‘ಒಂದು ಮೊಟ್ಟೆಯ ಕಥೆ’ಯನ್ನು ಎಲ್ಲರೂ ಮೆಚ್ಚುವುದು ಯಾಕೆಂದರೆ, ಇಲ್ಲಿದೆ ನಿಜ ಸಂಗತಿ

Published on: Sunday, July 16th, 2017,7:15 pm

ಆಹಾ, ಎಷ್ಟು ಚಂದವುಂಟು ಮಾರಾಯ್ರೇ ಈ ಸಿನೆಮಾ!

‘ಒಂದು ಮೊಟ್ಟೆಯ ಕಥೆ’ ಚಿತ್ರ ನೋಡಿದ ಪ್ರತಿಯೊಬ್ಬರ ಉದ್ಘಾರ ಇಂಥದೇ. ಅದರಲ್ಲಿ ಆಶ್ಚರ್ಯಪಡುವಂಥದ್ದೂ ಉತ್ಪ್ರೇಕ್ಷೆ ಎನ್ನುವಂಥದ್ದೂ ಏನೂ ಇಲ್ಲ.

ಖಂಡಿತವಾಗಿ ಹೇಳಬಹುದು, ಕನ್ನಡದಲ್ಲಿ ಇತ್ತೀಚಿನ ವರ್ಷಗಳಲ್ಲಿ ಬಂದ ಕ್ರಿಯೇಟಿವ್ ಮತ್ತು ಬ್ಯೂಟಿಫುಲ್ ಚಲನಚಿತ್ರಗಳಲ್ಲಿ ಇದು ಮೊದಲ ಸಾಲಿನಲ್ಲಿ ನಿಲ್ಲುತ್ತದೆ. ಅದರಲ್ಲೂ ಯಾವುದೇ (ಹಳಸಿದ) ಫಾರ್ಮುಲಾ ಇಲ್ಲದೆ, ಅತಿಶಯೋಕ್ತಿ ಇಲ್ಲದೆ ಸರಳ ಸಂಗತಿಯೊಂದನ್ನು ಸುಂದರ ರೀತಿಯಲ್ಲಿ ತೋರಿಸಿರುವುದು ಪ್ರತಿ ಪ್ರೇಕ್ಷಕನ ಹೃದಯಕ್ಕೆ ಪ್ರೀತಿಯ ಪುಳಕದ ಟಚ್ ನೀಡಿದೆ ಈ ಚಿತ್ರ. ಅದಕ್ಕಾಗಿ ಚಿತ್ರ ತಂಡಕ್ಕೆ, ಪ್ರತ್ಯೇಕವಾಗಿ ಚಿತ್ರವನ್ನು ರೂಪಿಸಿದ ನಿರ್ದೇಶಕರಿಗೆ ಹೃತ್ಪೂರ್ವಕ ಅಭಿನಂದನೆಗಳು ಮತ್ತು ಕೃತಜ್ಞತೆಗಳು ಕೂಡಾ.

ಪ್ರೇಕ್ಷಕರೇ ಸಿನಿಮಾವನ್ನು ಗೆಲ್ಲಿಸುತ್ತಾರೆ ಅಥವಾ ಸೋಲಿಸುತ್ತಾರೆ ಎಂಬುವುದು ವಾಸ್ತವ ಸತ್ಯ. ನಿಜ ಹೇಳಬೇಕೆಂದರೆ ಮಂಗಳೂರಿನ ಸಿನಿಮಾ ಮಂದಿರದಲ್ಲಿ ‘ಒಂದು ಮೊಟ್ಟೆಯ ಕಥೆ’ ನೋಡುತ್ತಿರಬೇಕಾದರೆ ಚಿತ್ರದುದ್ದಕ್ಕೂ ನನಗೆ ಬೆಂಗಳೂರೋ ಅಥವಾ ಮೈಸೂರಿನಲ್ಲಿಯೋ ಕುಳಿತ ಅನುಭವ. ದೊಡ್ಡದಾದ ಥಿಯೇಟರ್‍ನಲ್ಲಿ ಕಿಕ್ಕಿರಿದ ಪ್ರೇಕ್ಷಕರು ಮತ್ತು ಆರಂಭದಿಂದ ಕೊನೆಯ ತನಕವೂ ಪ್ರೇಕ್ಷಕರ ಚಪ್ಪಾಳೆ, ನಗು ಮತ್ತು ಸ್ಪಂದನೆ ಮಂಗಳೂರಿನಲ್ಲಿ ನನಗೆ ಈವರೆಗೂ ಕಂಡದ್ದಿಲ್ಲ.

