ದ.ಕ. ಜಿಲ್ಲೆಯ 8 ಸ್ಥಾನಗಳನ್ನೂ ಕಾಂಗ್ರೆಸ್ ಪಕ್ಷವೇ ಗೆಲ್ಲುತ್ತದೆ: ರಮಾನಾಥ್ ರೈ

Published on: Saturday, March 31st, 2018,4:33 am

ಸಂದರ್ಶನ: ಡೊನಾಲ್ಡ್ ಪಿರೇರಾ ಬೆಳ್ತಂಗಡಿ

Ramanath Rai_Interview (4)ಬೆಳ್ಳಿಪ್ಪಾಡಿ ರಮಾನಾಥ್ ರೈ ಓರ್ವ ಜನನಾಯಕ. ‘ಆರಂಕುಶವಿಟ್ಟೊಡಂ ನೆನೆವುದೆನ್ನ ಮನಂ ಬಂಟ್ವಾಳ ಕ್ಷೇತ್ರಮಂ’ ಎನ್ನುವಂತೆ ಶಾಸಕನಾಗಿ, ಮಂತ್ರಿಯಾಗಿ ರಾಜ್ಯದಾದ್ಯಂತ ಜವಾಬ್ದಾರಿ ನಿಭಾಯಿಸುವ ಒತ್ತಡವಿದ್ದರೂ, ಸ್ವಕ್ಷೇತ್ರ ಬಂಟ್ವಾಳವನ್ನು ಎಂದಿಗೂ ಮರೆತವರಲ್ಲ. ಸ್ಥಳೀಯರಿಂದ ಬೇಬಿಯಣ್ಣ ಎಂದು ಪ್ರೀತಿಯಿಂದ ಕರೆಯಲ್ಪಡುವ ರಮಾನಾಥ್ ರೈಯವರು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಬೆಳೆಸಿದ, ಮುನ್ನಡೆಸಿದ ಕಟ್ಟಾಳು. ಸ್ವಚ್ಛ ರಾಜಕೀಯ ಜೀವನ ನಡೆಸುತ್ತಾ ಬಂದಿರುವ ನಿಷ್ಠಾವಂತ ಕಾಂಗ್ರೆಸ್ಸಿಗ ರಮಾನಾಥ್ ರೈಯವರು ಎದುರಾಳಿಗಳಿಗೆ, ವಿರೋಧಿ ಪಕ್ಷಗಳಿಗೆ ಸಿಂಹಸ್ವಪ್ನದಂತೆ ಗೋಚರವಾಗಿದ್ದೂ ನಿಜ. ಇದೇ ಕಾರಣಕ್ಕಾಗಿ ರೈ ಅವರ ವಿರುದ್ಧ ಅಪಪ್ರಚಾರ ನಡೆಸುವುದರಲ್ಲಿ ವಿರೋಧಿಗಳು ಯಾವತ್ತೂ ಬ್ಯುಸಿಯಾಗಿರುತ್ತಾರೆ. ಸಿದ್ಧರಾಮಯ್ಯನವರ ಸರಕಾರದಲ್ಲಿ ಕ್ಯಾಬಿನೆಟ್ ಮಂತ್ರಿಯಾಗಿ, ದ.ಕ. ಜಿಲ್ಲೆಯ ಉಸ್ತುವಾರಿ ಸಚಿವರಾಗಿ ಕರಾವಳಿ ಪ್ರದೇಶ ಮತ್ತು ಸ್ವಕ್ಷೇತ್ರದಲ್ಲಿ ಬಹಳಷ್ಟು ಅಭಿವೃದ್ಧಿ ಕಾರ್ಯಗಳನ್ನು ನೆರವೇರಿಸಿದ್ದಾರೆ. ಇದೀಗ ಅವಧಿ ಮುಗಿದು, ನೂತನ ವಿಧಾನಸಭೆಗೆ ಚುನಾವಣೆ ಘೋಷಣೆಯಾಗಿದೆ. ಈ ಸಂದರ್ಭದಲ್ಲಿ ಅವರ ಸ್ವಕ್ಷೇತ್ರ, ಜಿಲ್ಲೆ, ರಾಜ್ಯ ಮತ್ತು ದೇಶದ ರಾಜಕೀಯದ ಬಗ್ಗೆ ಅವರಲ್ಲಿ ನಡೆಸಿದ ಸಂದರ್ಶನ ಇಲ್ಲಿದೆ. ಓದಿ. ನಿಮ್ಮ ಅಭಿಪ್ರಾಯಗಳಿಗೆ ಸ್ವಾಗತವಿದೆ.

-ಸಂಪಾದಕ

ಡೊನಾಲ್ಡ್ ಪಿರೇರಾ: ಸರ್, ಕರ್ನಾಟಕ ವಿಧಾನಸಭಾ ಚುನಾವಣೆ ಘೋಷಣೆಯಾಗಿದೆ. ನಿಮ್ಮ ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯ ಜರಗಿದ್ದು ಕಾಣುತ್ತದೆ. ಗೆಲ್ಲುವ ವಿಶ್ವಾಸವೆಷ್ಟಿದೆ?

ರಮಾನಾಥ್ ರೈ: ಬಂಟ್ವಾಳದ ಜನತೆಯ ಮೇಲೆ ನನಗೆ ಬಹಳ ವಿಶ್ವಾಸವಿದೆ. ಯಾಕೆಂದರೆ, ನಾನು 7 ಸಾರಿ ಕಾಂಗ್ರೆಸ್ಸಿನ ಕೈ ಚಿಹ್ನೆಯಡಿ ಚುನಾವಣೆಯಲ್ಲಿ ಸ್ಪರ್ಧಿಸಿದ್ದೇನೆ. 6 ಬಾರಿ ಜನರು ನನ್ನನ್ನು ಗೆಲ್ಲಿಸಿದ್ದಾರೆ. ಒಂದು ಸಲ ಸೋತಿದ್ದೇನೆ. ಆ ಸೋಲೇ ನನಗೆ ಬಹಳ ಪಾಠ ಕಲಿಸಿದೆ. ನಾನು ಬಹಳಷ್ಟು ಅಭಿವೃದ್ಧಿ ಕಾರ್ಯ ನಡೆಸಿದ್ದೇನೆ. ಜನರ ಕೆಲಸಗಳನ್ನು ಮಾಡಿದ್ದೇನೆ. ಎಲ್ಲಾ ಜಾತಿ, ಧರ್ಮ, ಭಾಷೆಯ ಜನರಿಗೆ ನೆರವಾಗಿದ್ದೇನೆ. ಯಾರೂ ನನ್ನನ್ನು ಮತೀಯವಾದಿ ಎನ್ನುವದೂ ಇಲ್ಲ ಜಾತಿವಾದಿ ಎಂದು ಕರೆಯುವುದೂ ಇಲ್ಲ. ನನ್ನ ಮೇಲೇನಾದರೂ ಆರೋಪವಿದ್ದರೆ, ಅದು ನಾನು ಇತರ ಧರ್ಮ, ಜಾತಿಯ ಜನರನ್ನೂ ಪ್ರೀತಿಸುತ್ತೇನೆ ಎಂದಷ್ಟೇ. ಬೇರೆ ಯಾವುದೇ ಆರೋಪ ನನ್ನ ಮೇಲಿಲ್ಲ.

