ದೆಹಲಿಯನ್ನು ಒತ್ತೆಯಾಳಾಗಲು ಬಿಡುವುದಿಲ್ಲ: ರೇಖಾ ಗುಪ್ತಾ

ನವದೆಹಲಿ: ರಾಜಕೀಯ ಹಿತಾಸಕ್ತಿಗಾಗಿ ರಾಷ್ಟ್ರ ರಾಜಧಾನಿಯ ಶಾಂತಿ ಮತ್ತು ಭದ್ರತೆಗೆ ಧಕ್ಕೆ ತರಲು ಅವಕಾಶ ನೀಡುವುದಿಲ್ಲ ಎಂದು ದೆಹಲಿ ಮುಖ್ಯಮಂತ್ರಿ ರೇಖಾ ಗುಪ್ತಾ ಶನಿವಾರ ಎಚ್ಚರಿಕೆ ನೀಡಿದ್ದಾರೆ.

ದೆಹಲಿಯಲ್ಲಿ ನಡೆಯುತ್ತಿರುವ ಪ್ರತಿಭಟನೆಯ ಹಿನ್ನೆಲೆಯಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಆಮ್ ಆದ್ಮಿ ಪಕ್ಷದ (ಎಎಪಿ) ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಹಾಗೂ ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ವಿರುದ್ಧ ಅವರು ವಾಗ್ದಾಳಿ ನಡೆಸಿದ್ದಾರೆ.

ಪ್ರಜಾಪ್ರಭುತ್ವದ ಹೆಸರಿನಲ್ಲಿ ಅರಾಜಕತೆ ಸೃಷ್ಟಿಸುವ ಹಾಗೂ ಜನಾದೇಶವನ್ನು ಪ್ರಶ್ನಿಸುವ ರಾಜಕೀಯವನ್ನು ಸಹಿಸುವುದಿಲ್ಲ. ದೆಹಲಿಯನ್ನು ಯಾರೂ ಒತ್ತೆಯಾಳಾಗಿಸಿಕೊಳ್ಳಲು ಬಿಡುವುದಿಲ್ಲ ಎಂದು ಅವರು ‘ಎಕ್ಸ್‌’ನಲ್ಲಿ ಪೋಸ್ಟ್ ಮಾಡಿದ್ದಾರೆ.

ಚುನಾವಣೆಯಲ್ಲಿ ಜನರಿಂದ ತಿರಸ್ಕೃತರಾದ ರಾಹುಲ್ ಗಾಂಧಿ ಮತ್ತು ಅರವಿಂದ್ ಕೇಜ್ರಿವಾಲ್, ಸಿಜೆಪಿ ಜತೆಗೂಡಿ ದೆಹಲಿಯನ್ನು ಸಂಘರ್ಷದ ಕೇಂದ್ರವನ್ನಾಗಿ ಮಾಡಲು ಪ್ರಯತ್ನಿಸುತ್ತಿದ್ದಾರೆ ಎಂದು ರೇಖಾ ಗುಪ್ತಾ ಆರೋಪಿಸಿದ್ದಾರೆ.

ರಾಜಕೀಯ ಸೋಲಿನ ಹತಾಶೆಯನ್ನು ಸಾರ್ವಜನಿಕರ ಮೇಲೆ ಏಕೆ ಹೇರುತ್ತಿದ್ದಾರೆ ಎಂದು ಪ್ರಶ್ನಿಸಿರುವ ಅವರು, ಪ್ರತಿಭಟನೆಯಿಂದಾಗಿ ಕೆಲಸಕ್ಕೆ ತೆರಳುವ ನೌಕರರು, ದಿನಗೂಲಿ ಕಾರ್ಮಿಕರು ಹಾಗೂ ಆಸ್ಪತ್ರೆಗೆ ತೆರಳುವ ರೋಗಿಗಳು ಎದುರಿಸುವ ತೊಂದರೆಗಳಿಗೆ ಯಾರು ಹೊಣೆ ಎಂದು ಕೇಳಿದ್ದಾರೆ.

ಲಕ್ಷಾಂತರ ಕುಟುಂಬಗಳ ಜೀವನೋಪಾಯ, ಸುರಕ್ಷತೆ ಮತ್ತು ನೆಮ್ಮದಿಗಿಂತ ರಾಜಕೀಯ ಮಹತ್ವಾಕಾಂಕ್ಷೆಯೇ ಮುಖ್ಯವೇ ಎಂದು ಪ್ರಶ್ನಿಸಿದ್ದಾರೆ.

ದೆಹಲಿಯ ಜನರು ಅಭಿವೃದ್ಧಿಯನ್ನು ಗಮನದಲ್ಲಿಟ್ಟುಕೊಂಡು ಮತ ಚಲಾಯಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸತತ ಮೂರನೇ ಅವಧಿಗೆ ಅಧಿಕಾರ ನೀಡುವ ಮೂಲಕ ಜನರು ತಮ್ಮ ಬೆಂಬಲ ವ್ಯಕ್ತಪಡಿಸಿದ್ದಾರೆ ಎಂದು ಅವರು ಹೇಳಿದ್ದಾರೆ.

ಕುಟುಂಬ ರಾಜಕಾರಣ ಮತ್ತು ಅವಕಾಶವಾದಿ ರಾಜಕೀಯದಲ್ಲಿ ತೊಡಗಿರುವ ಪಕ್ಷಗಳಿಗೆ ಈ ಜನಬೆಂಬಲವನ್ನು ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ಟೀಕಿಸಿದ್ದಾರೆ.

ಅರವಿಂದ್ ಕೇಜ್ರಿವಾಲ್ ತಮ್ಮ ರಾಜಕೀಯ ಹಿತಾಸಕ್ತಿಗಾಗಿ ದೆಹಲಿಯ ಶಾಂತಿ ಮತ್ತು ಭದ್ರತೆಗೆ ಧಕ್ಕೆ ತರಲು ಯತ್ನಿಸುತ್ತಿದ್ದಾರೆ ಎಂದು ಆರೋಪಿಸಿರುವ ರೇಖಾ ಗುಪ್ತಾ, ಅಭಿಜೀತ್ ದಿಪ್ಕೆ ನೇತೃತ್ವದ ಸಿಜೆಪಿಯನ್ನು ಎಎಪಿಯ ‘ಬಿ–ಟೀಮ್’ ಎಂದು ಬಣ್ಣಿಸಿದ್ದಾರೆ.