ಇದುವೇ ‘ಒಂದು ಮೊಟ್ಟೆಯ ಕಥೆ’ ಚಿತ್ರದ ಹಕೀಕತ್ತನ್ನು ಸಾರಿ ಹೇಳುತ್ತದೆ.

Ondu Motteya Kathe

ಈ ಚಿತ್ರ ಹಲವು ಸಂಗತಿಗಳನ್ನು ಮತ್ತೆ ದೃಢೀಕರಿಸಿದೆ. ಅದೆಂದರೆ ಪ್ರೇಕ್ಷಕರು ಒಳ್ಳೆಯ ಸಿನೆಮಾವನ್ನು ಬಯಸುತ್ತಾರೆಯೇ ಹೊರತು ಕೇವಲ ಹೀರೋಯಿಸಂ, ರೌಡಿಯಿಸಂಗಳನ್ನಲ್ಲ. ಅದರಲ್ಲೂ ಕೇವಲ ನಾಯಕ ಕೇಂದ್ರಿತ, ಕಥೆ ಚಿತ್ರಕಥೆ ಕೇವಲ ಅದಕ್ಕಾಗಿಯೇ ಹೆಣೆದ ಬೋರಿಂಗ್ ಚಿತ್ರಗಳನ್ನು ಪ್ರೇಕ್ಷಕರು ಗೆಲ್ಲಿಸುವುದಿಲ್ಲ; ಅಂತಹ ಚಿತ್ರಗಳನ್ನು ಗೆಲ್ಲಿಸಲು ಚಿತ್ರ ನಿರ್ಮಾಣಕ್ಕಿಂತಲೂ ಹೆಚ್ಚಿನ ಶ್ರಮ ಪ್ರಚಾರಕ್ಕೆ ಮೀಸಲಿರಿಸಬೇಕಾಗುತ್ತದೆ ಎಂಬುದನ್ನು ನೆನಪಿಸುತ್ತದೆ. ಆದರೆ ಪ್ರಚಾರದ ಭರಾಟೆ ಇಲ್ಲದೆಯೂ ಯಾರು ಒಂದು ಉತ್ತಮ, ಕ್ರಿಯೇಟಿವ್ ಚಿತ್ರವನ್ನು ತೆಗೆಯುತ್ತಾರೆಯೋ ಅವರನ್ನು ಪ್ರೇಕ್ಷಕರು ಖಂಡಿತಾ ಗೆಲ್ಲಿಸುತ್ತಾರೆನ್ನುವುದು ಈ ಚಿತ್ರವನ್ನು ನೋಡಲು ಬರುತ್ತಿರುವ ಪ್ರೇಕ್ಷಕರೇ ಸಾಕ್ಷಿ.

ಬೋಳು ತಲೆಯುಳ್ಳವರನ್ನು ಕಾಡುವ ಸಮಸ್ಯೆ, ರಗಳೆ, ಕಿರಿಕಿರಿಗಳು ಇಂದಿಗೂ ನಿವಾರಣೆಯಾಗಿಲ್ಲ. ಇಂತಹ ಒಂದು ಹಾಸ್ಯ ಪ್ರಧಾನ ಪ್ರಹಸನಕ್ಕೆ ಒಂದೊಳ್ಳೆಯ ಕಲಾತ್ಮಕತೆಯ ಟಚ್, ಸುಂದರ ನಿರೂಪಣೆಯ ಜೊತೆ ಸೂಕ್ತ ಪಾತ್ರಗಳ ರಚನೆ ಮತ್ತು ಇತರೆಲ್ಲಾ ಪೂರಕ ಅಂಶಗಳಲ್ಲಿ ಹೊಸತನ ‘ಒಂದು ಮೊಟ್ಟೆಯ ಕಥೆ’ ಸಿನೆಮಾವನ್ನು ಗೆಲ್ಲಿಸಿದೆ. ಹಾಗನ್ನುವುದಕ್ಕಿಂತಲೂ ಜನರ ಮನಸ್ಸನ್ನು ಗೆಲ್ಲಲು ಚಿತ್ರದ ಈ ಅಂಶಗಳೇ ಕಾರಣ ಎನ್ನಬಹುದು. ಪೂರಕ ಅಂಶಗಳೆಂದರೆ, ಕಥೆ, ಸನ್ನಿವೇಶಗಳು, ಹಾಡು, ಸಂಗೀತ, ಎಡಿಟಿಂಗ್, ತಾಂತ್ರಿಕತೆ ಮುಂತಾದವು.

