ಫ್ರಾನ್ಸ್ ವಿರುದ್ಧ ಭರ್ಜರಿ ಜಯ ಸಾಧಿಸಿ 16 ವರ್ಷಗಳ ಬಳಿಕ ವಿಶ್ವಕಪ್ ಫೈನಲ್‌ಗೆ ಸ್ಪೇನ್

ಡಲ್ಲಾಸ್: ಫಿಫಾ ವಿಶ್ವಕಪ್ 2026ರ ಮೊದಲ ಸೆಮಿಫೈನಲ್‌ನಲ್ಲಿ ಸ್ಪೇನ್ ತಂಡವು ಫ್ರಾನ್ಸ್ ವಿರುದ್ಧ 2-0 ಗೋಲುಗಳ ಭರ್ಜರಿ ಜಯ ಸಾಧಿಸಿ 16 ವರ್ಷಗಳ ಬಳಿಕ ವಿಶ್ವಕಪ್ ಫೈನಲ್‌ಗೆ ಪ್ರವೇಶಿಸಿದೆ. ಈ ಮೂಲಕ ಯೂರೋ 2024 ಹಾಗೂ ಯುಇಎಫ್‌ಎ ನೇಷನ್ಸ್ ಲೀಗ್ 2025 ಬಳಿಕ ಫ್ರಾನ್ಸ್ ವಿರುದ್ಧ ಸತತ ಮೂರನೇ ಗೆಲುವು ದಾಖಲಿಸಿದೆ.

ಟೆಕ್ಸಾಸ್‌ನ ಡಲ್ಲಾಸ್‌ನಲ್ಲಿ ನಡೆದ ಪಂದ್ಯದಲ್ಲಿ ಸ್ಪೇನ್‌ನ ‘ಟಿಕಿ-ಟಾಕಾ 2.0’ ತಂತ್ರಕ್ಕೆ ಫ್ರಾನ್ಸ್ ಸಂಪೂರ್ಣ ತತ್ತರಿಸಿತು. ಚೆಂಡಿನ ಮೇಲಿನ ಶೇ.62ಕ್ಕೂ ಹೆಚ್ಚು ನಿಯಂತ್ರಣ ಸಾಧಿಸಿದ ಸ್ಪೇನ್ ಆರಂಭದಿಂದಲೇ ಪಂದ್ಯದ ಮೇಲೆ ಹಿಡಿತ ಸಾಧಿಸಿತು.

22ನೇ ನಿಮಿಷದಲ್ಲಿ ಲಾಮಿನ್ ಯಮಾಲ್ ಮೇಲೆ ನಡೆದ ಫೌಲ್‌ಗೆ ಲಭಿಸಿದ ಪೆನಾಲ್ಟಿಯನ್ನು ಮೈಕೆಲ್ ಒಯರ್ಝಬಾಲ್ ಗೋಲಾಗಿ ಪರಿವರ್ತಿಸಿ ಸ್ಪೇನ್‌ಗೆ ಮುನ್ನಡೆ ತಂದುಕೊಟ್ಟರು. 58ನೇ ನಿಮಿಷದಲ್ಲಿ ಪೆಡ್ರೊ ಪೊರೊ, ಡ್ಯಾನಿ ಓಲ್ಮೊ ಅವರ ಪಾಸ್‌ನ್ನು ಅದ್ಭುತವಾಗಿ ಗೋಲಾಗಿ ಪರಿವರ್ತಿಸಿ ತಂಡದ ಮುನ್ನಡೆಯನ್ನು 2-0ಕ್ಕೆ ಹೆಚ್ಚಿಸಿದರು.

ಫ್ರಾನ್ಸ್ ನಾಯಕ ಕಿಲಿಯನ್ ಎಂಬಾಪೆ ಸ್ಪೇನ್‌ನ ಬಿಗಿ ರಕ್ಷಣೆಯನ್ನು ಭೇದಿಸಲು ವಿಫಲರಾದರೆ, 31ನೇ ನಿಮಿಷದಲ್ಲಿ ಪ್ರಮುಖ ಡಿಫೆಂಡರ್ ವಿಲಿಯಂ ಸಲಿಬಾ ಗಾಯಗೊಂಡು ಹೊರನಡೆದಿದ್ದು ತಂಡಕ್ಕೆ ಮತ್ತಷ್ಟು ಹಿನ್ನಡೆಯಾಯಿತು.

ಜುಲೈ 19ರಂದು ನ್ಯೂಜೆರ್ಸಿಯ ಮೆಟ್‌ಲೈಫ್ ಸ್ಟೇಡಿಯಂನಲ್ಲಿ ನಡೆಯಲಿರುವ ಫೈನಲ್‌ನಲ್ಲಿ ಸ್ಪೇನ್ ತಂಡವು ಅರ್ಜೆಂಟೀನಾ ಅಥವಾ ಇಂಗ್ಲೆಂಡ್ ವಿರುದ್ಧ ಪ್ರಶಸ್ತಿಗಾಗಿ ಸೆಣಸಲಿದೆ. ಫ್ರಾನ್ಸ್ ತಂಡ ಮೂರನೇ ಸ್ಥಾನಕ್ಕಾಗಿ ಪಂದ್ಯವಾಡಲಿದೆ.