ರಾಜ್ಯದಲ್ಲಿ 8,000 ಪೊಲೀಸ್ ಕಾನ್ಸ್ಟೇಬಲ್ ಹುದ್ದೆಗಳ ನೇಮಕಾತಿ: ಪಾರದರ್ಶಕತೆಗೆ ಒತ್ತು ಎಂದ ಪ್ರಿಯಾಂಕ್ ಖರ್ಗೆ

ಬೆಂಗಳೂರು: ಗೃಹ ಇಲಾಖೆಯ 8000 ಪೊಲೀಸ್ ಕಾನ್ಸ್ಟೇಬಲ್ ಹುದ್ದೆಗಳ ನೇಮಕಾತಿ ಪ್ರಕ್ರಿಯೆಯನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ಮೂಲಕ ಯಾವುದೇ ಗೊಂದಲ, ವಿಳಂಬ ಹಾಗೂ ಅಕ್ರಮಗಳಿಗೆ ಅವಕಾಶವಿಲ್ಲದಂತೆ ಅತ್ಯಂತ ಪಾರದರ್ಶಕವಾಗಿ ನಡೆಸಲಾಗಿದೆ ಎಂದು ಗೃಹ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.

ಸಾಮಾಜಿಕ ಮಾಧ್ಯಮ ‘ಎಕ್ಸ್‌’ನಲ್ಲಿ ಮಾಹಿತಿ ಹಂಚಿಕೊಂಡಿರುವ ಅವರು, ಅಧಿಸೂಚನೆ ಹೊರಡಿಸುವುದರಿಂದ ಹಿಡಿದು ಫಲಿತಾಂಶ ಪ್ರಕಟಿಸುವವರೆಗೆ ಸಂಪೂರ್ಣ ನೇಮಕಾತಿ ಪ್ರಕ್ರಿಯೆಯನ್ನು ಕೇವಲ ಮೂರೂವರೆ ತಿಂಗಳಲ್ಲಿ ಪೂರ್ಣಗೊಳಿಸಿರುವುದು ವಿಶೇಷ ಎಂದಿದ್ದಾರೆ.

7,905 ಕಾನ್ಸ್ಟೇಬಲ್ ಹುದ್ದೆಗಳ ನೇಮಕಾತಿ ಪ್ರಕ್ರಿಯೆಯಲ್ಲಿ ಯಾವುದೇ ಅಕ್ರಮಗಳಿಗೆ ಅವಕಾಶ ನೀಡದೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ. ಪರೀಕ್ಷೆ ನಡೆದ ಒಂದೇ ದಿನದಲ್ಲಿ ಒಎಂಆರ್ ಉತ್ತರ ಪತ್ರಿಕೆಗಳನ್ನು ವೆಬ್‌ಸೈಟ್‌ಗೆ ಅಪ್‌ಲೋಡ್ ಮಾಡುವ ಮೂಲಕ ತಂತ್ರಜ್ಞಾನದ ಸಮರ್ಥ ಬಳಕೆ ಹಾಗೂ ಪಾರದರ್ಶಕತೆಗೆ ಒತ್ತು ನೀಡಲಾಗಿದೆ ಎಂದು ಅವರು ಹೇಳಿದ್ದಾರೆ.

ಕೆಇಎ ಹಾಗೂ ಗೃಹ ಇಲಾಖೆಯ ನಡುವಿನ ಸಮನ್ವಯ ಮತ್ತು ಸಹಕಾರವು ನೇಮಕಾತಿ ಪ್ರಕ್ರಿಯೆ ಯಶಸ್ವಿಯಾಗಿ ಪೂರ್ಣಗೊಳ್ಳಲು ಪ್ರಮುಖ ಕಾರಣವಾಗಿದೆ ಎಂದು ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.

ಯುವಜನರ ಕನಸುಗಳಿಗೆ ಭರವಸೆ ತುಂಬುವ, ಅವರ ಬದುಕಿಗೆ ಉತ್ತಮ ಅವಕಾಶಗಳನ್ನು ಕಲ್ಪಿಸುವ ಹಾಗೂ ಸುಭದ್ರ ಭವಿಷ್ಯ ರೂಪಿಸುವ ನಿಟ್ಟಿನಲ್ಲಿ ಯಾವುದೇ ಲೋಪಗಳಿಗೆ ಅವಕಾಶ ನೀಡಬಾರದು ಎಂಬುದು ಸರ್ಕಾರದ ಆಶಯವಾಗಿದೆ ಎಂದು ಅವರು ಹೇಳಿದ್ದಾರೆ.

ಯಾವುದೇ ವಿಳಂಬವಿಲ್ಲದೆ, ಗೊಂದಲಗಳಿಲ್ಲದೆ, ವಿಳಂಬವಿಲ್ಲದೆ, ಅಕ್ರಮಗಳಿಗೆ ಅವಕಾಶವಿಲ್ಲದೆ ಗೃಹ ಇಲಾಖೆಯ ಸುಮಾರು 8000 ಪೊಲೀಸ್ ಕಾನ್ಸ್ಟೇಬಲ್ ಹುದ್ದೆಗಳಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಮೂಲಕ ಅತ್ಯಂತ ಪಾರದರ್ಶಕವಾಗಿ ನೇಮಕಾತಿ ಪ್ರಕ್ರಿಯೆ ನಡೆದಿದೆ.

◆ ಅಧಿಸೂಚನೆ ಹೊರಡಿಸುವುದರಿಂದ ಫಲಿತಾಂಶ ಪ್ರಕಟಿಸುವವರೆಗೆ ಎಲ್ಲಾ ಪ್ರಕ್ರಿಯೆಯನ್ನು ಕೇವಲ ಮೂರೂವರೆ ತಿಂಗಳಲ್ಲಿ ಪೂರೈಸಿದ್ದು ವಿಶೇಷದ ಸಂಗತಿ.

◆ ಯಾವುದೇ ಅಕ್ರಮಕ್ಕೆ ಅವಕಾಶ ಇಲ್ಲದೆ 7, 905 ಕಾನ್ಸ್ಟೇಬಲ್ ಹುದ್ದೆಗಳನ್ನು ಅತ್ಯಂತ ಅಚ್ಚುಕಟ್ಟಾಗಿ ನಿರ್ವಹಿಸಲಾಗಿದೆ.

◆ ಒಂದೇ ದಿನದಲ್ಲಿ ಒಎಂಆರ್ ಶೀಟ್ ಗಳನ್ನು ವೆಬ್ ಸೈಟ್ ಗೆ ಅಪ್ಲೋಡ್ ಮಾಡುವ ಮೂಲಕ ತಂತ್ರಜ್ಞಾನದ ಸಮರ್ಥ ಬಳಕೆ ಮತ್ತು ಪಾರದರ್ಶಕತೆಗೆ ಒತ್ತು ನೀಡಲಾಗಿದೆ.

◆ ಕೆಇಎ ಮತ್ತು ಗೃಹ ಇಲಾಖೆಯ ನಡುವಿನ ಸಮನ್ವಯತೆ, ಸಹಕಾರಗಳು ಈ ನೇಮಕಾತಿ ಪ್ರಕ್ರಿಯೆಯ ಯಶಸ್ಸಿಗೆ ಕಾರಣವಾಗಿದೆ.

ಯುವ ಜನರ ಕನಸುಗಳಿಗೆ ಅವರ ಬದುಕಿಗೆ ಉತ್ತಮ ಭರವಸೆ ತುಂಬುವ ಹಾಗೂ ಸುಭದ್ರ ಭವಿಷ್ಯ ರೂಪಿಸುವಲ್ಲಿ ಯಾವುದೇ ಲೋಪಗಳಿಗೆ ಅವಕಾಶವಾಗಬಾರದು ಎನ್ನುವುದು ನಮ್ಮ ಸರ್ಕಾರದ ಆಶಯ.

— Priyank Kharge / ಪ್ರಿಯಾಂಕ್ ಖರ್ಗೆ (@PriyankKharge) October 5, 2026