ಟ್ರಾಫಿಕ್ ಟ್ರಬಲ್: ಮಂಗಳೂರಿನ ರಸ್ತೆಗಳಿಗೆ ಲೇನ್‍ಗಳನ್ನು ಯಾಕೆ ಹಾಕಿಲ್ಲ?

Published on: Wednesday, January 10th, 2018,7:55 pm

ಕರ್ನಾಟಕದ ಹೆಬ್ಬಾಗಿಲು, ಬಂದರು ನಗರಿ ಮಂಗಳೂರು ಕರಾವಳಿಯ ಕೇಂದ್ರ. ತೀವ್ರಗತಿಯಲ್ಲಿ ಅಭಿವೃದ್ಧಿ ಹೊಂದುತ್ತಿರುವ ನಗರ, ಸ್ಮಾರ್ಟ್ ಸಿಟಿಗಳಲ್ಲಿ ಒಂದು. ಇಲ್ಲಿನ ಪ್ರಮುಖ ಸಮಸ್ಯೆಯೆಂದರೆ ಟ್ರಾಫಿಕ್ ಜಾಮ್. ಈ ನಿಟ್ಟಿನಲ್ಲಿ ಇಲ್ಲಿನ ಸಮಸ್ಯೆ, ಕೊರತೆಗಳ ಮೇಲೆ ಬೆಳಕು ಚೆಲ್ಲುವ, ಆ ಮೂಲಕ ಸಮಸ್ಯೆಗಳನ್ನು ನಿವಾರಿಸುವಲ್ಲಿ ಕೊಡುಗೆ ನೀಡುವ ಉದ್ದೇಶವೇ ಈ ಲೇಖನ ಸರಣಿಯದು. ನಾಗರಿಕರ ಒಳಗೊಳ್ಳುವಿಕೆಯಿಂದ ಸಮಾಜವು ಸುಸ್ಥಿತಿಗೆ ಬರುತ್ತದೆಯೆಂಬ ನಂಬಿಕೆ ನಮ್ಮದು. ನಿಮ್ಮ ಅಭಿಪ್ರಾಯಗಳಿಗೂ ಸ್ವಾಗತವಿದೆ.

-ಸಂಪಾದಕ

Road with Lanes 2

ಮಂಗಳೂರು!

ಅರಬ್ಬಿ ಸಮುದ್ರಕ್ಕೆ ಮುಕ್ತವಾಗಿ ಹೊಂದಿಕೊಂಡಿರುವ ಈ ಪಟ್ಟಣ ಬಹಳ ಹಿಂದಿನಿಂದಲೇ ವಿಶ್ವದ ಆಗು ಹೋಗುಗಳಿಗೆ ತೆರೆದುಕೊಂಡ, ಆಧುನಿಕತೆಗೆ ಬಹಳ ಬೇಗ ಒಗ್ಗಿಕೊಂಡ ಪ್ರದೇಶ. ಬೆಂಗಳೂರು, ಮೈಸೂರು ಮುಂತಾದ ನಗರಗಳಿಗೆ ಹೋಲಿಸಿದಲ್ಲಿ ಮಂಗಳೂರು ನಗರದ ವಿಸ್ತಾರ ತುಂಬಾ ಕಡಿಮೆ. ಆದರೆ ಇಲ್ಲಿನ ಜನ ಸಾಂದ್ರತೆ ಇತರೆಡೆಗಳಿಗಿಂತ ದಟ್ಟವಾಗಿದೆ.

