ಕಲಬುರಗಿ: ಅತಿಥಿ ಉಪನ್ಯಾಸಕರ ಗೌರವಧನ ಹೆಚ್ಚಳ, ಎನ್ಪಿಎಸ್ನಿಂದ ಹಳೆಯ ಪಿಂಚಣಿ ಯೋಜನೆಗೆ ವರ್ಗಾವಣೆ, ನೇಮಕಾತಿಯಲ್ಲಿನ ತಾರತಮ್ಯ ನಿವಾರಣೆ ಹಾಗೂ ವೇತನ ಬಡ್ತಿ ಸೇರಿದಂತೆ ಶಿಕ್ಷಕರ ಸಮಸ್ಯೆಗಳ ಪರವಾಗಿ ಧ್ವನಿ ಎತ್ತಿರುವ ಎನ್ಡಿಎ ಬೆಂಬಲಿತ ಬಿಜೆಪಿ ಅಭ್ಯರ್ಥಿ ಶಶೀಲ್ ಜಿ. ನಮೋಶಿ ಅವರನ್ನು ಮತ್ತೊಮ್ಮೆ ಪ್ರಥಮ ಪ್ರಾಶಸ್ತ್ಯದ ಮತಗಳಿಂದ ಆಯ್ಕೆ ಮಾಡಬೇಕು ಎಂದು ವಿಧಾನ ಪರಿಷತ್ ಸದಸ್ಯ ಡಾ. ರವಿ ಸಿ.ಟಿ. ಮನವಿ ಮಾಡಿದರು.
ಕಲಬುರಗಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿಧಾನ ಪರಿಷತ್ ಚುನಾವಣೆ ಸರ್ಕಾರದ ಅಧಿಕಾರ ಬದಲಾವಣೆಗೆ ಕಾರಣವಾಗದಿದ್ದರೂ, ಜನರ ಅಭಿಪ್ರಾಯವನ್ನು ಪ್ರತಿಬಿಂಬಿಸುವ ಮಹತ್ವದ ವೇದಿಕೆಯಾಗಿದೆ. ವಿದ್ಯಾವಂತ ಮತದಾರರು ಪ್ರಬುದ್ಧ ನಿರ್ಧಾರ ಕೈಗೊಂಡು ನಮೋಶಿ ಅವರನ್ನು ಬೆಂಬಲಿಸಬೇಕು ಎಂದರು.
ಬಿಜೆಪಿಯು ರಾಷ್ಟ್ರ ಮೊದಲು ಎಂಬ ನೀತಿಯೊಂದಿಗೆ ಬಡವರ ಸಬಲೀಕರಣಕ್ಕೆ ಆದ್ಯತೆ ನೀಡುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ನೇರ ನಗದು ವರ್ಗಾವಣೆ (ಡಿಬಿಟಿ) ವ್ಯವಸ್ಥೆಯ ಮೂಲಕ ₹36 ಲಕ್ಷ ಕೋಟಿಗೂ ಅಧಿಕ ಹಣವನ್ನು ಫಲಾನುಭವಿಗಳಿಗೆ ತಲುಪಿಸಲಾಗಿದೆ. ಇದರಿಂದ ಮಧ್ಯವರ್ತಿಗಳ ಮೂಲಕ ಹಣ ಸೋರಿಕೆಯಾಗುವುದನ್ನು ತಡೆಯಲು ಸಾಧ್ಯವಾಗಿದೆ ಎಂದು ಅವರು ಹೇಳಿದರು.
‘ಗ್ಯಾರಂಟಿ ಎಂದರೆ ಹಗರಣ, ಬೆಲೆ ಏರಿಕೆ’
ರಾಜ್ಯದ ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ರವಿ ಸಿ.ಟಿ., ಸರ್ಕಾರದ ಗ್ಯಾರಂಟಿ ಯೋಜನೆಗಳ ಹೆಸರಿನಲ್ಲಿ ಹಗರಣಗಳು ನಡೆಯುತ್ತಿವೆ ಮತ್ತು ಬೆಲೆ ಏರಿಕೆಯಿಂದ ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ಆರೋಪಿಸಿದರು.
