ಶಿವಮೊಗ್ಗ ದಸರಾ ಆನೆ ಅವಾಂತರ: ‘ಸೋಮಣ್ಣ’ನ ನೋವಿನ ಬಗ್ಗೆ ಗಮನಸೆಳೆದ ನಟಿ ರಮ್ಯಾ

ಬೆಂಗಳೂರು: ಶಿವಮೊಗ್ಗ ದಸರಾ ಜಂಬೂಸವಾರಿ ಮೆರವಣಿಗೆಯಲ್ಲಿ ಆನೆ ಸೋಮಣ್ಣ ನಿಯಂತ್ರಣ ತಪ್ಪಿದ ಘಟನೆ ವ್ಯಾಪಕ ಚರ್ಚೆಗೆ ಗ್ರಾಸವಾಗಿರುವ ಬೆನ್ನಲ್ಲೇ, ನಟಿ ರಮ್ಯಾ ದಿವ್ಯಸ್ಪಂದನ ಅವರು ಆನೆಯ ಅಸಹಾಯಕತೆ ಮತ್ತು ಅದರ ಆರೋಗ್ಯದ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. ಸೋಮಣ್ಣ ನೋವಿನಿಂದ ಬಳಲುತ್ತಿರುವುದು ಸ್ಪಷ್ಟವಾಗಿ ಕಾಣುತ್ತಿದ್ದು, ಅದಕ್ಕೆ ತಕ್ಷಣ ವೈದ್ಯಕೀಯ ನೆರವು ಒದಗಿಸಬೇಕು ಎಂದು ಅವರು ಗಮನಸೆಳೆದಿದ್ದಾರೆ.

ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಈ ಕುರಿತು ಪೋಸ್ಟ್ ಮಾಡಿರುವ ರಮ್ಯಾ, ಕೆಲವು ದಿನಗಳ ಹಿಂದಷ್ಟೇ ಶಿಬಿರದಿಂದ ಮೆರವಣಿಗೆಗಾಗಿ ಕರೆತರಲಾಗಿದ್ದ ಸೋಮಣ್ಣನನ್ನು ಜನರಿಂದ ತುಂಬಿದ್ದ ಕಿರಿದಾದ ರಸ್ತೆಗಳಲ್ಲಿ ಕರೆದೊಯ್ಯಲಾಗಿತ್ತು ಎಂದು ತಿಳಿಸಿದ್ದಾರೆ. ಭಯ ಮತ್ತು ಆತಂಕದಿಂದ ಆನೆ ನಿಯಂತ್ರಣ ತಪ್ಪಿ ಓಡಾಡಿದೆ. ಅದೃಷ್ಟವಶಾತ್ ಯಾರಿಗೂ ಗಾಯವಾಗಿಲ್ಲ. ಒಂದು ವೇಳೆ ಯಾರಿಗಾದರೂ ಹಾನಿಯಾಗಿದ್ದರೆ, ಶಿಕ್ಷೆಗೆ ಗುರಿಯಾಗಬೇಕಾಗಿದ್ದ ಆನೆಯೇ ಆಗಿರುತ್ತಿತ್ತು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

“ಸೋಮಣ್ಣ ಕುಂಟುತ್ತಿರುವುದು ಸ್ಪಷ್ಟವಾಗಿ ಕಾಣುತ್ತದೆ. ಅದು ನೋವಿನಲ್ಲಿದೆ. ವೈದ್ಯಕೀಯ ಚಿಕಿತ್ಸೆಗಾಗಿ ಅದನ್ನು ಕರೆದೊಯ್ಯಲು ಟ್ರಕ್ ವ್ಯವಸ್ಥೆ ಮಾಡಬಹುದಿತ್ತಲ್ಲವೇ?” ಎಂದು ರಮ್ಯಾ ಪ್ರಶ್ನಿಸಿದ್ದಾರೆ. ಅರಣ್ಯ ಸಚಿವ ರಾಮಲಿಂಗಾ ರೆಡ್ಡಿ ಅವರು ಪ್ರಾಣಿ-ಪಕ್ಷಿಗಳ ಬಗ್ಗೆ ಕಾಳಜಿ ಹೊಂದಿರುವುದನ್ನು ಉಲ್ಲೇಖಿಸಿರುವ ಅವರು, ಈ ವಿಚಾರದಲ್ಲಿ ತುರ್ತಾಗಿ ಗಮನಹರಿಸಿ ಸೋಮಣ್ಣನಿಗೆ ಚಿಕಿತ್ಸೆ ಕೊಡಿಸಲು ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದ್ದಾರೆ.

ಇದಲ್ಲದೆ, ಇಂತಹ ಮೆರವಣಿಗೆಗಳಲ್ಲಿ ಶಿಬಿರದ ಆನೆಗಳನ್ನು ಬಳಸುವ ವಿಚಾರ ಬಗ್ಗೆ ಪರಿಶೀಲಿಸಬೇಕೆಂದು ಎಂದು ರಮ್ಯಾ ಸಲಹೆ ನೀಡಿದ್ದಾರೆ. ಆನೆಗಳು ಸೇರಿದಂತೆ ಎಲ್ಲ ಪ್ರಾಣಿಗಳಿಗೂ ಕರುಣೆ ಮತ್ತು ಸಹಾನುಭೂತಿ ತೋರಿಸುವುದು ಅಗತ್ಯ ಎಂದು ಅವರು ಪ್ರತಿಪಾದಿಸಿದ್ದಾರೆ.

This is Somanna, an elephant brought from a camp a few days ago for a procession in Shivamogga. He was led through narrow streets packed with people. Frightened and anxious, he ran amok. Thankfully no one was hurt, or he would have been the one punished.
You can clearly see Somanna limping. He is in pain. Couldn’t a truck have been arranged to take him for medical care?
@RLR_BTM Sir, I know how much you love animals. Please look into this urgently, because Somanna needs medical care now. I also request that camp elephants no longer be allowed for such processions. Elephants, and all animals, deserve our compassion and empathy.

— Ramya/Divya Spandana (@divyaspandana) October 21, 2026