ಮುಂಬಯಿ: ಮಹಾರಾಷ್ಟ್ರದ ಎನ್ಸಿಪಿ (ಅಜಿತ್ ಪವಾರ್ ಬಣ)ದಲ್ಲಿ ಆಂತರಿಕ ಭಿನ್ನಾಭಿಪ್ರಾಯಗಳು ತೀವ್ರಗೊಳ್ಳುತ್ತಿರುವ ಲಕ್ಷಣಗಳು ಗೋಚರಿಸಿವೆ. ಪಕ್ಷದ ಹಿರಿಯ ನಾಯಕರ ಗುಂಪೊಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ದೆಹಲಿಯಲ್ಲಿ ಭೇಟಿಯಾದ ಬೆನ್ನಲ್ಲೇ, ಮುಂಬಯಿಯಲ್ಲಿ ಕೋರ್ ಕಮಿಟಿ ಸಭೆ ನಡೆದಿದೆ. ಇದರ ಬೆನ್ನಲ್ಲೇ ಉಪಮುಖ್ಯಮಂತ್ರಿ ಸುನೇತ್ರಾ ಪವಾರ್ ಅವರು ಪಕ್ಷದ ಎಲ್ಲ ಶಾಸಕರ ತುರ್ತು ಸಭೆ ಕರೆದಿದ್ದು, ಪಕ್ಷದೊಳಗಿನ ಒಗ್ಗಟ್ಟು ಮತ್ತು ನಾಯಕತ್ವಕ್ಕೆ ಈ ಸಭೆ ನಿರ್ಣಾಯಕವಾಗಲಿದೆ ಎಂದು ಹೇಳಲಾಗುತ್ತಿದೆ.
ಪಕ್ಷದಲ್ಲಿ ಯಾವುದೇ ಅಸಮಾಧಾನವಿಲ್ಲ ಎಂದು ಎನ್ಸಿಪಿ ರಾಜ್ಯ ಘಟಕದ ಅಧ್ಯಕ್ಷ ಸುನಿಲ್ ತಟ್ಕರೆ ಸ್ಪಷ್ಟಪಡಿಸಿದ್ದಾರೆ. ದೆಹಲಿಯಲ್ಲಿ ನಡೆದ ಸಭೆ ಮೊದಲೇ ನಿಗದಿಯಾಗಿತ್ತು. ಪಕ್ಷದ ಎಲ್ಲ ನಾಯಕರು ಒಗ್ಗಟ್ಟಾಗಿದ್ದಾರೆ. ಮುಂದಿನ ಕಾರ್ಯಯೋಜನೆಗಳು, ಪಕ್ಷದ ಪಾತ್ರ ಮತ್ತು ಸಂಘಟನೆಯ ವಿಸ್ತರಣೆ ಕುರಿತು ಚರ್ಚಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಎನ್ಸಿಪಿಯ ಎರಡೂ ಬಣಗಳ ವಿಲೀನದ ಕುರಿತಾದ ಚರ್ಚೆಗಳು ಈಗಾಗಲೇ ಮುಕ್ತಾಯಗೊಂಡಿವೆ ಎಂದೂ ತಟ್ಕರೆ ಹೇಳಿದ್ದಾರೆ. ಆದರೆ, ಅಮಿತ್ ಶಾ ಸೇರಿದಂತೆ ಬಿಜೆಪಿ ನಾಯಕರು ಎರಡೂ ಬಣಗಳು ಒಂದಾಗಿ ಎನ್ಡಿಎ ಭಾಗವಾಗಿ ಮುಂದುವರಿಯುವಂತೆ ಸಲಹೆ ನೀಡಿದ್ದರು. ಈ ಪ್ರಸ್ತಾಪಕ್ಕೆ ಎನ್ಸಿಪಿ ನಾಯಕರು ಒಪ್ಪಿಗೆ ಸೂಚಿಸಿಲ್ಲ ಎಂದು ಮೂಲಗಳು ತಿಳಿಸಿವೆ.
