ಲಕ್ನೋ: 2027ರಲ್ಲಿ ನಡೆಯಲಿರುವ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಗೆ ಮುನ್ನ ಸಮಾಜವಾದಿ ಪಕ್ಷ (ಎಸ್ಪಿ) ಮತ್ತು ಕಾಂಗ್ರೆಸ್ ನಡುವಿನ ಸೀಟು ಹಂಚಿಕೆ ವಿವಾದ ತೀವ್ರಗೊಳ್ಳುವ ಲಕ್ಷಣಗಳು ಕಾಣಿಸಿಕೊಂಡಿವೆ. ಬಿಜೆಪಿ ವಿರುದ್ಧ ಒಗ್ಗಟ್ಟಿನ ಹೋರಾಟ ನಡೆಸಲು ಮುಂದಾಗಿರುವ ‘ಇಂಡಿ’ ಮೈತ್ರಿಕೂಟದಲ್ಲಿ ಇದೀಗ ಕ್ಷೇತ್ರಗಳ ಹಂಚಿಕೆಯೇ ಪ್ರಮುಖ ಸವಾಲಾಗಿ ಪರಿಣಮಿಸಿದೆ.
403 ಸದಸ್ಯ ಬಲದ ಉತ್ತರ ಪ್ರದೇಶ ವಿಧಾನಸಭೆಯಲ್ಲಿ ಕಾಂಗ್ರೆಸ್ಗೆ 60ರಿಂದ 70 ಕ್ಷೇತ್ರಗಳನ್ನು ನೀಡುವ ಬಗ್ಗೆ ಅಖಿಲೇಶ್ ಯಾದವ್ ನೇತೃತ್ವದ ಸಮಾಜವಾದಿ ಪಕ್ಷ ಚಿಂತನೆ ನಡೆಸುತ್ತಿದೆ ಎನ್ನಲಾಗಿದೆ. ಆದರೆ, 2024ರ ಲೋಕಸಭಾ ಚುನಾವಣೆಯ ಸಾಧನೆಯ ಹಿನ್ನೆಲೆಯಲ್ಲಿ ಹೆಚ್ಚಿನ ಕ್ಷೇತ್ರಗಳನ್ನು ಪಡೆಯಲು ಕಾಂಗ್ರೆಸ್ ಒತ್ತಡ ಹೇರುತ್ತಿದೆ. ಪಕ್ಷವು 120ರಿಂದ 170 ಕ್ಷೇತ್ರಗಳವರೆಗೆ ಬೇಡಿಕೆ ಮುಂದಿಟ್ಟಿದೆ ಎಂಬ ವರದಿಗಳು ರಾಜಕೀಯ ವಲಯದಲ್ಲಿ ಚರ್ಚೆಗೆ ಕಾರಣವಾಗಿವೆ.
ಹೆಚ್ಚಿನ ಕ್ಷೇತ್ರಗಳಿಗೆ ಕಾಂಗ್ರೆಸ್ ಪಟ್ಟು
2024ರ ಲೋಕಸಭಾ ಚುನಾವಣೆಯಲ್ಲಿ ಉತ್ತರ ಪ್ರದೇಶದಲ್ಲಿ ಆರು ಸಂಸದೀಯ ಕ್ಷೇತ್ರಗಳನ್ನು ಗೆದ್ದಿರುವ ಕಾಂಗ್ರೆಸ್, ರಾಜ್ಯದಲ್ಲಿ ತನ್ನ ಸಂಘಟನೆಯನ್ನು ಬಲಪಡಿಸಲು ಹೆಚ್ಚಿನ ವಿಧಾನಸಭಾ ಕ್ಷೇತ್ರಗಳಲ್ಲಿ ಸ್ಪರ್ಧಿಸುವ ಉದ್ದೇಶ ಹೊಂದಿದೆ. 2017ರ ವಿಧಾನಸಭಾ ಚುನಾವಣೆಯಲ್ಲಿ ಎಸ್ಪಿ ಜತೆಗಿನ ಮೈತ್ರಿಯಲ್ಲಿ 114 ಕ್ಷೇತ್ರಗಳಲ್ಲಿ ಸ್ಪರ್ಧಿಸಿದ್ದ ಉದಾಹರಣೆಯನ್ನೂ ಕಾಂಗ್ರೆಸ್ ನಾಯಕರು ಮುಂದಿಡುತ್ತಿದ್ದಾರೆ.