ತೊಗರಿ, ಜೋಳ ಮತ್ತು ರಾಗಿ ಖರೀದಿಗೆ ಸಂಬಂಧಿಸಿದ ಬಾಕಿ ಹಣವನ್ನು ರೈತರಿಗೆ ಪಾವತಿಸಿಲ್ಲ. ಹಾಲು ಉತ್ಪಾದಕರಿಗೆ ನೀಡಬೇಕಾದ ಪ್ರೋತ್ಸಾಹಧನದಲ್ಲಿ ₹650 ಕೋಟಿಗೂ ಅಧಿಕ ಬಾಕಿ ಉಳಿದಿದೆ ಎಂದು ದೂರಿದರು.

ಅತಿಥಿ ಉಪನ್ಯಾಸಕರಿಗೆ ಮೂರರಿಂದ ನಾಲ್ಕು ತಿಂಗಳಿನಿಂದ ಗೌರವಧನ ಪಾವತಿಯಾಗಿಲ್ಲ. ಗುತ್ತಿಗೆ ನೌಕರರಿಗೂ ಹಲವು ತಿಂಗಳಿಂದ ಸಂಬಳ ದೊರೆತಿಲ್ಲ ಎಂದು ಆರೋಪಿಸಿದ ಅವರು, ವೃದ್ಧರು, ವಿಧವೆಯರು ಮತ್ತು ಅಂಗವಿಕಲರು ಸೇರಿದಂತೆ 23 ಲಕ್ಷ ಜನರ ಪಿಂಚಣಿ ಸ್ಥಗಿತಗೊಂಡಿದೆ. ಕೆಲವರಿಗೆ ಎಂಟರಿಂದ ಒಂಬತ್ತು ತಿಂಗಳಿನಿಂದ ಪಿಂಚಣಿ ಬಂದಿಲ್ಲ ಎಂದು ಹೇಳಿದರು.
ಹಾಲು, ಪೆಟ್ರೋಲ್, ಡೀಸೆಲ್, ವಿದ್ಯುತ್, ಮುದ್ರಾಂಕ ಶುಲ್ಕ, ಆಸ್ತಿ ನೋಂದಣಿ ಸೇರಿದಂತೆ ವಿವಿಧ ಸೇವೆಗಳ ದರ ಏರಿಕೆಯಿಂದ ಜನರ ಆರ್ಥಿಕ ಹೊರೆ ಹೆಚ್ಚಾಗಿದೆ ಎಂದು ಟೀಕಿಸಿದರು.
ಜನರ ಸಮಸ್ಯೆಗಳ ಚರ್ಚೆಗೆ ಆದ್ಯತೆ ನೀಡಲಿ
ರಾಜ್ಯದ ಬರ ಪರಿಸ್ಥಿತಿ, ಕುಡಿಯುವ ನೀರಿನ ಸಮಸ್ಯೆ, ವಿದ್ಯುತ್ ಕೊರತೆ, ರೈತರ ಬಾಕಿ ಹಣ ಹಾಗೂ ಭವಿಷ್ಯದ ಅಭಿವೃದ್ಧಿ ಕುರಿತು ಸಂಪುಟ ಸಭೆಯಲ್ಲಿ ಚರ್ಚೆಯಾಗಬೇಕಿತ್ತು. ಆದರೆ ಮುಖ್ಯಮಂತ್ರಿ ಸ್ಟಿಂಗ್ ಆಪರೇಷನ್ ವಿಚಾರವಾಗಿ ಸಚಿವರಿಗೆ ಎಚ್ಚರಿಕೆ ನೀಡಿರುವುದು ಸರಿಯಲ್ಲ ಎಂದು ರವಿ ಸಿ.ಟಿ. ಆಕ್ಷೇಪಿಸಿದರು.
ರಾಜ್ಯದ ಹಲವು ಜಿಲ್ಲೆಗಳಲ್ಲಿ ಬರ ಪರಿಸ್ಥಿತಿ ಇದ್ದರೂ ಪರಿಹಾರ ಕಾಮಗಾರಿಗಳು ಸಮರ್ಪಕವಾಗಿ ನಡೆಯುತ್ತಿಲ್ಲ ಎಂದು ಆರೋಪಿಸಿದ ಅವರು, ಜನರ ನೈಜ ಸಮಸ್ಯೆಗಳಿಂದ ಗಮನ ಬೇರೆಡೆಗೆ ಸೆಳೆಯಲು ಸ್ಟಿಂಗ್ ಆಪರೇಷನ್ ವಿಚಾರವನ್ನು ಬಳಸಲಾಗುತ್ತಿದೆ ಎಂದು ದೂರಿದರು. ಪ್ರಕರಣದ ಕುರಿತು ಸಮಗ್ರ ತನಿಖೆ ನಡೆಯಬೇಕು ಎಂದು ಒತ್ತಾಯಿಸಿದರು.
