ಬೆಂಗಳೂರು: ಬೆಂಗಳೂರಿನ ರಸ್ತೆ ಗುಂಡಿಗಳ ಸಮಸ್ಯೆಯನ್ನು ಮುಂದಿಟ್ಟುಕೊಂಡು ವಿಧಾನಸಭೆ ಪ್ರತಿಪಕ್ಷ ನಾಯಕ ಆರ್.ಅಶೋಕ್ ಅವರು ಬೆಂಗಳೂರು ನಗರಾಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ರಸ್ತೆ ಗುಂಡಿಗಳ ಬಗ್ಗೆ ರೀಲ್ಸ್ ಮಾಡುವುದೇ ಯಾವಾಗ ಎಂದು ಅವರು ಪ್ರಶ್ನಿಸಿದ್ದಾರೆ.
ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ಆರ್.ಅಶೋಕ್, ಬೆಂಗಳೂರಿನ ವಿವಿಧ ಭಾಗಗಳ ರಸ್ತೆ ಗುಂಡಿಗಳ ಫೋಟೋಗಳನ್ನು ಹಂಚಿಕೊಂಡು ರಾಜ್ಯ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ. ವಿನಾಯಕ ಲೇಔಟ್, ನಾಗರಭಾವಿ, ಮುದ್ದಿನಪಾಳ್ಯ ರಸ್ತೆ, ಜಯನಗರ 8ನೇ ಬ್ಲಾಕ್ ಸೇರಿದಂತೆ ನಗರದ ಹಲವು ಪ್ರದೇಶಗಳಲ್ಲಿ ರಸ್ತೆ ಗುಂಡಿಗಳ ಸಮಸ್ಯೆ ಗಂಭೀರವಾಗಿದೆ ಎಂದು ಆರೋಪಿಸಿದ್ದಾರೆ.

ಎಕ್ಸ್ ಪೋಸ್ಟ್ನಲ್ಲಿ ಆರ್.ಅಶೋಕ್ ಹೇಳಿದ್ದೇನು?
ರಾಜ್ಯ ಸರ್ಕಾರ ‘ಬ್ರ್ಯಾಂಡ್ ಬೆಂಗಳೂರು’ ನಿರ್ಮಾಣದ ಮಾತು ಆಡುತ್ತಿದ್ದರೂ, ವಾಸ್ತವದಲ್ಲಿ ನಗರ ರಸ್ತೆಗಳನ್ನು ಗುಂಡಿಗಳಿಂದ ಮುಕ್ತಗೊಳಿಸಲು ವಿಫಲವಾಗಿದೆ ಎಂದು ಆರ್.ಅಶೋಕ್ ಟೀಕಿಸಿದ್ದಾರೆ.
ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮತ್ತು ನಗರಾಭಿವೃದ್ಧಿ ಇಲಾಖೆಯ ವೈಫಲ್ಯದಿಂದ ಬೆಂಗಳೂರಿನ ಜನರು ಜೀವ ಕೈಯಲ್ಲಿ ಹಿಡಿದು ಸಂಚರಿಸುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಅವರು ಆರೋಪಿಸಿದ್ದಾರೆ.
ಕ್ಯಾಮೆರಾ ಮುಂದೆ ಅಧಿಕಾರಿಗಳನ್ನು ಗದರಿಸಿ ರೀಲ್ಸ್ ಮಾಡುವುದಕ್ಕಿಂತ ಮೊದಲು ರಸ್ತೆಗಿಳಿದು ಗುಂಡಿಗಳನ್ನು ಮುಚ್ಚಿಸುವ ಕೆಲಸ ಮಾಡಬೇಕು. ಇಲ್ಲದಿದ್ದರೆ ಬೆಂಗಳೂರಿನ ಜನರು ತಕ್ಕ ಉತ್ತರ ನೀಡಲಿದ್ದಾರೆ ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.
ಬೆಂಗಳೂರಿನ ರಸ್ತೆ ಗುಂಡಿಗಳ ಬಗ್ಗೆ ರೀಲ್ಸ್ ಮಾಡುವುದು ಯಾವಾಗ ಬೆಂಗಳೂರು ನಗರಾಭಿವೃದ್ಧಿ ಸಚಿವ @krishnabgowda ಅವರೇ?
ಬೆಂಗಳೂರಿನ ಜನತೆ ಪತ್ರಿಕೆಗೆ ಕಳುಹಿಸಿರುವ ಈ ನರಕಸದೃಶ ರಸ್ತೆಗುಂಡಿಗಳು ಫೋಟೋಗಳನ್ನು ಒಮ್ಮೆ ಕಣ್ಣು ಬಿಟ್ಟು ನೋಡಿ! ವಿನಾಯಕ ಲೇಔಟ್ ನಾಗರಭಾವಿ, ಮುದ್ದಿನಪಾಳ್ಯ ರಸ್ತೆ, ಜಯನಗರ 8ನೇ ಬ್ಲಾಕ್… ಹೀಗೆ ರಾಜಧಾನಿಯ ಪ್ರತಿ… pic.twitter.com/1OAnr6eFOn
— R. Ashoka (@RAshokaBJP) June 29, 2026
