ಜಲಂಧರ್‌ನಲ್ಲಿ ಯುವ ಹಾಕಿ ಆಟಗಾರರಿಗೆ ತರಬೇತಿ ನೀಡಿದ ಡಚ್ ದಂತಕಥೆ ಬೋವೆಲ್ಯಾಂಡರ್

ಜಲಂಧರ್: ಡಚ್ ಹಾಕಿ ದಂತಕಥೆ ಹಾಗೂ ಒಲಿಂಪಿಕ್ ಚಿನ್ನದ ಪದಕ ವಿಜೇತ ಫ್ಲೋರಿಸ್ ಜಾನ್ ಬೋವೆಲ್ಯಾಂಡರ್ ಅವರು 2026ರ ಹೀರೋ ಏಷ್ಯನ್ ಚಾಂಪಿಯನ್ಸ್ ಟ್ರೋಫಿ ವೀಕ್ಷಿಸಲು ಪಂಜಾಬ್‌ಗೆ ಭೇಟಿ ನೀಡಿದ್ದಾರೆ. ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಅವರ ಆಹ್ವಾನದ ಮೇರೆಗೆ ಜಲಂಧರ್‌ಗೆ ಆಗಮಿಸಿದ ಅವರು, ಯುವ ಹಾಕಿ ಆಟಗಾರರಿಗೆ ತರಬೇತಿ ನೀಡಿದರು.

ಭಾರತೀಯ ಹಾಕಿಗೆ ಪಂಜಾಬ್ ನೀಡಿರುವ ಕೊಡುಗೆಯನ್ನು ಶ್ಲಾಘಿಸಿದ ಬೋವೆಲ್ಯಾಂಡರ್, ಪಂಜಾಬ್ ಇಲ್ಲದೆ ಭಾರತದ ಹಾಕಿ ಅಪೂರ್ಣ ಎಂದರು.

ಭೇಟಿಯ ವೇಳೆ 37 ಪಂಜಾಬ್ ಹಾಕಿ ತರಬೇತುದಾರರು ಹಾಗೂ ಸರ್ಕಾರಿ ಬೆಂಬಲಿತ ಸುರ್ಜಿತ್ ಹಾಕಿ ಅಕಾಡೆಮಿಯ ಯುವ ಆಟಗಾರರ ತರಬೇತಿ ಶಿಬಿರದಲ್ಲಿ ಪಾಲ್ಗೊಂಡರು. ಆಟಗಾರರಿಗೆ ವಿವಿಧ ತಂತ್ರಗಳನ್ನು ಪ್ರದರ್ಶಿಸಿದ ಅವರು, ತಮ್ಮ ಅಂತರರಾಷ್ಟ್ರೀಯ ಹಾಕಿ ವೃತ್ತಿಜೀವನದ ಅನುಭವಗಳನ್ನು ಹಂಚಿಕೊಂಡರು. ಡ್ರ್ಯಾಗ್-ಫ್ಲಿಕ್ ತರಬೇತಿಯಲ್ಲೂ ಭಾಗವಹಿಸಿದರು.

ಹಾಕಿ ಕ್ರೀಡೆಗೆ ನೀಡಿದ ಕೊಡುಗೆಯನ್ನು ಗುರುತಿಸಿ ಪಂಜಾಬ್ ಕ್ರೀಡಾ ಇಲಾಖೆ ಬೋವೆಲ್ಯಾಂಡರ್ ಅವರನ್ನು ಸನ್ಮಾನಿಸಿತು. ನವೆಂಬರ್ 4 ಮತ್ತು 5ರಂದು ಮೊಹಾಲಿಯಲ್ಲಿ ನಡೆಯಲಿರುವ ಪಂದ್ಯಾವಳಿಯ ಪಂದ್ಯಗಳನ್ನು ವೀಕ್ಷಿಸುವ ಆಸಕ್ತಿಯನ್ನೂ ಅವರು ವ್ಯಕ್ತಪಡಿಸಿದರು.