ಗೌರಿ ಲಂಕೇಶ್ ಹಿಂದೂ ಧರ್ಮವನ್ನು ಬಾಯಿಗೆ ಬಂದಂತೆ ನಿಂದಿಸಿದ್ದು ಸರಿಯೇ?

Published on: Tuesday, June 19th, 2018,11:03 pm

ಲೇಖನ: ಡೊನಾಲ್ಡ್ ಪಿರೇರಾ ಬೆಳ್ತಂಗಡಿ

ಒಂದು ವೇಳೆ ಯಾರಾದರೂ ‘ಕ್ರೈಸ್ತ ಧರ್ಮಕ್ಕೆ ಅಪ್ಪ ಅಮ್ಮ ಇಲ್ಲ’ ಅಥವಾ ‘ಮುಸ್ಲಿಂ ಧರ್ಮಕ್ಕೆ ಅಪ್ಪ ಅಮ್ಮ ಇಲ್ಲ’ ಎಂದು ಸಾರ್ವಜನಿಕ ಹೇಳಿಕೆ ನೀಡಿದ್ದಿದ್ದರೆ ಪರಿಸ್ತಿತಿ ಹೇಗಿರುತ್ತಿತ್ತು? ಅದರಲ್ಲೂ ‘ಯಾರಾದರೂ’ ಎನ್ನುವುದು ಬಿಜೆಪಿಯ ನಾಯಕರೋ ಅಥವಾ ಹಿಂದೂ ಸಂಘಟನೆಯ ಮುಖಂಡರೋ ಆಗಿದ್ದಿದ್ದರೆ? ಪ್ರತಿಕ್ರಿಯೆ ಹೇಗಿರುತ್ತಿತ್ತು?

ಒಮ್ಮೆ ಕಲ್ಪಿಸಿಕೊಳ್ಳಿ. ಭಾರತ ಬಿಡಿ ಇಡೀ ಪ್ರಪಂಚದಲ್ಲಿಯೇ ಅಲ್ಲೋಲ ಕಲ್ಲೋಲವಾಗಿರುತ್ತಿತ್ತು. ಮಾಧ್ಯಮಗಳಲ್ಲಿ ಭಯಂಕರ ರಣರಂಗ ಏರ್ಪಟ್ಟಂತೆ ಬಿಂಬಿಸಲಾಗುತ್ತಿತ್ತು. ಅದರಲ್ಲೂ ಭಾರತದಲ್ಲಂತೂ ಕೇಳುವುದೇ ಬೇಡ. ಎಷ್ಟು ಗಲಾಟೆಯಾಗಿರುತ್ತಿತ್ತು ಮತ್ತು ಎಷ್ಟು ದಿನ ಪ್ರತಿಭಟನೆಯ ರಂಪಾಟ ನಡೆದಿರುತ್ತಿತ್ತೋ ಊಹಿಸಲಸಾಧ್ಯ.

Gauri Lankesh_2

ಹೇಳಿ ಕೇಳಿ ಇಂತಹ ಹೇಳಿಕೆ ಅಲ್ಪಸಂಖ್ಯಾತರ ಧರ್ಮದ ವಿರುದ್ಧವಾಗಿರುವುದು, ಪ್ರಮುಖವಾಗಿ ಇಂತಹ ಸಂದರ್ಭಗಳನ್ನು ಕಿಂಚಿತ್ತೂ ವಿಳಂಬಿಸದೆ ಬಳಸುವ ಎಡಪಕ್ಷೀಯರು, ಬುದ್ಧಿಜೀವಿಗಳು ಮುಂತಾದವರು ಹೇಗೆ ವರ್ತಿಸುತ್ತಿದ್ದರು, ಪ್ರತಿಕ್ರಿಯಿಸುತ್ತಿದ್ದರೆನ್ನುವುದನ್ನು ಬಿಡಿಸಿ ಹೇಳಬೇಕೇ?

ಈಗಿರುವ ಮತ್ತು ಇಲ್ಲದಿರುವ ಹಲವರ ಜೊತೆ ಸ್ವತಃ ಗೌರಿ ಲಂಕೇಶ್ ಇದ್ದಿದ್ದರೆ ಇಂತಹ ಸಂದರ್ಭದಲ್ಲಿ ಅವರೆಲ್ಲರ ಧೋರಣೆ, ಹೇಳಿಕೆ, ನೀತಿ, ನಡವಳಿಕೆ ಹೇಗಿರುತ್ತಿತ್ತು? ಕಲ್ಪನಾತೀತವೇನಲ್ಲವಲ್ಲ?!