ಡೊನಾಲ್ಡ್: ನಿಮಗೆ ನಿಮ್ಮ ಕ್ಷೇತ್ರದ ಜನರ ಮೇಲೆ ಸಂಪೂರ್ಣ ನಂಬಿಕೆಯಿದೆ?

ರಮಾನಾಥ್ ರೈ: ಹೌದು. ಸಂಪೂರ್ಣ ವಿಶ್ವಾಸವಿದೆ. ನನ್ನ ಪ್ರಾಮಾಣಿಕತೆಯ ಬಗ್ಗೆ ಅವರಿಗೆ ಗೊತ್ತಿದೆ.

Ramanath Rai_Interview (2)

ಡೊನಾಲ್ಡ್: ಜಿಲ್ಲೆಯಲ್ಲಿ ಕಳೆದ ಬಾರಿ 8ರಲ್ಲಿ 7 ಸ್ಥಾನಗಳನ್ನು ನಿಮ್ಮ ಪಕ್ಷ ಗೆದ್ದಿತ್ತು. ಉಳಿದ ಒಂದು ಕ್ಷೇತ್ರದಲ್ಲಿಯೂ ಕಡಿಮೆ ಅಂತರದಲ್ಲಿ ಸೋಲಾಗಿತ್ತು. ಈ ಬಾರಿ ಪರಿಸ್ಥಿತಿ ಹೇಗಿದೆ?

ರಮಾನಾಥ್ ರೈ: ಕಳೆದ ಬಾರಿ ಸಾಮರಸ್ಯದ ಸಂಗತಿಯನ್ನಿಟ್ಟುಕೊಂಡು ನಾವು ಚುನಾವಣೆಗೆ ಹೋಗಿದ್ದೆವು. ಸಿದ್ಧರಾಮಯ್ಯನವರ ನೇತೃತ್ವದಲ್ಲಿ ‘ಕಾಂಗ್ರೆಸ್ ನಡಿಗೆ ಸಾಮರಸ್ಯದ ಕಡೆಗೆ’ ಎಂಬ ಸಿದ್ಧಾಂತದಲ್ಲಿ ಚುನಾವಣೆ ಎದುರಿಸಿದ್ದೆವು. ಅದರಲ್ಲಿ ಯಶಸ್ಸು ದೊರೆತು, ಜನರು ನಮ್ಮನ್ನು ಆಶೀರ್ವದಿಸಿ 8ರಲ್ಲಿ 7 ಸ್ಥಾನಗಳನ್ನು ಕೊಟ್ಟಿದ್ದರು. ಒಂದರಲ್ಲಿ ಸ್ವಲ್ಪ ಅಂತರದಿಂದ ಸೋಲಾಗಿತ್ತು. ಅದರ ನಂತರ ಲೋಕಸಭೆ ಚುನಾವಣೆಯ ಸಂದರ್ಭದಲ್ಲಿ ಮೋದಿ ಅಲೆ ಕೆಲಸ ಮಾಡಿತ್ತು. ಆದರೆ ಅದು ಕಡಿಮೆಯಾಗುತ್ತಾ ಬಂದಿದೆ. ಇದು ಬುದ್ಧಿವಂತರ ಜಿಲ್ಲೆ. ಸುಳ್ಳಿನ ರಾಜ್ಯಭಾರ ಹೆಚ್ಚು ಸಮಯ ನಡೆಯುವುದಿಲ್ಲ. ಜನರು ಸತ್ಯವನ್ನು ಅರ್ಥ ಮಾಡಿಕೊಂಡಿದ್ದಾರೆ. ಲೋಕಸಭಾ ಚುನಾವಣೆಯ ನಂತರದ ಜಿಲ್ಲಾ, ತಾಲೂಕು ಪಂಚಾಯತ್ ಚುನಾವಣೆಗಳಲ್ಲಿ ನಮಗೆ ಒಳಿತೇ ಆಗಿದೆ. ಅಲ್ಲಿಂದ ನಮ್ಮ ಪಕ್ಷದ ಸಾಧನೆ ಸುಧಾರಿಸುತ್ತಾ ಬಂದಿದೆ. ಕೆಲ ಸಮೀಕ್ಷೆಗಳಲ್ಲಿ ಇದು ಕೋಮು ಸೂಕ್ಷ್ಮ ಜಿಲ್ಲೆ, ಕೇಸರಿ ಪಾಳಯಕ್ಕೆ ಅನುಕೂಲಕರವಾಗಿದೆ ಎಂದು ಕೆಲ ಪತ್ರಿಕೆಗಳಲ್ಲಿ ಬರುತ್ತಿತ್ತು. ಈಗ ಅದೇ ಪತ್ರಿಕೆಗಳಲ್ಲಿ ಕಾಂಗ್ರೆಸ್ ಮುಂದಿದೆ ಎಂದು ವರದಿಯಾಗುತ್ತಿದೆ. ನಾವು ಅತ್ಯುತ್ತಮ ಕೆಲಸಗಳನ್ನು ಮಾಡಿರುವುದರಿಂದ ಜನರು ನಮ್ಮನ್ನೇ ಆಯ್ಕೆ ಮಾಡುತ್ತಾರೆಂಬ ವಿಶ್ವಾಸವಿದೆ. ಸಿದ್ಧರಾಮಯ್ಯ ಸರಕಾರದಿಂದ ಜಿಲ್ಲೆಯಲ್ಲಿ ಅಭಿವೃದ್ಧಿ ಕಾರ್ಯಗಳು ನೆರವೇರಿದ್ದು, ನೀಡಿದ್ದ ಆಶ್ವಾಸನೆಗಳನ್ನೆಲ್ಲಾ ಜಾರಿಗೊಳಿಸಲಾಗಿದೆ. ಆದುದರಿಂದ ಜಿಲ್ಲೆಯ 8ರಲ್ಲಿ 8 ಸ್ಥಾನಗಳಲ್ಲೂ ನಾವು ಗೆಲ್ಲುತ್ತೇವೆಂಬ ವಿಶ್ವಾಸವಿದೆ.

ಡೊನಾಲ್ಡ್: ಉಸ್ತುವಾರಿ ಸಚಿವರಾದ ನಿಮಗೆ ನಿಮ್ಮ ಕ್ಷೇತ್ರದ ಜೊತೆಗೆ ಇತರ ಕ್ಷೇತ್ರಗಳನ್ನೂ ಗೆಲ್ಲಿಸುವ ಹೊಣೆಗಾರಿಕೆ ಇದೆಯಲ್ಲವೇ..?

