ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಆಗಸ್ಟ್ 29ರಿಂದ ಸೆಪ್ಟೆಂಬರ್ 1ರವರೆಗೆ ಉಜ್ಬೇಕಿಸ್ತಾನ್ ಮತ್ತು ಕಿರ್ಗಿಸ್ತಾನ್ಗೆ ನಾಲ್ಕು ದಿನಗಳ ಅಧಿಕೃತ ಪ್ರವಾಸ ಕೈಗೊಳ್ಳಲಿದ್ದಾರೆ. ಕಾರ್ಯತಂತ್ರದ ಸಹಕಾರ, ಪ್ರಾದೇಶಿಕ ಭದ್ರತೆ ಹಾಗೂ ಶಾಂಘೈ ಸಹಕಾರ ಸಂಸ್ಥೆ (SCO) ಜತೆಗಿನ ಭಾರತದ ಸಂಬಂಧಗಳು ಪ್ರವಾಸದ ಪ್ರಮುಖ ಕಾರ್ಯಸೂಚಿಯಾಗಿವೆ.
ಉಜ್ಬೇಕಿಸ್ತಾನ್ ಅಧ್ಯಕ್ಷ ಶವ್ಕತ್ ಮಿರ್ಜಿಯೋಯೆವ್ ಅವರ ಆಹ್ವಾನದ ಮೇರೆಗೆ ಮೋದಿ ಆಗಸ್ಟ್ 29-30ರಂದು ತಾಷ್ಕೆಂಟ್ಗೆ ಭೇಟಿ ನೀಡಲಿದ್ದಾರೆ. ಈ ವೇಳೆ ವ್ಯಾಪಾರ ಮತ್ತು ಹೂಡಿಕೆ, ಡಿಜಿಟಲ್ ಸಂಪರ್ಕ, ರಕ್ಷಣೆ ಹಾಗೂ ಇಂಧನ ಕ್ಷೇತ್ರಗಳಲ್ಲಿ ದ್ವಿಪಕ್ಷೀಯ ಸಹಕಾರ ವಿಸ್ತರಿಸುವ ಕುರಿತು ಮಾತುಕತೆ ನಡೆಸುವ ನಿರೀಕ್ಷೆಯಿದೆ.

ಬಿಷ್ಕೆಕ್ನಲ್ಲಿ SCO ಶೃಂಗಸಭೆ
ಬಳಿಕ ಮೋದಿ ಕಿರ್ಗಿಸ್ತಾನ್ ರಾಜಧಾನಿ ಬಿಷ್ಕೆಕ್ಗೆ ತೆರಳಿ 26ನೇ SCO ಶೃಂಗಸಭೆಯಲ್ಲಿ ಭಾಗವಹಿಸಲಿದ್ದಾರೆ. ಭಯೋತ್ಪಾದನೆ, ಪ್ರತ್ಯೇಕತಾವಾದ ಮತ್ತು ಉಗ್ರವಾದದಿಂದ ಮುಕ್ತವಾದ ಪ್ರದೇಶ ನಿರ್ಮಾಣ ಸೇರಿದಂತೆ ಪ್ರಾದೇಶಿಕ ಭದ್ರತೆ, ಸಂಪರ್ಕ ಮತ್ತು ಸಹಕಾರದ ಕುರಿತು ಭಾರತ ತನ್ನ ನಿಲುವನ್ನು ಮಂಡಿಸಲಿದೆ.
ಮೋದಿ ಕಿರ್ಗಿಸ್ತಾನ್ ಅಧ್ಯಕ್ಷ ಸದಿರ್ ಝಪರೋವ್ ಸೇರಿದಂತೆ SCO ನಾಯಕರೊಂದಿಗೆ ದ್ವಿಪಕ್ಷೀಯ ಮಾತುಕತೆ ನಡೆಸಲಿದ್ದಾರೆ. ಮಧ್ಯ ಏಷ್ಯಾದ ಸಾಂಸ್ಕೃತಿಕ ಪರಂಪರೆಯನ್ನು ಪ್ರತಿಬಿಂಬಿಸುವ 6ನೇ ವಿಶ್ವ ಅಲೆಮಾರಿ ಕ್ರೀಡಾಕೂಟದ ಉದ್ಘಾಟನಾ ಸಮಾರಂಭದಲ್ಲೂ ಭಾಗವಹಿಸಲಿದ್ದಾರೆ.
ತಾಷ್ಕೆಂಟ್ನಲ್ಲಿ ಮೋದಿ ತಾಷ್ಕೆಂಟ್ ಸ್ಟೇಟ್ ಯೂನಿವರ್ಸಿಟಿ ಆಫ್ ಓರಿಯಂಟಲ್ ಸ್ಟಡೀಸ್ನ ಶಾಸ್ತ್ರಿ ಸ್ಮಾರಕ ಹಾಗೂ ಮಹಾತ್ಮ ಗಾಂಧಿ ಕೇಂದ್ರಕ್ಕೆ ಭೇಟಿ ನೀಡಲಿದ್ದಾರೆ.
ಈ ಪ್ರವಾಸವು ಮಧ್ಯ ಏಷ್ಯಾದ ರಾಷ್ಟ್ರಗಳೊಂದಿಗೆ ಭಾರತದ ಕಾರ್ಯತಂತ್ರದ ಪಾಲುದಾರಿಕೆಯನ್ನು ಮತ್ತಷ್ಟು ಬಲಪಡಿಸುವುದರ ಜತೆಗೆ, ಶಾಂತಿ, ಸ್ಥಿರತೆ ಮತ್ತು ಸಮೃದ್ಧಿಯ ಹಂಚಿಕೆಯ ಗುರಿಗಳಿಗೆ ಕೊಡುಗೆ ನೀಡಲಿದೆ ಎಂದು ಮೋದಿ ಹೇಳಿದ್ದಾರೆ.
