ದೇಶೀಯ ನೌಕಾ ಸಾಮರ್ಥ್ಯಕ್ಕೆ ಬಲ: ಮೊದಲ ಫ್ಲೀಟ್ ಸಪೋರ್ಟ್ ಶಿಪ್ ‘ಸೂರ್ಯ’ ಬಿಡುಗಡೆ

ವಿಶಾಖಪಟ್ಟಣಂ: ಭಾರತದ ಹಡಗು ನಿರ್ಮಾಣ ಮತ್ತು ಕಡಲ ಸಾಮರ್ಥ್ಯಕ್ಕೆ ಮತ್ತೊಂದು ಮಹತ್ವದ ಹೆಜ್ಜೆಯಾಗಿ ಮೊದಲ ಸ್ವದೇಶಿ ಫ್ಲೀಟ್ ಸಪೋರ್ಟ್ ಶಿಪ್ (FSS-1) ‘ಸೂರ್ಯ’ವನ್ನು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮಂಗಳವಾರ ವಿಶಾಖಪಟ್ಟಣಂನ ಹಿಂದೂಸ್ತಾನ್ ಶಿಪ್‌ಯಾರ್ಡ್ ಲಿಮಿಟೆಡ್‌ನಲ್ಲಿ (HSL) ಬಿಡುಗಡೆ ಮಾಡಿದರು.

ಇದೇ ಸಂದರ್ಭದಲ್ಲಿ ಐದನೇ ಫ್ಲೀಟ್ ಸಪೋರ್ಟ್ ಶಿಪ್ (FSS-5)ಗೆ ಕೀಲ್ ಹಾಕಲಾಯಿತು. HSLನ ನವೀಕರಿಸಿದ ಸ್ಲಿಪ್‌ವೇ-4 ಹಾಗೂ 300 ಟನ್ ಸಾಮರ್ಥ್ಯದ ಗೋಲಿಯಾತ್ ಕ್ರೇನ್‌ಗೂ ಸಚಿವರು ಚಾಲನೆ ನೀಡಿದರು.

ಈ ಮೂರು ಬೆಳವಣಿಗೆಗಳನ್ನು ಹಡಗು ನಿರ್ಮಾಣ ಕ್ಷೇತ್ರದ ಪ್ರಮುಖ ಮೈಲಿಗಲ್ಲುಗಳೆಂದು ಬಣ್ಣಿಸಿದ ರಾಜನಾಥ್ ಸಿಂಗ್, “FSS-1ರ ಉಡಾವಣೆ ಸಾಧನೆಯ ಸಂಕೇತ, FSS-5ರ ಕೀಲ್ ಹಾಕುವಿಕೆ ಸಂಕಲ್ಪದ ಸಂಕೇತ ಮತ್ತು ಹೊಸ ಸ್ಲಿಪ್‌ವೇ ಬೆಳೆಯುತ್ತಿರುವ ಸಾಮರ್ಥ್ಯದ ಸಂಕೇತ” ಎಂದು ಹೇಳಿದರು.

ಭಾರತೀಯ ನೌಕಾಪಡೆಯ ಕಾರ್ಯಾಚರಣಾ ವ್ಯಾಪ್ತಿ ಮತ್ತು ದೀರ್ಘಕಾಲದ ನಿಯೋಜನಾ ಸಾಮರ್ಥ್ಯ ಹೆಚ್ಚಿಸುವಲ್ಲಿ ಫ್ಲೀಟ್ ಸಪೋರ್ಟ್ ಶಿಪ್‌ಗಳು ಪ್ರಮುಖ ಪಾತ್ರವಹಿಸಲಿವೆ. ಸಮುದ್ರದಲ್ಲೇ ಇಂಧನ, ಸರಕು ಹಾಗೂ ಇತರ ಅಗತ್ಯ ವಸ್ತುಗಳ ಮರುಪೂರೈಕೆ ಮತ್ತು ನಿರ್ವಹಣಾ ಬೆಂಬಲ ಒದಗಿಸುವ ಸಾಮರ್ಥ್ಯ ಇವುಗಳಿಗೆ ಇದೆ.