ಎಸ್ಐಆರ್ ವಿಚಾರದಲ್ಲಿ ಕಾಂಗ್ರೆಸ್ಗೆ ಟೀಕೆ
ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ (ಎಸ್ಐಆರ್) ವಿಚಾರದಲ್ಲಿ ಕಾಂಗ್ರೆಸ್ ದ್ವಂದ್ವ ನಿಲುವು ತಾಳುತ್ತಿದೆ ಎಂದು ರವಿ ಸಿ.ಟಿ. ಆರೋಪಿಸಿದರು. ನಕಲಿ ಮತದಾರರಿದ್ದಾರೆ ಎಂದು ಆರೋಪಿಸುವ ಪಕ್ಷವೇ ಮತದಾರರ ಪಟ್ಟಿ ಶುದ್ಧೀಕರಣವನ್ನು ವಿರೋಧಿಸುವುದು ಸರಿಯಲ್ಲ ಎಂದರು.
ಫಾರಂ-7 ಮೂಲಕ ಆಕ್ಷೇಪಣೆ ಸಲ್ಲಿಸಿದ ಮಾತ್ರಕ್ಕೆ ಮತದಾರರ ಹೆಸರು ತಕ್ಷಣವೇ ಅಳಿಸಿಹೋಗುವುದಿಲ್ಲ. ಸಂಬಂಧಪಟ್ಟ ಅಧಿಕಾರಿಗಳು ನೋಟಿಸ್ ನೀಡಿ ಪರಿಶೀಲನೆ ನಡೆಸಿದ ಬಳಿಕವೇ ನಿರ್ಧಾರ ಕೈಗೊಳ್ಳುತ್ತಾರೆ. ಅನುಮಾನಾಸ್ಪದ ಹೆಸರುಗಳನ್ನು ಪರಿಶೀಲಿಸುವುದು ಚುನಾವಣಾ ಅಧಿಕಾರಿಗಳ ಜವಾಬ್ದಾರಿಯಾಗಿದೆ ಎಂದು ಹೇಳಿದರು.
ಸಂವಿಧಾನಾತ್ಮಕ ಸಂಸ್ಥೆಗಳ ಬಗ್ಗೆ ಅಪನಂಬಿಕೆ ಮೂಡಿಸುವ ಪ್ರಯತ್ನಗಳಿಗೆ ವಿದ್ಯಾವಂತ ಮತದಾರರು ತಮ್ಮ ನಿರ್ಧಾರದ ಮೂಲಕ ಉತ್ತರಿಸಬೇಕು. ಪ್ರಜಾಪ್ರಭುತ್ವ ಮತ್ತು ಸಂವಿಧಾನದ ರಕ್ಷಣೆಯ ದೃಷ್ಟಿಯಿಂದ ಶಶೀಲ್ ಜಿ. ನಮೋಶಿ ಅವರಿಗೆ ಪ್ರಥಮ ಪ್ರಾಶಸ್ತ್ಯದ ಮತ ನೀಡಿ ಗೆಲ್ಲಿಸಬೇಕು ಎಂದು ಮನವಿ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ಶಾಸಕರಾದ ಬಸವರಾಜ ಮತ್ತಿಮಡು ಮತ್ತು ಅವಿನಾಶ್ ಜಾಧವ್, ಬಿಜೆಪಿ ಕಲಬುರಗಿ ಗ್ರಾಮಾಂತರ ಜಿಲ್ಲಾ ಘಟಕದ ಅಧ್ಯಕ್ಷ ಅಶೋಕ್ ಬಗಲಿ, ವಿಧಾನ ಪರಿಷತ್ ಸದಸ್ಯ ಬಿ.ಜಿ. ಪಾಟೀಲ್, ಅಭ್ಯರ್ಥಿ ಶಶೀಲ್ ಜಿ. ನಮೋಶಿ, ಮಾಜಿ ಸಂಸದ ಉಮೇಶ್ ಜಾಧವ್ ಸೇರಿದಂತೆ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.
