SIR: 13.3 ಕೋಟಿ ಮತದಾರರ ಪತ್ತೆಗೆ ಕಾಂಗ್ರೆಸ್‌ ‘ಮತ ರಕ್ಷಕ’ರು

ನವದೆಹಲಿ: ವಿಶೇಷ ಸಮಗ್ರ ಪರಿಷ್ಕರಣೆ (SIR) ವೇಳೆ ಮತದಾರರ ಪಟ್ಟಿಯಿಂದ ಹೆಸರು ಕೈಬಿಡಲಾಗಿರುವ ಸುಮಾರು 13.3 ಕೋಟಿ ಮತದಾರರನ್ನು ಪತ್ತೆಹಚ್ಚಲು ಕಾಂಗ್ರೆಸ್‌ ‘ಮತ ರಕ್ಷಕ’ ಅಭಿಯಾನ ಆರಂಭಿಸಲು ನಿರ್ಧರಿಸಿದೆ.

ಅಕ್ಟೋಬರ್‌ 25ರಿಂದ ನವೆಂಬರ್‌ 25ರವರೆಗೆ ನಡೆಯಲಿರುವ ಅಭಿಯಾನದಡಿ, ಅಕ್ರಮವಾಗಿ ಮತದಾರರ ಪಟ್ಟಿಯಿಂದ ಹೆಸರು ತೆಗೆದುಹಾಕಲಾಗಿದೆ ಎಂದು ಶಂಕಿಸಲಾಗಿರುವವರನ್ನು ‘ಮತ ರಕ್ಷಕ’ರು ಸಂಪರ್ಕಿಸಲಿದ್ದಾರೆ. ಹೆಸರು ಕೈಬಿಡಲು ಕಾರಣ ಪರಿಶೀಲಿಸಿ, ತಪ್ಪಾಗಿ ಹೆಸರು ತೆಗೆದುಹಾಕಿರುವುದು ದೃಢಪಟ್ಟರೆ ಮರು ನೋಂದಣಿಗೆ ನೆರವು ನೀಡಲಿದ್ದಾರೆ.

SIRಗೂ ಮುನ್ನ ಹಾಗೂ ನಂತರ ಪ್ರಕಟವಾದ ಮತದಾರರ ಪಟ್ಟಿಗಳನ್ನು ಹೋಲಿಕೆ ಮಾಡಿ, ಪ್ರತಿ ಮತಗಟ್ಟೆ ವ್ಯಾಪ್ತಿಯಲ್ಲಿ ಹೆಸರು ಕೈಬಿಡಲಾಗಿರುವವರ ಪಟ್ಟಿಯನ್ನು ಕಾಂಗ್ರೆಸ್‌ ಸಿದ್ಧಪಡಿಸಲಿದೆ. ಈ ಪಟ್ಟಿಯನ್ನು ‘ಮತ ರಕ್ಷಕ’ರು ಹಾಗೂ ಮತಗಟ್ಟೆ ಮಟ್ಟದ ಏಜೆಂಟ್‌ಗಳಿಗೆ (BLA) ನೀಡಲಾಗುತ್ತದೆ.

ಹೆಸರು ಅಕ್ರಮವಾಗಿ ಕೈಬಿಡಲಾಗಿದೆ ಎಂದು ಕಂಡುಬಂದರೆ, ಸಂಬಂಧಿಸಿದ ಮತದಾರರ ಹೇಳಿಕೆ ದಾಖಲಿಸಿಕೊಂಡು ಫಾರ್ಮ್‌-6 ಮೂಲಕ ಮತ್ತೆ ಮತದಾರರಾಗಿ ನೋಂದಣಿಯಾಗಲು ಅಗತ್ಯ ನೆರವು ನೀಡಲಾಗುತ್ತದೆ.

ಕಾಂಗ್ರೆಸ್‌ನ ‘ಕನೆಕ್ಟ್‌ ಸೆಂಟರ್‌’ ಈ ಅಭಿಯಾನದ ಸಂಪೂರ್ಣ ಮೇಲ್ವಿಚಾರಣೆ ನಡೆಸಲಿದೆ. ಅಗತ್ಯ ದತ್ತಾಂಶ ಒದಗಿಸುವುದರ ಜತೆಗೆ ವಿವಿಧ ಘಟಕಗಳ ನಡುವೆ ಸಮನ್ವಯ ಸಾಧಿಸಲಿದೆ. ಒಂದು ತಿಂಗಳೊಳಗೆ ಪ್ರಕ್ರಿಯೆ ಪೂರ್ಣಗೊಳಿಸಲು ಪಕ್ಷ ಗುರಿ ಹೊಂದಿದೆ.

ಸದ್ಯ ಕನಿಷ್ಠ ಎಂಟು ರಾಜ್ಯಗಳ ದತ್ತಾಂಶ ಕಾಂಗ್ರೆಸ್‌ ಬಳಿ ಲಭ್ಯವಿದ್ದು, ಶೀಘ್ರದಲ್ಲೇ ಇತರ ರಾಜ್ಯಗಳ ಮಾಹಿತಿಯೂ ಲಭ್ಯವಾಗುವ ನಿರೀಕ್ಷೆಯಿದೆ. ತೆಲಂಗಾಣದ ಆರು ಕ್ಷೇತ್ರಗಳಲ್ಲಿ ಈ ಯೋಜನೆಯನ್ನು ಈಗಾಗಲೇ ಪ್ರಾಯೋಗಿಕವಾಗಿ ಜಾರಿಗೊಳಿಸಲಾಗಿದೆ.

SIR ವೇಳೆ ಹೆಸರು ಕೈಬಿಡಲಾಗಿರುವ 13.3 ಕೋಟಿ ಮತದಾರರನ್ನು ಸಂಪರ್ಕಿಸುವ ನಿರ್ಧಾರವನ್ನು ಕಳೆದ ತಿಂಗಳು ನಡೆದ ಕಾಂಗ್ರೆಸ್‌ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಕೈಗೊಳ್ಳಲಾಗಿತ್ತು. ಸೋಮವಾರ ನಡೆದ ಪ್ರಧಾನ ಕಾರ್ಯದರ್ಶಿಗಳು, ರಾಜ್ಯ ಉಸ್ತುವಾರಿಗಳು ಹಾಗೂ ರಾಜ್ಯ ಘಟಕದ ಅಧ್ಯಕ್ಷರ ಸಭೆಯಲ್ಲಿ ಅಭಿಯಾನದ ವಿವರವಾದ ಕಾರ್ಯಯೋಜನೆ ರೂಪಿಸಲಾಗಿದೆ.

ಇದರ ಜತೆಗೆ ‘ವೋಟ್‌ ಬಚಾವೋ, ದೇಶ್‌ ಬಚಾವೋ’ ಘೋಷಣೆಯಡಿ ಅಕ್ಟೋಬರ್‌ 10ರಿಂದ ಮುಖ್ಯ ಚುನಾವಣಾ ಆಯುಕ್ತರ (CEC) ವಿರುದ್ಧ ದೇಶಾದ್ಯಂತ ಅಭಿಯಾನ ನಡೆಸುವುದಾಗಿ ಕಾಂಗ್ರೆಸ್‌ ಘೋಷಿಸಿದೆ.