ಪತ್ರಕರ್ತೆ, ಹೋರಾಟಗಾರ್ತಿ ಗೌರಿ ಲಂಕೇಶ್ ಅವರನ್ನು ಹತ್ಯೆಗೈದ ಆರೋಪಿಗಳಲ್ಲಿ ಬಹಳಷ್ಟು ಜನ ಪೊಲೀಸರಿಂದ ಬಂಧನಕ್ಕೊಳಪಟ್ಟಿದ್ದಾರೆ. ತನಿಖೆ ಬಹಳ ತೀವ್ರವಾಗಿ ಸಾಗಿದೆ, ಸಾಗುತ್ತಿದೆ. ಗೌರಿಯನ್ನು ಕೈಯಾರೆ ಗುಂಡಿಟ್ಟು ಕೊಂದವನೇ ಸಿಕ್ಕಿ ಬಿದ್ದಿದ್ದಾನೆ. ಗೌರಿ ಹತ್ಯೆಯಿಂದ ಇಲ್ಲಿಯ ತನಕ ಈ ನಿಟ್ಟಿನಲ್ಲಿ ಸಾಕಷ್ಟು ಬೆಳವಣಿಗೆಗಳು, ಆರೋಪ ಪ್ರತ್ಯಾರೋಪ, ರಾಜಕೀಯ ನಡೆದಿದೆ. ಏನೇ ನಡೆದರೂ ಸತ್ತು ಹೋದ ಗೌರಿ ಲಂಕೇಶ್ ಮರಳಿ ಬರುವುದಿಲ್ಲ. ಆಕೆಯ ಹತ್ಯೆ ನಿಜಕ್ಕೂ ಖಂಡನೀಯ, ಕ್ರೂರ ಮತ್ತು ಅನಗತ್ಯವಾದದ್ದು.

ನಿಜ ಹೇಳುವುದಾದರೆ ನಾನು ಗೌರಿ ಲಂಕೇಶ್ ಅವರ ಅಭಿಮಾನಿಯಾಗಿರಲಿಲ್ಲ. ಹಾಗಂತ ವಿರೋಧಿಯೇನೂ ಅಲ್ಲ. ಪಿ. ಲಂಕೇಶ್ ಅವರ ‘ಲಂಕೇಶ್ ಪತ್ರಿಕೆ’ಯನ್ನು ವಿದ್ಯಾರ್ಥಿಯಾಗಿದ್ದಾಗಲೇ ಓದುತ್ತಾ ಬೆಳೆದವನು ನಾನು. ಅವರೊಬ್ಬ ಅದ್ಭುತ ಪತ್ರಕರ್ತ, ಚಿಂತಕ ಮತ್ತು ಬರಹಗಾರ. ಲಂಕೇಶ್ ತರುವಾಯ ಅವರ ಮಗಳು ಗೌರಿ ಲಂಕೇಶ್ ಪತ್ರಿಕೆಯ ಸಂಪಾದಕರಾಗಿದ್ದು, ತದ ನಂತರ ಆಕೆ ತನ್ನದೇ ‘ಗೌರಿ ಲಂಕೇಶ್’ ಪತ್ರಿಕೆ ಪ್ರಾರಂಭಿಸಿದ್ದನ್ನು ಗಮನಿಸಿದ್ದೇನೆ. ಆದರೆ ಹೇಳಿಕೊಳ್ಳುವಂತಹ ವ್ಯಕ್ತಿತ್ವವನ್ನು ಗೌರಿ ತೋರ್ಪಡಿಸಿದ್ದು ನನಗೆ ಕಂಡಿರಲಿಲ್ಲ. ತೋರ್ಪಡಿಸಿಕೊಂಡಷ್ಟು ದೊಡ್ಡ ವ್ಯಕ್ತಿ ಆಕೆ ಆಗಿರಲಿಲ್ಲ. ತಂದೆಯ ನೆರಳು ಬಿಟ್ಟರೆ ಸ್ವಂತ ಸಾಧನೆ ಅಷ್ಟಕ್ಕಷ್ಟೆ.

Gauri Lankesh_1

ವೈಯಕ್ತಿಕ ಜೀವನದಲ್ಲಿ ಸಾಕಷ್ಟು ನಿರಾಶೆ ಕಂಡಿದ್ದ ಆಕೆ, ಕ್ರಮೇಣ ಹೋರಾಟಗಾರ್ತಿಯಾಗಿ, ಪ್ರಮುಖವಾಗಿ ಎಡಪಂಥೀಯ ಧೋರಣೆಯನ್ನಪ್ಪಿಕೊಂಡ ಮೇಲೆ ಪ್ರವರ್ಧಮಾನಕ್ಕೆ ಬಂದರು. ಅದರಲ್ಲೂ ಆಕೆ ಸಂಘ ಪರಿವಾರ ಸಹಿತ ಬಿಜೆಪಿಯ ಕಟು ವಿರೋಧಿಯಾಗಿದ್ದು, ಹಿಂದೂ ಸಂಘಟನೆಗಳನ್ನು ಉಗ್ರವಾಗಿ ಠೀಕಿಸಿದ್ದು, ಹೋದಲ್ಲಿ ಬಂದಲ್ಲಿ, ಸಮಯ ಸಂದರ್ಭ ಸಿಕ್ಕಿದಾಗಲೆಲ್ಲಾ ತನ್ನ ಸಂಪಾದಕೀಯ ಬರಹಗಳಲ್ಲಿ ಮತ್ತು ಸಾರ್ವಜನಿಕ ಪ್ರತಿಭಟನೆ, ಸಮಾವೇಶಗಳಲ್ಲಿ ಬೆಂಕಿಯುಗುಳಿದ್ದನ್ನೆಲ್ಲಾ ಜನರು ಗಮನಿಸಿದ್ದಾರೆ.