Traffic Solutions Mlore 1ಅತ್ಯಂತ ಸುಶಿಕ್ಷಿತ ಜಿಲ್ಲೆಯೆಂದು ಹೆಗ್ಗಳಿಕೆ ಹೊಂದಿರುವ ದಕ್ಷಿಣ ಕನ್ನಡ ಜಿಲ್ಲೆಯ ಕೇಂದ್ರ ಸ್ಥಳವಾದ ಮಂಗಳೂರು ಸರ್ವ ಧರ್ಮಗಳ ಸಂಗಮವೂ ಹೌದು. ಇಲ್ಲಿ ಬಡವರೂ ಇದ್ದಾರೆ, ಆಗರ್ಭ ಶ್ರೀಮಂತರೂ ಇದ್ದಾರೆ. ರಾಜ್ಯದ ಬೇರೆ ಜಿಲ್ಲೆಗಳಿಗೆ ಹೋಲಿಸಿದರೆ ಇಲ್ಲಿನ ಜನರ ಬದುಕು ಸಾಕಷ್ಟು ಉತ್ತಮವಾಗಿದೆ. ಇಲ್ಲಿರುವಷ್ಟು ಶ್ರೀಮಂತ ಶೈಕ್ಷಣಿಕ ಸಂಸ್ಥೆಗಳು, ಧರ್ಮ ಕೇಂದ್ರಗಳು ಬೇರೆಡೆ ಕಾಣ ಸಿಗುವುದಿಲ್ಲ. ಮಂಗಳೂರಿನ ಜನರ ಶ್ರೀಮಂತಿಕೆಗೆ ಅತ್ಯುತ್ತಮ ಸಾಕ್ಷ್ಯ ಒದಗಿಸುತ್ತವೆ ಇಲ್ಲಿನ ರಸ್ತೆಗಳಲ್ಲಿ ಓಡಾಡುವ ವಾಹನಗಳು. ಇಲ್ಲಿರುವ ಅತ್ಯಂತ ಐಶಾರಾಮಿ ಕಾರುಗಳು ಮಂಗಳೂರಿನ ಜನರ ಸಿರಿವಂತಿಕೆಯನ್ನು ಎತ್ತಿ ತೋರಿಸುತ್ತವೆ.

ಆದರೂ ಇಲ್ಲಿ ಒಂದು ಪ್ರಮುಖ ಕೊರತೆಯಿದೆ. ಅದರ ಪರಿಣಾಮವೇ ಮಂಗಳೂರಿನಲ್ಲಿ ದಿನೇ ದಿನೇ ಹೆಚ್ಚಾಗುತ್ತಿರುವ ಸಂಚಾರ ದಟ್ಟಣೆ ಯಾನೆ ಟ್ರಾಫಿಕ್ ಜಾಮ್ ಸಮಸ್ಯೆ ಜನರ ಪ್ರಾಣ ಹಿಂಡುತ್ತಿದೆ.

Mangaluru Roads 1

ವಿಪರ್ಯಾಸವೇನು ಗೊತ್ತಾ? ಮಂಗಳೂರಿನ ನಾಗರಿಕರು ಅತ್ಯಂತ ಸುಶಿಕ್ಷಿತರೂ, ಸಿರಿವಂತರೂ, ಪ್ರಪಂಚದಾದ್ಯಂತ ತಿರುಗಾಡಿದವರೂ ಆಗಿದ್ದಾರೆ. ಆದರೆ ಇಲ್ಲಿನ ರಸ್ತೆಗಳಲ್ಲಿ ಇವರೆಲ್ಲಾ ಈ ಹೆಗ್ಗಳಿಕೆಗಳಿಗೆ ಅತೀತರೆಂಬಂತೆ ವರ್ತಿಸುತ್ತಾರೆ. ಅದರ ಬಗ್ಗೆ ಮುಂದೆ ಬರೆಯುತ್ತೇನೆ. ಮೊದಲು ಇಲ್ಲಿನ ಟ್ರಾಫಿಕ್ ಟ್ರಬಲ್‍ಗಳಿಗೆ ಕಾರಣವಾದ ಮುಖ್ಯ ಸಂಗತಿಯಾದ ಲೇನ್‍ಗಳ ಕೊರತೆ ಬಗ್ಗೆ ಬರೆಯುತ್ತೇನೆ.

ನಿಮಗೆ ಗೊತ್ತೇ ಇದೆ. ಅದೇನೆಂದರೆ ಮಂಗಳೂರು ನಗರದ ರಸ್ತೆಗಳು ತುಂಬಾ ದುಬಾರಿ. ಸಿಕ್ಕ ಸಿಕ್ಕ ರಸ್ತೆಗಳನ್ನು ಕಾಂಕ್ರೀಟ್‍ಮಯ ಮಾಡಿರುವುದರಿಂದ ಅದರ ನಿರ್ಮಾಣ ವೆಚ್ಚ ಡಾಮರು ರಸ್ತೆಗಳಿಗಿಂತ ಹಲವಾರು ಪಟ್ಟು ದುಬಾರಿ. ಪಣಕ್ಕೆ ಬಿದ್ದಂತೆ ನಗರದ ಮತ್ತು ಆಸುಪಾಸಿನ ರಸ್ತೆಗಳನ್ನೆಲ್ಲಾ ಕಾಂಕ್ರೀಟೀಕರಣಕ್ಕೊಳಪಡಿಸಲಾಗಿದೆ. ಆದರೂ ಇಲ್ಲಿನ ಟ್ರಾಫಿಕ್ ಸಮಸ್ಯೆಗಳು ಕಡಿಮೆಯಾಗುತ್ತಿಲ್ಲ. ಬದಲಾಗಿ ಹೆಚ್ಚಾಗುತ್ತಲೇ ಇವೆ.

