ಆಗಸ್ಟ್ 8ರಿಂದ ಕಾಂಗ್ರೆಸ್ ‘ಸಂಘಟನ್ ಸೃಜನ್’ ಅಭಿಯಾನ: ಡಿ.ಕೆ. ಸುರೇಶ್

ಬೆಂಗಳೂರು: ಕಾಂಗ್ರೆಸ್ ಸಂಘಟನೆಯನ್ನು ಬೂತ್ ಮಟ್ಟದಿಂದ ಬಲಪಡಿಸುವ ಉದ್ದೇಶದಿಂದ ರಾಜ್ಯದಲ್ಲಿ ‘ಸಂಘಟನ್ ಸೃಜನ್’ ಅಭಿಯಾನವನ್ನು ಆಗಸ್ಟ್ 8ರಿಂದ ಆರಂಭಿಸಲಾಗುವುದು ಎಂದು ಮಾಜಿ ಸಂಸದ ಡಿ.ಕೆ. ಸುರೇಶ್ ತಿಳಿಸಿದ್ದಾರೆ.

ಕೆಪಿಸಿಸಿ ಕಚೇರಿಯಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದೇಶಾದ್ಯಂತ ನಡೆಯುತ್ತಿರುವ ಈ ಅಭಿಯಾನದ ಭಾಗವಾಗಿ ಕರ್ನಾಟಕದಲ್ಲೂ ಕಾರ್ಯಕರ್ತರ ಅಭಿಪ್ರಾಯ ಸಂಗ್ರಹಿಸಿ ಅರ್ಹರನ್ನು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗುತ್ತದೆ ಎಂದರು. ಬೆಂಗಳೂರು ದಕ್ಷಿಣ ಜಿಲ್ಲಾ ಉಸ್ತುವಾರಿಯಾಗಿ ಚಾಂಡಿ ಓಮನ್ ನೇಮಕಗೊಂಡಿದ್ದು, ಆಗಸ್ಟ್ 8ರಿಂದ 15ರವರೆಗೆ ಜಯನಗರ, ಬಿಟಿಎಂ, ಆನೇಕಲ್, ಬೊಮ್ಮನಹಳ್ಳಿ, ಪದ್ಮನಾಭನಗರ ಹಾಗೂ ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರಗಳಲ್ಲಿ ಸಭೆಗಳು ನಡೆಯಲಿವೆ ಎಂದು ಹೇಳಿದರು.

ಜಿಲ್ಲಾ ಅಧ್ಯಕ್ಷ ಸ್ಥಾನಕ್ಕೆ ಆಸಕ್ತರು ಅರ್ಜಿ ಸಲ್ಲಿಸಬಹುದಾಗಿದ್ದು, ಕಾರ್ಯಕರ್ತರ ಅಭಿಪ್ರಾಯದ ಆಧಾರದಲ್ಲಿ ವರದಿಯನ್ನು ಎಐಸಿಸಿಗೆ ಸಲ್ಲಿಸಲಾಗುತ್ತದೆ. ಅಂತಿಮವಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ನೇಮಕಾತಿ ಮಾಡಲಿದ್ದಾರೆ ಎಂದು ತಿಳಿಸಿದರು.

ಬೆಳಗಾವಿ ಮತ್ತು ಚಿಕ್ಕಬಳ್ಳಾಪುರದಲ್ಲಿ ನಡೆದ ಸಭೆಗಳ ಗಲಾಟೆ ಕುರಿತು ಪ್ರತಿಕ್ರಿಯಿಸಿದ ಅವರು, ಅದು ಪಕ್ಷದ ಆಂತರಿಕ ವಿಷಯವಾಗಿದ್ದು, ಕಾರ್ಯಕರ್ತರ ಅಸಮಾಧಾನ ತಿಳಿದುಕೊಳ್ಳಲು ಇಂತಹ ಚರ್ಚೆಗಳು ಸಹಕಾರಿ ಎಂದರು. ಪಕ್ಷದ ವತಿಯಿಂದ ಯಾವುದೇ ಅಭ್ಯರ್ಥಿಯ ಹೆಸರನ್ನು ಶಿಫಾರಸು ಮಾಡುವುದಿಲ್ಲ; ಎಲ್ಲರಿಗೂ ಸಮಾನ ಅವಕಾಶ ಇರುತ್ತದೆ ಎಂದು ಸ್ಪಷ್ಟಪಡಿಸಿದರು.

ಮೇಕೆದಾಟು ಯೋಜನೆ ಕುರಿತು ಮಾತನಾಡಿದ ಡಿ.ಕೆ. ಸುರೇಶ್, ಕೇಂದ್ರ ಸರ್ಕಾರದಿಂದ ಅಗತ್ಯ ಅನುಮತಿಗಳು ದೊರೆತ 30 ದಿನಗಳೊಳಗೆ ಯೋಜನೆ ಕಾಮಗಾರಿ ಆರಂಭಿಸಲಾಗುವುದು ಎಂದರು. ಕಾವೇರಿ ನೀರು ಬಿಡುಗಡೆ ಕುರಿತ CWRC ಆದೇಶದ ಬಗ್ಗೆ ಪ್ರತಿಕ್ರಿಯಿಸಿ, ಸರ್ಕಾರ ಕಾನೂನುಬದ್ಧವಾಗಿ ಅಗತ್ಯ ಕ್ರಮ ಕೈಗೊಳ್ಳಲಿದೆ ಎಂದು ಹೇಳಿದರು.

ರಾಹುಲ್ ಗಾಂಧಿ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ ಪ್ರಕರಣ ಕುರಿತು ಪ್ರತಿಕ್ರಿಯಿಸಿದ ಅವರು, ಯಾವುದೇ ವ್ಯಕ್ತಿಯ ಬಗ್ಗೆ ಅವಹೇಳನಕಾರಿ ಭಾಷೆ ಬಳಸಬಾರದು ಎಂದು ಹೇಳಿದರು.