ರಮಾನಾಥ್ ರೈ: ಜಿಲ್ಲೆಯಲ್ಲಿ ಕಾಂಗ್ರೆಸ್ಸಿನ 7 ಶಾಸಕರು ಇದ್ದಾರೆ. ಈ ಎಲ್ಲಾ ಶಾಸಕರೂ ಕ್ರಿಯಾಶೀಲ ಶಾಸಕರು. ಎಲ್ಲರ ಕ್ಷೇತ್ರಗಳಲ್ಲೂ ಅಭಿವೃದ್ಧಿ ಕೆಲಸಗಳಾಗಿವೆ. ಎಲ್ಲಾ ಶಾಸಕರ ಅಭಿವೃದ್ಧಿ ಕಾರ್ಯಗಳ ಬಗ್ಗೆ ಜನರ ಅಭಿಪ್ರಾಯ ಚೆನ್ನಾಗಿದೆ. ನಾವು ಒಂದು ರೀತಿಯಲ್ಲಿ ಪೈಪೋಟಿಯಲ್ಲಿ ಕೆಲಸ ಮಾಡಿದ್ದೇವೆ. ಆ ಕ್ಷೇತ್ರದಲ್ಲಿ ಅಭಿವೃದ್ಧಿ ಜಾಸ್ತಿಯಾಗಿದೆಯಾ ಈ ಕ್ಷೇತ್ರದಲ್ಲಿ ಅಭಿವೃದ್ಧಿ ಜಾಸ್ತಿಯಾಗಿದೆಯಾ ಎಂಬ ಭಾವನೆಯಲ್ಲಿ ರಾತ್ರಿ-ಹಗಲೆನ್ನದೆ ಎಲ್ಲರೂ ಎಲ್ಲೆಡೆ ಕೆಲಸ ಕಾರ್ಯ ಮಾಡಿದ್ದಾರೆ. ನನ್ನ ಕ್ಷೇತ್ರದಲ್ಲಿ ನಾನು ಕೆಲಸ ಮಾಡಿದ್ದೇನೆ. ಕೆಲಸವೆನ್ನುವುದು ನನಗೆ ಅಭ್ಯಾಸವಾಗಿಬಿಟ್ಟಿದೆ. ನಾನೊಬ್ಬ ಕೆಲಸಗಾರ, ಮೊದಲೂ ಕೆಲಸ ಮಾಡಿದ್ದೇನೆ ಈಗಲೂ ಮಾಡುತ್ತೇನೆ. ‘ಕ್ರಿಯಾಶೀಲನಿಗೆ ಕೆಲಸವೇ ವಿಶ್ರಾಂತಿ, ಸೋಮಾರಿಗೆ ಕುಳಿತುಕೊಳ್ಳುವುದೇ ಕೆಲಸ’ ಎಂಬ ಮಾತಿದೆ. ನಾನು ಕ್ರಿಯಾಶೀಲವಾಗಿ ದುಡಿಯುವವನು.

ಡೊನಾಲ್ಡ್: ಹಾಗಾದ್ರೆ ಈ ಸಲ ಎಲ್ಲಾ 8 ಸ್ಥಾನಗಳೂ ಕಾಂಗ್ರೆಸ್ ಪಾಲಾಗಲಿವೆ?

ರಮಾನಾಥ್ ರೈ: ಎಲ್ಲಾ ಸ್ಥಾನಗಳನ್ನೂ ಕಾಂಗ್ರೆಸ್ ಗೆಲ್ಲಲಿದೆ. ಜಾತ್ಯತೀತ ಮತಗಳು ಕನ್ಸಾಲಿಡೇಟ್ ಆಗುತ್ತಿವೆ. ಅಲ್ಪಸಂಖ್ಯಾತರಲ್ಲಿ 99.9% ಜನರು ನಮಗೆ ಮತ ಹಾಕುತ್ತಾರೆ. ಹಿಂದೂಗಳೂ ಇತರರೂ ದೊಡ್ಡ ಸಂಖ್ಯೆಯಲ್ಲಿ ಕಾಂಗ್ರೆಸ್‍ಗೆ ಮತ ಹಾಕಲಿದ್ದಾರೆ.

ಡೊನಾಲ್ಡ್: ರಾಜ್ಯದಲ್ಲಿ ಪರಿಸ್ಥಿತಿ ಹೇಗಿದೆ? ಈ ಸಲ ಜಿದ್ದಾಜಿದ್ದಿನ ಹಣಾಹಣಿಯಿದೆ. ಬಿಜೆಪಿಯವರಿಗೆ ಮೋದಿಯ ಬಲವಿದೆ, ಕೇಂದ್ರದಲ್ಲಿ ಅವರದೇ ಸರಕಾರವಿದೆ. ಸಿದ್ಧರಾಮಯ್ಯನವರ ನೇತೃತ್ವದಲ್ಲಿ ತುಂಬಾ ಪ್ರಗತಿಯಾಗಿದೆ. ಸ್ಪರ್ಧೆ ಜೋರಾಗಿದೆ. 2013ರಲ್ಲಿ ಬಿಜೆಪಿ ಅತ್ಯಂತ ಹೀನಾಯ ಪರಿಸ್ಥಿತಿಯಲ್ಲಿ ಚುನಾವಣೆ ಎದುರಿಸಿತ್ತು. ಅಷ್ಟೆಲ್ಲಾ ಇದ್ದರೂ ಕಾಂಗ್ರೆಸ್ ಪಕ್ಷ 123 ಸ್ಥಾನ ಗಳಿಸಲು ಏದುಸಿರೆಳೆದಿತ್ತು. ಆದರೆ ಈ ಸಲ ಕಠಿಣ ಸ್ಪರ್ಧೆಯಿದೆ. ಇನ್ನೊಂದೆಡೆ ಜೆಡಿಎಸ್ ಕೂಡ ಸ್ಪರ್ಧೆ ನೀಡುತ್ತಿದೆ. ಇಂತಹ ಸನ್ನಿವೇಶದಲ್ಲಿ ಹೇಗೆ ನಿಮ್ಮ ಪಕ್ಷ ಬಹುಮತ ಗಳಿಸುತ್ತದೆ?

