ಸಮಗ್ರ ಶಿಕ್ಷಣ: 72 ಲಕ್ಷಕ್ಕೂ ಅಧಿಕ ಶಿಕ್ಷಕರಿಗೆ ತರಬೇತಿ; PRASHAST ಉಪಕ್ರಮದಲ್ಲಿ 60 ಸಾವಿರಕ್ಕೂ ಹೆಚ್ಚು ಶಾಲೆಗಳು ಭಾಗಿ

ನವದೆಹಲಿ: ವಿಶೇಷ ಅಗತ್ಯವುಳ್ಳ ಮಕ್ಕಳಿಗೆ (CwSN) ಸೂಕ್ತವಾದ, ಸುರಕ್ಷಿತ ಹಾಗೂ ಸಮಾನ ಅವಕಾಶಗಳ ಶಿಕ್ಷಣ ಒದಗಿಸುವ ಉದ್ದೇಶದಿಂದ ಕೇಂದ್ರ ಶಿಕ್ಷಣ ಸಚಿವಾಲಯ ಕೈಗೊಂಡಿರುವ ಸಂವೇದನಾಶೀಲತಾ ಕಾರ್ಯಕ್ರಮದಲ್ಲಿ 72 ಲಕ್ಷಕ್ಕೂ ಅಧಿಕ ಶಿಕ್ಷಕರು ಭಾಗವಹಿಸಿದ್ದಾರೆ. PRASHAST ಪೋರ್ಟಲ್ ಮೂಲಕ ನಡೆದ ರಾಷ್ಟ್ರವ್ಯಾಪಿ ಉಪಕ್ರಮದಲ್ಲಿ 60 ಸಾವಿರಕ್ಕೂ ಹೆಚ್ಚು ಶಾಲೆಗಳು ಪಾಲ್ಗೊಂಡಿವೆ ಎಂದು ಸಚಿವಾಲಯ ತಿಳಿಸಿದೆ.

ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ರೂಪಿಸಿರುವ 30 ನಿಮಿಷಗಳ ಈ ಕಾರ್ಯಕ್ರಮವು ಶಿಕ್ಷಕರು, ವಿಶೇಷ ಶಿಕ್ಷಕರು ಹಾಗೂ ಬೋಧಕೇತರ ಸಿಬ್ಬಂದಿಗೆ ವಿಶೇಷ ಅಗತ್ಯವುಳ್ಳ ಮಕ್ಕಳ ಸಮಸ್ಯೆ ಮತ್ತು ಅಗತ್ಯಗಳನ್ನು ಅರ್ಥಮಾಡಿಕೊಳ್ಳಲು ನೆರವಾಗುತ್ತದೆ. ಶಾಲೆಗಳಲ್ಲಿ ಎಲ್ಲ ಮಕ್ಕಳಿಗೂ ಸುರಕ್ಷಿತ, ಸುಲಭವಾಗಿ ಪ್ರವೇಶಿಸಬಹುದಾದ ಮತ್ತು ಬೆಂಬಲಯುತ ವಾತಾವರಣ ನಿರ್ಮಿಸುವುದು ಇದರ ಉದ್ದೇಶವಾಗಿದೆ.

ಈ ಸಂವೇದನಾಶೀಲತಾ ಮಾಡ್ಯೂಲ್ 12 ಭಾರತೀಯ ಭಾಷೆಗಳಲ್ಲಿ ಲಭ್ಯವಿದೆ. ಪ್ರಾಯೋಗಿಕ ಉದಾಹರಣೆಗಳು ಮತ್ತು ಸಂವಾದಾತ್ಮಕ ಚಟುವಟಿಕೆಗಳ ಮೂಲಕ ಮಕ್ಕಳನ್ನು ಗೌರವದಿಂದ ಕಾಣುವುದು ಹಾಗೂ ಸಮಗ್ರ ಶಿಕ್ಷಣದ ಅಭ್ಯಾಸಗಳನ್ನು ಬೆಳೆಸುವುದಕ್ಕೆ ಒತ್ತು ನೀಡಲಾಗಿದೆ.