ಸಾಮಾನ್ಯವಾಗಿ ಒಳ್ಳೆಯ ಕಥೆಯಿದ್ದರೂ ಚಿತ್ರಕಥೆಯ ವೈಫಲ್ಯದಿಂದಾಗಿ ಮತ್ತು ಕ್ಲೈಮ್ಯಾಕ್ಸ್‍ನ ಹಂತದಲ್ಲಿ ಭ್ರಮನಿರಸನವಾಗುವಂಥ ಎಂಡಿಂಗ್‍ನಿಂದಾಗಿ ಚಿತ್ರಗಳು ಫ್ಲಾಪ್ ಆದ ನಿದರ್ಶನಗಳು ತುಂಬಾ ಇವೆ. ಪ್ರಾರಂಭದಲ್ಲಿ ನಿರೀಕ್ಷೆ ಮೂಡಿಸುತ್ತಾ ಕೊನೆಗೆ ಬರುವಾಗ ಭ್ರಮನಿರಸನಗೊಳಿಸುವಂತಹ ಚಿತ್ರಗಳು, ಅದರಲ್ಲಿ ಯಾವ ಹೀರೋ ಹೀರೋಯಿನ್ ಇದ್ದರೂ, ಪ್ರೇಕ್ಷಕರನ್ನು ಸೆಳೆಯುವುದಿಲ್ಲ.

ಆದರೆ ಈ ‘ಮೊಟ್ಟೆ’ಯ ಕಥೆಯಲ್ಲಿ ಯಾರಿಗೂ ಯಾವ ನಿರೀಕ್ಷೆಯೇ ಇಲ್ಲದಿದ್ದುದು ಮೊದಲ ಪ್ಲಸ್ ಪಾಯಿಂಟ್. ನಿರಾಳವಾಗಿ ಆರಂಭವಾಗುವ, ಪ್ರತಿಯೊಬ್ಬರಿಗೂ ಅನುಭವಕ್ಕೆ ಬಂದ ಅಥವಾ ನೋಡಲು ಸಿಗುವ ಪ್ರಸಂಗಗಳಿಂದ, ಅದರಲ್ಲು ನವಿರಾದ, ಸದಭಿರುಚಿಯ ಹಾಸ್ಯ, ವಿಡಂಬನೆಗಳಿಂದ ಚಿತ್ರ ಪ್ರೇಕ್ಷಕರ ಮನ ಗೆಲ್ಲುತ್ತದೆ. ಎಲ್ಲಾ ವಯೋಮಾನದವರೂ ಚಿತ್ರವನ್ನು ಆನಂದಿಸಿದ್ದಾರೆ.

ಪ್ರಸ್ತುತ ಕಾಲದ ದೈನಂದಿನ ಜೀವನದ ವಾಸ್ತವಿಕತೆಗಳು, ಮೊಬೈಲ್, ಫೇಸ್‍ಬುಕ್‍ಗಳ ಮಾಯಾಜಾಲವು ಜೀವನದಲ್ಲಿ ಎಷ್ಟು ಹಾಸುಹೊಕ್ಕಾಗಿದೆ ಎಂಬುದನ್ನು ಸಹಜವಾಗಿ ಬಳಸಿರುವುದರಿಂದ ಚಿತ್ರವು ಪರದೆಯ ಮೇಲೆ ಅಲ್ಲ, ಬದಲಾಗಿ ತಮ್ಮ ಕಣ್ಣ ಮುಂದೆಯೇ ನಡೆದು ಹೋಗುವಂತಹ ನೈಜ ಘಟನೆ ಎಂಬ ಫೀಲಿಂಗ್ ಈ ಚಿತ್ರ ಕೊಡುವುದರಿಂದಾಗಿ ಎಲ್ಲರಿಗೂ, ಅದರಲ್ಲಿಯೂ ಮಕ್ಕಳು ಮತ್ತು ಯುವಜನರಿಗೆ ಚಿತ್ರ ರೀಚ್ ಆಗಿದೆ.

