ಬೆಂಗಳೂರು: ಉದ್ಯಾನ ನಗರಿ ಬೆಂಗಳೂರಿನ ಕಸ ಸಮಸ್ಯೆಯನ್ನೇ ಮುಂದಿಟ್ಟು ಅಧಿಕಾರಿಗಳು ಬಹುಕೋಟಿ ಹಣ ಲೂಟಿಗೆ ಸ್ಕೆಚ್ ಹಾಕಿದ್ದಾರೆಯೇ? ಇಂಥದ್ದೊಂದು ಪ್ರಶ್ನೆಯನ್ನು ಲೋಕಾಯುಕ್ತ ದೂರೊಂದು ಹುಟ್ಟುಹಾಕಿದೆ.
ಬೆಂಗಳೂರು ಘನತ್ಯಾಜ್ಯ ನಿರ್ವಹಣಾ ಸಂಸ್ಥೆ (ಬಿಎಸ್‌ಡಬ್ಲ್ಯುಎಂಎಲ್)ಯ ತ್ಯಾಜ್ಯ ಸಂಗ್ರಹಣೆ ಮತ್ತು ಸಾಗಣೆ ಕಾಮಗಾರಿಗಳ ಟೆಂಡರ್ ಪ್ರಕ್ರಿಯೆಯಲ್ಲಿ ಅಕ್ರಮ, ಅಧಿಕಾರ ದುರ್ಬಳಕೆ ಹಾಗೂ ಗುತ್ತಿಗೆದಾರರೊಂದಿಗೆ ಶಾಮೀಲಾತಿ ನಡೆದಿದೆ ಎಂದು ಆರೋಪಿಸಿ ಕರ್ನಾಟಕ ಲೋಕಾಯುಕ್ತಕ್ಕೆ ದೂರು ಸಲ್ಲಿಕೆಯಾಗಿದೆ. ಈ ಬೆಳವಣಿಗೆ ರಾಜ್ಯ ರಾಕರಣದಲ್ಲಿ ಸಂಚಲನಕ್ಕೆ ಕಾರಣವಾಗಿದೆ.
ನಾಲ್ವರು ಅಧಿಕಾರಿಗಳ ವಿರುದ್ಧ ದೂರು:
ಬೆಂಗಳೂರು ಮಹಾನಗರ ಸ್ವಚ್ಛತೆ ಮತ್ತು ಲಾರಿ ಮಾಲೀಕರ ಗುತ್ತಿಗೆದಾರರ ಸಂಘದ ಪದಾಧಿಕಾರಿಗಳು ಸಲ್ಲಿಸಿರುವ ದೂರಿನಲ್ಲಿ, ಬಿಎಸ್‌ಡಬ್ಲ್ಯುಎಂಎಲ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕರೀಗೌಡ, ಮುಖ್ಯ ಪ್ರಧಾನ ವ್ಯವಸ್ಥಾಪಕ ಎಸ್.ವಿ. ರಾಜೇಶ್, ಉಪ ಪ್ರಧಾನ ವ್ಯವಸ್ಥಾಪಕ ಚಂದ್ರಶೇಖರ್ ಹಾಗೂ ಸಹಾಯಕ ಎಂಜಿನಿಯರ್ ನೀಲೇಶ್ ಕುಮಾರ್ ಅವರ ಪಾತ್ರದ ಬಗ್ಗೆ ತನಿಖೆಗೆ ಒತ್ತಾಯಿಸಲಾಗಿದೆ.
2025ರ ಜುಲೈ 30ರಂದು 33 ಪ್ಯಾಕೇಜ್‌ಗಳಿಗೆ ಟೆಂಡರ್ ಆಹ್ವಾನಿಸಲಾಗಿತ್ತು. ಬಳಿಕ 22 ಪ್ರತ್ಯೇಕ ಟೆಂಡರ್ ಅಧಿಸೂಚನೆಗಳನ್ನು ಹೊರಡಿಸಲಾಗಿದೆ. ಈ ಪ್ರಕ್ರಿಯೆಯಲ್ಲಿ ಕರ್ನಾಟಕ ಸಾರ್ವಜನಿಕ ಸಂಗ್ರಹಣೆಗಳಲ್ಲಿ ಪಾರದರ್ಶಕತೆ ಕಾಯ್ದೆ (ಕೆಟಿಪಿಪಿ) ಹಾಗೂ ಹಣಕಾಸು ಇಲಾಖೆಯ ಸುತ್ತೋಲೆಗಳನ್ನು ಉಲ್ಲಂಘಿಸಲಾಗಿದೆ ಎಂಬುದು ಆರೋಪ.