ರಮಾನಾಥ್ ರೈ: ನೋಡಿ, ಮೊದಲು ರಾಜ್ಯದ ವಿಷಯ ಮಾತ್ರವಿತ್ತು. ಈಗ ಕೇಂದ್ರದಲ್ಲಿ ಅವರದೇ ಸರಕಾರವಿದೆ. ಒಂದು ಮಾತಿದೆ, ‘ಆಡದೇ ಮಾಡಿದವನು ಉತ್ತಮ, ಆಡಿ ಮಾಡಿದವನು ಮಧ್ಯಮ, ಆಡಿಯೂ ಮಾಡದವನು ಅಧಮ’ ಅಂಥ. ಸಿದ್ಧರಾಮಯ್ಯನವರ ನೇತೃತ್ವದ ಸರಕಾರ ಆಡಿ ಮಾಡಿದೆ. ನಮ್ಮ ಪ್ರಣಾಳಿಕೆಯಲ್ಲಿನ 99.9% ಕಾರ್ಯಕ್ರಮಗಳನ್ನು ಜಾರಿ ಮಾಡಿದ್ದೇವೆ. ನೀಡಿದ ಭರವಸೆಗಳನ್ನು ಈಡೇರಿಸಿದ್ದೇವೆ. ಆಡದೆಯೂ ಮಾಡಿದ್ದೇವೆ – ಸಾಲ ಮನ್ನಾ ಮಾಡುತ್ತೇವೆ, ಇಂದಿರಾ ಕ್ಯಾಂಟೀನ್ ಆರಂಭಿಸುತ್ತೇವೆ, ಹೆಣ್ಣು ಮಕ್ಕಳಿಗೆ ಧರ್ಮಾರ್ಥ ಶಿಕ್ಷಣ ನೀಡುತ್ತೇವೆ ಎಂದು ಹೇಳಿರಲಿಲ್ಲ…

Ramanath Rai_Interview (6)

ಡೊನಾಲ್ಡ್: ಅಂದರೆ ಪ್ರಣಾಳಿಕೆಯಲ್ಲಿ ಭರವಸೆ ನೀಡಿದ್ದಕ್ಕಿಂತ ಹೆಚ್ಚು ಕೆಲಸಗಳನ್ನು ಮಾಡಿದ್ದೀರಿ?

ರಮಾನಾಥ್ ರೈ: ಹೌದು. ಹೆಚ್ಚು ಕೆಲಸ ಮಾಡಿದ್ದೇವೆ. ಬಸ್ ಪಾಸ್ ಉಚಿತವಾಗಿ ಕೊಡುತ್ತೇವೆ ಎಂದು ಹೇಳಿರಲಿಲ್ಲ. ಸಿದ್ಧರಾಮಯ್ಯನವರ ಸರಕಾರ ಆಡದೇ ಮಾಡಿದೆ, ಅಂದರೆ ನಮ್ಮದು ಉತ್ತಮ ಸರಕಾರ. ಅದೇ ಕಳೆದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಕೊಟ್ಟ ಭರವಸೆ ಏನು? ಯುಪಿಎ ಸರಕಾರವಿದ್ದಾಗ ಡೀಸೆಲ್, ಪೆಟ್ರೋಲ್ ಬೆಲೆ ಜಾಸ್ತಿ ಮಾಡಿದ್ದಾರೆಂದು ಬಿಜೆಪಿಯವರು ದೇಶದಾದ್ಯಂತ ಸ್ಟ್ರೈಕ್ ಮಾಡಿದ್ದರು. ನಾವು ಬಂದರೆ ಬೆಲೆ ಕಡಿಮೆ ಮಾಡುತ್ತೇವೆ ಎಂದರು. ಕಡಿಮೆಯಾಗಿದೆಯಾ? ಅದೂ ಕೂಡ ನಮ್ಮ ಸರಕಾರವಿದ್ದಾಗ ಕಚ್ಚಾ ತೈಲಕ್ಕೆ ಬ್ಯಾರಲ್‍ಗೆ 140 ಡಾಲರ್ ಇದ್ದರೂ ಬೆಲೆ ನಿಯಂತ್ರಣದಲ್ಲಿತ್ತು. ಆದರೆ ಬಿಜೆಪಿ ಸರಕಾರ ಬಂದಾಗ ಬ್ಯಾರಲ್‍ಗೆ 40 ಡಾಲರ್‍ಗೆ ಬಂದಿಳಿದರೂ ಡೀಸೆಲ್, ಪೆಟ್ರೋಲ್ ಬೆಲೆ ಕಡಿಮೆಯಾಗಲಿಲ್ಲ. ಗ್ಯಾಸ್‍ನ ಬೆಲೆ ಜಾಸ್ತಿಯಾಯ್ತೆಂದು ಯುಪಿಎ ಸರಕಾರದ ವಿರುದ್ಧ ಬಿಜೆಪಿಯವರು ಹೋರಾಟ ಮಾಡಿದ್ದರು. ಈಗ ಬೆಲೆ ಎಷ್ಟು? ನಾವಿದ್ದಾಗ 400 ರೂ., ಈಗ 800 ರೂ.! 2 ಕೋಟಿ ಜನರಿಗೆ ಉದ್ಯೋಗ ಕೊಡುತ್ತೇವೆ ಎಂದರು. ಈಗ ನೋಡಿದರೆ ಇದ್ದ ಉದ್ಯೋಗಗಳೂ ಕಡಿಮೆಯಾಗುತ್ತಿವೆ. ಹಿಂದೆ ಪದವಿ ಮುಗಿಸಿದ ಯುವಕನೊಬ್ಬ ಮಹಾನಗರಕ್ಕೆ ಕಾಲಿಟ್ಟರೆ ಆತನಿಗೆ ಉದ್ಯೋಗ ಸಿಗುತ್ತಿತ್ತು. ಈಗ ಪ್ರಯಾಸಪಟ್ಟು ಕೆಲಸ ಹುಡುಕಿದರೂ ಉದ್ಯೋಗ ಸಿಗದೆ ವಾಪಸ್ ಹೋಗುವ ಪರಿಸ್ಥಿತಿ ಇದೆ. ನೋಟ್‍ಬಂದಿ ಮಾಡಿದ್ರು. ಅಧಿಕಾರಕ್ಕೆ ಬಂದ 100 ದಿನಗಳಲ್ಲಿ ವಿದೇಶಗಳಲ್ಲಿದ್ದ ಕಪ್ಪು ಹಣವನ್ನು ತಂದು, ಪ್ರತಿ ಮನೆಗೆ 15 ಲಕ್ಷ ರೂ. ಕೊಡುತ್ತೇನೆ ಎಂದಿದ್ದರು. ಇಷ್ಟು ದೊಡ್ಡ ಸುಳ್ಳು ಹೇಳುವವರು ಬೇರೆಲ್ಲಾದರೂ ಇದ್ದಾರಾ? ಅಂಥವರಿಗೆ ಜನರು ವೋಟ್ ಹಾಕ್ತಾರೆ ಎಂದರೆ ಅದು ಆಶ್ಚರ್ಯದ ಸಂಗತಿ…

ಡೊನಾಲ್ಡ್: ಆದರೆ… ಒಂದೊಂದೇ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಸೋತು ಬಿಜೆಪಿ ಸರಕಾರಗಳೇ ಬರುತ್ತಿವೆಯಲ್ಲಾ..?

