ಬಿಹಾರದಲ್ಲಿ ಗಂಗಾ ನದಿಯಲ್ಲಿ ದೋಣಿ ಮುಳುಗಿದ ದುರಂತ: 13 ಮಂದಿ ಸಾವು, ಮೃತರ ಕುಟುಂಬಗಳಿಗೆ ₹2 ಲಕ್ಷ ಪರಿಹಾರ

ಪಾಟ್ನಾ: ಬಿಹಾರದ ವೈಶಾಲಿ ಜಿಲ್ಲೆಯ ರಘೋಪುರ ಸಮೀಪ ಗಂಗಾ ನದಿಯಲ್ಲಿ  ಸಂಭವಿಸಿದ ದೋಣಿ ದುರಂತದಲ್ಲಿ ಮಕ್ಕಳು ಸೇರಿದಂತೆ ಕನಿಷ್ಠ 13 ಮಂದಿ ಮೃತಪಟ್ಟಿದ್ದಾರೆ. ಸುಮಾರು 30 ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ದೋಣಿ ನದಿಯ ಮಧ್ಯಭಾಗದಲ್ಲಿ ಮುಳುಗಿದ್ದು, ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ.

ಸ್ಥಳೀಯ ಮೂಲಗಳ ಪ್ರಕಾರ, ವೈಶಾಲಿ ಜಿಲ್ಲೆಯ ರಾಮ್‌ಪುರ ಶ್ಯಾಮಚಂದ್ ಗ್ರಾಮದ ನಿವಾಸಿಗಳು ಗಂಗಾ ನದಿಯ ಆಚೆಗಿನ ಗ್ರಾಮದಲ್ಲಿ ನಡೆಯುತ್ತಿದ್ದ ಔತಣಕೂಟದಲ್ಲಿ ಪಾಲ್ಗೊಳ್ಳಲು ದೋಣಿಯಲ್ಲಿ ತೆರಳುತ್ತಿದ್ದರು. ರಾತ್ರಿ ಸುಮಾರು 8 ಗಂಟೆಗೆ ಈ ದುರ್ಘಟನೆ ಸಂಭವಿಸಿದೆ. ದೋಣಿಯಲ್ಲಿ ಸಾಮರ್ಥ್ಯಕ್ಕಿಂತ ಹೆಚ್ಚಿನ ಪ್ರಯಾಣಿಕರಿದ್ದುದೇ ದುರಂತಕ್ಕೆ ಕಾರಣವಾಗಿರಬಹುದು ಎಂದು ಸ್ಥಳೀಯರು ಶಂಕಿಸಿದ್ದಾರೆ.

ವೈಶಾಲಿ ಜಿಲ್ಲಾಧಿಕಾರಿ ವರ್ಷಾ ಸಿಂಗ್ ಅವರು ಪಿಟಿಐ ಸುದ್ದಿಸಂಸ್ಥೆಗೆ ಮಾಹಿತಿ ನೀಡಿ, ದೋಣಿ ಮುಳುಗಿದ ಪರಿಣಾಮ 13 ಮಂದಿ ಮೃತಪಟ್ಟಿದ್ದು, ಆರು ಮಂದಿಯನ್ನು ರಕ್ಷಿಸಲಾಗಿದೆ ಎಂದು ತಿಳಿಸಿದ್ದಾರೆ. ನಾಪತ್ತೆಯಾದವರಿಗಾಗಿ ಶೋಧ ಕಾರ್ಯ ಮುಂದುವರಿದಿದೆ.

ತಿರ್ಹುತ್ ವಲಯದ ಉಪ ಪೊಲೀಸ್ ಮಹಾನಿರ್ದೇಶಕ ಚಂದನ್ ಕುಮಾರ್ ಕುಶ್ವಾಹ ಅವರ ಪ್ರಕಾರ, ರಕ್ಷಣಾ ಕಾರ್ಯಾಚರಣೆಗಾಗಿ ಮುಳುಗು ತಜ್ಞರು, ಸ್ಥಳೀಯ ಪೊಲೀಸರು ಮತ್ತು ರಾಜ್ಯ ವಿಪತ್ತು ನಿರ್ವಹಣಾ ಪಡೆಯ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಜಿಲ್ಲಾಧಿಕಾರಿ ವರ್ಷಾ ಸಿಂಗ್ ಹಾಗೂ ಪೊಲೀಸ್ ವರಿಷ್ಠಾಧಿಕಾರಿ ಶುಭಂಕರ್ ಮಿಶ್ರಾ ಅವರು ಕಾರ್ಯಾಚರಣೆಯ ಮೇಲ್ವಿಚಾರಣೆ ನಡೆಸುತ್ತಿದ್ದಾರೆ.

ಮೃತರ ಕುಟುಂಬಗಳಿಗೆ ಪ್ರಧಾನಿ ಮೋದಿ ಪರಿಹಾರ

ದೋಣಿ ದುರಂತಕ್ಕೆ ಪ್ರಧಾನಿ ನರೇಂದ್ರ ಮೋದಿ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಮೃತರ ಕುಟುಂಬಗಳ ದುಃಖದಲ್ಲಿ ತಾವೂ ಭಾಗಿಯಾಗಿರುವುದಾಗಿ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಗಾಯಾಳುಗಳು ಶೀಘ್ರ ಗುಣಮುಖರಾಗಲಿ ಎಂದು ಹಾರೈಸಿದ್ದಾರೆ.

ಪ್ರಧಾನಮಂತ್ರಿಗಳ ರಾಷ್ಟ್ರೀಯ ಪರಿಹಾರ ನಿಧಿಯಿಂದ ಮೃತರ ಕುಟುಂಬದ ವಾರಸುದಾರರಿಗೆ ತಲಾ ₹2 ಲಕ್ಷ ಹಾಗೂ ಗಾಯಾಳುಗಳಿಗೆ ತಲಾ ₹50,000 ಪರಿಹಾರ ನೀಡುವುದಾಗಿ ಘೋಷಿಸಿದ್ದಾರೆ.

ದುರಂತದ ಹಿನ್ನೆಲೆಯಲ್ಲಿ ಸ್ಥಳೀಯ ಆಡಳಿತ ರಕ್ಷಣಾ ಕಾರ್ಯಾಚರಣೆಯನ್ನು ಚುರುಕುಗೊಳಿಸಿದ್ದು, ನಾಪತ್ತೆಯಾದವರ ಪತ್ತೆಗೆ ಶೋಧ ಮುಂದುವರಿದಿದೆ.

The loss of lives in the boat capsizing incident in Vaishali, Bihar, is deeply painful. My thoughts are with the bereaved families in this difficult time. I pray for the speedy recovery of all those injured. The local administration is assisting those affected.

An ex-gratia of Rs. 2 lakh from PMNRF would be given to the next of kin of each of those who lost their lives. The injured would be given Rs. 50,000: PM @narendramodi

— PMO India (@PMOIndia) October 13, 2026