ಮಧುರವೆನಿಸುವಂತಹ ಪಾತ್ರಗಳು, ಸಹಜ, ಸುಂದರವಾದ ಹಾಸ್ಯ, ಮಾತುಕತೆಗಳಲ್ಲಿನ ಸಮಯಪ್ರಜ್ಞೆ ಮತ್ತು ಖುಷಿ ನೀಡುವ ಪ್ರತ್ಯುತ್ತರಗಳು ಪುಳಕ ನೀಡುತ್ತವೆ. ಇದರ ಹಿಂದೆ ಸಾಕಷ್ಟು ಹೋಮ್‍ವರ್ಕ್ ಮಾಡಿದ್ದು ಚಿತ್ರಕ್ಕೆ ಪರ್ಫೆಕ್ಷನ್ ನೀಡಿದೆ. ಇಂತಹ ಕಮಿಟ್‍ಮೆಂಟ್ ಎಷ್ಟು ಜನರಿಗಿದೆ?

Ondu Motteya Kathe_Directorಇದರ ಹಿಂದೆ ಡೆಡಿಕೇಶನ್ ಇದೆ. ಸುಮ್ಮನೆ ಒಂದು ಚಿತ್ರ ಮಾಡೋಣವೆಂಬ ಹಪಾಹಪಿಯಾಗಲೀ, ಉಡಾಫೆ ಮನೋಭಾವವಾಗಲೀ ಚಿತ್ರ ತೆಗೆದವರಿಗೆ ಇರಲಿಲ್ಲವೆನ್ನುವುದು ಚಿತ್ರದ ಪ್ರತಿ ಫ್ರೇಮಿನಲ್ಲಿ ಗೋಚರವಾಗುತ್ತದೆ. ಕಥೆ, ಚಿತ್ರಕಥೆಯಿಂದ ಹಿಡಿದು ಚಿತ್ರದ ಪ್ರತಿ ಹಂತದಲ್ಲಿ ಗಂಭೀರವಾಗಿ, ಪ್ರಾಮಾಣಿಕವಾಗಿ ತೊಡಗಿಸಿಕೊಂಡದ್ದು, ಬದ್ಧತೆಯಿಂದ ದುಡಿದದ್ದು ಚಿತ್ರ ನೋಡಿದ ಎಲ್ಲರಿಗೂ ಅರಿವಾಗುತ್ತದೆ.

ಸಂಭಾಷಣೆ, ಹಾಡುಗಳು, ನಟನೆ, ಸಂಗೀತ, ಎಡಿಟಿಂಗ್, ಗ್ರಾಫಿಕ್ಸ್ ಎಲ್ಲವೂ ಕಲಾತ್ಮಕತೆ ಮತ್ತು ತನ್ಮಯತೆಯಿಂದ ಕೂಡಿವೆ. ಈ ಅರ್ಪಣಾ ಮನೋಭಾವ ಮತ್ತು ವೃತ್ತಿಪರತೆಯ ಜೊತೆ ಪ್ರತಿಭೆ, ಇನ್ನೋವೇಟಿವ್ ಸಂಗತಿಗಳು ಈ ಚಿತ್ರವನ್ನು ಶ್ರೀಮಂತಗೊಳಿಸಿವೆ.

ಡಾ. ರಾಜ್‍ಕುಮಾರ್ ಅವರನ್ನು, ಅವರ ಚಿತ್ರಗಳು ಮತ್ತು ಹಾಡುಗಳನ್ನು ಹಿನ್ನೆಲೆಯಲ್ಲಿ ಬಳಸಿರುವುದು ಚಿತ್ರಕ್ಕೆ ಆಕರ್ಷಣೆ, ಘನತೆ ಒದಗಿಸಿರುವುದರ ಜೊತೆಗೆ ಚಿತ್ರವನ್ನು ಫೀಲ್ ಮಾಡುವುದಕ್ಕೆ ಪರಿಣಾಮಕಾರಿಯಾಗಿ ಸಹಾಯ ಮಾಡಿವೆ. ಬಹುಶಃ ಇಂತಹ ಕ್ರಿಯೇಟಿವಿಟಿ ಇಲ್ಲದಿರುತ್ತಿದ್ದರೆ ಚಿತ್ರವು ಈ ಮಟ್ಟಕ್ಕೆ ಪ್ರೇಕ್ಷಕರನ್ನು ತಲುಪುತ್ತಿರಲಿಲ್ಲ ಎನ್ನಬಹುದು.