ಗೌರಿ ಲಂಕೇಶ್ ಮತ್ತು ಗೆಳೆಯರ ಬಳಗ, ಸಂಘ ಪರಿವಾರ ಮತ್ತದರ ಸಹ ಸಂಸ್ಥೆಗಳನ್ನು ಹಿಂದೂ ಮೂಲಭೂತವಾದಿ ಸಂಘಟನೆಗಳೆಂದು ಜರೆದು, ಅವರನ್ನು ವಿರೋಧಿಸುವುದನ್ನು ಏಕೈಕ ಧ್ಯೇಯವಾಗಿ ನಡೆದುಕೊಂಡಿದ್ದು ಎಲ್ಲರಿಗೂ ಗೊತ್ತೇ ಇದೆ. ಆದರೆ ಭಾರತದಲ್ಲಿ ರಾಜಕೀಯಕ್ಕೆ ಹೋಗದ ಯಾವುದೇ ವಿಷಯವಿಲ್ಲ. ಇಲ್ಲೂ ಕೂಡ ನೇರ ರಾಜಕೀಯವೇ ನಡೆಯಿತು. ಬಿಜೆಪಿಯ ಪ್ರವರ್ತಕನಾಗಿರುವ ಸಂಘ ಪರಿವಾರವನ್ನು ವಿರೋಧಿಸುವ ಧೋರಣೆ ಬಿಜೆಪಿಯ ವಿರುದ್ಧವಾಗಿ ಮಾರ್ಪಟ್ಟಿತು. ಎದುರಾಳಿಯಾಗಿದ್ದು ಒಂದೋ ಎಡಪಕ್ಷಗಳು ಅಥವಾ ಜಾತ್ಯತೀತ ಪಕ್ಷಗಳು.

ಆದರೆ, ಈ ಪ್ರಕ್ರಿಯೆಯಲ್ಲಿ, ಈ ಎಡಪಂಥೀಯ ಧೋರಣೆಯ ಚಿಂತಕರು ಮತ್ತು ಬುದ್ಧಿಜೀವಿಗಳು ನೇರವಾಗಿ ಹಿಂದೂ ಧರ್ಮವನ್ನೇ ಅಥವಾ ಹಿಂದೂ ಧರ್ಮೀಯರನ್ನು ಶತ್ರುಗಳಾಗಿಸಿಕೊಂಡರು. ಕೆಲವೇ ಜನರ ಅಥವಾ ಸಂಘಟನೆಗಳ ಬಗೆಗಿನ ವಿರೋಧವನ್ನು ಸಮಸ್ತ ಹಿಂದೂ ಸಮುದಾಯದ ವಿರುದ್ಧ ವಿಸ್ತರಿಸಿದ್ದು ನಿಜಕ್ಕೂ ಮೂರ್ಖತನ ಮತ್ತು ಅಕ್ಷಮ್ಯ.

ಇದರ ಪರಿಣಾಮ ಅಥವಾ ಸಾಕ್ಷ್ಯ ಸಾಬೀತಾಗುವುದು, ಗೌರಿ ಲಂಕೇಶ್ ನೀಡಿದ ಹೇಳಿಕೆಯಿಂದ – “ಹಿಂದೂ ಧರ್ಮಕ್ಕೆ ಅಪ್ಪ ಅಮ್ಮ ಇಲ್ಲ!” – ಎಂಬ ಮಾತುಗಳಿಂದ. ಮಂಗಳೂರಿನಲ್ಲಿ, ಕೆಲ ಸಂಘಟನೆಗಳು ಜಿಲ್ಲಾಧಿಕಾರಿ ಕಚೇರಿ ಎದುರುಗಡೆ ಏರ್ಪಡಿಸಿದ್ದ ಪ್ರತಿಭಟನಾ ಸಭೆಯೊಂದರಲ್ಲಿ ಈ ನುಡಿಮುತ್ತುಗಳನ್ನು ಗೌರಿ ಉದುರಿಸಿದ್ದರು!

ಅದಕ್ಕೇ ನಾನು ಹೇಳಿದ್ದು, ಬೇರೆ ಧರ್ಮಗಳಿಗೆ, ಅದರಲ್ಲೂ ಅಲ್ಪಸಂಖ್ಯಾತ ಧರ್ಮಗಳ ಬಗ್ಗೆ ಇದೇ ರೀತಿಯ ಹೇಳಿಕೆ ‘ಯಾರಾದರೂ’ ಕೊಟ್ಟಿರುತ್ತಿದ್ದರೆ?

ಬೇರೆಯವರು ಬಿಡಿ, ಸ್ವತಃ ಗೌರಿ ಲಂಕೇಶ್ ಅವರ ಪ್ರತಿಕ್ರಿಯೆ ಹೇಗಿರುತ್ತಿತ್ತು? ಇನ್ನುಳಿದ ಎಡಚರ, ಬುದ್ಧಿಜೀವಿ, ಚಿಂತಕ, ಸಾಹಿತಿಗಳು ಹೇಗೆ ಪ್ರತಿಕ್ರಿಯಿಸುತ್ತಿದ್ದರು?