-
ಅನರ್ಹ ಬಿಡ್‌ದಾರರು, ಇಪಿಎಫ್ ಬಾಕಿ ಹೊಂದಿದ್ದ ಗುತ್ತಿಗೆದಾರರು ಹಾಗೂ ಅವಧಿ ಮುಗಿದ ಬ್ಯಾಂಕ್ ಗ್ಯಾರಂಟಿ ಹೊಂದಿದ್ದವರಿಗೆ ಗುತ್ತಿಗೆ ನೀಡಲಾಗಿದೆ. ಬಿಡ್ ಸಲ್ಲಿಕೆಯ ನಂತರ ಟೆಂಡರ್ ಷರತ್ತು ಮತ್ತು ವಾಹನಗಳ ತಾಂತ್ರಿಕ ಮಾನದಂಡಗಳನ್ನು ಸಡಿಲಿಸಲಾಗಿದೆ.
-
ಆನ್‌ಲೈನ್ ಪೋರ್ಟಲ್‌ನಲ್ಲಿ ನಡೆಯಬೇಕಿದ್ದ ದರ ಮಾತುಕತೆ ಮತ್ತು ಕಾರ್ಯಾದೇಶ ಪ್ರಕ್ರಿಯೆಗಳನ್ನು ಕೈಯಾರೆ ನಡೆಸಲಾಗಿದೆ ಎಂದೂ ದೂರಿನಲ್ಲಿ ಉಲ್ಲೇಖಿಸಲಾಗಿದೆ.
-
ಅಂದಾಜು ಮೊತ್ತಕ್ಕಿಂತ ಶೇ 14ರಷ್ಟು ಹೆಚ್ಚಿನ ದರದಲ್ಲಿ ಗುತ್ತಿಗೆ ನೀಡಿರುವುದರಿಂದ ಸರ್ಕಾರಕ್ಕೆ ಸುಮಾರು ₹350 ಕೋಟಿ ಹೆಚ್ಚುವರಿ ಹೊರೆ ಉಂಟಾಗುವ ಸಾಧ್ಯತೆಯಿದೆ. ಹೆಚ್ಚುವರಿ ವೆಚ್ಚ, ಟೆಂಡರ್ ಪ್ರೀಮಿಯಂ ಮತ್ತು ವಾರ್ಷಿಕ ದರ ಏರಿಕೆಯಿಂದ ₹660 ಕೋಟಿ ನಷ್ಟವಾಗುವ ಆತಂಕವಿದೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
2026ರ ಸೆಪ್ಟೆಂಬರ್ 22ರಿಂದ ಅಕ್ಟೋಬರ್ 31ರವರೆಗೆ ಮಾದರಿ ನೀತಿ ಸಂಹಿತೆ ಜಾರಿಯಲ್ಲಿದ್ದಾಗ ಟೆಂಡರ್ ಪ್ರಕ್ರಿಯೆ ಮುಂದುವರಿಸಿ, ಕೆಲವು ಪ್ಯಾಕೇಜ್‌ಗಳಿಗೆ ಕಾರ್ಯಾದೇಶ ನೀಡಿರುವುದನ್ನೂ ದೂರುದಾರರು ಪ್ರಶ್ನಿಸಿದ್ದಾರೆ. ಟೆಂಡರ್ ದಾಖಲೆಗಳು, ಹಣಕಾಸು ಬಿಡ್‌ಗಳು, ಅನುಮೋದನೆಗಳು ಮತ್ತು ಇಪಿಎಫ್ ದಾಖಲೆಗಳನ್ನು ಪರಿಶೀಲಿಸಿ, ಸ್ವತಂತ್ರ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಲೋಕಾಯುಕ್ತರನ್ನು ಕೋರಿದ್ದಾರೆ.
