ನ.13ರಂದು ಉದ್ಘಾಟನೆಯಾದರೂ ನ.14ರಿಂದ ‘ನಮ್ಮ ಮೆಟ್ರೋ’ ಪಿಂಕ್ ಲೈನ್ ರೈಲು ಸಂಚಾರ

ಬೆಂಗಳೂರು: ಬೆಂಗಳೂರಿನ ಮೆಟ್ರೋ ಪ್ರಯಾಣಿಕರಿಗೆ ಸಿಹಿ ಸುದ್ದಿ. ನಮ್ಮ ಮೆಟ್ರೋ ಪಿಂಕ್ ಲೈನ್‌ನ 7.5 ಕಿ.ಮೀ. ಉದ್ದದ ಎತ್ತರಿಸಿದ ಮಾರ್ಗ ನವೆಂಬರ್ 14ರ ಬೆಳಗ್ಗೆ 6 ಗಂಟೆಯಿಂದ ಸಾರ್ವಜನಿಕರ ಸಂಚಾರಕ್ಕೆ ಮುಕ್ತವಾಗಲಿದೆ. ನವೆಂಬರ್ 13ರಂದು ಅಧಿಕೃತ ಉದ್ಘಾಟನೆ ನಡೆಯಲಿದೆ ಎಂದು ಬೆಂಗಳೂರು ಅಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ತಿಳಿಸಿದ್ದಾರೆ.

ಕಾಳೇನ ಅಗ್ರಹಾರದಿಂದ ತಾವರೆಕೆರೆ ಹಾಗೂ ಸುದ್ದಗುಂಟೆಪಾಳ್ಯದವರೆಗೆ ಈ ಮಾರ್ಗ ಸಂಪರ್ಕ ಕಲ್ಪಿಸಲಿದೆ. ಜಯದೇವ ನಿಲ್ದಾಣದಲ್ಲಿ ಎಲೆಕ್ಟ್ರಾನಿಕ್ ಸಿಟಿ ಮಾರ್ಗದೊಂದಿಗೆ ಇಂಟರ್‌ಚೇಂಜ್ ವ್ಯವಸ್ಥೆಯೂ ಇರಲಿದೆ.

ಆರಂಭದಲ್ಲಿ ಪ್ರತಿ 8 ನಿಮಿಷಕ್ಕೊಂದು ರೈಲು ಸಂಚರಿಸಲಿದ್ದು, ಐದು ರೈಲುಗಳನ್ನು ನಿಯೋಜಿಸಲಾಗಿದೆ. ನಾಲ್ಕು ರೈಲುಗಳು ಕಾರ್ಯಾಚರಣೆ ನಡೆಸಲಿದ್ದು, ಒಂದು ರೈಲನ್ನು ಮೀಸಲಿಡಲಾಗುತ್ತದೆ. ಸಿಗ್ನಲಿಂಗ್ ವ್ಯವಸ್ಥೆ ಸ್ಥಿರಗೊಂಡ ಬಳಿಕ ರೈಲುಗಳ ನಡುವಿನ ಅಂತರ ಕಡಿಮೆ ಮಾಡುವ ಉದ್ದೇಶವಿದೆ. ಪ್ರಯಾಣ ದರದ ಬಗ್ಗೆ ಇನ್ನೂ ಚರ್ಚೆಯಾಗಿಲ್ಲ.

ಪಿಂಕ್ ಲೈನ್ ಆರಂಭದೊಂದಿಗೆ ಬೆಂಗಳೂರು ಮೆಟ್ರೋ ಜಾಲ ಸುಮಾರು 103 ಕಿ.ಮೀ.ಗೆ ವಿಸ್ತರಣೆಯಾಗಲಿದೆ. ಮುಂದಿನ 18 ತಿಂಗಳಲ್ಲಿ 170 ಕಿ.ಮೀ.ಗೂ ಹೆಚ್ಚು ಮೆಟ್ರೋ ಜಾಲ ನಿರ್ಮಿಸುವ ಗುರಿಯನ್ನು ಸರ್ಕಾರ ಹೊಂದಿದೆ. ದೀರ್ಘಾವಧಿಯಲ್ಲಿ 400ರಿಂದ 500 ಕಿ.ಮೀ. ಜಾಲ ನಿರ್ಮಿಸುವ ಯೋಜನೆಯೂ ಇದೆ.

ಮೆಟ್ರೋ ವಿಸ್ತರಣೆಗೆ ಬೃಹತ್ ಯೋಜನೆ

ಬೆಂಗಳೂರು ಮೆಟ್ರೋ ವಿಸ್ತರಣೆಯ ಭಾಗವಾಗಿ ಸಿಲ್ಕ್ ಬೋರ್ಡ್‌ನಿಂದ ಕೆ.ಆರ್. ಪುರಂ ಮೂಲಕ ವಿಮಾನ ನಿಲ್ದಾಣದವರೆಗೆ 59 ಕಿ.ಮೀ. ಉದ್ದದ ಬ್ಲೂ ಲೈನ್ ಯೋಜನೆಗೆ ಆದ್ಯತೆ ನೀಡಲಾಗಿದೆ.

ಜೆ.ಪಿ. ನಗರ 4ನೇ ಹಂತದಿಂದ ಹೆಬ್ಬಾಳದವರೆಗೆ 32 ಕಿ.ಮೀ. ಆರೆಂಜ್ ಲೈನ್ ಹಾಗೂ ಹೊಸಹಳ್ಳಿಯಿಂದ ಕಡಬಗೆರೆಯವರೆಗೆ 12.5 ಕಿ.ಮೀ. ಮಾರ್ಗದ ಯೋಜನೆಯೂ ಪ್ರಸ್ತಾವನೆಯಲ್ಲಿದೆ. ಈ ಎರಡೂ ವಿಭಾಗಗಳ ಟೆಂಡರ್ ಪ್ರಕ್ರಿಯೆಯನ್ನು ಆರು ತಿಂಗಳಲ್ಲಿ ಪೂರ್ಣಗೊಳಿಸುವ ಗುರಿ ಹೊಂದಲಾಗಿದೆ.

ಇನ್ನು ಸರ್ಜಾಪುರದಿಂದ ಹೆಬ್ಬಾಳದವರೆಗೆ 37.8 ಕಿ.ಮೀ. ಉದ್ದದ ರೆಡ್ ಲೈನ್ ಯೋಜನೆಗೆ ಕೇಂದ್ರದ ಅನುಮೋದನೆಗಾಗಿ ರಾಜ್ಯ ಸರ್ಕಾರ ಕಾಯುತ್ತಿದೆ. ಅನುಮತಿ ದೊರೆತರೆ ಮುಂದಿನ ವರ್ಷದ ಅಂತ್ಯದೊಳಗೆ ಟೆಂಡರ್ ಪೂರ್ಣಗೊಳಿಸಿ ಕಾಮಗಾರಿ ಆರಂಭಿಸುವ ನಿರೀಕ್ಷೆಯಿದೆ.

ಪಿಂಕ್ ಲೈನ್‌ನ ಉಳಿದ 13.7 ಕಿ.ಮೀ. ಭೂಗತ ಮಾರ್ಗವನ್ನು ನಾಗವಾರದವರೆಗೆ ವಿಸ್ತರಿಸಿದ ಬಳಿಕ ಸಂಪೂರ್ಣ ಮಾರ್ಗ 21.2 ಕಿ.ಮೀ. ಉದ್ದ ಹೊಂದಲಿದೆ.