ನವದೆಹಲಿ: ಪ್ರತಿಭಟನಾಕಾರರ ವಿರುದ್ಧ ದಾಖಲಿಸಿರುವ ಎಫ್ಐಆರ್ಗಳನ್ನು ಹಿಂಪಡೆಯುವ ಹಾಗೂ ಯಾವುದೇ ದಂಡನಾತ್ಮಕ ಕ್ರಮ ಕೈಗೊಳ್ಳುವುದಿಲ್ಲ ಎಂಬ ಭರವಸೆಯನ್ನು ಸರ್ಕಾರ ಈಡೇರಿಸದಿದ್ದರೆ ದೇಶಾದ್ಯಂತ ಮತ್ತೆ ಶಾಂತಿಯುತ ಪ್ರತಿಭಟನೆ ಆರಂಭಿಸಲಾಗುವುದು ಎಂದು ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ಎಚ್ಚರಿಕೆ ನೀಡಿದೆ.
ಟೈಫಾಯಿಡ್ಗೆ ಚಿಕಿತ್ಸೆ ಪಡೆಯುತ್ತಿರುವ ಸಿಜೆಪಿ ಸಂಸ್ಥಾಪಕ ಅಭಿಜೀತ್ ದೀಪ್ಕೆ ಎಕ್ಸ್ನಲ್ಲಿ ಪೋಸ್ಟ್ ಮಾಡಿ, ವಿದ್ಯಾರ್ಥಿಗಳಿಗೆ ಪೊಲೀಸರಿಂದ ಕಿರುಕುಳ ಮುಂದುವರಿದರೆ ಪಕ್ಷವು ಬೃಹತ್ ಶಾಂತಿಯುತ ಪ್ರತಿಭಟನೆ ನಡೆಸಲಿದೆ. ಸರ್ಕಾರ ವಿದ್ಯಾರ್ಥಿಗಳನ್ನು ಗುರಿಯಾಗಿಸುವುದನ್ನು ನಿಲ್ಲಿಸಬೇಕು ಎಂದು ಒತ್ತಾಯಿಸಿದ್ದಾರೆ.
ಅಭಿಜೀತ್ ದೀಪ್ಕೆ ಅವರು X ನಲ್ಲಿ ಹಾಕಿರುವ ಪೋಸ್ಟ್ ಹೀಗಿದೆ:
“If the harassment of students at the hands of the police continues, the Cockroach Janta Party will respond with a massive peaceful protest soon. The Govt must stop targeting and witch-hunting students.”

ಸಿಜೆಪಿ ಮುಖ್ಯ ವಕ್ತಾರ ಸೌರವ್ ದಾಸ್ ಮಾತನಾಡಿ, ಸುಪ್ರೀಂ ಕೋರ್ಟ್ನ ಮಧ್ಯಂತರ ಆದೇಶವು ಜುಲೈ 25ರಂದು ಕೇಂದ್ರ ಸರ್ಕಾರ ನೀಡಿದ್ದ ಭರವಸೆಗಳಿಗೆ ವಿರುದ್ಧವಾಗಿದೆ ಎಂದು ಆರೋಪಿಸಿದರು. ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ವಿದ್ಯಾರ್ಥಿಗಳ ವಿರುದ್ಧದ ಎಫ್ಐಆರ್ಗಳನ್ನು ಹಿಂಪಡೆಯಲಾಗುವುದು ಮತ್ತು ಯಾವುದೇ ಪ್ರತೀಕಾರಾತ್ಮಕ ಕ್ರಮ ಕೈಗೊಳ್ಳುವುದಿಲ್ಲ ಎಂದು ಸರ್ಕಾರ ಭರವಸೆ ನೀಡಿತ್ತು ಎಂದು ಅವರು ಹೇಳಿದರು.
ಸರ್ಕಾರಕ್ಕೆ ನೀಡಿದ್ದ ಗಡುವು ಮಂಗಳವಾರ ಅಂತ್ಯಗೊಂಡಿದ್ದು, ಎಫ್ಐಆರ್ಗಳನ್ನು ಹಿಂಪಡೆಯದಿದ್ದರೆ ವಿದ್ಯಾರ್ಥಿಗಳು ಮತ್ತು ಯುವ ಪ್ರತಿಭಟನಾಕಾರರ ಹಿತಾಸಕ್ತಿಗಾಗಿ ದೇಶಾದ್ಯಂತ ಮತ್ತೆ ಹೋರಾಟ ಆರಂಭಿಸಲಾಗುವುದು ಎಂದು ಸಿಜೆಪಿ ಎಚ್ಚರಿಸಿದೆ.
