ಚಿತ್ರರಂಗಕ್ಕೆ ಉತ್ತೇಜನ: ಕೇಂದ್ರದಿಂದ ಎರಡು ಮಹತ್ವದ ಸುಧಾರಣೆಗಳು

ನವದೆಹಲಿ: ಭಾರತೀಯ ಚಲನಚಿತ್ರೋದ್ಯಮದ ಬೆಳವಣಿಗೆ ಮತ್ತು ದೇಶಾದ್ಯಂತ ಸಿನಿಮಾ ಮೂಲಸೌಕರ್ಯ ವಿಸ್ತರಣೆಗೆ ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯ ಎರಡು ಮಹತ್ವದ ಸುಧಾರಣಾ ಕ್ರಮಗಳನ್ನು ಘೋಷಿಸಿದೆ.

ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಅವರ ಅಧ್ಯಕ್ಷತೆಯಲ್ಲಿ ನಡೆದ ಉನ್ನತ ಮಟ್ಟದ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಚಿತ್ರರಂಗದ ಅಭಿವೃದ್ಧಿ, ವಿತರಣೆ ಹಾಗೂ ತಾಂತ್ರಿಕ ನವೀನತೆಗಳಿಗೆ ಉತ್ತೇಜನ ನೀಡುವಂತೆ ಸಚಿವರು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಮೊದಲ ಹೆಜ್ಜೆಯಾಗಿ, Prasoon Joshi ಅವರ ನೇತೃತ್ವದಲ್ಲಿ ಉನ್ನತ ಮಟ್ಟದ ಅಧ್ಯಯನ ಸಮಿತಿಯನ್ನು ರಚಿಸಲಾಗಿದೆ. ಈ ಸಮಿತಿಯು ಚಿತ್ರರಂಗದ ಸವಾಲುಗಳು ಮತ್ತು ಅವಕಾಶಗಳನ್ನು ಪರಿಶೀಲಿಸಿ, ಕೃತಕ ಬುದ್ಧಿಮತ್ತೆ, ವರ್ಚುವಲ್ ಪ್ರೊಡಕ್ಷನ್‌ ಸೇರಿದಂತೆ ಹೊಸ ತಂತ್ರಜ್ಞಾನಗಳ ಅಳವಡಿಕೆ, ಹಣಕಾಸು ಸೌಲಭ್ಯಗಳು ಹಾಗೂ ಜಾಗತಿಕ ಸ್ಪರ್ಧಾತ್ಮಕತೆ ಹೆಚ್ಚಿಸುವ ಕುರಿತು ಶಿಫಾರಸುಗಳನ್ನು ನೀಡಲಿದೆ. ಸಮಿತಿ ಮೂರು ತಿಂಗಳಲ್ಲಿ ವರದಿ ಸಲ್ಲಿಸಲಿದೆ.

ಎರಡನೇ ಹಂತವಾಗಿ, ಸಿನಿಮಾ ಮಂದಿರಗಳ ಸ್ಥಾಪನೆ ಮತ್ತು ನಿರ್ವಹಣೆಗೆ ಸಂಬಂಧಿಸಿದ ‘ಮಾದರಿ ರಾಜ್ಯ ಸಿನಿಮಾ ನಿಯಮಾವಳಿ’ಯನ್ನು ಸಚಿವಾಲಯ ಸಿದ್ಧಪಡಿಸಿ ರಾಜ್ಯ ಸರ್ಕಾರಗಳಿಗೆ ರವಾನಿಸಿದೆ. ಅನುಮೋದನಾ ಪ್ರಕ್ರಿಯೆ ಸರಳೀಕರಣ, ಹೂಡಿಕೆ ಉತ್ತೇಜನ ಹಾಗೂ ಸಣ್ಣ ಪಟ್ಟಣ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಸಿನಿಮಾ ಮಂದಿರಗಳ ಸಂಖ್ಯೆಯನ್ನು ಹೆಚ್ಚಿಸುವುದು ಇದರ ಉದ್ದೇಶವಾಗಿದೆ.

ಈ ಕ್ರಮಗಳು ಭಾರತೀಯ ಚಿತ್ರರಂಗವನ್ನು ಇನ್ನಷ್ಟು ಆಧುನಿಕ, ಬಲಿಷ್ಠ ಹಾಗೂ ಜಾಗತಿಕ ಮಟ್ಟದಲ್ಲಿ ಸ್ಪರ್ಧಾತ್ಮಕವಾಗಿಸಲು ನೆರವಾಗಲಿವೆ ಎಂದು ಸಚಿವಾಲಯ ತಿಳಿಸಿದೆ.