20 ಸಾವಿರ ನಾಗರಿಕರ ಭೇಟಿ, 5 ಸಾವಿರ ಸಮಸ್ಯೆಗಳಿಗೆ ಪರಿಹಾರ: ಶಾಸಕ ಎಸ್. ಸುರೇಶ್ ಕುಮಾರ್

ಬೆಂಗಳೂರು: ನಾಗರಿಕರ ಸಮಸ್ಯೆಗಳಿಗೆ ತ್ವರಿತ ಪರಿಹಾರ ಕಲ್ಪಿಸುವ ಉದ್ದೇಶದಿಂದ ರಾಜಾಜಿನಗರ ವಿಧಾನಸಭಾ ಕ್ಷೇತ್ರದಲ್ಲಿ ಹಮ್ಮಿಕೊಂಡಿರುವ ‘ಜನರೊಂದಿಗೆ ಜನಸೇವಕ’ ಮತ್ತು ‘ದಿನಕ್ಕೊಂದು ವಾರ್ಡ್ ನಡಿಗೆ’ ಕಾರ್ಯಕ್ರಮಗಳ ಮೂಲಕ ಈವರೆಗೆ 20 ಸಾವಿರ ಜನರನ್ನು ಭೇಟಿ ಮಾಡಿದ್ದು, 5 ಸಾವಿರ ನಾಗರಿಕರ ಸಮಸ್ಯೆಗಳಿಗೆ ಪರಿಹಾರ ಒದಗಿಸಲಾಗಿದೆ ಎಂದು ಶಾಸಕ ಎಸ್. ಸುರೇಶ್ ಕುಮಾರ್ ತಿಳಿಸಿದರು.

ದಯಾನಂದನಗರ ವಾರ್ಡ್‌ನಲ್ಲಿ ರಾಜ್ಯದಲ್ಲಿಯೇ ವಿನೂತನ ಕಾರ್ಯಕ್ರಮವಾದ ‘ದಿನಕ್ಕೊಂದು ವಾರ್ಡ್ ನಡಿಗೆ’ಯ 150ನೇ ದಿನದ ಸಂಭ್ರಮಾಚರಣೆ ನಡೆಯಿತು. ಈ ಸಂದರ್ಭದಲ್ಲಿ ಮಾಜಿ ಸಚಿವ ಎಸ್. ಸುರೇಶ್ ಕುಮಾರ್ ಅವರು ಶ್ರೀರಾಮ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಮಾತನಾಡಿದ ಅವರು, ‘ಜನರೊಂದಿಗೆ ಜನಸೇವಕ’ ಕಾರ್ಯಕ್ರಮ 76 ವಾರಗಳನ್ನು ಹಾಗೂ ‘ದಿನಕ್ಕೊಂದು ವಾರ್ಡ್ ನಡಿಗೆ’ 150 ದಿನಗಳನ್ನು ಪೂರೈಸಿದೆ ಎಂದರು.

ದಿನಕ್ಕೊಂದು ವಾರ್ಡ್ ನಡಿಗೆ ಕಾರ್ಯಕ್ರಮದಡಿ ದಯಾನಂದನಗರ, ಪ್ರಕಾಶನಗರ, ಶ್ರೀರಾಮಮಂದಿರ, ರಾಜಾಜಿನಗರ, ಶಿವನಗರ, ಬಸವೇಶ್ವರನಗರ ಮತ್ತು ಕಾಮಾಕ್ಷಿಪಾಳ್ಯ ಸೇರಿದಂತೆ ಏಳು ವಾರ್ಡ್‌ಗಳಲ್ಲಿ ಒಟ್ಟು 11 ಕಿ.ಮೀ. ಪಾದಯಾತ್ರೆ ನಡೆಯಲಿದೆ ಎಂದು ತಿಳಿಸಿದರು.

ಮಾಜಿ ಪಾಲಿಕೆ ಸದಸ್ಯರಾದ ಎಂ. ಮುನಿರಾಜು, ಶಕೀಲ ಮುನಿರಾಜು, ಮಂಡಲ ಅಧ್ಯಕ್ಷ ಸುದರ್ಶನ್, ಪ್ರಧಾನ ಕಾರ್ಯದರ್ಶಿ ಗಿರೀಶ್ ಗೌಡ, ಮಾಜಿ ಉಪಮಹಾಪೌರ ರಂಗಣ್ಣ ಸೇರಿದಂತೆ ಬಿಜೆಪಿ ಮುಖಂಡರು ಮತ್ತು ಕಾರ್ಯಕರ್ತರು ಭಾಗವಹಿಸಿದ್ದರು.