ನವದೆಹಲಿ: ಭಾರತೀಯ ರೈಲ್ವೆಯಲ್ಲಿನ ಪದವೀಧರ ಹುದ್ದೆಗಳಿಗೆ ಉದ್ಯೋಗಾವಕಾಶ ಕಲ್ಪಿಸುವ ನಿಟ್ಟಿನಲ್ಲಿ ರೈಲ್ವೆ ನೇಮಕಾತಿ ಮಂಡಳಿಗಳು (RRB) ಕೇಂದ್ರಿಕೃತ ಉದ್ಯೋಗ ಅಧಿಸೂಚನೆ (CEN) ಸಂಖ್ಯೆ 06/2026ರ ಅಡಿಯಲ್ಲಿ ಒಟ್ಟು 3,548 ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಹೊರಡಿಸಿವೆ. ಅರ್ಹ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ನವೆಂಬರ್ 6, 2026ರ ರಾತ್ರಿ 11.59ರವರೆಗೆ ಅರ್ಜಿ ಸಲ್ಲಿಸಬಹುದು.
ನಾಲ್ಕು ವಿಭಾಗಗಳಲ್ಲಿ ಹುದ್ದೆಗಳು
ವಾಣಿಜ್ಯ ಸೇವೆ, ರೈಲು ಕಾರ್ಯಾಚರಣೆ, ಲೆಕ್ಕಪತ್ರ ಮತ್ತು ಆಡಳಿತ ವಿಭಾಗಗಳಿಗೆ ಸಂಬಂಧಿಸಿದ ನಾಲ್ಕು ವರ್ಗಗಳ ಹುದ್ದೆಗಳನ್ನು ನೇಮಕಾತಿ ಪ್ರಕ್ರಿಯೆಯಲ್ಲಿ ಭರ್ತಿ ಮಾಡಲಾಗುತ್ತದೆ.
- ಗೂಡ್ಸ್ ಟ್ರೈನ್ ಮ್ಯಾನೇಜರ್: 2,750 ಹುದ್ದೆಗಳು
- ಸೀನಿಯರ್ ಕ್ಲರ್ಕ್ ಕಮ್ ಟೈಪಿಸ್ಟ್: 371 ಹುದ್ದೆಗಳು
- ಜೂನಿಯರ್ ಅಕೌಂಟ್ಸ್ ಅಸಿಸ್ಟೆಂಟ್ ಕಮ್ ಟೈಪಿಸ್ಟ್: 300 ಹುದ್ದೆಗಳು
- ಚೀಫ್ ಕಮರ್ಷಿಯಲ್ ಕಮ್ ಟಿಕೆಟ್ ಸೂಪರ್‌ವೈಸರ್: 127 ಹುದ್ದೆಗಳು
₹35,400ರವರೆಗೆ ಆರಂಭಿಕ ಮೂಲ ವೇತನ
ಚೀಫ್ ಕಮರ್ಷಿಯಲ್ ಕಮ್ ಟಿಕೆಟ್ ಸೂಪರ್‌ವೈಸರ್ ಹುದ್ದೆಗೆ ಏಳನೇ ಕೇಂದ್ರ ವೇತನ ಆಯೋಗದ ಪೇ ಲೆವೆಲ್-6ರಡಿ ತಿಂಗಳಿಗೆ ₹35,400 ಆರಂಭಿಕ ಮೂಲ ವೇತನ ನಿಗದಿಪಡಿಸಲಾಗಿದೆ. ಉಳಿದ ಮೂರು ವರ್ಗಗಳ ಹುದ್ದೆಗಳಿಗೆ ಪೇ ಲೆವೆಲ್-5ರಡಿ ₹29,200 ಆರಂಭಿಕ ಮೂಲ ವೇತನ ಇರಲಿದೆ. ನಿಯಮಾನುಸಾರ ಇತರ ಭತ್ಯೆಗಳು ಅನ್ವಯಿಸಲಿವೆ.

ಅರ್ಹತೆ ಮತ್ತು ಪ್ರಮುಖ ದಿನಾಂಕಗಳು
ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಪದವಿ ಅಥವಾ ಅದಕ್ಕೆ ಸಮಾನವಾದ ಅರ್ಹತೆ ಹೊಂದಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. 2027ರ ಜನವರಿ 1ರ ವೇಳೆಗೆ ಅಭ್ಯರ್ಥಿಗಳ ವಯೋಮಿತಿ 18ರಿಂದ 33 ವರ್ಷಗಳಾಗಿರಬೇಕು. ಅರ್ಹ ಮೀಸಲು ವರ್ಗಗಳಿಗೆ ನಿಯಮಾನುಸಾರ ವಯೋಮಿತಿ ಸಡಿಲಿಕೆ ಅನ್ವಯಿಸುತ್ತದೆ.
