ವಿಧಾನಸೌಧ ಸ್ಫೋಟದಂತೆ ಎಐ ರೀಲ್ಸ್ ಸೃಷ್ಟಿ: ಬಿಹಾರ ಮೂಲದ ಯುವಕ ಬಂಧನ

ಬೆಂಗಳೂರು: ವಿಧಾನಸೌಧ ಸ್ಫೋಟಗೊಂಡಂತೆ ಬಿಂಬಿಸುವ ಕೃತಕ ಬುದ್ಧಿಮತ್ತೆ (ಎಐ) ಆಧಾರಿತ ನಕಲಿ ವಿಡಿಯೋ ಸೃಷ್ಟಿಸಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟ ಆರೋಪದ ಮೇಲೆ ಬಿಹಾರ ಮೂಲದ ಯುವಕನನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ.

ವಿಧಾನಸೌಧದ ಮುಂದೆ ತೆಗೆದಿದ್ದ ಫೋಟೋಗಳನ್ನು ಬಳಸಿಕೊಂಡು ಸ್ಫೋಟದ ದೃಶ್ಯಗಳಿರುವ ರೀಲ್ಸ್ ಸೃಷ್ಟಿಸಲಾಗಿತ್ತು. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ಬಳಿಕ ಪೊಲೀಸರ ಗಮನಕ್ಕೆ ಬಂದಿದ್ದು, ವಿಧಾನಸೌಧದ ಭದ್ರತೆಯ ದೃಷ್ಟಿಯಿಂದ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ತನಿಖೆ ಕೈಗೊಳ್ಳಲಾಗಿದೆ. ಈ ಸಂಬಂಧ ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬಂಧಿತ ಯುವಕ ಜೆ.ಸಿ. ರಸ್ತೆಯಲ್ಲಿರುವ ಪೈಪ್ ಅಂಗಡಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಎಂದು ತಿಳಿದುಬಂದಿದೆ. ಎಐ ತಂತ್ರಜ್ಞಾನ ಬಳಸಿ ನಕಲಿ ವಿಡಿಯೋ ಸೃಷ್ಟಿಸಿದ ಹಿಂದಿನ ಉದ್ದೇಶವೇನು ಎಂಬುದನ್ನು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಕೃತ್ಯದ ಗಂಭೀರತೆಯನ್ನು ಅರಿಯದೆ ವಿಡಿಯೋ ತಯಾರಿಸಿದ್ದನೇ ಅಥವಾ ಇದರ ಹಿಂದೆ ಯಾವುದೇ ದುರುದ್ದೇಶವಿತ್ತೇ ಎಂಬ ಆಯಾಮಗಳಲ್ಲಿಯೂ ತನಿಖೆ ಮುಂದುವರಿದಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.