ಸಿಆರ್‌ಪಿಎಫ್ ಮೇಲಿನ ದಾಳಿ ಬೆನ್ನಲ್ಲೇ ಎನ್‌ಕೌಂಟರ್: ಉಗ್ರನಿಗೆ 15 ಲಕ್ಷ ರೂ. ಬಹುಮಾನ

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಕುಲ್ಗಾಮ್ ಜಿಲ್ಲೆಯಲ್ಲಿ ಭದ್ರತಾ ಪಡೆಗಳು ಮತ್ತು ಶಂಕಿತ ಉಗ್ರರ ನಡುವೆ ಬುಧವಾರ ಮತ್ತೆ ಗುಂಡಿನ ಚಕಮಕಿ ನಡೆದಿದೆ. ನವೆಂಬರ್ 11ರಂದು ಸಿಆರ್‌ಪಿಎಫ್ ಸಿಬ್ಬಂದಿ ಮೇಲೆ ನಡೆದ ಗುಂಡಿನ ದಾಳಿಯ ತನಿಖೆ ತೀವ್ರಗೊಂಡಿದ್ದು, ದಾಳಿಯಲ್ಲಿ ಭಾಗಿಯಾಗಿದ್ದಾನೆ ಎನ್ನಲಾದ ಲಷ್ಕರ್-ಎ-ತೊಯ್ಬಾ (ಎಲ್‌ಇಟಿ) ಕಮಾಂಡರ್ ಲತೀಫ್ ಭಟ್‌ಗಾಗಿ ಶೋಧ ಕಾರ್ಯಾಚರಣೆ ಮುಂದುವರಿದಿದೆ.

ಜಂಗಲ್‌ಪೋರಾ ಗ್ರಾಮದ ಬಳಿ ಹೊಸದಾಗಿ ಎನ್‌ಕೌಂಟರ್ ಆರಂಭವಾಗಿದೆ ಎಂದು ಕಾಶ್ಮೀರ ವಲಯ ಪೊಲೀಸರು ತಿಳಿಸಿದ್ದಾರೆ. ಸೋಮವಾರ ಕುಲ್ಗಾಮ್‌ನ ಲಾರೂ ಪ್ರದೇಶದಲ್ಲಿ ನಡೆದ ಎನ್‌ಕೌಂಟರ್‌ನಲ್ಲಿ ಉಮರ್ ನಿಸಾರ್ ದಾರ್ ಎಂಬ ಶಂಕಿತ ಉಗ್ರ ಹತನಾಗಿದ್ದ. ಈತ ಲತೀಫ್ ಭಟ್‌ನ ಸಹಚರನಾಗಿದ್ದ ಎನ್ನಲಾಗಿದೆ. ಆದರೆ, ಲತೀಫ್ ಭಟ್ ಭದ್ರತಾ ಪಡೆಗಳ ಸುತ್ತುವರಿಕೆಯಿಂದ ತಪ್ಪಿಸಿಕೊಂಡಿದ್ದಾನೆ ಎಂಬ ಶಂಕೆಯಿದೆ.

ಸಿಆರ್‌ಪಿಎಫ್ ಮೇಲಿನ ದಾಳಿ ಪ್ರಕರಣ

ನವೆಂಬರ್ 11ರಂದು ಕುಲ್ಗಾಮ್‌ನ ಅಖ್ರಾನ್ ಪ್ರದೇಶದ ಚೆಕ್‌ಪೋಸ್ಟ್‌ನಲ್ಲಿ ಕರ್ತವ್ಯದಲ್ಲಿದ್ದ ಸಿಆರ್‌ಪಿಎಫ್ ಸಿಬ್ಬಂದಿ ಮೇಲೆ ಬೈಕ್‌ನಲ್ಲಿ ಬಂದ ಇಬ್ಬರು ಗುಂಡಿನ ದಾಳಿ ನಡೆಸಿದ್ದರು. ಘಟನೆಯಲ್ಲಿ ಮೂವರು ಯೋಧರು ಗಾಯಗೊಂಡಿದ್ದರು. ಈ ದಾಳಿಯ ಹಿಂದೆ ಲತೀಫ್ ಭಟ್ ಮತ್ತು ಉಮರ್ ದಾರ್ ಕೈವಾಡವಿದೆ ಎಂದು ತನಿಖಾಧಿಕಾರಿಗಳು ಶಂಕಿಸಿದ್ದಾರೆ.