ರಮಾನಾಥ್ ರೈ: ಇತ್ತೀಚೆಗೆ ನಡೆದ ಲೋಕಸಭಾ ಉಪ ಚುನಾವಣೆಗಳಲ್ಲಿ ಏನಾಯಿತು? ಉತ್ತರ ಪ್ರದೇಶ, ರಾಜಸ್ಥಾನ, ಮಧ್ಯಪ್ರದೇಶ ಮುಂತಾದೆಡೆ ಬಿಜೆಪಿ ಸೋತಿದೆ, ಕಾಂಗ್ರೆಸ್ ಗೆದ್ದಿದೆ. ನೋಡಿ ಒಂದು ಪಕ್ಷದ ಸರಕಾರ ಅಧಿಕಾರಕ್ಕೆ ಬಂದಾಗ ಅದೇ ಪಕ್ಷಕ್ಕೆ ಜನ ಮತ ನೀಡುವುದು ಸ್ವಾಭಾವಿಕ. ಆಡಳಿತ ಪಕ್ಷದ ಪ್ರಭಾವ ಇದ್ದೇ ಇರುತ್ತದೆ. ಮೊನ್ನೆ ಗುಜರಾತ್‍ನಲ್ಲಿ ನಾವು ಸೋತಿರಬಹುದು, ಆದರೆ ಬಿಜೆಪಿಯ ಪ್ರಭಾವ ಕಡಿಮೆಯಾಯ್ತಲ್ಲಾ?

ಡೊನಾಲ್ಡ್: ಮೋದಿ ಅಲೆ ಮುಗಿಯುತ್ತಾ ಬಂತು ಎನ್ನುತ್ತೀರಾ?

ರಮಾನಾಥ್ ರೈ: ಮೋದಿ ಅಲೆ ಕ್ಷೀಣಿಸುತ್ತಾ ಬಂದಿದೆ. ಕಾಂಗ್ರೆಸ್ ಇದಕ್ಕಿಂತ ಕೆಳಗೆ ಹೋಗುವುದಿಲ್ಲ. ಬಿಜೆಪಿ ಇದಕ್ಕಿಂತ ಮೇಲೆ ಹೋಗುವುದಿಲ್ಲ. ನಾವು ಇಂಪ್ರೂವ್ ಆಗುತ್ತಿದ್ದೇವೆ. ನಾವು ಪ್ರಗತಿ ಹೊಂದುತ್ತಿದ್ದೇವೆ.

Ramanath Rai_Interview (3)

ಡೊನಾಲ್ಡ್: ಸೋಲುಗಳಿಂದ ಕಾಂಗ್ರೆಸ್ ಪಾಠ ಕಲಿತಿದೆ..?

ರಮಾನಾಥ್ ರೈ: ಹೌದು. ಸೋಲಿನಿಂದ ಪಾಠ ಕಲಿಯಲೇಬೇಕು. ನಮ್ಮ ಸೋಲಿಗೆ ಅಪಪ್ರಚಾರವೂ ಒಂದು ಪ್ರಮುಖ ಕಾರಣ. ಲೋಕ್‍ಪಾಲ್ ಬಿಲ್ ಬೇಕೆಂದು ಅಣ್ಣಾ ಹಜಾರೆ ಧರಣಿ ಕೂತಿದ್ರು. ಲೋಕ್‍ಪಾಲ್ ಬಂತಾ? ಆದರೆ ಆ ವಿಷಯವನ್ನು ಹಿಡಿದುಕೊಂಡು ನಮ್ಮ ಪಕ್ಷಕ್ಕೆ ಡ್ಯಾಮೇಜ್ ಮಾಡಿದ್ದಾರೆ.

ಡೊನಾಲ್ಡ್: ಒಪ್ಪುವಂತಾ ಮಾತು. ಬಿಜೆಪಿಯವರು ಅಪಪ್ರಚಾರದಲ್ಲಿ ನಿಸ್ಸೀಮರೆಂಬ ಮಾತಿಗೆ ಬರುವುದಾದರೆ, ಅವರ ಸುಳ್ಳುಗಳಿಗೆ ಕಾಂಗ್ರೆಸ್‍ನವರು ಯಾಕೆ ಪ್ರತಿಕ್ರಿಯೆ ನೀಡುತ್ತಿಲ್ಲ? ಕೌಂಟರ್ ಮಾಡುವುದರಲ್ಲಿ ನೀವು ತುಂಬಾ ಹಿಂದೆ ಅಲ್ವಾ..?

ರಮಾನಾಥ್ ರೈ: ಬಿಜೆಪಿ ಅಂದ್ರೆ ಫ್ಯಾಸಿಸ್ಟರು. ಅಧಿಕಾರಕ್ಕೆ ಬರುವುದಕ್ಕಾಗಿ ಏನೇನೂ ಮಾಡ್ತಾರೆ. ಕಾಂಗ್ರೆಸ್ ಒಂದು ಸೌಜನ್ಯಯುತ ಪಕ್ಷ. ಎಲ್ಲರನ್ನೂ ಪ್ರೀತಿ ಮಾಡುವ ಪಕ್ಷ. ಬಿಜೆಪಿಯದು ಹಿಟ್ಲರ್‍ಶಾಹಿ ಧೋರಣೆ. ಧರ್ಮವನ್ನು ಆಧಾರವನ್ನಾಗಿಸಿ ಸರ್ವಾಧಿಕಾರ ನಡೆಸುವಂಥವರು. ಅವಕಾಶ ಸಿಕ್ಕಿದ್ರೆ ದೇಶದಲ್ಲಿ ಏನೂ ಮಾಡಲೂ ಅವರು ಹೇಸುವುದಿಲ್ಲ. ಸಂಘ ಪರಿವಾರ ಅಂದ್ರೆ ಅಷ್ಟು ಲಘುವಾಗಿ ಪರಿಗಣಿಸಬಾರದು.

ಡೊನಾಲ್ಡ್: ಅದಕ್ಕೇ ನಾನು ಹೇಳ್ತಿರೋದು, ಕಾಂಗ್ರೆಸ್‍ನವರು ಅದನ್ನು ತಡೆಯಬೇಕಲ್ಲವೇ?

