ಕೈವ್: ಸಂಘರ್ಷ ಆರಂಭವಾದ ಬಳಿಕ ರಷ್ಯಾದ ಪಡೆಗಳು ವಶಪಡಿಸಿಕೊಂಡಿದ್ದಕ್ಕಿಂತ ಹೆಚ್ಚಿನ ಪ್ರದೇಶವನ್ನು ಉಕ್ರೇನ್ ಸೇನೆ ಮರುಪಡೆದುಕೊಂಡಿದೆ ಎಂದು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಹೇಳಿದ್ದಾರೆ. ಮುಂಚೂಣಿ ರೇಖೆಯುದ್ದಕ್ಕೂ ರಷ್ಯಾ ಪಡೆಗಳ ವಿರುದ್ಧ ಉಕ್ರೇನಿಯನ್ ಸೈನಿಕರು ನಿರಂತರ ಒತ್ತಡ ಹೇರುತ್ತಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ಈ ವರ್ಷವೂ ಹಲವು ಪ್ರದೇಶಗಳಲ್ಲಿ ಇದೇ ರೀತಿಯ ಬೆಳವಣಿಗೆ ಕಂಡುಬಂದಿದೆ ಎಂದು ಹೇಳಿರುವ ಝೆಲೆನ್ಸ್ಕಿ, ರಷ್ಯಾ ಪಡೆಗಳ ವಿರುದ್ಧ ಉಕ್ರೇನ್ ಸೇನೆಯ ಕಾರ್ಯಾಚರಣೆ ಮುಂದುವರಿದಿದೆ ಎಂದಿದ್ದಾರೆ.
ಡೊಬ್ರೊಪಿಲಿಯಾ, ಕೊಸ್ಟಿಯಾಂಟಿನಿವ್ಕಾ, ಒಲೆಕ್ಸಿಯಿವೊ-ಡ್ರುಜ್ಕಿವ್ಕಾ, ಒರಿಖಿವ್, ನೊವೊಪಾವ್ಲಿವ್ಕಾ, ನೊವೊಆಂಡ್ರಿವ್ಕಾ ಮತ್ತು ವೆಲಿಕೊಮೈಖೈಲಿವ್ಕಾ ಪ್ರದೇಶಗಳು ಉಕ್ರೇನ್ನ ನಿಯಂತ್ರಣದಲ್ಲಿವೆ ಎಂದು ಅವರು ಉಲ್ಲೇಖಿಸಿದ್ದಾರೆ.

ಕ್ರಮಾಟೋರ್ಸ್ಕ್ ಸಮೀಪದ ನೆಲೆಗಳನ್ನು ಉಕ್ರೇನಿಯನ್ ಪಡೆಗಳು ರಕ್ಷಿಸಿಕೊಳ್ಳುತ್ತಿವೆ. ಝಪೊರಿಝಿಯಾ ಬಳಿ ರಷ್ಯಾ ಪಡೆಗಳೊಂದಿಗೆ ಸುಮಾರು 20 ಕಿ.ಮೀ. ದೂರದ ವ್ಯಾಪ್ತಿಯಲ್ಲಿ ಹೋರಾಟ ನಡೆಯುತ್ತಿದೆ ಎಂದೂ ಝೆಲೆನ್ಸ್ಕಿ ತಿಳಿಸಿದ್ದಾರೆ.
ಯುದ್ಧಭೂಮಿಯಲ್ಲಿನ ವಾಸ್ತವ ಪರಿಸ್ಥಿತಿಯ ಕುರಿತು ರಷ್ಯಾದ ಮೂಲಗಳು ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರಿಗೆ ತಪ್ಪು ಮಾಹಿತಿ ನೀಡುತ್ತಿವೆ ಎಂದು ಝೆಲೆನ್ಸ್ಕಿ ಆರೋಪಿಸಿದ್ದಾರೆ.
ಉಕ್ರೇನ್ನ ಮುಂಚೂಣಿ ರಕ್ಷಣಾ ವ್ಯವಸ್ಥೆ ಬಲವಾಗಿದೆ ಎಂದು ಬಣ್ಣಿಸಿದ ಅವರು, ತಮ್ಮ ಜವಾಬ್ದಾರಿಗಳನ್ನು ಸಮರ್ಥವಾಗಿ ನಿರ್ವಹಿಸುತ್ತಿರುವ ಸೈನಿಕರು ಮತ್ತು ಸೇನಾ ಘಟಕಗಳಿಗೆ ಧನ್ಯವಾದ ಅರ್ಪಿಸಿದ್ದಾರೆ.