- ಆನ್‌ಲೈನ್ ಅರ್ಜಿ ಸಲ್ಲಿಸಲು ಕೊನೆಯ ದಿನ: ನವೆಂಬರ್ 6, 2026
- ಪರೀಕ್ಷಾ ಶುಲ್ಕ ಪಾವತಿಗೆ ಕೊನೆಯ ದಿನ: ನವೆಂಬರ್ 8, 2026
- ಅರ್ಜಿ ತಿದ್ದುಪಡಿ ಅವಧಿ: ನವೆಂಬರ್ 9ರಿಂದ 18, 2026
ಕಂಪ್ಯೂಟರ್ ಆಧಾರಿತ ಪರೀಕ್ಷೆ
ಆಯ್ಕೆ ಪ್ರಕ್ರಿಯೆಯಲ್ಲಿ ಮೊದಲ ಹಂತದ ಕಂಪ್ಯೂಟರ್ ಆಧಾರಿತ ಪರೀಕ್ಷೆ (CBT), ಎರಡನೇ ಹಂತದ CBT, ದಾಖಲೆ ಪರಿಶೀಲನೆ ಹಾಗೂ ಅನ್ವಯಿಸುವ ವೈದ್ಯಕೀಯ ಪರೀಕ್ಷೆ ಇರಲಿದೆ. ಅರ್ಹತೆ ಮತ್ತು ಮೆರಿಟ್ ಆಧಾರದ ಮೇಲೆ ಅಭ್ಯರ್ಥಿಗಳ ಆಯ್ಕೆ ನಡೆಯಲಿದೆ.
ನಿಯಮಾನುಸಾರ ಮೀಸಲಾತಿ, ವಯೋಮಿತಿ ಸಡಿಲಿಕೆ ಹಾಗೂ ಅರ್ಹ ಅಂಗವೈಕಲ್ಯ ಹೊಂದಿರುವ ಅಭ್ಯರ್ಥಿಗಳಿಗೆ ಸ್ಕ್ರೈಬ್ ನೆರವು ಮತ್ತು ಹೆಚ್ಚುವರಿ ಪರೀಕ್ಷಾ ಸಮಯದ ಸೌಲಭ್ಯಗಳು ಲಭ್ಯವಿರುತ್ತವೆ. ಅರ್ಹ ಅಭ್ಯರ್ಥಿಗಳಿಗೆ ನಿಯಮಗಳನ್ವಯ ಪರೀಕ್ಷಾ ಶುಲ್ಕ ಮರುಪಾವತಿಯ ಅವಕಾಶವೂ ಇರಲಿದೆ.
ಟೈಪಿಂಗ್ ಪರೀಕ್ಷೆಯಿಂದ ವಿನಾಯಿತಿ
ಜೂನಿಯರ್ ಅಕೌಂಟ್ಸ್ ಅಸಿಸ್ಟೆಂಟ್ ಕಮ್ ಟೈಪಿಸ್ಟ್ ಹಾಗೂ ಸೀನಿಯರ್ ಕ್ಲರ್ಕ್ ಕಮ್ ಟೈಪಿಸ್ಟ್ ಹುದ್ದೆಗಳಿಗೆ ಕಂಪ್ಯೂಟರ್ ಆಧಾರಿತ ಟೈಪಿಂಗ್ ಕೌಶಲ ಪರೀಕ್ಷೆಯಿಂದ ವಿನಾಯಿತಿ ನೀಡಲಾಗಿದೆ ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ. ಆದರೆ ಅಭ್ಯರ್ಥಿಗಳು ಮೂಲಭೂತ ಕಂಪ್ಯೂಟರ್ ಜ್ಞಾನ ಮತ್ತು ಟೈಪಿಂಗ್ ಸಾಮರ್ಥ್ಯ ಹೊಂದಿರಬೇಕಾಗಿದ್ದು, ನೇಮಕಾತಿಯ ನಂತರ ನಿಗದಿತ ನಿಯಮಗಳಂತೆ ಅವುಗಳನ್ನು ಪರಿಶೀಲಿಸಲಾಗುತ್ತದೆ.
ಅಭ್ಯರ್ಥಿಗಳು ಹುದ್ದೆಗಳ ವಿವರ, ಅರ್ಹತಾ ಮಾನದಂಡಗಳು, ಮೀಸಲಾತಿ ನಿಯಮಗಳು ಹಾಗೂ ಅರ್ಜಿ ಸಲ್ಲಿಸುವ ವಿಧಾನವನ್ನು ಅಧಿಕೃತ ರೈಲ್ವೆ ನೇಮಕಾತಿ ಮಂಡಳಿಯ ವೆಬ್‌ಸೈಟ್‌ನಲ್ಲಿ ಪರಿಶೀಲಿಸಿ ನಿಗದಿತ ಅವಧಿಯೊಳಗೆ ಅರ್ಜಿ ಸಲ್ಲಿಸಬೇಕು.
