ಜಾತಿಗಳು ಬೇರೆ ಇರಬಹುದು, ನೀತಿ ಮತ್ತು ಸಂಸ್ಕೃತಿ ಒಂದೇ: ಡಾ. ರವಿ ಸಿ.ಟಿ.

ಜಮಖಂಡಿ: ಜಾತಿಗಳು ಬೇರೆ ಇರಬಹುದು. ಆದರೆ ನಮ್ಮ ನೀತಿ ಮತ್ತು ಸಂಸ್ಕೃತಿ ಒಂದೇ ಆಗಿವೆ. ವೀರಶೈವ ಮತ್ತು ಲಿಂಗಾಯತ ಸಮಾಜವನ್ನು ವಿಭಜಿಸಿ ರಾಜಕೀಯ ಲಾಭ ಪಡೆಯುವ ಪ್ರಯತ್ನಗಳಿಗೆ ಅವಕಾಶ ನೀಡಬಾರದು. ಸಮಾಜದ ಒಗ್ಗಟ್ಟಿನಿಂದ ಮಾತ್ರ ಧರ್ಮ, ಸಂಸ್ಕೃತಿ ಮತ್ತು ದೇಶದ ಅಸ್ಮಿತೆಯನ್ನು ಉಳಿಸಿಕೊಳ್ಳಲು ಸಾಧ್ಯ ಎಂದು ವಿಧಾನ ಪರಿಷತ್ ಸದಸ್ಯ ಡಾ. ರವಿ ಸಿ.ಟಿ. ಹೇಳಿದರು.

ಜಮಖಂಡಿ ತಾಲ್ಲೂಕಿನ ಕಡಪಟ್ಟಿ ಶ್ರೀ ಬಸವಣ್ಣ ದೇವಸ್ಥಾನದ ಆವರಣದಲ್ಲಿ ನಡೆದ ಪರಮಪೂಜ್ಯ ಶ್ರೀಮದ್ ರಂಭಾಪುರಿ ಜಗದ್ಗುರುಗಳ 35ನೇ ವರ್ಷದ ಶರನ್ನವರಾತ್ರಿ ದಸರಾ ಧರ್ಮ ಸಮ್ಮೇಳನದಲ್ಲಿ ವಿವಿಧ ಪೀಠಾಧಿಪತಿಗಳ ದಿವ್ಯ ಸಾನ್ನಿಧ್ಯದಲ್ಲಿ ಅವರು ಮಾತನಾಡಿದರು.

ವೀರಶೈವ ಮತ್ತು ಲಿಂಗಾಯತರು ಬೇರೆ ಎಂಬ ವಿಭಜನೆಯ ರಾಜಕೀಯ ತಂತ್ರಗಳನ್ನು ಹಿಂದೆ ಕೆಲವರು ರೂಪಿಸಿದ್ದರು. ಆದರೆ ಸಮಾಜ ಒಗ್ಗಟ್ಟನ್ನು ಪ್ರದರ್ಶಿಸುವ ಮೂಲಕ ಇಂತಹ ಪ್ರಯತ್ನಗಳಿಗೆ ಅವಕಾಶ ನೀಡಿಲ್ಲ ಎಂದು ಹೇಳಿದರು.

ನಮ್ಮ ಹಿರಿಯರು ಜಾತಿಗೊಂದು ಸ್ವರ್ಗ ಅಥವಾ ನರಕವನ್ನು ಕಲ್ಪಿಸಿಲ್ಲ. ಬದಲಾಗಿ ಎಲ್ಲ ಮನುಷ್ಯರಿಗೂ ಒಂದೇ ಧರ್ಮದ ಮೌಲ್ಯಗಳನ್ನು ಬೋಧಿಸಿದ್ದಾರೆ. ಬಸವಣ್ಣನವರ ವಚನಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವುದೇ ಮಾನವ ಧರ್ಮದ ಶ್ರೇಷ್ಠತೆಯನ್ನು ಎತ್ತಿಹಿಡಿಯುವ ಮಾರ್ಗವಾಗಿದೆ ಎಂದು ತಿಳಿಸಿದರು.