ರಮಾನಾಥ್ ರೈ: ಬಿಜೆಪಿ ಪಕ್ಷವೇ ಹಾಗೆ, ಸುಳ್ಳು ಹೇಳುವುದಕ್ಕಾಗಿಯೇ ಹುಟ್ಟಿಕೊಂಡ ಪಕ್ಷವದು. ಹಿಟ್ಲರನ ಆಸ್ಥಾನದಲ್ಲಿ ಗೋಬೆಲ್ಸ್ ಇದ್ದ, ಸುಳ್ಳು ಹೇಳುವುದೇ ಆತನ ಕೆಲಸ. ಬಿಜೆಪಿಯವರೂ ಹಾಗೆಯೇ. ಕೆ.ಎಸ್. ಈಶ್ವರಪ್ಪನವರು ಭಾಷಣ ಮಾಡುತ್ತಾ, ಸಂದರ್ಭ ಬಂದಾಗ ಸುಳ್ಳು ಹೇಳಿ ಜನರನ್ನು ಯಾಮಾರಿಸಬೇಕು ಎಂದರು. ಇದರಲ್ಲಿ ಮೋದಿಯವರು ನಂಬರ್ 1 ಎಂದು ಅವರೇ ಹೇಳುತ್ತಾರೆ. ಬಿಜೆಪಿ ಅಧ್ಯಕ್ಷ ಅಮಿತ್ ಶಾ ಬಂದು, ಎಷ್ಟು ಲಾಠಿಚಾರ್ಜ್, ಗೋಲೀಬಾರ್ ನಡೆಸಲಾಯಿತು, ಎಷ್ಟು ಜನ ಸತ್ತರು… ಎಂದು ಕೇಳುತ್ತಾರೆ. ಅವರದ್ದು ವಿಕೃತ ಮನೋಸ್ಥಿತಿ. ಯಾರೋ ಒಬ್ಬರು ಸತ್ತಾಗ, ನಮ್ಮವರೊಬ್ಬರು ಸತ್ತರು ಅದಕ್ಕೆ ಬೇರೊಬ್ಬರನ್ನು ಸಾಯಿಸಿದೆವು ಎನ್ನುತ್ತಾರೆ ಎಂದರೆ ಏನೆನ್ನಬೇಕು? ಜಿಲ್ಲೆಯಲ್ಲಿ ಬರೀ ಸಂಘ ಪರಿವಾರಕ್ಕೆ ಸೇರಿದವರು ಸತ್ತರೆ ಮಾತ್ರ ಸಾವು ಎಂಬ ರೀತಿಯಲ್ಲಿ ಅವರು ವರ್ತಿಸುತ್ತಿದ್ದಾರೆ…

ಡೊನಾಲ್ಡ್: ಹೌದು. ಅದೇ ವಿಷಯ. ಬಿಜೆಪಿ ಮತ್ತು ಅವರ ಪರಿವಾರದವರು ಗಲಾಟೆ ಮಾಡುವುದು ಅವರ ಸದಸ್ಯರು ಸತ್ತಾಗ ಮಾತ್ರ. ಬೇರೆ ಹಿಂದೂಗಳು ಸತ್ತರೆ ಅವರು ಮಾತನಾಡುವುದೇ ಇಲ್ಲ..!

ರಮಾನಾಥ್ ರೈ: ನಾವು ಮಾತನಾಡುತ್ತೇವೆ.

ಡೊನಾಲ್ಡ್: ಕಾಂಗ್ರೆಸ್‍ನವರು ಮಾತನಾಡುವುದು ಕಡಿಮೆ…

ರಮಾನಾಥ್ ರೈ: ಮಾತಾಡುತ್ತೇವೆ. ಅವರು ಸುದ್ದಿ ಮಾಡುವುದಕ್ಕೂ ನಮಗೂ ವ್ಯತ್ಯಾಸವಿದೆ. ನಾವು ಹರೀಶ್ ಪೂಜಾರಿ ಕೊಲೆ ಬಗ್ಗೆ ಮಾತಾಡುತ್ತೇವೆ, ಬಾಳಿಗಾ ಕೊಲೆ ಬಗ್ಗೆ ಮಾತಾಡುತ್ತೇವೆ. ಹಿಂದೂ ಸಂಘಟನೆಯವರು ಸತ್ತರೆಂಬ ಬಗ್ಗೆ ನೂರು ಸಲ ಮಾತನಾಡಲಾಗುತ್ತದೆ. ಆದರೆ ಮನುಷ್ಯ ಸತ್ತದ್ದರ ಬಗ್ಗೆ ಅವರು ಮಾತನಾಡುವುದಿಲ್ಲ. ಜಲೀಲ್ ಕರೋಪಾಡಿ, ನಜೀರ್, ಅಶ್ರಫ್ ಮತ್ತು ಹರೀಶ್ ಈ ನಾಲ್ಕು ಜನರನ್ನು ಅವರೇ ಹತ್ಯೆ ಮಾಡಿದ್ದು. ಅವರಿಗೆ ಡೆಲ್ಲಿಯಲ್ಲಿ ಸುಳ್ಳು ಹೇಳಿ ಎನ್ನುತ್ತಾರೆ, ಹಳ್ಳಿಯಲ್ಲಿ ಅವರು ಸುಳ್ಳು ಹೇಳುತ್ತಾರೆ. ನಮಗೆ ಡೆಲ್ಲಿಯಲ್ಲಿ ಸುಳ್ಳು ಹೇಳಲು ಯಾರೂ ಹೇಳುವುದಿಲ್ಲ. ನಾವು ನೇರ, ಸತ್ಯದ ದಾರಿಯಲ್ಲಿ ಬದುಕುತ್ತೇವೆ.

Ramanath Rai_Interview (5)

ಡೊನಾಲ್ಡ್: ಕಾಂಗ್ರೆಸ್ಸಿನ ಮತಗಳನ್ನು ವಿಭಜನೆ ಮಾಡಲು, ಅದರಲ್ಲೂ ಅಲ್ಪಸಂಖ್ಯಾತರದ್ದು, ಬಿಜೆಪಿಯವರು ಪ್ಲ್ಯಾನ್ ಮಾಡುತ್ತಿದ್ದಾರಂತಲ್ಲಾ..?

ರಮಾನಾಥ್ ರೈ: ನಾನು ಮೊದಲೇ ಹೇಳಿದ್ದೇನೆ. 99% ಜನ ಅಲ್ಪಸಂಖ್ಯಾತರು ಕಾಂಗ್ರೆಸ್ಸಿಗೇ ಮತ ಹಾಕುತ್ತಾರೆ. ಮುಸ್ಲಿಮರಲ್ಲಿ 99%, ಕ್ರಿಶ್ಚಿಯನ್ನರಲ್ಲಿ 100% ಜನರು ಕಾಂಗ್ರೆಸ್ಸಿಗೆ ಮತ ಹಾಕುತ್ತಾರೆ.

ಡೊನಾಲ್ಡ್: ಹಾಗಾದ್ರೆ ಬಿಜೆಪಿಯಲ್ಲಿರುವ ಅಲ್ಪಸಂಖ್ಯಾತರೂ ಕಾಂಗ್ರೆಸ್ಸಿಗೇ ಮತ ಹಾಕುತ್ತಾರಾ?!

ರಮಾನಾಥ್ ರೈ: ಪರಿಸ್ಥಿತಿ ಹಾಗೆ ಇದೆ.

