ನವದೆಹಲಿ: ಮಹಿಳಾ ಪ್ರೀಮಿಯರ್ ಲೀಗ್ (WPL) 2027ರ ಆಟಗಾರ್ತಿಯರ ಹರಾಜಿಗೆ ಸಿದ್ಧತೆ ಪೂರ್ಣಗೊಂಡಿದ್ದು, ಅಕ್ಟೋಬರ್ 28ರಂದು ಕೊಚ್ಚಿಯಲ್ಲಿ ಹರಾಜು ಪ್ರಕ್ರಿಯೆ ನಡೆಯಲಿದೆ. ಒಟ್ಟು 146 ಆಟಗಾರ್ತಿಯರು ಹರಾಜಿನಲ್ಲಿ ತಮ್ಮ ಅದೃಷ್ಟ ಪರೀಕ್ಷೆಗೆ ಒಳಗಾಗಲಿದ್ದು, ಫ್ರಾಂಚೈಸಿಗಳಲ್ಲಿ ಲಭ್ಯವಿರುವುದು ಕೇವಲ 27 ಸ್ಥಾನಗಳು. ಹೀಗಾಗಿ ತಂಡದ ಅಗತ್ಯಕ್ಕೆ ಅನುಗುಣವಾಗಿ ಆಟಗಾರ್ತಿಯರನ್ನು ಆಯ್ಕೆ ಮಾಡಿಕೊಳ್ಳಲು ಫ್ರಾಂಚೈಸಿಗಳ ನಡುವೆ ಪೈಪೋಟಿ ನಿರೀಕ್ಷಿಸಲಾಗಿದೆ.
ಹರಾಜಿಗೆ ನೋಂದಾಯಿಸಿಕೊಂಡಿರುವ 146 ಆಟಗಾರ್ತಿಯರಲ್ಲಿ 119 ಮಂದಿ ಭಾರತೀಯರು ಹಾಗೂ 27 ಮಂದಿ ವಿದೇಶಿ ಆಟಗಾರ್ತಿಯರು. ಒಟ್ಟು 27 ಸ್ಥಾನಗಳ ಪೈಕಿ ಭಾರತೀಯ ಆಟಗಾರ್ತಿಯರಿಗೆ 20 ಸ್ಥಾನಗಳು ಲಭ್ಯವಿದ್ದರೆ, ವಿದೇಶಿ ಆಟಗಾರ್ತಿಯರಿಗೆ ಏಳು ಸ್ಥಾನಗಳಿವೆ. ಭಾರತೀಯ ಆಟಗಾರ್ತಿಯರಲ್ಲಿ 22 ಮಂದಿ ಕ್ಯಾಪ್ಡ್ (ಅಂತರರಾಷ್ಟ್ರೀಯ ಪಂದ್ಯಗಳನ್ನಾಡಿದವರು) ಆಟಗಾರ್ತಿಯರಾಗಿದ್ದು, 97 ಮಂದಿ ಅನ್ಕ್ಯಾಪ್ಡ್ ಆಟಗಾರ್ತಿಯರಿದ್ದಾರೆ. ಯುವ ಪ್ರತಿಭೆಗಳಿಗೆ ಈ ಬಾರಿ ಯಾವ ತಂಡಗಳಲ್ಲಿ ಅವಕಾಶ ಸಿಗಲಿದೆ ಎಂಬ ಕುತೂಹಲ ಮೂಡಿದೆ.

ವಿದೇಶಿ ಆಟಗಾರ್ತಿಯರ ವಿಭಾಗದಲ್ಲಿ 14 ಮಂದಿ ಕ್ಯಾಪ್ಡ್ ಹಾಗೂ 13 ಮಂದಿ ಅನ್ಕ್ಯಾಪ್ಡ್ ಆಟಗಾರ್ತಿಯರಿದ್ದಾರೆ. ಅಸೋಸಿಯೇಟ್ ರಾಷ್ಟ್ರಗಳ ಆರು ಆಟಗಾರ್ತಿಯರೂ ಹರಾಜಿಗೆ ನೋಂದಾಯಿಸಿಕೊಂಡಿದ್ದಾರೆ.
ಇಂಗ್ಲೆಂಡ್ನ ಸೋಫಿಯಾ ಡಂಕ್ಲಿ ಹಾಗೂ ಆಸ್ಟ್ರೇಲಿಯಾದ ಸೋಫಿ ಮೊಲಿನೆಕ್ಸ್ ತಲಾ 50 ಲಕ್ಷ ರೂ. ಗರಿಷ್ಠ ಮೂಲ ಬೆಲೆಯೊಂದಿಗೆ ಹರಾಜಿಗೆ ಪ್ರವೇಶಿಸಿದ್ದಾರೆ. ಭಾರತೀಯ ಆಟಗಾರ್ತಿಯರಾದ ಜಿ. ಕಮಲಿನಿ ಮತ್ತು ಕಿರಣ್ ನವ್ಗಿರೆ, ವಿದೇಶಿ ಆಟಗಾರ್ತಿಯರಾದ ಹೀದರ್ ಗ್ರಹಾಂ ಹಾಗೂ ಜೆಸ್ ಜೊನಾಸೆನ್ ತಲಾ 40 ಲಕ್ಷ ರೂ. ಮೂಲ ಬೆಲೆ ಹೊಂದಿದ್ದಾರೆ. ಇನ್ನು 30 ಆಟಗಾರ್ತಿಯರು ತಲಾ 30 ಲಕ್ಷ ರೂ. ಮೂಲ ಬೆಲೆಗೆ ನೋಂದಾಯಿಸಿಕೊಂಡಿದ್ದಾರೆ.
ತಂಡಗಳ ಅಗತ್ಯ, ಆಟಗಾರ್ತಿಯರ ಪ್ರದರ್ಶನ ಮತ್ತು ಲಭ್ಯವಿರುವ ಬಜೆಟ್ ಆಧರಿಸಿ ಫ್ರಾಂಚೈಸಿಗಳು ಬಿಡ್ ಮಾಡುವ ನಿರೀಕ್ಷೆಯಿದೆ. ಅಕ್ಟೋಬರ್ 28ರಂದು ಸಂಜೆ 5.30ಕ್ಕೆ ಹರಾಜು ಪ್ರಕ್ರಿಯೆ ಆರಂಭವಾಗಲಿದೆ.