ಮಂಗಳೂರಿನ ರಸ್ತೆಗಳಲ್ಲಿ ಲೇನ್‍ಗಳೇ ಇಲ್ಲ!

Traffic Jam

ಹೌದು. ಇದು ವಿಚಿತ್ರವಾದರೂ ನಿಜವಾದ ವಾಸ್ತವ. ನೂರಾರು ಕೋಟಿ ರೂಪಾಯಿ ವೆಚ್ಚದಲ್ಲಿ ಇಲ್ಲಿ ರಸ್ತೆಗಳನ್ನು ಕಾಂಕ್ರಿಟೀಕರಣ ಮಾಡಿ ಮೇಲ್ದರ್ಜೆಗೇರಿಸಿದ್ದೇವೆಂಬ ಕ್ರೆಡಿಟ್ ತೆಗೆದುಕೊಳ್ಳಲಾಗುತ್ತದೆಯೇ ಹೊರತು ನಗರದ ರಸ್ತೆಗಳನ್ನು ಉತ್ತಮ ಸಂಚಾರ ಯೋಗ್ಯವನ್ನಾಗಿಸುವ ಪ್ರಯತ್ನ ನಡೆದದ್ದೇ ಕಾಣುವುದಿಲ್ಲ. ಹಲವು ವರ್ಷಗಳ ಕಾಲ ಹೀಗೆ ಕಾಂಕ್ರೀಟ್‍ಗೊಳಪಡಿಸಿದ ರಸ್ತೆಗಳ ಅಂಚುಗಳು ಯಮಗುಂಡಿಗಳಾಗಿ ತೆರೆದುಕೊಂಡಿದ್ದವು. ಇದೀಗ ಬಹುತೇಕ ಚರಂಡಿ ಕಾಮಗಾರಿಗಳು ನಡೆಯುತ್ತಾ ಬಂದಿದ್ದು ಫುಟ್‍ಪಾತ್‍ಗಳ ನಿರ್ಮಾಣವೇನೋ ನಡೆದಿದೆ. ಆದರೆ ರಸ್ತೆಗಳ ಮೂಲ ಉದ್ದೇಶವಾದ ಸುಗಮ ವಾಹನ ಸಂಚಾರಕ್ಕೆ ಅನುವು ಮಾಡಿ ಕೊಡುವ ಲೇನ್‍ಗಳ ಅಗತ್ಯ ಇಲ್ಲಿನ ಆಡಳಿತಕ್ಕೆ ಯಾಕಿನ್ನೂ ಕಂಡುಬಂದಿಲ್ಲವೆನ್ನುವುದೇ ಆಶ್ಚರ್ಯದ ಸಂಗತಿ.

Road with Lanes

ವಿಚಿತ್ರ ನೋಡಿ! ಅತ್ಯಂತ ಸುಶಿಕ್ಷಿತ, ದೇಶ ವಿದೇಶಗಳಲ್ಲಿ ಸಂಚರಿಸುವ ಜನರಿರುವ ಮತ್ತು ಆರ್ಥಿಕವಾಗಿ ಸದೃಡವಾಗಿರುವ ಮಂಗಳೂರು ನಗರದಲ್ಲಿ ರಸ್ತೆಗಳು ಮಾತ್ರ ಇನ್ನೂ ಅನಾಗರಿಕ ಸ್ಥಿತಿಯಿಂದ ಮೇಲೆ ಬಂದಿಲ್ಲ. 21ನೇ ಶತಮಾನದ 17 ವರ್ಷಗಳು ಸಂದು ಹೋದರೂ ಕೂಡ ಇಲ್ಲಿನ್ನೂ ಅನೇಕ ರಸ್ತೆಗಳು ಶೈಶವಾವಸ್ಥೆಯಲ್ಲಿವೆ. ಮೇಲ್ದರ್ಜೆಗೇರಿಸಲ್ಪಟ್ಟ ರಸ್ತೆಗಳಲ್ಲೂ ಸಹ ಸರಿಯಾದ ಫುಟ್‍ಪಾತ್, ಬಸ್‍ಸ್ಟಾಪ್‍ಗಳ ನಿರ್ಮಾಣವಾಗಲು ವರ್ಷಗಳೇ ಬೇಕಾಗುತ್ತವೆ. ತಿಂಗಳುಗಟ್ಟಲೆ, ವರ್ಷಗಟ್ಟಲೆ ರಸ್ತೆಗಳನ್ನು ಮುಚ್ಚಿ ಅಭಿವೃದ್ಧಿ ಪಡಿಸಲಾಗುತ್ತದೆ, ಆದರೆ ಮತ್ತೆ ಕೆಲವೇ ದಿನಗಳ ನಂತರ ಅದೇ ರಸ್ತೆಗಳನ್ನು ಅಲ್ಲಲ್ಲಿ ಮತ್ತೆ ಕತ್ತರಿಸಿ, ಕೊರೆದು ತೆರಿಗೆದಾರರ ಹಣವನ್ನು ಪೋಲು ಮಾಡಲಾಗುತ್ತದೆ. ಜನರ ಸಂಖ್ಯೆ ಮತ್ತು ವಾಹನಗಳ ದಟ್ಟಣೆ ವಿಪರೀತವೆಂಬಷ್ಟು ಹೆಚ್ಚಾಗುತ್ತಿರುವ ಈ ನಗರದ ಟ್ರಾಫಿಕ್ ಜಾಮ್ ಸಮಸ್ಯೆ ಗಂಭೀರಗೊಳ್ಳಲು ಇಲ್ಲಿನ ರಸ್ತೆಗಳು ಮೊತ್ತ ಮೊದಲ ಕೊಡುಗೆ ನೀಡುತ್ತಿವೆ ಎಂಬುದು ವಾಸ್ತವ.