ಡೊನಾಲ್ಡ್: ಕಾಂಗ್ರೆಸ್ ಮೇಲಿನ ಆಪಾದನೆ ಎಂದರೆ, ಕಾಂಗ್ರೆಸ್ ಪಕ್ಷ ಅಲ್ಪಸಂಖ್ಯಾತರು, ಅದರಲ್ಲೂ ಮುಸ್ಲಿಮರನ್ನು ಜಾಸ್ತಿ ಓಲೈಕೆ ಮಾಡುತ್ತದೆ ಎನ್ನುವುದು. ಕಾಂಗ್ರೆಸ್ ಹಿಂದೂ ವಿರೋಧಿ ಎನ್ನುತ್ತಾರೆ ಬಿಜೆಪಿಯವರು…

ರಮಾನಾಥ್ ರೈ: ನೋಡಿ, ನಾವು ಇನ್ನೊಂದು ಧರ್ಮವನ್ನು ಪ್ರೀತಿ ಮಾಡಿದ್ರೆ ಅದು ಹಿಂದೂ ವಿರೋಧಿಯಾಗುವುದಿಲ್ಲ. ನಾವು ನಮ್ಮ ಧರ್ಮವನ್ನು ಜಾಸ್ತಿ ಪ್ರೀತಿ ಮಾಡಿ, ಇನ್ನೊಂದು ಧರ್ಮವನ್ನು ಪ್ರೀತಿ ಮಾಡಿದ್ರೆ ಅದರಲ್ಲಿ ತಪ್ಪೇನಿದೆ? ಅವರ ದೃಷ್ಟಿಯಲ್ಲಿ ಇನ್ನೊಂದು ಧರ್ಮವನ್ನು ದ್ವೇಷ ಮಾಡ್ಬೇಕು. ಇನ್ನೊಂದು ಧರ್ಮವನ್ನು ದ್ವೇಷಿಸುವುದೇ ಹಿಂದೂ ಪರ ಎನ್ನುವ ಧೋರಣೆ ಅವರದು. ನಾವು ಇತರ ಧರ್ಮಗಳನ್ನೂ ಪ್ರೀತಿಸುತ್ತೇವೆ, ದ್ವೇಷ ಮಾಡುವುದಿಲ್ಲ. ಅದಕ್ಕೇ ನಾವು ಹಿಂದೂ ವಿರೋಧಿ ಎನ್ನುತ್ತಾರೆ. ದೇವಸ್ಥಾನಗಳಿಗೆ ನಾವು ದುಡ್ಡು ಕೊಡುತ್ತೇವೆ. ಇವರು ಒಂದು ಪೈಸೆ ಕೊಡುವುದಿಲ್ಲ. ಕೇವಲ ಪ್ರಚೋದನಕಾರಿ ಭಾಷಣ ಮಾತ್ರ ಮಾಡುತ್ತಾರೆ. ದೇವಸ್ಥಾನದಲ್ಲಿ ಹತ್ತು ಪೈಸೆ ಸಹ ಅವರು ಹಾಕುವುದಿಲ್ಲ. ಜಿಲ್ಲೆಯಲ್ಲಿ ನಾನು ದೇವಸ್ಥಾನಗಳಿಗೆ ಮಾಡಿದ ಸಹಾಯದ ಅರ್ಧದಷ್ಟು ಈ ಬಿಜೆಪಿಯವರು ಮಾಡಿಲ್ಲ.

ಡೊನಾಲ್ಡ್: ಅಂದರೆ ಅವರದ್ದು ಬರೀ ಮಾತು ಮಾತ್ರ?

ರಮಾನಾಥ್ ರೈ: ಬರೀ ಮಾತು ಮಾತ್ರ. ನಾವು ಎಲ್ಲಾ ಧರ್ಮಗಳಿಗೂ ಸಹ, ದೇವಸ್ಥಾನ, ಮಸೀದಿ, ಚರ್ಚ್‍ಗಳಿಗೆ ಸಹಾಯ ಮಾಡಿದ್ದೇವೆ. ನಮ್ಮ ಸರಕಾರವೂ ಮಾಡಿದೆ, ವೈಯಕ್ತಿಕವಾಗಿ ನಾನೂ ಸಹ ಸಹಾಯ ಮಾಡಿದ್ದೇನೆ. ಇದರಲ್ಲಿ ಏನು ತಪ್ಪಿದೆ? ಹಿಂದೂಗಳಿಗೆ ಒಂದು ವೇಳೆ ನಾವು ಸಹಾಯ ಮಾಡದಿದ್ದಲ್ಲಿ ತಪ್ಪಾಗುತ್ತದೆ. ಹಿಂದೂಗಳಿಗೂ ಸಾಕಷ್ಟು ನೆರವು ನೀಡಿದ್ದೇವೆ. ಭೂ ಮಸೂದೆ ಕಾನೂನಿನ ಮೂಲಕ 99% ಹಿಂದೂಗಳಿಗೆ ಪ್ರಯೋಜನವಾಗಿದೆ. 94ಸಿ ಆ್ಯಕ್ಟ್ ಮೂಲಕ ಹೆಚ್ಚಿನ ಹಿಂದೂಗಳಿಗೆ ನೆರವು ದೊರೆತಿದೆ. ಅನ್ನಭಾಗ್ಯ ಬರೀ ಮುಸ್ಲಿಮರಿಗೆ ಅಥವಾ ಕ್ರೈಸ್ತರಿಗೆ ಮಾತ್ರವೇ? ಎಲ್ಲರಿಗೂ ಅದರ ಪ್ರಯೋಜನ ಸಿಗುತ್ತದೆ.

ಡೊನಾಲ್ಡ್: ಕೆಲವು ಯೋಜನೆಗಳು ಜಾತಿ ವಿಂಗಡಣೆ ಮಾಡುತ್ತವೆ ಎಂದು ಠೀಕಿಸಲಾಗುತ್ತದೆ…

ರಮಾನಾಥ್ ರೈ: ಜಾತಿ ವಿಂಗಡನೆ ಅಲ್ಲ. ಅವರವರಿಗೆ ಅವರದೇ ಆದ ನಿಗಮಗಳಿವೆ. ಹಿಂದುಳಿದ ವರ್ಗಗಳಿಗೆ, ಪರಿಶಿಷ್ಟ ಜಾತಿ, ಪಂಗಡದವರಿಗೆ ನಿಗಮಗಳಿವೆ. ಅವರು ಹಿಂದೂಗಳಲ್ವಾ? ದೇವರಾಜ್ ಅರಸ್ ನಿಗಮದ ಮೂಲಕ ಹಿಂದುಳಿದ ವರ್ಗದವರಿಗೆ ಸಾಲ ಸಿಗುತ್ತದೆ. ಅವರು ಹಿಂದೂಗಳಲ್ವಾ? ಅಲ್ಪಸಂಖ್ಯಾತರಿಗೂ ನಿಗಮವಿದೆ. ಎಲ್ಲರಿಗೂ ದುಡ್ಡು ಕೊಡಲಾಗುತ್ತದೆ. ಜನಸಂಖ್ಯೆ ಆಧಾರಿತವಾಗಿ ದುಡ್ಡು ಕೊಡಲಾಗುತ್ತದೆ. ಎಲ್ಲರಿಗೂ ಅವರವರ ಪಾಲು ಮಾತ್ರ ಸಿಗುತ್ತದೆ.

ಡೊನಾಲ್ಡ್: ಹಿಂದೂ ದೇವಾಲಯಗಳ ಆದಾಯವನ್ನು ಅಲ್ಪಸಂಖ್ಯಾತರಿಗೆ ಒದಗಿಸುತ್ತಾರೆ ಎನ್ನುತ್ತಾರಲ್ಲಾ..?