ಇಲ್ಲಿ ನಾನು ಹೇಳ ಹೊರಟಿರುವುದು ಗೌರಿಯ ಹೇಳಿಕೆಯನ್ನು ಬಳಸಿಕೊಂಡು ಆಕೆಯನ್ನು ಖಂಡಿಸುವುದಲ್ಲ. ಬದಲಾಗಿ ಯಾರದೇ ನಂಬಿಕೆ, ಚಿಂತನೆ, ಧರ್ಮಗಳನ್ನು ವಿನಾಕಾರಣ, ಅದೂ ಸಾರ್ವಜನಿಕವಾಗಿ, ಟೀಕಿಸುವುದು ಸರಿಯೇ ಎಂಬುದನ್ನು. ಮನುಷ್ಯ ಸಂಕುಲವೇ ಹಾಗೆ, ಪ್ರತಿಯೊಬ್ಬರಿಗೆ ದೇವರು, ದೇವತೆ, ಧರ್ಮ ಮುಂತಾದ ಆಶ್ರಯ ಬೇಕು. ಹಾಗೆ ಬೇಡುವುದು ಮನುಷ್ಯರೇ ಹೊರತು ಪ್ರಾಣಿ ಪಕ್ಷಿಗಳಲ್ಲವಲ್ಲ! ಎಲ್ಲಾ ಧರ್ಮಗಳನ್ನು ಸ್ಥಾಪಿಸಿದ್ದು ಮನುಷ್ಯನೇ ಎಂಬುದು ನಿಜ. ಆದರೆ ತಮಗೆ ಧರ್ಮ-ದೇವರುಗಳ ಬಗ್ಗೆ ನಂಬಿಕೆ, ಭಕ್ತಿಯಿಲ್ಲವೆಂಬ ಕಾರಣಕ್ಕೆ ಅನ್ಯರ ನಂಬಿಕೆ, ಭಕ್ತಿಯನ್ನು ಘಾಸಿಗೊಳಿಸುವುದು, ನಿಂದಿಸುವುದು ಸರಿಯಲ್ಲ.

Karl Marx

ಅಷ್ಟಕ್ಕೂ ಹೀಗೆ ಹೇಳಿಕೆ ಕೊಡುವುದರಿಂದ ಆಗುವ ಪ್ರಯೋಜನವೇನು? ಉಂಟಾಗುವ ಪರಿಣಾಮವೇನು? ಸಕಾರಾತ್ಮಕವಾದದ್ದೇನೂ ಆಗುವುದಿಲ್ಲ. ಹೀಗೆ ಮಾತನಾಡಿ ತಮ್ಮೊಳಗಿನ ಅಸಮಾಧಾನ, ವೈಷಮ್ಯವನ್ನು ಹೊರ ಹಾಕಿದ ತೃಪ್ತಿ ಬಿಟ್ಟರೆ (ತೀಟೆ ತೀರಿಸಿಕೊಳ್ಳುವಿಕೆ) ಬೇರೇನೂ ಸಾಧನೆಯಾಗುವುದಿಲ್ಲ. ಅಲ್ಲದೆ ಹೀಗೆ ಸಾರ್ವಜನಿಕರ ಚಿಂತನೆ, ನಂಬಿಕೆಗಳನ್ನು ನಿಂದಿಸುವುದರಿಂದ ಜನರ ವಿರೋಧ ಮತ್ತಷ್ಟು ಹೆಚ್ಚಿಸಿಕೊಂಡಂತಾಗುತ್ತದೆ. ಧೈರ್ಯವಿದೆಯೆಂದು ಹುತ್ತದ ಬಾಯಿಗೆ ಕೈ ಹಾಕುವ ಅಥವಾ ಜೇನು ಗೂಡಿಗೆ ಕಲ್ಲು ಎಸೆಯುವ ಭಂಡತನದಷ್ಟೇ ಇದೂ ಅಪಾಯಕಾರಿ.

ಗೌರಿ ಲಂಕೇಶ್ ವಿಚಾರದಲ್ಲಿ ನಡೆದಿರುವುದು ಇದೇ ಅಲ್ಲವೇ? ಲಕ್ಷಾಂತರ, ಕೋಟ್ಯಾಂತರ ಜನರಿರುವ ನಮ್ಮ ರಾಜ್ಯ, ದೇಶದಲ್ಲಿ ಯಾರೋ ಒಬ್ಬಿಬ್ಬ ಕ್ರಿಮಿನಲ್ ಮನಸ್ಸಿನವರಿಗೆ ಇಂತಹ ವಿಚಾರಗಳು ಅಪರಾಧ ನಡೆಸಲು ಪ್ರೇರಣೆಯನ್ನಂತೂ ಖಂಡಿತಾ ನೀಡುತ್ತವೆ (ಹಾಗೇ ಆಯಿತು). ಗೌರಿಯವರು ನಿರಂತರವಾಗಿ, ಕೆಲ ಸಂಘಟನೆಗಳನ್ನು ವಿರೋಧಿಸುವುದರ ಭರದಲ್ಲಿ ವಿಶಾಲವಾದ, ಕೋಟಿ ಕೋಟಿ ಜನರು ಜೀವಿಸುವ, ಆರಾಧಿಸುವ ಒಂದು ಧರ್ಮವನ್ನು ಹೀಗೆ ಸಾರ್ವಜನಿಕವಾಗಿ ಹೀಯಾಳಿಸುತ್ತಾ, ನಿಂದಿಸುತ್ತಾ ಮಾತನಾಡಿದರೆ ಅದರಿಂದ ಉಂಟಾಗುವ ಒಳಿತೇನು?

