ಲಾಸಾ: ಟಿಬೆಟ್ನಲ್ಲಿ ಸಂಭವಿಸಿದ 7.0 ತೀವ್ರತೆಯ ಭೂಕಂಪದಲ್ಲಿ 16 ಮಂದಿ ಮೃತಪಟ್ಟಿದ್ದು, 300ಕ್ಕೂ ಹೆಚ್ಚು ಮನೆಗಳು ಕುಸಿದಿವೆ. ಘಟನೆಯಲ್ಲಿ ಗಾಯಗೊಂಡಿರುವ 32 ಮಂದಿಯಲ್ಲಿ 10ಕ್ಕೂ ಹೆಚ್ಚು ಜನರ ಸ್ಥಿತಿ ಗಂಭೀರವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಭಾರತದ ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರದ ಮಾಹಿತಿ ಪ್ರಕಾರ, ಭೂಕಂಪವು 173 ಕಿ.ಮೀ. ಆಳದಲ್ಲಿ ಸಂಭವಿಸಿದೆ. ಟಿಬೆಟ್ ರಾಜಧಾನಿ ಲಾಸಾದಿಂದ ಸುಮಾರು 400 ಕಿ.ಮೀ. ದೂರದಲ್ಲಿ ಭೂಕಂಪದ ಕೇಂದ್ರಬಿಂದು ಪತ್ತೆಯಾಗಿದೆ.
ಭೂಕಂಪದಿಂದ ಹಾನಿಗೊಳಗಾದ ಪ್ರದೇಶಗಳಲ್ಲಿ ರಕ್ಷಣಾ ಮತ್ತು ಪರಿಹಾರ ಕಾರ್ಯಾಚರಣೆಗಳನ್ನು ಚುರುಕುಗೊಳಿಸಲಾಗಿದೆ. ಸಂತ್ರಸ್ತರ ರಕ್ಷಣೆ ಹಾಗೂ ಪರಿಹಾರ ಕಾರ್ಯಗಳಿಗಾಗಿ ಪೊಲೀಸರು, ಅಗ್ನಿಶಾಮಕ ಸಿಬ್ಬಂದಿ ಮತ್ತು ರಕ್ಷಣಾ ದಳದ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.

ಟಿಬೆಟ್ನಲ್ಲಿ ಪದೇಪದೆ ನೈಸರ್ಗಿಕ ವಿಕೋಪಗಳು ಸಂಭವಿಸುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ಸೆಪ್ಟೆಂಬರ್ 3ರಂದು ಈ ಪ್ರದೇಶದಲ್ಲಿ 5.0 ತೀವ್ರತೆಯ ಭೂಕಂಪ ಸಂಭವಿಸಿತ್ತು. 2025ರ ಜನವರಿಯಲ್ಲಿ 6.8 ತೀವ್ರತೆಯ ಭೂಕಂಪಕ್ಕೆ 120ಕ್ಕೂ ಹೆಚ್ಚು ಮಂದಿ ಬಲಿಯಾಗಿದ್ದರು. ಇತ್ತೀಚೆಗೆ, ಆಗಸ್ಟ್ 26ರಂದು ನೇಪಾಳ–ಟಿಬೆಟ್ ಗಡಿ ಪ್ರದೇಶದಲ್ಲಿ ಹಿಮ ಮತ್ತು ಬಂಡೆಗಳ ಕುಸಿತದಿಂದ ಭೀಕರ ಪ್ರವಾಹ ಉಂಟಾಗಿತ್ತು. ಈ ಘಟನೆಗಳ ಬೆನ್ನಲ್ಲೇ ಮತ್ತೊಂದು ಭೂಕಂಪ ಸಂಭವಿಸಿರುವುದು ಟಿಬೆಟ್ನಲ್ಲಿ ಆತಂಕ ಹೆಚ್ಚಿಸಿದೆ.
