ರಾಘವ್ ಚೇತನ್‍ನನ್ನು ತನ್ನ ಫಾಯಿದೆಗಾಗಿ ಬಳಸಿದ ಅಲ್ಲಾವುದ್ದೀನ್ ಇಂಥಾ ದ್ರೋಹಿಗಳಿಂದೆರಗುವ ಅಪಾಯ ಅರಿಯದವನೇನಲ್ಲ. ಆದರೆ ಆ ಕೆಲಸವನ್ನು ಅನಾಯಾಸವಾಗಿ ಮಾಡಲು ಆತನಿಗೆ ಪದ್ಮಾವತಿಯೇ ಅವಕಾಶ ಒದಗಿಸುತ್ತಾಳೆ. ಮೋಸದಿಂದ ರತನ್ ಸಿಂಗ್‍ನನ್ನು ಬಂಧಿಸಿದ ನಂತರ ಆತನನ್ನು ಬಿಡಿಸಲು ಪದ್ಮಾವತಿ ತಾನಾಗಿ ಶರಣಾಗುವ ನಾಟಕ ಹೂಡುತ್ತಾ ಕೆಲವು ಶರ್ತಗಳನ್ನು ವಿಧಿಸುತ್ತಾಳೆ. ಅವುಗಳೆಲ್ಲವನ್ನೂ ಅಲ್ಲಾವುದ್ದೀನ್ ಸಂತೋಷದಿಂದ ಒಪ್ಪುತ್ತಾನೆ. ಅವುಗಳಲ್ಲೊಂದು ಇದೇ ದ್ರೋಹಿ ರಾಘವ್‍ನ ತಲೆದಂಡ. ಹೀಗೆ ಅನ್ಯಾಯ ಮಾಡುತ್ತಾ ಕೊನೆಗೆ ಹೀನವಾಗಿ ಸಾವನ್ನಪ್ಪುತ್ತಾನೆ ಘಾತುಕ ರಾಘವ್.

ಹೇಳಿ ಇವರೆಲ್ಲಾ ತಮ್ಮ ಧರ್ಮ, ಜಾತಿಗಳಿಗಾಗಿ ಇದನ್ನೆಲ್ಲಾ ಮಾಡಿದ್ದರೆ?

ಖಂಡಿತಾ ಇಲ್ಲ. ಈ ರೀತಿ ಮಾಡಿದವರನ್ನು ಯಾವ ಧರ್ಮವೂ ಕ್ಷಮಿಸದು. ಇವರೆಲ್ಲಾ ಕೇವಲ ತಮ್ಮ ಸ್ವಾರ್ಥ, ಹಿತಾಸಕ್ತಿ, ದುರಾಸೆಗಾಗಿ ನಡೆದಾಡಿಕೊಂಡಿದ್ದರೇ ಹೊರತು ಬೇರೆ ಯಾವ ಘನ ಉದ್ದೇಶಕ್ಕಾಗಿ ಶ್ರಮಿಸಿದ್ದಲ್ಲ.

ಇಂತಹವರು ಸದಾ ಕಾಲ ಇರುತ್ತಾರೆ. ನಾವು ಎಚ್ಚರದಲ್ಲಿ, ಪ್ರಜ್ಞೆಯಲ್ಲಿ ಇದ್ದರೆ ಅಂತಹವರಿಂದ ದೂರವುಳಿಯಬಹುದು, ಸಂಭಾವ್ಯ ಅಪಾಯದಿಂದ ಪಾರಾಗಬಹುದು.

ಲೇಖನ: ಡೊನಾಲ್ಡ್ ಪಿರೇರಾ ಬೆಳ್ತಂಗಡಿ
Feedback: info.janavahini@gmail.com

Visit & Like our Page – www.facebook.com/janavahini

Like us on facebook

1 thought on “ವಿಲನ್: ಪದ್ಮಾವತಿಯನ್ನು ಕೊಂದದ್ದು ಅಲ್ಲಾವುದ್ದೀನ್ ಖಿಲ್ಜಿ ಅಲ್ಲ, ಅವನೊಬ್ಬ ಬ್ರಾಹ್ಮಣ!”

  1. ಲೇಖನ ಬಹಳ ಸೊಗಸಾಗಿ ಮೂಡಿ ಬಂದಿದೆ. ಡೊನಾಲ್ಡ್ ಅವರಿಗೆ ಧನ್ಯವಾದಗಳು.

Leave a Reply

Your email address will not be published. Required fields are marked *

*

code

LATEST NEWS