ಸುನೇತ್ರಾ ಪವಾರ್ ನೇತೃತ್ವದಲ್ಲಿ ನಡೆದ ಕೋರ್ ಕಮಿಟಿ ಸಭೆಯಲ್ಲಿ ಶರದ್ ಪವಾರ್ ಬಣದೊಂದಿಗೆ ವಿಲೀನವಾಗುವ ಪ್ರಶ್ನೆಯೇ ಇಲ್ಲ ಎಂಬ ನಿಲುವು ತಳೆಯಲಾಗಿದೆ ಎನ್ನಲಾಗಿದೆ. ಸಭೆಯಲ್ಲಿ ಪಾರ್ಥ್ ಪವಾರ್ ಅವರ ಕಾರ್ಯವೈಖರಿ ಬಗ್ಗೆ ಕೆಲವು ಶಾಸಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಪಕ್ಷದ ಹಿರಿಯ ನಾಯಕರ ಅನುಭವ ಮತ್ತು ಹಿರಿತನಕ್ಕೆ ಗೌರವ ನೀಡಬೇಕು. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಮುನ್ನಡೆಯಬೇಕು ಎಂದು ನಾಯಕರು ಒತ್ತಾಯಿಸಿದ್ದಾರೆ. ಇದಕ್ಕೆ ಪಾರ್ಥ್ ಪವಾರ್ ಮತ್ತು ಜಯ್ ಪವಾರ್ ಸಮ್ಮತಿಸಿದ್ದು, ಹಿರಿಯ ನಾಯಕರೊಂದಿಗೆ ಸಮನ್ವಯದಿಂದ ಕೆಲಸ ಮಾಡುವ ಭರವಸೆ ನೀಡಿದ್ದಾರೆ ಎಂದು ಮೂಲಗಳು ಹೇಳಿವೆ.
ಇದೇ ವೇಳೆ, ಪಕ್ಷದ ಆಂತರಿಕ ಸಮಸ್ಯೆಗಳು ಮಹಾಯುತಿ ಸರ್ಕಾರದ ಮೇಲೆ ಬೀರುವ ಪರಿಣಾಮದ ಬಗ್ಗೆಯೂ ಚರ್ಚೆಯಾಗಿದೆ. ಎನ್ಸಿಪಿಯ ಕಾರ್ಯವೈಖರಿ ಕುರಿತು ಬಿಜೆಪಿ ನಾಯಕತ್ವ ಕಳವಳ ವ್ಯಕ್ತಪಡಿಸಿ, ಭಿನ್ನಾಭಿಪ್ರಾಯಗಳನ್ನು ಬಗೆಹರಿಸಿಕೊಳ್ಳುವಂತೆ ಸೂಚಿಸಿದೆ ಎನ್ನಲಾಗಿದೆ.
ಅಜಿತ್ ಪವಾರ್ ಅವರ ನಿಧನದ ಬಳಿಕ ಉಪಮುಖ್ಯಮಂತ್ರಿ ಸ್ಥಾನವನ್ನು ಸುನೇತ್ರಾ ಪವಾರ್ ಅವರಿಗೆ ನೀಡಲಾಗಿದ್ದರೂ, ಅವರ ಬಳಿಯಿದ್ದ ಹಣಕಾಸು ಖಾತೆಯನ್ನು ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ತಮ್ಮ ಬಳಿಯೇ ಉಳಿಸಿಕೊಂಡಿದ್ದಾರೆ. ಇದರಿಂದ ಎನ್ಸಿಪಿ ಅಸಮಾಧಾನಗೊಂಡಿದೆ ಎಂದು ವರದಿಯಾಗಿದೆ.
ಪ್ರಫುಲ್ ಪಟೇಲ್, ಸುನಿಲ್ ತಟ್ಕರೆ, ದಿಲೀಪ್ ವಾಲ್ಸೆ ಪಾಟೀಲ್, ಹಸನ್ ಮುಶ್ರಿಫ್, ಛಗನ್ ಭುಜ್ಬಲ್ ಮತ್ತು ಧನಂಜಯ ಮುಂಡೆ ಅವರು ಸೋಮವಾರ ಅಮಿತ್ ಶಾ ಅವರನ್ನು ಭೇಟಿಯಾಗಿದ್ದರು.
ಇದೀಗ ಸುನೇತ್ರಾ ಪವಾರ್ ಅವರು ಮಂಗಳವಾರ ಸಂಜೆ 7 ಗಂಟೆಗೆ ತಮ್ಮ ಅಧಿಕೃತ ನಿವಾಸ ‘ದೇವಗಿರಿ’ಯಲ್ಲಿ ಎಲ್ಲ ಶಾಸಕರ ಸಭೆ ಕರೆದಿದ್ದಾರೆ. ಈ ಸಭೆಗೆ ಎಷ್ಟು ಶಾಸಕರು ಹಾಜರಾಗುತ್ತಾರೆ ಎಂಬುದು ಪಕ್ಷದೊಳಗಿನ ಬೆಂಬಲದ ಮಟ್ಟವನ್ನು ನಿರ್ಧರಿಸಲಿದೆ.