ರಸ್ತೆಯೆಂಬುದು ನಾಗರಿಕ ಸಮಾಜದ ಅತ್ಯಂತ ಪ್ರಮುಖ ಹೆಗ್ಗುರುತು. ರಸ್ತೆಯಲ್ಲಿ ವಾಹನ ಚಲಾಯಿಸುವಲ್ಲಿ ಶಿಸ್ತು ಬಹಳ ಮುಖ್ಯವಾದುದು. ಕಾಡು ಪ್ರಾಣಿಗಳೂ ಸಹ ಚಲಿಸುವಾಗ, ಗುಂಪಿನಲ್ಲಿ ನಡೆಯುವಾಗ ಅವುಗಳದೇ ಆದ ಶಿಸ್ತು, ನಿಯಮವನ್ನು ಪಾಲಿಸುತ್ತವೆ. ಆದರೆ ಮನುಷ್ಯನಿಗೆ ಮಾತ್ರ ಶಿಸ್ತು, ನಿಯಮ ಪಾಲನೆಗೆ ಸರಕಾರ ನಿಬಂಧನೆಗಳನ್ನು ವಿಧಿಸಬೇಕು! ಅಷ್ಟಿದ್ದೂ ನಮ್ಮ ಬಹುತೇಕ ಜನರ ವಾಹನ ಚಾಲನೆ ಮಾತ್ರ ಅತ್ಯಂತ ಅನಾಗರಿಕವಾಗಿಯೇ ಇದೆ!

Mangaluru Roads 2

ನಗರವೆಂದರೆ ಬಹು ರಸ್ತೆಗಳಿರುವುದು, ಹಲವು ರಸ್ತೆಗಳ ಸಂಗಮವಾದ ಸರ್ಕಲ್‍ಗಳಿರುವುದು ಸಾಮಾನ್ಯ. ಮಂಗಳೂರಿನಲ್ಲಿ ಬಹುತೇಕ ರಸ್ತೆಗಳು ವಿಭಜಕಗಳನ್ನು (ಡಿವೈಡರ್) ಹೊಂದಿವೆ. ನೈಸರ್ಗಿಕ ಕಾರಣಗಳಿಂದಾಗಿ ಇಲ್ಲಿನ ರಸ್ತೆಗಳು ಕಿರಿದಾಗಿವೆ. ವಾಹನಗಳ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿರುವುದೂ ರಸ್ತೆಗಳ ಮೇಲಿನ ಒತ್ತಡ ಹೆಚ್ಚಾಗಲು ಕಾರಣ. ಆದರೂ ರಸ್ತೆಗಳಲ್ಲಿ ಲೇನ್‍ಗಳೇ ಇಲ್ಲವಾಗಿರುವುದು ಅಶಿಸ್ತಿನ, ಅಡ್ಡಾದಿಡ್ಡಿ ವಾಹನ ಚಾಲನೆಗೆ ಮುಕ್ತ ಕಾರಣವೆಂದರೆ ತಪ್ಪಾಗುವುದಿಲ್ಲ.

