‘ರೈತರ ಸಾಲ ವಸೂಲಿ ಮುಂದೂಡಿಕೆ; ಬ್ಯಾಂಕ್‌ಗಳ ನೋಟಿಸ್‌ಗೆ ಆತಂಕ ಬೇಡ’

ಬಳ್ಳಾರಿ: ಬರ ಪರಿಸ್ಥಿತಿಯಿಂದ ಸಂಕಷ್ಟಕ್ಕೆ ಸಿಲುಕಿರುವ ರೈತರ ಸಾಲ ವಸೂಲಿಯನ್ನು ಮುಂದೂಡಲು ಬ್ಯಾಂಕ್‌ಗಳಿಗೆ ಸರ್ಕಾರ ಸೂಚನೆ ನೀಡಿದೆ. ಸಾಲ ಮರುಹೊಂದಿಕೆ ಹಾಗೂ ಮರುಹಣಕಾಸು ಮಾಡುವ ಬಗ್ಗೆಯೂ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ತಿಳಿಸಿದ್ದಾರೆ.

ಬಳ್ಳಾರಿ ತಾಲೂಕಿನ ಬರಪೀಡಿತ ಹಲಕುಂದಿ ಗ್ರಾಮದಲ್ಲಿ ತೊಗರಿ ಬಿತ್ತನೆ ಮಾಡಿರುವ ಜಮೀನಿಗೆ ಭೇಟಿ ನೀಡಿ ಬೆಳೆ ಪರಿಸ್ಥಿತಿ ಪರಿಶೀಲಿಸಿದ ಬಳಿಕ ಅವರು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು.

ಬ್ಯಾಂಕ್‌ಗಳಿಂದ ಸಾಲ ವಸೂಲಿಗೆ ನೋಟಿಸ್ ಬರುತ್ತಿರುವ ಬಗ್ಗೆ ರೈತರು ಆತಂಕಪಡಬೇಕಿಲ್ಲ. ಸಾಲ ವಸೂಲಿಯನ್ನು ಮುಂದೂಡುವಂತೆ ಈಗಾಗಲೇ ಸೂಚನೆ ನೀಡಲಾಗಿದ್ದು, ರಾಷ್ಟ್ರೀಕೃತ ಬ್ಯಾಂಕ್‌ಗಳು ಹಾಗೂ ಖಾಸಗಿ ಹಣಕಾಸು ಸಂಸ್ಥೆಗಳಿಗೂ ಅಗತ್ಯ ನಿರ್ದೇಶನ ನೀಡಲಾಗುತ್ತಿದೆ ಎಂದು ಹೇಳಿದರು.

ರೈತರಿಗೆ ತಕ್ಷಣದ ಆರ್ಥಿಕ ನೆರವು ನೀಡುವುದು, ಸಾಲ ವಸೂಲಿ ಮುಂದೂಡುವುದು ಸೇರಿದಂತೆ ಹಲವು ಕ್ರಮಗಳನ್ನು ಸರ್ಕಾರ ಕೈಗೊಂಡಿದೆ. ಮುಂದಿನ ದಿನಗಳಲ್ಲಿ ಬರ ಪರಿಸ್ಥಿತಿಯನ್ನು ಪರಿಶೀಲಿಸಿ ಇನ್ನಷ್ಟು ನೆರವು ನೀಡಲಾಗುವುದು ಎಂದರು.

ರೈತನೇ ಮೊದಲ ಆದ್ಯತೆ

ದೊಡ್ಡ ಯೋಜನೆಗಳು ಅಥವಾ ಕಾರ್ಯಕ್ರಮಗಳನ್ನು ಜಾರಿಗೆ ತಂದಾಗ ಹಣಕಾಸಿನ ಹೊರೆ ಸಹಜ. ಸರ್ಕಾರ ಪ್ರತಿವರ್ಷ ಗ್ಯಾರಂಟಿ ಯೋಜನೆಗಳಿಗೆ ಸುಮಾರು ₹52 ಸಾವಿರ ಕೋಟಿ ವೆಚ್ಚ ಮಾಡುತ್ತಿದ್ದರೂ ಅವುಗಳನ್ನು ನಿಲ್ಲಿಸಿಲ್ಲ. ಹಣಕಾಸಿನ ಲಭ್ಯತೆ ಆಧರಿಸಿ ಯಾವ ಕೆಲಸಕ್ಕೆ ಮೊದಲ ಆದ್ಯತೆ ನೀಡಬೇಕು ಎಂಬುದನ್ನು ಸರ್ಕಾರ ನಿರ್ಧರಿಸುತ್ತದೆ ಎಂದು ಪರಮೇಶ್ವರ್ ಹೇಳಿದರು.

“ಈಗ ರೈತನೇ ಮೊದಲ ಆದ್ಯತೆ. ರಸ್ತೆ ಕಾಮಗಾರಿ ಸೇರಿದಂತೆ ಉಳಿದ ಕೆಲಸಗಳು ನಂತರವಾದರೂ ನಡೆಯಬಹುದು. ರೈತನನ್ನು ಉಳಿಸುವುದು ನಮ್ಮ ಮೊದಲ ಕೆಲಸ,” ಎಂದರು.

ಸರ್ಕಾರದ ಆಡಳಿತಾತ್ಮಕ ಕೆಲಸಗಳು ಎಲ್ಲಿಯೂ ಸ್ಥಗಿತಗೊಂಡಿಲ್ಲ. ಜಿಲ್ಲಾಡಳಿತ ತನ್ನ ಕಾರ್ಯ ನಿರ್ವಹಿಸುತ್ತಿದ್ದು, ರಾಜ್ಯ ಸರ್ಕಾರವೂ ಕೇಂದ್ರ ಮಟ್ಟದಿಂದ ಬರ ಪರಿಸ್ಥಿತಿಯನ್ನು ನಿರಂತರವಾಗಿ ಗಮನಿಸುತ್ತಿದೆ. ಜಿಲ್ಲಾ ಉಸ್ತುವಾರಿ ವ್ಯವಸ್ಥೆಯಲ್ಲಿ ಒಂದೆರಡು ತಿಂಗಳ ಅಂತರ ಉಂಟಾದರೂ ಆಡಳಿತದ ಕಾರ್ಯ ನಿಲ್ಲುವುದಿಲ್ಲ. ಅಗತ್ಯ ಕ್ರಮಗಳನ್ನು ಶೀಘ್ರ ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದರು.