‘ರಹತ್ ಮಿತ್ರ’: ಭಾರತ–ಮ್ಯಾನ್ಮಾರ್ ಮೊದಲ ತ್ರಿಸೇನೆಗಳ ವಿಪತ್ತು ಪರಿಹಾರ ಸಮರಾಭ್ಯಾಸ

ಚೆನ್ನೈ: ಭಾರತ ಮತ್ತು ಮ್ಯಾನ್ಮಾರ್ ತಮ್ಮ ಮೊದಲ ದ್ವಿಪಕ್ಷೀಯ ತ್ರಿಸೇನೆಗಳ ಮಾನವೀಯ ನೆರವು ಮತ್ತು ವಿಪತ್ತು ಪರಿಹಾರ ಸಮರಾಭ್ಯಾಸ ‘ರಹತ್ ಮಿತ್ರ’ವನ್ನು ಚೆನ್ನೈನಲ್ಲಿ ಆಯೋಜಿಸಿವೆ. ಎರಡು ದಿನಗಳ ಕಸರತ್ತು ನವೆಂಬರ್ 6ರಂದು ಮುಕ್ತಾಯಗೊಂಡಿದೆ.

‘ಮಾನವೀಯತೆಗಾಗಿ ಒಟ್ಟಾಗಿ, ಪಾಲುದಾರಿಕೆಯ ಮೂಲಕ ಬಲಿಷ್ಠ’ ಎಂಬ ಘೋಷವಾಕ್ಯದೊಂದಿಗೆ ನಡೆದ ಈ ಸಮರಾಭ್ಯಾಸವು ಎರಡೂ ದೇಶಗಳ ರಕ್ಷಣಾ ಸಹಕಾರ ಬಲಪಡಿಸುವುದು, ಕಾರ್ಯಾಚರಣೆಯ ಸಮನ್ವಯ ಹೆಚ್ಚಿಸುವುದು ಮತ್ತು ಸಶಸ್ತ್ರ ಪಡೆಗಳ ನಡುವೆ ಪರಸ್ಪರ ನಂಬಿಕೆ ಬೆಳೆಸುವ ಗುರಿ ಹೊಂದಿದೆ.

ಭಾರತ ಮತ್ತು ಮ್ಯಾನ್ಮಾರ್‌ನ ಭೂಸೇನೆ, ನೌಕಾಪಡೆ ಹಾಗೂ ವಾಯುಪಡೆಯ 300ಕ್ಕೂ ಹೆಚ್ಚು ಸಿಬ್ಬಂದಿ ಈ ಕಸರತ್ತಿನಲ್ಲಿ ಭಾಗವಹಿಸಿದ್ದಾರೆ. ವಿಪತ್ತು ಪರಿಹಾರ ಕಾರ್ಯಾಚರಣೆಗಳಲ್ಲಿ ಅನುಭವ ಹಂಚಿಕೊಳ್ಳುವುದು, ವೃತ್ತಿಪರ ಪರಿಣತಿ ವಿನಿಮಯ ಮಾಡಿಕೊಳ್ಳುವುದು ಮತ್ತು ಜಂಟಿಯಾಗಿ ಕಾರ್ಯನಿರ್ವಹಿಸುವ ಸಾಮರ್ಥ್ಯ ಹೆಚ್ಚಿಸುವುದು ಇದರ ಪ್ರಮುಖ ಉದ್ದೇಶವಾಗಿದೆ.

ಭಾರತೀಯ ನೌಕಾಪಡೆಯ ಸಮನ್ವಯದಲ್ಲಿ ನಡೆದ ಈ ಮೊದಲ ಜಂಟಿ ಸಮರಾಭ್ಯಾಸವು ನೆರೆಯ ರಾಷ್ಟ್ರಗಳ ನಡುವಿನ ರಕ್ಷಣಾ ಸಂಬಂಧ ಬಲಪಡಿಸುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಯಾಗಿದೆ.

ಈ ಉಪಕ್ರಮವು ಭಾರತದ ‘ನೆರೆಹೊರೆಯವರಿಗೆ ಮೊದಲ ಆದ್ಯತೆ’ ನೀತಿ ಹಾಗೂ ‘ಮಹಾಸಾಗರ್’ ದೃಷ್ಟಿಕೋನವನ್ನು ಪ್ರತಿಬಿಂಬಿಸುತ್ತದೆ. ನೈಸರ್ಗಿಕ ವಿಕೋಪಗಳು ಮತ್ತು ಮಾನವೀಯ ತುರ್ತು ಪರಿಸ್ಥಿತಿಗಳ ಸಂದರ್ಭದಲ್ಲಿ ಜಂಟಿಯಾಗಿ ಸ್ಪಂದಿಸುವ ಸಾಮರ್ಥ್ಯ ವೃದ್ಧಿಸುವ ಮೂಲಕ ಪ್ರಾದೇಶಿಕ ಶಾಂತಿ ಮತ್ತು ಸ್ಥಿರತೆಗೆ ಕೊಡುಗೆ ನೀಡುವುದು ಎರಡೂ ದೇಶಗಳ ಉದ್ದೇಶವಾಗಿದೆ.