ಹಾರ್ಮುಜ್ ಜಲಸಂಧಿ ಬಳಿ ಎರಡು ತೈಲ ಟ್ಯಾಂಕರ್‌ಗಳಲ್ಲಿ ಸ್ಫೋಟ

ಟೆಹ್ರಾನ್: ಹಾರ್ಮುಜ್ ಜಲಸಂಧಿ ದಾಟಲು ಯತ್ನಿಸಿದ ಎರಡು ತೈಲ ಟ್ಯಾಂಕರ್‌ಗಳಲ್ಲಿ ಸ್ಫೋಟ ಸಂಭವಿಸಿ ಬೆಂಕಿ ಕಾಣಿಸಿಕೊಂಡಿದೆ ಎಂದು ಇರಾನ್‌ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (IRGC) ತಿಳಿಸಿದೆ.

ಇರಾನ್‌ನ ಅನುಮತಿಯಿಲ್ಲದೆ ನಿಷೇಧಿತ ಮಾರ್ಗದಲ್ಲಿ ಸಂಚರಿಸಿದ ಹಡಗುಗಳು ನೌಕಾ ಮೈನ್‌ಗಳಿಗೆ ಡಿಕ್ಕಿ ಹೊಡೆದು ಸ್ಫೋಟಗೊಂಡಿವೆ ಎಂದು ಆರೋಪಿಸಿದೆ. ಒಂದು ಹಡಗು ಸೂಪರ್ ಟ್ಯಾಂಕರ್ ಆಗಿದ್ದು, ಎರಡೂ ಹಡಗುಗಳ ರೇಡಾರ್ ಮತ್ತು ನ್ಯಾವಿಗೇಷನ್ ವ್ಯವಸ್ಥೆಗಳು ಸ್ಥಗಿತಗೊಂಡಿದ್ದವು ಎಂದು ಹೇಳಿದೆ.

ಅನುಮತಿಯಿಲ್ಲದೆ ಜಲಸಂಧಿಯಲ್ಲಿ ಸಂಚರಿಸದಂತೆ ಹಡಗು ಮಾಲೀಕರು ಮತ್ತು ಸಾಗಣೆ ಕಂಪನಿಗಳಿಗೆ IRGC ಎಚ್ಚರಿಕೆ ನೀಡಿದೆ.

ಫೆಬ್ರವರಿ 28ರಿಂದ ಹಾರ್ಮುಜ್ ಜಲಸಂಧಿಯಲ್ಲಿ ಇರಾನ್ ಕಟ್ಟುನಿಟ್ಟಿನ ನಿಯಂತ್ರಣ ಜಾರಿಗೊಳಿಸಿದೆ. ಮತ್ತೊಂದೆಡೆ, ಇರಾನ್ ಸೇನಾ ಮುಖ್ಯಸ್ಥ ಅಮೀರ್ ಹತಾಮಿ, ದೇಶದ ಸಶಸ್ತ್ರ ಪಡೆಗಳು ಯಾವುದೇ ಬೆದರಿಕೆ ಎದುರಿಸಲು ಸಿದ್ಧವಾಗಿದ್ದು, ಮತ್ತೊಮ್ಮೆ ದಾಳಿ ನಡೆದರೆ ತೀವ್ರ ಪ್ರತಿಕ್ರಿಯೆ ನೀಡುವುದಾಗಿ ಎಚ್ಚರಿಸಿದ್ದಾರೆ.