ಬಂಧಿತರಾಗಿರುವವರ ಹೇಳಿಕೆಗಳನ್ನು ಗಮನಿಸಿದಾಗ ಗೌರಿ ಹಂತಕರು ಆಕೆಯ ಹಿಂದೂ ವಿರೋಧಿ ಹೇಳಿಕೆಗಳಿಂದಾಗಿಯೇ ಆಕೆಯನ್ನು ಮುಗಿಸುವ ಗುರಿ ಹೊಂದಿದ್ದರು ಎಂದು ತಿಳಿದು ಬಂದಿದೆ. ನಿಜಕ್ಕೂ, ಅದೂ ಓರ್ವ ಚಿಂತಕಿ, ಪತ್ರಕರ್ತೆ (ಸಂಪಾದಕಿ) ಮತ್ತು ಗಣ್ಯ ವ್ಯಕ್ತಿಯಾಗಿದ್ದ ಗೌರಿ ಲಂಕೇಶ್ ಅವರು ಇಂತಹ ಕ್ಷುಲ್ಲಕ ಮಾರ್ಗ, ನಿಂದನಾತ್ಮಕ ಮಾತುಗಳನ್ನು ಬಳಸಿಕೊಳ್ಳುವ ಬದಲು ತಮ್ಮ ಪತ್ರಿಕೆಯ ಅಥವಾ ಭಾಷಣಗಳ ಮೂಲಕ ಸಾತ್ವಿಕವಾಗಿ ತಮ್ಮ ಚಿಂತನೆಗಳನ್ನು, ವಿಚಾರಗಳನ್ನು ಪ್ರಚುರಪಡಿಸಬಹುದಿತ್ತು.

ಯೂಟ್ಯೂಬ್‍ನಲ್ಲಿ ಸಿಗುವ ಗೌರಿಯ ಈ ಭಾಷಣದ ತುಣುಕಿನಲ್ಲಿ, ಆಕೆ ಸಂಘ ಪರಿವಾರದ ನಿವೃತ್ತ ಸರಸಂಘ ಚಾಲಕರನ್ನು ಅಣಕಿಸುತ್ತಾ ತೀವ್ರವಾಗಿ ವಾಗ್ದಾಳಿ ನಡೆಸಿದ್ದರು. ವಯಸ್ಸಿಗೆ ಮರ್ಯಾದೆ ಕೊಡಬೇಕಾಗಿಲ್ಲ, ಚಿಂತನೆಗೆ ಮರ್ಯಾದೆ ಕೊಟ್ಟರೆ ಸಾಕು ಎಂದು ಅಸಡ್ಡೆ ಮತ್ತು ಬೇಜವಾಬ್ದಾರಿಯ ಮಾತನಾಡಿದ್ದರು. ಇದೂ ಅನಗತ್ಯವಾಗಿತ್ತು. (ಮಕ್ಕಳೆಲ್ಲಾ ಇದನ್ನೇ ಅನುಸರಿಸಿದರೆ ಕಡಿಮೆ ಓದಿದ ಹೆತ್ತವರನ್ನು ಉನ್ನತ ಶಿಕ್ಷಣ ಪಡೆದ ಮಕ್ಕಳು ಹೇಗೆ ನಡೆಸಿಕೊಂಡಾರು?)

ಅಂತಹ ಮಹಾನ್ ಚೇತನವಾಗಿದ್ದ ಪಿ. ಲಂಕೇಶರ ಮಗಳಾಗಿರುವ ಗೌರಿ ಇಂತಹ ಕೀಳು ಅಭಿರುಚಿಯ ಮಾತುಗಳನ್ನು ಸಾರ್ವಜನಿಕವಾಗಿ ಹೇಳಿ ತಮ್ಮ ಗೌರವ, ಬೆಲೆಯನ್ನು ತಾವೇ ನಿಕೃಷ್ಟಗೊಳಿಸಿದ್ದರು. ಇಂತಹ ಹಲವಾರು ಭಾಷಣಗಳಿಂದ ಆಕೆ ಕೇವಲ ಹಿಂದೂ ಸಂಘಟನೆಗಳ ವಿರೋಧ ಕಟ್ಟಿಕೊಂಡದ್ದಷ್ಟೇ ಅಲ್ಲ, ಸಾರ್ವಜನಿಕರ ಮತ್ತು ಹಿಂದೂಯೇತರ ಜನರ ಮನಸ್ಸಿನಲ್ಲೂ ಆಕ್ರೋಷವನ್ನುಂಟು ಮಾಡುವಲ್ಲಿ ಸಫಲರಾಗಿದ್ದರು.

ಈ ಧರ್ಮ ವಿರೋಧಿ, ವ್ಯಕ್ತಿ ವಿರೋಧಿ ವಿಚಾರಗಳು ನಿರ್ದಿಷ್ಟ ಜನರ ಸಮ್ಮುಖದಲ್ಲಿ ಅಥವಾ ಹೆಚ್ಚೆಂದರೆ ಬರಹಗಳಲ್ಲಿ ಮಂಡಿಸಿದಲ್ಲಿ ಅಷ್ಟೇನೂ ಅವಾಂತರಗಳುಂಟಾಗುವುದಿಲ್ಲ. ಅದು ಬಿಟ್ಟು ಸಾರ್ವಜನಿಕವಾಗಿ, ಅದೂ ನಿರಂತರವಾಗಿ, ಮನ ಬಂದಂತೆ ಮಾತನಾಡಿ ಬಾಯಿ ಚಪಲ ತೀರಿಸಿಕೊಂಡರೆ ಏನು ಪ್ರಯೋಜನ? ಹೋರಾಟವೆನ್ನುವುದು ಸರಿಯಾದ ದಿಕ್ಕಿನಲ್ಲಿ, ಮಾರ್ಗದಲ್ಲಿ, ರೀತಿಯಲ್ಲಿದ್ದರಷ್ಟೇ ಏನಾದರೂ ಪ್ರಯೋಜನವಾಗುತ್ತದೆ.