ಇದು ಕೇವಲ ಮನರಂಜನೆಯ ಚಿತ್ರವಲ್ಲ. ಭಾಷೆಯ ಪ್ರೇಮ ಮತ್ತು ಮಹತ್ವವನ್ನು ಪರಿಣಾಮಕಾರಿಯಾಗಿ ಬಿಂಬಿಸುವಲ್ಲಿ ಯಶಸ್ವಿಯಾಗಿದೆ. ಕನ್ನಡ ಚಿತ್ರರಂಗವನ್ನು ಜನರೆಡೆಗೆ ಆಕರ್ಷಿಸುವುದಕ್ಕೆ ಇಂತಹ ಚಿತ್ರಗಳು ಹೆಚ್ಚು ಹೆಚ್ಚು ಬರಬೇಕಿವೆ.

ಚಿತ್ರದ ನಿರೂಪಣೆಯು ತೀರಾ ನಿಧಾನವಾಗಿದೆಯೆಂದು ಬಹಳ ಸಲ ಅನಿಸುತ್ತದೆಯಾದರೂ, ಚಿತ್ರದ ಕಥಾವಸ್ತು ಮತ್ತು ಅದನ್ನು ಕಟ್ಟಿ ಕೊಟ್ಟಿರುವ ರೀತಿಗೆ ಅದು ಸೂಕ್ತ, ಅಗತ್ಯವೆಂದು ಮನವರಿಕೆಯಾಗುತ್ತದೆ. ಮುದ ನೀಡುವ ಸಂಗೀತವೂ ಚಿತ್ರದ ಅಂದವನ್ನು ಇಮ್ಮಡಿಗೊಳಿಸಿದೆ.

ತೀರಾ ಅಬ್ಬರದ ಕರ್ಕಶ ಸಂಗೀತ, ಕಿರುಚುವಂತಹ ಡೈಲಾಗ್ ಡೆಲಿವರಿಗಳು, ಅಸಹ್ಯ ಮೂಡಿಸುವ ಹಿಂಸೆ, ಜಿಗುಪ್ಸೆ ತರುವ ಡಬ್ಬಲ್ ಮೀನಿಂಗ್ ಸಂಭಾಷಣೆಗಳು, ಕಳಪೆ ಕಥೆ – ಊಹುಂ ಇವೆಲ್ಲಾ ಯಾವುದೂ ಇಲ್ಲ ಈ ಚಿತ್ರದಲ್ಲಿ. ಅದನ್ನೇ ನೆಚ್ಚಿಕೊಂಡ ಬಿಗ್ ಸ್ಟಾರ್‍ಗಳ ಸಾಲು ಸಾಲು ಚಿತ್ರಗಳು ಯಾಕೆ ನಿರಂತರವಾಗಿ ನೆಲ ಕಚ್ಚಿವೆ ಎಂದು ಅದನ್ನು ತಯಾರಿಸುವವರು ಈಗಲಾದರೂ ಪರಾಮರ್ಶಿಸುವುದೊಳಿತು.

