ಪ್ರಧಾನ್ ರಾಜೀನಾಮೆ ಸಾಕಾಗಲ್ಲ, ಇನ್ನೆರಡು ಬೇಡಿಕೆ ಈಡೇರಿಸಲು ಸರ್ಕಾರಕ್ಕೆ ಸಿಜೆಪಿ ಗಡುವು

ನವದೆಹಲಿ: ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಿದ ಬಳಿಕವೂ ತಮ್ಮ ಹೋರಾಟ ಮುಗಿದಿಲ್ಲ ಎಂದು ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ಅಧ್ಯಕ್ಷ ಅಭಿಜಿತ್ ದೀಪ್ಕೆ ಸ್ಪಷ್ಟಪಡಿಸಿದ್ದಾರೆ. ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಯನ್ನು “ವಿದ್ಯಾರ್ಥಿ ಶಕ್ತಿಯ ಗೆಲುವು” ಎಂದು ಬಣ್ಣಿಸಿದ ಅವರು, ಸರ್ಕಾರದ ಮುಂದೆ ಇನ್ನೆರಡು ಪ್ರಮುಖ ಬೇಡಿಕೆಗಳನ್ನು ಮುಂದಿಟ್ಟಿದ್ದಾರೆ.

ದೆಹಲಿಯ ಜಂತರ್ ಮಂತರ್‌ನಲ್ಲಿ ಬೆಂಬಲಿಗರನ್ನುದ್ದೇಶಿಸಿ ಮಾತನಾಡಿದ ದೀಪ್ಕೆ, ಶಾಂತಿಯುತ ಹೋರಾಟ ಮತ್ತು ಸಾರ್ವಜನಿಕ ಒತ್ತಡದ ಮೂಲಕ ಸರ್ಕಾರವನ್ನು ಹೊಣೆಗಾರಿಕೆಗೆ ಒಳಪಡಿಸಬಹುದು ಎಂಬುದನ್ನು ಈ ಚಳವಳಿ ಸಾಬೀತುಪಡಿಸಿದೆ ಎಂದು ಹೇಳಿದರು.

“ನಾವು ಸಾಧಿಸಿದ್ದೇವೆ. ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಿದ್ದಾರೆ. ಸರ್ಕಾರದ ಮುಂದೆ ತಲೆಬಾಗದಿದ್ದರೆ ಯಾರಿಂದ ಬೇಕಾದರೂ ರಾಜೀನಾಮೆ ಪಡೆಯಬಹುದು ಎಂಬುದನ್ನು ಈ ಹೋರಾಟ ತೋರಿಸಿದೆ” ಎಂದು ಅವರು ಹೇಳಿದರು.

ಆದರೆ, ರಾಜೀನಾಮೆ ಮಾತ್ರ ಸಾಕಾಗುವುದಿಲ್ಲ ಎಂದು ಹೇಳಿದ ದೀಪ್ಕೆ, ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿಗಳ ಕುಟುಂಬಗಳಿಗೆ ತಲಾ ₹1 ಕೋಟಿ ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು. ಜೊತೆಗೆ, ಜುಲೈ 20ರಂದು ಪ್ರತಿಭಟನಾನಿರತ ವಿದ್ಯಾರ್ಥಿಗಳ ವಿರುದ್ಧ ದುರ್ವರ್ತನೆ ತೋರಿದ ಪೊಲೀಸ್ ಸಿಬ್ಬಂದಿ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಇದಲ್ಲದೆ, ಜುಲೈ 20ರ ನಂತರ ವಿದ್ಯಾರ್ಥಿಗಳ ವಿರುದ್ಧ ದಾಖಲಿಸಿರುವ ಎಲ್ಲ ಪ್ರಕರಣಗಳನ್ನು ತಕ್ಷಣ ಹಿಂಪಡೆಯಬೇಕು ಎಂದು ಸರ್ಕಾರಕ್ಕೆ ಆಗ್ರಹಿಸಿದರು.

ಮೊದಲ ಬೇಡಿಕೆ ಈಡೇರಿದ್ದರೂ, ಉಳಿದ ಎರಡು ಬೇಡಿಕೆಗಳನ್ನು ಸರ್ಕಾರ ಅಂಗೀಕರಿಸುವವರೆಗೆ ಹೋರಾಟ ಮುಂದುವರಿಯಲಿದೆ ಎಂದು ಸಿಜೆಪಿ ನಾಯಕತ್ವ ಸ್ಪಷ್ಟಪಡಿಸಿದೆ.