ಒಂದು ಸಾರ್ವಕಾಲಿಕ ಸತ್ಯವೇನೆಂದರೆ ಯಾರು, ಎಂತಹ ವಿಚಾರವಾದಿ, ವಿಜ್ಞಾನಿ ಅಥವಾ ಪ್ರಮುಖ ವ್ಯಕ್ತಿಯೇ ಬಂದು ಜನರನ್ನು ಧರ್ಮ, ಭಕ್ತಿ, ನಂಬಿಕೆ, ಆಚರಣೆಗಳಿಂದ ಹೊರ ತರಲು ಎಷ್ಟೇ ಶ್ರಮಿಸಿದರೂ, ಕೆಲವರು ಅದನ್ನು ಒಪ್ಪಿಕೊಂಡರೂ, ಜನರು ಧರ್ಮ ಮತ್ತು ತಮ್ಮೆಲ್ಲಾ ನಂಬಿಕೆ, ಆಚರಣೆಗಳಿಗೆ ತಿಲಾಂಜಲಿ ಇಡುವುದಿಲ್ಲ. ಭಯ, ಅನಿಶ್ಚಿತತೆಯಲ್ಲಿಯೇ ಬದುಕುವ ಮನುಷ್ಯನಿಗೆ ಒಂದು ಆಸರೆ, ಸಂತೃಪ್ತಿ, ಭರವಸೆ, ನಿಶ್ಚಿಂತೆ ಬೇಕಾಗುತ್ತದೆ. ಅದನ್ನು ಕೊಡಲು ಮನುಷ್ಯನಿಂದ ಎಷ್ಟರ ಮಟ್ಟಿಗೆ ಸಾಧ್ಯವಿದೆ? ಅದಕ್ಕಾಗಿ ಬಹುತೇಕ ಜನರು ದೇವರು ಎಂಬ ಶಕ್ತಿಯ ಮೊರೆ ಹೋಗುತ್ತಾರೆ. ಆ ನಿಟ್ಟಿನಲ್ಲಿ ದಾರಿಗಳು, ಮಾಧ್ಯಮಗಳು ಮತ್ತು ರೀತಿಗಳು ನೂರಾರು, ಸಾವಿರಾರು ಇವೆ.

ಇದು ಭಾರತದಲ್ಲಿಯಷ್ಟೇ ಅಲ್ಲ, ಅತ್ಯಾಧುನಿಕ ತಾಂತ್ರಿಕ ಪ್ರಗತಿಯಿಂದ ಬದುಕನ್ನೇ ಯಾಂತ್ರಿಕವಾಗಿಸಿಕೊಂಡಿರುವ ಮುಂದುವರಿದ ಪಾಶ್ಚಾತ್ಯ ದೇಶಗಳಲ್ಲೂ ಸಹ ಜೀವನದ ಒಂದಲ್ಲಾ ಒಂದು ಸಂದರ್ಭ, ಅದರಲ್ಲೂ ವಯಸ್ಸಾದ ನಂತರ, ಜನರು ಮೊರೆ ಹೋಗುವುದು ದೈವೀ ಶಕ್ತಿಯನ್ನೇ. ಭಯವೆನ್ನುವುದು ಪ್ರತಿಯೊಬ್ಬರನ್ನೂ ಕಾಡುತ್ತದೆ. ಅದು ನೈಸರ್ಗಿಕವಾಗಿ ಬಂದ ಬಳುವಳಿಯೂ ಹೌದು. ಹಾಗಾಗಿ ವಿಜ್ಞಾನ, ತಾಂತ್ರಿಕತೆ ಎಷ್ಟೇ ಮುಂದುವರಿದರೂ ಮನುಷ್ಯನ ಅಸ್ತಿತ್ವ ಈ ಭೂಮಿಯಲ್ಲಿರುವ ತನಕ ದೇವರೋ ಇನ್ನೊಂದೋ ಆತನಿಗೆ ಬೇಕೇ ಬೇಕು. ಅದನ್ನು ಅವರಿಂದ ಅಂತಹದನ್ನು ನಂಬದ ಜನರು ಕಿತ್ತುಕೊಳ್ಳುವುದು ಸಾಧುವೂ ಅಲ್ಲ, ಸಾಧ್ಯವೂ ಅಲ್ಲ. ಅವರವರ ನಂಬಿಕೆ ಅವರವರಿಗೆ.

ಇಷ್ಟಕ್ಕೂ ನನಗೆ ನನ್ನ ಧರ್ಮ, ನಂಬಿಕೆ, ಸಿದ್ಧಾಂತದಲ್ಲಿ ಶ್ರದ್ಧೆಯಿದೆ ಎಂದಾದರೆ ಅದು ನನ್ನ ಹಕ್ಕು. ಅದೇ ರೀತಿ ಅವೆಲ್ಲವನ್ನೂ ನಂಬದೇ ಇರುವ ಹಕ್ಕೂ ಸಹ ನನಗಿದೆ. ಅಷ್ಟೇ. ಅಲ್ಲಿಗೆ ಮುಗಿಯಿತು. ಅದು ಬಿಟ್ಟು ನನ್ನ ನಂಬಿಕೆ, ಚಿಂತನೆಗಳನ್ನು ಇತರರ ಮೇಲೆ ಹೇರಲು ನನಗೆ ಖಂಡಿತಾ ಹಕ್ಕಿಲ್ಲ. ಅದು ಅಕ್ಷಮ್ಯವೂ ಕೂಡ.