ಮಂಗಳೂರಿನ ಭಾಷೆಯ ಅಂದವನ್ನು ಸಾಬೀತುಪಡಿಸಿದ ಚಿತ್ರ

ಬಹಳ ವರ್ಷಗಳ ಕಾಲ ಕನ್ನಡದ ಚಿತ್ರಗಳಲ್ಲಿ ಮಾತ್ರವಲ್ಲದೆ ಜನಜೀವನದಲ್ಲೂ ಮಂಗಳೂರಿನ ಕನ್ನಡ ಭಾಷೆಯನ್ನು ಹಾಸ್ಯವೆಂದೇ ಪರಿಗಣಿಸಲಾಗುತ್ತಿತ್ತು. ಮೈಸೂರು ಕನ್ನಡವನ್ನು ಪ್ರಧಾನವಾಗಿಟ್ಟುಕೊಂಡೇ ಎಲ್ಲಾ ಚಿತ್ರಗಳು ತಯಾರಾಗುತ್ತಿದ್ದವು. ಉದಾರವಾಗಿ ಎಂಬಂತೆ ಅಪರೂಪಕ್ಕೆ ಕೆಲ ಪಾತ್ರಗಳಿಗೆ ಬೇರೆ ಪ್ರದೇಶಗಳ (ಕೊಡಗು, ಉತ್ತರ ಕರ್ನಾಟಕ ಇತ್ಯಾದಿ) ಕನ್ನಡವನ್ನು ಬಳಸಲಾಗುತ್ತಿತ್ತು. ಆದರೆ ದಕ್ಷಿಣ ಕನ್ನಡ ಮೂಲದವರ ಕನ್ನಡವನ್ನು ಕೇವಲ ಹಾಸ್ಯ ಪಾತ್ರಗಳಿಗೆ ಹಾಸ್ಯಾಸ್ಪದವಾಗಿಯಷ್ಟೇ ಬಳಸಲಾಗುತ್ತಿತ್ತು.

ಇದರ ಪರಿಣಾಮವಾಗಿ ಜನಮಾನಸದಲ್ಲೂ ಮಂಗಳೂರಿನವರು ಮಾತನಾಡುವ ಕನ್ನಡವೆಂದರೆ ತಮಾಷೆಗಷ್ಟೇ ಸೀಮಿತವಾಗಿತ್ತು.

ಈ ತಪ್ಪು ಅಭಿಪ್ರಾಯ, ಕಲ್ಪನೆಯಿಂದ ಕಂಗೆಟ್ಟಿದ್ದ ಮಂಗಳೂರು ಕನ್ನಡಕ್ಕೆ ‘ಒಂದು ಮೊಟ್ಟೆಯ ಕಥೆ’ ಚಿತ್ರ ರಾಜ ಮರ್ಯಾದೆ ತಂದು ಕೊಟ್ಟಿದೆಯೆನ್ನುವುದನ್ನು ಉಲ್ಲೇಖಿಸಲೇಬೇಕು. ‘ಉಳಿದವರು ಕಂಡಂತೆ’ ಸೇರಿದಂತೆ ಈ ಹಿಂದೆ ಕೆಲ ಚಿತ್ರಗಳು ಈ ನಿಟ್ಟಿನಲ್ಲಿ ಸಾಕಷ್ಟು ಕೊಡುಗೆ ನೀಡಿವೆಯಾದರೂ, ‘ಒಂದು ಮೊಟ್ಟೆಯ ಕಥೆ’ ನೂರು ಶೇಕಡ ಮಂಗಳೂರು ಕನ್ನಡವನ್ನೇ ಬಳಸಿ ನಿರ್ಮಿಸಿದ ಚಲನಚಿತ್ರ. ಚಿತ್ರವು ಅತ್ಯಂತ ಉತ್ತಮವಾಗಿರುವುದು ಮಂಗಳೂರಿನ ಕನ್ನಡ ಭಾಷೆಗೂ ಘನತೆ, ಮರ್ಯಾದೆ ತಂದು ಕೊಟ್ಟಿದೆ. ಇದು ಮೆಚ್ಚಬೇಕಾದದ್ದೇ.

ಮತ್ತೊಂದು ಸಾಹಸ, ರಿಸ್ಕ್ ಎನ್ನಲಡ್ಡಿಯಿಲ್ಲ, ಈ ಚಿತ್ರ ತಂಡದ್ದೇನೆಂದರೆ ಸಂಪೂರ್ಣವಾಗಿ ಮಂಗಳೂರನ್ನೇ ಇಡೀ ಚಿತ್ರದುದ್ದಕ್ಕೂ ಬಳಸಲಾಗಿದೆ. ಪಾತ್ರಗಳು, ಸ್ಥಳೀಯ ಎಫ್‍ಎಂನ ರೇಡಿಯೋ, ಲೊಕೇಶನ್‍ಗಳು, ಉಲ್ಲೇಖವಾಗುವ ಧಾರ್ಮಿಕ ಸ್ಥಳಗಳು ಮತ್ತಿತರ ಎಲ್ಲಾ ಸಂಗತಿಗಳು ಮಂಗಳೂರು ಕೇಂದ್ರೀಕೃತವಾಗಿವೆ. ಬೆಂಗಳೂರು ಸೇರಿದಂತೆ ಇತರ ಕಡೆಗಳಲ್ಲಿನ ಪ್ರೇಕ್ಷಕರಿಗೆ ಇದು ಮೆಚ್ಚುಗೆಯಾಗಿದೆ ಎಂಬುದೂ ಖುಷಿಯ ಸಂಗತಿಯೇ.