ಪೊಲೀಸರ ಪ್ರಕಾರ, ದಾಳಿಗೂ ಮುನ್ನ ಇಬ್ಬರೂ ಮೀರ್ ಬಜಾರ್, ಅಖ್ರಾನ್, ಹಬ್ಲಿಶ್ ಮತ್ತು ಕಿಲಾಮ್ ಪ್ರದೇಶಗಳಲ್ಲಿ ಸಂಚರಿಸಿದ್ದರು. ಸಿಸಿಟಿವಿ ದೃಶ್ಯಗಳ ಪರಿಶೀಲನೆಯಿಂದ ಅವರ ಚಲನವಲನಗಳ ಕುರಿತು ಸುಳಿವು ಲಭ್ಯವಾಗಿದೆ ಎಂದು ವರದಿಯಾಗಿದೆ.

ಮಾಹಿತಿ ನೀಡಿದವರಿಗೆ 15 ಲಕ್ಷ ರೂ. ಬಹುಮಾನ

ಲತೀಫ್ ಭಟ್‌ಗೆ ಕಳೆದ ಐದಾರು ತಿಂಗಳಿನಿಂದ ಉಮರ್ ದಾರ್ ಆಶ್ರಯ ಮತ್ತು ನೆರವು ನೀಡುತ್ತಿದ್ದ ಎಂಬ ಆರೋಪವೂ ಇದೆ. ಜಂಗಲ್‌ಪೋರಾದ ಮಸೀದಿಯೊಂದರಲ್ಲಿ ಲತೀಫ್ ಅಡಗಿರುವ ಸಾಧ್ಯತೆಯಿದೆ ಎಂದು ಕೆಲವು ಮಾಧ್ಯಮಗಳು ವರದಿ ಮಾಡಿವೆ. ಆತನಿಗೆ ಶರಣಾಗುವಂತೆ ಭದ್ರತಾ ಪಡೆಗಳು ಸೂಚಿಸಿವೆ ಎನ್ನಲಾಗಿದೆ. ಈ ಬಗ್ಗೆ ಅಧಿಕೃತ ದೃಢೀಕರಣ ಲಭ್ಯವಾಗಿಲ್ಲ.

ಲತೀಫ್ ಭಟ್ ಬಗ್ಗೆ ಮಾಹಿತಿ ನೀಡುವವರಿಗೆ 15 ಲಕ್ಷ ರೂ. ಬಹುಮಾನ ನೀಡುವುದಾಗಿ ಪೊಲೀಸರು ಘೋಷಿಸಿದ್ದಾರೆ ಎಂದು ವರದಿಯಾಗಿದೆ.

ಇನ್ನೊಂದೆಡೆ, ಕುಲ್ಗಾಮ್‌ನ ಹಲವು ಗ್ರಾಮಗಳಲ್ಲಿ ಭದ್ರತಾ ಪಡೆಗಳ ಶೋಧ ಕಾರ್ಯಾಚರಣೆಯಿಂದ ಜನರ ಸಂಚಾರಕ್ಕೆ ನಿರ್ಬಂಧ ವಿಧಿಸಲಾಗಿದೆ. ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಲು ಹಾಗೂ ಅಗತ್ಯ ಔಷಧಗಳನ್ನು ಪಡೆಯಲು ತೊಂದರೆಯಾಗುತ್ತಿದೆ ಎಂದು ಸ್ಥಳೀಯರು ದೂರಿದ್ದಾರೆ. ನಾಗರಿಕರಿಗೆ ತೊಂದರೆಯಾಗದಂತೆ ಕಾರ್ಯಾಚರಣೆ ನಡೆಸಬೇಕೆಂದು ಕೆಲವು ರಾಜಕೀಯ ನಾಯಕರು ಒತ್ತಾಯಿಸಿದ್ದಾರೆ.