ಈ ತತ್ವ ಎಲ್ಲರಿಗೂ ಅನ್ವಯಿಸುತ್ತದೆ. ಗೌರಿ ಲಂಕೇಶ್ ಇರಲಿ ಬೇರಿನ್ಯಾರೇ ಇರಲಿ. ತಮಗೆ ನಿರ್ದಿಷ್ಟ ಧರ್ಮ ಅಥವಾ ಯಾವುದೇ ವಿಚಾರದ ಮೇಲೆ ನಂಬಿಕೆಯಿಲ್ಲವೆಂದಾದರೆ ಹಾಗಂದುಕೊಳ್ಳಲಿ. ಆದರೆ ತಾನು ಒಂದು ವಿಚಾರವನ್ನು ತನ್ನದೇ ಕಾರಣಗಳಿಗಾಗಿ ನಂಬುವುದಿಲ್ಲ, ವಿರೋಧಿಸುತ್ತೇನೆ ಎಂದುಕೊಂಡು ಸಾರ್ವಜನಿಕರ ನಂಬಿಕೆ, ವಿಚಾರಗಳನ್ನು ಹೀಯಾಳಿಸುತ್ತಾ, ನಿಂದಿಸುತ್ತಾ ನಿರಂತರವಾಗಿ ಆಕ್ರಮಣಕಾರಿ ಧೋರಣೆಯಿಂದ ಅವಾಚ್ಯವಾಗಿ, ಹೀನವಾಗಿ ಹೇಳಿಕೆ ನೀಡುತ್ತಾ ಹೋಗುವುದು ಸರಿಯೇ?

ಪ್ರಪಂಚದಲ್ಲಿರುವ ಎಲ್ಲಾ ಧರ್ಮಗಳಲ್ಲಿ ಹುಳುಕಿರುವುದು ಬೆಳಕಿನಷ್ಟೇ ಸ್ಪಷ್ಟ. ಯಾಕೆಂದರೆ ಅವೆಲ್ಲಾ ಮಾನವ ನಿರ್ಮಿತವಾದವುಗಳೇ. ಪ್ರಕೃತಿಯೊಂದೇ ಪರಿಪೂರ್ಣ. ಮಾನವನು ಪ್ರಕೃತಿಯ ಭಾಗವೇ ಆದರೂ ಮಾನವ ನಿರ್ಮಿತವಾದ ಯಾವೊಂದೂ ವಸ್ತು, ವಿಚಾರ, ಸಂಗತಿಯೂ ಸಂಪೂರ್ಣವಾಗಿ ಪರಿಪೂರ್ಣವಲ್ಲ, ಅಂತಿಮವಲ್ಲ. ಹಾಗಿರುವಾಗ, ಅದರಲ್ಲೂ ಜನರ ಅತ್ಯಂತ ಸೂಕ್ಷ್ಮ ಸಂಗತಿಯಾದ ಧಾರ್ಮಿಕ ವಿಚಾರಗಳ ಬಗ್ಗೆ ಸಾರ್ವಜನಿಕವಾಗಿ ಎಚ್ಚರಿಕೆಯಿಂದ ನಡೆದುಕೊಳ್ಳುವುದು ಅಗತ್ಯ. ಅಷ್ಟೇ ಅಲ್ಲ, ಕೇವಲ ಒಂದು ಧರ್ಮ, ಸಿದ್ಧಾಂತ, ನಂಬಿಕೆಗಳನ್ನು ಮಾತ್ರ ಈ ರೀತಿ ಟಾರ್ಗೆಟ್ ಮಾಡಿದರೆ ಅದು ಅನಾರೋಗ್ಯಕರವಾಗಿರುತ್ತದೆ. ಪರಿಣಾಮ ವ್ಯತಿರಿಕ್ತವಾಗಿರುತ್ತದೆ.

ಇಂತಹದೇ ನೀತಿ, ನಡವಳಿಕೆ, ಧೋರಣೆಗಳಿಂದ ಗೌರಿ ಲಂಕೇಶ್ ಮತ್ತು ಇತರೆಲ್ಲಾ ಎಡಚರರು (ಇವರನ್ನೇ ಎಡಬಿಡಂಗಿಗಳೆಂದು ಜನರು ಮೂದಲಿಸುತ್ತಾರೆ) ಸಾರ್ವಜನಿಕವಾಗಿ ಬತ್ತಲಾಗುತ್ತಿದ್ದಾರೆ, ಜನರ ವಿರೋಧ ಆಹ್ವಾನಿಸುತ್ತಿದ್ದಾರೆ.