ಮತ್ತೊಂದು ಗಮನಾರ್ಹ ಸಂಗತಿಯೊಂದಿದೆ. ಅದು ಈ ಚಿತ್ರದಿಂದ ಹೊರಹೊಮ್ಮುವ ಸಕಾರಾತ್ಮಕ ಸಂದೇಶ. ಈ ಸಂದೇಶ ಕೊಡುವ ವಿಚಾರದಲ್ಲಿ ಬಹುತೇಕರಲ್ಲಿ ಒಂದು ತಪ್ಪು ಅಭಿಪ್ರಾಯವಿದೆ – ಏನೆಂದರೆ ಒಂದು ಚಿತ್ರವಾಗಲೀ ಕಥೆ, ಕಾದಂಬರಿ, ನಾಟಕವಿರಲಿ ಅವುಗಳು ಸಂದೇಶ ನೀಡಬೇಕೆಂಬುದದು. ಇದೊಂದು ತಪ್ಪು ಕಲ್ಪನೆ ಎಂಬುದು ಸ್ವತಃ ಓರ್ವ ಕಥೆಗಾರನಾಗಿರುವ ನನ್ನ ಅನಿಸಿಕೆ. ಯಾವ ಕಥೆ, ಕಾದಂಬರಿ, ನಾಟಕ, ಚಲನಚಿತ್ರವು ಉತ್ತಮವಾಗಿರುತ್ತದೋ ಅದು ಅಟೊಮ್ಯಾಟಿಕ್ ಆಗಿ ಹಲವಾರು ಗಮನಾರ್ಹ ಸಂಗತಿಗಳನ್ನು ಸಾದರಪಡಿಸುತ್ತದೆ. ಒಂದೊಳ್ಳೆಯ ಸಕಾರಾತ್ಮಕ, ಆರೋಗ್ಯಕರ ಚಿಂತನೆ, ಸಂದೇಶ ಅಂತಹ ಒಂದು ಔಟ್‍ಕಮ್ ಎನ್ನಬಹುದು.

ಓರ್ವನ ಸಮಸ್ಯೆ, ಚಿಂತೆ, ಕೊರಗು, ಚಿಂತನೆ (ಐಡಿಯಾ) ಅಥವಾ ಕಲ್ಪನೆ ಆತನೊಬ್ಬನದೇ ಆಗಿರಬೇಕೆಂದಿಲ್ಲ. ಅದು ಸಾವಿರಾರು, ಲಕ್ಷಾಂತರ, ಕೋಟ್ಯಂತರ ಜನರದ್ದೂ ಆಗಿರಬಹುದು. ಸೃಜನಶೀಲ ವ್ಯಕ್ತಿ ತನ್ನದೇ ಮಾಧ್ಯಮದ ಮೂಲಕ ಅದನ್ನು ನಿರೂಪಿಸುತ್ತಾನೆ. ಇದೇ ರೀತಿ ರಾಜ್ ಶೆಟ್ಟಿಯವರು ಬೋಳು ತಲೆಯಿರುವವನ ವೇದನೆ, ಸಂಕಷ್ಟ, ಅಪಸವ್ಯಗಳನ್ನೆಲ್ಲಾ ಅದ್ಭುತ ಸೃಜನಾತ್ಮಕತೆಯಿಂದ ‘ಒಂದು ಮೊಟ್ಟೆಯ ಕಥೆ’ಯ ಮೂಲಕ ವೀಕ್ಷಕರಿಗೆ ಉಣಬಡಿಸಿದ್ದಾರೆ. ತನ್ಮೂಲಕ, ಸಹಜವಾಗಿ, ಒಂದೊಳ್ಳೆಯ ಸಂವೇದನಾಶೀಲ ಮತ್ತು ಸಕಾರಾತ್ಮಕ ಸಂದೇಶವನ್ನು ಚಿತ್ರದ ಮೂಲಕ ಹೊರಹೊಮ್ಮಿಸಿದ್ದಾರೆ. ಉತ್ತಮ ಅಡುಗೆಯು (ಆಹಾರ) ತನ್ನ ಪರಿಮಳದ ಮೂಲಕ ಹೊಟ್ಟೆ ಚುರುಗುಡುವಂತೆ (ಪ್ರೇರಣೆ), ತನ್ನ ಸ್ವಾದದಿಂದ ಸಂತೃಪ್ತಿ ಉಂಟು ಮಾಡುವಂತೆ (ಪ್ರಭಾವ), ಉದರ ಸೇರಿ ಉತ್ತಮ ಆರೋಗ್ಯಕ್ಕೆ ಕಾರಣವಾಗುವಂತೆ (ಪರಿಣಾಮ) ಸಹಾಯ ಮಾಡುತ್ತದಲ್ಲಾ, ಇದೂ ಹಾಗೆಯೇ.