ಬಸವಣ್ಣನವರ “ಕಳಬೇಡ, ಕೊಲಬೇಡ, ಹುಸಿಯ ನುಡಿಯಲು ಬೇಡ, ಅನ್ಯರಿಗೆ ಅಸಹ್ಯ ಪಡಬೇಡ, ತನ್ನ ಬಣ್ಣಿಸಬೇಡ” ಎಂಬ ವಚನದ ಆಶಯವನ್ನು ಉಲ್ಲೇಖಿಸಿದ ಅವರು, ನೈತಿಕ ಬದುಕು ಮತ್ತು ಪರಸ್ಪರ ಗೌರವ ಸಮಾಜದ ಮೂಲ ಮೌಲ್ಯಗಳಾಗಬೇಕು ಎಂದರು.

ಮಾನವ ಧರ್ಮವೇ ವಿಶ್ವಶಾಂತಿಯ ಮಾರ್ಗ

“ಮಾನವ ಧರ್ಮಕ್ಕೆ ಜಯವಾಗಲಿ, ಧರ್ಮದಿಂದಲೇ ವಿಶ್ವಕ್ಕೆ ಶಾಂತಿ” ಎಂಬ ಸಂದೇಶವು ಯಾವುದೇ ಒಂದು ಮತ, ಪ್ರದೇಶ ಅಥವಾ ಸಂಪ್ರದಾಯಕ್ಕೆ ಸೀಮಿತವಲ್ಲ. ಅದು ಇಡೀ ಮನುಕುಲದ ಒಳಿತನ್ನು ಬಯಸುತ್ತದೆ. ಸನಾತನ ಧರ್ಮವು ಮನುಷ್ಯರಷ್ಟೇ ಅಲ್ಲದೆ, ಪ್ರಾಣಿ, ಪಕ್ಷಿ ಮತ್ತು ಸಮಸ್ತ ಸೃಷ್ಟಿಯ ಕಲ್ಯಾಣವನ್ನು ಬಯಸುತ್ತದೆ. ಪ್ರಕೃತಿಯಲ್ಲಿಯೂ ದೈವತ್ವವನ್ನು ಕಾಣುವ ಆಧ್ಯಾತ್ಮಿಕ ಪರಂಪರೆ ಭಾರತದ ವೈಶಿಷ್ಟ್ಯವಾಗಿದೆ ಎಂದು ಹೇಳಿದರು.

ಪಂಚಪೀಠಗಳು ಹಾಗೂ ಬಸವಣ್ಣನವರನ್ನು ಸನಾತನ ಧರ್ಮದಿಂದ ಪ್ರತ್ಯೇಕವಾಗಿ ನೋಡುವ ಪ್ರಯತ್ನಗಳು ಸಮಾಜದಲ್ಲಿ ನೋವು ಮತ್ತು ವಿಭಜನೆಗೆ ಕಾರಣವಾಗಬಾರದು ಎಂದು ಅಭಿಪ್ರಾಯಪಟ್ಟರು.

ಪರೋಪಕಾರದಿಂದ ಪುಣ್ಯ, ಪರಪೀಡನೆಯಿಂದ ಪಾಪ ಎಂಬ ಮೌಲ್ಯಗಳನ್ನು ನಮ್ಮ ಸಂಸ್ಕೃತಿ ಬೋಧಿಸಿದೆ. ಅಧಿಕಾರ ಮತ್ತು ಹಣದಿಂದ ಅನೇಕ ಸಾಧನೆಗಳನ್ನು ಮಾಡಬಹುದಾದರೂ, ನೈತಿಕ ಬದುಕಿಗೆ ಪರ್ಯಾಯವಿಲ್ಲ. “ಆಚಾರವೇ ಸ್ವರ್ಗ, ಅನಾಚಾರವೇ ನರಕ” ಎಂಬ ಬಸವಣ್ಣನವರ ಸಂದೇಶವನ್ನು ಸಮಾಜ ಪಾಲಿಸಬೇಕು ಎಂದು ಕರೆ ನೀಡಿದರು.