ಮೈತ್ರಿಕೂಟದಲ್ಲಿ ಕೇವಲ ಎಸ್ಪಿಗೆ ನೆರವಾಗುವ ಪಕ್ಷವಾಗಿ ಉಳಿಯದೆ, ತನ್ನ ರಾಜಕೀಯ ನೆಲೆಯನ್ನು ವಿಸ್ತರಿಸಿಕೊಳ್ಳಬೇಕು ಎಂಬುದು ಕಾಂಗ್ರೆಸ್ನ ಲೆಕ್ಕಾಚಾರವಾಗಿದೆ.

ಎಸ್ಪಿ ತನ್ನ ಪ್ರಾಬಲ್ಯ ಉಳಿಸಿಕೊಳ್ಳುವ ತಂತ್ರ
ಇನ್ನೊಂದೆಡೆ, ಸುಮಾರು 330ರಿಂದ 340 ಕ್ಷೇತ್ರಗಳಲ್ಲಿ ಸ್ಪರ್ಧಿಸಲು ಎಸ್ಪಿ ಉದ್ದೇಶಿಸಿದೆ ಎನ್ನಲಾಗಿದೆ. ಹಿಂದಿನ ವಿಧಾನಸಭಾ ಚುನಾವಣೆಗಳಲ್ಲಿ ಕಾಂಗ್ರೆಸ್ನ ಸಾಧನೆ ದುರ್ಬಲವಾಗಿದ್ದುದನ್ನು ಪರಿಗಣಿಸಿ, ಹೆಚ್ಚಿನ ಕ್ಷೇತ್ರಗಳನ್ನು ತನ್ನಲ್ಲೇ ಉಳಿಸಿಕೊಳ್ಳಲು ಎಸ್ಪಿ ಮುಂದಾಗಿದೆ.
ಸೀಟು ಹಂಚಿಕೆ ಮಾತುಕತೆಗಳನ್ನು ಅಂತಿಮಗೊಳಿಸುವಲ್ಲಿ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಪ್ರಮುಖ ಪಾತ್ರ ವಹಿಸುತ್ತಿದ್ದಾರೆ. ನವೆಂಬರ್ 15ರೊಳಗೆ ಮಾತುಕತೆ ಪೂರ್ಣಗೊಳಿಸಿ ಅಭ್ಯರ್ಥಿಗಳಿಗೆ ಪ್ರಚಾರಕ್ಕೆ ಸಾಕಷ್ಟು ಸಮಯ ನೀಡಲು ಕಾಂಗ್ರೆಸ್ ಬಯಸಿದೆ.
ಭಿನ್ನಾಭಿಪ್ರಾಯಗಳ ನಡುವೆಯೂ ಬಿಜೆಪಿಯನ್ನು ಸೋಲಿಸುವುದೇ ಮೈತ್ರಿಕೂಟದ ಪ್ರಮುಖ ಗುರಿ ಎಂದು ಅಖಿಲೇಶ್ ಯಾದವ್ ಪ್ರತಿಪಾದಿಸಿದ್ದಾರೆ. 2027ರ ಚುನಾವಣೆಯಲ್ಲಿ ಎಸ್ಪಿ-ಕಾಂಗ್ರೆಸ್ ಮೈತ್ರಿಯ ಭವಿಷ್ಯವನ್ನು ಕ್ಷೇತ್ರ ಹಂಚಿಕೆಯ ಅಂತಿಮ ಸೂತ್ರ ನಿರ್ಧರಿಸುವ ಸಾಧ್ಯತೆಯಿದೆ.