ರಸ್ತೆಗಳಲ್ಲಿ ಲೇನ್‍ಗಳನ್ನು ಹಾಕಿದಲ್ಲಿ ಬಹಳಷ್ಟು ಮಟ್ಟಿಗೆ ಶಿಸ್ತು ಪಾಲನೆಯಾಗುವುದು ಖಚಿತ. ಹಲವು ಕೋಟಿ ಸುರಿದು ನಿರ್ಮಿಸಿದ ರಸ್ತೆಗಳಲ್ಲಿ ವ್ಯವಸ್ಥಿತವಾದ ಲೇನ್ (ಪಥ) ನಿರ್ಮಾಣ ಮಾಡಲು ಯಾಕೆ ಸಾಧ್ಯವಾಗುವುದಿಲ್ಲ? ಈ ಬಗ್ಗೆ ಯಾಕೆ ಯಾರೂ ಗಮನ ಕೊಡುತ್ತಿಲ್ಲ? ರಾಜಕಾರಣಿಗಳೂ, ಜನಪ್ರತಿನಿಧಿಗಳು, ನಗರಪಾಲಿಕೆ, ಜಿಲ್ಲಾಡಳಿತ ಮತ್ತು ಟ್ರಾಫಿಕ್ ಪೊಲೀಸರು ಈ ನಿಟ್ಟಿನಲ್ಲಿ ಕೂಡಲೇ ಕಾರ್ಯಪ್ರವೃತ್ತರಾಗಿ ಮಂಗಳೂರಿನ ರಸ್ತೆಗಳಿಗೆ ಸರಿಯಾದ ಲೇನ್‍ಗಳನ್ನು ಹಾಕಿ ರಸ್ತೆ ಸಂಚಾರವನ್ನು ಸುಗಮಗೊಳಿಸಲು ಮುಂದಾಗಬೇಕಾಗಿದೆ.

ಈ ನಿಟ್ಟಿನಲ್ಲಿ ಮಂಗಳೂರಿನ ನಾಗರಿಕರೂ ತಾವಾಗಿ ಮುಂದೆ ಬಂದು ಮಂಗಳೂರಿನ ರಸ್ತೆಗಳಲ್ಲಿ ಲೇನ್‍ಗಳನ್ನು ನಿರ್ಮಿಸಲು ಹಕ್ಕೊತ್ತಾಯ ಮಂಡಿಸಬೇಕು. ನಗರಪಾಲಿಕೆಯನ್ನು ಒತ್ತಾಯಗೊಳಿಸಬೇಕು. ಲೇನ್‍ಗಳ ನಿರ್ಮಾಣದಿಂದ ಬಹಳಷ್ಟು ಮಟ್ಟಿಗೆ ವಾಹನ ಸಂಚಾರ ಶಿಸ್ತುಬದ್ಧಗೊಳ್ಳುತ್ತದೆ, ತಾಪತ್ರೆಗಳು ಕಡಿಮೆಯಾಗುತ್ತವೆ. ಇದರಿಂದ ಟ್ರಾಫಿಕ್ ಜಾಮ್ ಸಮಸ್ಯೆಯನ್ನು ನಿಯಂತ್ರಣಗೊಳಸಲು ಸುಲಭವಾಗುತ್ತದೆ.

ಮಂಗಳೂರಿನ ಟ್ರಾಫಿಕ್ ಸಮಸ್ಯೆಗಳ ಹಲವು ಮುಖಗಳನ್ನು ಈ ಲೇಖನ ಮಾಲೆಯಲ್ಲಿ ಬೆಳಕಿಗೆ ತರಲಾಗುವುದು. ಒಟ್ಟಿನಲ್ಲಿ ನಗರವನ್ನು ಕಾಡುವ ಪ್ರಮುಖ ಸಮಸ್ಯೆಯಾದ ಸಂಚಾರ ದಟ್ಟಣೆಯನ್ನು ನಿಯಂತ್ರಿಸುವಲ್ಲಿ ನೆರವಾಗುವುದೇ ಈ ಲೇಖನ ಮಾಲೆಯ ಉದ್ದೇಶ.

ಲೇಖನ: ಡೊನಾಲ್ಡ್ ಪಿರೇರಾ ಬೆಳ್ತಂಗಡಿ

ನಿಮ್ಮ ಅಭಿಪ್ರಾಯಗಳನ್ನು ಇಮೈಲ್ ಮಾಡಿ – donypereira@gmail.com

Visit & Like our Page – www.facebook.com/janavahini

Like us on facebook

Leave a Reply

Your email address will not be published. Required fields are marked *

*

code

LATEST NEWS