ಸೃಜನಶೀಲತೆಗೆ ಇರುವ ಶಕ್ತಿಯೇ ಇದು. ದಟ್ಸ್ ವೆರಿ ಇಂಪಾರ್ಟೆಂಟ್.

ಇಂತಹ ಅತ್ಯುತ್ತಮ, ಸ್ಫೂರ್ತಿಯುತ, ಪ್ರಭಾವಶಾಲಿ ಚಿತ್ರವನ್ನು ಕೊಟ್ಟ ನಿರ್ದೇಶಕ ರಾಜ್ ಬಿ. ಶೆಟ್ಟಿಯವರ ಸಾಹಸ ಮತ್ತು ಪರಿಶ್ರಮ ಶ್ಲಾಘನೀಯ. ಎರಡು ವರ್ಷಗಳಿಗೊಮ್ಮೆಯಾದರೂ ಪರವಾಗಿಲ್ಲ, ಇದೇ ರೀತಿಯ ಕ್ರಿಯೇಟಿವ್ ಚಿತ್ರಗಳನ್ನು ಅವರು ಇನ್ನಷ್ಟು ಮತ್ತಷ್ಟು ತಯಾರಿಸಲಿ ಎಂಬ ಹಾರೈಕೆಯ ಜೊತೆಗೆ, ಯಶಸ್ಸಿನ ಅಮಲು ತಲೆಗೇರದಂತೆ ಎಚ್ಚರಿಕೆಯಿಂದಿರಲಿ ಮತ್ತು ಏಕತಾನತೆಯ ಗುಂಗಿಗೆ ಒಳಗಾಗದೆ ಸದಾ ಹೊಸತನ್ನೇ ನೀಡುವ ಪ್ರಯತ್ನ ರಾಜ್ ಶೆಟ್ಟಿ ಮಾಡಲಿ ಎಂದು ‘ಜನವಾಹಿನಿ’ – www.Janavahini.com ಹಿತವಚನ ನೀಡುತ್ತದೆ.

ಒಂದು ಯಶಸ್ಸನ್ನು ನಿರೀಕ್ಷೆ ಮತ್ತು ಕಂಪ್ಯಾರಿಸನ್‍ಗಳು ಸದಾ ಅನುಸರಿಸುತ್ತಾ ಇರುತ್ತವೆಯೆಂಬುದನ್ನು ಮರೆಯಲಾಗದು. ಬಹಳ ಜನರು ಮೊದಲ ಯಶಸ್ಸಿಗೇ ಕೊಚ್ಚಿ ಹೋದ ನಿದರ್ಶನಗಳಿವೆ. ರಾಜ್ ಶೆಟ್ಟಿ ಸದಾ ಸಕ್ರಿಯರಾಗಿರಲಿ, ಹೊಸತನಕ್ಕೆ ಸದಾ ಹಂಬಲಿಸಲಿ ಎಂಬುದು ಎಲ್ಲರ ಅಪೇಕ್ಷೆ.

‘ಒಂದು ಮೊಟ್ಟೆಯ ಕಥೆ’ ಟೀಮ್‍ನ ಎಲ್ಲರಿಗೂ ಹೃತ್ಪೂರ್ವಕ ಅಭಿನಂದನೆಗಳು.

-ಡೊನಾಲ್ಡ್ ಪಿರೇರಾ ಬೆಳ್ತಂಗಡಿ

Like us @ www.facebook.com/janavahini

Like us on facebook

Leave a Reply

Your email address will not be published. Required fields are marked *

*

code

LATEST NEWS