HSL ವಿನ್ಯಾಸಗೊಳಿಸಿ ನಿರ್ಮಿಸಿರುವ ಈ ಹಡಗುಗಳಲ್ಲಿ ಹೆಚ್ಚಿನ ಸರಕು ಮತ್ತು ದ್ರವ ಸಂಗ್ರಹ ಸಾಮರ್ಥ್ಯ, ನಿರ್ವಹಣಾ ಕಾರ್ಯಾಗಾರಗಳು, ಬಹುಪಾತ್ರ ಹೆಲಿಕಾಪ್ಟರ್ ಕಾರ್ಯಾಚರಣೆಗೆ ಡೆಕ್ ಹಾಗೂ ಸ್ವರಕ್ಷಣಾ ವ್ಯವಸ್ಥೆಗಳು ಇರಲಿವೆ.

45,000 DWT ವರೆಗಿನ ಹಡಗುಗಳನ್ನು ನಿರ್ಮಿಸಲು ಅನುಕೂಲವಾಗುವಂತೆ ಸ್ಲಿಪ್‌ವೇ-4 ಅನ್ನು ವಿಸ್ತರಿಸಿ ಬಲಪಡಿಸಲಾಗಿದೆ. ಸ್ಲಿಪ್‌ವೇ 3 ಮತ್ತು 4 ವ್ಯಾಪ್ತಿಯ 300 ಟನ್ ಸಾಮರ್ಥ್ಯದ ಗೋಲಿಯಾತ್ ಕ್ರೇನ್ ಭಾರೀ ಹಡಗು ಬ್ಲಾಕ್‌ಗಳ ವೇಗದ ನಿರ್ವಹಣೆಗೆ ನೆರವಾಗಲಿದೆ.

HSL ಗುಣಮಟ್ಟ, ಉತ್ಪಾದಕತೆ ಮತ್ತು ಸಮಯಬದ್ಧ ವಿತರಣೆಯಲ್ಲಿ ಮಾನದಂಡವಾಗಬೇಕು ಎಂದು ರಾಜನಾಥ್ ಸಿಂಗ್ ಕರೆ ನೀಡಿದರು. ವಿಶಾಖಪಟ್ಟಣವನ್ನು ನೌಕಾಪಡೆ, ಹಡಗುಕಟ್ಟೆಗಳು, ಬಂದರುಗಳು, ಎಂಎಸ್‌ಎಂಇಗಳು, ವಿಶ್ವವಿದ್ಯಾಲಯಗಳು, ಸ್ಟಾರ್ಟ್‌ಅಪ್‌ಗಳು ಹಾಗೂ ತಂತ್ರಜ್ಞಾನ ಸಂಸ್ಥೆಗಳ ಸಹಭಾಗಿತ್ವದ ಪ್ರಮುಖ ಕಡಲ ಕೈಗಾರಿಕಾ ಕೇಂದ್ರವನ್ನಾಗಿ ಅಭಿವೃದ್ಧಿಪಡಿಸುವ ಅಗತ್ಯವಿದೆ ಎಂದರು.

ಸ್ವಾವಲಂಬನೆಯಾಚೆಗೆ ಜಾಗತಿಕ ಸ್ಪರ್ಧಾತ್ಮಕತೆಯತ್ತ ಭಾರತ ಸಾಗಬೇಕು. ಭಾರತೀಯ ಹಡಗುಕಟ್ಟೆಗಳು ಹಡಗು ನಿರ್ಮಾಣ, ದುರಸ್ತಿ, ನಿರ್ವಹಣೆ ಮತ್ತು ಕಡಲ ತಂತ್ರಜ್ಞಾನ ಕ್ಷೇತ್ರಗಳಲ್ಲಿ ಜಾಗತಿಕ ಮಾರುಕಟ್ಟೆಗಳಿಗೆ ಸೇವೆ ನೀಡುವ ಗುರಿ ಹೊಂದಬೇಕು ಎಂದು ಸಚಿವರು ಹೇಳಿದರು.