ಐಚಿ: 2026ರ ಏಷ್ಯನ್ ಗೇಮ್ಸ್ ಮಹಿಳಾ ಕಬಡ್ಡಿ ಫೈನಲ್ನಲ್ಲಿ ಇರಾನ್ ವಿರುದ್ಧ 37-34 ಅಂತರದ ಗೆಲುವು ಸಾಧಿಸಿದ ಭಾರತ ಪ್ರಶಸ್ತಿಯನ್ನು ಉಳಿಸಿಕೊಂಡಿದೆ. ಇದರೊಂದಿಗೆ ಮಹಿಳಾ ಕಬಡ್ಡಿಯಲ್ಲಿ ಭಾರತ ನಾಲ್ಕನೇ ಬಾರಿಗೆ ಚಿನ್ನದ ಪದಕ ಗೆದ್ದಿದೆ.
2010ರಲ್ಲಿ ಏಷ್ಯನ್ ಗೇಮ್ಸ್ಗೆ ಮಹಿಳಾ ಕಬಡ್ಡಿ ಸೇರ್ಪಡೆಯಾದ ಬಳಿಕ, 2018ರ ಜಕಾರ್ತಾ ಕ್ರೀಡಾಕೂಟ ಹೊರತುಪಡಿಸಿ ಉಳಿದ ಎಲ್ಲ ಆವೃತ್ತಿಗಳಲ್ಲೂ ಭಾರತವೇ ಚಾಂಪಿಯನ್ ಆಗಿದೆ.
ಫೈನಲ್ನಲ್ಲಿ ಭಾರತ ಆರಂಭದಿಂದಲೇ ಉತ್ತಮ ಆಟ ಪ್ರದರ್ಶಿಸಿತು. ಮೊದಲಾರ್ಧ ಮುಕ್ತಾಯಕ್ಕೆ 22-16 ಮುನ್ನಡೆ ಪಡೆದುಕೊಂಡಿತ್ತು. ಆದರೆ ದ್ವಿತೀಯಾರ್ಧದಲ್ಲಿ ಇರಾನ್ ಭರ್ಜರಿ ತಿರುಗೇಟು ನೀಡಿತು.
ಭಾರತ 27-22 ಮುನ್ನಡೆಯಲ್ಲಿದ್ದಾಗ ಇರಾನ್ನ ಅತೇನಾ ಮದಾದಿ ನಾಲ್ಕು ಅಂಕಗಳ ರೈಡ್ ಮಾಡುವ ಮೂಲಕ ಅಂತರವನ್ನು ಕಡಿಮೆ ಮಾಡಿದರು. ಬಳಿಕ ಇರಾನ್ ಭಾರತವನ್ನು ಕೇವಲ ಒಂದು ಅಂಕದ ಅಂತರಕ್ಕೆ ತಂದು ನಿಲ್ಲಿಸಿತು.

ಆದರೆ ಅಂತಿಮ ಹಂತದಲ್ಲಿ ಭಾರತೀಯ ರಕ್ಷಣಾ ಪಡೆ ಒತ್ತಡವನ್ನು ಸಮರ್ಥವಾಗಿ ನಿಭಾಯಿಸಿತು. ಸಂಜು ಹಾಗೂ ಪುಷ್ಪಾ ರಾಣಾ ನಿರ್ಣಾಯಕ ಕ್ಷಣಗಳಲ್ಲಿ ಉತ್ತಮ ಪ್ರದರ್ಶನ ನೀಡಿ ತಂಡದ ಮುನ್ನಡೆಯನ್ನು ಕಾಯ್ದುಕೊಂಡರು.
ಅಂತಿಮವಾಗಿ ಭಾರತ 37-34 ಅಂತರದಲ್ಲಿ ಗೆಲುವು ಸಾಧಿಸಿ ಸತತ ಏಷ್ಯನ್ ಗೇಮ್ಸ್ ಪ್ರಶಸ್ತಿಯನ್ನು ಉಳಿಸಿಕೊಂಡಿತು.
ರಾಷ್ಟ್ರಪತಿ, ಪ್ರಧಾನಿಯಿಂದ ಅಭಿನಂದನೆ
ಭಾರತದ ಮಹಿಳಾ ಕಬಡ್ಡಿ ತಂಡದ ಸಾಧನೆಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅಭಿನಂದನೆ ಸಲ್ಲಿಸಿದ್ದಾರೆ. ರೋಚಕ ಫೈನಲ್ನಲ್ಲಿ ಆಟಗಾರರು ತೋರಿದ ಧೈರ್ಯ, ಸಂಯಮ ಹಾಗೂ ದೃಢನಿಶ್ಚಯವನ್ನು ಅವರು ಶ್ಲಾಘಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಕೂಡ ತಂಡವನ್ನು ಅಭಿನಂದಿಸಿ, ಒತ್ತಡದ ಸಂದರ್ಭದಲ್ಲೂ ಆಟಗಾರರು ಪ್ರದರ್ಶಿಸಿದ ತಂಡದ ಒಗ್ಗಟ್ಟು ಮತ್ತು ಸಂಯಮವನ್ನು ಮೆಚ್ಚಿದ್ದಾರೆ. ದೇಶವು ತನ್ನ ಕಬಡ್ಡಿ ಚಾಂಪಿಯನ್ಗಳ ಬಗ್ಗೆ ಹೆಮ್ಮೆಪಡುತ್ತದೆ ಎಂದು ಹೇಳಿದ್ದಾರೆ.
ಪುರುಷರ ತಂಡವೂ ಇದಕ್ಕೂ ಮುನ್ನ ಚಿನ್ನದ ಪದಕ ಗೆದ್ದು ಪ್ರಶಸ್ತಿ ಉಳಿಸಿಕೊಂಡಿರುವ ಹಿನ್ನೆಲೆಯಲ್ಲಿ, 2026ರ ಏಷ್ಯನ್ ಗೇಮ್ಸ್ನಲ್ಲಿ ಕಬಡ್ಡಿಯಲ್ಲಿ ಭಾರತ ಚಿನ್ನದ ಕ್ಲೀನ್ ಸ್ವೀಪ್ ಸಾಧಿಸಿದೆ.