ರೈತರ ಸ್ವಾವಲಂಬನೆಗೆ ಆದ್ಯತೆ ಅಗತ್ಯ

ರೈತರ ಸಂಕಷ್ಟಗಳ ಕುರಿತು ಮಾತನಾಡಿದ ಡಾ. ರವಿ ಸಿ.ಟಿ., “ಮನುಷ್ಯ ಸತ್ತರೆ ಮಣ್ಣಿಗೆ; ಮಣ್ಣೇ ಸತ್ತರೆ ಮತ್ತೆಲ್ಲಿಗೆ?” ಎಂಬ ರೈತನ ಪ್ರಶ್ನೆ ಇಂದಿನ ಕೃಷಿ ಮತ್ತು ಪರಿಸರ ವ್ಯವಸ್ಥೆಯ ಬಗ್ಗೆ ಗಂಭೀರವಾಗಿ ಆಲೋಚಿಸುವಂತೆ ಮಾಡುತ್ತದೆ ಎಂದರು.

ಕೃಷಿಯಲ್ಲಿ ಅತಿಯಾದ ರಾಸಾಯನಿಕ ಬಳಕೆಯಿಂದ ಮಣ್ಣಿನ ಆರೋಗ್ಯ ಹದಗೆಡುತ್ತಿರುವ ಸಂದರ್ಭದಲ್ಲಿ, ಮಣ್ಣಿಗೆ ವಿಷ ಹಾಕಿ ಅಮೃತದಂತಹ ಫಲವನ್ನು ನಿರೀಕ್ಷಿಸಲು ಸಾಧ್ಯವಿಲ್ಲ. ಹಿಂದೆ ಸ್ವಾವಲಂಬಿಗಳಾಗಿದ್ದ ರೈತರು ಇಂದು ಪರಾವಲಂಬಿಗಳಾಗಲು ಕಾರಣಗಳೇನು ಎಂಬುದನ್ನು ಸಮಾಜ ಪರಿಶೀಲಿಸಬೇಕು ಎಂದು ಹೇಳಿದರು.

ಮಂಡ್ಯ ಜಿಲ್ಲೆಯಲ್ಲಿ ವಧುವರರ ಅನ್ವೇಷಣಾ ಶಿಬಿರಕ್ಕೆ ಸಾವಿರಾರು ರೈತ ಕುಟುಂಬಗಳ ಯುವಕರು ಅರ್ಜಿ ಸಲ್ಲಿಸಿರುವುದನ್ನು ಉಲ್ಲೇಖಿಸಿದ ಅವರು, ಕೃಷಿಯನ್ನು ಜೀವನಾಧಾರವಾಗಿಸಿಕೊಂಡಿರುವ ಯುವಕರಿಗೆ ವಿವಾಹವಾಗಲು ವಧು ದೊರೆಯದ ಪರಿಸ್ಥಿತಿ ಗಂಭೀರ ಸಾಮಾಜಿಕ ಚಿಂತನೆಯ ವಿಷಯವಾಗಿದೆ ಎಂದರು. ರೈತರ ಸ್ವಾಭಿಮಾನ ಮತ್ತು ಸ್ವಾವಲಂಬಿ ಬದುಕಿಗೆ ಸಮಾಜ ಗೌರವ ನೀಡಬೇಕು ಎಂದು ಕರೆ ನೀಡಿದರು.

