ಬೆಂಗಳೂರು: ಕರ್ನಾಟಕ ಗೃಹ ಮಂಡಳಿ (ಕೆಎಚ್ಬಿ), ಗ್ರೇಟರ್ ಬೆಂಗಳೂರು ಪ್ರಾಧಿಕಾರ ಸೇರಿದಂತೆ ವಿವಿಧ ನಿಗಮ ಮತ್ತು ಇಲಾಖೆಗಳಲ್ಲಿನ ಖಾಲಿ ಇರುವ ಒಟ್ಟು 218 ಕಿರಿಯ ಎಂಜಿನಿಯರ್ (ಜೆಇ) ಹುದ್ದೆಗಳ ನೇಮಕಾತಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ಅಧಿಸೂಚನೆ ಹೊರಡಿಸಿದೆ.
ಒಟ್ಟು ಹುದ್ದೆಗಳ ಪೈಕಿ ಉಳಿಕೆ ಮೂಲ ವೃಂದದ 187 ಹಾಗೂ ಕಲ್ಯಾಣ ಕರ್ನಾಟಕ ವೃಂದದ 31 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ನವೆಂಬರ್ 26 ಕೊನೆಯ ದಿನವಾಗಿದ್ದು, ಶುಲ್ಕ ಪಾವತಿಗೆ ನವೆಂಬರ್ 27 ಅಂತಿಮ ದಿನವಾಗಿದೆ.
ಡಿಪ್ಲೊಮಾ ಅಥವಾ ತತ್ಸಮಾನ ವಿದ್ಯಾರ್ಹತೆ ಹೊಂದಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಜನವರಿಯಲ್ಲಿ ಲಿಖಿತ ಪರೀಕ್ಷೆ ನಡೆಯಲಿದ್ದು, ಕನ್ನಡ ಭಾಷಾ ಪರೀಕ್ಷೆಯನ್ನು ಜನವರಿ 8ರಂದು ನಡೆಸಲು ನಿರ್ಧರಿಸಲಾಗಿದೆ.

ನಗರಾಭಿವೃದ್ಧಿ ಪ್ರಾಧಿಕಾರಗಳು, ನಗರ ಮತ್ತು ಗ್ರಾಮಾಂತರ ಯೋಜನಾ ಆಯುಕ್ತಾಲಯ, ಗ್ರೇಟರ್ ಬೆಂಗಳೂರು ಪ್ರಾಧಿಕಾರ, ಕರ್ನಾಟಕ ಗೃಹ ಮಂಡಳಿ, ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ ನಿಯಮಿತ, ಅಂತರ್ಜಲ ನಿರ್ದೇಶನಾಲಯ, ಕರ್ನಾಟಕ ರಾಜ್ಯ ಖನಿಜ ನಿಗಮ ಹಾಗೂ ಕರ್ನಾಟಕ ಕೊಳೆಗೇರಿ ಅಭಿವೃದ್ಧಿ ನಿಗಮಗಳಲ್ಲಿನ ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ.
ಅರ್ಹತೆ, ಅರ್ಜಿ ಸಲ್ಲಿಕೆ ವಿಧಾನ ಹಾಗೂ ಇತರ ಮಾಹಿತಿಗಾಗಿ ಕೆಇಎ ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡುವಂತೆ ಕೆಇಎ ಕಾರ್ಯನಿರ್ವಾಹಕ ನಿರ್ದೇಶಕ ಹೆಚ್. ಪ್ರಸನ್ನ (ಐಎಎಸ್) ತಿಳಿಸಿದ್ದಾರೆ.