ಶಾಲಾ ಮುಖ್ಯಸ್ಥರು, ಶಿಕ್ಷಕರು, ವಿಶೇಷ ಶಿಕ್ಷಕರು ಮಾತ್ರವಲ್ಲದೆ ಚಾಲಕರು, ಕಚೇರಿ ಸಿಬ್ಬಂದಿ, ಸ್ವಾಗತಕಾರರು, ವಾರ್ಡನ್‌ಗಳು ಸೇರಿದಂತೆ ಇತರ ಸಹಾಯಕ ಸಿಬ್ಬಂದಿಯೂ ಈ ಕಾರ್ಯಕ್ರಮದ ವ್ಯಾಪ್ತಿಗೆ ಒಳಪಡುತ್ತಾರೆ. ಕಳೆದ ಮೂರು ತಿಂಗಳಿಂದ ನಡೆಯುತ್ತಿರುವ ಅಭಿಯಾನದಲ್ಲಿ ಅಕ್ಟೋಬರ್‌ನಲ್ಲಿ ಭಾಗವಹಿಸುವಿಕೆ ಮತ್ತಷ್ಟು ಹೆಚ್ಚುವ ನಿರೀಕ್ಷೆಯಿದೆ ಎಂದು ಇಲಾಖೆ ತಿಳಿಸಿದೆ.

ವಿಶೇಷ ಅಗತ್ಯವುಳ್ಳ ಮಕ್ಕಳನ್ನು ಆರಂಭಿಕ ಹಂತದಲ್ಲೇ ಗುರುತಿಸಲು PRASHAST ಡಿಜಿಟಲ್ ಸಾಧನವನ್ನು ರೂಪಿಸಲಾಗಿದೆ. ಅಂಗವೈಕಲ್ಯ ಹೊಂದಿರುವ ವ್ಯಕ್ತಿಗಳ ಹಕ್ಕುಗಳ ಕಾಯ್ದೆ-2016ರ ಅಡಿಯಲ್ಲಿ ಗುರುತಿಸಲಾದ ಅಂಗವೈಕಲ್ಯಗಳ ಸಂಭಾವ್ಯ ಲಕ್ಷಣಗಳನ್ನು ಪತ್ತೆಹಚ್ಚಲು ಇದು ನೆರವಾಗುತ್ತದೆ.

ಎರಡು ಹಂತಗಳ ಪರಿಶೀಲನಾ ಪಟ್ಟಿಯ ಮೂಲಕ ಶಿಕ್ಷಕರು ವಿದ್ಯಾರ್ಥಿಗಳಲ್ಲಿ ಗಮನಿಸಬಹುದಾದ ಸೂಚನೆಗಳನ್ನು ಗುರುತಿಸಬಹುದು. ಬಳಿಕ ವಿಶೇಷ ಶಿಕ್ಷಕರು ಪ್ರಕರಣಗಳನ್ನು ಪರಿಶೀಲಿಸಿ, ಅಗತ್ಯವಿದ್ದಲ್ಲಿ ವೈದ್ಯಕೀಯ ಮೌಲ್ಯಮಾಪನಕ್ಕೆ ಶಿಫಾರಸು ಮಾಡುತ್ತಾರೆ.

ಸಮಗ್ರ ಶಿಕ್ಷಣವು ತರಗತಿಗೆ ಮಾತ್ರ ಸೀಮಿತವಾಗಬಾರದು. ಶಾಲಾ ಕಚೇರಿ, ಸಾರಿಗೆ ಮತ್ತು ಇತರ ಸಾಮಾನ್ಯ ಸ್ಥಳಗಳಲ್ಲಿಯೂ ವಿಶೇಷ ಅಗತ್ಯವುಳ್ಳ ಮಕ್ಕಳಿಗೆ ಸೂಕ್ತ ಬೆಂಬಲ ದೊರೆಯಬೇಕು ಎಂಬುದು ಈ ಉಪಕ್ರಮದ ಆಶಯವಾಗಿದೆ.

ಮಕ್ಕಳ ಅಗತ್ಯಗಳನ್ನು ಗುರುತಿಸಿ, ಅವರಿಗೆ ಸೂಕ್ತ ನೆರವು ಒದಗಿಸುವುದು ಶಾಲೆಯ ಎಲ್ಲ ಸಿಬ್ಬಂದಿಯ ಜವಾಬ್ದಾರಿಯಾಗಿದೆ ಎಂದು ಸಚಿವಾಲಯ ತಿಳಿಸಿದೆ.