ದುಷ್ಟಶಕ್ತಿಗಳ ವಿರುದ್ಧ ಜಾಗೃತಿಯ ಸಂಕೇತ ದಸರಾ

ನವರಾತ್ರಿಯ ಉದ್ದೇಶ ದುಷ್ಟರಿಗೆ ಶಿಕ್ಷೆ, ಶಿಷ್ಟರಿಗೆ ರಕ್ಷಣೆ ಎಂಬುದಾಗಿದೆ. ನಮ್ಮೊಳಗಿನ ಕೆಟ್ಟ ಗುಣಗಳನ್ನು ತೊರೆದು ಉತ್ತಮ ಮೌಲ್ಯಗಳನ್ನು ಅಳವಡಿಸಿಕೊಳ್ಳಬೇಕು. ಸಮಾಜ ಮತ್ತು ರಾಷ್ಟ್ರಕ್ಕೆ ಹಾನಿ ಮಾಡುವ ಶಕ್ತಿಗಳ ವಿರುದ್ಧ ಜಾಗೃತಿಯಿಂದ ಒಗ್ಗಟ್ಟಾಗಿ ನಿಲ್ಲಬೇಕು ಎಂದು ಹೇಳಿದರು.

ಆಯುಧ ಪೂಜೆಯು ಕೇವಲ ಆಚರಣೆಯಲ್ಲ. ಅಗತ್ಯ ಬಂದಾಗ ಧರ್ಮ ಮತ್ತು ರಾಷ್ಟ್ರದ ರಕ್ಷಣೆಗೆ ಸಿದ್ಧರಾಗಿರಬೇಕೆಂಬ ಸಂಕಲ್ಪದ ಸಂಕೇತವೂ ಹೌದು ಎಂದು ಅಭಿಪ್ರಾಯಪಟ್ಟರು.

ರಂಭಾಪುರಿ ಜಗದ್ಗುರುಗಳು ರಾಷ್ಟ್ರಹಿತ, ಸನಾತನ ಧರ್ಮದ ಮೌಲ್ಯಗಳು ಮತ್ತು ಸತ್ಯದ ಪರವಾಗಿ ನಿರ್ಭೀತಿಯಿಂದ ತಮ್ಮ ನಿಲುವು ವ್ಯಕ್ತಪಡಿಸುತ್ತಾ ಬಂದಿದ್ದಾರೆ. ಲಾಭ–ನಷ್ಟದ ಲೆಕ್ಕಾಚಾರವಿಲ್ಲದೆ ಸಮಾಜಕ್ಕೆ ಮಾರ್ಗದರ್ಶನ ನೀಡುತ್ತಿರುವ ಅವರ ಕಾರ್ಯ ಎಲ್ಲರಿಗೂ ಪ್ರೇರಣಾದಾಯಕವಾಗಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಗ್ರಾಮ ಕೃಷಿ ತಜ್ಞೆ ಕವಿತಾ ಮಿಶ್ರಾ, ಸೂಡಿ ಜುಕ್ತಿ ಹಿರೇಮಠದ ಕೋಟೂರು ಬಸವೇಶ್ವರ ಶ್ರೀಗಳು, ಶಿವಮೊಗ್ಗದ ಪ್ರೊ. ಜಿ.ಎಸ್. ನಟೇಶ್, ಮಾಜಿ ವಿಧಾನ ಪರಿಷತ್ ಸದಸ್ಯ ಜಿ.ಎಸ್. ನ್ಯಾಮಗೌಡ, ಮುಕ್ತಿಮಂದಿರ ಕ್ಷೇತ್ರದ ವಿಮಲ ರೇಣುಕ ವೀರ ಮುಕ್ತಿಮುನಿ ಶ್ರೀಗಳು, ಮಹಾದೇವ ಶಿವಾಚಾರ್ಯ ಶ್ರೀಗಳು, ಮುತ್ತಿನಂಕಂತಿ ಶಿವಲಿಂಗ ಶ್ರೀಗಳು, ವಿಶ್ವಪ್ರಭುದೇವ ಶ್ರೀಗಳು, ಈಶ್ವರಿ ವಿಶ್ವವಿದ್ಯಾಲಯದ ಬಿ.ಕೆ. ಮೀರಾ ಅಕ್ಕ, ಎನ್.ಎಸ್. ದೇವರವರ, ಕಾಶೀನಾಥ ಕಂಕಾಳೆ, ಚನ್ನಪ್ಪ ಬಿರಾದಾರ, ಅಜಯ ಕಡಪಟ್ಟಿ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.