ಇನ್ನೊಂದು ವಿಚಾರವೇನೆಂದರೆ, ಈ ರೀತಿ ವಿರೋಧಿ ಹೇಳಿಕೆ ಕೊಟ್ಟರೆಂಬ ಕಾರಣಕ್ಕೆ ಮತ್ತು ಅಂತಹ ಸಿದ್ಧಾಂತ, ಧೋರಣೆಗಳಿಗಾಗಿ ತಮಗಾಗದ ವಿರೋಧಿಗಳನ್ನು ಕೊಲ್ಲಬೇಕೆನ್ನುವುದೂ ಕರಾಳವಾದುದು. ವಿರೋಧಿಸಲು ಅಥವಾ ಅನ್ಯಾಯವಾಗಿದೆಯೆಂದುಕೊಂಡರೆ ಅದನ್ನು ಪರಿಹರಿಸಲು, ಪ್ರಶ್ನಿಸಲು ನ್ಯಾಯಯುತ ವಿಧಾನಗಳಿರುವಾಗ, ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಸೂಕ್ತವಾಗಿ ಬಳಸುವ ಮಾರ್ಗಗಳಿರುವಾಗ ಹಲ್ಲೆ, ಕೊಲೆಯನ್ನೇ ಆಶ್ರಯಿಸುವುದು ರಾಕ್ಷಸತ್ವವೇ ಹೊರತು ಬೇರೇನಲ್ಲ. ಗೌರಿಯನ್ನು ಕೊಂದ ವಿಕೃತರು ಕೊನೆಗೆ ಸಾಧಿಸಿದ್ದಾದರೂ ಏನು? ಅಂತಿಮವಾಗಿ, ಜೈಲು ಸೇರುವುದೇ ಅವರ ಕರ್ಮ.

ಗೌರಿ ಲಂಕೇಶರ ಶತ್ರುಗಳು ಆಕೆಯನ್ನು ಬದುಕಲು ಬಿಡಬೇಕಿತ್ತು. ತನ್ನ ದಾರಿ ತಪ್ಪಿದ ಚಿಂತನೆ, ನಡವಳಿಕೆಗಳಿಂದ ಒಂದು ದಿನ ತಾನಾಗಿಯೇ ಅಪ್ರಸ್ತುತವಾಗುವತ್ತ ಆಕೆ ದಾಪುಗಾಲಿಟ್ಟಿದ್ದರು. ಗುಬ್ಬಿಯ ಮೇಲೆ ಬ್ರಹ್ಮಾಸ್ತ್ರವೆಂಬಂತೆ ಅಚಾನಕ್ಕಾಗಿ ಆಕೆಯನ್ನು ಕೊಂದು ಆಕೆಯ ಶತ್ರುಗಳೇ ಅನಾಯಾಸವಾಗಿ ಆಕೆಗೆ ಹುತಾತ್ಮ ಪಟ್ಟ ಸಿಗುವಂತೆ ಮಾಡಿದರು. ಕೊಲ್ಲಲ್ಪಟ್ಟವರಿಗೆ ಸಹಜವಾಗಿ ಜನರ ಅನುಕಂಪ ಸಿಕ್ಕೇ ಸಿಗುತ್ತದೆ. ಮಾನವ ಚರಿತ್ರೆಯಲ್ಲಿ ಅದೆಷ್ಟೋ ಜನರು ಅಸಹಜವಾಗಿ ಸತ್ತು ಅಥವಾ ಕೊಲ್ಲಲ್ಪಟ್ಟು, ತಮ್ಮ ಯೋಗ್ಯತೆಗೆ ಮೀರಿದ ಹುತಾತ್ಮ, ಸಂತ ಪಟ್ಟ ಗಳಿಸಿಕೊಂಡಿದ್ದಾರೆ. ಅಂತೂ ಬದುಕಿದ್ದಾಗ ಎಷ್ಟು ಜನರಿಗೆ ಪರಿಚಿತರಾಗಿದ್ದರೋ ಗೊತ್ತಿಲ್ಲ, ಹುತಾತ್ಮಳಾಗಿ ಆಕೆ ದೇಶ ವಿದೇಶಗಳಲ್ಲಿ ಸುದ್ದಿಗೆ, ಚರ್ಚೆಗೆ ಮತ್ತು ಅನುಕಂಪಕ್ಕೆ ಗ್ರಾಸವಾಗಿದ್ದು ಮಾತ್ರ ಸತ್ಯ.

ಹತರಾದ ಗೌರಿ ಆತ್ಮಕ್ಕೆ ಶಾಂತಿ ದೊರಕಲಿ; ಅಪರಾಧಿಗಳಿಗೆ ಶಿಕ್ಷೆಯಾಗಲಿ. ಅದೇ ರೀತಿ ಅವಿವೇಕವಾಗಿ ವರ್ತಿಸುವ ಎಡಬಿಡಂಗಿಗಳು ವಿವೇಚನೆ, ಸಂಯಮ ಮತ್ತು ಉದಾರ ಮನೋಭಾವವನ್ನು ಇನ್ನಾದರೂ ಅಳವಡಿಸಿಕೊಳ್ಳಲಿ. ಆ ಮೂಲಕ ನಾಡಿನಲ್ಲಿ ಶಾಂತಿ, ಸೌಹಾರ್ದತೆ ಮತ್ತು ಸಹಬಾಳ್ವೆ ಮೂಡಲಿ ಎಂಬುದು ನನ್ನ ಕಳಕಳಿ.

ಲೇಖನ: ಡೊನಾಲ್ಡ್ ಪಿರೇರಾ ಬೆಳ್ತಂಗಡಿ

For your feedback, email to: info.janavahini@gmail.com

Like our Page – www.facebook.com/janavahini

Like us on facebook

Leave a Reply

Your email address will not be published. Required fields are marked *

*

code

LATEST NEWS