ಏಷ್ಯನ್ ಗೇಮ್ಸ್: ಇರಾನ್ ಮಣಿಸಿದ ಭಾರತಕ್ಕೆ ಕಬಡ್ಡಿಯಲ್ಲಿ ಚಿನ್ನ

ಐಚಿ: ಟೊಕೈ ಸಿಟಿಜನ್ ಜಿಮ್ನಾಷಿಯಂನಲ್ಲಿ ಶುಕ್ರವಾರ ನಡೆದ 2026ರ ಏಷ್ಯನ್ ಗೇಮ್ಸ್ ಪುರುಷರ ಕಬಡ್ಡಿ ಫೈನಲ್‌ನಲ್ಲಿ ಇರಾನ್ ವಿರುದ್ಧ 40-34 ಅಂತರದ ಗೆಲುವು ಸಾಧಿಸಿದ ಭಾರತ ಪ್ರಶಸ್ತಿಯನ್ನು ಉಳಿಸಿಕೊಂಡಿದೆ. ಇದರೊಂದಿಗೆ ಏಷ್ಯನ್ ಗೇಮ್ಸ್‌ನಲ್ಲಿ ಭಾರತ 9ನೇ ಬಾರಿಗೆ ಪುರುಷರ ಕಬಡ್ಡಿ ಚಿನ್ನದ ಪದಕ ಗೆದ್ದಿದೆ.

ಕಬಡ್ಡಿ ಕ್ರೀಡೆ ಏಷ್ಯನ್ ಗೇಮ್ಸ್‌ನಲ್ಲಿ ಸೇರ್ಪಡೆಯಾದ ಬಳಿಕ ನಡೆದ 10 ಆವೃತ್ತಿಗಳ ಪೈಕಿ ಒಂಬತ್ತರಲ್ಲಿ ಭಾರತ ಚಾಂಪಿಯನ್ ಆಗಿದೆ. 2018ರ ಜಕಾರ್ತಾ ಏಷ್ಯನ್ ಗೇಮ್ಸ್‌ನಲ್ಲಿ ಮಾತ್ರ ಇರಾನ್ ಪ್ರಶಸ್ತಿ ಗೆದ್ದಿತ್ತು.

ಫೈನಲ್‌ನಲ್ಲಿ ಇರಾನ್ ಆರಂಭದಿಂದಲೇ ಪ್ರಬಲ ಆಟ ಪ್ರದರ್ಶಿಸಿ ಮೊದಲಾರ್ಧ ಮುಕ್ತಾಯಕ್ಕೆ 18-17 ಮುನ್ನಡೆ ಸಾಧಿಸಿತು. ಆದರೆ ದ್ವಿತೀಯಾರ್ಧದಲ್ಲಿ ಭಾರತೀಯ ಆಟಗಾರರು ಶಿಸ್ತುಬದ್ಧ ರಕ್ಷಣೆಯೊಂದಿಗೆ ಪಂದ್ಯದ ಗತಿಯನ್ನೇ ಬದಲಿಸಿದರು. ನಿರ್ಣಾಯಕ ‘ಆಲ್‌ಔಟ್’ ದಾಖಲಿಸಿದ ಭಾರತ ಮುನ್ನಡೆ ಸಾಧಿಸಿ ಅಂತಿಮವಾಗಿ ಗೆಲುವು ತನ್ನದಾಗಿಸಿಕೊಂಡಿತು.

ಭಾರತದ ಪರ ಜೈದೀಪ್ ದಹಿಯಾ, ಅರ್ಜುನ್ ದೇಶ್ವಾಲ್, ಅಸ್ಲಂ ಇನಾಮ್ದಾರ್ ಹಾಗೂ ಸುಮಿತ್ ಪರಿಣಾಮಕಾರಿ ಪ್ರದರ್ಶನ ನೀಡಿದರು.

ಪುರುಷರ ತಂಡದ ಈ ಗೆಲುವಿನೊಂದಿಗೆ ಕಬಡ್ಡಿಯಲ್ಲಿ ಭಾರತ ಚಿನ್ನದ ಕ್ಲೀನ್ ಸ್ವೀಪ್ ಸಾಧಿಸಿದೆ. ಮಹಿಳಾ ಕಬಡ್ಡಿ ತಂಡವೂ ಈಗಾಗಲೇ ಚಿನ್ನದ ಪದಕ ಗೆದ್ದಿದೆ.

ಪ್ರಶಸ್ತಿ ಉಳಿಸಿಕೊಂಡ ಭಾರತೀಯ ಪುರುಷರ ಕಬಡ್ಡಿ ತಂಡಕ್ಕೆ ರಾಷ್ಟ್ರಪತಿ ದ್ರೌಪದಿ ಮುರ್ಮು, ಉಪರಾಷ್ಟ್ರಪತಿ ಸಿ.ಪಿ. ರಾಧಾಕೃಷ್ಣನ್, ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ಅಭಿನಂದನೆ ಸಲ್ಲಿಸಿದ್ದಾರೆ.

ತಂಡದ ಸಾಧನೆಯನ್ನು ಶ್ಲಾಘಿಸಿರುವ ಪ್ರಧಾನಿ ಮೋದಿ, ಭಾರತೀಯ ಆಟಗಾರರ ದೃಢಸಂಕಲ್ಪ ಮುಂದಿನ ಪೀಳಿಗೆಯ ಕಬಡ್ಡಿ ಆಟಗಾರರಿಗೆ ಸ್ಫೂರ್ತಿಯಾಗಲಿದೆ ಎಂದು ಹೇಳಿದ್ದಾರೆ.