ರಮಾನಾಥ್ ರೈ: ಅದರಲ್ಲಿ ಸತ್ಯವೆಲ್ಲಿದೆ? ಅದು ಸುಳ್ಳು ಆರೋಪ. ಅವರ ಆರೋಪವನ್ನು ಪ್ರೂವ್ ಮಾಡಿದ್ರೆ ನಾನು ರಾಜಕೀಯದಿಂದ ಹೊರಗೆ ಬರುತ್ತೇನೆ.

ಡೊನಾಲ್ಡ್: ಅಂದ್ರೆ ರಾಜಕೀಯ ಸ್ವಾರ್ಥಕ್ಕೋಸ್ಕರ ಬರೀ ಸುಳ್ಳು ಆರೋಪಗಳನ್ನೇ ಹೊರಿಸುತ್ತಾರೆ?

ರಮಾನಾಥ್ ರೈ: ಸುಳ್ಳು ಆರೋಪಗಳಷ್ಟೇ. ಅದರಲ್ಲಿ ಯಾವುದೇ ಸತ್ಯಾಂಶವಿಲ್ಲ.

Ramanath Rai_Interview (1)

ಡೊನಾಲ್ಡ್: ಹಾಗಾದ್ರೆ ಚುನಾವಣೆಯಲ್ಲಿ ಕಾಂಗ್ರೆಸ್ ನಿಚ್ಚಳ ಬಹುಮತ ಗಳಿಸುತ್ತದೆ…

ರಮಾನಾಥ್ ರೈ: ಖಂಡಿತ ನಾವು ನಿಚ್ಚಳ ಬಹುಮತ ಗಳಿಸುತ್ತೇವೆ. ಕರ್ನಾಟಕ ಬಹು ಸಂಸ್ಕøತಿಯ ನಾಡು. ಇಲ್ಲಿ ಮತೀಯವಾದಿಗಳಿಗೆ ಹೆಚ್ಚಿನ ಬೆಂಬಲವಿಲ್ಲ. ಮೊದಲು ಬಿಜೆಪಿ ಅಷ್ಟು ಬಲವಾಗಿರಲಿಲ್ಲ. ಒಂದು ಸಂದರ್ಭದಲ್ಲಿ ಜೆಡಿಎಸ್ ನೆರವಿನಿಂದ ಅವರು ಅಧಿಕಾರಕ್ಕೆ ಬಂದ್ರು. ಎಚ್.ಡಿ. ರೇವಣ್ಣ ಒಂದು ಸಲ, ‘ಬಿಜೆಪಿ ಒಂದು ಸತ್ತ ಕುದುರೆಯಂತಿತ್ತು. ಅದಕ್ಕೆ ಜೀವ ಕೊಟ್ಟು ಎಬ್ಬಿಸಿದ್ದೇ ನನ್ನ ತಮ್ಮ ಕುಮಾರಸ್ವಾಮಿ’ ಎಂದಿದ್ದರು. ಜೆಡಿಎಸ್‍ನವರ ಜೊತೆ ಸೇರಿದ್ದರಿಂದ ಬಿಜೆಪಿ ಪ್ರಥಮವಾಗಿ ಅಧಿಕಾರವನ್ನು ಅನುಭವಿಸಿತು. ಈ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲು ಕಾರಣವಾಗಿದ್ದೇ ಜೆಡಿಎಸ್.

ಡೊನಾಲ್ಡ್: ಬಿಜೆಪಿ ಮತ್ತು ಜೆಡಿಎಸ್ ಈ ಸಲವೂ ಮೈತ್ರಿ ಮಾಡುವ ಸಾಧ್ಯತೆ ಇದೆಯಾ?

ರಮಾನಾಥ್ ರೈ: ಯಾರ ಜೊತೆ ಸೇರುವುದಕ್ಕೂ ಜೆಡಿಎಸ್‍ನವರು ಹಿಂಜರಿಯುವುದಿಲ್ಲ. ಅದೊಂದು ಅವಕಾಶವಾದಿ ಪಕ್ಷ

ನಾವು ಕಾಂಗ್ರೆಸ್‍ನವರು ಯಾವುದೇ ಕಾರಣಕ್ಕೂ ಸಂಘ ಪರಿವಾರದ ಜೊತೆ ಹೊಂದಾಣಿಕೆ ಮಾಡುವುದೇ ಇಲ್ಲ. ಸ್ಥಳೀಯವಾಗಿ ಕೂಡ ನಾವು ಬಿಜೆಪಿಯವರ ಜೊತೆ ಯಾವುದೇ ಸಂಬಂಧ ಮಾಡಿಕೊಳ್ಳುವುದಿಲ್ಲ. ವೈಯಕ್ತಿಕವಾಗಿ ಸಹ ನಾನು ಅವರ ಜೊತೆ ಸಂಬಂಧ ಏರ್ಪಡಿಸಿಕೊಳ್ಳುವುದಿಲ್ಲ. ಬಂಗಾರದ ಗಟ್ಟಿ ಕೊಡುತ್ತೇನೆಂದರೂ ಅವರ ಜೊತೆ ಸಂಬಂಧ ಈ ಜೀವಮಾನದಲ್ಲಿ ಸಾಧ್ಯವಿಲ್ಲ.

ಬಿಜೆಪಿ ಎನ್ನುವುದು ಒಂದು ಪಕ್ಷವಲ್ಲ, ಅದೊಂದು ಫ್ಯಾಸಿಸ್ಟ್ ಮನೋಧರ್ಮದ ಒಂದು ವ್ಯವಸ್ಥೆ. ಅವರು ಅಧಿಕಾರಕ್ಕೆ ಬರಲೇಬಾರದು. ಇದು ಬಹು ಸಂಸ್ಕøತಿಯ ದೇಶ. ಇಲ್ಲಿ ಎಲ್ಲಾ ಧರ್ಮಗಳನ್ನೂ ಪ್ರೀತಿಸುವವರು ಅಧಿಕಾರಕ್ಕೆ ಬರಬೇಕು. ಬಹುಸಂಖ್ಯಾತ ಮತೀಯವಾದಿಗಳು ದೇಶಕ್ಕೆ ಅಪಾಯ. ಇದನ್ನೆಲ್ಲಾ ನಾವು ಜನರಿಗೆ ಮನವರಿಕೆ ಮಾಡುತ್ತೇವೆ ಮತ್ತು ಜನರ ವಿಶ್ವಾಸ ಗಳಿಸುತ್ತೇವೆ.

ಸಂದರ್ಶನ: ಡೊನಾಲ್ಡ್ ಪಿರೇರಾ ಬೆಳ್ತಂಗಡಿ
Feedback: info.janavahini@gmail.com

Visit & Like our Page – www.facebook.com/janavahini

Like us on facebook

Leave a Reply

Your email address will not be published. Required fields are marked *

*

code

LATEST NEWS